ದಿನಾಂಕ 18 ಸೆಪ್ಟೆಂಬರ್ 2011 ರ ಭಾನುವಾರ ಸಿ.ಎಮ್.ಆರ್ ಕಾಲೇಜಿನ ದ್ವೀತಿಯ ವರ್ಷದ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳುಆಧುನಿಕತೆಯ ತುಳಿತಕ್ಕೊಳಗಾದ ಸೋಲಿಗೇರಿ ಬುಡಕಟ್ಟು ಸಮುದಾಯದ ಪರಿಸ್ಥಿತಿಯನ್ನು ಅಧ್ಯಯಿಸಲು ಸೋಲಿಗೇರಿ ಗ್ರಾಮಕ್ಕೆಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆದ ಅನುಭವವನ್ನು ಈ ಲೇಖನದ ಮೂಲಕ ಹಂಚಿಕೊಂಡಿದ್ದಾರೆ. ಈ ಸಮಾಜವೇ ಹೀಗೆ ಅನಿಸುತ್ತೆ. ಕೆಲವರ ಕೂಗಿಗೆ ಇಲ್ಲಿ ಬೆಲೆಯೇ ಇಲ್ಲ. ನೋವಿಗೆ ಸ್ಪಂದನೆಯಂತೂ ಇಲ್ಲವೇ ಇಲ್ಲ. ಆ ಕೂಗು ಅಕ್ಷರಶಃ ಅರಣ್ಯರೋದನ. ಕೂಗು ಕಿವಿಗೆ ಬಿದ್ದರೂ ಜಾಣಕಿವುಡು. ನೋವು ಎದೆ ಹಿಂಡಿದರೂ 'ದಿನಾ ಸಾಯೋರಿಗೆ ಅಳೋರ್ ಯಾರ್ರೀ' ಎಂಬ ತಿರಸ್ಕಾರ ಮನೋಭಾವ. ಈ ಮಾತು ನೂರು ಪ್ರತಿಶಃ ಅನ್ವಯವಾಗುವುದು, ಕನಕಪುರ ತಾಲ್ಲೂಕಿನ ಸಾತನೂರಿನ ದಕ್ಷಿಣಕ್ಕಿರುವ ಕಾಡಂಚಿನ ಗ್ರಾಮ ಸೋಲಿಗೇರಿಗೆ.... ಸೋಲಿಗ ಬುಡಕಟ್ಟು ಸಮುದಾಯದ ನಿವಾಸಗಳಿರುವ ಕುಗ್ರಾಮ ಸೋಲಿಗೇರಿ. ಒಂದಷ್ಟು ಮುರುಕಲು ಗುಡಿಸಲಲ್ಲಿ ವಾಸವಾಗಿರುವ ಸೋಲಿಗರು ಕೇವಲ 30 ಜನ. ಹಲವು ವರ್ಷದ ಹಿಂದೆ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಜನ, ಇಂದು ಆಧುನಿಕ ತಲ್ಲಣಗಳಿಗೆ ಎದೆಕೊಡದೆ ಗ್ರಾಮ ತೊರೆದ್ದಿದ್ದಾರೆ. ಅದರ ಲಕ್ಷಣಕ್ಕನುಗುಣವಾಗಿ ಈಗ ಯಾರೇ ಕಂಡರೂ ಆ ಗ್ರಾಮವನ್ನು 'ಖಾಲಿಗೇರಿ' ಎಂದು ಅನ್ವರ್ಥಗೊಳಿಸಬಹುದು. ಸೋಲಿಗೇರಿ ಈ ಪರಿಸ್ಥಿತಿಗೆ ಬರುತ್ತದೆಂದು ಯಾರೂ ಊಹಿಸಿರಲಿಲ್ಲ. ಸುಮಾರು 50 ಕುಟುಂಬಗಳ ಪುಟ್ಟ ಗ್ರಾಮ, ಬೆಟ್ಟದ ನೆತ್ತಿಯ ಮೇಲೆ ಪ್ರಶಾಂತವಾಗಿತ್ತು. ಜನರು ನಾಗರೀಕತೆಯಿಂದ ದೂರಉಳಿದುದಲ್ಲದೆ, ಒಂದಷ್ಟು ಕಾಡನ್ನು ವಿಂಗಡಿಸಿಕೊಂಡು ರಾಗಿ, ಕಾಳುಗಳನ್ನು