Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಗ್ರಾಮೀಣ ಹೆಣ್ಣು ಮಕ್ಕಳು ಮತ್ತು ಅವರ ಹಕ್ಕುಗಳು

4/14/2018

0 Comments

 
2014ರಲ್ಲಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಇನ್ನೂ 17 ವರ್ಷದ ಮಲಾಲಾ ಯೂಸುಫ್‍ಗೆ ಜಗತ್ತಿನ ಅತ್ಯಂತ ಉನ್ನತ ಪ್ರಶಸ್ತಿ. ಆಕೆಗೆ ಪ್ರಶಸ್ತಿ ಕೊಟ್ಟದ್ದು ಒಂದು ವಿಶಿಷ್ಟ ಕಾರಣಕ್ಕೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ತಡೆಹಿಡಿಯುವುದರ ವಿರುದ್ಧ ಹೋರಾಡಿ ಅವರ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿ ಅವರ ಏಳಿಗೆಗೆ ಶ್ರಮಿಸುತ್ತಿರುವುದಕ್ಕಾಗಿ.  
ಹರ್ಯಾಣದ ಸಾಕ್ಷಿ ಮಾಲಿಕ್ ಕುಸ್ತಿ ಕಲಿಯುತ್ತಿದ್ದಾಗ ಊರ ಜನ ಹಾಸ್ಯ ಮಾಡುತ್ತಿದ್ದರಂತೆ. ಆದರೆ, 2016ರಲ್ಲಿ ನಡೆದ ಒಲಂಪಿಕ್ಸ್‍ನಲ್ಲಿ ಕುಸ್ತಿ ಪಂದ್ಯದಲ್ಲಿ ಸಾಕ್ಷಿ ದೇಶಕ್ಕೆ ಪದಕ ತಂದಿತ್ತಾಗ ಅದೇ ಹಳ್ಳಿಯ ಜನ ಹಬ್ಬ ಮಾಡಿ ನಲಿದರಂತೆ.
ನಮ್ಮ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ತನ್ನ ಮನೆಯವರು ಶೌಚಾಲಯ ಕಟ್ಟಿಸಲೇಬೇಕು ಎಂದು ಮೂರು ದಿನಗಳ ಕಾಲ ಉಪವಾಸ ಕುಳಿತಾಗ ಹಾಸ್ಯ ಮಾಡಿ ನಕ್ಕವರು ಸಾಕಷ್ಟು ಜನ. ತನ್ನದೇ ಮನೆಯ ಯಜಮಾನರ ವಿರುದ್ಧ ಮುಷ್ಕರವೇ ಎಂದವರುಂಟು. ಆದರೆ ಅವಳ ಸುದ್ದಿ ಪತ್ರಿಕೆಗಳಲ್ಲಿ ಬೆಳಕು ಕಂಡಾಗ, ಸರ್ಕಾರದ ಪ್ರತಿನಿಧಿಗಳು ಮನೆಯೆದುರು ಬಂದಾಗ ಶೌಚಾಲಯ ಕಟ್ಟಿಸುವ ಭರವಸೆ ನೀಡಿದರು. ಅಷ್ಟೇ ಅಲ್ಲ ಈ ಸುದ್ದಿ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್‍ನಲ್ಲೂ ಪ್ರತಿಧ್ವನಿಸಿ ಧನಾತ್ಮಕ ಪರಿಣಾಮವನ್ನು ಬೀರಿತು. 

ಹೆಣ್ಣು ಮಕ್ಕಳೆಂದರೆ ಕುಟುಂಬ, ಸಮಾಜ ಅಥವಾ ಯಾವುದಾದರೂ ನಿರ್ದಿಷ್ಟ ಅಧಿಕಾರ ಹೇಳಿದ ರೀತಿಯಲ್ಲೇ ಬದುಕಬೇಕು, ಅಡಿಯಾಳುಗಳಂತೆ ಇರಬೇಕು ಎನ್ನುವ ಭಾವನೆಗಳು ಕಟ್ಟುಪಾಡುಗಳಿಗೆ ಈಗ ಬೆಲೆಯಿಲ್ಲ. ಆದರೆ, ದುರಾದೃಷ್ಟವಶಾತ್, ಹೆಣ್ಣುಮಕ್ಕಳನ್ನು ಬಂಧನದಲ್ಲಿ ಇಡಬೇಕು, ಅವಕಾಶಗಳು, ಅಧಿಕಾರ, ನಿರ್ಧಾರ ಕೈಗೊಳ್ಳಲು ಬಿಡಬಾರದು, ಹೇಳಿದಂತೆ ಅವರಿರಬೇಕು ಎನ್ನುವ ಎಂದಿನದೋ ವಿಶಾಲ ಮನಸ್ಸಿಲ್ಲದ ದಿನಗಳ ಭಾವನೆಗಳು ಈಗಲೂ ಕೆಲವರಲ್ಲಿ ತಮ್ಮ ಪುರುಷ ಪ್ರಧಾನ ಅಧಿಕಾರದ ಶಿಲ್ಕು ಉಳಿಸಿಕೊಂಡಿದೆ ಎಂದರೆ ಅದು ಆ ಜನರ ಮೌಢ್ಯ ಎನ್ನಲೇಬೇಕು ಮತ್ತು ಅವರನ್ನು ಆ ಮೌಢ್ಯದ ಪರೆಯಿಂದ ಹೊರತರಲೇಬೇಕು.

ಹೆಣ್ಣಿದ್ದ ಮನೆಗೆ ಕನ್ನಡಿಯಾತಕ, ಹೆಣ್ಣು ಕಂದವ್ವ ಒಳಹೊರಗು ಓಡಾಡಿದರ ಕನ್ನಡಿ ಹಂಗ ಹೊಳೆವಳು. ಈ ತ್ರಿಪದಿಯಲ್ಲಿನ ಆಶಯ ಪ್ರಾಯಶಃ ಹೆಣ್ಣು ಮಗುವಿಗೆ ಎಲ್ಲ ರೀತಿಯ ಅವಕಾಶಗಳನ್ನು ನೀಡಿದರೆ, ಆಕೆಯೆಂತಹ ಎತ್ತರಕ್ಕೆ ಏರಬಲ್ಲಳು ಎನ್ನುವುದು ಕಾಣುತ್ತದೆ. ಆದರೆ, ಬಹಳಷ್ಟು ಕಡೆ ಇದನ್ನು ತೀರಾ ಸೀಮಿತವಾದ ಅರ್ಥದಲ್ಲಿ ನೋಡಿ, ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಕೇವಲ ಹೆಣ್ಣುಮಕ್ಕಳ ಜವಾಬ್ದಾರಿ ಎಂಬರ್ಥದಲ್ಲಿ ಹೇಳುವುದು ಅಪಾರ್ಥವೇ ಆಗಿದೆ.

ಬೆಂಗಳೂರಿನಲ್ಲಿ 2017ರ ಸೆಪ್ಟಂಬರ್ 14ರಂದು ನಡೆದ ಮಕ್ಕಳ ಹಕ್ಕುಗಳನ್ನು ಕುರಿತು ಶಾಸಕರ ಪ್ರಥಮ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡುತ್ತಾ ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕ ನೀತಿ ಜಾರಿಗೊಳಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಉಮಾಶ್ರೀ ಹೇಳಿದರು. ಇದನ್ನು ಸ್ವಾಗತಿಸುತ್ತಲೇ ಇಂತಹದೊಂದು ನೀತಿಯ ಆವಶ್ಯಕತೆಯಿರುವ ಪರಿಸ್ಥಿತಿ ನಮ್ಮಲ್ಲಿ ಇನ್ನೂ ಇದೆಯಲ್ಲಾ ಎಂದು ನಾವು ಯೋಚಿಸಬೇಕಿದೆ. ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಹೆಣ್ಣುಮಕ್ಕಳ ಇತಿಹಾಸವನ್ನು ತೆಗೆದರೆ ನಾವು ಹೇಗೆ ಅವರನ್ನು ನಡೆಸಿಕೊಂಡಿದ್ದೇವೆ ಎಂಬ ಅರಿವಾಗಿ ತಲೆತಗ್ಗಿಸುವಂತಾಗುತ್ತದೆ.

