ಸಮಾಜ ಸುಧಾರಣೆಯೆಂಬ ವಿಚಾರ ಗಮನಕ್ಕೆ ಬರುವಾಗ, ಇಲ್ಲಿ ಎರಡು ಹಂತಗಳನ್ನು ಗಮನಿಸಬೇಕು. ಒಂದು, ಸಮಾಜದಲ್ಲಿನ ದಲಿತರ ಮತ್ತು ಹಿಂದುಳಿದವರ ಪುರೋಗಮನ; ಎರಡು, ಎಲ್ಲ ಜಾತಿಗಳ ಮಹಿಳೆಯರ ಪುರೋಗಮನ, ಕರ್ನಾಟಕದಲ್ಲಿ ನಡೆದ ಇಂಥ ಚಳವಳಿಗಳ ಕೆಲವು ಗಣ್ಯ ಅಂಶಗಳನ್ನು ಇಲ್ಲಿ ಪರಿಶೀಲಿಸಲಾಗಿದೆ. ಅಸ್ಪೃಶ್ಯತಾ ನಿವಾರಣೆ-ಎಂದರೆ ಅಸ್ಪೃಶ್ಯರ ಮೇಲೆ ಹೇರಲಾದ ಸಾಮಾಜಿಕ ದಿಗ್ಬಂಧನಗಳು (ಉಚ್ಚವರ್ಣದವರಿರುವ ಓಣಿಗಳಲ್ಲಿ ಓಡಾಡಬಾರದು, ಮೀಸೆ ಬಿಡಬಾರದು, ಛತ್ರಿ ಹಿಡಿಯಬಾರದು, ಮದುವೆ ಮೆರವಣಿಗೆಯಲ್ಲಿ ವಿಶಿಷ್ಟ ಸರಂಜಾಮುಗಳನ್ನು ಕೆಲವು ವಾದ್ಯಗಳು, ಕುದುರೆ ಇತ್ಯಾದಿ ಬಳಸಬಾರದು, ಸಾರ್ವಜನಿಕ ಬಾವಿಯಿಂದ, ಕೆರೆಯಿಂದ ನೀರು ತುಂಬಬಾರದು, ಮೇಲುವರ್ಗದವರು ಪೂಜಿಸುವ ದೇವಾಲಯಗಳನ್ನು ಪ್ರವೇಶಿಸಬಾರದು), ಶಿಕ್ಷಣಕ್ಕೆ ಅಡಚಣೆ, ಇತ್ಯಾದಿಗಳು ಒಂದು ರೀತಿಯ ಇತಿಮಿತಿಗಳು. ಈ ಹಲವಾರು ದಿಗ್ಬಂಧನಗಳಿಂದ ಅಸ್ಪೃಶ್ಯರು ಉಸಿರು ಕಟ್ಟುವ ವಾತಾವರಣದಲ್ಲಿ ಇದ್ದರು. ಬಹುಪಾಲು ಅಸ್ಪೃಶ್ಯರು ಮೂಲದ ಹೊಲೆಯರಾಗಿ ಕೆಲವು ಭೂಮಾಲಿಕವರ್ಗಗಳ ಗುಲಾಮರಾಗಿ ಯಾವುದೇ ಸ್ವಾತಂತ್ರ್ಯವಿಲ್ಲದೆ ಬಂಧಿತ ಸ್ಥಿತಿಯಲ್ಲಿ ಇದ್ದರು. ಹೊಲೆಯ ಅಥವಾ ಹೊಲೆಗೆಲಸ ಮಾಡುವ (ಜಲಗಾರವೃತ್ತಿ, ಸತ್ತಪ್ರಾಣಿಗಳ ಸಂಸ್ಕಾರ, ಚರ್ಮ ಹದ ಮಾಡುವುದು, ಅಗಸನ ವೃತ್ತಿ, ಚಪ್ಪಲಿ ಹೊಲಿಯುವುದು, ಕೆಲವೆಡೆ ಬುಟ್ಟಿ ಹೆಣೆಯುವುದೂ ಕೂಡ) ಜನರೂ ಅಲ್ಲದೆ ಹೆಂಡ ಇಳಿಸುವ ಈಡಿಗರು ಹಾಗೂ ಅನೇಕ ಕೃಷಿಕ ವರ್ಗದ ಜಾತಿಗಳು ಅನೇಕ ಸಾಮಾಜಿಕ ಕಟ್ಟು-ಪಾಡುಗಳಿಗೆ ಒಳಪಟ್ಟಿದ್ದರು. ದಕ್ಷಿಣ ಕನ್ನಡದಂಥ ಪ್ರದೇಶಗಳಲ್ಲಿ ಈಡಿಗರು ಒಂದು ರೀತಿಯಲ್ಲಿ ಅಸ್ಪೃಶ್ಯರೇ. ವೀರಶೈವ ಸ್ವಾಮಿಗಳು ಅಡ್ಡಪಲ್ಲಕ್ಕಿ ಉತ್ಸವ ಮಾಡಬಾರದು. ವೀರಶೈವರು ಬ್ರಾಹ್ಮಣರ ಕೆಲವು ದೇವಾಲಯಗಳನ್ನು ಪ್ರವೇಶಿಸಬಾರದು. ಮುಂತಾದ ಪ್ರತಿಬಂಧಗಳೂ ಇದ್ದವು. ಮಹಿಳೆಯರ ವಿಚಾರಕ್ಕೆ ಬಂದಾಗ ಬೇರೆ ಬೇರೆ ಜಾತಿಗಳಲ್ಲಿ ಮಹಿಳೆಯರು ಬೇರೆ ರೀತಿಯ ಸಾಮಾಜಿಕ ಇತಿಮಿತಿಗಳಿಗೆ ಒಳಪಟ್ಟಿದ್ದರು. ಆಧುನಿಕತೆಯ ಗಾಳಿ ಬೀಸಿದಾಗ (19ನೆಯ ಶತಮಾನದ ಆರಂಭಕ್ಕೆ) ಸತೀಸಹಗಮನ ತೀರ ಅಪರೂಪವಾಗಿ ಕರ್ನಾಟಕದಲ್ಲಿ ಉಳಿದಿದ್ದರೂ ಬ್ರಾಹ್ಮಣರು, ಮನ್ನೆಯರು (ರಾಜವಂಶ, ಸೇನಾನಿಗಳ ವಂಶ-ಉದಾ: ಕೊಡಗಿನ ರಾಜವಂಶ) ಮುಂತಾದ ಕೆಲವೇ ಕೆಲವು ಆಡ್ಯ ಮನೆತನಗಳಿಗೆ ಇದು ಮಿತವಾಗಿದ್ದರೂ ಇಲ್ಲಿ ಒತ್ತಾಯದ ಅಂಶ ಇರಲಿಲ್ಲ. ಸಾರ್ವತ್ರಿಕವಾಗಿಯೂ ಇರಲಿಲ್ಲ. ಲಕ್ಷಕ್ಕೊಂದು ಅಂಥ ಪ್ರಕರಣಗಳೂ ಇರಲಿಲ್ಲ. ಆದರೆ, ಬಾಲ್ಯವಿವಾಹ ಸಾರ್ವತ್ರಿಕ. ಪುರುಷರಿಗೇ ಸಾರ್ವತ್ರಿಕ ಶಿಕ್ಷಣದ ಸವಲತ್ತು ಇಲ್ಲದಿರಲು ಎಳೆ ವಯಸ್ಸಿನಲ್ಲಿ ಮದುವೆಯಾಗುವ ಮಹಿಳೆಯರಿಗೆ ಇಂಥಾ ಅವಕಾಶ ಎಲ್ಲಿ? ಗಣ್ಯರು, ಮನ್ನೆಯರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆಯಾದ ನಂತರವೂ ಶಿಕ್ಷಣ ನೀಡುತ್ತಿದ್ದರು. ಆದರೆ, ಸಾಮಾನ್ಯ ಮನೆತನಗಳಲ್ಲಿ ಮಹಿಳೆಯರಿಗೆ ಶಿಕ್ಷಣವೇ ಇಲ್ಲ. ಇನ್ನು ವ್ಯಾಪಾರಿಯೇ ಆಗಲಿ, ರೈತನೇ ಆಗಲಿ, ಕಸುಬುದಾರನೇ ಆಗಲಿ, ತನ್ನ ಮಗನನ್ನು ಶಾಲೆಗೆ ಕಳುಹಿಸುವ ಬದಲು ತನ್ನ ಉದ್ಯೋಗದಲ್ಲಿ ನೆರವಾಗಬೇಕಂಬ ನಿಲುವನ್ನು ತಳೆದಿರಲು, ಗಂಡು ಹುಡುಗರೂ ಶಿಕ್ಷಣದಿಂದ ವಂಚಿತರು. ಕಸುಬುದಾರ ಹಿಂದುಳಿದ ಜಾತಿಯ ಜನ, ಅಂದಿನ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಇಲ್ಲದ ದಿನಗಳಲ್ಲಿ, ಮೇಲುವರ್ಗದವರಂತೆ ವಿಶೇಷವಾಗಿ ಶಿಕ್ಷಕರನ್ನು ನೇಮಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಪರಿಪಾಠ ಇರಲಿಲ್ಲ.
