ಪ್ರೊ|| ಡಾ. ಎಚ್. ಎಂ. ಮರುಳಸಿದ್ಧಯ್ಯನವರಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದರ ಮೂಲಕ ಸಮಾಜಕಾ7/6/2017 ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಮಾನ್ಯರೆ, ನಮಸ್ಕಾರ. ವಿಷಯ: ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಮತ್ತು ಪ್ರಯೋಗಗಳನ್ನು ಆರಂಭಿಸಿದ ಪ್ರೊ|| ಡಾ. ಎಚ್. ಎಂ.ಮರುಳಸಿದ್ಧಯ್ಯನವರಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದರ ಮೂಲಕ ಸಮಾಜಕಾರ್ಯ ಕ್ಷೇತ್ರಕ್ಕೆ ಮನ್ನಣೆನೀಡಬೇಕೆಂದು ಕೋರಿಕೆ 'ವೃತ್ತಿಶೀಲ ಸಮಾಜಕಾರ್ಯ' ಕ್ಷೇತ್ರಕ್ಕೆ ಭಾರತೀಯ ಸಂಸ್ಕೃತಿಯ ಭಾಷ್ಯ ಬರೆದು, ಅದಕ್ಕೆ ಸಮರ್ಥವಾದ ಕ್ಷೇತ್ರಕಾರ್ಯ, ಚಿಂತನೆ, ಸಾಹಿತ್ಯ ಸೃಷ್ಟಿ ಮಾಡಿ ದೇಶದಾದ್ಯಂತ 'ಹುಲ್ಲುಬೇರುಗಳ ನಡುವೆ' ಸಮುದಾಯ ಸಂಘಟನೆಗಾಗಿ ಮತ್ತು ಸಮಾಜಕಾರ್ಯ ತತ್ತ್ವದ ಉನ್ನತಿಗಾಗಿ ಸಾಧಕರನ್ನು ಸೃಷ್ಟಿ ಮಾಡಿದ ಧೀಮಂತರು ಪ್ರೊ. ಎಚ್. ಎಂ. ಮರುಳಸಿದ್ಧಯ್ಯನವರು. ಬಳ್ಳಾರಿಯ ಕೂಡ್ಲಿಗಿ ತಾಲೂಕು, ಹಿರೇಕುಂಬಳಗುಂಟೆ ಹಳ್ಳಿಯಲ್ಲಿ ಜನಿಸಿ (29.7.1931), ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜಕಾರ್ಯ ಶಿಕ್ಷಣ ಕೈಂಕರ್ಯದೊಂದಿಗೇ, ಪ್ರಚಲಿತ ಸಿದ್ಧಾಂತಗಳನ್ನು ಸಂಶೋಧನೆ ಮತ್ತು ಕ್ಷೇತ್ರಕಾರ್ಯದ ಮೂಲಕ ಪುಟಕ್ಕಿಟ್ಟು, ಪ್ರಶ್ನಿಸಿ, ಹೊಸ ಸಿದ್ಧಾಂತಗಳ ಆಯಾಮಗಳನ್ನು ಸೃಷ್ಟಿಸಿ, ಭಾರತೀಯ ಸಂಸ್ಕೃತಿ ಜನಜೀವನಕ್ಕೆ ಹತ್ತಿರವಾದ ವಚನ, ಜನಪದ, ಪುರಾಣಗಳೊಡನೆ ಪ್ರಚಲಿತ ವಿಚಾರಗಳನ್ನು ಉದ್ಧರಿಸಿ, ಈ ನೆಲದ ಸೊಗಡಿನ ಸೃಜನಶೀಲ ಸಾಹಿತ್ಯ ಕೃಷಿ ಮಾಡುತ್ತಿರುವ, ಸಮಾಜಕಾರ್ಯದ ಹಕ್ಕು ಮತ್ತು ಸ್ಥಾನಮಾನಕ್ಕಾಗಿ ಕಾರ್ಯಕರ್ತರನ್ನು ಸಂಘಟಿಸಿ ಹೋರಾಡುತ್ತಿರುವ ಜಾಗತಿಕ ಮಟ್ಟದ ಸಾಕ್ಷೀಪ್ರಜ್ಞೆ ಪ್ರೊ.ಎಚ್.ಎಂ.ಎಂ. ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ವಿವಿಧ ಸಮುದಾಯಗಳಲ್ಲಿ ಕ್ಷೇತ್ರ ಕಾರ್ಯದ ಮೂಲಕ ಸಶಕ್ತತೆ ಮೂಡಿಸಿ ಭರವಸೆಯ ಬೆಳಕನ್ನು ಬೆಳಗಿಸುವುದರಲ್ಲಿ ಸತತವಾಗಿ ನಿರತರಾಗಿ, ಇಂತಹ ಎಲ್ಲ ಪ್ರಕ್ರಿಯೆಗಳ ದಾಖಲಾತಿಯ ಪ್ರಾಮುಖ್ಯತೆಯನ್ನು ಮನಗಂಡು, ತಮ್ಮ ನಲವತ್ತಕ್ಕೂ ಹೆಚ್ಚಿನ ಕೃತಿಗಳಲ್ಲಿ ಸಮಾಜಕಾರ್ಯ ವೃತ್ತಿಶೀಲರಿಗೆ ಪ್ರೊ.ಎಚ್.ಎಂ.ಎಂ., ದಾರಿದೀವಿಗೆಗಳನ್ನು ಹಚ್ಚಿಟ್ಟಿದ್ದಾರೆ. ತಮ್ಮ ವಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ತಮ್ಮ ನಡೆನುಡಿಗಳ ಮೂಲಕ ಎಲ್ಲರಲ್ಲು ವಿಶ್ವಾಸಾರ್ಹತೆಯನ್ನು ಬೆಳಗಿಸುವ ಸಹನಾಶೀಲ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು, ಎಂದಿಗೂ ಯಾರ ನಡುವೆಯೂ ತಾರತಮ್ಯ ತಾರದೆ, ತಮ್ಮ ಹಿತಾಸಕ್ತಿಗಳನ್ನು ಮುಂದಿಡದೆ ಸಮಾಜಕಾರ್ಯದ ಉನ್ನತಿಗಾಗಿ ವೃತ್ತಿ ಮತ್ತು ವಯಕ್ತಿಕ ಬದುಕಿನಲ್ಲಿ ಹಲವಾರು ತ್ಯಾಗಗಳನ್ನು ಮಾಡಿದ ಅವತಾರಪುರುಷ. ಬಡಜನ ಸಮುದಾಯಗಳ ಏಳ್ಗೆಗಾಗಿ 'ಗ್ರಾಮೋನ್ನತಿ'ಯೊಂದಿಗೆ ನಗರಗಳನ್ನೂ ಒಳಗೊಂಡಂತಹ, 'ಪಂಚಮುಖಿ ಅಭ್ಯುದಯ ಮಾರ್ಗ'ದ ಮೂಲಕ ಅಭಿವೃದ್ಧಿಯನ್ನು ಸಮದೃಷ್ಟಿಕೋನದಿಂದ ಕಂಡು, ಶಿಕ್ಷಣ, ಆರೋಗ್ಯ, ಸಮತೆ, ಸಮಾನತೆ, ಅರಿವು, ಜಾಗೃತಿ ಬೆಳೆಸಿ ಮಕ್ಕಳು, ಮಹಿಳೆಯರು, ಅಂಗಊನಶಕ್ತರು, ವೃದ್ಧರು, ಹಿಂದುಳಿದ ಸಮುದಾಯಗಳು ಎಲ್ಲರೂ ಅಭಿವೃದ್ಧಿಯ ಪಥದಲ್ಲಿ ಬೆಳಗುವಂತಹ 'ನಿರ್ಮಲ ಕರ್ನಾಟಕ'ದ ಮಹದಭಿಲಾಷೆ ಹೊಂದಿರುವ 'ಸಮಾಜಕಾರ್ಯದ ಕಣಸುಗಾರ' ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು. ತನಗಾಗಿ ಬದುಕುವುದಕ್ಕಿಂತಲೂ ಸಮಾಜಕಾರ್ಯ, ಸಮಾಜೋದ್ಧಾರಕ್ಕಾಗಿ ಬಾಳುತ್ತಿರುವ ಪ್ರೊ.ಎಚ್.ಎಂ.ಎಂ. ನಮ್ಮೆದುರಿರುವ ಉನ್ನತಮಟ್ಟದ ಸಂಕೇತವಾಗಿದ್ದಾರೆ. ಇಂತಹ ಹಿರಿಯರಾದ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರಿಗೆ (ಈಗ ಅವರಿಗೆ 86ರ ಹರಯ) ಕರ್ನಾಟಕ ಸರ್ಕಾರವು 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಸಮಾಜಕಾರ್ಯ ಕ್ಷೇತ್ರಕ್ಕೆ ಹಿರಿಯ ಮನ್ನಣೆಯನ್ನು ನೀಡಬೇಕೆಂದು ಅವರ ವಿದ್ಯಾರ್ಥಿಗಳು ಮತ್ತು ಹಿತೈಶಿಗಳ ಪರವಾಗಿ ಕೋರುತ್ತಿದ್ದೇವೆ. ಡಾ. ಮರುಳಸಿದ್ಧಯ್ಯನವರನ್ನು ಕುರಿತು ಪರಿಚಯ ಲೇಖನ ಮತ್ತು ಅವರ ಸಾಧನೆಗಳನ್ನು ಪರಿಚಯಿಸುವ ಪುಸ್ತಕವನ್ನು ಈ ಪತ್ರದೊದಿಗೆ ಲಗತ್ತಿಸಿದ್ದೇವೆ. ತಮ್ಮ ವಿಶ್ವಾಸಿಗಳು ಪ್ರೊ.ಎಚ್.ಎಂ.ಎಂ. ಅವರ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣದ ರೂವಾರಿ ಪ್ರೊ|| ಡಾ.ಎಚ್.ಎಂ. ಮರುಳಸಿದ್ಧಯ್ಯ (ಜನನ 1931, ಹಿರೇಕುಂಬಳಗುಂಟೆ, ಕೂಡ್ಲಿಗಿ ತಾಲೂಕು, ಬಳ್ಳಾರಿ) 'ಸಮಾಜಕಾರ್ಯ' ಎಂಬ ಪದವನ್ನು ಟಂಕಿಸಿ ಭಾರತದಲ್ಲಿ ಸಮಾಜಕಾರ್ಯ ಕ್ಷೇತ್ರಕಾರ್ಯ ಮತ್ತು ಅಧ್ಯಯನಕ್ಕೆ ಹೊಸ ತಿರುವು ನೀಡಿದ ಅಪ್ಪಟ ಕನ್ನಡಿಗ ಪ್ರೊ. ಎಚ್. ಎಂ. ಮರುಳಸಿದ್ಧಯ್ಯನವರು ಸಮಾಜಕಾರ್ಯ ಮತ್ತು ಸಮಾಜಶಾಸ್ತ್ರ ಈ ಎರಡರಲ್ಲೂ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಮೈಸೂರು, ದಿಲ್ಲಿ ಮತ್ತು ವಾರಣಾಸಿಗಳಲ್ಲಿ ಪಡೆದಿದ್ದಾರೆ. ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ವಲಯಗಳೆರಡರಲ್ಲೂ ಆಸಕ್ತಿ ಉಳ್ಳವರಾಗಿದ್ದರೂ ಇವರ ಆದ್ಯ ಆಸಕ್ತಿಯು ಸಮಾಜಕಾರ್ಯ.