ಬೆಳೆದುಕೊಂಡು, ಕಾಡಿನಲ್ಲಿ ಸಮೃದ್ಧವಾಗಿರುವ ಬಿದಿರನ್ನು ಮಿತವಾಗಿ ಕಡಿದು ತಂದು ಬುಟ್ಟಿಗಳನ್ನು ಹೆಣೆದುಕೊಂಡು ತಮ್ಮ ಇಷ್ಟಗಳನ್ನು ಪೂರೈಸಿಕೊಳ್ಳುತ್ತಿದ್ದರು. ಕಾಡಿನಲ್ಲಿ ಕಾಡಾಗಿ ಬದುಕುತ್ತಿದ್ದ ಅವರನ್ನು ಪ್ರಕೃತಿ ಎಂದೂ ಕೈಬಿಡಲಿಲ್ಲ. ಒಲಿದಿತ್ತು ಹರಸಿತ್ತು, ಸೋಲಿಗರು ತಮ್ಮದೇ ವಿಶಿಷ್ಟ ಸಂಪ್ರದಾಯ, ಸಂಸ್ಕೃತಿಯಿಂದ ಜೀವನವನ್ನು ಖುಷಿಗೊಳಿಸಿಕೊಳ್ಳುತ್ತಿದ್ದರು. ಸರಳ ಜೀವನವನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಜೀವನ ಎಂದೂ ಭಾರವೆಂದು ಅನ್ನಿಸಲೇ ಇಲ್ಲ. ಆದರೆ, ಈ ನೆಮ್ಮದಿ ಬಹುಕಾಲ ಉಳಿಯಲಿಲ್ಲ. ಅದೇಕೋ ಇತ್ತೀಚೆಗೆ ಆನೆಗಳ ದಾಳಿ ಅತಿಯಾಯಿತು. ಬೆಳೆದ ಬೆಳೆ ನಿರಂತರವಾಗಿ ಕೈಗೆಟುಕದೇ ಹೋಯಿತು. ಗಾಯದ ಮೇಲೆ ಬರೆ ಎಳೆದಂತೆ, ಅದೊಂದು ದಿನ ಯಾರೋ 10 ಆನೆಗಳನ್ನ ಕೊಂದು ಅವುಗಳ ದಂತಗಳನ್ನ ಹೊತ್ತೊಯ್ದಿದ್ದರೆ, ಆ ದೂರು ಸೋಲಿಗರ ಮೇಲೆ ಹೊರಿಸಿ ಕಾಡು ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಯಿತು, ಗೆಡ್ಡೆಗೆಣಸು, ಜೇನು, ಬಿದಿರನ್ನ ಕಿತ್ತು ತಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದ ಜನ, ಅತ್ತ ಸಾಕುಪ್ರಾಣಿಗಳಿಂದ ಇತ್ತ ನಾಡಪ್ರಾಣಿಗಳಿಂದ ಹೈರಾಣಾಗಿ ಹೋಗಿ ದಿಕ್ಕು ಕಾಣದಾದರು. ಮುಂದೆ ಮಾಡುವುದೇನು? ವಲಸೆ ಹೋಗುವುದು! ಎಲ್ಲಿಗೆ? ಎಲ್ಲಾದರೂ ಸರಿ. ಈ ಮಟ್ಟಕ್ಕೆ ಜನರು ಬಂದು ನಿಂತರು. ಅವರಿಗೆ ಬೇರೆ ಆಯ್ಕೆಗಳೇ ಇರಲಿಲ್ಲ. ಕಾರಣ ಅವರ ಮಾತು ಕೇಳುವ ಕಿವಿಗಳೇ ಇರಲಿಲ್ಲ. ಸರಿ, ಒಂದಷ್ಟು ಜನ ಅಕ್ಕಪಕ್ಕದ ನಗರಗಳಿಗೆ ವಲಸೆ ಹೋದರು. ಅಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕಲಾರಂಭಿಸಿದರು. ತಮ್ಮ ಹುಟ್ಟೂರನ್ನ ತೊರೆದು ಬಂದ ನೋವು