ವಿಧವೆಯಾದವಳ ಪಾಡು ಬ್ರಾಹ್ಮಣರಲ್ಲಿದ್ದಂತೆ ಇತರ ಜಾತಿಗಳಲ್ಲಿ ದಯನೀಯವಾಗಿರಲಿಲ್ಲ. ಬ್ರಾಹ್ಮಣೇತರ ವರ್ಗಗಳಲ್ಲಿ ಕೂಡಿಕೆ, ಸೀರುಡಿಕೆ, ಮುಂತಾದ ಸಂಪ್ರದಾಯಗಳು ಇದ್ದು ವಿಧವೆಯು ಮತ್ತೆ ಮದುವೆಯಾಗುವ ಅವಕಾಶ ಇತ್ತು. ಆದರೆ, ಪಾಶ್ಚಾತ್ಯ ಶಿಕ್ಷಣ ಬೆಳೆದು ಸಂಸ್ಕೃತೀ ಭವನ ಸಂಸ್ಕೃತಾನುಕರಣ (Sanskritization) ಎಂಬ ಮೇಲ್ಜಾತಿಯವರನ್ನು ಅನುಕರಿಸುವ ಪದ್ಧತಿ ಬಂದಾಗ ಹಿಂದುಳಿದ ವರ್ಗಗಳ ವಿದ್ಯಾವಂತರಲ್ಲಿ ವಿಧವಾವಿವಾಹ ಪೂರ್ತಿ ನಿಂತುದು ಒಂದು ದುರ್ದೈವ. ಬಹುಪಾಲು ಬ್ರಾಹ್ಮಣೇತರ ವರ್ಗಗಳಲ್ಲಿ ಹಾಗೂ ಹಲವಾರು ಬ್ರಾಹ್ಮಣ ವರ್ಗಗಳಲ್ಲಿ ತೆರ (bride price) ರೂಢಿಯಲ್ಲಿ ಇತ್ತು. ಹೆಣ್ಣು ಮನೆತನದ ಕಸಬಿನಲ್ಲಿ ಅಥವಾ ಹೊಲದಲ್ಲಿ ದುಡಿಮೆಗೆ ಜೋಡಿದಾರಳು ಎಂಬ ಕಾರಣಕ್ಕೆ ಎತ್ತಿನಂತೆ ಹೆಣ್ಣನ್ನೂ ಹಣಕೊಟ್ಟು ತರಬೇಕಾಗಿತ್ತು. ಆದರೆ ದುಡಿಮೆಯಲ್ಲಿ ಪಾಲುದಾರಳಾದವಳಿಗೆ ಕುಟುಂಬದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿತ್ತು. ಬ್ರಾಹ್ಮಣ ವರ್ಗಗಳಲ್ಲಿ ವಿವಾಹಿತ ಹೆಣ್ಣಿಗೆ ಬ್ರಾಹ್ಮಣೇತರ ದುಡಿಯುವ ಜಾತಿಗಳಲ್ಲಿ ಇರುವಷ್ಟು ಸ್ವಾತಂತ್ರ್ಯ ಇರಲಿಲ್ಲ. ಆದರೆ ಬ್ರಾಹ್ಮಣರಲ್ಲೂ ಲಿಂಗಾಯತರಲ್ಲೂ ತೆರ ಬಹುಕಾಲ ರೂಢಿಯಲ್ಲಿ ಇತ್ತು. ಪಂಚಾಚಾರ್ಯ ಪ್ರಭದ 1929ರ ಒಂದು ಸಂಚಿಕೆಯಲ್ಲಿ ವೀರಶೈವ ಸ್ವಾಮಿಗಳೊಬ್ಬರು ಒಂದು ವೀರಶೈವ ವಿವಾಹದ ಕಾಲಕ್ಕೆ ಭಾಷಣ ಮಾಡಿ ಸಾಲಂಕೃತ ಕನ್ಯಾದಾನ ನ್ಯಾಯವಾದುದು. ತೆರಕೊಡುವುದು ಧಾರ್ಮಿಕವಲ್ಲ ಎಂಬುದನ್ನು ವರದಿ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಹವಿಕ ಬ್ರಾಹ್ಮಣರಲ್ಲಿ ಇದ್ದ ತೆರ ಪದ್ಧತಿಯ ದುರಂತ ಚಿತ್ರ ಇಗ್ಗಪ್ಪ ಹೆಗ್ಗಡೆ ಪ್ರಹಸನ ಎಂಬ ಹೋದ ಶತಮಾನದ ಕನ್ನಡ ನಾಟಕದಲ್ಲಿ ಮೂಡಿಬಂದಿದೆ. ಬಲು ಹಿಂದೆ, ವಿಜಯನಗರ ಕಾಲದಲ್ಲಿ ಬ್ರಾಹ್ಮಣರ ವಿವಿಧ ಜಾತಿಗಳು ತಮ್ಮಲ್ಲಿನ ಈ ತೆರಪದ್ಧತಿಯನ್ನು ಖಂಡಿಸಿ ನಿರ್ಣಯ ಕೈಕೊಂಡುದು ಶಾಸನವೊಂದರಲ್ಲಿ ಬಂದಿದೆ. ಆದರೆ, ತೆರೆದಂಥ ದುಷ್ಟಪದ್ಧತಿ ನಿವಾರಣೆಯಾಗಿ ವರದಕ್ಷಿಣೆಯಂಥ ಇನ್ನೊಂದು ದುಷ್ಟಪದ್ಧತಿ ಜಾರಿಗೆ ಬಂದುದು ಒಂದು ವಿಪರ್ಯಾಸ. 19ನೆಯ ಶತಮಾನದ ಆರಂಭದವರೆಗೆ ನಮ್ಮ ದೇಶ, ಕರ್ನಾಟಕವೂ ಕೂಡ, ಕೈಮಗ್ಗದ ಉದ್ದಿಮೆಯಲ್ಲಿ ವ್ಯಾಪಕವಾಗಿ ತೊಡಗಿತ್ತು. ಬ್ರಾಹ್ಮಣೇತರ ಎಲ್ಲ ಜಾತಿಯ ಮಹಿಳೆಯರು ಮನೆಯಲ್ಲಿ ನೂಲುತ್ತಿದ್ದರು. ಬೆಂಗಳೂರಿನ ಬಗ್ಗೆ ಹೇಳುವಾಗಲೇ ಬುಕಾನನ್ ಎಂಬ ಆಂಗ್ಲ ಕಥನಕಾರ 1800ರಲ್ಲಿ ಈ ವಿಚಾರ ಹೇಳಿದ್ದಾನಲ್ಲದೇ ದಿನವಿಡೀ ಚರಕದಲ್ಲಿ ನೂಲುವ ಒಬ್ಬ ಹೆಂಗಸು ಹೊಲದಲ್ಲಿ ದುಡಿಯುವವರು ಪಡೆಯುವಷ್ಟೇ ಕೂಲಿಯನ್ನು ಪಡೆಯುತ್ತಿದ್ದಳೆಂದು ತಿಳಿಸಿದ್ದಾನೆ. ಇಂಗ್ಲೆಂಡ್ನಲ್ಲಿ ಕೈಗಾರಿಕಾ ಕ್ರಾಂತಿಯಾಗಿ ಭಾರತದ ಕೈಮಗ್ಗದ ಉದ್ದಿಮೆ ಮಣ್ಣು ಮುಕ್ಕಿದಾಗ ಕೋಟ್ಯವಧಿ ಮಹಿಳೆಯರು ನೂತು ಸಂಪಾದಿಸುತ್ತಿದ್ದ ತಮ್ಮ ದುಡಿಮೆಗೆ ಎರವಾದರು. ಇದರಿಂದ ಪ್ರತಿಯೊಂದು ಕುಟುಂಬದಲ್ಲಿ ತಮಗಿದ್ದ ಆರ್ಥಿಕ ಸ್ವಾತಂತ್ರ್ಯಕ್ಕೂ ಅವರು ಎರವಾಗಿ ಸಾಮಾಜಿಕವಾಗಿ ಗಂಡಸರಿಂದ ಮೂಲೆಪಾಲಾಗುವ ಸ್ಥಿತಿಗೆ ಬಂದರು. ಬಾಲ್ಯವಿವಾಹ, ವೈಧವ್ಯ, ಶಿಕ್ಷಣಕ್ಕೆ ಅವಕಾಶವಿಲ್ಲದೆ ಪರಾವಲಂಬನ, ದೇವದಾಸಿ ಪದ್ಧತಿ, ಇವೆಲ್ಲ ಮಹಿಳೆಯರನ್ನು ಅಬಲೆಯರನ್ನಾಗಿ ಮಾಡಿದ ಸನ್ನಿವೇಶಗಳು. ಇವುಗಳ ವಿರುದ್ಧ ನಡೆದ ಚಳವಳಿಗಳು ಸಮಾಜ ಸುಧಾರಣಾ ಚಳವಳಿಗಳು. ಜಾತಿಗಳ ಮೇಲು ಕೀಳು ಹಾಗೂ ಮಹಿಳೆಯರ ಬಗೆಗಿನ ಅಸಮಾನತೆಯನ್ನು ನಿವಾರಿಸಲು ಬಸವಣ್ಣನವರು ನಡೆಸಿದ ಕ್ರಾಂತೀಕಾರೀ ಚಳವಳಿ, ಸಮಾಜವು ಅದನ್ನು ಜೀರ್ಣಿಸಿಕೊಳ್ಳಲು ಸಾಮರ್ಥ್ಯವಿಲ್ಲದಷ್ಟು