ಸಮಾಜಶಾಸ್ತ್ರದಲ್ಲಿ ಕೆಲವು ಕಾಲ ಅಧ್ಯಾಪನ ಮಾಡಿದ್ದರೂ ತಮ್ಮ ಅಧ್ಯಾಪನ, ಸಮಾಜಕಾರ್ಯ ಕ್ಷೇತ್ರಕಾರ್ಯ ಮತ್ತು ಸಮಾಜಕಾರ್ಯ ಸಾಹಿತ್ಯ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಎಚ್.ಎಂ.ಎಂ. ಅವರ ಸಂಶೋಧನೆ, ಪ್ರಯೋಗ ಮತ್ತು ಬರಹ ಸಮಾಜಕಾರ್ಯ ಮತ್ತು ಸಮಾಜಶಾಸ್ತ್ರ, ಈ ಎರಡೂ ವಲಯಗಳಿಗೆ ಸೇರಿವೆ. ಕರ್ನಾಟಕದ ಗುಲಬರ್ಗಾ ನಗರದ ಎಸ್.ಬಿ.ಕಾಲೇಜಿನಲ್ಲಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ ವಿಭಾಗದಲ್ಲೂ, ಅದೇ ನಗರದ ಕರ್ನಾಟಕ ಕಾಲೇಜಿನಲ್ಲೂ ಸಮಾಜಶಾಸ್ತ್ರದಲ್ಲಿ ಉಪನ್ಯಾಸಕರಾಗಿದ್ದುದನ್ನು ಹೊರತುಪಡಿಸಿದರೆ, ತಮಿಳುನಾಡಿನ ಕೊಯಮ್ಮತ್ತೂರಿನ ಪಿ.ಎಸ್.ಜಿ. ಸ್ಕೂಲ್ ಆಫ್ ಸೋಸಿಯಲ್‍ವರ್ಕ್ (ಸ್ನಾತಕೋತ್ತರ) ವಿಭಾಗದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಅಧ್ಯಾಪನದಲ್ಲಿ ತೊಡಗಿದ್ದರು. ಇವರು ಅಧ್ಯಾಪನ ವೃತ್ತಿಯನ್ನು 1958ರಲ್ಲಿ ಆರಂಭಿಸಿ 1992ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರವೂ ಎರಡು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಇಂಗ್ಲಿಷ್ನಲ್ಲಿದ್ದ ಭಾರತ ಸಮಾಜಕಾರ್ಯ ವಿಶ್ವಕೋಶವನ್ನು ಕನ್ನಡೀಕರಿಸಿ, ಪ್ರಕಟಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇವರು ಪ್ರಶಿಕ್ಷಕರಾಗಿದ್ದುದಲ್ಲದೆ, ಸಂಶೋಧಕರಾಗಿ, ಪ್ರಶಿಕ್ಷಣಾರ್ಥಿಗಳಿಗೆ ಮತ್ತು ಸಂಶೋಧನೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಬರಹಗಾರರಾಗಿ, ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ; ಈಗಲೂ ಕೆಲವು ಆಸಕ್ತ ವಲಯಗಳಲ್ಲಿ ಕಾರ್ಯ ನಿರತರಾಗಿದ್ದಾರೆ. ಅಂತಾಶಿಸ್ತೀಯ ಮಾರ್ಗದೃಷ್ಟಿ (Inter-disciplinary Approach) ಉಳ್ಳ ಇವರು ಸಮಾಜಕಾರ್ಯದಲ್ಲಿ ಸಮಾಜವಿಜ್ಞಾನ (ಪ್ರಮುಖವಾಗಿ ಸಮಾಜಶಾಸ್ತ್ರ) ಮತ್ತು ಸೃಜನಾತ್ಮಕ ಸಾಹಿತ್ಯ, ಇವುಗಳನ್ನು ತಮ್ಮ ಬೋಧನೆಯಲ್ಲಿ, ಪ್ರಯೋಗಗಳಲ್ಲಿ, ಸಂಶೋಧನೆಗಳಲ್ಲಿ ಮತ್ತು ಬರೆಹಗಳಲ್ಲಿ ಬಳಸಿಕೊಂಡಿದ್ದಾರೆ, ಬಳಸಿಕೊಳ್ಳುತ್ತಿದ್ದಾರೆ. ಇವರದ್ದು ವ್ಯಾಪಕ ದೃಷ್ಟಿ (Holistic Approach) ಆದುದರಿಂದ ಇದು ಇವರಿಗೆ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಕರ್ನಾಟಕದಲ್ಲಿ ಸಮಾಜಕಾರ್ಯವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಒಂದು ಅಧ್ಯಯನದ ವಿಷಯವನ್ನಾಗಿ (ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1962ರಲ್ಲಿ) ಆರಂಭಿಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದರು. (ಆದರೆ, ಕರ್ನಾಟಕದಲ್ಲಿ ಸಮಾಜವಿಜ್ಞಾನದ ಅಕಾದಮೆಯನ್ನು ಸರಕಾರವು ಆರಂಭಿಸಬೇಕು ಎಂದು ಇತರ ಕೆಲವರೊಡನೆ ಸೇರಿ ಪ್ರಯತ್ನಿಸಿದರೂ ಇದುವರೆಗೂ ಫಲಿಸಲಿಲ್ಲ). ಪ್ರೋ|| ಎಚ್.ಎಂ.ಎಂ. ಅವರು ಪ್ರಯೋಗಶೀಲರಾಗಿ ಅನುಷ್ಠಾನಸಾಧ್ಯವಾದ ಯೋಜನೆಗಳನ್ನು ರೂಪಿಸಿದರು. ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸುಮಾರು 40 ಕೃತಿಗಳನ್ನು (ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ) ಹೊರತಂದಿದ್ದಾರೆ. ಸಮಾಜಕಾರ್ಯ ಸಾಹಿತ್ಯವನ್ನು ಮೊದಲಬಾರಿಗೆ ಕನ್ನಡದಲ್ಲಿ ಪ್ರಕಟಿಸಿದ ವಿಜ್ಞಾನಿಯಾಗಿದ್ದಾರೆ (ಇವರ ರಚನೆಯ ಸಮಾಜಕಾರ್ಯ ಸಾಹಿತ್ಯವು ಎರಡು ಬೃಹತ್ ಸಂಪುಟಗಳಲ್ಲಿ 2008ರಲ್ಲಿ ಪ್ರಕಟಗೊಂಡಿತು). ಸೃಜನಶೀಲ ಸಾಹಿತ್ಯವನ್ನು ಸೃಜಿಸಿದ ಇವರು (ಕಾದಂಬರಿ, ಕವನ, ಜೀವನ ಚರಿತ್ರೆ) ಸ್ವತಂತ್ರ ಕೃತಿಗಳನ್ನಲ್ಲದೆ ಅನುವಾದಗಳನ್ನೂ, ಗ್ರಂಥಸಂಪಾದನೆಯನ್ನೂ ಮಾಡಿದ್ದಾರೆ. ಸಮಾಜಕಾರ್ಯ ಪ್ರಶಿಕ್ಷಕರನ್ನೂ, ಸಮಾಜಕಾರ್ಯಕರ್ತರನ್ನೂ ಸಂಘಟಿಸುವಲ್ಲಿ, ಸಂಘಟನೆಗಳನ್ನು ಸ್ಥಾಪಿಸುವಲ್ಲಿ ಬಹು ಕಾಲದಿಂದಲೂ ನಿರತರಾಗಿದ್ದಾರೆ. ಸಮಾಜಕಲ್ಯಾಣ ಮತ್ತು ಸಾಮಾಜಿಕ ಅಭ್ಯುದಯದಲ್ಲಿ ತುಂಬಿದ ಆಸಕ್ತಿಯುಳ್ಳ ಇವರು ಪಂಚಾಯತಿರಾಜ್ಯವು ಪಕ್ಷ ರಾಜಕೀಯದಿಂದ ವಿದೂರವಾಗಿ ಬಲಿಷ್ಠಗೊಳ್ಳುವುದರಿಂದಲೇ ಗ್ರಾಮಾಭ್ಯುದಯವಾಗುವುದು, ಗ್ರಾಮಾಭ್ಯುದಯವಾಗದೆ ರಾಷ್ಟ್ರಾಭ್ಯುದಯವಾಗದು ಎಂಬುದು ಇವರ ದೃಢ ನಿಲುವು. ಇವರು ತಮ್ಮ ಚಿಂತನೆಯಲ್ಲಿ ದಾರ್ಶನಿಕರಾದ ಬುದ್ಧ-ಬಸವ-ಗಾಂಧೀ-ಜೆ.ಪಿ. ಈ.ಎಫ್.ಶೂಮಾಕರ್ ಇವರಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಡಾ. ಮರುಳಸಿದ್ಧಯ್ಯನವರ (ಸಂಕ್ಷಿಪ್ತವಾಗಿ) ಜೀವನ ಪರಿಚಯ ಕರ್ನಾಟಕದ ತೀರಾ ಹಿಂದುಳಿದ ಬಳ್ಳಾರಿ ಜಿಲ್ಲೆಯ ತುಂಬಾ ಹಿಂದುಳಿದ ಕೂಡ್ಲಿಗಿ ತಾಲ್ಲೂಕಿನ ಒಂದು ಬಡ ಹಳ್ಳಿ ಹಿರೇಕುಂಬಳಗುಂಟೆಯಲ್ಲಿ ರೈತ ದಂಪತಿ-ಎಂ.