ಒಂದೆಡೆಯಿದ್ದರೆ, ಇಲ್ಲಾದರೂ ಎರಡು ಹೊತ್ತು ಗಂಜಿ ಸಿಗುತ್ತಿದೆಯಲ್ಲ, ಮಕ್ಕಳು ಶಾಲೆಯ ಮುಖ ಕಂಡರಲ್ಲಾ ಎಂದು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು ದಿಕ್ಕುದೆಸೆಯಿದ್ದು, ಆತ್ಮಸ್ಥೈರ್ಯವಿದ್ದವರೇನೋ ದೂರಕ್ಕೆ ಹೋಗಿ ಬದುಕು ಕಟ್ಟಿಕೊಳ್ಳತೊಡಗಿದರು. ಆದರೆ, ಇದಾವುದೂ ಇಲ್ಲದವರು? ಕಡುಬಡತನದಲ್ಲಿ ವಿಧಿಯಿಲ್ಲದೇ ಅಲ್ಲೇ ಉಳಿದರು. ಆ ಚಿಕ್ಕಪುಟ್ಟ ಗುಡಿಸಲಿನಲ್ಲೇ ಕುಟುಂಬ ಪೂರ್ತಿವಾಸ. ವರಮಾನವಿಲ್ಲ. ಕದ್ದುಮುಚ್ಚಿ ಬಿದಿರು ತಂದು ಬುಟ್ಟಿ ಹೆಣೆಯುವುದು, ಅದ್ಯಾವ ಜನ್ಮದ ಪಾಪದ ಫಲವೋ ಗೊತ್ತಿಲ್ಲ. ಇವರ ಬೆಂಬಿಡದ ಕುಡಿತದ ಚಟದಿಂದ. ಹಗಲೆಲ್ಲ್ಲಾ ಕಷ್ಟಪಟ್ಟು 2 ಅಥವಾ 3 ಬುಟ್ಟಿ ಹೆಣೆದು, ಅಲ್ಲೇ ಕೇರಿಯಲ್ಲೊಬ್ಬ ಕದ್ದು ಹೆಂಡ ಮಾರುತ್ತಿರುವವನಲ್ಲಿಗೆ ಹೋಗಿ ಕೇಳಿದ್ದಷ್ಟಕ್ಕೆ ಅವುಗಳನ್ನು ಮಾರಾಟಮಾಡಿ, ಒಂದು ಪೆಗ್ ಎತ್ತಿ, ಕೇರಿಯಲ್ಲೆಲ್ಲಾ ಕೂಗಾಡಿ ಮಲಗಿಬಿಟ್ಟರೆ... ಅಲ್ಲಿಗೆ ಆ ದಿನ ಮುಗಿದಂತೆಯೇ. ಹೆಂಡತಿ ಮಕ್ಕಳು ಉಪವಾಸವೇ. ಸರ್ಕಾರದವರ ಪಡಿತರ ಚೀಟಿಯಿಂದ ದೊರಕುವ ಅಕ್ಕಿ' ಯಿಂದ ಒಂದಷ್ಟು ದಿನ ಮಕ್ಕಳ ಹೊಟ್ಟೆಗೊಂದಿಷ್ಟು ಅನ್ನ ಸಿಗುತ್ತೆ. ನಿಮಗೆ ಶಾಲೆಯ ಬಗ್ಗೆ ತಿಳಿಸಲೇ ಬೇಕು. ಸರ್ಕಾರದ ಕುರುಡು ನೀತಿಯಿಂದಾಗಿ, ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳಿಗೆ ಬೀಗ ಜಡಿಯುತ್ತಿದೆ. ಈ ನೀತಿಯ ನೇರ ಹೊಡೆತ ಬೀಳುವುದು ಇಂತಹ ಗ್ರಾಮದ ಮಕ್ಕಳಿಗೆ, ಸರ್ಕಾರವು 2-3 ಶಾಲೆಗಳನ್ನು ಒಗ್ಗೂಡಿಸಿ ಶಾಲೆಗಳನ್ನು ನಡೆಸುತ್ತೇವೆಂದು ಕಣ್ಣೊರೆಸುವ ಸೂತ್ರವನ್ನು ಎಣೆದಿದ್ದರೂ. ನಾಡಿನಿಂದ 10 ಕಿ.ಮೀ. ದೂರದಲ್ಲಿ ವಾಸಿಸುವರ ಶಾಲೆಗೆ ಬೀಗ ಜಡಿಯಿತು, ಈಗ ಆ ಶಾಲೆಯ ಕಟ್ಟಡ ಅನೈತಿಕತೆಗಳ ಗೂಡಾಗಿದೆ. ಸೋಲಿಗೇರಿಯಿಂದ 4 ಕಿ.