ತೀವ್ರವಾಗಿ ನಡೆದು ಅಂತರ್ಜಾತಿಯ ವಿವಾಹದ ವಿರುದ್ಧ (ವರ್ಣವ್ಯವಸ್ಥೆಯನ್ನು ಕಾಪಾಡಬೇಕಾಗಿದ್ದ) ಅಂದಿನ ಸರಕಾರ ಕೈಕೊಂಡ ಉಗ್ರಕ್ರಮದಿಂದ ದುರಂತದಲ್ಲಿ ಕೊನೆಯಾಯಿತು. ತಾತ್ತ್ವಿಕವಾಗಿ ವೀರಶೈವರು ಈ ವಿಚಾರ ಒಪ್ಪಿಕೊಂಡರೂ ಆಚರಣೆಯಲ್ಲಿ ಅದು ಬಾರದೇಹೋಯಿತು. ಸಾಮಾಜಿಕ ಬದಲಾವಣೆಯ ತೀವ್ರ ಯತ್ನ ಕ್ರಾಂತಿಯ ರೂಪ ತಳೆದರೆ ಕ್ಷಿಪ್ರಕ್ರಾಂತಿಗಳನ್ನು ಸಮಾಜ ಜೀರ್ಣಿಸಿಕೊಳ್ಳಲಾರದು, ಎಂದೆನಿಸುವಂತೆ ಆಯಿತು. ಅಸ್ಪೃಶ್ಯರನ್ನು ತಿರುಕುಳತ್ತರ್ ಎಂದು ಕರೆದು, ಅವರನ್ನು ದೂರವಿಡಬೇಡಿ ಎಂದು ತೀರ ಸಂಪ್ರದಾಯಸ್ಥ ಅನುಯಾಯಿಗಳಿಗೆ ಆಚಾರ್ಯ ರಾಮಾನುಜರು ಮನವರಿಕೆ ಮಾಡಿಕೊಡಲು, ವರ್ಷದಲ್ಲಿ ಒಂದು ದಿನ ಅವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಟ್ಟು, ಅದನ್ನು ಅನುಸರಿಸಲು ಬೋಧಿಸಿದರು. ರಾಮಾನುಜರು ಮಾಡಿದ ಆರಂಭವೇ ಕೊನೆಯೂ ಆಯಿತು. ಒಂದು ದಿನ ಪ್ರವೇಶಕ್ಕೆ ಬಿಟ್ಟಿದ್ದೇವೆ, ಆಯಿತು; ಇನ್ನೇನು? ಎಂಬುದು ಅವರ ಅನುಯಾಯಿಗಳ ನಿಲುವಾಗಿ ಅಸ್ಪೃಶ್ಯರು ಅಸ್ಪೃಶ್ಯರಾಗಿಯೇ ಉಳಿದರು. ಯಾವುದೇ ಧಾರ್ಮಿಕ ನಾಯಕರು ಎಷ್ಟೋ ಕ್ರಾಂತಿಕಾರಿಯಾದ ಸಾಮಾಜಿಕ ವಿಚಾರಗಳನ್ನು ಪ್ರಾಮಾಣಿಕವಾಗಿಯೇ ಬೋಧಿಸಿದ್ದರೂ ಅವರ ಗಮನವು ಜನರ ಪಾರಮಾರ್ಥಿಕ ಸಾಧನೆಯ ಕಡೆ ಇತ್ತೇ ವಿನಾ ಲೌಕಿಕ ವಿಚಾರಗಳ ಕಡೆ ಇರಲಿಲ್ಲ. ಇಹದ ಬಂಧನದಿಂದ ಮುಕ್ತರಾಗಬೇಕೆಂಬ ಸಂದೇಶವನ್ನು ಜನರಿಗೆ ಬೋಧಿಸುತ್ತ್ತಿದ್ದ ಅವರು ತಮ್ಮ ಭಕ್ತರ ಧಾರ್ಮಿಕ ಆಚರಣೆಗಳ ಬಗ್ಗೆ ಇಟ್ಟಷ್ಟು ಗಮನವನ್ನು ಸಾಮಾಜಿಕ ಆಚರಣೆಗಳ ಕಡೆ ಇಡುವುದು ಸಾಧ್ಯ ಇರಲಿಲ್ಲ. ಪಾಶ್ಚಾತ್ಯರ ಆಡಳಿತ ಆರಂಭ ಆದಾಗ ಕ್ರೈಸ್ತ ಮಿಶನರಿಗಳ ಚಟುವಟಿಕೆ ಹೆಚ್ಚಿತು. ಮುಖ್ಯವಾಗಿ ಶಿಕ್ಷಣ, ಮುದ್ರಣಗಳ ಕ್ಷೇತ್ರಗಳಲ್ಲಿ ಕಾಲಿಟ್ಟ ಅವರು ಇಂಗ್ಲಿಷ್ ಶಿಕ್ಷಣದ ಆರಂಭ ಮಾಡಿದರು. ಮುದ್ರಣವನ್ನು ಈ ನಾಡಿನಲ್ಲಿ ರೂಢಿಗೆ ತಂದರು. ಜೊತೆಗೆ ಮತಪ್ರಚಾರಕ್ಕೆ ತೊಡಗಿದರು. ಸಮಾಜದಲ್ಲಿ ತೀರ ಕೆಳವರ್ಗದ, ಸಾಮಾಜಿಕ ಸ್ಥಾನಮಾನ ಇರದ ಅಸ್ಪೃಶ್ಯ ಮತ್ತು ಇತರ ಅನೇಕ ಹಿಂದುಳಿದ ಜಾತಿಗಳಲ್ಲಿ ಪ್ರಚಾರ ಆರಂಭಿಸಿದರು. ಅಲ್ಲದೇ ಹಿಂದು ಧರ್ಮ, ಸಾಮಾಜಿಕ ಸಂಪ್ರದಾಯಗಳ ಉಗ್ರಟೀಕೆ ಮಾಡಿದರು. ಪ್ರಾಟೆಸ್ಟೆಂಟ್ ಪಂಥದ ಲಂಡನ್ ಮಿಶನ್ (1820) ಬಳ್ಳಾರಿ, ಬೆಳಗಾವಿ, ಬೆಂಗಳೂರುಗಳಲ್ಲಿ ಕೆಲಸ ಆರಂಭಿಸಿತು. ಇವರು ಬಳ್ಳಾರಿ, ಬೆಳಗಾವಿ (1832) ಮತ್ತು ಬೆಂಗಳೂರುಗಳಲ್ಲಿ ಇಂಗ್ಲಿಷ್ ಕಲಿಸುವ ಶಾಲೆಗಳನ್ನೂ ಆರಂಭಿಸಿದರು. ಬಾಸೆಲ್ ಮಿಶನ್ರವರು ಮಂಗಳೂರು (1834) ಉಡುಪಿ, ಧಾರವಾಡ ಮುಂತಾದೆಡೆ ತಮ್ಮ ಚಟುವಟಿಕೆ ಆರಂಭಿಸಿದರು. ವೆಸ್ಲಿಯನ್ ಮಿಶನ್ ಮೈಸೂರಿನಲ್ಲಿ ಕೆಲಸ ಆರಂಭಿಸಿತು. ಇವರು ಶಿಕ್ಷಣ ಕ್ಷೇತ್ರದಲ್ಲಿ ಗಳಿಸಿದ ಯಶಸ್ಸಿನಿಂದ ಪ್ರಭಾವಿತರಾಗಿ ಹಿಂದಿನಿಂದಲೂ ಕರ್ನಾಟಕದಲ್ಲಿ ನೆಲೆಸಿದ್ದ ಕ್ಯಾಥಲಿಕರೂ ಶಿಕ್ಷಣ, ಮುದ್ರಣಗಳ ಕ್ಷೇತ್ರದಲ್ಲಿ ಹೆಜ್ಜೆಯಿಟ್ಟರು. ಶಾಲೆಗಳು, ಪುಸ್ತಕಗಳು ಹಾಗೂ ಪತ್ರಿಕೆಗಳ ಮೂಲಕ ಇವರು ನಡೆಸಿದ ಮತ ಪ್ರಚಾರವು ಹಿಂದೂಗಳನ್ನು ತಮ್ಮ ಧಾರ್ಮಿಕ ಅಜ್ಞಾನ ಹಾಗೂ ಸಾಮಾಜಿಕ ದೋಷಗಳ ಕಡೆ ಕಣ್ತೆರೆಯುವಂತೆ ಮಾಡಿತು. ಪಾಶ್ಚಾತ್ಯ ವಿದ್ಯೆ, ಅದರಿಂದ ಮೂಡಿ ಬಂದ ಉದಾರವಾದಗಳೂ ನಮ್ಮಲ್ಲಿನ ಬುದ್ಧಿಜೀವಗಳ ಕಣ್ಣು ತೆರೆಸಿದ್ದು ಸರ್ವವಿದಿತ. ಇದರಿಂದ ಅಖಿಲ ಭಾರತ ಮಟ್ಟದಲ್ಲಿ ನಡೆದ ಕೆಲವು ಸುಧಾರಣಾವಾದೀ ಧಾರ್ಮಿಕ ಚಳವಳಿಗಳು ಕರ್ನಾಟಕಕ್ಕೆ ಬಂದವು. ಬ್ರಹ್ಮಸಮಾಜವು 1870ರಲ್ಲಿ ಮಂಗಳೂರಿಗೂ ಅದಕ್ಕೂ ಮೊದಲು 1866ರಲ್ಲಿ ಬೆಂಗಳೂರಿಗೂ ಬಂತು. ಚಂದ್ರಶೇಖರ ಅಯ್ಯರ್ ಎಂಬವರು ಆರಂಭದ ದಿನಗಳಲ್ಲಿ ಬೆಂಗಳೂರಲ್ಲಿ ಇದರ ಮುಖ್ಯಸ್ಥರು. ಅಪ್ಪಾವು ಪಿಳ್ಳೆ ಎಂಬವರು 1878ರಲ್ಲಿ ಸಮಾಜದ ವತಿಯಿಂದ ಒಂದು ಮಹಿಳಾ ಶಾಲೆಯನ್ನು ಪ್ರಾರಂಭಿಸಿದರು. ಮಂಗಳೂರಲ್ಲಿ ಉಲ್ಲಾಳ ರಘುನಾಥಯ್ಯ ಹಾಗೂ ಬಿಲ್ಲವ ಜಾತಿಗೆ ಸೇರಿದ ಎಂ. ಅರಸಪ್ಪ (ಉಪಾಸನಾ ಸಮಾಜ) ಇವರು ಆರಂಭದ ನಾಯಕರು. ಉತ್ತರ ಕರ್ನಾಟಕದಲ್ಲಿ ಮುಂಬೈನಲ್ಲಿ ನೆಲೆಸಿದ್ದ ಶಾಮರಾವ್ ವಿಠಲ ಕಾಯ್ಕಿಣಿ, ಅವರ ಸೋದರಳಿಯ ನಾರಾಯಣ ಚಂದಾವರ್ಕರ್, ಜಸ್ಟಿಸ್ ರಾನಡೆ ಹಾಗೂ ಖ್ಯಾತ ವಿದ್ವಾಂಸ ಪುಣೆಯ ರಾಮಕೃಷ್ಣ ಭಂಡಾರ್ಕರ್ ಹಾಗೂ ಡಿ.ಕೆ. ಕರ್ವೆ ಇವರುಗಳ ಪ್ರಭಾವವಿತ್ತು. ಇವರಲ್ಲಿ ಬ್ರಹ್ಮ ಸಮಾಜದ ಸಂಪರ್ಕಕ್ಕೆ ಬಂದವರು ಉತ್ತರ ಕನ್ನಡದ ಕೀಲಾರ ಗಣೇಶ ಹೆಗ್ಡೆ ಭಂಡಾರ್ಕರರಿಂದ ಪ್ರಭಾವಿತರಾಗಿದ್ದರು. ಧಾರವಾಡದ ಖ್ಯಾತ ಮಹಿಳಾ ಕಾರ್ಯಕರ್ತೆ ದಿ|| ಭಾಗೀರಥೀಬಾಯಿ ಪುರಾಣಿಕ ಕರ್ವೆಯವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಇದಕ್ಕೂ ಮೊದಲು ಜೀವಿಸಿದ್ದ ಗಣ್ಯ ವಿದ್ವಾಂಸ ಹಾಗೂ ಶಿಕ್ಷಣ ತಜ್ಞ ವೆಂಕಟ ರಂಗೋಕಟ್ಟಿ (1833-1910) ವಿಧವಾ ವಿವಾಹವನ್ನು ಪ್ರತಿಪಾದಿಸುವ ವಿಧವೆಯರ ಇತಿಹಾಸ (1888) ಹಾಗೂ ವಿಧವಾವಪನ ಅನಾಚಾರ (1889) ಮುಂತಾದ ಪುಸ್ತಕಗಳನ್ನು ಬರೆದುದು ಸ್ಮರಣೀಯ. ಅವರ ಆರು ಬೆರಳಿನ ಕುರುಹು ಎಂಬ ಕೃತಿ ಅನೇಕ ಸಾಮಾಜಿಕ ದೋಷಗಳನ್ನು ಟೀಕಿಸುತ್ತದೆ. ಮುಂಬೈಯಲ್ಲಿ ಸ್ಥಾಪನೆಗೊಂಡ ಪರಮಹಂಸ ಸಭಾ (1849) ಸಂಸ್ಥೆಯ ಪ್ರಭಾವಕ್ಕೆ ಕಟ್ಟ ಒಳಗಾಗಿದ್ದರು. ಈ ನಿಟ್ಟಿನಲ್ಲಿ ದುಡಿದ ಇನ್ನೊಂದು ಸಂಸ್ಥೆ ಥಿಯೊಸಫಿಕಲ್ ಸೊಸೈಟಿ. ಇದರ ಶಾಖೆಯನ್ನು 1886ರಲ್ಲಿ ಸೊಸೈಟಿಯ ಸ್ಥಾಪಕರಾದ ಕರ್ನಲ್ ಒಲ್ಕಾಟ್ ಮತ್ತು ಮದಾಂ ಬ್ಲಾವ್ಟ್ಸ್ಕಿ ಇವರುಗಳೇ ಬೆಂಗಳೂರಿಗೆ ಬಂದು ಸ್ಥಾಪಿಸಿದರು. ದಿವಾನ್ ಶೇಷಾದ್ರಿ ಅಯ್ಯರ್ ಇದರ ಸದಸ್ಯರಾಗಿ ಅದಕ್ಕೆ ಸಕಲ ಪ್ರೋತ್ಸಾಹ ನೀಡಿದರು. ಇದರ ಶಾಖೆಗಳು ಮೈಸೂರು (1896), ಮಂಗಳೂರು (1901), ಧಾರವಾಡ (1902)ಗಳಲ್ಲಿ ಬೆಳೆದುವು. ಇದೇ ರೀತಿ ಆರ್ಯಸಮಾಜವು 1894 ತನ್ನ ಚಟುವಟಿಕೆಯನ್ನು ಆರಂಭಿಸಿತು. ವೆಂಕಟ ವರದ ಅಯ್ಯಂಗಾರ್ ಎಂಬುವರು ಈ ಸಮಾಜದ ಗಣ್ಯ ಕಾರ್ಯಕರ್ತರಾಗಿದ್ದು ಇವರು 1903ರಲ್ಲಿ ಬೆಂಗಳೂರಲ್ಲಿ ದೇಶಾಭ್ಯುದಯ ಸಂಘ (ಇಂಡಿಯನ್ ಪ್ರೊಗ್ರೆಸಿವ್ ಯೂನಿಯನ್) ಆರಂಭಿಸಿದರು. ಈ ಸಂಘವು ಹಿತವಾಣಿ ಎಂಬ ಮಾಸ ಪತ್ರಿಕೆಯನ್ನು ಸಮಾಜ ಸುಧಾರಣಾ ವಿಚಾರಗಳನ್ನು ಪ್ರತಿಪಾದಿಸಲು ಆರಂಭಿಸಿತು. ಕೆ. ರಾಮಚಂದ್ರರಾವ್ ಇದರ ಸಂಪಾದಕರು. ದಿವಾನ್ ವಿ.ಪಿ. ಮಾಧವರಾವ್, ಸರ್. ಕೆ.ಪಿ. ಪುಟ್ಟಣಚೆಟ್ಟಿ ಇವರುಗಳ ದೇಶಭ್ಯುದಯ ಸಂಘದ ಪ್ರಬಲ ಬೆಂಬಲಿಗರಾಗಿದ್ದು. ಆಂಧ್ರದ ಖ್ಯಾತ ಸಮಾಜ ಸುಧಾರಕ ವೀರೇಶಲಿಂಗಂ ಪಂತುಲು ಆಗಾಗ ಬೆಂಗಳೂರಿಗೆ ಬರುತ್ತಿದ್ದು ಅವರ ಸ್ನೇಹಿತ ವೆಂಕಟವರದ ಅಯ್ಯಂಗಾರ್ (ಇವರು ಒಬ್ಬ ವಿಧವೆಯನ್ನು ವರಸಿದ್ದರು) ಹಾಗೂ ಇತರ ಬೆಂಗಳೂರಿನ ಸಮಾಜಸುಧಾರಕರು ಅವರ ಪ್ರಭಾವಕ್ಕೆ ಒಳಗಾಗಿದ್ದರು. ಹೈದರಾಬಾದ್ ಕರ್ನಾಟಕದಲ್ಲಿ ಆರ್ಯಸಮಾಜವು ತೀರ ಕಾರ್ಯಶೀಲವಾಗಿತ್ತು. ಮಂಗಳೂರಿನಲ್ಲೂ ಅದರ ಶಾಖೆಯು 1919ರಿಂದ ಕಾರ್ಯಮಗ್ನವಾಗಿತ್ತು. ಬೆಳಗಾವಿಯಲ್ಲಿ ಆರ್ಯಸಮಾಜದ ಚಟುವಟಿಕೆ 1925ರಲ್ಲಿ ಶುರುವಾಯಿತು. ಸ್ವಾಮಿ ವಿವೇಕಾನಂದರು 1892ರಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರುಗಳಿಗೆ ಸಂದರ್ಶನ ನೀಡಿದ್ದರು. ಕರ್ನಾಟಕದ ಅಳಸಿಂಗ ಪೆರುಮಾಳ್ ಅವರ ಗಣ್ಯ ಅನುಯಾಯಿಗಳಾಗಿದ್ದರು. 