ದೊಡ್ಡಬಸಯ್ಯ = ದೊಡ್ಡಬಸಮ್ಮ ಇವರ ಕೊನೆಯ ಮಗನಾಗಿ (ಆರು ಅಣ್ಣಂದಿರು, ಮೂವರು ಅಕ್ಕಂದಿರು) 1931 ಜೂಲೈ 29ರಂದು ಜನಿಸಿದರು. ಇವರ ದೈಹಿಕ ಆರೋಗ್ಯ ಸಾಧಾರಣ. ಬಳಗದವರಿಂದ, ಆಡಳಿತ ವರ್ಗದಿಂದ, ಸಹೋದ್ಯೋಗಿಗಳಿಂದ ಇವರಿಗೆ ನೆರವು ದೊರೆತಂತೆ ಮಾನಸಿಕ ಹಿಂಸೆಯೂ ದೊರಕಿತು. ಇದರಿಂದಲೂ ಇವರ ಆರೋಗ್ಯದ ಮೇಲೆ ಪರಿಣಾಮ ಆದದ್ದೂ ಉಂಟು. ಹಲವು ಕಾಲ ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಇವರು ತಮ್ಮ ಎಪ್ಪತ್ತನೆಯ ವಯಸ್ಸಿನಿಂದ ಬೆನ್ನುಹುರಿ ಮತ್ತು ಕಟಿಯ ದೋಷದಿಂದ ಬಳಲುತ್ತಿದ್ದಾರೆ. ಸಮಾಜಶಾಸ್ತ್ರದ ಎಂ.ಎ. ಪದವಿ ಪಡೆಯುವವರೆಗೂ ಹೆಚ್ಚೂ ಕಡಮೆ ಅಂತರ್ಮುಖಿ (Introvert) ಆಗಿಯೇ ಇದ್ದ ಇವರು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಪ್ರಶಿಕ್ಷಣ ಪಡೆದ ನಂತರ ತುಂಬಾ ಪರಿವರ್ತನೆಗೊಂಡು ಬಹಿರ್ಮುಖಿ (Extrovert) ಆದರೆಂದು ತಿಳಿದುಬರುತ್ತದೆ. ಜೊತೆಗೆ, ಮೊದಲು ನೇತ್ಯಾತ್ಮಕ (Negative) ದೃಷ್ಟಿಯುಳ್ಳ ಇವರು ಇತ್ಯಾತ್ಮಕ (Positive) ದೃಷ್ಟಿಯನ್ನು ಅಳವಡಿಸಿಕೊಂಡರು. ಇವರ ಪ್ರಾಥಮಿಕ ವಿದ್ಯಾಭ್ಯಾಸವು ತಮ್ಮ ಹುಟ್ಟಿದೂರಿನಲ್ಲಿಯೂ ಹತ್ತಿರದ ಧರ್ಮಕ್ಷೇತ್ರ ಕಾನಾಮಡುವಿನಲ್ಲೂ, ಪ್ರೌಢಶಾಲಾ ಅಧ್ಯಯನವು ತಮ್ಮ ತಾಲ್ಲೂಕಿಗೆ ಸೇರಿದ ಇನ್ನೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲೂ, ಕಾಲೇಜಿನ ಶಿಕ್ಷಣವು ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲೂ, ಮಹಾರಾಜಾ ಕಾಲೇಜಿನಲ್ಲೂ, ದಿಲ್ಲಿ ವಿಶ್ವವಿದ್ಯಾಲಯಕ್ಕೆ ಸಂಲಗ್ನಗೊಡಿದ್ದ ದಿಲ್ಲಿ ಸ್ಕೂಲ್ ಆಫ್ ಸೋಸಿಯಲ್ ವರ್ಕ್‍ನಲ್ಲೂ, ವಾರಣಾಸಿಯ ಮಾಹಾತ್ಮಾ ಗಾಂಧೀ ಕಾಶಿ ವಿದ್ಯಾಪೀಠ (ವಿಶ್ವವಿದ್ಯಾಲಯ)ದಲ್ಲೂ ನಡೆಯಿತು. ಮೈಸೂರಿನ ಪ್ರಬುದ್ಧ ಪ್ರಾಧ್ಯಾಪಕರಾಗಿದ್ದ ಡಾ.ಟಿ.ಎ.ಪುರುಷೋತ್ತಮ, ಪ್ರೊ.ಎಂ.ಮಾಮುನಾಚಾರ್ಯ, ಡಾ.ಎಂ.ಎನ್.ಕೃಷ್ಣರಾವ್, ಎನ್.ಎ.ನಿಕ್ಕಂ, ಮುಂತಾದವರ ಮಾರ್ಗದರ್ಶನವು ಇವರಿಗೆ ದೊರೆಕಿತ್ತು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ, ದೊಡ್ಡ ರಸಾಯನಶಾಸ್ತ್ರದ ವಿಜ್ಞಾನಿ ಡಾ.ಬಿ.ಎಲ್.ಮಂಜುನಾಥ ಮತ್ತು ಆಂಗ್ಲ ಪ್ರಾಧ್ಯಾಪಕ ಡೇವಿಡ್ ಹಾರ್ಸ್‍ಬರೋ ಇವರ ನೆರವು, ಮಾರ್ಗದರ್ಶನ, ಸಲಹೆಯಿಂದ ಸಮಾಜಶಾಸ್ತ್ರದ ಅಧ್ಯಯನದಾನಂತರ ದಿಲ್ಲಿಗೆ ಸಮಾಜಕಾರ್ಯದ ಉನ್ನತ ಅಧ್ಯಯನಕ್ಕೆ ಹೋದರು. ಅಲ್ಲಿ ಖ್ಯಾತ ಸಮಾಜಶಾಸ್ತ್ರಜ್ಞರೂ, ಸಮಾಜಕಾರ್ಯ ಪ್ರಶಿಕ್ಷಕರೂ ಆಗಿದ್ದ ಡಾ.ಎಂ.ಎಸ್.ಗೋರೆ, ಸಮಾಜಕಾರ್ಯ ಪ್ರಶಿಕ್ಷಕರಾಗಿದ್ದ ಡಾ.ಕೆ.ಡಿ.ಗಂಗ್ರಾಡೆ, ಪ್ರೊ. ಶಂಕರ ಪಾಠಕ್, ಇಂಥವರ ಮಾರ್ಗದರ್ಶನ ದೊರೆಯಿತು. ಅಧ್ಯಾಪನದಲ್ಲಿದ್ದಾಗಲೇ ವಾರಣಾಸಿಯ ಖ್ಯಾತ ಸಮಾಜಕಾರ್ಯ ಪ್ರಾಧ್ಯಾಪಕ ಡಾ.ಸಿ.ಪಿ.ಗೋಯಲ್ ಇವರ ಮಾರ್ಗದರ್ಶನದಲ್ಲಿ 'ದೀರ್ಘಕಾಲೀನ ಮನೋವೈಕಲ್ಯ' ಇದರ ಬಗೆಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದರು. ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದ ಹತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರು ಡಾಕ್ಟರೇಟ್ ಪದವಿಗಳನ್ನು ಪಡೆಯಲು ನೆರವಾದರು. ಇವರ ವಿದ್ಯಾರ್ಥಿಗಳು ಆಯ್ದುಕೊಂಡ ವಿಷಯಗಳು ವೈವಿಧ್ಯಮಯವಾಗಿದ್ದವು : ಧಾರ್ಮಿಕ ಸಂಸ್ಥೆಯು ಬರಗಾಲದಲ್ಲಿ ಕೈಗೊಂಡ ಪರಿಹಾರ ಕಾರ್ಯ ; ಮನೋವಿಕಲರ ಚಿಕಿತ್ಸೆಯಲ್ಲಿ ಸಮಾಜಕಾರ್ಯಕರ್ತರ ಪಾತ್ರ ; ಶಿಶು ಹೊಲಬುಗೇಡಿತನದ ಸಂಕೀರ್ಣತೆ, ಕಾರ್ಮಿಕರ ನಡುವಣ ಚೌಕಾಸಿ, ವೃದ್ಧಾಪ್ಯ ವೇತನದ ಅನುಷ್ಠಾನದ ಏಳುಬೀಳುಗಳು, ಹಿಂದೂ ಕುಟುಂಬಗಳಲ್ಲಿನ ಸಂವಹನದ ಸಂಕೀರ್ಣತೆ, ಶಿಶುಪಾಲನೆಯ ಹೊಣೆಗಾರಿಕೆಯಲ್ಲಿ ಸಮುದಾಯದ ಪಾತ್ರ ; ಸಣ್ಣ ಕೈಗಾರಿಕೆಯ ಪ್ರವರ್ತಕರ ಸಾಮಾಜಿಕ ಜೀವನ ಸ್ಥಿತಿ ; ಲಂಬಾಣಿ ಸಮುದಾಯದಲ್ಲಿನ ಬದಲಾವಣೆ ಮತ್ತು ಅಭ್ಯುದಯ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿರುವ ಸ್ವಯಂಸೇವಾ ಸಂಘಟನೆಗಳು ಇದಿರಿಸುವ ಸಮಸ್ಯೆಗಳು ಮತ್ತು ನಿವಾರಣೋಪಾಯಗಳು. ವಿದ್ಯಾರ್ಥಿಗಳಿಗೆ ನೀಡಿದ ಸಂಶೋಧನೆಯ ಮಾರ್ಗದರ್ಶನದಿಂದ ತಾವು ಕಲಿತದ್ದೇ ಹೆಚ್ಚು ಎಂಬ ವಿನಮ್ರ ಭಾವ ಡಾ.ಮರುಳಸಿದ್ಧಯ್ಯನವರದ್ದು. ಡಾ. ಮರುಳಸಿದ್ಧಯ್ಯನವರ ವಿಜ್ಞಾನ-ವೃತ್ತಿ ಸಾಹಿತ್ಯದ ಕೊಡುಗೆ ಅಧ್ಯಾಪನ ಕಾಲದಲ್ಲೂ ಆನಂತರವೂ ಸಂಶೋಧನೆಯಲ್ಲೂ, ಬರೆಹದಲ್ಲೂ, ಅಭ್ಯುದಯದ ಕಾರ್ಯದಲ್ಲೂ ತೊಡಗಿಕೊಂಡಿರುವ ಇವರು ಪ್ರಮುಖವಾಗಿ ಸಮಾಜಕಾರ್ಯ ಮತ್ತು ಸಮಾಜಶಾಸ್ತ್ರ ವಲಯಗಳಲ್ಲಿ ಸಾಹಿತ್ಯವನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಸೃಜಿಸಿದ್ದಾರೆ. ಇವರ ಸಾಹಿತ್ಯವು ಅಧ್ಯಯನದ, ಸಂಶೋಧನೆಯ ಮತ್ತು ಪ್ರಯೋಗದ ಆಧಾರವನ್ನು ಹೊಂದಿದೆ. ಈಗಾಗಲೇ ನಲವತ್ತು ಕೃತಿಗಳು ಇವರಿಂದ ಹೊರಬಂದಿವೆ. ಕೆಲವು ಆಯ್ದ ಕೃತಿಗಳ ಸ್ಥೂಲ ಪರಿಚಯ ಇಲ್ಲಿದೆ. 