Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ವ್ಯಕ್ತಿಯಷ್ಟೇ ಅಲ್ಲ ಶಕ್ತಿ: ಕರ್ನಾಟಕ ರತ್ನ ಡಾ. ವೀರೇಂದ್ರ ಹೆಗ್ಗಡೆ

6/6/2018

0 Comments

 
ಇದು ಬರಿ ಧಾರ್ಮಿಕ ಸ್ಥಳವಲ್ಲ. ಇದರಷ್ಟಕ್ಕೆ ಇದೊಂದು ಸರಕಾರ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತಂತೆ ನಾಡಿನ ಜನಪ್ರಿಯ [ಪತ್ರಿಕೆಯೊಂದು ಕೆಲವರ್ಷಗಳ ಹಿಂದೆ ಪ್ರಕಟಿಸಿದ ಲೇಖನಕ್ಕೆ ತಲೆಬರೆಹ ನೀಡಿದ್ದು ಹೀಗೆ. ಬರಹದ ಕುರಿತು ನೀಡುವ ಚಿಕ್ಕ ಬಾಕ್ಸ್ನಲ್ಲಿ ಇದಕ್ಕೊಂದಿಷ್ಟು ಸಮರ್ಥನೆ ಇದೆ. ಇಲ್ಲಿ ಮಂಜುನಾಥ ದೇವಾಲಯವೇ ಪಾರ್ಲಿಮೆಂಟ್, ಹೆಗ್ಗಡೆಯವರೇ ಪ್ರಧಾನಿ. ಅವರ ಉಯಿಲು ಕೇಳುವ ವೇಗವೇ ಸುಪ್ರೀಂಕೋರ್ಟು, ಧರ್ಮವೇ ಇಲ್ಲಿಯ ಸಂವಿಧಾನ, ಭಕ್ತರೇ ಭಕ್ತಿಯಿಂದ ಬರೆದ ಕಾನೂನು. ಒಂದು ದೇಶದ ಸರಕಾರದಲ್ಲಿ ಏನೆಲ್ಲಾ ದಾಖಲೆಗಳಿರುತ್ತವೋ ಎಲ್ಲವೂ ಧರ್ಮಸ್ಥಳದಲ್ಲಿವೆ. ಸರಕಾರದ ಏನೆಲ್ಲಾ ಕೆಲಸಗಳನ್ನು ಮಾಡುತ್ತದೋ ಧರ್ಮಸ್ಥಳ ಅವೆಲ್ಲಾ ಕೆಲಸಗಳನ್ನು ಮಾಡುತ್ತದೆ. ಇದೊಂದು ಮಾದರಿ ಸರಕಾರ, ಪ್ರಧಾನಿ ಕ್ಯಾಬಿನೆಟ್ ಮಂತ್ರಿಗಳು, ರಾಜ್ಯಸಚಿವರು ಎಲ್ಲರೂ ಇಲ್ಲಿ ಒಬ್ಬರೇ, ಅವರೇ ಶ್ರೀ ವೀರೇಂದ್ರ ಹೆಗ್ಗಡೆಯವರು. ಈ ಧರ್ಮಕ್ಷೇತ್ರಕ್ಕೆ ಅವರೇ ಖಾವಂದರು (ಒಡೆಯರು), ಹೀಗೆನ್ನುವುದು ಆತ್ಮೀಯ ಮತ್ತು ಗೌರವದ ಸಂಬೋಧನೆ.
ನಾಡಿನ ಪುಣ್ಯ ಕ್ಷೇತ್ರಗಳಲ್ಲೊಂದಾದ ಧರ್ಮಸ್ಥಳ ಹಾಗೂ ಇಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಕನ್ನಡಪ್ರಭ ಬಣ್ಣಿಸಿ ಚಿತ್ರಿಸಿದ್ದು ಈ ತೆರನಾಗಿ. ಹಾಗಂತ ಹೆಗ್ಗಡೆಯವರ ವ್ಯಕ್ತಿತ್ವವನ್ನು ಇಲ್ಲಿ ಸಂಪೂರ್ಣವಾಗಿ ಹಿಡಿದಿಟ್ಟೆ ಎಂದು ಸಂಪಾದಕರು ಅಥವಾ ಬರಹಗಾರ ಹೇಳುವ ಧೈರ್ಯ ಮಾಡಲಿಕ್ಕಿಲ್ಲ.