1904ರಲ್ಲಿ ಬೆಂಗಳೂರಲ್ಲಿ ರಾಮಕೃಷ್ಣ ಮಿಶನ್ ತನ್ನ ಶಾಖೆಯನ್ನು ಪ್ರಾರಂಭಿಸಿತು. ಈ ಸಂಸ್ಥೆಗಳಿಂದ ಹಾಗೂ ಅವುಗಳ ನಾಯಕರ ಪ್ರಭಾವದಿಂದ ಮಹಿಳೆಯರ ಪುರೋಗಮನ ಮತ್ತು ದಲಿತರ ಉನ್ನತಿಗಾಗಿ ಅನೇಕ ಸಂಸ್ಥೆಗಳೂ ವ್ಯಕ್ತಿಗಳೂ ಕರ್ನಾಟಕದಲ್ಲಿ ಕೆಲಸ ಮಾಡಿದರು. ಕುದ್ಮುಲ್ ರಂಗರಾವ್ (1858-1928) ಎಂಬುವರು 1892ರಲ್ಲಿ ಮಂಗಳೂರಲ್ಲಿ ಆರಂಭಿಸಿದ ಡಿಪ್ರೆಸ್ಡ್ ಕ್ಲಾಸಸ್ ಮಿಶನ್ ದಲಿತರ ಶಿಕ್ಷಣಕ್ಕಾಗಿ ಶಾಲೆಗಳ ಒಂದು ಸರಣಿಯನ್ನೇ ಆರಂಭಿಸಿತು. ಮಹಿಳೆಯರ ವಿವಾಹದ ವಯಸ್ಸನ್ನು ಏರಿಸಬೇಕೆಂದೂ ಅವರು ಪ್ರಚಾರ ಮಾಡಿದರು. ಅವರ ಮಗಳು ರಾಧಾ ಕುದ್ಮುಲ್ ಪ್ರೌಢಳಾದ ನಂತರ ಡಾ|| ಪಿ. ಸುಬ್ಬರಾಯನ್ ಎಂಬ ತಮಿಳುನಾಡಿನ ಬ್ರಾಹ್ಮಣೇತರ ನಾಯಕರನ್ನು ವರಿಸಿದರು (ಕುಮಾರಮಂಗಲಂ ಸೋದರರು ಇವರ ಮಕ್ಕಳು). ಮಂಗಳೂರಿನ ವಿಧವೆಯೊಬ್ಬಳ ವಿವಾಹವು ಕುದ್ಮುಲ್ ರಂಗರಾಯರ ಯತ್ನದಿಂದ 1900ರಲ್ಲಿ ಮುಂಬೈಯಲ್ಲಿ ನಡೆದರೆ, ಇನ್ನೊಂದು ಇಂಥ ವಿವಾಹವು 1903ರಲ್ಲಿ ಮಂಗಳೂರಲ್ಲೇ ನಡೆಯಿತು. ಅನೇಕ ದೇವದಾಸಿಯರ ವಿವಾಹವನ್ನೂ ಮಂಗಳೂರಲ್ಲಿ ಅವರು ನಡೆಸಿದರು. ಬೆಂಗಳೂರಲ್ಲಿ ಪ್ರಥಮ ವಿಧವಾ ವಿವಾಹವು 1910ರಲ್ಲಿ ವೀರೇಶಲಿಂಗಂ ಪಂತುಲು ಅವರ ಪ್ರಯತ್ನದಿಂದ ನಡೆಯಿತು. ಬೆಂಗಳೂರಿನ ರಾನಡೆ ಸೊಸೈಟಿ (1880ರ ನಂತರ), ಅಬಲಾಶ್ರಮ (1910), ಮಹಿಳಾ ಸೇವಾಶ್ರಮ (1913; ಥಿಯೋಸಫಿಸ್ಟರಿಂದ ಪ್ರೇರಿತ), ಶಾರದಾ ಸ್ತ್ರೀ ಸಮಾಜ (1914) ಹಾಗೂ ಮಲ್ಲೇಶ್ವರಂ ಸ್ತ್ರೀ ಸಮಾಜ, ಮೈಸೂರಿನಲ್ಲಿ ಎಂ. ವೆಂಕಟಕೃಷ್ಣಯ್ಯ ಮತ್ತು ಜಿ.ಆರ್. ಜ್ಯೂರ್ ಆರಂಭಿಸಿದ ಸಿವಿಕ್ ಅಂಡ್ ಸೋಶಲ್ ಎಕ್ಟಿವಿಟೀಸ್ ಎಸೋಸಿಯೇಶನ್ (1916) ಹಾಗೂ ಧಾರವಾಡ ವನಿತಾ ಸೇವಾ ಸಮಾಜದ (1928; ಭಾಗೀರಥೀಬಾಯಿ ಪುರಾಣಿಕರು ಆರಂಭಿಸಿದ್ದು) ಇಲ್ಲಿ ಉಲ್ಲೇಖಿಸಬೇಕಾದ ಸಂಸ್ಥೆಗಳು. ಮೈಸೂರಿನಲ್ಲಿ ಅರಮನೆ ಅಧಿಕಾರಿ ( ಪ್ಯಾಲೇಸ್ ಬಕ್ಷಿ) ಅಂಬಿಲ್ ನರಸಿಂಹ ಅಯ್ಯಂಗಾರ್ ಅವರು ಮಹಾರಾಣಿ ಶಾಲೆಯ (1881) ಸ್ಥಾಪನೆಗೆ ಕಾರಣರಾದರು. ಎಂ. ವೆಂಕಟಕೃಷ್ಣಯ್ಯ ಅವರಿಗೆ ಬೆಂಬಲವಾಗಿ ನಿಂತು ತಮ್ಮ ಪತ್ನಿಯನ್ನೂ ವಿದ್ಯಾರ್ಥಿನಿಯಾಗಿ ಈ ಶಾಲೆಗೆ ಕಳುಹಿಸಿದರು. ಇದು ಮುಂದೆ 1891ರಲ್ಲಿ ಸರಕಾರೀ ಹೈಸ್ಕೂಲಾಗಿ 1902ರಲ್ಲಿ ಕಾಲೇಜಾಯಿತು. ಮೈಸೂರಿನಲ್ಲಿ ಒಂದು ವಿಧವಾ ಗೃಹವನ್ನೂ 1907ರಲ್ಲಿ ಅಂಬಿಲ್ ನರಸಿಂಹ ಅಯ್ಯಂಗಾರ್ ಅವರ ನೆರವಿನಿಂದ ಎಂ. ವೆಂಕಟಕೃಷ್ಣಯ್ಯ ಆರಂಭಿಸಿದರು. 1894ರಲ್ಲಿ ಬಾಲ್ಯವಿವಾಹದ ವಿರುದ್ಧ ಕಾನೂನನ್ನು ಮೈಸೂರು ಸರಕಾರ ಮಾಡಿತು. ಎಂಟು ವರ್ಷಕ್ಕೆ ಮೊದಲು ಕನ್ಯೆಯರ ವಿವಾಹ ಮಾಡಬಾರದೆಂದೂ ಐವತ್ತು ವರ್ಷ ಮೀರಿದ ಗಂಡಸರು 16ಕ್ಕೂ ಕಿರಿಯ ವಯಸ್ಸಿನ ಹುಡುಗಿಯನ್ನು ವರಿಸಬಾರದೆಂದೂ ಈ ಕಾನೂನು ಹೇಳಿತು. 1895ರಲ್ಲಿ ಈ ನಿಯಮವನ್ನು ಭಂಗಿಸಿದ ಮೂವರಿಗೆ ಶಿಕ್ಷೆಯಾದ ಉದಾಹರಣೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೀಲಾರ ಗಣೇಶ ಹೆಗ್ಡೆಯವರು ವಿಧವಾ ವಿವಾಹ ಚಳವಳಿ ಆರಂಭಿಸಿದರು. ಅಕ್ಕದಾಸ ಗಣಪತಿಭಟ್ಟ (ಶಿರಸಿ) ಎಂಬುವರು ಈ ಚಳವಳಿಯ ಅಧ್ವರ್ಯುಗಳಾಗಿ ಸುಮಾರು 125 ವಿಧವೆಯರ (ಮುಖ್ಯವಾಗಿ ಹವಿಕರು) ವಿವಾಹಕ್ಕೆ ಕಾರಣರಾಗಿದ್ದು, ಮುಂಬೈ, ಕಲ್ಕತ್ತದಂಥ ಕೇಂದ್ರಗಳಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಇಂಥ ಮದುವೆಗಳು ಇಂಥ ಚಳವಳಿಗಳಿಂದ ನಡೆಯಲಿಲ್ಲ. (ಇವರ ಯತ್ನದಿಂದ ವಿಧವೆಯರನ್ನು ವರಸಿದವರಲ್ಲಿ ಖ್ಯಾತ ನಟ ಹುಲಿಮನೆ ಸೀತರಾಮ ಶಾಸ್ತ್ರಿ ಹಾಗೂ ಕವಿ ಜಿ.