1. ಓಲ್ಡ್ ಪೀಪಲ್ ಆಫ್ ಮಾಕುಂಟೆ (1969) : ಇದು ಇಪ್ಪತ್ತನೆಯ ಶತಮಾನದ ಆರನೆಯ ದಶಕದಲ್ಲಿ ಕೈಕೊಂಡ ಮಾನವ ಮತ್ತು ಸಮಾಜಶಾಸ್ತ್ರೀಯ ಸಂಶೋಧನೆಯ ಫಲಶ್ರುತಿಯಾಗಿದೆ. ಬಹುಶಃ ಭಾರತದಲ್ಲಿ ವೃದ್ಧಾಪ್ಯದ (Gerontology) ಬಗೆಗೆ ನಡೆದ ಪ್ರಥಮ ಸಂಶೋಧನೆ ಇದಾಗಿದೆ. ಇದು ಪಾಲ್ಗೊಂಡ ವೀಕ್ಷಣೆಯ (Participatory Observation) ತಂತ್ರವನ್ನು ಉಪಯೋಗಿಸಿ ಮಾಡಿದ ಸಂಶೋಧನೆಯಾಗಿದೆ. ಕರ್ನಾಟಕದ ಹಳ್ಳಿಯೊಂದರ ಆಳ-ಅಧ್ಯಯನದ ಮೂಲಕ ವೃದ್ಧರ ಸ್ಥಿತಿಗತಿ, ಅವರು ಇತರ ವಯೋವೃಂದಗಳೊಂದಿಗೆ ಇರಿಸಿಕೊಂಡಿರುವ ಸಂಬಂಧಗಳು, ಇವರು ಇದಿರಿಸುತ್ತಿರುವ ಮನೋದೈಹಿಕ ಸಮಸ್ಯೆಗಳು, ಕುಟುಂಬದಲ್ಲಿ, ನೆರೆಹೊರೆಯಲ್ಲಿ, ಬಳಗದಲ್ಲಿ, ಸಮುದಾಯದ ಆಡಳಿತೆಯಲ್ಲಿ ಇವರ ಅಧಿಕಾರವು ಹೇಗೆ ಕ್ರಮೇಣ ಅವನತಿ ಹೊಂದುತ್ತಿದೆ ಎಂಬುದನ್ನು ಈ ಅಧ್ಯಯನವು ಎತ್ತಿ ತೋರಿಸುತ್ತದೆ. ಭವಿಷ್ಯದಲ್ಲಿ ವೃದ್ಧರು ಇರಿಸಲಿರುವ ಸ್ಪಷ್ಟ ಮುನ್ಸೂಚನೆಯನ್ನು ಈ ಅಧ್ಯಯನವು ನೀಡುತ್ತದೆ. ಈ ಅಧ್ಯಯನಕ್ಕೆ ಭಾರತದಾದ್ಯಂತ ಪ್ರಶಂಸೆಯು ದೊರೆತುದಲ್ಲದೆ, ಅಮೆರಿಕೆಯ ವಿಶ್ವವಿದ್ಯಾಲಯವೊಂದರಲ್ಲಿ ಇದು ಪಠ್ಯವೂ ಆಯಿತು. 2. ಸೆಕ್ಟೇರಿಯನ್ ಆ್ಯಂಡ್ ಸೆಕ್ಯುಲರ್ ಬೇಸೆಸ್ ಆಫ್ ವೆಲ್ಫೇರ್ ಆ್ಯಂಡ್ ಡೆವಲಪ್ಮೆಂಟ್ (1975, ವಿಸ್ತೃತ ಆವೃತ್ತಿ 2008) : ಇದರ ಮೊದಲ ಆವೃತ್ತಿಯಲ್ಲಿ ಸಮಾಜಕಲ್ಯಾಣಕ್ಕೆ ಸೀಮಿತವಾಗಿದ್ದ ಚರ್ಚೆಯು ಎರಡನೆಯ ಆವೃತ್ತಿಯಲ್ಲಿ ಸಾಮಾಜಿಕ ಅಭ್ಯುದಯಕ್ಕೂ ವಿಸ್ತೃತಗೊಂಡಿತು. ಮತೀಯ ಮತ್ತು ಲೌಕಿಕ ವಸ್ತುವಿಶೇಷಗಳು (factors) ಹಾಗೂ ಶಕ್ತ್ಯಂಕಗಳು (forces) ಸಮಾಜದ ಮೇಲೆ ಗಾಢವಾದ ಪ್ರಭಾವವನ್ನು ಬೀರಿ ಸಮಾಜಕಲ್ಯಾಣ ಮತ್ತು ಅಭ್ಯುದಯ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಹೇಗೆ ಖಾಸಗಿ ಹಾಗೂ ಸರಕಾರಿ ಉಪಕ್ರಮಗಳಿಗೆ ಒತ್ತಾಸೆಯಾಗುತ್ತವೆ ಎಂಬುದನ್ನು ವಿಶದಗೊಳಿಸಲಾಗಿದೆ. ಇಷ್ಟಲ್ಲದೆ, ಬಳಗೀಯ ಪರಿಸರದಲ್ಲಿ ವೈವಾಹಿಕ ಸಂಬಂಧಗಳು ಹೇಗೆ ಸಂಕೀರ್ಣತೆಯ ಸ್ವರೂಪವನ್ನು ಪಡೆಯುತ್ತವೆ ಎಂಬುದನ್ನು ಮಾನವಶಾಸ್ತ್ರೀಯ ಮಾರ್ಗದೃಷ್ಟಿಯಿಂದ ಸೋದಾಹರಣೆಯ ಮೂಲಕ ವಿಶ್ಲೇಷಿಸಲಾಗಿದೆ. ಜಾತಿ ವ್ಯವಸ್ಥೆಯು ಹೇಗೆ ಅರ್ಥೋ-ರಾಜಕೀಯ ಒತ್ತಡಗಳಿಂದ ಧಾರ್ಮಿಕ ಪೋಷಾಕನ್ನು ಧರಿಸುತ್ತಲಿದೆ ಎಂಬುದನ್ನು ಕರ್ನಾಟಕದ ಸಮಾಜಾತ್ಮಕ ರಾಚನಿಕತೆಯಲ್ಲಿನ (societal structure) ಪರಿವರ್ತನೆಯನ್ನು, ಹೊಸ ಪ್ರವಣತೆಯನ್ನು (trend) ಕಾಣಿಸಲಾಗಿದೆ. ಕೆಲವು ಅಭ್ಯುದಯಾತ್ಮಕ ಪ್ರಯೋಗಗಳ ನೋಟಗಳೂ ಇದರಲ್ಲಿ ಪ್ರಸ್ತಾಪವಾಗಿವೆ. 3. ಡೈಮೆನ್ಶನ್ಸ್ ಆಫ್ ಭಕ್ತಿ ಮೂವ್ಮೆಂಟ್ ಇನ್ ಇಂಡಿಯಾ 1998 - ದಿ ಶರಣ ರೆವೊಲೂಶನ್ ಆ್ಯಂಡ್ ದಿ ಇಂಡಿಯನ್ ಕಾನ್ಸಿಸ್ಟೂಶನ್ - 2006 ಈ ಎರಡು ಸಂಪುಟಗಳನ್ನು ಇವರು ಸಂಪಾದಿಸಿದ್ದಾರೆ. ಭಾರತದ ಸಮಾಜ, ಇದರಲ್ಲಿ ನಡೆಯುತ್ತಿರುವ ಪರಿವರ್ತನೆ, ಆ ಕಾರಣದಿಂದ ಉಣ್ಮಿದ ಸಮಸ್ಯೆಗಳಿಗೆ ಕಂಡುಕೊಂಡ ಸಮಾಧಾನಗಳು ಹಾಗೂ ರಾಜಕೀಯ ಕಟ್ಟೋಣದ ಮೇಲೆ ಭಾರತದಲ್ಲಿ ನಡೆದ, ಈಗಲೂ ವಿಭಿನ್ನ ರೀತಿಯಲ್ಲಿ ನಡೆಯುತತ್ತಿರುವ ಭಕ್ತಿಯಾಂದೋಲನವು ಬೀರುತ್ತಿರುವ ಪ್ರಭಾವ ಇತ್ಯಾದಿಗಳನ್ನು ಆಳವಾಗಿಯೂ, ವ್ಯಾಪಕವಾಗಿಯೂ ವಿಶ್ಲೇಷಣಾತ್ಮಕ ಅವಲೋಕನವನ್ನು ಈ ಸಂಪುಟಗಳಲ್ಲಿ ಮಾಡಲಾಗಿದೆ. ಡಾ.ಮರುಳಸಿದ್ಧಯ್ಯನವರ ಪ್ರೇರಣೆ ಮತ್ತು ಮಾರ್ಗದರ್ಶನಗಳೇ ಈ ಸಂಪುಟಗಳ ರಚನೆಗೆ ಕಾರಣವಾಗಿವೆ. ಈ ಸಂಪುಟಗಳಿಗೆ ಸುದೀರ್ಘವಾದ ಪೀಠಿಕೆಗಳನ್ನು ಬರೆದು ಇವನ್ನು ಸಮಗ್ರವಾಗಿ ಪರಿಚಯಿಸಿದ್ದಾರೆ. ಸಮಾಜಶಾಸ್ತ್ರ, ಅದರಲ್ಲೂ ಸಾಮಾಜಿಕ ಆಂದೋಲನಗಳ ಅಧ್ಯಯನಕ್ಕೆ ಈ ಸಂಪುಟಗಳು ಆಕರಗಳಾಗಿವೆ. 4. ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು (1994,2009) : ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ, ಅದರಲ್ಲೇ ಗಾಢಾಸಕ್ತಿಯನ್ನು ಬೆಳೆಸಿಕೊಂಡ, ಅಲ್ಲಿನ ಜನಜೀವನದ ವೀಕ್ಷಣೆ ಮತ್ತು ಜನಪದ ಸಾಹಿತ್ಯದ ಅವಲೋಕನದಿಂದ ಇವರಿಗೆ ಭಾರತೀಯ ಸಮಾಜದ ರಾಚನಿಕತೆ-ಕ್ರಿಯಾತ್ಮಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಮಾಜಕಾರ್ಯದ ಬೇರುಗಳನ್ನು ಭಕ್ತಿಯಾಂದೋಲನದಲ್ಲಿ ಕಾಣಬಹುದು ಎಂಬುದನ್ನನು ಖಚಿತಪಡಿಸಿಕೊಂಡ ಇವರು ಕರ್ನಾಟಕ ಸಾಹಿತ್ಯ ಅಕಾದಮಿಯ ಸಹಯೋಗದಿಂದ ತಮ್ಮ ಹುಟ್ಟಿದೂರಿನಲ್ಲಿಯೇ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಿ, ರಾಜ್ಯದ ವಿವಿಧ ಕಡೆಗಳಿಂದ ವಿದ್ವಾಂಸರನ್ನು ಆಹ್ವಾನಿಸಿ, ಅವರಿಂದ ವಿಚಾರಗಳನ್ನು ಮಂಡಿಸುವಂತೆ ಮಾಡಿದರು. ಆನಂತರ ಇದೇ ವಿಷಯದ ಮೇಲೆ ಬೆಂಗಳೂರು ನಗರದಲ್ಲಿ ವಿಶೇಷವೂ, ವಿಶಿಷ್ಟವೂ ಆದ ಒಂದು ವಿಚಾರ ಮಂಥನವನ್ನು ಏರ್ಪಡಿಸಿದರು. ಸುಪ್ರಸಿದ್ಧ ಸಮಾಜವಿಜ್ಞಾನಿಗಳಾದ ಪ್ರೊ. ಎಂ.