ಹೆಣ್ಣುಮಕ್ಕಳೆಂದರೆ ಕುಟುಂಬಗಳಿಗೆ ಹೊರೆ ಎಂಬುದನ್ನು ಮೇಲಿಂದ ಮೇಲೆ ಹೇರುತ್ತಾ, ಗಂಡು ಮಕ್ಕಳು ಮತ್ತು ಪುರುಷ ಪ್ರಧಾನತೆಯನ್ನೇ ಎತ್ತಿಹಿಡಿಯುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ, ಮಾಹಿತಿ ಕೊಡದೆ, ನಿರ್ಧಾರಗಳನ್ನು ಕೈಗೊಳ್ಳುವ ಅವಕಾಶವಿಲ್ಲದೆ, ಆಸ್ತಿಯ ಅಧಿಕಾರವನ್ನೂ ಕೊಡದೆ ಹೆಣ್ಣೆಂದರೆ ಕೇವಲ ಕೆಲಸಕ್ಕೆ, ಗಂಡುಗಳ ಭೋಗದ ವಸ್ತುಗಳಾಗಿ ಮಕ್ಕಳನ್ನು ಹೆಡೆಯುವ ಯಂತ್ರಗಳಂತೆ ಕಂಡು ಹೆಣ್ಣಮಕ್ಕಳನ್ನು ಮಾರುವುದು, ಅವರ ಮೇಲೆ ಅತ್ಯಾಚಾರ ಮಾಡುವುದು, ಬಾಲ್ಯವಿವಾಹಕ್ಕೆ, ದೇವದಾಸಿ ಪದ್ಧತಿಗೆ ಸೂಳೆಗಾರಿಕೆಗೆ ದೂಡುವುದೇ ಮೊದಲಾದವುಗಳಿಂದ ಹೆಣ್ಣುಮಕ್ಕಳು ಸದಾ ಕಾಲ ಅಧೀನದಲ್ಲಿಟ್ಟುಕೊಳ್ಳುವಂತೆ ಮಾಡಲಾಗಿದೆ. ಆದರೆ, ಎಲ್ಲ ಕಾಲದಲ್ಲೂ ಇದು ಹೀಗೆಯೇ ಇರಬೇಕೆಂದಿಲ್ಲವೆಂಬುದನ್ನು ಅನೇಕರು ಸಾಧಿಸಿ ತೋರಿದ್ದಾರೆ, ಪ್ರತಿಭಟಿಸಿದ್ದಾರೆ ಮತ್ತು ಕೆಲವು ವ್ಯಕ್ತಿಗಳು ಸಮುದಾಯಗಳು ಈ ಸಂಕುಚಿತತೆಯಿಂದ ಹೊರಬರಲು ಸ್ಪಷ್ಟ ಪ್ರಯತ್ನವನ್ನೂ ಪಟ್ಟಿದ್ದಾರೆ.
 
ಹೆಣ್ಣು ಮಕ್ಕಳ ದಿನ
ಜಗತ್ತಿನ ಎಲ್ಲ ಸಮಾಜಗಳು, ಧರ್ಮಗಳು ಮತ್ತು ಪದ್ಧತಿಗಳಲ್ಲಿ ಹೆಣ್ಣು ಅಥವಾ ಸ್ತ್ರೀಯನ್ನು ತಾಯಿಯೆಂದು, ದೇವತೆಯೆಂದು ಪೂಜ್ಯ ಭಾವನೆಯನ್ನು ತೋರಿರುವುದು ಕಂಡುಬರುತ್ತದೆ. ಆದರೆ, ಅದೇ ಸಮಾಜದ ಜನ ಹೆಣ್ಣುಮಕ್ಕಳನ್ನು ಭೋಗದ ವಸ್ತುವಾಗಿಯೋ, ಸೇವಕರಾಗಿಯೋ ಪರಿಗಣಿಸುವುದು ಪರಿಸ್ಥಿತಿಯ ವ್ಯಂಗ್ಯ. ಇಷ್ಟರ ಮೇಲೆ ಹೆಣ್ಣನ್ನು ಒಂದು ಹೊರೆ ಎಂದು ಬಹಳಷ್ಟು ಕಡೆ ಹೆಣ್ಣು ಭ್ರೂಣವನ್ನೇ ತೆಗೆಸುವುದು, ಹೆಣ್ಣು ಹುಟ್ಟಿದರೆ ಕೊಂದು ಬಿಡುವುದು ಅಥವಾ ಸಾಯಲು ಬಿಡುವುದಾಗುತ್ತಿತ್ತು. 2001ರಲ್ಲಿ 0 ಯಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ಸಾವಿರ ಗಂಡು ಮಕ್ಕಳೆದುರು 927 ಇದ್ದ ಹೆಣ್ಣುಮಕ್ಕಳ ಸಂಖ್ಯೆ 2011ರಲ್ಲಿ 918ಕ್ಕೆ ಇಳಿದಿರುವುದು ನಾವೆಂತಹ ಅಪಾಯದ ಅಂಚಿನಲ್ಲಿದ್ದೇವೆ ಎಂದು ಸೂಚಿಸುತ್ತದೆ (ಜನಗಣತಿ 2011)1. ಇಂತಹವುಗಳನ್ನು ತೊಡೆಯಲು, ತಡೆಯಲು ಕಾನೂನು ಜನಜಾಗೃತಿ ಬಂದ ಮೇಲೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಜನರಿಗೆ ಮಾಹಿತಿಯಿದೆ, ಹೆಣ್ಣು ಶಿಶು ಹತ್ಯೆ, ಹೆಣ್ಣು ಭ್ರೂಣ ಹತ್ಯೆ ತಪ್ಪೆಂದು ಅರಿವಿದೆ. ಆದರೆ, ತಮ್ಮ ಮನೆಯಲ್ಲಿ ಹೆಣ್ಣು ಹುಟ್ಟಿದರೆ ಸಹಿಸಿಕೊಳ್ಳದಿರುವುದು ಹೆಣ್ಣುಮಕ್ಕಳನ್ನು ಕುರಿತು ಅತ್ಯಂತ ನಿಕೃಷ್ಟವಾದ ರೀತಿಯಲ್ಲಿ ನಡೆಸಿಕೊಳ್ಳುವುದು ಆಗುತ್ತಿರುವುದನ್ನು ಗಮನಿಸಿರುವ ವಿಶ್ವಸಂಸ್ಥೆ ಅಕ್ಟೋಬರ್ 11ನ್ನು 2012ರಿಂದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು, ಲಿಂಗ ಸಮಾನತೆಯನ್ನು ತರಬೇಕು, ಹೆಣ್ಣು ಮಕ್ಕಳ ಮೇಲೆ ಆಗುವ ಹಿಂಸೆ, ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯಬೇಕು. ಹೆಣ್ಣು ಮಕ್ಕಳಿಗೆ ಬಲವಂತದ ಮದುವೆಗಳನ್ನು ಮಾಡಬಾರದು, ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಸಂದೇಶ ನೀಡುವುದು ಅದರ ಉದ್ದೇಶ.