ತೆರೆದ ಪುಸ್ತಕದಂತಿರುವ ಚೈತನ್ಯಶೀಲ ಹೆಗ್ಗಡೆಯವರ ಸೇವಾ ಕೈಂಕರ್ಯ ಹಾಗೂ ಬಹುಮುಖ ವ್ಯಕ್ತಿತ್ವವೇ ಅಂತಹುದು. ಅಕ್ಷರ ರೂಪದಲ್ಲಿ ಹೆಗ್ಗಡೆಯವರ ಕುರಿತು ಹಲವು ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬರಹ ಮೂಡಿಬಂದಿವೆ. ಗ್ರಂಥಗಳೂ ಹೊರಬಂದಿವೆ. ಗಣ್ಯಾತಿಗಣ್ಯರು, ಸಾಹಿತ್ಯ ದಿಗ್ಗಜರು, ಪತ್ರಕರ್ತರು, ಶ್ರೀಸಾಮಾನ್ಯರೆಲ್ಲರೂ ಶ್ರೀಕ್ಷೇತ್ರದ ಕನಸುಗಾರ ಹಾಗೂ ಸಾಧಕ ವೀರೇಂದ್ರ ಹೆಗ್ಗಡೆಯವರ ಸುಂದರ ವ್ಯಕ್ತಿತ್ವವನ್ನು ಅತ್ಯಂತ ಸೊಗಸಾಗಿ ಮೂಡಿಸಿದ್ದಾರೆ. ಆದರೆ ಹೆಗ್ಗಡೆಯವರ ಕುರಿತಾದ ಯಾವುದೇ ಲೇಖನದಲ್ಲಿ ಪರಿಪೂರ್ಣತೆಯ ಸೋಲು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಕಠಿಣ ಸಾಹಸ ಎಂಬುದು ಬರಹಗಳಲ್ಲಿ ವ್ಯಕ್ತವಾಗಿದೆ.

ಸಾರ್ಥಕ ಸಾಧನೆಯಿಂದ ಮೇರುದೃಶ್ಯ ವ್ಯಕ್ತಿತ್ವ ಹೊಂದಿರುವ ಹೆಗ್ಗಡೆಯವರನ್ನು ನುಡಿ ಚಿತ್ರದಲ್ಲಿ ಹೇಳುವಾಗ ಈ ಅಭಿಪ್ರಾಯ ಬರುವುದು ಸಹಜವೆಂದರೆ ಅದು ಖಂಡಿತ ಉತ್ಪ್ರೇಕ್ಷೆಯಾಗಲಾರದು. ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಬಿರುದು ಪ್ರಶಸ್ತಿಗಳು ಪ್ರಧಾನವಾದರೂ ಅದು ಸಹಜವೆಂಬಂತೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಅವರ ವ್ಯಕ್ತಿತ್ವ, ಜನಹಿತ ಹಾಗೂ ದೇವಹಿತ ಕಾರ್ಯಗಳು ಪಿ.ಹೆಚ್.ಡಿ ಅಧ್ಯಯನಕ್ಕೂ ಮೀರಿದ್ದು ಎಂಬ ಅಬೀಪ್ರಾಯಗಳು ವ್ಯಕ್ತವಾಗುತ್ತಿವೆ. ಕರ್ನಾಟಕ ಸರಕಾರ ಇತ್ತೀಚೆಗೆ ಹೆಗ್ಗಡೆಯವರಿಗೆ 'ಕರ್ನಾಟಕ ರತ್ನ' ಬಿರುದು ಪ್ರದಾನ ಮಾಡಿದಾಗಲೂ ಇದು ಈ ಹಿಂದೆಯೇ ಸಿಗಬೇಕಾಗಿತ್ತು, ಅವರು 'ದೇಶದ ರತ್ನ' ಎಂಬ ಭಾವನೆ ತಕ್ಷಣದಲ್ಲೇ ಮೂಡುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರಾನುಗತ ದಾನಗಳನ್ನು ವಿಶಾಲಾರ್ಥದಲ್ಲಿ ವಿಸ್ತರಿಸಿ ಕಾಲೋಚಿತವಾದ ರೂಪ ನೀಡಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಹೆಗ್ಗಳಿಕೆ, ಶ್ರೇಯಸ್ಸು ವೀರೇಂದ್ರ ಹೆಗ್ಗಡೆಯವರಿಗಿದೆ.