ಎನ್.ಶ್ರೀನಿವಾಸ, ಪ್ರೊ. ಎಂ.ವಿ.ಮೂರ್ತಿ, ಡಾ.ಎಂ.ಚಿದಾನಂದಮೂರ್ತಿ, ಡಾ.ಸೂರ್ಯನಾಥ ಕಾಮತ, ಮುಂತಾದವರು ಆ ಚಿಂತನ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಇವರೆಲ್ಲರು ಮಂಡಿಸಿದಿ ಸಂಪ್ರಬಂಧಗಳನ್ನು ಸಂಗ್ರಹಿಸಿ, ಸಂಪಾದಿಸಿ ಒಂದು ದೀರ್ಘ ಪ್ರಸ್ತಾವನೆಯನ್ನು ಬರೆದರು. ಈ ಸಂಪುಟವು ಎರಡನೆಯ ಆವೃತ್ತಿಗೊಂಡ ಸಂದರ್ಭದಲ್ಲಿ ಪ್ರೊ. ನಿರಂಜನ ಎ. ಗೋಕರ್ಣ ಅವರು ಬೇರೊಂದು ಕಡೆ ಇಂಗ್ಲಿಷಿನಲ್ಲಿ ಮಂಡಿಸಿದ್ದ 'ಭಕ್ತಿ ಮೂವ್ಮೆಂಟ್ ಆ್ಯಂಡ್ ಸೋಸಿಯಲ್ ಡೆವಲಫ್ಮೆಂಟ್' ಸಂಪ್ರಬಂಧವನ್ನು ಇವರು ಕನ್ನಡೀಕರಿಸಿ, ಈ ಸಂಪುಟಕ್ಕೆ ಸೇರಿಸಿ ಇದನ್ನು ವಿಸ್ತೃತಗೊಳಿಸಿದರು. ಈ ಸಂಪುಟವು ಒಂದು ಐತಿಹಾಸಿಕ ಚಿಂತನ ಕಾಣಿಕೆ ಎಂದು ಗುರುತಿಸಲ್ಪಟ್ಟಿತು. 5. ಕರ್ನಾಟಕ ಶರಣರು ಆಂದೋಲನ ಮತ್ತು ಅವರ ಚಿಂತನೆಗಳು : ಭಾರತದಲ್ಲಿ ನಡೆದ ಸಾಮಾಜಿಕ ಆಂದೋಲನಗಳಲ್ಲಿ ಭಕ್ತಿಯಾಂದೋಲನಕ್ಕೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ವಿಶ್ವದಲ್ಲೇ ಇಂಥ ಆಂದೋಲನವು ನಡೆದದ್ದು ಕರ್ನಾಟಕದಲ್ಲಿ, ಕ್ರಿ.ಶ.12ನೆಯ ಶತಮಾನದಲ್ಲಿ. ಸಮಾಜೋ-ಭಾಷಿಕ ದೃಷ್ಟಿಯಿಂದಲೂ ಇದು ಜಾಗತಿಕ ಇತಿಹಾಸದ ಮಹತ್ವದ ಘಟನೆಯಾಗಿದೆ. ಆ ಆಂದೋಲನವು ಅಂದಿನ ಸಮಾಜದಲ್ಲಿ ತೀವ್ರತಮ ಪರಿವರ್ತನೆಯ ತರಂಗಗಳನ್ನು ಎಬ್ಬಿಸಿತು. ಅಲ್ಲದೆ, ಮುಂದೆ 19-20ನೆಯ ಶತಮಾನಗಳಲ್ಲಿ ಆಗಲಿರುವ ಅರ್ಥೋ-ರಾಜಕೀಯ ಚಿಂತನೆಗಳಾದ ಪ್ರಜಾಪ್ರಭುತ್ವ, ಸಮತಾವಾದ, ಸಮಾಜವಾದ, ಸ್ತ್ರೀ ಸ್ವಾತಂತ್ರ್ಯ, ಇತ್ಯಾದಿಗಳಿಗೆ ಮುನ್ನುಡಿಯನ್ನು ಆ ಆಂದೋಲನವು ಬರೆಯಿತು. ಇಂಥ ಆಂದೋಲನವು ಸಮಾಜವಿಜ್ಞಾನವು ಉದಾಸೀನ ಮಾಡುವಂಥದುದಲ್ಲ, ಮತ್ತು ಸಮಾಜಕಾರ್ಯಕರ್ತರಿಗೆ, ಸಮಾಜೋದ್ಧಾರಕರಿಗೆ ಇದು ಸ್ಫೂರ್ತಿಯ ನೆಲೆ-ಸೆಲೆ ಎಂಬುದನ್ನು ಅರಿತ ಡಾ.ಮರುಳಸಿದ್ಧಯ್ಯನವರು ತಮ್ಮ ಎರಡು ಕೃತಿಗಳಲ್ಲಿ (ಅರಿವು-ಆಚರಣೆ-1995, 2008 ; ಅಂತರಂಗ-ಬಹಿರಂಗ ಶುದ್ಧಿ-2003-2008) ಈ ವಿಷಯವನ್ನು ಸಮಾಜಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿ ಭಕ್ತಿಯಾಂದೋಲನದ ಮಹತ್ವವನ್ನು ಸಮಾಜ ವಿಜ್ಞಾನಿಗಳ ಗಮನಕ್ಕೆ ತಂದವರು ಇವರು. 6. ದಿ. ಎಲೆಫೆಂಟ್ ಇನ್ ದಿ ಮಿರರ್ (2000) : ಇದು ಇವರ ಸ್ವತಂತ್ರ ಕೃತಿ. ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯಗಳೆರಡು ವಲಯಗಳಿಗೂ ಇಲ್ಲಿ ಪ್ರಸ್ತಾಪಿಸಲಾಗಿರುವ ಸಂಗತಿಗಳು ವಿಸ್ತರಣಗೊಂಡಿವೆ. ಸಮಾಜದ ರಾಚನಿಕತೆ, ಕ್ರಿಯಾತ್ಮಕತೆ, ಪರಿವರ್ತನೆ, ಅಸ್ವಾಸ್ತ್ಯ ಸ್ಥಿತಿ ಹಾಗೂ ಸಂಪನ್ಮೂಲಗಳ ಕ್ರೋಡೀಕರಣ-ಇವುಗಳ ಯಥಾಸ್ಥಿತಿಯ ನಿರೂಪಣೆಯ ಹಿನ್ನೆಲೆಯಲ್ಲಿ ಸಮಾಜಕಲ್ಯಾಣ ಮತ್ತು ಸಾಮಾಜಿಕ ಅಭ್ಯುದಯದ ಉಪಕ್ರಮಗಳನ್ನು ಸಮೀಚೀನ ದೃಷ್ಟಿಯಿಂದ ಈ ಗ್ರಂಥದಲ್ಲಿ ನಿರೂಪಿಸಲಾಗಿದೆ. 7. ಮಾನವ ಸಮಾಜ ಹಾಗೂ ಸಮಾಜಶಾಸ್ತ್ರ (1965) ಮತ್ತು ಸಮಾಜಶಾಸ್ತ್ರದ ಕೆಲವು ಪಾಠಗಳು (1969) : ಕನ್ನಡದಲ್ಲಿ ಪ್ರಕಟವಾದ ಈ ಕೃತಿಗಳಲ್ಲಿ ಸಮಾಜದ ಸ್ವರೂಪವನ್ನು ವಿವರಿಸುತ್ತಾ ಸಮಾಜಶಾಸ್ತ್ರದ ಪಾತ್ರವನ್ನು ಕೂಲಂಕಷವಾಗಿ ಚರ್ಚಿಸಲಾಗಿದೆ. ಸಮಾಜದ ಆಗು-ಹೋಗುಗಳನ್ನು ಕ್ಷೇತ್ರ್ರಾಧ್ಯಯನದಿಂದ ಪಡೆದ ಅನುಭವ ಚಿತ್ರಣಗಳನ್ನು ಇಲ್ಲಿ ಹರಳುಗಟ್ಟಿಸಲಾಗಿದೆ. 8. ಕಪ್ಪುಮೋಡದಲ್ಲೊಂದು ಬೆಳ್ಳಿರೇಖೆ (1973, 2005, 2008) : ಇದು ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯಗಳ ವಿವಿಧ ಆಯಾಮಗಳನ್ನು ಜಗತ್ತಿನ ನಾನಾ ಕಡೆ ಜರುಗಿದ ಪ್ರಸಂಗಗಳ ಚಿತ್ರಣಗಳ ಮೂಲಕ ಬಿಡಿಬಿಡಿಸಿ ತೋರಿಸಲಾಗಿದೆ. ಅಭ್ಯಾಸಿಗಳಿಗೆ ಇದು ವ್ಯಾಪಕವಾದ ಆಪ್ತತೆಯನ್ನು ಪಡೆಯಿತು. 9. ಸಮಾಜಕಾರ್ಯ-ಸಮುದಾಯ ಸಂಘಟನೆ : ಸಿದ್ಧಾಂತ, ವಿಧಾನ, ತಂತ್ರ, ಕೌಶಲ್ಯ, ಇಇ (1961 ರಿಂದ 2009ರವರೆಗೆ) : ಈ ಸಂಗತಿಗಳನ್ನು ಅನೇಕ ಕೃತಿಗಳಲ್ಲಿ ಸ್ಫುಟವಾಗಿ ವಿವರಿಸಲಾಗಿದೆ. ಸಮಾಜಕಾರ್ಯವು ಹೇಗೆ ವಿವಿಧ ಶಿಸ್ತು-ವೃತ್ತಿಗಳಿಂದ ನೆರವನ್ನು ಪಡೆದು ಹೇಗೆ ತನ್ನ ಅಸ್ಮಿತೆಯನ್ನು ಕಂಡರಿಸಿಕೊಂಡಿದೆ ಎಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ, ಪ್ರಮುಖವಾಗಿ ಭಾರತೀಯ ಸಾಂಸ್ಕೃತಿಕ ನೆಲೆಯಲ್ಲಿ, ನಿರೂಪಿಸಲಾಗಿದೆ. ಸಮಾಜಕಾರ್ಯ ಸಾಹಿತ್ಯವು ಕನ್ನಡದಲ್ಲಿ ರಚಿತವಾಗಿರುವುದು ಡಾ.ಮರುಳಸಿದ್ಧಯ್ಯನವರಿಂದ ಮಾತ್ರ. ಸಮಾಜಕಾರ್ಯ ವೃತ್ತಿ ತರಬೇತಿಯನ್ನು ವಿಶ್ವವಿದ್ಯಾಲಯದ ಕಕ್ಷೆಗೆ ತರುವಲ್ಲಿ ಪ್ರವರ್ತಕ ಪಾತ್ರವನ್ನು ಆಡಿದ್ದುದಲ್ಲದೆ ಬೇಕಾದ ಪಾರಿಭಾಷಿಕ ಶಬ್ದಗಳನ್ನು ಟಂಕಿಸುವಲ್ಲಿಯೂ, ಸಾಹಿತ್ಯವನ್ನು ರಚಿಸುವಲ್ಲಿಯೂ ಇವರು ಪ್ರಮುಖ ಪಾತ್ರವನ್ನು ನಿವೃತ್ತಿಯಾನಂತರವೂ ಆಡುತ್ತಿದ್ದಾರೆ. 