ಅದೇ ರೀತಿ ಭಾರತದಲ್ಲೂ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಪರಿಗಣಿಸಿ ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳ ಪ್ರಾಮುಖ್ಯತೆ ಕುರಿತು ಪ್ರಚಾರ ಮಾಡುವುದು ಸಮಾನತೆಯ ಅವಕಾಶಗಳನ್ನು ಸೃಷ್ಟಿಸುವುದು, ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಆವಶ್ಯಕತೆಯನ್ನು ಒತ್ತಿ ಹೇಳುವುದರ ಜೊತೆಯಲ್ಲಿ ಹೆಣ್ಣು ಮಕ್ಕಳಿಗಿರುವ ಕಾನೂನು ಬೆಂಬಲ, ಕಾರ್ಯಕ್ರಮಗಳನ್ನು ಕುರಿತು ವಿವರಿಸುವುದು ಈ ದಿನದ ವಿಶೇಷ.

ಹಾಗೆಯೇ ಸೆಪ್ಟಂಬರ್ ಕೊನೆಯಲ್ಲಿ ಹೆಣ್ಣು ಮಕ್ಕಳ ವಾರ ಎಂದು ಆಚರಿಸುವುದು ವಾಡಿಕೆಯಾಗಿದೆ. ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಅರಿತುಕೊಂಡು ಅವರ ಹಕ್ಕುಗಳನ್ನು ಗೌರವಿಸುತ್ತಾ, ಸಮಸ್ತ ಸಮಾಜಕ್ಕೆ ಹೆಣ್ಣು ಮಕ್ಕಳನ್ನು ಕುರಿತು ತೆಗೆದುಕೊಳ್ಳಬೇಕಾದ ಜಾಗೃತಿ, ಜವಾಬ್ದಾರಿಗಳನ್ನು ಕುರಿತು ತಿಳಿಸುವುದು ಈ ವಾರದ ವೈಶಿಷ್ಟ್ಯ. ಇಂತಹ ಆಚರಣೆಗಳಾದಾಗ, ಹೆಣ್ಣುಮಕ್ಕಳನ್ನು ಕುರಿತು ಹಳ್ಳಿ ಪಟ್ಟಣಗಳಲ್ಲಿ ಮಾತುಕತೆ ನಡೆದು, ಸದ್ಯದ ಪರಿಸ್ಥಿತಿಗಳೇನೆಂದು ಮನೆಮನೆಗಳಲ್ಲಿ ಅವಲೋಕನ ಮಾಡಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ತೊಂದರೆ, ಕೋಟಲೆಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
 
ಹೆಣ್ಣು ಮಕ್ಕಳಿಗಾಗಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಲವು ಯೋಜನೆಗಳು ಮತ್ತು ಕಾಯಿದೆಗಳು
ಪ್ರತಿಯೊಂದು ಮಗುವಿಗೂ ಬಾಲ್ಯ ಪೂರ್ವದಲ್ಲಿ ಚಟುವಟಿಕೆಗಳನ್ನು ದೊರಕಿಸಲು ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ತೊಡೆದು ಹಾಕಲು ಸಮಗ್ರ ಬಾಲವಿಕಾಸ ಯೋಜನೆಯ ಮೂಲಕ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಇದೇ ಯೋಜನೆಯ ಮೂಲಕ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಅಪೌಷ್ಟಿಕತೆ ಇದ್ದಲ್ಲಿ ಅದನ್ನೂ ತಡೆಯಲು ಪೌಷ್ಟಿಕ ಆಹಾರ ಒದಗಿಸುವುದು, ತಾಯಂದಿರ ಸಭೆ ನಡೆಸಿ ಅವರ ಆರೋಗ್ಯ ಪಾಲನೆಯ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಅಂಗನವಾಡಿಗಳ ಮೂಲಕ ಇಡೀ ದೇಶದಲ್ಲಿ ಹೆಣ್ಣು ಮಕ್ಕಳ ಹಿತಕ್ಕಾಗಿಯೇ ವಿಶೇಷ ವಿಮೆ ಕಾರ್ಯಕ್ರಮವಿದ್ದು, ಕರ್ನಾಟಕದಲ್ಲಿ ಅದನ್ನು ಭಾಗ್ಯಲಕ್ಷ್ಮೀ ಯೋಜನೆ ಎಂದು ಗುರುತಿಸಲಾಗಿದೆ. ಇಂತಹದೇ ಉದ್ದೇಶದಿಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನೂ ಆರಂಭಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಸಮುದಾಯದಲ್ಲಿ ಅಲ್ಲಿನ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆ ಹಾಗೂ ಶಿಕ್ಷಕರೊಂದಿಗೆ ಸೇರಿ ಬಾಲ್ಯವಿವಾಹಗಳು ಮತ್ತು ಹೆಣ್ಣು ಮಕ್ಕಳ ಸಾಗಣೆ ತಡೆ ಕುರಿತು ಜಾಗೃತಿಯನ್ನೂ ಮೂಡಿಸುತ್ತಾರೆ. ಇಂತಹವುಗಳ ಪ್ರಾಮುಖ್ಯತೆಯನ್ನು ಅರಿತು ಸಮುದಾಯದ ಜನ ಸಹಕಾರ ನೀಡಬೇಕಿದೆ.

ಶಾಲಾ ಶಿಕ್ಷಣದೊಂದಿಗೆ ಹೆಣ್ಣು ಮಕ್ಕಳಿಗೆ ಆದ್ಯತೆಯಿಂದ ಕಲಿಯಲು ಸರ್ಕಾರಗಳು ವಿಶೇಷವಾದ ಸೌಲಭ್ಯಗಳನ್ನು ಅವರ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ, ರಕ್ಷಣೆ ಮತ್ತು ಮಧ್ಯಾಹ್ನದ ಬಿಸಿಯೂಟ, ಹಾಲು ಕೊಡುವುದರ ಮೂಲಕ ಪೌಷ್ಟಿಕ ಮಟ್ಟವನ್ನು ಕಾಪಾಡಲೂ ಯತ್ನಗಳು ನಡೆದಿವೆ. ಹೆಣ್ಣು ಮಕ್ಕಳಿಗೆ ಪ್ರತಿ ಶಾಲೆಯಲ್ಲಿ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದು ಹೆಣ್ಣು ಮಕ್ಕಳ ಖಾಸಗೀತನಕ್ಕೆ ಗೌರವವನ್ನು ನೀಡುವುದಲ್ಲದೆ ರಕ್ಷಣೆಯನ್ನೂ ಖಾತರಿಗೊಳಿಸುವತ್ತ ಮುಖ್ಯವಾಗಿದೆ. ಈ ಅಂಶಗಳನ್ನು ಮುಂದಿಟ್ಟುಕೊಂಡೇ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯನ್ನು ಹೊರಡಿಸಲಾಗಿದೆ.
ಮಕ್ಕಳನ್ನು ದುಡಿಮೆಗೆ ಹಚ್ಚಬಾರದು ಎಂದು ನಿರ್ದೇಶಿಸಲು ಇರುವುದು ಕಾಯಿದೆ ಮಕ್ಕಳು ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ. ಹೆಣ್ಣುಮಕ್ಕಳನ್ನು ದೀರ್ಘಕಾಲ ನಿಂತು ಅಥವಾ ಒಂದೇ ಸ್ಥಳದಲ್ಲಿ ಕುಳಿತು ಕೆಲಸಕ್ಕೆ ಹಚ್ಚಿದರೆ ಅವರ ಅಂಗಾಂಗಗಳ ಮೇಲೆ ಅದರಲ್ಲೂ ಗರ್ಭಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪತ್ತೆಯಾಗಿದೆ. ಹೀಗಾಗಿ ಬೆಳೆಯುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ದೂಡಬಾರದು ಎಂದು ರಾಷ್ಟ್ರೀಯ ಬಾಲಕಾರ್ಮಿಕ ಪುನರ್ವಸತಿ ಕಾರ್ಯಕ್ರಮವನ್ನು ಸರ್ಕಾರಗಳು ನಡೆಸುತ್ತಿದೆ.