ಆರ್. ಪಾಂಡೇಶ್ವರರು ಸೇರಿದ್ದಾರೆ). ಮಂಗಳೂರಲ್ಲಿ ಥಿಯೊಪಿಸ್ಟರು ಆರಂಭಿಸಿದ ಬೆಸೆಂಟ್ ಬಾಲಿಕಾ ಪಾಠಶಾಲೆಯಲ್ಲಿ ಅಧ್ಯಾಪಕಿಯಾಗಿ ಬಂದ ಮಾರ್ಗರೆಟ್ ಕಸೆನ್ಸ್ (ಹೆನ್ರಿ ಕಸೆನ್ಸ್‍ರ ಪತ್ನಿ) ಕಮಲಾದೇವಿ ಚಟ್ಟೋಪಾಧ್ಯಾಯರಂಥ ಬಾಲವಿಧವೆ ನಾಟಕದಲ್ಲಿ ಪಾತ್ರವಹಿಸುವಂತೆ ಮಾಡಿದರಲ್ಲದೆ 1926ರಲ್ಲಿ ಕಮಲಾದೇವಿ ಚುನಾವಣೆಗೆ ನಿಲ್ಲುವಂತೆ ಮಾಡಿದರು. ಈ ಕಾಲದಲ್ಲಿ ಆರಂಭವಾದ ರಾಷ್ಟ್ರೀಯ ಚಳವಳಿಯ ಕಮಲಾದೇವಿ ಚಟ್ಟೋಪಾಧ್ಯಯ, ಕೃಷ್ಣಬಾಯಿ ಪಂಜೇಕರ್ (ಈಕೆ ಬಾಲ ವಿಧವೆಯಾಗಿದ್ದು 1928ರಲ್ಲಿ ಧಾರವಾಡದಲ್ಲಿ ಮರುಮದುವೆಯಾದರು), ಉಮಾಬಾಯಿ ಕುಂದಾಪುರ, ಸುಬ್ಬಮ್ಮಾಜೋಯಿಸ್, ಮುಂದೆ ಯಶೋಧರಾ ದಾಸಪ್ಪ, ಬಳ್ಳಾರಿ ಸಿದ್ಧಮ್ಮ, ನಾಗರತ್ನಮ್ಮ ಹಿರೇಮಠ ಮುಂತಾದ ಗಣ್ಯ ಕಾಂಗ್ರೆಸ್ ಕಾರ್ಯಕರ್ತೆಯರು ಸಾರ್ವಜನಿಕ ಜೀವನವನ್ನು ಪ್ರವೇಶಿಸುವಂತೆ ಮಾಡಿತು. ನಂಜನಗೂಡು ತಿರುಮಲಾಂಬಾ, ಆರ್. ಕಲ್ಯಾಣಮ್ಮ (ಈಕೆ ಸರಸ್ವತಿ ಮಾಸಿಕವನ್ನೂ ಆರಂಭಿಸಿದರು) ಆರಂಭದ ದಿನಗಳಲ್ಲಿ ಗಣ್ಯ ಕನ್ನಡ ಲೇಖಕಿಯರೆನಿಸಿದರು. ದೇವದಾಸಿಯು ದೇವಾಲಯದಲ್ಲಿ ನರ್ತನಾದಿಗಳನ್ನು ಮಾಡಬಾರದೆಂಬ ಆಜ್ಞೆಯನ್ನು (1909) ಮೈಸೂರು ಸರಕಾರ ಮಾಡಿತು. (ಇದಕ್ಕೂ ಮೊದಲು ನಂದಿ ದೇವಾಲಯದಲ್ಲಿ 1892ರಲ್ಲೂ ನಂಜನಗೂಡು ದೇವಾಲಯದಲ್ಲಿ 1899ರಲ್ಲೂ ದೇವದಾಸಿಯ ತಾಫೆ ಸೇವೆ ನಿಲ್ಲಿಸಿ ಸರಕಾರ ಆಜ್ಞೆ ಮಾಡಿತ್ತು). ವಿಧವಾ ವಿವಾಹವನ್ನು ಬೆಂಬಲಿಸಿ ಕಾನೂನು ಮಾತ್ರ ಮೈಸೂರಲ್ಲಿ 1934ರಲ್ಲಿ ಆಯಿತು. (ಆ ಹಿಂದೆ ಇಂಥ ವಿವಾಹಗಳನ್ನು ಬೆಂಗಳೂರಿನವರು ಕಂಟೊನ್ಮೆಂಟ್ ಪ್ರದೇಶದಲ್ಲಿ ಮಾತ್ರ ಮಾಡುತ್ತಿದ್ದರು). ಬ್ರಿಟಿಷ್ ಪ್ರದೇಶಗಳಲ್ಲಿ ಎಂಟು ದಶಕಗಳ ಹಿಂದೆ ಇಂಥ ಕಾನೂನು ಇತ್ತು. ಮಹರ್ಷಿವಿಠಲ ರಾಮ್ಜಿ ಸಿಂಧೆ ಎಂಬ ಜಮಖಂಡಿಯಲ್ಲಿ ಜನಿಸಿದ್ದ ಗಣ್ಯರೊಬ್ಬರು ಪ್ರಾರ್ಥನಾ ಸಮಾಜದ ಜೊತೆ ಸಂಬಂಧ ಹೊಂದಿದ್ದು ಅವರು ಡಿಪ್ರೆಸ್ಡ್ ಕ್ಲಾಸಸ್ ಮಿಶನ್ ಸೊಸೈಟಿಯೆಂಬ ಸಂಸ್ಥೆಯನ್ನು ಪುಣೆಯಲ್ಲಿ ಆರಂಭಿಸಿದ್ದು, 1903ರಲ್ಲಿ ಇದರ ಸಮ್ಮೇಳನವನ್ನು ಬೆಳಗಾವಿಯಲ್ಲಿ ನಡೆಸಿದರಲ್ಲದೆ, 1906ರಲ್ಲಿ ಇದರ ಒಂದು ಶಾಖೆಯನ್ನು ಹುಬ್ಬಳಿಯಲ್ಲಿ ಆರಂಭಿಸಿದ್ದರು. ಮಹಾರಾಷ್ಟ್ರದ ಖ್ಯಾತ ಸಮಾಜಸುಧಾರಕ ಮಹಾತ್ಮಾ ಜ್ಯೋತಿರಾವ್ ಫುಲೆ 1873ರಲ್ಲಿ ಆರಂಭಿಸಿದ್ದ ಸತ್ಯಶೋಧಕ ಸಮಾಜ ಎಂಬ ಸಂಸ್ಥೆಯು ಅಸ್ಪೃಶ್ಯತೆಯ ವಿರುದ್ಧ ಚಳವಳಿ ನಡೆಸಿದ್ದು 1916ರಲ್ಲಿ ಇದರ ಒಂದು ಸಮ್ಮೇಳನವು ಬೆಳಗಾವಿಯಲ್ಲಿ ನಡೆಯಿತು. ವೀರಣಗೌಡ ಪಾಟೀಲರು ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ಉತ್ಸುಕತೆ ತಳೆದು ಬೆಳಗಾವಿಯಲ್ಲಿ ಇಂಗಳೆಮಾಸ್ತರ್ ಎಂಬುವರು ಹರಿಜನ ಬಾಲಕರಿಗಾಗಿ ನಡೆಸುತ್ತಿದ್ದ ಹಾಸ್ಟೆಲ್ನ ಜವಾಬ್ದಾರಿಯನ್ನು 1921-22ರ ಸುಮಾರಿಗೆ ತಾವು ವಹಿಸಿಕೊಂಡರು. ಮುಂದೆ ಗಾಂಧೀಜಿ ಆರಂಭಿಸಿದ ಹರಿಜನ ಸೇವಕ ಸಂಘದ ಕರ್ನಾಟಕ ಶಾಖೆಗೆ ಅವರು ಅಧ್ಯಕ್ಷರಾಗಿ ಹುಬ್ಬಳಿಯಲ್ಲಿ ಕರ್ನಾಟಕ ಹರಿಜನ ಬಾಲಿಕಾಶ್ರಮವನ್ನು ಆರಂಭಿಸಿದ್ದು ಪ್ರಸಿದ್ಧ ಸಂಗತಿ. ಕಾಕಾ ಕಾರ್ಖಾನೀಸರು ಇಂಥದೇ ಕೆಲಸವನ್ನು ವಿಜಾಪುರದಲ್ಲಿ ಮಾಡಿದರು. ಈ ಕ್ಷೇತ್ರದಲ್ಲಿ ಮಂಗಳೂರಲ್ಲಿ ಕುದ್ಮುಲ್ ರಂಗರಾಯರು ಮಾಡಿದ ಅಮೋಘ ಕಾರ್ಯವನ್ನು ಆಗಲೇ ಉಲ್ಲೇಖಿಸಿದೆ. ಬೆಂಗಳೂರಲ್ಲಿ ಆರ್. ಗೋಪಾಲಸ್ವಾಮಿ ಅಯ್ಯರ್ ಎಂಬವರು ಪಂಚಮರಲ್ಲಿ ಮಾಡಿದ ಕೆಲಸ ಅತ್ಯಪೂರ್ವ. ಮೈಸೂರಲ್ಲಿ ಗೋವಿಂದಾಚಾರ್ಯಸ್ವಾಮಿ, ತಗಡೂರು ರಾಮಚಂದ್ರರಾವ್ ಇವರುಗಳು ಅಸ್ಪೃಶ್ಯತಾ ನಿವಾರಣೆ, ಅಸ್ಪೃಶ್ಯರ ಪುರೋಗಮನಗಳಿಗಾಗಿ ಸ್ಮರಣೀಯ ಕೆಲಸಮಾಡಿದರು. ತಗಡೂರು ಕಣಿಯರೆಂಬ ಜಾತಿಯವರಿಗಾಗಿ ನಡೆಸಿದ ಹೋರಾಟ ಪ್ರಸಿದ್ಧವಾಗಿದೆ. 