ಚಿನ್ನದ ಚಮಚೆಯನ್ನು ಬಾಯಲಿಟ್ಟುಕೊಂಡು ಹುಟ್ಟಿದ ಹುಡುಗ, ಅಂಬೆಗಾಲಿಡುವಾಗಲೇ ಬಿಳಿಕುದುರೆ ಮೇಲೆ ದೊಡ್ಡವರೊಟ್ಟಿಗೆ ಸವಾರಿ ಮಾಡಿದಂಥ ಹುಡುಗ, ಬೆಂಗಳೂರಿನ ಬಡಾವಣೆಯಲ್ಲಿ ವಾಸಮಾಡಿ ಪ್ರತಿಷ್ಠಿತ ಶಾಲೆಯಲ್ಲಿ ಕಲಿತ ಹುಡುಗ, ಅಪ್ಪನ ಹಳೆಯ ಕಾರುಗಳ ಶೋಕಿಯ ಕಂಡ ಹುಡುಗ, ಕಾಲೇಜು ಮೆಟ್ಟಿಲು ಹತ್ತುವಾಗಲೇ ತಂದೆ ರತ್ನವರ್ಮ ಹೆಗ್ಗಡೆಯವರಿಂದ ತನಗೇ ಅಂಥ ಒಂದು ಕಾರು ಉಡುಗೊರೆ ಪಡೆದ ಹುಡುಗ, ಇಪ್ಪತ್ತರ ಹರೆಯದಲ್ಲೇ ಧರ್ಮಾಧಿಕಾರಿಯಾದ ಹುಡುಗ ಅವರೇ ವೀರೇಂದ್ರ ಹೆಗ್ಗಡೆ ಎಂದು 'ಕರ್ನಾಟಕ ರತ್ನ' ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹೆಗ್ಗಡೆಯವರ ಕುರಿತು ಹೇಳಲಾದ ಮಾತುಗಳು ಇಲ್ಲಿ ಉಲ್ಲೇಖನೀಯ. ಯಾವುದೋ ಸಿನಿಮಾ ಕಥೆಯ ಹಾಗಿದ್ದರೂ ಇವೆಲ್ಲವೂ ಪರಮಸತ್ಯ ಎಂಬುದು ಅಷ್ಟೇ ಗಮನಾರ್ಹ.

ವೀರೇಂದ್ರ ಹೆಗ್ಗಡೆಯವರು ಶ್ರೀಮಂತಿಕೆಯ ಚಮಚೆಯನ್ನಷ್ಟೇ ಚಪ್ಪರಿಸಲಿಲ್ಲ, ಅದರ ಮೇಲಿದ್ದ ತಿನಿಸಿಗೆ ಅವರ ತಾಯಿ ರತ್ನಮ್ಮ ಸಂಸ್ಕಾರದ ತುಪ್ಪ ಸವರಿದ್ದರು. ಮಗುವಿಗೆ ತುತ್ತುಣಿಸುವಾಗಲೆಲ್ಲಾ ಬಡವರ ಬವಣೆಯ ಕಥೆಗಳನ್ನೂ ಉಣಬಡಿಸಿದ್ದರು. ಮುಂದೆ ಬಡವರ, ದೀನರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ಹರಿಕಾರನಾಗಿ ಜನರ ಕಣ್ಮಣಿಯಾಗಿ ಬೆಳೆದದ್ದು ಅವರ ಬದುಕಿನ ಹಾಗೂ ಸಾಧನೆಯ ಯಶೋಗಾಥೆ.
ಕೆಲವರ್ಷಗಳ ಹಿಂದಿನ ಘಟನೆಯಿದು: ಕೊಲ್ಕತ್ತದಲ್ಲಿ ಹೆಗ್ಗಡೆಯವರು ನೊಬಲ್ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೆಸಾ ಅವರನ್ನು ಪ್ರಶಸ್ತಿ ಹಿನ್ನೆಲೆಯಲ್ಲಿ ಅಭಿನಂದಿಸಿದ ಸಂದರ್ಭವದು. ನನಗಿಂತ ನಿಮ್ಮ ಸೇವಾಕ್ಷೇತ್ರ ದೊಡ್ಡದು. ನಿಮಗೆ ಧನಬಲ, ಜನಬಲ ಇದೆ. ದೀನ ದಲಿತರನ್ನು ಕಂಡು ಸ್ಪಂದಿಸುವ ಅಂತಃಕರಣ ನಿಮ್ಮಲ್ಲಿದೆ. ನಿಮಗೆ ದೇವರ ಅನುಗ್ರಹವಿದೆ. ನಿಮ್ಮಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ಹೀಗೆಂದು ಹೆಗ್ಗಡೆಯವರ ಅಭಿನಂದನೆಗೆ ಪ್ರತಿಯಾಗಿ ಮಹಾತಾಯಿ ತೆರಸಾ ಸ್ಪಂದಿಸಿದರಂತೆ.