10. ಪ್ರಯೋಗಶೀಲತೆಯನ್ನು ಪ್ರದರ್ಶಿಸುವ ಸಾಹಿತ್ಯ : ಇವರು ಅಧ್ಯಾಪನದಲ್ಲಿದ್ದಾಗಲೂ ಕ್ಷೇತ್ರ ಕಾರ್ಯ ಮತ್ತಿತರ ಪ್ರಸಂಗಗಳಲ್ಲೂ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕವು ಸುಂದರವಾಗಿದ್ದಿದ್ದರೂ ಅದು ನಿರ್ಮಲವಾಗಿಲ್ಲ ಎಂಬುದನ್ನು ಗಮನಿಸಿದ ಇವರು ಕನಾಟಕವನ್ನು ಸ್ವಚ್ಛಗೊಳಿಸುವ ಮಣಿಹಕ್ಕೆ ಮುಂದಾಗಿ ಸೂಕ್ತ ಸಂಘಟನೆಗಳನ್ನು ಸ್ಥಾಪಿಸಿದರು, ಇತರ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆ ನೀಡಿದರು, ಅನುಷ್ಠಾನಯೋಗ್ಯವಾದ ಯೋಜನೆಗಳನ್ನು ಸಿದ್ಧಮಾಡಿದರು. ಒಂದು ಯೋಜನೆ, 'ನಿರ್ಮಲ ಕರ್ನಾಟಕ' (Clean Karnataka) ಇದರ ಮಹತ್ವವನ್ನು ಅರಿತ ಕರ್ನಾಟಕ ಸರಕಾರವು ಗ್ರಾಮೀಣಾಭಿವೃದ್ಧಿಯ ಭಾಗವಾಗಿ ಇದನ್ನು 1995ರಲ್ಲಿ ಅನುಷ್ಠಾನಕ್ಕೆ ತಂದಿತು. ಇದಕ್ಕೆ ಪೂರಕವಾದ ಯೋಜನೆಯೆಂದರೆ 'ಸ್ವಸ್ತಿ ಗ್ರಾಮ'. ಇದನ್ನೂ ಸರಕಾರವು, ಕೆಲವು ಮಾರ್ಪಾಡುಗಳೊಡನೆ, ಅನುಷ್ಠಾನಗೊಳಿಸತೊಡಗಿತು. 'ನಿರ್ಮಲ ಕರ್ನಾಟಕ' ಕೃತಿಯು 1998ರಲ್ಲಿ ಮೊದಲು ಪ್ರಕಟವಾಗಿ ಆರು ಆವೃತ್ತಿಗಳನ್ನು ಕಂಡಿತು. ಸಾಮಾಜಿಕ ಸಮಸ್ಯೆಗಳು ನಿಜದಲ್ಲಿ ಸಮಸ್ಯೆಗಳಲ್ಲ, ಅವು ರೋಗದ ಲಕ್ಷಣಗಳು ಎಂದು ಪರಿಭಾವಿಸಿದ ಡಾ.ಮರುಳಸಿದ್ಧಯ್ಯನವರು ರೋಗದ ಬೇರುಗಳನ್ನು ಬೆದಕತೊಡಗಿ ಬಹು ಪ್ರಮುಖವಾದ ಐದು ವೈರಾಣು (virus) ಗಳನ್ನು ಗುರುತಿಸಿ, ಅವು ನೆಯ್ದ 'ಸಂಚಿನ ಕೂಟ'ದಿಂದ ಉದ್ಭವವಾಗುವ ಸಮಸ್ಯೆಗಳ ಕಡೆ ಬೆರಳು ತೋರಿಸಿದರು. ಸಮಸ್ಯೆಗಳ ನಿವಾರಣೆಗಾಗಿ ಐದು ಮಾರ್ಗೋಪಾಯಗಳನ್ನು (strategies) ಕಂಡರಿಸಿದರು. ಈ ಯೋಜನೆಯು 'ಪಂಚಮುಖಿ ಅಭ್ಯುದಯ ಮಾರ್ಗ' ಇದರ ಶೀರ್ಷಿಕೆಯಡಿಯಲ್ಲಿ 2004ರಲ್ಲಿ ಪ್ರಕಟವಾಗಿ 2008ರ ಹೊತ್ತಿಗೆ ನಾಲ್ಕು ಆವೃತ್ತಿಗಳನ್ನು ಕಂಡಿತು. ಈ ಯೋಜನೆಯನ್ನು ಕೆಲವು ಸ್ವಯಂಸೇವಾ ಸಂಘಟನೆಗಳೂ, ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳೂ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಅನುಷ್ಠಾನಗೊಳಿಸುತ್ತಲಿವೆ. ಅಧ್ಯಾಪನ ಕಾಲದಲ್ಲಿ ಸಮಾಜಕಾರ್ಯ ಶಿಬಿರಗಳನ್ನು ನವೀನ ಪ್ರಯೋಗಗಳೀಗೆ ಒಳಪಡಿಸಿದರು. ಅವುಗಳಲ್ಲಿ ಪ್ರಮುಖವಾದದ್ದು ಮನೋಚಿಕಿತ್ಸಾರ್ಥಿಗಳನ್ನು (Mental Patients) ಗ್ರಾಮೀಣ ಪರಿಸರದಲ್ಲಿ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳೊಡನೆ ಸೇರಿಸಿ ಅವರ ಸುಧಾರಣೆಗೆ ಪ್ರಯತ್ನಿಸಲಾಯಿತು. ಶೇಕಡಾ ಎಪ್ಪತ್ತು ಮನೋರೋಗಿಗಳು ಸುಧಾರಣೆಗೊಂಡು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವಂತಾದರು. ಈ ಪ್ರಸಂಗವನ್ನು ಯುನೆಸ್ಕೊ ತನ್ನ ಬುಲೆಟಿನ್ನಲ್ಲಿ ದಾಖಲಿಸಿತು. 11. ಸಮಾಜಕಾರ್ಯ ಬೆಳವಣಿಗೆಯ ಹಂತಗಳು : ಪಶ್ಚಿಮ ಪ್ರಪಂಚದಲ್ಲಿ ಆದ ಉತ್ಕ್ರಾಂತಿಯ ಒಡಲಿನಿಂದ ಉದ್ಭವವಾದದ್ದು ಸಮಾಜಶಾಸ್ತ್ರ. ಆ ಶಾಸ್ತ್ರದ ಉಪ ಉತ್ಪನ್ನವಾಗಿ ರೂಪುತೆಳೆದದ್ದು ಸಮಾಜಕಾರ್ಯ. ಆದರೆ ಸಮಾಜಕಾರ್ಯದ ಎಳೆಗಳು ಮಾನವ ಸಮಾಜವು ರೂಪು ತಳೆಯುವಂದೇ ಕಾಣಸಿಗುತ್ತವೆ. ಈ ಶಿಸ್ತು ಪರಪುಟ್ಟನಾಗಿ ಬೆಳೆಬೆಳೆದು ತನ್ನ ಅಸ್ಮಿತೆಯನ್ನು ಪಡೆದು ಮತ್ತು ತನ್ನ ಮನೆಗೆ ಮರಳುತ್ತಿರುವ ರೋಚಕ ಇತಿಹಾಸವನ್ನು ಡಾ.ಮರುಳಸಿದ್ಧಯ್ಯನವರು ವಿಭಿನ್ನ ಕೋನದಿಂದ ನೋಡಿದ್ದಾರೆ. ಇಂಥ ರೀತಿಯಲ್ಲಿ ಸಮಾಜಕಾರ್ಯದ ಇತಿಹಾಸವನ್ನು ಯಾರೂ ಓದಿಲ್ಲವೆಂದರೂ ಸಂದೀತು. ಈ ಬಗೆಗಿನ ಕೃತಿ - ಸಮಾಜಕಾರ್ಯ : ಬೆಳವಣಿಗೆಯ ಹಂತಗಳು' ಮೊದಲು 2005ರಲ್ಲಿ ಪ್ರಕಟವಾಗಿ ಈಗಾಗಲೇ ಮೂರು ಆವೃತ್ತಿಗಳನ್ನು ಕಂಡಿದೆ. 12. ಗ್ರಾಮಾಭ್ಯುದಯದಲ್ಲಿನ ಆಸಕ್ತಿಯನ್ನು ಪಲ್ಲವಿಸಿದ ಕೃತಿಗಳು : ಡಾ.ಮರುಳಸಿದ್ಧಯ್ಯನವರ ಪ್ರಥಮಾಸಕ್ತಿಯು ಸಾಮಾಜಿಕ ಅಭ್ಯುದಯ, ಅದರಲ್ಲೂ ಗ್ರಾಮಾಭ್ಯುದಯ. ಇವರ ಅಧ್ಯಯನ ಮತ್ತು ಪ್ರಯೋಗಗಳು ನಡೆದಿರುವುದು ಗ್ರಾಮೀಣ ಪರಿಸರದಲ್ಲಿಯೇ ಹೆಚ್ಚಾಗಿದೆ. ಇದಕ್ಕೆಂದೇ ಇವರು ವಿದ್ವಾಂಸರನ್ನು ಕರೆಸಿ, ಅವರಿಂದ ಉಪನ್ಯಾಸಗಳನ್ನು ಏರ್ಪಡಿಸಿ, ಅವರು ಸಾದರಪಡಿಸಿದ ಸಂಪ್ರಬಂಧಗಳನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. ವಿಜ್ಞಾನಿಗಳು ಮತ್ತು ಕಾರ್ಯಕರ್ತರು ಸಮುದಾಯ, ಕ್ಷೇತ್ರ ಮತ್ತು ಪ್ರಾದೇಶಿಕ ಅಭ್ಯುದಯವನ್ನು ಹೇಗೆ ಸಾಧಿಸಬಹುದೆಂಬ ಮಾರ್ಗವನ್ನು ವಿಶದವಾಗಿ ಆ ಸಂಪುಟದಲ್ಲಿ ತೋರಿಸಿದ್ದಾರೆ. ಅದೇ ಕಮ್ಯುನಿಟಿ, ಏರಿಯಾ ಆ್ಯಂಡ್ ರೀಜನಲ್ ಡೆವಲಪ್ಮೆಂಟ್ ಇನ್ ಇಂಡಿಯಾ - 1987, 2007. ಕನ್ನಡದಲ್ಲಿ ಈ ಸಂಬಂಧದ ಎರಡು ಕೃತಿಗಳನ್ನು ರಚಿಸಿದ್ದಾರೆ : ಹುಲ್ಲುಬೇರುಗಳ ನಡುವೆ-1988, 2008 ; ಗಾಮೋನ್ನತಿ-1991, 1993, 2008. ಹುಲ್ಲುಬೇರುಗಳ ನಡುವೆ ಹೇಗೆ ಕೆಲಸ ಮಾಡಬಹುದು, ಗ್ರಾಮೋನ್ನತಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಈ ಕೃತಿಗಳಲ್ಲಿ ದೃಷ್ಟಾಂತಗಳ ಮೂಲಕ ತೋರಿಸಲಾಗಿದೆ. 13. ಅನುವಾದಿತ ಕೃತಿಗಳು : ಭಾರತದಲ್ಲಿ ಸಮಾಜಕಾರ್ಯದ ಪರಂಪರೆ-1979, 2000, 2008 ; ಗಾಂಧೀಯ ಅರ್ಥಶಾಸ್ತ್ರ 1983, 1993, 2006, 2008 : ಮೊದಲ ಕೃತಿಯಲ್ಲಿ ದೊಡ್ಡ ಸಮಾಜ ವಿಜ್ಞಾನಿ ಪ್ರೊ.