ಮೀ. ದೂರದಲ್ಲಿರುವ ಕುರಿಮಂದೆ ದೊಡ್ಡಿ ಗ್ರಾಮದ ಶಾಲೆಯನ್ನು ಮಕ್ಕಳ ಸಂಖ್ಯೆ ಕಡಿಮೆ' ಎಂಬ ಲೆಕ್ಕ ತೋರಿಸಿ ಈ ವರ್ಷದಿಂದ ಮುಚ್ಚಿದ್ದಾರೆ. ಶಿಕ್ಷಣ ಇಲಾಖೆಯ ಈ ಮಕ್ಕಳು ತಂದೆ-ತಾಯಿಯ ಮಡಿಲಲ್ಲಿ ಸ್ವಗ್ರಾಮದಲ್ಲಿ ಬೆಳೆಯುವ ಮಕ್ಕಳ ಹಕ್ಕುಗಳ ಉಲ್ಲಂಘನೆ. ಬಾಲ್ಯದಲ್ಲೇ ಊರು ತೊರೆದ ಮಕ್ಕಳಿಗೆ ಊರಿನ ಬಗ್ಗೆ ಯಾವ ಮಮಕಾರ ತಾನೇ ಉಳಿಯುತ್ತದೆ? ಸರ್ಕಾರದ ಇಂತಹ ತಳಬುಡವಿಲ್ಲದ ನೀತಿಗಳು ಕಾಡಿನ ಜನರಿಗೆ ಕಾಲದಿಂದ ಕಾಲಕ್ಕೆ ತುಳಿಯುತ್ತಲೇ ಬಂದಿವೆ. ನೆಗಡಿ ಬಂದರೆ ಮೂಗನ್ನು ಕತ್ತರಿಸುವ ಇಂತಹ ನೀತಿಗಳೇ ಬುಡಕಟ್ಟು ಮಕ್ಕಳನ್ನು ಶಾಶ್ವತವಾಗಿ ಅಂಧಕಾರದಲ್ಲಿ ಉಳಿಸುವ ಕಾರ್ಯಕ್ಕೆ ಅಸ್ಥಿಬಾರಗಳಾಗುತ್ತವೆ. ಬೆಂಗಳೂರಿಗರ ವಲಸೆ:- ಕಾಡಿನಿಂದ ನಾಡಿಗೆ ವಲಸೆ ಹೋಗುವುದನ್ನು ನೋಡಿದ್ದೇವೆ. ನಾಡಿನಿಂದ ಕಾಡಿಗೆ ಹೋಗುವವರನ್ನ? ಸದ್ಯದಲ್ಲೇ ಕಾಣಲಿದ್ದೇವೆ. ಅದಕ್ಕೆ ಪೂರ್ವಸಿದ್ಧತೆಯೆಂಬಂತೆ, ಬೆಂಗಳೂರಿನ ಅನೇಕ ಸ್ಥಿತಿವಂತರು ಸೋಲಿಗೇರಿಯ ಜನರು ಬೆವರಸುರಿಸಿ ವಿಂಗಡಿಸಿಕೊಂಡಿದ್ದ ಕೃಷಿ ಭೂಮಿಯನ್ನು ಪುಡಿಕಾಸಿಗೆ ಕೊಂಡು ಸೈಟು, ಜಮೀನು ಮಾಡಿಕೊಳ್ಳುತ್ತಿದ್ದಾರೆ, ತಿಂಗಳಿಗೊಮ್ಮೆ ಅಲ್ಲಿ ಭೇಟಿಕೊಡುತ್ತಾ, ಮುಗ್ಧ ಜನರಿಗೆ ಆಧುನಿಕತೆಯ ಆಸೆ, ಆಮಿಷ ತೋರಿಸುತ್ತಿದ್ದಾರೆ. ಅದೂ ಸಾಲದೆಂಬಂತೆ, ಅದ್ಯಾರೋ ಪುಣ್ಯಾತ್ಮ, ಕೇರಿಗೆ ಅಂಟಿಕೊಂಡಂತೆ 4 ಎಕರೆ ಜಮೀನಿನಲ್ಲಿ 'ಡಾಬಾ'ವೊಂದನ್ನು ಕಟ್ಟುತ್ತಿದ್ದಾನೆ. ಪ್ರಶಾಂತವಾಗಿ ನೆಮ್ಮದಿಯಿಂದಿದ್ದ ಪರಿಸರ ಆಧುನಿಕತೆಯ ಬೇಗುದಿಗೆ ಅಸ್ಥಿಭಾರವಾಗಿಸಿಕೊಂಡಿದೆ. ಅಪಾಯದ ಮುನ್ಸೂಚನೆಯೋ ಎಂಬಂತೆ, ಕಳೆದ ತಿಂಗಳು ಯಾರೋ ಒಬ್ಬ ಹುಡುಗ ಸೋಲಿಗೇರಿಯ ಮುಗ್ಧ ಹುಡುಗಿಯನ್ನು ಕೂಡಿ' ಮಾತಾಡೋಣ ಬಾ' ಎಂದು ಕರೆದು, ಊರಿನವರೆಲ್ಲಾ ಪಂಚಾಯ್ತಿ ನಡೆಸಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ.