1924ರಲ್ಲಿ ನಂಜನಗೂಡಿನಲ್ಲಿ ಹರಿಜನರಿಗಾಗಿ ಒಂದು ಹಾಸ್ಟೆಲನ್ನೂ ಅವರು ತೆರೆದರು. ಕಿರುಗುಂದ ಗ್ರಾಮದಲ್ಲಿ ಹರಿಜನರ ಸಾಲ ಮುಕ್ತಿಗಾಗಿ ಅವರು ಚಳವಳಿಯನ್ನು ಸಂಘಟಿಸಿದ್ದರು. ಹೈದರಬಾದ್ ಕರ್ನಾಟಕದಲ್ಲಿ ಆರ್ಯಸಮಾಜವು ಅಸ್ಪೃಶ್ಯರ ಉನ್ನತಿಗಾಗಿ ವಿಶೇಷ ಕೆಲಸ ಮಾಡಿತು. ಮದ್ರಾಸ್ನಲ್ಲಿ ಆರಂಭವಾದ ಜಸ್ಟೀಸ್ ಪಾರ್ಟಿಯಿಂದ ಸ್ಫೂರ್ತಿ ಪಡೆದು ಕರ್ನಾಟಕದಲ್ಲಿ ಪ್ರಜಾಮಿತ್ರ ಮಂಡಲಿ 1917ರಲ್ಲಿ ಆರಂಭವಾಯಿತು. ಎಂ. ಬಸವಯ್ಯ, ಕೆ.ಎಚ್. ರಾಮಯ್ಯ ಮುಂತಾದವರು ಇದರ ನಾಯಕರು. ಬ್ರಾಹ್ಮಣೇತರರಿಗೆ ಸರಕಾರೀ ನೌಕರಿಯಲ್ಲಿ ಹೆಚ್ಚಿನ ಅವಕಾಶ ಇರಬೇಕೆಂದು ಈ ಸಂಸ್ಥೆ ಚಳವಳಿ ಆರಂಭಿಸಿದ್ದರಿಂದ ಮೈಸೂರು ಸರಕಾರವು ಮಿಲರ್ ಸಮಿತಿಯನ್ನು ಈ ಸಮಸ್ಯೆಯ ಪರಿಶೀಲನೆಗಾಗಿ ನೇಮಿಸಿತು (1918). ಮಿಲರ್ ಸಮಿತಿಯು ಹಿಂದುಳಿದ ವರ್ಗಗಳ ಬೇಡಿಕೆಯಲ್ಲಿ ತಥ್ಯಾಂಶವಿದೆಯೆಂದು ಹೇಳಿ ವರದಿ ಮಾಡಿತು. ಸರಕಾರವು ವರದಿಯ ಕಾರ್ಯಾಚರಣೆಗೆ ಕ್ರಮ ಕೈಗೊಂಡಿತು. ಮುಂಬೈ ಕರ್ನಾಟಕದಲ್ಲಿ ಫುಲೆಯವರು ಸತ್ಯಶೋಧಕ ಸಮಾಜ ಆರಂಭಿಸಿದ್ದ ಚಳವಳಿಯಿಂದ ಉಂಟಾದ ವಾತಾವರಣದ ಹಿನ್ನೆಲೆಯಲ್ಲಿ ಬ್ರಾಹ್ಮಣೇತರ ಪರಿಷತ್ ಆರಂಭವಾಯಿತು (1921). ಸರ್ ಸಿದ್ದಪ್ಪ ಕಂಬಳಿ ಈ ಚಳವಳಿಯ ಅಧ್ವರ್ಯುಗಳಲ್ಲಿ ಒಬ್ಬರು. ಸತ್ಯಶೋಧಕ ಸಮಾಜವು 1911ರಲ್ಲಿ ಚಿಕ್ಕೋಡಿಯಲ್ಲಿ ಒಂದು ಸಮ್ಮೇಳನ ನಡೆಸಿತು. ಮುಂದೆ ನಿಪ್ಪಾಣಿಯಲ್ಲೂ ಅದು ಒಂದು ಸಮ್ಮೇಳನವನ್ನು ನಡೆಸಿತು. 1915ರಲ್ಲಿ ಬೆಳಗಾವಿಯಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಸೊಸೈಟಿ ಆರಂಭವಾಯಿತು. 1921ರ ಮೇ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಮುಂಬೈ ರಾಜ್ಯಮಟ್ಟದ ಬ್ರಾಹ್ಮಣೇತರ ಸಮ್ಮೇಳನವು ಕಂಬಳಿ, ಹಳಕಟ್ಟಿ, ಹುಲಕೋಟಿ, ದಳವಿ, ಗುಂಜಾಳ, ಲಠ್ಠೆ ಮುಂತಾದವರ ನೇತೃತ್ವದಲ್ಲಿ ನಡೆಯಿತು. ದೇವಾಸದ ಮಹಾರಾಜರು ಇದರ ಅಧ್ಯಕ್ಷರು (ಭಾವು ಸಾಹೇಬ್ ಪವಾರ್). ಇದೇ ಕಾಲಕ್ಕೆ ಬ್ರಾಹ್ಮಣೇತರರ ಧ್ವನಿಯಾಗಿ 1921ರಲ್ಲಿ ರಾಷ್ಟ್ರವೀರ ಮರಾಠಿ ಪತ್ರಿಕೆ ಬೆಳಗಾವಿಯಲ್ಲಿ ಆರಂಭವಾಯಿತು. (ಹಳೆಯ ಮೈಸೂರಲ್ಲಿ ಮೈಸೂರ್ ಸ್ಟಾರ್ ಈ ಕೆಲಸ ಮಾಡುತ್ತಿತ್ತು). ಇದೇ ಕಾಲಕ್ಕೆ ಬಿ.ವಿ. ಜಾಧವರ ಅಧ್ಯಕ್ಷತೆಯಲ್ಲಿ ಸತ್ಯಶೋಧಕ ಸಮಾಜದ ಸಮ್ಮೇಳನವೂ ಬೆಳಗಾವಿಯಲ್ಲಿ ಆಯಿತು. ಮುಂದೆ ಜಿಲ್ಲಾಮಟ್ಟದಲ್ಲಿ ಗೋಕಾಕ್ (1922), ಅಖಿಲ ಭಾರತ ಮಟ್ಟದಲ್ಲಿ ಬೆಳಗಾವಿ (1924; ಲಕ್ಷ್ಮಣಸ್ವಾಮಿ ಮುದಲಿಯಾರ್ ಅಧ್ಯಕ್ಷರು)ಯಲ್ಲಿ ಇಂಥ ಸಮ್ಮೇಳನಗಳು ನಡೆದವು. ಮುಂಬೈ ರಾಜ್ಯದ ಬಹಿಷ್ಕೃತ ಸಮಾಜದ ಮೂರನೆಯ ಸಮ್ಮೇಳನವು 1925ರಲ್ಲಿ ಡಾ|| ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಳಗಾವಿಯಲ್ಲಿ ಬಳವಂತ ವರಾಳೆ ಅವರು ಅಸ್ಪೃಶ್ಯರಿಗಾಗಿ ಒಂದು ಹಾಸ್ಟೆಲ್ ಆ ವರ್ಷ ತೆರೆದರು. ಮುಂದೆ 1930ರ ಮೇ ತಿಂಗಳಿನಲ್ಲಿ ಕರ್ನಾಟಕ ಪ್ರಾಂತ ಬ್ರಾಹ್ಮಣೇತರ ಸಮ್ಮೇಳನ ಬೆಳಗಾವಿಯಲ್ಲಿ ನಡೆಯಿತು. ವೀರಣ್ಣಗೌಡ ಪಾಟೀಲರು ಸ್ವಾಗತಾಧ್ಯಕ್ಷರೂ ಹೊಸಮನಿ ಸಿದ್ದಪ್ಪನವರು ಅಧ್ಯಕ್ಷರೂ ಆಗಿ ಜರುಗಿದ ಈ ಸಮ್ಮೇಳನವು ಚಳವಳಿಯ ದಿಕ್ಕನ್ನು ಬದಲಾಯಿಸಿತು. ಅಂದಿನವರೆಗೆ ಬ್ರಾಹ್ಮಣೇತರ ಹಿಂದುಳಿದವರ ಪ್ರಗತಿಗೆ ಸರಕಾರವನ್ನು ಬೆಂಬಲಿಸಬೇಕು, ಕಾಂಗ್ರೆಸ್ಸನ್ನು ವಿರೋಧಿಸಬೇಕು, ಎನ್ನುತ್ತಿದ್ದ ಈ ಸಂಸ್ಥೆ ಇನ್ನು ಮುಂದೆ ಕಾಂಗ್ರೆಸ್ಸನ್ನು ಬೆಂಬಲಿಸಿ ಅದರ ವಿದೇಶೀ ಬಹಿಷ್ಕಾರದ ಚಳವಳಿಗೆ ಬೆಂಬಲ ನೀಡಬೇಕೆಂದು ನಿರ್ಣಯಿಸಿತು. ಅಂದಿನಿಂದ ಹಿಂದುಳಿದವರ ಪ್ರಗತಿಯ ಚಳವಳಿಯು ರಾಷ್ಟ್ರೀಯ ಚಳವಳಿಯ ಭಾಗವಾಗಿ ಹೋಯಿತು. ಮದ್ರಾಸಿನಲ್ಲಿ ನಡೆದ ಹೋಂರೂಲ್ ಲೀಗ್ ಚಳವಳಿಯನ್ನು ವಿರೋಧಿಸಿ ಆರಂಭವಾಗಿದ್ದ ಜಸ್ಟಿಸ್ ಪಾರ್ಟಿಯಿಂದ ಸ್ಫೂರ್ತಿ ಪಡೆದು ಮೈಸೂರಿನಲ್ಲಿ ಶುರುವಾಗಿದ್ದ ಪ್ರಜಾಮಿತ್ರಮಂಡಲಿ ಹಿಂದುಳಿದವರ ಪುರೋಗಮನಕ್ಕೆ ದುಡಿಯಿತಾದರೂ ಕಾಂಗ್ರೆಸ್ ಮುಂದಿಟ್ಟ ಜವಾಬ್ದಾರಿ ಸರಕಾರ ಚಳವಳಿಯನ್ನು ಬೆಂಬಲಿಸದೆ ವಿರೋಧಿಸಿತ್ತು. ಕಾಂಗ್ರೆಸ್ ಬ್ರಾಹ್ಮಣರು ಮೇಲ್ಗೈ ಪಡೆದ ಸಂಸ್ಥೆಯೆಂದು ನಂಬಿದ್ದ ಹಲವು ಬ್ರಾಹ್ಮಣೇತರ ನಾಯಕರು (ಕೆ.