ರಾಜಾರಾಮ ಶಾಸ್ತ್ರಿ ಅವರು ಭಾರತದಲ್ಲಿನ ಸಮಜಕಾರ್ಯದ ಪರಂಪರೆಯನ್ನು ಸಮಾಜಶಾಸ್ತ್ರೀಯ ದೃಷ್ಟಿಯ ನೆಲೆಯಲ್ಲಿ ದರ್ಶಿಸಿದ್ದಾರೆ. ಎರಡನೆಯ ಕೃತಿಯಲ್ಲಿ ಗಾಂಧೀಯ ಆರ್ಥಿಕ ಚಿಂತನೆಗಳು ಹೇಗೆ ವಾಸ್ತವತೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಹೇಗೆ ಅವು ಜಾಗತಿಕವಾಗಿ ಪ್ರಸ್ತುತವಾಗಿವೆ ಎಂಬುದನ್ನು ಮೂಲ ಲೇಖಕರಾದ ಡಾ.ಮಹೇಂದ್ರ ಕಂಠಿ ಮತ್ತು ಡೇವಿಡ್ ರಾಸ್ ಸಮರ್ಥವಾಗಿ ತೋರಿಸಿದ್ದರೆ. ಈ ಕೃತಿಗಳನ್ನು ಡಾ.ಮರುಳಸಿದ್ಧಯ್ಯನವರು ಅನುವಾದಿಸಿದ್ದಾರೆ. ಇವು ಜನಪ್ರಿಯವಾಗಿವೆ. 14. ಸೃಜನಾತ್ಮಕ ಕೃತಿಗಳಲ್ಲಿ ಮನೋ-ಸಮಾಜ ಶಾಸ್ತ್ರೀಯ ಮಾರ್ಗದೃಷ್ಟಿಯ ಪ್ರತಿಬಿಂಬ : ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯದಲ್ಲಿ ಒಲವಿದ್ದ ಡಾ.ಮರುಳಸಿದ್ಧಯ್ಯನವರು ಅದರಲ್ಲೇ ಉನ್ನತ ಅಧ್ಯಯನ ಮಾಡಲು ಅಪೇಕ್ಷಿಸಿದ್ದರು. ಆದರೆ, ದೊಡ್ಡ ಹಿತೈಷಿಗಳ ಸಲಹೆಯಂತೆ ಇವರು ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯದ ಕಡೆ ಮೊಗ ಮಡಿದರು. ಆದರೂ ಅವರು ರಚಿಸಿದ ಸೃಜನಾತ್ಮಕ ಕೃತಿಗಳಾದ 'ಕೆದರಿದ ಕೆಂಡ' -1954, 1974, 2005 ; 'ವಿಷಬಿಂದು' - 1954 ; 'ಸಾವಿನ ಸೆಳವಿನಲ್ಲಿ' 1955 ಇವುಗಳಲ್ಲಿ ಮನೋವಿಶ್ಲೇಷಣೆ, ಗ್ರಾಮೀಣ ಜೀವನ ತರಂಗಗಳು, ಇಇ, ಪ್ರತಿಬಿಂಬಿತವಾಗಿವೆ. ಕನ್ನಡ-ಕನ್ನಡಿಗ-ಕರ್ನಾಟಕ ಡಾ.ಮರುಳಸಿದ್ಧಯ್ಯನವರಿಗೆ ಪ್ರೊ. ಎಂ.ಎನ್.ಶ್ರೀನಿವಾಸ, ಪ್ರೊ.ಎಂ.ವಾಸುದೇವಮೂರ್ತಿ, ಡಾ.ಜಿ.ಆರ್.ಮದನ್, ಡಾ.ಸಿ.ಪಿ.ಗೋಯಲ್, ಡಾ.ಕೆ.ಈಶ್ವರನ್, ಪ್ರೊ. ಎಂ.ಎಸ್.ಗೋರೆ, ಮುಂತಾದ ಸಮಾಜವಿಜ್ಞಾನಿಗಳ, ಡಾ.ಎಂ.ಚಿದಾನಂದಮೂರ್ತಿ ಅಂಥ ಸಾಹಿತಿಗಳ ಆಪ್ತ ಒಡನಾಟ ಬಂದುದರಿಂದಲೂ, ಅರ್ಥಶಾಸ್ತ್ರಜ್ಞ ಈ.ಎಫ್.ಶೂಮಾಕರ್, ಲೋಕನಾಯಕ ಜಯಪ್ರಕಾಶ್ ನಾರಾಯಣರಂತಹವರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದುದರಿಂದಲೂ ಭಾರತೀಯ ಸಂಸ್ಕೃತಿ-ಜೀವನ ಪದ್ಧತಿಯ ಬಗೆಗೆ ಹೆಮ್ಮೆಯ ಪ್ರೀತಿ ಹುಟ್ಟಿ, ಸ್ಥಳೀಯ ಸಮಸ್ಯೆಗಳನ್ನು ಕುರಿತು ಹೆಚ್ಚಿನ ಆಸಕ್ತಿ ಇವರಲ್ಲಿ ಮೂಡಿತು. ಜಾಗತೀಕರಣದ ದುಷ್ಪ್ರಭಾವದಿಂದ ದೇಶೀಯ ಸ್ಥಿತಿಯು ಹದಗೆಡುತ್ತಿರುವುದನ್ನು ಗಮನಿಸಿ, ಭಾರತೀಯ ಭಾಷೆಗಳ ಅವನತಿಯಿಂದ ಭಾರತೀಯ ಸಂಸ್ಕೃತಿಯು ವಿನಾಶಗೊಳ್ಳುವ ಅಪಾಅಯವನ್ನು ಊಹಿಸಿ, ಕನ್ನಡ ಭಾಷೆಯು ಉಳಿದು ಸಮೃದ್ಧವಾಗಬೇಕು, ಕನ್ನಡಿಗನ ಜೀವನವು ಸೊಗಸಿನದಾಗಬೇಕು, ಕರ್ನಾಟಕವು ಬಲಿಷ್ಠವಾಗಬೇಕು, ಆ ಮೂಲಕ ಭಾರತವು ಬಲಯುವಾಗಬೇಕು ಎಂಬ ಚಿಂತನೆಯು ಇವರಿಗೆ ಬಂದುದರಿಂದ ಆ ಮುಖವಾಗಿ ಕೆಲಸ ಮಾಡತೊಡಗಿದರು. ಸಮಾಜವಿಜ್ಞಾನ ಮತ್ತು ಸಮಾಜಕಾರ್ಯವು ಭಾರತೀಕರಣಗೊಳ್ಳಬೇಕು ಎಂಬ ಕಾಳಜಿ ಇವರದಾಯಿತು. ಆದುದರಿಂದ ಇತರ ಸಮಾನ ಮನಸ್ಕರೊಡನೆ ಇವರು ಕ್ರಿಯಾಶೀಲರಾಗಿದ್ದಾರೆ. ವಿದೇಶೀಯರಿಗೆ ಭಾರತೀಯ ಗ್ರಾಮೀಣ ಜೀವನ ಪರಿಚಯಿಸುವ ಅಂತಾರಾಷ್ಟ್ರೀಯ ಸಮಾಜಕಾರ್ಯವನ್ನು ಬೆಳೆಸುವ ಪ್ರಯತ್ನ ಸಮಾಜಕಾರ್ಯದ ಪ್ರಶಿಕ್ಷಣದಲ್ಲಿ ಕ್ಷೇತ್ರಕಾರ್ಯಕ್ಕೆ, ಪ್ರತ್ಯಕ್ಷಾನುಭವಕ್ಕೆ ಹೆಚ್ಚಿನ ಒತ್ತು ಕೊಡುತ್ತಿರುವುದರಿಂದ ಕೆಲವು ವಿಶ್ವವಿದ್ಯಾಲಯಗಳು, ಅದರಲ್ಲೂ ಪಾಶ್ಚಾತ್ಯ ವಿಶ್ವವಿದ್ಯಾಲಯಗಳು ಇದರಲ್ಲಿ ಗಾಢ ಕಾಳಜಿಯನ್ನು ತೋರಿಸುತ್ತಿವೆ. ಈ ನಿಟ್ಟಿನಲ್ಲಿ ಸ್ವೀಡನ್ನಿನ ಮಿಡ್‍ಸ್ವೀಡನ್ ಯೂನಿವರ್ಸಿಟಿಯು ಡಾ.ಮರುಳಸಿದ್ಧಯ್ಯನವರನ್ನು ತನ್ನ ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶಕರನ್ನಾಗಿ ನೇಮಿಸಿಕೊಂಡು 1987ರಿಂದಲೂ ತಂದತಂಡವಾಗಿ ತನ್ನ ಪ್ರಶಿಕ್ಷಣಾರ್ಥಿಗಳನ್ನು ಭಾರತಕ್ಕೆ (ಕರ್ನಾಟಕಕ್ಕೆ) ಕಳಿಸಿಕೊಡುತ್ತಿದೆ. 'ಭಾರತೀಯ ಸಾಮಾಜಿಕ ಪರಿಸ್ಥಿತಿಯ ನಿಜ ಸ್ವರೂಪವನ್ನು ಅರಿತುಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ಕ್ಷೇತ್ರ ಕಾರ್ಯ ನಡೆಸುವುದು ಉಚಿತ' ಎಂಬ ಇವರ ಸಲಹೆಯನ್ನು ಆ ವಿಶ್ವವಿದ್ಯಾಲಯವು ಅಂಗೀಕರಿಸಿತು. ಇವರ ಮಾರ್ಗದರ್ಶನದಲ್ಲಿ ಕ್ಷೇತ್ರಕಾರ್ಯ ಮಾಡಿ ವರದಿಗಳನ್ನು ಆ ಪ್ರಶಿಕ್ಷಣಾರ್ಥಿಗಳು ಸಲ್ಲಿಸುತ್ತಿದ್ದಾರೆ. ಡಾ.ಮರುಳಸಿದ್ಧಯ್ಯನವರ ಸೂಚನೆ ಮೇರೆಗೆ ಆ ವಿಶ್ವವಿದ್ಯಾಲಯದ ಸಮಾಜಕಾರ್ಯ ಪ್ರಶಿಕ್ಷಕ ಮ್ಯಾಗ್ನೆಸ್ ಓಟಲಿಡ್ ಸಂಪಾದಕತ್ವದಲ್ಲಿ ವರದಿಗಳು ಒಂದು ಸಂಪುಟವಾಗಿ ಹೊರಬಂತು. ಅದೇ ಡಿವೋಷನ್ ಆ್ಯಂಡ್ ಎಂಪವರ್ಮೆಂಟ್ 2008ರಲ್ಲಿ ಆ ವಿಶ್ವವಿದ್ಯಾಲಯವೇ ಪ್ರಕಟಿಸಿತು. ಅದರ ಮಹತ್ವ ಗುರುತಿಸಿ, ಡಾ.ಮರುಳಸಿದ್ಧಯ್ಯನವರು ಅದೇ ವರ್ಷ ಅದರ ಭಾರತೀಯ ಆವೃತ್ತಿಯನ್ನು ಬೆಂಗಳೂರಿನ ಐ.ಬಿ.ಎಚ್.ಪ್ರಕಾಶನದಿಂದ ಹೊರತರಿಸುವಲ್ಲಿ ಯಶಸ್ವಿಯಾದರು. ಈ ತೆರನ ಪ್ರಕಟನೆಯು ಅಂತಾರಾಷ್ಟ್ರೀಯ ಸಮಾಜಕಾರ್ಯ ಕ್ಷೇತ್ರದಲಿ ಇದೇ ಪ್ರಥಮ ಪ್ರಯತ್ನವೆಂದು ತೋರುತ್ತದೆ. ಡಾ.