ಅನಾದಿಕಾಲದಿಂದ ಕಾಲುದಾರಿಯೂ ಇರದಿದ್ದ ಗ್ರಾಮದ ದುಸ್ಥಿತಿಗೆ ದಾರಿಯಲ್ಲಿ ಎದುರಾದ ಗ್ರಾಮಸ್ಥನೊಬ್ಬ 'ಸ್ವಾಮಿ, ನಾವು ಅದ್ಯಾವ ಜನ್ಮದಲ್ಲಿ ಪಾಪ ಮಾಡಿದ್ವೋ ಏನೋ.... ಈ ಜನ್ಮದಲ್ಲಿ ಈ ಗ್ರಾಮದಲ್ಲಿ ಹುಟ್ಟಿದ್ದೀವಿ....' ಎಂದ ಮಾತೇ ಸಾಕ್ಷಿಯಾಗಿತ್ತು. ಆ ನೊಂದ ಮನಸ್ಸಿನ ಆರ್ತನಾದ. ಈಗಿನ ಸ್ವಾರ್ಥ ರಾಜಕೀಯ ಪುಡಾರಿಗಳ ಕಿವಿಗಳಿಗೆ ಕೇಳುತ್ತದೆಯೇ? ಖಂಡಿತ ಇಲ್ಲ. ನಿಸರ್ಗದ ಮಡಿಲಲ್ಲಿರುವ ಕಾಡಿನ ಮಕ್ಕಳಿಗೆ ಕಾಯಿಲೆಗಳು ಅಪರೂಪ, ಆದರೂ ಆಗೊಂದು, ಈಗೊಂದು ಜ್ವರವೋ... ವಾಂತಿ, ಬೇದಿಯೋ ವಕ್ಕರಿಸಿಕೊಂಡು ಕಾಯಿಲೆ ಬಿದ್ದಾಗ ಅವರಿಗೆ ಆ ದೇವರೇ ದಿಕ್ಕು. ಯಾಕೆಂದರೆ, ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಾಗಿ 10 ಕಿ.ಮೀ ದೂರದ ಸಾತನೂರಿಗೇ ಬರಬೇಕು. ಸರಿಯಾದ ರಸ್ತೆ, ವಾಹನದ ಮುಖವನ್ನೇ ಕಾಣದ ಅವರು ರೋಗಿಗಳನ್ನು ಕಂಬಳಿಯಲ್ಲಿ ಸುತ್ತಿಕೊಂಡು ಹಿಂದೊಬ್ಬರು, ಮುಂದೊಬ್ಬರು ಭುಜದ ಮೇಲೊತ್ತು ತರಬೇಕು. ಪರಿಸ್ಥಿತಿ ವಿಷಮಗೊಂಡರೆ ಮಾರ್ಗಮದ್ಯದಲ್ಲೇ ಪ್ರಾಣಪಕ್ಷಿ ಯಮಲೋಕದ ದಾರಿ ಹಿಡಿದಿರುತ್ತದೆ. ಇಂತಹ ಉದಾಹರಣೆಗಳು ಅವೆಷ್ಟೋ.. ನಾವು ಸಾತನೂರಲ್ಲಿ ಬಸ್ಸಿಳಿದಾಗ ತಿಂಡಿ ತಿಂದು ಮುನ್ನಡೆಯೋಣವೆಂದು ಹೋಟೆಲ್ ಒಂದಕ್ಕೆ ಪ್ರವೇಶಿಸಿದೆವು. ನಮ್ಮಲ್ಲಿ ಕೆಲವರಿಗೆ ಸೋಲಿಗೇರಿಯಿಂದ 6ಕಿ.ಮೀ. ಹತ್ತಿರಕ್ಕೆ ಬಸ್ಸಿದೆಯೆಂದು ತಿಳಿದಿದ್ದರೂ ಅದರ ಸಮಯ ತಿಳಿದಿರಲಿಲ್ಲ ಆದ್ದರಿಂದ ಹೋಟೆಲ್ ಮಾಣಿಯನ್ನು ಕುರಿತು ಸೋಲಿಗೇರಿಗೆ ಎಷ್ಟೊತ್ತಿಗೆ ಬಸ್ಸಿದೆ?' ಎಂದು ಕೇಳಿದರೆ, ಬಸ್ಸಿನ ವೇಳೆ ಗೊತ್ತಿಲ್ಲ ಅದಿರ್ಲಿ ನೀವೇನು ಅಷ್ಟುದೂರ? ಏನು ಕೆಲಸ ನಿಮಗೆ? ಆ ಕಾಡುಕೊಂಪೆಯಲ್ಲಿ ಎಂದು ಕೇಳಿದರು. ನಾವು ನಮ್ಮ ಉದ್ದೇಶ ತಿಳಿಸಿದೆವು. ಆ ವ್ಯಕ್ತಿ 'ನಾವೂ ಇವತ್ತು ಸಾಯಂಕಾಲ ಸೋಲಿಗೇರಿಗೆ ಹೋಗುತ್ತಿದ್ದೇವೆ' ಎಂದರು. ನಮಗೆ ಕುತೂಹಲ ತಡೆಯಲಾರದೆ ಏನು ಕೆಲಸ ಅಲ್ಲಿ' ಎಂದಾಗ ಆತನ ಉತ್ತರ ಗುಂಡು ಪಾರ್ಟಿ ಮಾಡಲಿಕ್ಕೆ'! ಈ ಮಾತನ್ನು ಕೇಳಿಸಿಕೊಂಡ ನಮಗೆ ತೇಜಸ್ವಿಯವರ ಮಾತು ನೆನಪಾಯಿತು. ಅದೊಂದು ಸಾರಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿಯವರನ್ನು ಕುರಿತು ಪ್ರೇಕ್ಷಕರೊಬ್ಬರು ಸಾರ್, ಕಾಡು ಸಂರಕ್ಷಣೆಗೆ ನಾವೇನು ಮಾಡಬೇಕು?' ಎಂದು ಪ್ರಶ್ನಿಸಿದರು. ತಕ್ಷಣ, ತೇಜಸ್ವಿಯವರ ಉತ್ತರ 'ಸುಮ್ಮನಿರಬೇಕು'! ಎಂತಹ ಅರ್ಥ ಪೂರ್ಣ ಉತ್ತರ! ಈ ಮಾತು ಕೇವಲ ಕಾಡು ಸಂರಕ್ಷಣೆಗೆ ಮಾತ್ರವಲ್ಲ. ಕಾಡಿನ ಮಕ್ಕಳು ಅವರ ಸಂಸ್ಕೃತಿ, ಪದ್ಧತಿಗಳ, ನೆಲದ ಸಂರಕ್ಷಣೆಗೂ ಅನ್ವಯಿಸುತ್ತದೆಯಲ್ಲವೇ? ಸೋಲಿಗೇರಿಯ ಪರಿಸ್ಥಿಯನ್ನು ಕಂಡ ಯಾರಿಗಾದರೂ, ಒಂದಷ್ಟು ಪ್ರಶ್ನೆಗಳು ಕಾಡದೇ ಇರವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಆಧುನಿಕತೆಗೆ ಒಳಪಡದೆ, ಒಗ್ಗಿಕೊಳ್ಳದ ಜನರಿಗೆ ಉಳಿಗಾಲವೇ ಇಲ್ಲವೇ? ಪರಿಪೂರ್ಣ, ಸ್ವಾವಲಂಬಿ ಹಳ್ಳಿಯೊಂದು ಸರ್ಕಾರದ ತಿರಸ್ಕಾರಕ್ಕೊಳಪಟ್ಟು ಹೊರಗಿನವರ ಕಾಟ ತಾಳಲಾರದೆ ವಕ್ಕಲೆದ್ದು ಹೋಗುತ್ತಿದ್ದರೆ, ನಾವೆಲ್ಲ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದೇವಲ್ಲಾ? ಇದು ನಾಗರಿಕತೆಯ ಲಕ್ಷಣವೇ? ಸೋಲಿಗೇರಿಯಂತಹ ಅದೆಷ್ಟೋ ಗ್ರಾಮಗಳು ಹೇಳಹೆಸರಿಲ್ಲದೆ, ಕಾಲಗರ್ಭಕ್ಕೆ ಸೇರುತ್ತಾ ಅಭಿವೃದ್ದಿಯೆಂಬ ಮಾಯೆಗೆ ಸಿಕ್ಕು ಬಲಿಯಾಗುತ್ತಿವೆಯೆಲ್ಲಾ? ಈ ವಿನಾಶಕಾರಿ ಅಭಿವೃದ್ದಿ ನಮಗೆ ಬೇಕೇ? ಅವರ ಜೀವನಕ್ಕೆ ನಾವೇನಾದರೂ ಮಾಡಬಹುದೇ......? ಹೌದು, ಮಾಡಬಹುದು. ಸೋಲಿಗೇರಿಯನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳೆಂದರೆ: ಸರ್ಕಾರವು ಹಲವು ವರ್ಷಗಳ ಹಿಂದೆ ಗ್ರಾಮಸ್ಥರಿಗೆ ಮಾತುಕೊಟ್ಟಂತೆ ಪ್ರತೀ ಮನೆಗೆ 2 ಎಕರೆ ಜಮೀನನ್ನು ಹಸ್ತಾಂತರಿಸುವುದು. ಕಾಡುಜನರು ವಾಸಿಸುವ ಪ್ರದೇಶದಲ್ಲಿ ಹೊರಗಿನವರು ಡಾಬಾ, ರೆಸಾರ್ಟ್ ಹೋಟೆಲ್ ನಂತಹ ಅಭಿವೃದ್ಧಿ(?)ಗಳನ್ನು ತಡೆಗಟ್ಟುವುದು. ವನವಾಸಿಗಳು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳಿಂದ ಸಂರಕ್ಷಿಸಲು ಅವರ ಹೊಲಗಳಿಗೆ ಸೌರ ಬೇಲಿಯನ್ನು ಅಳವಡಿಸುವುದು. ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವುದು. ಆದಿವಾಸಿಗಳ ಆಡಿಗಳಲ್ಲಿ ಕುಡಿತವನ್ನು ಕಡ್ಡಾಯವಾಗಿ ನಿಷೇಧಿಸುವುದು. ಜನರಲ್ಲಿ ಕುಡಿತದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. ಮೂಲಭೂತ ಸೌಕರ್ಯಗಳಾದ ನೀರು, ಮನೆ, ವಿದ್ಯುತ್, ಶೌಚಾಲಯಗಳನ್ನು ಸಮರ್ಪಕವಾಗಿ ಒದಗಿಸುವುದು. ಮೊಜು, ಮಸ್ತಿಗೆ ಬರುವವರ ಮೇಲೆ ಹದ್ದಿನ ಕಣ್ಣಿಟ್ಟು ಶಿಕ್ಷಿಸುವುದು. ಮುಖ್ಯವಾಗಿ ಶಿಕ್ಷಣ ಇಲಾಖೆ ಉಳಿತಾಯದ ನಾಟಕವಾಡಿ ಶಾಲೆಗಳನ್ನು ಮುಚ್ಚುವ ಕೆಲಸ ನಿಲ್ಲಿಸಿ ಆದಿವಾಸಿ ಕೇರಿಗಳಲ್ಲಿನ ಶಾಲೆಗಳನ್ನು ಪುನರ್ಜೀವಗೊಳಿಸಿ, ಸೂಕ್ತ ನಿರ್ವಹಣೆ ಮಾಡಬೇಕು. ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಸಂರಕ್ಷಿಸಬೇಕು. ಶಿವರಾಜು, ಪ್ರಮೋದ, ಶಂಕರ್, ಶಶಿಕುಮಾರ್, ರವಿ, ಧನಜಂಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹಾಗೂ ಆನಂದ್ ಎನ್.ಎಲ್. ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಸಿ.ಎಂ.ಆರ್. ಕಾಲೇಜು (ಸ್ವಾಯತ್ತ), ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|