ಹೆಣ್ಣು ಮಕ್ಕಳ ರಕ್ಷಣೆಗೆಂದೇ ಜಾರಿಯಲ್ಲಿರುವ ಪ್ರಮುಖವಾದ ಕಾಯಿದೆಗಳು ಬಾಲ್ಯವಿವಾಹ ನಿಷೇಧ ಕಾಯಿದೆ, ಲೈಂಗಿಕ ಶೋಷಣೆಯ ವಿರುದ್ಧ ಮಕ್ಕಳ ರಕ್ಷಣೆ ಕಾಯಿದೆ ಮತ್ತು ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ. ಈ ಎಲ್ಲದರಲ್ಲೂ ಪ್ರಮುಖವಾಗಿ ಹೇಳುವ ಅಂಶ 18 ವರ್ಷದೊಳಗಿನವರೆಲ್ಲರೂ ಮಕ್ಕಳು. ಅದರಲ್ಲೂ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಯತ್ನಿಸಿದರೆ, ಅಥವಾ ಅಂತಹ ಮಕ್ಕಳನ್ನು ಯಾವುದೇ ಕಾರಣಕ್ಕೆ ಅಪಹರಿಸಿ ಮಾರಾಟ ಮಾಡಲು ಯತ್ನಿಸಿದರೆ, ಅಂತಹ ಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಾಡಲು ಯತ್ನಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ತೀವ್ರವಾದ ಶಿಕ್ಷೆಗಳನ್ನು ನೀಡಲು ಕಾಯಿದೆ ನಿರ್ದೇಶಿಸಿದೆ. ಹೀಗಾಗಿ ಯಾರೇ ಆಗಲಿ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿರುವ ಪ್ರಕರಣಗಳು ಕಂಡು ಬಂದಲ್ಲಿ, ಅಥವಾ ಅನುಮಾನವಿದ್ದಲ್ಲಿ ಭಾರತ ಸರ್ಕಾರದ್ದೇ ಪ್ರಾಯೋಜನೆಯಲ್ಲಿ ನಡೆಸಲಾಗುತ್ತಿರುವ ಚೈಲ್ಡ್‍ ಲೈನ್ 1098ಕ್ಕೆ ದೂರವಾಣಿ ಮೂಲಕ ಯಾವುದೇ ಹಳ್ಳಿ ಪಟ್ಟಣದಿಂದ ಕೂಡ ಕರೆ ಮಾಡಿ ದೂರು ನೀಡಬಹುದು. ಇದು ಉಚಿತ ಕರೆಯಾಗಿದ್ದು, ದೂರು ಕೊಟ್ಟವರ ಯಾವುದೇ ವಿವರಗಳನ್ನು ಎಂತಹದೇ ಸಂದರ್ಭದಲ್ಲೂ ಬಹಿರಂಗಪಡಿಸಲಾಗುವುದಿಲ್ಲ.
​
ಹೆಣ್ಣು ಮಕ್ಕಳು ಎದುರಿಸುತ್ತಿರುವ ತೊಂದರೆಗಳು ಅವರ ಹುಟ್ಟುವುದಕ್ಕೆ ಮೊದಲಿಂದಲೂ ಗರ್ಭದಿಂದಲೇ ಆರಂಭಿಸಿ ಬೆಳೆಯುತ್ತಿರುವ ಪ್ರತಿ ಹೆಜ್ಜೆಯಲ್ಲೂ ಈಗಲೂ ಎದುರಿಸುತ್ತಿರುವುದು ಪರಿಸ್ಥಿತಿಯ ವಿಪರ್ಯಾಸ. ಭಾರತದ ಸಂವಿಧಾನದಲ್ಲಿ ಖಾತರಿಪಡಿಸಿಲಾಗಿರುವ ಎಲ್ಲ ಹಕ್ಕುಗಳನ್ನು ಹೊಂದಿದ್ದರೂ ಹೆಣ್ಣುಮಕ್ಕಳು ಮತ್ತು ಸ್ತ್ರೀಯರನ್ನು ಈ 21ನೇ ಶತಮಾನದಲ್ಲೂ ಹಿಂದೆಳೆಯುತ್ತಿರುವ ಸಮಾಜದ ಮನೋಭಾವ ಬದಲಾಗಲೇಬೇಕಿದೆ. ಪ್ರಾಯಶಃ ಮಹಿಳಾ ಪ್ರಗತಿಯನ್ನು ಸಹಿಸಲಾಗದ ಪುರುಷ ಪ್ರಧಾನ ಸಮಾಜವನ್ನು ನೋಡಿಯೇ 1927ರಲ್ಲೇ ಒಂದು ಸಮುದಾಯದ ಅಭಿವೃದ್ಧಿಯನ್ನು ನಾನು ಆ ಸಮುದಾಯದ ಮಹಿಳೆಯರು ಸಾಧಿಸಿರುವ ಪ್ರಗತಿಯನ್ನು ನೋಡಿ ಅಳೆಯುತ್ತೇನೆ ಎಂದು ಡಾ.  ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವುದು ಬಹಳ ಸೂಕ್ತವಾಗಿದೆ2.
 
ಹೆಣ್ಣು ಮಕ್ಕಳು, ಪರಿಸ್ಥಿತಿ ಮತ್ತು ಸಾಧನೆ
ಜನಗಣತಿ 2011ರಂತೆ ಭಾರತದಲ್ಲಿ 120 ಕೋಟಿ ಜನರಿದ್ದಾರೆ. (ಇದರಲ್ಲಿ ಶೆ.70ರಷ್ಟು ಜನ ಇರುವುದೇ ಗ್ರಾಮೀಣ ಪ್ರದೇಶಗಳಲ್ಲಿ). ಒಟ್ಟು ಜನಸಂಖ್ಯೆಯಲ್ಲಿ ಶೆ.39 ಮಕ್ಕಳಿದ್ದಾರೆ (18 ವರ್ಷದೊಳಗಿನವರೆಲ್ಲಾ ಮಕ್ಕಳು3). ಈ ಒಟ್ಟು ಮಕ್ಕಳಲ್ಲಿ ನಗರ ಗ್ರಾಮೀಣ ಪ್ರದೇಶದಲ್ಲಿರುವ ಹೆಣ್ಣುಮಕ್ಕಳ ಸರಾಸರಿಯನ್ನು ನೋಡೋಣ. 

Picture
ಒಟ್ಟು ಮಕ್ಕಳಲ್ಲಿ ಗ್ರಾಮೀಣ ಮಕ್ಕಳ ಪಾಲು ಪ್ರತಿಶತ 72ರಷ್ಟಿದ್ದಾರೆ. ಒಟ್ಟು ದೇಶದ ಜನಸಂಖ್ಯೆಯಲ್ಲಿ ಗ್ರಾಮೀಣ ಹೆಣ್ಣುಮಕ್ಕಳು ಪ್ರತಿಶತ 13 ಇದ್ದು, ಗ್ರಾಮೀಣ ಮಕ್ಕಳಲ್ಲಿ ಹೆಣ್ಣುಮಕ್ಕಳಿರುವುದು ಪ್ರತಿಶತ 47.

ಹೆಣ್ಣುಮಕ್ಕಳನ್ನು ಕುರಿತು ನಮ್ಮಲ್ಲೇಕೆ ಭಾರೀ ಆತಂಕ ಉಂಟಾಗಿದೆ ಎನ್ನುವುದನ್ನು ನಮ್ಮ ದೇಶದಲ್ಲಿನ ಲಿಂಗ ಪ್ರಮಾಣವನ್ನು ಗಮನಿಸಿದಾಗ ತಿಳಿಯುತ್ತದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಲಿಂಗ ಪ್ರಮಾಣ ಕೇವಲ 943 ಇದ್ದು, ನಗರಗಳಲ್ಲಿ ಈ ಪ್ರಮಾಣ 929ರಷ್ಟು ಕೆಳಗಿದೆ. ಹಾಗೆಂದು ಗ್ರಾಮೀಣ ಪ್ರದೇಶಗಳಲ್ಲಿ ಇದೇನೂ ಉತ್ತಮವಾಗಿಲ್ಲ ಅದು 949ರಷ್ಟಿದೆ. (ಲಿಂಗ ಪ್ರಮಾಣವೆಂದರೆ ಪ್ರತಿ 1000 ಪುರುಷರೆದುರು ಇರುವ ಒಟ್ಟು ಸ್ತ್ರೀಯರು). 18 ವರ್ಷದೊಳಗಿನವರಲ್ಲಿ ಈ ಪ್ರಮಾಣ ನಮ್ಮನ್ನು ಇನ್ನೂ ಚಿಂತೆಗೆ ದೂಡುತ್ತಿದೆ. ನಗರಗಳಲ್ಲಿ 18 ವರ್ಷದೊಳಗಿನವರ ಲಿಂಗ ಪ್ರಮಾಣ 908. ಗ್ರಾಮೀಣ ಪ್ರದೇಶಗಳಲ್ಲಿ 912 ಇದ್ದರೆ, ನಗರಗಳಲ್ಲಿದು 897ಕ್ಕೆ ಕುಸಿದಿದೆ. ಹೀಗಾಗಿ, ಹೆಣ್ಣುಮಕ್ಕಳ ಬದುಕು, ಆರೋಗ್ಯ, ಶಿಕ್ಷಣ ಬೆಳವಣಿಗೆಯತ್ತ ಎಲ್ಲರೂ ಗಮನ ಹರಿಸಬೇಕಿದೆ. ಹೀಗಾಗಿ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರ, ಬಾಲ್ಯವಿವಾಹ ಮತ್ತು ಬಹಳ ಬೇಗ ಹೆಣ್ಣುಮಕ್ಕಳು ತಾಯಂದಿರಾಗುವುದನ್ನು ತಡೆಯಬೇಕು ಮತ್ತು ತಪ್ಪಿಸಲೇಬೇಕು.

ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಗಳಲ್ಲಿ ಹೆಣ್ಣುಮಕ್ಕಳು ಶಾಲೆಗೆ ಸೇರುತ್ತಿದ್ದಾರೆ. ತಾರತಮ್ಯದ ಕರಿನೆರಳಿನಲ್ಲೇ ಲಕ್ಷಗಟ್ಟಲೆ ಮಕ್ಕಳು 8ನೇ ತರಗತಿಯ ತನಕ ಮುನ್ನಡೆದರೂ, ಪ್ರೌಢಶಾಲೆಗಳು ದೂರವಾದಂತೆ ಮನೆಯಲ್ಲೇ ಉಳಿಯುವುದು ಈಗಲೂ ತಪ್ಪಿಲ್ಲ. ಆದಾಗ್ಯೂ ಪೋಷಕರ ಬೆಂಬಲವಿರುವ ಮತ್ತು ಶಿಕ್ಷಣ ಮುಂದುವರೆಸುವ ಅಭಿಲಾಷೆಯಿರುವ ಸಾಕಷ್ಟು ಸಂಖ್ಯೆಯಲ್ಲಿ ಬಾಲಕಿಯರು ಮುಂದಿನ ವಿಧ್ಯಾಭ್ಯಾಸಕ್ಕೆ ಸಾಗಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳಿದ್ದಾರೆ. ಅದು ಕೃಷಿಯಿಂದ ಹಿಡಿದು ಉಪಗ್ರಹ ಉಡಾವಣೆಯಿರಬಹುದು; ಕ್ರೀಡೆ, ಸಂಗೀತ, ಕಲೆಯಿಂದ ಹಿಡಿದು ಆಡಳಿತವಿರಬಹುದು ಎಲ್ಲದರಲ್ಲೂ ಹೆಣ್ಣುಮಕ್ಕಳು ತಮ್ಮಿಂದಲೂ ಎಲ್ಲವೂ ಸಾಧ್ಯ ಎಂದು ತೋರುತ್ತಿದ್ದಾರೆ. ನಮ್ಮ ದೇಶದಲ್ಲಿ ಸಧ್ಯ 2015ರಿಂದ ಚಾಲ್ತಿಯಲ್ಲಿರುವ ಬೇಟಿ ಬಚಾವ್ ಬೇಟಿ ಪಡಾವೋ ಪ್ರಚಾರ ಯೋಜನೆ ಹೆಣ್ಣು ಮಕ್ಕಳನ್ನು ರಕ್ಷಿಸಲು ಮತ್ತು ಹೆಣ್ಣಮಕ್ಕಳ ಪ್ರಾಮುಖ್ಯತೆ, ಸಾಧನೆಗಳನ್ನು ತೋರಲು ನಡೆದಿದೆ.

ಈಗೀಗ ಇಡೀ ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆದಿದೆ. ಇಲ್ಲಿನ ಬಹಳ ಮುಖ್ಯವಾದ ಒಂದು ಕೆಲಸ ಎಲ್ಲರೂ ತಮ್ಮ ನೆಲೆಗಳಲ್ಲೇ ಇರುವ ಶೌಚಾಲಯಗಳನ್ನು ಬಳಸಬೇಕು ಎಂಬುದು. ಆದರೆ, ವಾಸ್ತವವಾಗಿ ನಮ್ಮ ಹಳ್ಳಿ ಪಟ್ಟಣಗಳಲ್ಲಿ ಈಗಲೂ ಶೌಚಕ್ಕೆ ಬಯಲಿಗೆ ಹೋಗುವವರೇ ಇದ್ದಾರೆ. ಹೆಣ್ಣುಮಕ್ಕಳಿಗೆ ಬಯಲು ಶೌಚಾಲಯದ ಅಪಾಯಗಳು ಅನೇಕ. ಕತ್ತಲಿರುವಾಗಲೇ ಹೋಗಬೇಕೆನ್ನುವ ಇರಾದೆ. ಆಗ, ಕಲ್ಲು ಮುಳ್ಳು ಚುಚ್ಚುವುದರಿಂದ ಹಿಡಿದು ಹಾವು ಚೇಳು ಕಡಿತ, ಕೆಲವೊಮ್ಮೆ ಪ್ರಾಣಿಗಳ ಬಾಧೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಕಾಮುಕರ ಕಾಟ. ಇಂತಹವು ಆಗಬಾರದೆಂದರೆ ತಮ್ಮ ತಮ್ಮ ಮನೆಗಳ ನೆರೆಯಲ್ಲೇ ಶೌಚಾಲಯವಿದ್ದಲ್ಲಿ ಒಳಿತು, ಅದು ಆರೋಗ್ಯಕರ ಅಭ್ಯಾಸ ಎಂದೂ ಹೇಳಲಾಗಿದೆ. ಹೆಣ್ಣು ಮಕ್ಕಳಿಗೆ ಇದಂತೂ ಖಂಡಿತಾ ರಕ್ಷಣೆ ನೆಮ್ಮದಿ ಒದಗಿಸುವುದರಲ್ಲಿ ಎರಡು ಮಾತಿಲ್ಲ. ನಿಮಗೆ ತಿಳಿದಿರಬಹುದು, ಹರ್ಯಾಣ ರಾಜ್ಯದಲ್ಲಿ ಶೌಚಾಲಯ ಇಲ್ಲದಿದ್ದರೆ ಮದುವೆಗೆ ಹೆಣ್ಣು ಕೊಡುವುದಿಲ್ಲ ಎಂಬ ಆಂದೋಲನ ಆರಂಭವಾಯಿತು. ಅದರ ಪರಿಣಾಮ ಶೌಚಾಲಯಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿತು. ಶೌಚಾಲಯ ಇಲ್ಲ ಎಂಬ ಕಾರಣದಿಂದ ಮದುವೆಯಾದ ಮನೆಯನ್ನು ಬಿಡಲು ವಧುಗಳು ತಯಾರಾದಾಗ ಸಮಾಜವೂ ಎಚ್ಚೆತ್ತುಕೊಂಡಿತು. ಟಾಯ್ಲೆಟ್ - ಏಕ್ ಪ್ರೇಮ್ ಕಹಾನಿ (2017) ಚಲನಚಿತ್ರ ಮನೆಯಲ್ಲಿ ಶೌಚಾಲಯ ಬೇಕೇಬೇಕು ಎಂದು ಆಗ್ರಹಿಸುವ ಹೆಣ್ಣುಮಗಳು ಮತ್ತು ಅದಕ್ಕೆ ಮದುವೆಯಾದ ಪುರುಷ, ಕುಟುಂಬ ಮತ್ತು ಸಮುದಾಯ ಸ್ಪಂದಿಸುವ ವಿವಿಧ ಬಗೆಗಳನ್ನು ಚಿತ್ರಿಸಲಾಗಿದೆ. ಕೊನೆಗೂ ಪ್ರೀತಿಯೊಂದಿಗೆ ಆರೋಗ್ಯ, ರಕ್ಷಣೆ, ಮರ್ಯಾದೆಯೇ ಗೆಲ್ಲುತ್ತದೆ.
 
ಹೆಣ್ಣು ಮಕ್ಕಳಿಗಾಗಿ ಗ್ರಾಮೀಣ ಮಟ್ಟದಲ್ಲಿ ಏನಾಗಬೇಕಿದೆ?
ನಮ್ಮ ದೇಶದ ಆರಂಭದ ಮಟ್ಟದ ಸರ್ಕಾರ ಗ್ರಾಮಪಂಚಾಯಿತಿಗಳು ಜನರಿಗೆ ಹತ್ತಿರದಲ್ಲಿರುವ ಈ ಸರ್ಕಾರ ತನ್ನ ಎಲ್ಲ ಪ್ರಜೆಗಳ ಹಿತವನ್ನು ಕಾಯ್ದುಕೊಳ್ಳಲೇಬೇಕು. ಮಕ್ಕಳೂ ಪ್ರಜೆಗಳೆ. (ನೋಡಿ ಭಾರತ ಸಂವಿಧಾನದ ಪರಿಚ್ಛೇದ 5). ಈ ಪ್ರಜೆಗಳು ಮತ ಚಲಾಯಿಸದಿದ್ದರೂ ಸರ್ಕಾರದ ಎಲ್ಲ ಸೇವೆಗಳು, ಸೌಲಭ್ಯಗಳಿಗೆ ಭಾಗಸ್ಥರೇ ಆಗಿದ್ದಾರೆ. ಈ ಮೇಲಿನ ಎಲ್ಲ ಚರ್ಚೆಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ಹೆಣ್ಣುಮಕ್ಕಳನ್ನು ಕುರಿತು ವಿಶೇಷವಾದ ಗಮನ, ಕಾಳಜಿ ಮತ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ.
  • ಪ್ರತಿ ಗ್ರಾಮಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಇರುವ ಮಕ್ಕಳನ್ನು ಕುರಿತು ಖಚಿತವಾದ ಅಂಕಿಸಂಖ್ಯೆಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿ ತೊಂದರೆಯಲ್ಲಿರುವ ಹೆಣ್ಣಮಕ್ಕಳನ್ನು ಕುರಿತು ಅರಿತುಕೊಂಡು ತನ್ನ ಅಧಿಕಾರ ವ್ಯಾಪ್ತಿಯಲ್ಲೇ ಇರುವ ಕಾರ್ಯಕ್ರಮ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಸಹಾಯದಿಂದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲೇಬೇಕು.
  • ಎಲ್ಲ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ರೋಗ ನಿರೋಧಕಗಳನ್ನು ಹಾಕಿಸುವುದನ್ನು ಮತ್ತು ಹೆಣ್ಣುಮಕ್ಕಳು ಅನಾರೋಗ್ಯಗೊಂಡಾಗ ತುರ್ತಾಗಿ ಚಿಕಿತ್ಸೆಗೆ ಏರ್ಪಾಡು ಮಾಡುವುದು.
  • ಯಾವುದಾದರೂ ಹೆಣ್ಣುಮಗು ಹಣಕಾಸಿನ ತೊಂದರೆಯಿಂದಾಗಿ ಶಿಕ್ಷಣಕ್ಕೆ ತೊಡಗಿಕೊಳ್ಳಲು ಕಷ್ಟಪಡುತ್ತಿದ್ದರೆ ಅಂತಹವರಿಗೆ ಪಂಚಾಯಿತಿಯ ನಿಧಿಯಿಂದ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಅಥವಾ ಸಮಾಜಕಲ್ಯಾಣ ಇಲಾಖೆಯೇ ಮೊದಲಾದವುಗಳಿಂದ ಸೂಕ್ತವಾದ ನೆರವನ್ನು ಒದಗಿಸಲೇಬೇಕು.
  • ಪ್ರತಿ ಗ್ರಾಮಪಂಚಾಯಿತಿ ಅಥವಾ ನಗರಗಳ ಸ್ಥಳೀಯ ಸರ್ಕಾರವು ಸ್ವಯಂಸೇವಾ ಸಂಘಟನೆಗಳು, ಮಹಿಳಾ ಸಂಘಟನೆಗಳ ಸಹಾಯದಿಂದ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯವಿವಾಹಗಳು ಜರುಗದಂತೆ, ಯಾವುದೇ ಮಗುವಿನ ಸಾಗಣೆ ಮಾರಾಟ ಆಗದಂತೆ ತಡೆಯಲು ಮುಂದಾಗಬೇಕು. ಯಾವುದೇ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಶೋಷಣೆಯೇ ಮೊದಲಾದವು ಆದಲ್ಲಿ ಆ ಕುರಿತು ದೂರು ನೀಡಿ ತಪ್ಪಿತಸ್ಥರನ್ನು ಬಂಧಿಸಲು ಒತ್ತಾಯಿಸಬೇಕು. ಇದಕ್ಕಾಗಿ ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಘಟಕಗಳನ್ನು ಪಂಚಾಯಿತಿಯ ಸಮಿತಿಯಡಿ ರಚಿಸಿಕೊಂಡು ಕಾರ್ಯೋನ್ಮುಖರಾಗಬೇಕು.
  • ಪ್ರತಿ ಗ್ರಾಮಪಂಚಾಯಿತಿಯು ಮಕ್ಕಳ ಹಕ್ಕುಗಳ ಗ್ರಾಮಸಭೆ ಮತ್ತು ಮಹಿಳಾ ಗ್ರಾಮಸಭೆಗಳನ್ನು ನೆಪ ಮಾತ್ರಕ್ಕೆ ಮಾಡದೆ, ಅಲ್ಲಿ ಹೆಣ್ಣು ಮಕ್ಕಳ ವಿಚಾರಗಳನ್ನು ಕೂಲಂಕುಶವಾಗಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕು.
  • ಹೆಣ್ಣು ಮಕ್ಕಳಿಗಾಗಿ ಇರುವ ವಿವಿಧ ಇಲಾಖೆಗಳ ಯೋಜನೆಗಳನ್ನು ತಿಳಿದುಕೊಂಡು ಸಂಬಂಧಪಟ್ಟವರ ಮೂಲಕ ಪ್ರಚಾರ ನಡೆಸಬೇಕು.
  • ಹೆಣ್ಣು ಮಕ್ಕಳ ಹಕ್ಕುಗಳನ್ನು ಕುರಿತು ಚರ್ಚೆ, ಆಟೋಟಗಳನ್ನು ನಡೆಸಿ ಅವರ ಪ್ರತಿಭೆಗಳನ್ನು ಎತ್ತಿಹಿಡಿದು ಪ್ರೋತ್ಸಾಹಿಸಬೇಕು.
  • ಬಹಳ ಮುಖ್ಯವಾಗಿ ಊರಿನಲ್ಲಿರುವ ಹುಡುಗರಿಗೆ ಹೆಣ್ಣು ಮಕ್ಕಳನ್ನು ಸಮನಾಗಿ ಕಾಣುವ ಮನೋಭಾವವನ್ನು ಬೆಳೆಸುವ ದಿಶೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು.
 
ಮಕ್ಕಳ ಹಕ್ಕುಗಳ ಜಾರಿಗಾಗಿ ಕ್ರಿಯಾ ಯೋಜನೆಗಳು
ಎಲ್ಲ ಮಕ್ಕಳ ಹಿತವನ್ನು ಬಯಸಿ ವಿಶ್ವಸಂಸ್ಥೆ 1989ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಹೊರಡಿಸಿತು. ಮಕ್ಕಳಿಗಾಗಿ ಬದುಕು, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವ ಹಕ್ಕುಗಳನ್ನು ಈ ಒಡಂಬಡಿಕೆ ಖಾತರಿಯಾಗಿ ಒದಗಿಸಲೇಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚನೆಯನ್ನೂ ನೀಡಿತು. ಭಾರತ ಈ ಒಡಂಬಡಿಕೆಗೆ 1989ರಲ್ಲಿ ಸಹಿ ಮಾಡಿತು. ಮಕ್ಕಳಿಗಾಗಿ ಕ್ರಿಯಾ ಯೋಜನೆ ಎಂದರೇನು? ಅದನ್ನು ಜಾರಿ ಮಾಡುವುದು ಎಂದರೇನು? ಜಾರಿ ಮಾಡುವುದು ಹೇಗೆ? ಯಾರು ಈ ಜವಾಬ್ದಾರಿ ತೆಗೆದುಕೊಳ್ಳಬೇಕು? ಎಷ್ಟು ಕಾಲದೊಳಗೆ ಏನೇನನ್ನು ಸಾಧಿಸಬೇಕು? ಯಾಕೆ ಮಾಡಬೇಕು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು 1990ರ ಸೆಪ್ಟಂಬರ್ 29-30ರಂದು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಮಕ್ಕಳಿಗೆ ಸೂಕ್ತವಾದ ಜಗತ್ತು ಎಂಬ ಶೀರ್ಷಿಕೆಯಡಿ ಸಭೆ ಸೇರಿದ್ದರು. ಹೀಗೆ ಸೇರಿದ ವಿಶ್ವದ ಮುಖ್ಯಸ್ಥರು ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಮೂಲಕ ಮಕ್ಕಳಿಗೆ ಕೊಟ್ಟಿರುವ ಭರವಸೆಗಳನ್ನು 90ರ ದಶಕದಲ್ಲಿ ಈಡೇರಿಸುವ ದಿಶೆಯಲ್ಲಿ ರಾಷ್ಟ್ರಗಳು ಏನು ಮಾಡಬೇಕು ಎನ್ನುವುದನ್ನು ಕುರಿತು ಕ್ರಿಯಾ ಯೋಜನೆಯನ್ನು ನಿರ್ಮಿಸಿದರು4.

ಈ ಕ್ರಿಯಾಯೋಜನೆಯ ಮುಖ್ಯ ಉದ್ದೇಶ ಎಲ್ಲ ರಾಷ್ಟ್ರಗಳು ತಮ್ಮ ದೇಶಗಳ ವಿವಿಧ ಹಿನ್ನೆಲೆಗಳಲ್ಲಿರುವ ಮಕ್ಕಳ ಪರಿಸ್ಥಿತಿಗಳನ್ನು ತಿಳಿದುಕೊಂಡು, ರಾಷ್ಟ್ರೀಯ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ಯಾವ ಯಾವ ಪರಿಸ್ಥಿತಿಗಳಲ್ಲಿ ಬದಲಾವಣೆಗಳು ಎಂತಹ ಪ್ರಮಾಣದಲ್ಲಿ ಆಗಬೇಕು ಎಂದು ಮೊದಲೇ ನಿರ್ಧರಿಸಿಕೊಂಡು ಯೋಜನೆಗಳನ್ನು ತಯಾರಿಸಬೇಕು ಎಂದು ಬಯಸಲಾಗಿತ್ತು. ಈ ಕ್ರಿಯಾ ಯೋಜನೆಯನ್ನು ಹತ್ತಿರದಿಂದ ಗಮನಿಸಿದರೆ, ಅದರಲ್ಲಿ ಬಹಳಷ್ಟು ವಿಚಾರಗಳು ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ರಚಿಸಿದ ಹಾಗೆ ಕಾಣುತ್ತದೆ. ಬಹಳಷ್ಟು ದಶಕಗಳಿಂದ ತಿರಸ್ಕಾರಕ್ಕೆ, ತಾರತಮ್ಯಕ್ಕೆ ಗುರಿಯಾಗಿರುವ ಹೆಣ್ಣುಮಕ್ಕಳು, ಅದರಲ್ಲೂ ಗ್ರಾಮೀಣ, ಬಡ ಹಿಂದುಳಿದ ಜಾತಿ ವರ್ಗಗಳ ಹೆಣ್ಣುಮಕ್ಕಳ ಒಳಿತಿಗಾಗಿಯೇ ಈ ಯೋಜನೆ ಎನ್ನಬಹುದು. ಬಹಳ ಮುಖ್ಯವಾಗಿ ಈ ಕ್ರಿಯಾ ಯೋಜನೆ ಸೂಚಿಸುವುದು ಈ ಮುಂದಿನವುಗಳನ್ನು ಸಾಧಿಸಬೇಕು ಎಂದು ಶಿಶುಮರಣ ಮತ್ತು ಮಕ್ಕಳ ಮರಣಗಳನ್ನು ತಗ್ಗಿಸುವುದು, ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ತಗ್ಗಿಸುವುದು, ಬಾಲ್ಯವಿವಾಹಗಳನ್ನು ನಿಲ್ಲಿಸುವುದು; ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು, ಎಲ್ಲೆಡೆ ಶುದ್ಧ ಕುಡಿಯುವ ನೀರು ಒದಗಿಸುವುದು ಹಾಗೂ ಶೌಚಾಲಯಗಳನ್ನು ಉಪಯೋಗಿಸುವುದನ್ನು ಉತ್ತೇಜಿಸುವುದು ಮತ್ತು ರೋಗ ನಿರೋಧಕಗಳನ್ನು ಹಾಕಿಸುವುದು ಮತ್ತು ಅಂಗವಿಕಲತೆಯನ್ನು ತಡೆಯುವುದು, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮಾರಾಟ ಮತ್ತು ಸಾಗಣೆ ತಡೆಯುವುದು ಮತ್ತು ಎಲ್ಲ ಮಕ್ಕಳಿಗೆ ಶಿಕ್ಷಣದ ಅವಕಾಶಗಳನ್ನು ಒದಗಿಸುವುದು ಹಾಗೂ ವಯಸ್ಕರ ಶಿಕ್ಷಣವನ್ನು ಖಾತರಿಪಡಿಸುವುದು; ಮಕ್ಕಳನ್ನು ಅತ್ಯಂತ ದುರವಸ್ಥೆಯ ಪರಿಸ್ಥಿತಿಗಳಿಂದ ಹೊರತರಬೇಕು ಮತ್ತು ಮಕ್ಕಳನ್ನು ಸಶಸ್ತ್ರ ಸಂಘರ್ಷಗಳಿಗೆ ದೂಡದಂತೆ ತಡೆಯುವುದು; ಮಕ್ಕಳ ಆಟೋಟಗಳಿಗೆ ಅವಕಾಶ ಕಲ್ಪಿಸುವುದು, ಮಕ್ಕಳ ಭಾವನೆಗಳನ್ನು ಕೇಳಲು ಪರಿಸರ ನಿರ್ಮಾಣ ಮಾಡುವುದೇ ಮೊದಲಾದವು ಇದರಲ್ಲಿ ಇದೆ. ಇಂತವುಗಳನ್ನು ಜಾರಿ ಮಾಡಲು ಎಲ್ಲ ರಾಷ್ಟ್ರಗಳು ನಿರ್ಮಿಸುವ ಯೋಜನೆಗಳನ್ನು ಜಾರಿ ಮಾಡಲು, ಉಸ್ತುವಾರಿ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಕೂಡಾ ಸೂಚಿಸಲಾಗಿತ್ತು.

ಈ ಎಲ್ಲ ವಿಚಾರಗಳನ್ನು ಎದುರಿಟ್ಟುಕೊಂಡು ಭಾರತ ಸರ್ಕಾರ 1993ರಲ್ಲಿ ಮೊದಲ ರಾಷ್ಟ್ರೀಯ ಮಕ್ಕಳ ಕ್ರಿಯಾ ಯೋಜನೆಯನ್ನು ರೂಪಿಸಿತ್ತು. 2003ರಲ್ಲಿ ಮತ್ತು ಈಗ 2016ರಲ್ಲಿಯೂ ಇಂತಹ ಕ್ರಿಯಾ ಯೋಜನೆಗಳು ರಾಷ್ಟ್ರ ಮಟ್ಟದಲ್ಲಿ ಹೊರಬಂದಿದೆ. ಕರ್ನಾಟಕ ಸರ್ಕಾರವೂ 1994ರಲ್ಲಿ ಮತ್ತು 2003ರಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ ರಾಜ್ಯದ ಮಕ್ಕಳ ಪರಿಸ್ಥಿತಿಗಳನ್ನು ಉತ್ತಮಪಡಿಸಲು ಸಂಕಲ್ಪ ತೊಟ್ಟಿತ್ತು. ಇಂತಹ ಕ್ರಿಯಾಯೋಜನೆಗಳನ್ನು ಮುಂದೆ ಜಿಲ್ಲೆ ಮತ್ತು ತಾಲೂಕು ಮಟ್ಟ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ರೂಪಿಸಬೇಕಾಗಿದೆ. ಭಾರತ ಸರ್ಕಾರ ಈಗಾಗಲೇ ಹೆಣ್ಣುಮಕ್ಕಳಿಗಾಗಿ ನೀತಿಯೊಂದನ್ನು ರೂಪಿಸಿ ಕ್ರಿಯಾಯೋಜನೆಯನ್ನು ಮುಂದಿಡುವ ಬಗ್ಗೆ ಪ್ರಸ್ತಾಪಿಸಿದೆ. ಕರ್ನಾಟಕ ಸರ್ಕಾರವೂ ಹೆಣ್ಣುಮಕ್ಕಳ ರಕ್ಷಣೆ ಮತ್ತು ವಿಕಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ನೀತಿಯ ಕರಡು ಸಿದ್ಧಪಡಿಸಿದೆ.

ಪ್ರತಿಯೊಬ್ಬರೂ ತಾವು ವಾಸಿಸುವ ಹಳ್ಳಿ/ಗ್ರಾಮ ಪಂಚಾಯಿತಿ/ ತಾಲೂಕು / ಜಿಲ್ಲಾ ಪಂಚಾಯಿತಿಯವರನ್ನು ಮತ್ತು ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಅವರು ಮಕ್ಕಳ ಹಕ್ಕುಗಳ ಜಾರಿಗಾಗಿ ಕ್ರಿಯಾ ಯೋಜನೆ ನಿರ್ಮಿಸಿದ್ದಾರಾ ಅಥವಾ ಹಿಂದಿನ ಕ್ರಿಯಾ ಯೋಜನೆಯನ್ನು ವಿಮರ್ಶಿಸುವ ಕೆಲಸ ಮಾಡಿದ್ದಾರಾ ಎಂದು ಕೇಳಬೇಕಿದೆ. ಅದರಲ್ಲೂ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ, ಅವರ ರಕ್ಷಣೆ ಮತ್ತು ವಿಕಾಸಕ್ಕೆ, ಅವರ ಭಾವನೆಗಳನ್ನು ವ್ಯಕ್ತಪಡಿಸಲಿಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆಯೆ ಎಂದು ಪ್ರಶ್ನೆ ಎತ್ತಬೇಕಿದೆ.
ಒಟ್ಟಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಆಶಿಸಿರುವಂತೆ, ಯಾವುದೇ ಸಂದರ್ಭದಲ್ಲೂ ಹೆಣ್ಣು ಮಕ್ಕಳು, ಮಹಿಳೆಯರು ಗಂಡು ಮಕ್ಕಳು ಮತ್ತು ಪುರುಷರಿಗಿಂತ ತಾವೇನೂ ಕೀಳಲ್ಲ ಎಂಬ ನಿಲುವು ಎಲ್ಲರಲ್ಲೂ ಬರುವಂತೆ ನಾವೆಲ್ಲರೂ ಒಟ್ಟಾಗಿ ನಡೆದುಕೊಳ್ಳಬೇಕು.
 
ಅಡಿಟಿಪ್ಪಣಿಗಳು
  1. ಭಾರತ ಜನಗಣತಿ 201.,
  2. ಮಹಾದ್ ಸತ್ಯಾಗ್ರಹ (20.3.1927)ದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವುದು, ಸಿಂಗಾರಿಯಾ ಎಂ.ಆರ್ ಆಡಿ. Dr. BR Ambedkar and women Empowerment in India’, Quest Journal of Research in Humanities and Social Science, Vol 2, Issue 1 (2014)
  3. ರಾಷ್ಟ್ರೀಯ ಮಕ್ಕಳ ನೀತಿ 2013
  4. World Fit for Children (1990), UNICEF, New York
 
ಎನ್.ವಿ. ವಾಸುದೇವ ಶರ್ಮಾ
ಕಾರ್ಯಕಾರಿ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು
 
ಡಾ. ಕೋದಂಡರಾಮ
ಸಂಶೋಧನಾ ಮಾರ್ಗದರ್ಶಕರು ಹಾಗೂ ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು-560056.  

0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com