ಮರುಳಸಿದ್ಧಯ್ಯನವರು ಅಂತಾರಾಷ್ಟ್ರೀಯ ಸಂಬಂಧಗಳ ಬಲವರ್ಧನೆಗೆ ಮತ್ತು ತಿಳಿವನ್ನು ಪಡೆಯಲು ಶ್ರೀಲಂಕಾ, ಅಮೆರಿಕ, ಕೆನಡಾ, ಇಂಗ್ಲೆಂಡ್, ಸ್ವೀಡನ್, ಇಸ್ರೇಲ್, ಈಜಿಪ್ಟ್ ದೇಶಗಳ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಉಪನ್ಯಾಸ ಕೊಟ್ಟು ವಿಚಾರವಿನಿಮಯ ಮಾಡಿಕೊಂಡರು. ಸಾಮಾಜಿಕ ಅಭ್ಯುದಯಕ್ಕೆ ಇವರ ಕಾಣ್ಕೆ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ಎರಡರಲ್ಲೂ ಪರಿಶ್ರಮವುಳ್ಳ ಡಾ.ಮರುಳಸಿದ್ಧಯ್ಯನವರು ತಮ್ಮ ಚಿಂತನೆ, ಅಧ್ಯಯನ ಮತ್ತು ಕ್ರಿಯೆಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಬೇಕು, ಸಾಮಾಜಿಕ ಅಭ್ಯುದಯವನ್ನು ಸಾಧಿಸಬೇಕು ಎಂಬುವ ಇರಾದೆಯಿಂದ ಅನುಷ್ಠಾನಯೋಗ್ಯ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಸಂಘಟನೆಗಳನ್ನು ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಮ್ಳವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ನಾಟಕದ ಸ್ವಯಂಸೇವಾ ಸಂಘಟನೆಗಳ ಒಕ್ಕೂಟವನ್ನು ಸ್ಥಾಪಿಸುವುದರಲ್ಲಿ ಇತರರೊಡನೆ ಸೇರಿ ಯಶಸ್ವಿಯಾದುದಲ್ಲದೆ ಕೆಲವು ಕಾಲ ಅದರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಡಾ.ಎಚ್.ಸುದರ್ಶನ್ ಅವರು ಸ್ಥಾಪಿಸಿರುವ ಸಂಸ್ಥೆಗಳೊಡನೆ ಕಾರ್ಯನಿರತರಾಗಿದ್ದಾರೆ. ಅನೇಕ ಸ್ವಯಂಸೇವಾ ಸಂಘಟನೆಗಳ ಸಲಹೆಗಾರರಾಗಿಯೂ ಕೆಲಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಅಸಮಾನತೆಯ ಸ್ತರವಿನ್ಯಸ್ತ ಸಮಾಜದಲ್ಲಿ ಅಭ್ಯುದಯವನ್ನು ಸಾಧಿಸಲು ಇವರು ಸ್ವಸ್ತಿ ಸ್ವಯಂಸೇವಾ ಸಂಘಟನೆಯನ್ನು ಸ್ಥಾಪಿಸಿ, ಅದರ ಸ್ಥಾಪಕ ಕಾರ್ಯದರ್ಶಿಯಾಗಿಯೇ ಕೆಲಸ ಮಾಡುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಬಲಿಷ್ಠವರ್ಧನೆಗಾಗಿ ಹಗಲಿರುಳು ದುಡಿಯುತ್ತಿರುವ ಸಮಾಜಶಾಸ್ತ್ರಜ್ಞ ಡಾ.ಜಿ.ಆರ್.ಮದನ್ ಕೆಲಸಕ್ಕೆ ಸಕಾರಾತ್ಮಕವಾಗಿ ಇವರು ಸ್ಪಂದಿಸುತ್ತಿದ್ದಾರೆ. ಸ್ವಸ್ತಿ ಸಂಘಟನೆಯ ಮೂಲಕ ವಿಚಾರ ಸಂಕಿರಣಗಳನ್ನು ಏರ್ಪಡಿಸುವ, ಪರಿರ್ತನೆ-ಅಭ್ಯುದಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಣಿಹದಲ್ಲಿ ನಿರತರಾಗಿದ್ದಾರೆ. ತನ್ನ ಮಗ-ಸತೀಶ-ಯೌವನದಲ್ಲಿಯೇ ಅಪಘಾತಕ್ಕೆ ಈಡಾದುದರ ನೋವನ್ನು ದಲಿತರ ಚಿಕ್ಕ ಹಳ್ಳಿಯೊಂದನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವಲ್ಲಿ ನಿರತರಾಗಿ ಮರೆಯುತ್ತಿದ್ದಾರೆ. ತಾವು ಅಧ್ಯಾಪನದಲ್ಲಿ ಇದ್ದಾಗ ವಿಶ್ವವಿದ್ಯಾಲಯದ ಅನುದಾನದಿಂದ ಬೆಂಗಳೂರಿನ ಹತ್ತಿರದ ರಿಂಗಣ ಹಳ್ಳಿ ಸಮುದಾಯಗಳನ್ನು ಪರಿವರ್ತಿಸುವ-ಅಭ್ಯುದಯಗೊಳಿಸುವ ಪ್ರಯೋಗಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ, ನವೀನ ವಿಷಯಗಳನ್ನು ಗುರುತಿಸಿ, ಅಭ್ಯುದಯದ ಉಪಕರಣಗಳನ್ನು ಕಂಡರಿಸಿದರು. ಈ ಪ್ರಯೋಗದ ಆಧಾರದ ಮೇಲೆ ರಚಿಸಿದ ಸಂಪ್ರಬಂಧವನ್ನು ಕೆನಡಾದ ಮಾಂಟ್ರಿಯಲ್ನಲ್ಲಿ 1984ರಲ್ಲಿ ನಡೆದ ಅಂತಾರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಮಂಡಿಸಿ, ಪ್ರಶಂಸೆ ಗಳಿಸಿದರು. ಈ ಕಾರಣದಿಂದಲೇ ಸ್ವೀಡನ್ನಿನ ವಿಶ್ವವಿದ್ಯಾಲಯವು ತನ್ನ ಸಮಾಜಕಾರ್ಯಕ ಪ್ರಶಿಕ್ಷಣಾರ್ಥಿಗಳನ್ನು ಇವರ ಮಾರ್ಗದರ್ಶನಕ್ಕಾಗಿ ಕ್ಷೇತ್ರಕಾರ್ಯಕ್ಕೆ ಕಳಿಸುವಂತಾಯ್ತು. ಸಂಶೋಧನೆಯ ಕ್ಷೇತ್ರದಲ್ಲಿನ ದುಡಿಮೆ ಸಮಾಜಶಾಸ್ತ್ರದ ವಲಯದಲ್ಲಿ ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದರೂ ಪ್ರಮುಖವಾದದ್ದು, ವೃದ್ಧಾಪ್ಯದ ಬಗೆಗಿನ ಸಂಶೋಧನೆ. ಇವರು ಸಮಾಜಕಾರ್ಯ ವಲಯದಲ್ಲಿ ತಮ್ಮ ಡಾಕ್ಟರೇಟ್ ಪದವಿಗಾಗಿ ಮನೋವಿಕಲರ ದೀರ್ಘಕಾಲೀನ ರೋಗಸ್ಥಿತಿಯ ವಿಶ್ಲೇಷಣೆ ಮಾಡಿ ಅದಕ್ಕೆ ಇರುವ ಶಕ್ತ್ಯಂಶಗಳ ಸಂಚಿನಕೂಟವನ್ನು ಗುರುತಿಸಿದರು. ಕೇಂದ್ರ ಸರಕಾರ, ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ, ಕರ್ನಾಟಕ ಸರಕಾರ, ಮುಂತಾದವುಗಳ ನೆರವಿನಿಂದ ಅನೇಕ ಸಂಶೋಧನೆಗಳನ್ನು ನಡೆಸಿದರು. ತಮ್ಮ ಸಂಶೋಧನೆಯ (ಡಾಕ್ಟರೇಟ್) ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನದ ನೆಪದಲ್ಲಿ ವಿವಿಧ ವಸ್ತುವಿಶೇಷಗಳ ಪರಿಚಯವಾಗಿ ತಮಗೆ ಸಾಮಾಜಿಕ ಸ್ಥಿತಿಯ ಸಂಕೀರ್ಣ ಆಯಾಮಗಳ ಪರಿಚಯವಾಯಿತು ಎನ್ನುತ್ತಾರೆ ಇವರು. ಸಂಶೋಧನೆಯನ್ನು ನಿರ್ದಿಷ್ಟವಾಗಿ ನಡೆಸಲು ಒಂದು ನವೀನ ತ್ರಿವಳಿ ಆಯಾಮದ (ಸಮಗ್ರ-ಅಖಂಡ-ವಿಕೇಂದ್ರೀಕರಣ) ಮಾರ್ಗದೃಷ್ಟಿಯನ್ನು ಕಂಡರಿಸಿ, ಇವರು ಇದನ್ನು ಸಂಶೋಧನೆಯಲ್ಲಿ ಅಳವಡಿಸಿಕೊಂಡರು. ಮನ್ನಣೆ-ಪುರಸ್ಕಾರ ಡಾ.ಮರುಳಸಿದ್ಧಯ್ಯನವರು ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ವಲಯಗಳಲ್ಲಿ ದುಡಿದುದಕ್ಕೆ, ಅವುಗಳಿಗೆ ಸಲ್ಲಿಸಿದ ಕಾಣ್ಕೆಗಾಗಿ ಇವರಿಗೆ ಶೈಕ್ಷಣಿಕ ಮತ್ತು ಸಾರ್ವಜನಿಕ ಪುರಸ್ಕಾರ ಮತ್ತು ಸನ್ಮಾನ ದೊರೆಕಿವೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|