ಬದುಕನ್ನು ಪ್ರೀತಿಸುವುದೇ ಯಶಸ್ಸಿನ ಗುಟ್ಟು ಎನ್ನುವ ವೀರೇಂದ್ರ ಹೆಗ್ಗಡೆಯವರದ್ದು ಸಮಾಜಮುಖಿ ಚಿಂತನೆ. ವಿಷಯವೊಂದನ್ನು ಗ್ರಹಿಸುವಾಗ, ಚರ್ಚಿಸುವಾಗ ಅವರ ಆಮೂಲಾಗ್ರ ಚಿಂತನಾದೃಷ್ಟಿ ಸ್ಪಷ್ಟವಾಗಿ ಗೋಚರಿಸುತ್ತದೆ. ಶಿಕ್ಷಣ ಕ್ಷೇತ್ರದಿಂದ ಹಿಡಿದು ಆರೋಗ್ಯ, ಯಕ್ಷಗಾನ, ಯೋಗ, ಸಾಮೂಹಿಕ ವಿವಾಹ, ದೇವಾಲಯ ಜೀರ್ಣೋದ್ಧಾರ, ಸ್ವ-ಉದ್ಯೋಗ ತರಬೇತಿ, ಸಾಹಿತ್ಯ ಸಮ್ಮೇಳನ, ಮುದ್ರಣಾಲಯ, ಪತ್ರಿಕೆ-ಪುಸ್ತಕ ಪ್ರಕಟನೆ, ಹೀಗೆ ಹೆಗ್ಗಡೆಯವರ ಸಾಧನೆಗಳ ಮಜಲುಗಳ ಕ್ಷೇತ್ರಗಳ ಪಟ್ಟಿ ವಿಸ್ತರಿಸುತ್ತಲೇ ಹೋಗುತ್ತದೆ.

ಹಾಗೆಂದು ಯಾವತ್ತೂ ಎರಡನೆಯ ದರ್ಜೆಯ ಕೆಲಸದಿಂದ ಹೆಗ್ಗಡೆಯವರು ತೃಪ್ತಿಪಟ್ಟವರಲ್ಲ. ಅವರು ಕಟ್ಟಿದ ಸಂಸ್ಥೆಗಳಲೆಲ್ಲಾ ಉತ್ಕೃಷ್ಟತೆಗೆ ಮೊದಲ ಆದ್ಯತೆ. ಅಚ್ಚುಕಟ್ಟುತನ, ಸುವ್ಯವಸ್ಥೆ, ಗುಣಪ್ರಧಾನತೆ ಹೆಗ್ಗಡೆಯವರ ಮೂಲಮಂತ್ರ. ಪ್ರತಿಷ್ಠೆಗಾಗಿಯೂ ಸಂಸ್ಥೆಗಳನ್ನು ಕಟ್ಟಿದಲ್ಲ ಎಂದು ಹೆಗ್ಗಡೆಯವರು ಮತ್ತೆ ಮತ್ತೆ ಸ್ಪಷ್ಟವಾಗಿ ಹೇಳುತ್ತಾರೆ. ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಗಳಲ್ಲ. ಅವು ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಗಳೆಂಬುದಾಗಿ ನಾಡಿನೆಲ್ಲಡೆ ಮತ ಭೇದವಿಲ್ಲದೆ ಮೆಚ್ಚುಗೆ ಗಳಿಸಿವೆ.

ಜನಸೇವೆಯೆಂದರೆ ಒಂದಿಷ್ಟು ಹಣ ಬಳಸುವುದಷ್ಟೇ ಅಲ್ಲ ಎಂಬುದು ಹೆಗ್ಗಡೆಯವರ ಚಿಂತನೆಯ ಧಾಟಿ. ದಾನ ಕೊಡುವಾಗ ಸಂತ್ರಸ್ತರ ಆಯ್ಕೆ ಹಾಗೆಯೇ ಖರ್ಚಿನ ಪ್ರತಿ ಪೈಸೆಯೂ ಅರ್ಥಪೂರ್ಣವಾಗಿರಬೇಕು, ಸದ್ಬಳಕೆಯಾಗಬೇಕು ಎಂಬುದು ಅವರ ಕಳಕಳಿ. ಗ್ರಾಮಗಳ ಅಭಿವೃದ್ಧಿಯ ದಿಸೆಯಲ್ಲಿ ಕ್ಷೇತ್ರದಿಂದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಯೋಜನೆ ರೂಪಿಸಿ ಅನುಷ್ಠಾನದ ಹಂತದಲ್ಲೇ ಗ್ರಾಮೀಣರಲ್ಲಿ ಕೆಲವರ ದುಶ್ಚಟಗಳಿಂದ ಯೋಜನೆಯ ಸಫಲತೆಗೆ ಅಡ್ಡಿ ಎಂಬ ವಾಸ್ತವ್ಯ ಸತ್ಯದ ಅರಿವಾಗಿಬಿಟ್ಟಿತ್ತು. ಇದರ ಫಲವಾಗಿ ರೂಪುಗೊಂಡ ಜನಜಾಗೃತಿ ವೇದಿಕೆಯಿಂದ ಮನವೊಲಿಕೆಯ ಸರಳ ಮಾರ್ಗದಿಂದ ಇಂದು ಅದೆಷ್ಟೋ ಜನರು ವ್ಯಸನಮುಕ್ತವಾಗಿದ್ದಾರೆ. ಅಂಥ ಸಹಸ್ರಾರು ಕುಟುಂಬಗಳಲ್ಲಿ ಇಂದು ನೆಮ್ಮದಿ ಮೂಡಿದೆ. ಹೆಗ್ಗಡೆಯವರಿಂದಾಗಿ ವ್ಯಸನಯುಕ್ತ ನಾಡನ್ನು ಕಟ್ಟುವ ದಿಸೆಯಲ್ಲಿ ಮೌನ ಕ್ರಾಂತಿಯೇ ನಡೆದಿದೆ.
ಭಜನೆ, ಸಾಮೂಹಿಕ ಸತ್ಯನಾರಾಯಣ ಪೂಜೆ ಮುಂತಾದ ಕಾರ್ಯಕ್ರಮಗಳಿಗೂ ಪ್ರೇರಣೆ ನೀಡುವುದರೊಂದಿಗೆ ಯೋಜನೆಯ ಮೂಲಕ ಗ್ರಾಮೀಣರಲ್ಲಿ ಸುಖದ ಬದುಕಿನ ಕೀಲಿಕೈ ಕೊಡುವ ಯಶಸ್ಸು ಹೆಗ್ಗಡೆಯವರದ್ದು.

ಭಾರತದ ಯೋಜನೆಯಲ್ಲಿ ಜನಸಾಮಾನ್ಯನ ಜೀವನಮಟ್ಟವನ್ನು ಸುಧಾರಿಸಬೇಕೆಂಬ ನಿಜವಾದ ಆಶಯ ಉತ್ಸಾಹಗಳಿದ್ದರೆ, ಅದಕ್ಕೆ ಪರ್ಯಾಯ ಯೋಜನಾ ವಿಧಾನವೊದನ್ನು ರೂಪಿಸಿಕೊಳ್ಳಬೇಕಾಗಿದೆ. ಹಾಗೆ ಮಾಡುವಾಗ ಶೀಕ್ಷೇತ್ರ ಧರ್ಮಸ್ಥಳದ ಮಾದರಿಯನ್ನು ಸಂಬಂಧಪಟ್ಟವರು ಆವಶ್ಯಕವಾಗಿ ಗಮನಿಸಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪರವರು ಒಂದೆಡೆ ಹೇಳಿರುವುದು ಇಲ್ಲಿ ಉಲ್ಲೇಖನೀಯ.

47ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮೂಲಕ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ನಾಡಿಗೆ ವಿದ್ಯಾದಾನಗೈಯ್ಯುತ್ತಿರುವ ಹೆಗ್ಗಡೆಯವರು ಸ್ವಉದ್ಯೋಗ ತರಬೇತಿ ಕೇಂದ್ರದ ಮೂಲಕ ರಾಷ್ಟ್ರಾದ್ಯಂತ 22ಕ್ಕೂ ಅಧಿಕ ಕೇಂದ್ರಗಳ ಮೂಲಕ ಲಕ್ಷಾಂತರ ಯುವಜನರಿಗೆ ಸ್ವಉದ್ಯೋಗ ತರಬೇತಿ ನೀಡಿ ಬಾಳಿಗೆ ಬೆಳಕಾಗಿದ್ದಾರೆ. ಸಂಚಾರಿ ಆಸ್ಪತ್ರೆ ಮೂಲಕ 300ಕ್ಕೂ ಹೆಚ್ಚಿನ ಹಳ್ಳಿಗಳಿಗೆ ವೈದ್ಯಕೀಯ ನೆರವು, ಉಚಿತ ಚಿಕಿತ್ಸೆ, ಶಾಂತಿವನ ಟ್ರಸ್ಟ್ ಮೂಲಕ ಯೋಗ, ನೈತಿಕ ಶಿಕ್ಷಣ ಪ್ರಸಾರ, ಧರ್ಮೋತ್ಥಾನ ಟ್ರಸ್ಟ್ ಮೂಲಕ ನಾಡಿನ ಉದ್ದಗಲದಲ್ಲಿ ಅಳಿಯುತ್ತಿರುವ ಅನೇಕ ಅಪೂರ್ವ ದೇವಾಲಯಗಳ ಜೀರ್ಣೋದ್ಧಾರ, ಸಾಮೂಹಿಕ ವಿವಾಹದ ಮೂಲಕ, ಸರಳವಿವಾಹಕ್ಕೆ ಪ್ರೋತ್ಸಾಹ. ಹೀಗೆ ಹೆಗ್ಗಡೆಯವರ ಸಾಮಾಜಿಕ ಸೇವೆ ಹಾಗೂ ಸಾಧನೆಯ ಕ್ಷೇತ್ರಗಳನ್ನು ಉಲ್ಲೇಖಿಸುತ್ತಾ ಹೋದರೆ ಬೃಹತ್ ಹೊತ್ತಿಗೆಯೇ ಆದೀತು.

1968 ಅಕ್ಟೋಬರ್ 24ರಂದು ಕ್ಷೇತ್ರದ ಧರ್ಮಾಧಿಕಾರಿ ಜವಾಬ್ದಾರಿಯ ಹೊತ್ತ ವೀರೇಂದ್ರ ಹೆಗ್ಗಡೆಯವರಿಗೆ ಕೇವಲ 20ರ ವಯಸ್ಸು. ತಂದೆ ಪೂಜ್ಯ ರತ್ನವರ್ಮ ಹೆಗ್ಗಡೆ, ತಾಯಿ ಮಾತೃಶ್ರೀ ರತ್ನಮ್ಮ. ಆನನ ನವೆಂಬರ್ 25 1948, ಶ್ರೀ ಸುರೇಂದ್ರಕುಮಾರ್, ಶ್ರೀಹರ್ಷೇಂದ್ರ ಕುಮಾರ, ಶ್ರೀ ರಾಜೇಂದ್ರ ಕುಮಾರ ಸಹೋದರರು. ಶ್ರೀಮತಿ ಪದ್ಮಲತಾ ಸಹೋದರಿ. ಧರ್ಮಸ್ಥಳದ ಉಜಿರೆಯಲ್ಲಿ ಆರಂಭದ ಶಿಕ್ಷಣ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ. 1972ರಲ್ಲಿ ಮೂಡಬಿದರೆಯ ತಮನಂಗಡಿ ಶ್ರೀರಘುಚಂದ್ರ ಶೆಟ್ಟಿಯವರ ಪುತ್ರಿ ಹೇಮಾವತಿಯವರೊಡನೆ ವಿವಾಹ. ಮಗಳು ಶ್ರದ್ಧಾ. ಸಮಾನ ಮನಸ್ಕ ಪತ್ನಿ ಸಿಕ್ಕಮೇಲೆ ವೀರೇಂದ್ರರ ಕನಸುಗಳ ದಾರಿ ದೊಡ್ಡದಾಯಿತು, ಯಶಸ್ವಿ ಪುರುಷನೋರ್ವನ ಹಿಂದೆ ಮಹಿಳೆ ಎದ್ದೇ ಇರುತ್ತಾಳೆಂಬುದು ಹೆಗ್ಗಡೆಯವರ ಬದುಕಿನಲ್ಲಿ ಕಾಣುವಂತೆ ಮೂಡುವಲ್ಲಿ ಮಡದಿಯ ಪ್ರಾಂಜಲ ಮನಸ್ಸಿನ ಸಹಕಾರ ಗಮನಾರ್ಹ.

ಮಂಜುನಾಥನದು ಕುಳಿತ ಪಟ್ಟವಾದರೆ ಧರ್ಮಾಧಿಕಾರಿಗಳದ್ದು ನಡೆದಾಡುವ ಪಟ್ಟ. ಕೇವಲ ದೇವರನ್ನು ನಂಬಿಕೊಂಡು ಕುಳಿತವರಲ್ಲ. ಹಿರಿಯರ ಹಾದಿಯಲ್ಲೇ ಮಾನವ ಹಿತಾಸಕ್ತಿಯ ಕಡೆಗೆ ಗಮನಹರಿಸಿ ಧರ್ಮಸ್ಥಳಕ್ಕೆ ಮಾನ್ಯತೆ ಬರಲು ಕಾರಣರಾದರೆಂಬುದೇ ವೀರೇಂದ್ರ ಹೆಗ್ಗಡೆಯವರ ವಿಶೇಷತೆ. ಅಭಿವೃದ್ಧಿಯ ಹರಿಕಾರ ಎಂಬುದು ಇವರ ಹೆಗ್ಗಳಿಕೆ.

ಪಟ್ಟಿ ಮಾಡಿದಷ್ಟೂ ಅದು ಉದ್ದವಾಗುತ್ತಲೇ ಹೋಗುವಂಥ ಕೆಲಸಗಳನ್ನು ಮಾಡಿರುವ ವೀರೇಂದ್ರ ಹೆಗ್ಗಡೆಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿ, ಗೌರವಗಳು ಅಸಂಖ್ಯ. ದಿಲ್ಲಿಯಲ್ಲಿರುವ 'ನ್ಯಾಷನಲ್ ಫೌಂಡೇಷನ್ ಫಾರ್ ಕಮ್ಯೂನಲ್ ಹಾರ್ಮನಿ'ಯ ಸದಸ್ಯತ್ವ, ತಿರುಮಲ ತಿರುಪತಿ ದೇವಸ್ಥಾನಂ ಡೆವಲಪ್‍ಮೆಂಟ್ ಅಡ್ವೈಸರಿ ಕೌನ್ಸಿಲ್'ನ ಸದಸ್ಯತ್ವ ಅವರಿಗೆ ಸಂದ ಗೌರವಗಳೇ ಹೌದು. 2000ದಲ್ಲೇ 'ಪದ್ಮಭೂಷಣ' ಪ್ರಶಸ್ತಿಗೆ ಭಾಜನರಾದ ಹೆಗ್ಗಡೆಯವರಿಗೆ, ಅದೇ ವರ್ಷ ವೇಣೂರು ಮಹಾಮಸ್ತಾಭಿಷೇಕದ ಸಂದರ್ಭದಲ್ಲಿ 'ಧರ್ಮಭೂಷಣ' ಪ್ರಶಸ್ತಿಯ ಗೌರವ ಸೇರಿತು. 1985ರಲ್ಲೇ ರಾಜ್ಯೋತ್ಸವ ಪ್ರಶಸ್ತಿ ಸಂದರೆ, 1994ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. 2004ರಲ್ಲಿ 'ಈಟಿವಿ' ನಡೆಸಿದ 'ವಾಟಿಕ ವರ್ಷದ ಕನ್ನಡಿಗ' ವ್ಯಕ್ತಿಯಾಗಿ ಜನ ಆರಿಸಿದ್ದೂ ಹೆಗ್ಗಡೆಯವರನ್ನೇ.
 
ಅವರ ಕನಸಿನ ಯೋಜನೆಗೆ ಸಂದ ಪ್ರಶಸ್ತಿಗಳು
ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಕಲ್ಪನೆಗೆ 'ಫಿಕ್ಕಿ' (ಎಫ್.ಐ.ಸಿ.ಸಿ.ಐ.) ಪ್ರಶಸ್ತಿ ಮತ್ತು 'ಐ.ಎಮ್.ಎ' ಪ್ರಶಸ್ತಿಯೂ ದೊರಕಿತು. 'ಚೌಧರಿ ಚರಣ್ಸಿಂಗ್' ಪ್ರಶಸ್ತಿಯನ್ನು ಪಡೆದುಕೊಂಡರು. ಹೆಗ್ಗಡೆಯವರೇ ನಡೆಸುತ್ತಿರುವ 'ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ'ಗೆ 2008ರ 'ಬದಲಾವಣೆಯ ಹರಿಕಾರ'ಪ್ರಶಸ್ತಿ (ಕಿರು ವಿಮೆ ಮತ್ತು ಕೃಷಿಕರ ಕಾರ್ಯಕ್ರಮಗಳಿಗೆ), 2009ರಲ್ಲಿ ಕಿರು ವಿಮಾ ಯೋಜನೆಯ ಅನುಷ್ಠಾನಕ್ಕಾಗಿ 'ಸರ್ಟಿಫಿಕೇಟ್ ಆಫ್ ಮೆರಿಟ್' ಪ್ರಶಸ್ತಿ ಮತ್ತು ಅದೇ ವರ್ಷ 'ಪಿಂಗಾರ ರಾಜ್ಯೋತ್ಸವ' ಪ್ರಶಸ್ತಿಯೂ ದೊರಕಿತು. 2010ರಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣ ಹಾದಿಯಲ್ಲಿನ ಸಾಧನೆಗಾಗಿ ಸಂಯಮ ಪ್ರಶಸ್ತಿಯೂ ಇವರ ಮಡಿಲಿಗೆ ಸೇರಿದೆ. 2010ರಲ್ಲಿ ಹಂಪಿ ವಿಶ್ವವಿದ್ಯಾಲಯದ 'ನಾಡೋಜ' ಪ್ರಶಸ್ತಿ, 2009ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದಿಂದ 'ಗೌರವ ಡಾಕ್ಟರೇಟ್' ಪದವಿ ಹೆಗ್ಗಡೆಯವರ ಕೊರಳನ್ನು ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಫೆಲೋಷಿಪ್ ಗೌರವ ನೀಡಿತು. 2007ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 'ಗೌರವ ಡಾಕ್ಟರೇಟ್' ಪ್ರದಾನ ಮಾಡಿತು. 2009ರಲ್ಲಿ ಕರ್ನಾಟಕ ಲಲಿತ ಕಲಾ ಅಮೆರಿಕಾ ಡ್ರೀಮ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೂ ಭಾಜನರಾಗಿರುವ ಹೆಗ್ಗಡೆಯವರಿಗೆ ಕರ್ನಾಟಕ ಸರ್ಕಾರದ 2009ರ 'ಕರ್ನಾಟಕ ರತ್ನ' ಪ್ರಶಸ್ತಿ ಸಂದಿರುವುದು ನಾಡಿಗೇ ಹೆಮ್ಮೆಯ ಸಂಗತಿ.
 
ಭಾಸ್ಕರ ಹೆಗಡೆ
ಉಪನ್ಯಾಸಕರು (ಮುಖ್ಯಸ್ಥರು), ಪತ್ರಿಕೋದ್ಯಮ ವಿಭಾಗ, ಶ್ರೀಧರ್ಮ ಕಾಲೇಜು, ಉಜಿರೆ

0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com