ಸಿ. ರೆಡ್ಡಿ, ವಿ. ವೆಂಕಟಪ್ಪ, ಬಿ.ಎನ್. ಗುಪ್ತ) ಜವಾಬ್ದಾರಿ ಸರಕಾರವನ್ನು ಬೆಂಬಲಿಸಲು 1930ರಲ್ಲಿ ಮೈಸೂರಲ್ಲಿ ಪ್ರಜಾಪಕ್ಷವನ್ನು ಆರಂಭಿಸಿದರು (ಪ್ರಜಾಮತ ಈ ಪಕ್ಷದ ಮುಖವಾಣಿ). 1934ರಲ್ಲಿ ಪ್ರಜಾಪಕ್ಷ ಮತ್ತು ಪ್ರಜಾಮಿತ್ರ ಮಂಡಲಿಗಳು ಒಂದಾಗಿ ಪ್ರಜಾ ಸಂಯುಕ್ತ ಪಕ್ಷವನ್ನು ರಚಿಸಿಕೊಂಡರು. 1937ರಲ್ಲಿ ಪ್ರಜಾ ಸಂಯುಕ್ತ ಪಕ್ಷ ಮೈಸೂರಲ್ಲಿ ಕಾಂಗ್ರೆಸ್ಸಿನ ಜೊತೆ ವಿಲೀನವಾಯಿತು. ಆಗಿನಿಂದ ಹಿಂದುಳಿದವರ ಚಳವಳಿ ಕಾಂಗ್ರೆಸ್ಸಿನ ಭಾಗವಾಯಿತು. 1931ರಲ್ಲಿ ಅಖಿಲ ಭಾರತ ಬಹಿಷ್ಕೃತ ವಿದ್ಯಾರ್ಥಿ ಪರಿಷತ್ ನಿಪ್ಪಾಣಿಯಲ್ಲಿ ಸಭೆ ಸೇರಿತು. ಪಾಪಣ್ಣ ಜಾಲೇಯ ಅದರ ಅಧ್ಯಕ್ಷರು. 1932 ಪುಣೆ ಒಪ್ಪಂದದ ನಂತರ ಕಾಂಗ್ರೆಸ್ ಅಸ್ಪೃಶ್ಯ ಸಮಸ್ಯೆಯ ಕಡೆ ಇನ್ನಷ್ಟು ತೀವ್ರವಾಗಿ ಗಮನಕೊಡಲು ನಿರ್ಣಯಿಸಿದ್ದು ಸರ್ವವಿದಿತ. ಗಾಂಧೀಜಿ ಹರಿಜನ ಸೇವಕ ಸಂಘವನ್ನು ಆಗ ಆರಂಭಿಸಿದರು. ತಮ್ಮ ಮುಖವಾಣಿ ಇಂಗ್ಲಿಷ್ ಪತ್ರಿಕೆಗೆ ಹರಿಜನ ಎಂದೇ ಹೆಸರಿಟ್ಟರು. ಅಸ್ಪೃಶ್ಯರು ಕಾಂಗ್ರೆಸ್ಸನ್ನು ಬೆಂಬಲಿಸಿದರು. ಅಸ್ಪೃಶ್ಯತಾ ನಿವಾರಣೆ ಕಾಂಗ್ರೆಸ್ಸಿನ ರಾಷ್ಟ್ರೀಯ ಚಳವಳಿಯ ಒಂದು ಭಾಗವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ಧಾರ್ಮಿಕ ಚಳವಳಿಗಳು, ವಿಚಾರವೇತ್ತರು, ಸಾಮಾಜಿಕ ಹಾಗೂ ರಾಜಕೀಯ ಚಳವಳಿಗಳು ಕೈಗೊಂಡ ಕ್ರಮಗಳಿಂದ ಮಹಿಳೆಯರ, ಹಿಂದುಳಿದವರ ಮತ್ತು ಅಸ್ಪೃಶ್ಯರ ಸಮಸ್ಯೆಗಳ ಅರಿವು ಈಗ ಸಾರ್ವತ್ರಿಕವಾಗಿದೆ. ಆದರೆ ಈ ಸಮಸ್ಯೆಗಳು ಪೂರ್ತಿ ಬಗೆಹರಿದಿಲ್ಲ. ಅವುಗಳ ಕುರಿತು ಜನ ಜಾಗೃತಿಯೇ ಪರಿಹಾರದ ಹಾದಿಯಲ್ಲಿ ಇಟ್ಟ ಮುಖ್ಯ ಹೆಜ್ಜೆಯೆಂದು ಗಮನಿಸಬೇಕು. ನೊಂದವರಿಗೆ ತಮ್ಮ ಸಮಸ್ಯೆಯ ಅರಿವಾಗಿ ಅದರ ಪರಿಹಾರಕ್ಕಾಗಿ ದುಡಿಯಬೇಕೆಂಬ ಅರಿವು, ಇತರರಿಗೂ ಈ ಸಮಸ್ಯೆಗಳ ತೀವ್ರತೆಯ ಅರಿವು ಆದುದು ಸಣ್ಣ ಸಾಧನೆಯಲ್ಲ. ಮಹಿಳೆ ದ್ವಿತೀಯ ವರ್ಗದ ನಾಗರಿಕಳಲ್ಲ, ಅವಳು ಸ್ವಾವಲಂಬಿಯಾಗಿ ಪುರುಷನಿಗೆ ಸಮಾನಳಾಗಿ ಬಾಳಲು ಅವಕಾಶ ಸಿಗಬೇಕು ಎಂಬ ಅರಿವು ಮಹಿಳೆಯರಲ್ಲೂ ಇತರರಲ್ಲೂ ಮೂಡಿದ್ದು ಒಂದು ಗಣ್ಯ ಸಾಧನೆ. ಆದರೆ ಇಂಥ ತಿಳಿವಳಿಕೆ ಸಾರ್ವತ್ರಿಕವಾಗಿಲ್ಲ, ಹಾಗೂ ದಲಿತರು, ಮಹಿಳೆಯರು ಇನ್ನೂ ಬಹುಮಟ್ಟಿಗೆ ಮನೋದಾಸ್ಯದಲ್ಲಿ ಇದ್ದಾರೆ, ಹಾಗೂ ಸಮಾಜದ ಬಹುಪಾಲು ಜನ ಅದೇ ಹಿಂದಣ ಕಂದಾಚಾರದ ಭಾವನೆಗಳಿಗೆ ಅಂಟಿಕೊಂಡು ಇದ್ದಾರೆ, ಎಂಬುದು ಮರೆಯಲಾಗದ ಸಂಗತಿ. 1904ರಲ್ಲಿ ಆರಂಭವಾದ ವೀರಶೈವ ಮಹಾಸಭಾ, 1906ರಲ್ಲಿ ಹಳೇ ಮೈಸೂರಲ್ಲಿ ಮೂಡಿದ ಒಕ್ಕಲಿಗರ ಸಂಘ, ಅದೇ ರೀತಿ ಕುರುಬರ ಸಂಘ ಮುಂತಾದ ಹಿಂದುಳಿದ ಜಾತಿಗಳ ಸಂಘಟನೆಗಳು, ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ಮರಾಠಾ ಶಿಕ್ಷಣ ಸಮಾಜ (1915). ಕೆ.ಎಲ್.ಇ. ಸೊಸೈಟಿ (1917) ಇವೆಲ್ಲವೂ ಗಮನಿಸಬೇಕಾದ ಚಟುವಟಿಕೆಗಳು. ಡಾ|| ಸೂರ್ಯನಾಥ ಕಾಮತ್ 798, 11ನೆಯ ಮುಖ್ಯರಸ್ತೆ, ಕಣಗಾಲ್ ಪುಟ್ಟಣ್ಣ ರಸ್ತೆ, ಹನುಮಂತನಗರ, ಬೆಂಗಳೂರು
1 Comment
S P HARAN
3/17/2021 08:40:47 pm
Sir, Can you please provide more information if any about Sri venkatavarada iyengar.
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |