Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Join Our Online Groups
  • Contact Us
Niruta Publications

ಸ್ಥಿತಪ್ರಜ್ಞೆಯ ಅಪರಂಜಿ: ಪ್ರೊ.ಎಂ. ವಾಸುದೇವ ಮೂರ್ತಿ (ನನ್ನ ಅನುಭವಕ್ಕೆ ಬಂದಂತೆ)

7/16/2017

0 Comments

 
(ಪ್ರೊ.ಎಂ.ವಿ.ಮೂರ್ತಿ: 1910-2000= ಶ್ರೀಮತಿ ನೀರಜಾ ಮೂರ್ತಿ: 1918-2001)
 
ಪ್ರೊಫೆಸರ್ ಎಂ. ವಾಸುದೇವ ಮೂರ್ತಿಯವರನ್ನು ನೆನೆದಾಗಲೆಲ್ಲಾ ಮಾಧುರ್ಯ ತುಂಬಿದ, ಸ್ನೇಹಮಯ, ನಿರ್ವ್ಯಾಜ ಪ್ರೀತಿಯ, ಸರಳ ಆದರೆ ಉನ್ನತವಾದ ಜ್ಞಾನ ಭಂಡಾರಿ, ಮಾನವೀಯ ಮೌಲ್ಯಗಳ ಮೂರ್ತಿಯಾದ ಒಬ್ಬ ಹಿರಿಯ ಜೀವಿಯೊಂದು ಕಣ್ಣೆದಿರು ನಿಂತ ಅನುಭವವಾಗುತ್ತದೆ.
ಹಿನ್ನೆಲೆ: ಆದಿ ಆಚಾರ್ಯ
ಹಿನ್ನೆಲೆಯಾಗಿ ಪ್ರೊ. ಮೂರ್ತಿಯವರ ಅಧ್ಯಾಪನ ಮತ್ತಿತರ ಕೆಲವು ಅಂಶಗಳ ಬಗ್ಗೆ ಹೇಳುವುದು ಉಚಿತವೆನ್ನಿಸುತ್ತದೆ. ಭಾರತದಲ್ಲಿ ಸಮಾಜಕಾರ್ಯ ಪ್ರಶಿಕ್ಷಣವು ಆರಂಭವಾದದ್ದು ಮುಂಬೈಯಲ್ಲಿ, ಕಳೆದ ಶತಮಾನದ ನಾಲ್ಕನೆಯ ದಶಕದಲ್ಲಿ (1936). ನಾಗಪಾಡ್ ಸಮುದಾಯದ ಒಂದು ಚರ್ಚಿನ ಸಹಯೋಗದೊಡನೆ ತಾತಾ ಕುಟುಂಬವು ಸರ್ ಸರೋಬ್ಜಿ ತಾತಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯಲ್ ವರ್ಕ್‍ ಎಂಬ ಹೆಸರಿನಡಿಯಲ್ಲಿ ಪ್ರಶಿಕ್ಷಣ ಶಾಲೆಯನ್ನು ಆರಂಭಿಸಿತು. ಮೊದಲ ನಿರ್ದೇಶಕರಾದವರು ಅಮೆರಿಕೆಯ ಡಾ. ಕ್ಲಿಫೋರ್ಡ್‍ ಮ್ಯಾನ್‍ಷರ್ಟ್‍ (Dr. Clifford Manshart). ಆ ಶಾಲೆಯು ಆನಂತರ ತಾತಾ ಇನ್ಸ್ಟಿಟ್ಯೂಟ್ ಆಫ್ ಸೋಸಿಯಲ್ ಸೈನ್ಸಸ್ ಆಗಿ ನಾಮಾಂತರಗೊಂಡಿತು; ಆನಂತರ ಅದೇ ಭಾರತದ ಮೊಟ್ಟಮೊದಲ ಸಮಾಜಕಾರ್ಯ ಡೀಮ್ಡ್ ವಿಶ್ವವಿದ್ಯಾಲಯವಾಗಿ ಮನ್ನಣೆ ಪಡೆಯಿತು.


ಆ ಶೈಕ್ಷಣಿಕ ಸಂಸ್ಥೆಯಲ್ಲಿಯೇ ಭಾರತದ ಸಮಾಜಕಾರ್ಯದ ಆದಿ ಆಚಾರ್ಯರಲ್ಲಿ ಒಬ್ಬರಾಗಿ ಪ್ರೊ. ಮೂರ್ತಿಯವರು ಅಧ್ಯಾಪನ ವೃತ್ತಿಗೆ ತೊಡಗಿದರು. ಅವರೊಡನೆ ಆಗ ಅಧ್ಯಾಪನ ನಿರತರಾಗಿದ್ದವರು ಈ ಮಹನೀಯರು: ಡಾ.ಜೆ.ಎಂ. ಕುಮಾರಪ್ಪ (ನಿರ್ದೇಶಕರು; ಇವರ ಸಹೋದರರೇ ಜೆ.ಸಿ. ಕುಮಾರಪ್ಪ, ಅರ್ಥಶಾಸ್ತ್ರಜ್ಞ ಮತ್ತು ಗಾಂಧೀ ಅನುಯಾಯಿ); ಡಾ.ಬಿ.ಎಚ್. ಮೆಹ್ತಾ (ಸಾಮಾಜಿಕ ಮಾನವ ಶಾಸ್ತ್ರಜ್ಞ, ಗ್ರಾಮೀಣ ಮತ್ತು ಬುಡಕಟ್ಟಿನವರ ಅಭಿವೃದ್ಧಿಯಲ್ಲಿ ಕಾಳಜಿಯುಳ್ಳವರು); ಪ್ರೊ. ಕೇವಲ್ ಮೋತ್ವಾನಿ (ಸಮಾಜಶಾಸ್ತ್ರಜ್ಞ); ಡಾ.ಕೆ.ಸಿ.ಮುಖರ್ಜಿ (ಮನಃಶಾಸ್ತ್ರಜ್ಞ); ಡಾ. ಕಾತ್ಯಾಯನ್ ಕಾಮಾ (ಮಕ್ಕಳ ಮನಃಶಾಸ್ತ್ರಜ್ಞ); ಡಾ.ಕೆ.ಆರ್. ಮಸಾನಿ (ಮನೋಚಿಕಿತ್ಸಕ); ಡಾ.ಕೆ.ಎಸ್. ಮ್ಹಾಸ್ಕರ್ (ಆರೋಗ್ಯ ಮತ್ತು ಔಷಧಿ ವಿಜ್ಞಾನಗಳ ಸಂಶೋಧಕ).

ಈ ತಜ್ಞರ ಗುಂಪನ್ನು ಚಿಕ್ಕದ್ದು ಎಂದು ಡಾ.ಎಂ.ಎಸ್. ಗೋರೆಯವರು ತಮ್ಮ ಆತ್ಮಚರಿತ್ರೆಯಲ್ಲಿ (Memories That Linger -2007) ಹೇಳುತ್ತಾರೆ. ಈ ಮಾತು ನಿಜವಿದ್ದರೂ ಇದು ಬಹು ಸಮರ್ಥವಾದ ಗುಂಪು ಎಂಬುದು ಮೇಲ್ನೋಟಕ್ಕೇ ತೋರುತ್ತದೆ. ಇವರಿದ್ದ ಆ ಪ್ರಶಿಕ್ಷಣ ಶಾಲೆಯೇ ಮುಂದೆ ತಾತಾ ಇನ್ಸ್ಟಿಟ್ಯೂಟ್ ಆಫ್ ಸೋಸಿಯಲ್ ಸೈನ್ಸಸ್ ಆಯಿತು ಎಂದು ಈ ಮೇಲೆಯೇ ಹೇಳಲಾಗಿದೆ. ಭಾರತದ ಸಮಾಜಕಾರ್ಯಕ್ಕೆ ಒಂದು ಭದ್ರ ನೆಲೆಯನ್ನು ಹಾಕಿದ್ದುದಲ್ಲದೆ ನಿರ್ದಿಷ್ಟ ದಿಕ್ಕನ್ನೂ ಅದು ಸೂಚಿಸಿತು. ಇದರ ಕಾರ್ಯದಲ್ಲಿ ಪ್ರೊ. ಮೂರ್ತಿಯವರು ಆಡಿದ ಪಾತ್ರವು ಗಮನಾರ್ಹ ಮತ್ತು ಗಣನೀಯ.
 
ಶಿಷ್ಯ ಸಂಪತ್ತು
ಈ ಪ್ರಸಂಗದಲ್ಲಿ ಪ್ರೊ. ಮೂರ್ತಿಯವರ ಶಿಷ್ಯರನ್ನು ನೆನಪಿಸಿಕೊಳ್ಳಬೇಕಾದದ್ದೂ ಅಗತ್ಯ. ಯಾಕೆಂದರೆ, ಇವರೇ ಮುಂದೆ ಸಮಾಜಕಾರ್ಯವು ವಿಸ್ತಾರಗೊಳ್ಳಲು ನೀರು-ಗೊಬ್ಬರ ಹಾಕಿದವರು. ಅವರಲ್ಲಿ ಪ್ರಮುಖರಾದವರು: ಡಾ.ಎಂ.ಎಸ್. ಗೋರೆ (ಇವರು ನನ್ನ ಗುರುಗಳಾಗಿದ್ದವರು, ದಿಲ್ಲಿಯ ಸ್ಕೂಲ್ ಆಫ್ ಸೋಸಿಯಲ್ ವರ್ಕ್‍ ಮತ್ತು ತಾತಾ ಇನ್ಸ್ಟಿಟ್ಯೂಟ್ನ ನಿರ್ದೇಶಕರೂ, ದಿಲ್ಲಿಯ ಜವಹರಲಾಲ್ ನೆಹರೂ ವಿ.ವಿ.ದ ಕುಲಾಧಿಪತಿಯವರೂ, ಇಂಡಿಯನ್ ಕೌನ್ಸಿಲ್ ಆಫ್‍ ಸೋಸಿಯಲ್ ಸೈನ್ಸ್ ರಿಸರ್ಚ್‍ನ ಅಧ್ಯಕ್ಷರೂ, ಬಾಂಬೆ ವಿ.ವಿ.ದ ಕುಲಪತಿಯವರೂ ಆಗಿದ್ದವರು); ಪ್ರೊ. ಶಂಕರ ಎಚ್. ಪಾಠಕ (ಇವರು ನನ್ನ ಗುರುಗಳಾಗಿದ್ದವರು, ಇವರ ಬಗ್ಗೆ ನೋಡಿ: ಸಮಾಜಕಾರ್ಯದ ಹೆಜ್ಜೆಗಳು I-2, ಜನವರಿ 2011); ಶ್ರೀ ಎಸ್.ಎ. ಶ್ರೀನಿವಾಸಮೂರ್ತಿ (ಇವರು ಬೆಂಗಳೂರಿನ ಮೈಕೊ ಕಾರ್ಖಾನೆಯಲ್ಲಿ ಸಿಬ್ಬಂದಿ ಆಡಳಿತೆಯ ಪ್ರಮುಖರಾಗಿದ್ದವರು, ಮಾನವ ಸಂಪನ್ಮೂಲ ವ್ಯವಸ್ಥೆಗೆ ಒಂದು ರೂಪವನ್ನು ನೀಡಿದವರು, ಇವರ ಬಗ್ಗೆ ನೋಡಿ: ಸಮಾಜಕಾರ್ಯದ ಹೆಜ್ಜೆಗಳು I-3, ಫೆಬ್ರುವರಿ 2011); ಶ್ರೀ ವಿ.ಕೆ. ಕಲ್ಲ (ಬೆಂಗಳೂರಿನಲ್ಲಿ ಮಾನವ ಸಂಪನ್ಮೂಲ ಆಡಳಿತೆಗೆ ಸಾಕಷ್ಟು ದುಡಿದವರು); ಡಾ.ಜೆ.ಜೆ. ಪನಕಲ್ (ಇವರು ತಾತಾ ಇನ್ಸ್‍ಟಿಟ್ಯೂಟ್‍ನಲ್ಲಿ ಪ್ರಾಧ್ಯಾಪಕರಾಗಿದ್ದವರು, ಮುಂದೆ ಅಖಿಲ ಭಾರತ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳ ಮಹಾ ಸಂಘದ ಅಧ್ಯಕ್ಷರಾಗಿದ್ದವರು, ಇವರೊಡನೆ ನಾನು ಆ ಮಹಾ ಸಂಘದ ಉಪಾಧ್ಯಕ್ಷನಾಗಿದ್ದೆ); ಡಾ.ಪಿ.ಟಿ. ಥಾಮಸ್ (ಇವರು ರಾಜಸ್ತಾನದ ಉದಯಪುರ ಸ್ಕೂಲ್ ಆಫ್‍ ಸೋಸಿಯಲ್ ವರ್ಕ್‍ ಮತ್ತು ಮಧ್ಯಪ್ರದೇಶದ ಇಂದೋರ್ ಸ್ಕೂಲ್ ಆಫ್‍ ಸೋಸಿಯಲ್ ವರ್ಕ್‍ ಕಟ್ಟಿ ಬೆಳೆಸಿದವರು); ಪ್ರೊ. ಎಸ್.ಎನ್. ರಾನಡೆ (ಇವರು ಮುಂದೆ ದಿಲ್ಲಿ ಸ್ಕೂಲ್ ಆಫ್‍ ಸೋಸಿಯಲ್ ವರ್ಕ್‍ನ ಪ್ರಾಂಶುಪಾಲರೂ ಆದರು); ಡಾ.ಕೆ.ವಿ. ಶ್ರೀಧರನ್ (ಇವರು ಮದ್ರಾಸ್ ಸ್ಕೂಲ್ ಆಫ್‍ ಸೋಸಿಯಲ್ ವರ್ಕ್‍ನಲ್ಲಿ ಪ್ರಾಧ್ಯಾಪಕರಾಗಿದ್ದವರೂ, ಬೆಂಗಳೂರಿನ ಖಾಸಗಿ ಸಮಾಜಕಾರ್ಯ ಪ್ರಶಿಕ್ಷಣ ಶಾಲೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‍ ಸೋಸಿಯಲ್ ಸೈನ್ಸಸ್ನ ನಿರ್ದೇಶಕರಾಗಿದ್ದವರೂ, ಸಾಮಾಜಿಕ ಅಭ್ಯುದಯಕ್ಕೆ ಒಂದು ಶೈಕ್ಷಣಿಕ ದಿಕ್ಕು ತೋರಿಸಿದವರು. ಇವರ ಇನ್ಸ್ಟಿಟ್ಯೂಟ್ ಮುಂದೆ ಬೆಂಗಳೂರು ವಿ.ವಿ.ದ ಸಮಾಜಕಾರ್ಯ ವಿಭಾಗವಾಗಿ ಮಾರ್ಪಾಟು ಆಯಿತು ಮತ್ತು ಈ ವಿಭಾಗದಲ್ಲಿಯೇ ನಾನು ಪ್ರಾಧ್ಯಾಪಕನೂ ಅಧ್ಯಕ್ಷನೂ ಆಗಿ ದುಡಿದದ್ದು, ನೋಡಿ; ಸಮಾಜಕಾರ್ಯದ ಹೆಜ್ಜೆಗಳು I-1, ಡಿಶಂಬರ್ 2010); ಹಾಗೂ ಡಾ. ಆರ್ಮೈಟಿ ದೇಸಾಯಿ (ಇವರು ಮುಂದೆ ತಾತಾ ಇನ್ಸ್ಟಿಟ್ಯೂಟ್ನ ನಿರ್ದೇಶಕರೂ, ವಿಶ್ವವಿದ್ಯಾಲಯಗಳ ಸಹಾಯ ಆಯೋಗದ ಅಧ್ಯಕ್ಷರೂ ಆಗಿದ್ದವರು); ಶ್ರೀ ಕರುಣಾಕರನ್ (ಜೆಮ್‍ಷಡ್‍ಪುರದ ಜೆ಼ವರ್ಸ್‍ ಇನ್ಸ್ಟಿಟ್ಯೂಟ್ನಲ್ಲಿ ಪ್ರಧಾನ ಪಾತ್ರ ವಹಿಸಿದವರು) ಹೀಗೆಯೇ ಹಲವಾರು ದೀಪಗಳನ್ನು ಹಚ್ಚಿದವರು ಪ್ರೊ. ಮೂರ್ತಿಯವರು.

ಪ್ರೊ. ಮೂರ್ತಿಯವರು ವಾರಣಾಸಿಯ ಮಹಾತ್ಮಾಗಾಂಧೀ ಕಾಶಿ ವಿದ್ಯಾಪೀಠದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ, ನಿಕಾಯದ ಡೀನ್ ಆಗಿಯೂ ದುಡಿದವರು. ಇವರ ಸಹೋದ್ಯೋಗಿಯಾಗಿದ್ದವರು ನನ್ನ ಸಂಶೋಧನೆಯ ಗುರುವಾಗಿದ್ದ ಡಾ.ಸಿ.ಪಿ. ಗೋಯಲ್; ಅವರೂ ಪ್ರೊ. ಮೂರ್ತಿಯವರ ಹೃದಯ ವೈಶಾಲ್ಯದ ಬಗ್ಗೆ ಹೇಳುತ್ತಿದ್ದರು. ಬಹುಶಃ, ಆ ವಿ.ವಿ.ದ ಕುಲಪತಿಯವರಾಗಿದ್ದ ಹಿರಿಯರಾದ ಪ್ರೊ. ರಾಜಾರಾಮಶಾಸ್ತ್ರೀ

ಪ್ರೊ. ಮೂರ್ತಿಯವರ ಒಡನಾಡಿಯಾಗಿದ್ದರು. ಆಂಧ್ರ ವಿಶ್ವವಿದ್ಯಾಲಯದಲ್ಲಿ ಪ್ರೊ. ಮೂರ್ತಿಯವರು ಸಮಾಜಶಾಸ್ತ್ರ-ಸಮಾಜಕಾರ್ಯ ಸಂಯುಕ್ತ ವಿಭಾಗದಲ್ಲಿ ಪ್ರಾಧ್ಯಾಪಕರೂ, ಅಧ್ಯಕ್ಷರೂ ಆಗಿದ್ದುದಲ್ಲದೆ ಆ ವಿಶ್ವವಿದ್ಯಾಲಯದ ಅನೇಕ ವಿಭಾಗಗಳನ್ನು ಒಳಗೊಂಡಿದ್ದ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಇವರ ಸಹೋದ್ಯೋಗಿಯಾದ್ದವರು ಪ್ರೊ.ಬಿ.ಆರ್.ಕೆ. ರಾಜು (ಇವರು ಮುಂದೆ ಭಾರತ ಸರಕಾರದ ಯುವಜನಸೇವೆಯ ಇಲಾಖೆಯಲ್ಲಿ ಪ್ರಧಾನ ಸಲಹೆಗಾರರಾದರು), ಡಾ.ಕೆ.ವಿ. ರಮಣ (ಇವರು ಮುಂದೆ ASSWI ಯ ಅಧ್ಯಕ್ಷರೂ, ಆನಂತರ ಆಂಧ್ರ ವಿ.ವಿ.ದ ಕುಲಪತಿಯೂ ಆದರು). ಎಲ್ಲ ಕಡೆಯಿಂದಲೂ ನಿವೃತ್ತರಾದ ನಂತರ ಪ್ರೊ. ಮೂರ್ತಿಯವರು ಕರ್ನಾಟಕಕ್ಕೆ ಮರಳಿ, ಬೆಂಗಳೂರಿನಲ್ಲಿ ನೆಲೆಸಿ, ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಾರ್ಯನಿರತರಾದರು. ಅವರಿಗೆ ಪ್ರಿಯವಾದ ಕಾರ್ಮಿಕ ಕಲ್ಯಾಣ, ಕಾರ್ಮಿಕ ಸಂಬಂಧಗಳು ಮತ್ತು ಸಿಬ್ಬಂದಿ ಆಡಳಿತೆಯ ವಿಚಾರಗಳಲ್ಲಿ ಗಾಢಾಸಕ್ತಿಯನ್ನು ತಳೆದು ಭಾರತೀಯ ವಿದ್ಯಾ ಸಂಸ್ಥೆಯು ನಡೆಸುತ್ತಿದ್ದ ತರಬೇತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶ್ರೀ ಎಸ್.ಎ. ಶ್ರೀನಿವಾಸಮೂರ್ತಿಯವರಂಥವರೊಡನೆ ದುಡಿದರು.
​
ಎಲ್ಲಿಯೇ ಇರಲಿ, ಯಾವ ಕಾರ್ಯದಲ್ಲಿಯೇ ನಿರತವಾಗಿರಲಿ ಅವರು ಸಹೋದ್ಯೋಗಿಗಳೊಡನೆ ಸ್ನೇಹ, ವಿದ್ಯಾರ್ಥಿಗಳೊಡನೆ ಪ್ರೀತಿ, ನೆರೆಹೊರೆಯವರೊಡನೆ ಸೌಹಾರ್ದತೆಯಿಂದ ಬದುಕುತ್ತಿದ್ದರೆಂಬುದನ್ನು ನಾವು ಕೇಳಿ ತಿಳಿದದ್ದು ಮಾತ್ರವೇ ಅಲ್ಲ, ಕಂಡುಂಡ ಅನುಭವವೂ ಹೌದು.
Picture
ಪ್ರತ್ಯುತ್ಪನ್ನಮತಿ
ಪ್ರೊ. ಮೂರ್ತಿಯವರನ್ನು ನಾನು ಕರೆಯುತ್ತಿದ್ದದ್ದು ಭಾರತ ಸಮಾಜಕಾರ್ಯದ ದ್ರೋಣಾಚಾರ್ಯ ಎಂದು (ಯಾಕೆಂದರೆ ಅವರು ಆದ್ಯ ಆಚಾರ್ಯರಾಗಿದ್ದವರು). ಅವರ ತಿಳಿಹಾಸ್ಯ ಚಿಲುಮೆಯೋಪಾದಿ; ಅವರ ಸತ್ತ್ವ ಪ್ರತ್ಯುತ್ಪನ್ನಮತಿತ್ವ. ಯಾವುದೇ ಸಂದರ್ಭವಿರಲಿ ಅದನ್ನು ಉಲ್ಲಸಿತವಾಗಿಸುವ ಕಲೆ ಅವರದ್ದು. ನಾನಿತ್ತ ದ್ರೋಣಾಚಾರ್ಯ ಪಟ್ಟವನ್ನು ಅಂಗೀಕರಿಸಿ, ಈ ದ್ರೋಣಾಚಾರ್ಯನು ಯಾವ ಶಿಷ್ಯನ ಹೆಬ್ಬೆರಳನ್ನೂ ಕೇಳುವವನಲ್ಲ! ಎಂದು ತತ್ತಕ್ಷಣವೇ ಹೇಳಿದ್ದರು, ಎಂಬುದನ್ನು ನಾನು ಮರೆಯಲಿ ಹೇಗೆ? ನನ್ನ ಯಾವ ಕೋರಿಕೆಯನ್ನೂ ಅವರು ತಿರಸ್ಕರಿಸಿದವರಲ್ಲ. ಅವರಿಗಿಂತ ಎಲ್ಲ ದೃಷ್ಟಿಗಳಿಂದಲೂ ತೀರಾ ಸಣ್ಣವನದ ನನ್ನನ್ನು ಎಂದೂ ಹಾಗೆ ಕಂಡವರಲ್ಲ. ನನ್ನ ತೀರಾ ಚಿಕ್ಕ ಕೆಲಸವನ್ನೂ ದೊಡ್ಡದೆಂದು ಮೆಚ್ಚಿ, ಬೆನ್ನು ತಟ್ಟುವವರು. ನಾನು ಧಾರವಾಡಕ್ಕೆ ಕರೆದೆನೆಂದು ಬಂದರು, ಉಪನ್ಯಾಸ ಮಾಡಿದರು, ಪುಸ್ತಕ ಬರೆದು ಕೊಟ್ಟರು, ನಾನು ಅದನ್ನು (ಕರ್ನಾಟಕ ವಿಶ್ವವಿದ್ಯಾಲಯದ ವಿಸ್ತರಣ ವಿಭಾಗದಲ್ಲಿ ಡಾ. ಚೆನ್ನವೀರ ಕಣವಿಯವರ ನೆರವಿನೊಡನೆ, ಪ್ರತ್ಯೇಕ ಪ್ರಕಟನಾ ಮಾಲೆಯಲ್ಲಿ- Library of Social Work & Social Work Education-) ಪ್ರಕಟಿಸಿದಾಗ, ಅದನ್ನು (Social Work: Philosophy, Methods and Fields) ಕೈಯಲ್ಲಿ ಹಿಡಿದುಕೊಂಡು, ಸಂಭ್ರಮದಿಂದ, ನೀರಜಾ ಇಲ್ಲಿ ನೋಡು! ಎಂದು ತಮ್ಮ ಪತ್ನಿಯವರನ್ನು ಕರೆದು ತೋರಿಸುತ್ತಾ, ಪ್ರೊಫೆಸರ್ ನನಗೆ ಕೊಟ್ಟ ಬಹುಮಾನ! ಎಂದು ಹೇಳಿದರು. ಅವರೋ ಪ್ರೊ. ಎಂ.ಎಸ್. ಗೋರೆಯಂಥವರಿಗೆ ಗುರುಗಳಾಗಿದ್ದವರು, ಭಾರತದ ನಾನಾ ವಿಶ್ವವಿದ್ಯಾಲಯಗಳಲ್ಲಿ ಹಿರಿಯ ಪ್ರಾಧ್ಯಾಪಕರಿಗೂ ಮಾರ್ಗದರ್ಶನ ಮಾಡಿದ್ದವರು. ಅಮೆರಿಕೆ ಮುಂತಾದ ವಿದೇಶಗಳಲ್ಲಿ ಅನುಭವ ಗಳಿಸಿದವರು, ಸಂಶೋಧನೆಯಲ್ಲಿ ಬರಹದಲ್ಲಿ ಅನುಭವಗಳಿಸಿದವರು, ಜ್ಞಾನದಲ್ಲಿ ವಯಸ್ಸಿನಲ್ಲಿ ತುಂಬಾ ಹಿರಿಯರು; ನಾನೊ ಆಗ ಕೇವಲ ಉಪನ್ಯಾಸಕ, ಎಳೆಯ ಕಂದಮ್ಮ. ಅವರ ಇಂಥ ದೊಡ್ಡಸ್ತಿಕೆಯೇ ಅವರ ವರ್ತುಲಕ್ಕೆ ಸಿಕ್ಕ ಅಲ್ಪರನ್ನೂ ದೊಡ್ಡವರನ್ನಾಗಿಸುತ್ತಿತ್ತು.

ಪ್ರೊ. ಮೂರ್ತಿಯವರ ನವುರು ಹಾಸ್ಯ ಪ್ರಜ್ಞೆಯು ಚೇತೋಹಾರಿ. ನಾನೊಮ್ಮೆ, “Sir, I have conceived  an idea” ಎಂದು ಹೇಳುತ್ತಿದ್ದಂತೆ, “yes, yes I know ! you have all the pleasure of conceiving, and leaving the trouble of  delivering it to us!” ಎಂದು ಹೇಳಿದರು. ಸುತ್ತಿಲಿದ್ದವರು ಹೇಗೆ ನಕ್ಕು ನಲಿದರು ಎಂಬುದನ್ನು ಮರೆಯಲಾದೀತೆ! ಇಂಥ ರಸ ನಿಮಿಷಗಳಿಗೆ ಲೆಕ್ಕವಿಲ್ಲ. ಅವರ ಇಂಗ್ಲಿಷ್ ಕವಿತೆಗಳಂತೂ ಚೇತೋಹಾರಿ ರಸಘಟ್ಟಿಗಳು.

ಪ್ರೊ. ಮೂರ್ತಿಯವರು ಕನ್ನಡದಲ್ಲಿ, ತೆಲುಗಿನಲ್ಲಿ, ಸಂಸ್ಕೃತದಲ್ಲಿ, ಇಂಗ್ಲಿಷಿನಲ್ಲಿ ಬಲ್ಲಿದ ವಿದ್ವಾಂಸರು. ಬಹುಶಃ ಅವರಿಗೆ ಮರಾಠಿ, ಗುಜರಾತಿ, ಹಿಂದಿ ಅಪರಿಚಿತ ಭಾಷೆಗಳೇನೂ ಅಲ್ಲ. ಅವರು ನಾನು ಏರ್ಪಡಿಸಿದ್ದ ವಿವಿಧ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಸಂಪ್ರಬಂಧಗಳನ್ನು ಬರೆದು ನೀಡಿದ್ದರು. ನಾನು ಸಂಪಾದಿಸಿದ ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು ಪುಸ್ತಕದಲ್ಲಿ ಅವರ ಭಕ್ತಿ ಮಾರ್ಗ ಮತ್ತು ಸಮಾಜಕಾರ್ಯ ಮತ್ತು ನಾನೇ ಸಂಪಾದಿಸಿದ Dimensions of Bhakthi Movement In India, ಗ್ರಂಥದಲ್ಲಿ ‘Socio-religions Dimensions of Bhakthi’ ಎಂಬ ಅಪರೂಪದ ವಿದ್ವತ್ಪೂರ್ಣ ಸಂಪ್ರಬಂಧಗಳನ್ನು ಬರೆದು ತಮ್ಮ ಸತ್ತ್ವವನ್ನು ತೋರಿಸಿದ್ದಾರೆ. ಅವರು ಇಂಗ್ಲಿಷಿನಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳನ್ನು ಬರೆದು ಸಮಾಜಕಾರ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಭಾಷೆ ತುಂಬಾ ಸರಳ, ಸುಭಗ, ಮನಂಬುಗುವ ಚೈತನ್ಯದಾಯಿ.
 
ಹಿರಿದಾಗಿಸುವ ಚೇತನ
ಚಿಕ್ಕದನ್ನೂ, ನಾವು ಬಹುಶಃ ಉಪೇಕ್ಷಿಸುವ ಪ್ರಸಂಗಗಳನ್ನೂ, ಮಹತ್ವದವೆಂದು ತೋರಿಸುವ ಹಿರಿಮೆ ಪ್ರೊ. ಮೂರ್ತಿಯವರದ್ದು. ಮನೆಯ ಮುಂದಿನ ಚರಂಡಿಯ ಕಸವನ್ನಾಗಲಿ, ಎದುರು ರಸ್ತೆಯ ಮೇಲೆ ಮಕ್ಕಳು ಮಾಡುವ ಮಲ ವಿಸರ್ಜನೆಯಾಗಲಿ, ತುಂಬಿ ತುಳುಕುವ ಕಸದ ತೊಟ್ಟಿಯಾಗಲಿ, ಮದುವೆ ಮಂಟಪದ ಮುಂದೆ ಚೆಲ್ಲಿದ ಎಂಜಲನ್ನು ನಾಯಿಗಳೊಡನೆ ಸ್ಫರ್ಧೆಯಿಂದ ತಿನ್ನುವ ಬಡಜನರ ಸ್ಥಿತಿಯನ್ನಾಗಲಿ ಉಪೇಕ್ಷಿಸುವವರಲ್ಲ. ಇಂಥವುಗಳನ್ನು ಕುರಿತು ನಮ್ಮೊಡನೆ ಗಂಭೀರವಾಗಿ ಚರ್ಚಿಸಿದ್ದುದುಂಟು. ನಮ್ಮಲ್ಲಿ ವೃಂದಗತ ಕಾರ್ಯವು ಬಲಿಷ್ಠಗೊಳ್ಳುವ ಬಗ್ಗೆ ನಮ್ಮ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಇದು ಎಷ್ಟು ಅಗತ್ಯ ಎಂಬುದರ ಬಗ್ಗೆ ನನ್ನೊಡನೆ ಪ್ರಸ್ತಾಪಿಸುತ್ತಿದುದೂ ಉಂಟು.
​
ಅವರ ಮತ್ತು ನಮ್ಮ ಕುಟುಂಬಗಳ ನಡುವೆ ಆತ್ಮೀಯ ಸಂಬಂಧವಿತ್ತು. ನನ್ನ ಬಗೆಗೆ ಅವರಿಗೆ ನಿರ್ವ್ಯಾಜ ಪ್ರೀತಿ. ನಾನು ಕರೆದಾಗಲೆಲ್ಲಾ ಸಭೆಸಮಾರಂಭಗಳಿಗೆ ಬಂದು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು; ನನ್ನ ಕನ್ನಡ ಪುಸ್ತಕಗಳಿಗೆಗೂ, ಇಂಗ್ಲಿಷ್ ಪುಸ್ತಕಗಳಿಗೂ ಮುನ್ನುಡಿಗಳನ್ನು ಬರೆದು ಪ್ರೋತ್ಸಾಹಿಸುತ್ತಿದ್ದರು; ನನ್ನ ಹುಟ್ಟು ಹಬ್ಬಗಳಂದು ಆಗಮಿಸಿ, ಆಶೀರ್ವದಿಸುತ್ತಿದ್ದರು. ಅವರ ನೆರೆ ಹೊರೆಯಲ್ಲಿದ್ದ ನಮ್ಮ ಅಣ್ಣ ಶ್ರೀ ಹಿ.ಮ. ನಾಗಯ್ಯನವರೂ ಅವರ ಆಪ್ತರು. ನಮ್ಮ ಅಣ್ಣನವರ ಕಡೆ ನಾನು ಹೋದಾಗಲೆಲ್ಲಾ ಪ್ರೊ. ಮೂರ್ತಿಯವರನ್ನು ಕಾಣದೆ ಹಿಂದಿರುತ್ತಿರಲಿಲ್ಲ. ನಾನು ನನ್ನ ಕುಟುಂಬದ ಸದಸ್ಯರೊಡನೆ ಅವರ ಮನೆಗೆ ಹೋದಾಗ ನಮ್ಮನ್ನು ಉಪಚರಿಸುತ್ತಿದ್ದುದನ್ನೂ ಮರೆಯಲಾಗದು. ಅಂತೆಯೇ ಅವರು ತಮ್ಮ ಪತ್ನಿ ಸಮೇತ ನಮ್ಮ ಮನೆಗೆ ಬಂದು ನಮ್ಮ ಅಲ್ಪ ಉಪಚಾರವನ್ನು ಹಿರಿ ಹಿಗ್ಗಿನಿಂದ, ಯಾವ ಮುಜುಗರವೂ ಇಲ್ಲದೆ, ಸ್ವೀಕರಿಸುತ್ತಿದ್ದುದು ಸ್ಮರಣೀಯ. ಈ ಎಲ್ಲ ಪ್ರಸಂಗಗಳು ಕಣ್ಣ ಮುಂದೆ ದೃಶ್ಯ ದೃಶ್ಯವಾಗಿ ಸುಳಿಯುತ್ತವೆ.
           
ವಿಷಕಂಠ
ಪ್ರೊ. ಮೂರ್ತಿಯವರು ಅನೇಕ ಕಹಿ ಪ್ರಸಂಗಗಳನ್ನು ಅನುಭವಿಸಿದ್ದಾರೆ; ಉಪಕೃತರಾದವರೂ ಅವರಿಗೆ ಅಪಚಾರ ಮಾಡಿದ್ದುದುಂಟು. ಆದರೂ, ನನಗೆ ತಿಳಿದ ಮಟ್ಟಿಗೆ, ಎಂದೂ ಅವರು ತಮ್ಮ ನೋವನ್ನು ವ್ಯಕ್ತ ಮಾಡಿದವರಲ್ಲ. ನನ್ನ ಉದ್ಯೋಗದ ಸಂದರ್ಭದಲ್ಲಿ, ನನ್ನನ್ನು ಸಂದರ್ಶಿಸಲು ಬಂದಾಗ, ಅವರ ಬಗೆಗೆ ಆಧಾರರಹಿತ ಆಪಾದನೆ ಹೊರಿಸಲಾಗಿತ್ತು. ಆಗಲೂ ಅವರು ವಿಚಲಿತರಾಗದೆ, ಮಂದಸ್ಮಿತರಾಗಿಯೇ ಇದ್ದರು ಎಂಬುದು ಸೋಜಿಗದ ಸಂಗತಿ. ಅವರು ವಿಷವನ್ನು ಉಂಡು ಜೀರ್ಣಿಸಿಕೊಂಡವರು. ಇದು ಸಾಧ್ಯವಾಗಿದ್ದುದು ಅವರು ಸಾಧಿಸಿ, ರೂಪಿಸಿಕೊಂಡಿದ್ದ ಸ್ಥಿತ ಪ್ರಜ್ಞೆಯ ವ್ಯಕ್ತಿತ್ವ, ಎಂದು ಅವರ ನಿಕಟವರ್ತಿಗಳಿಗೆ ಅರಿವಾಗದೇ ಇರದು.
 
ನಿಷ್ಪತ್ತಿ
ನನಗೆ ಪ್ರೊ. ಮೂರ್ತಿಯವರ ಪರಿಚಯವಾದದ್ದು ಅವರು ಆಂಧ್ರ ವಿ.ವಿ.ದಲ್ಲಿ ಇದ್ದಾಗ (ಸು. 1970) ಅಂದಿನಿಂದ ಅವರು ನಮ್ಮಿಂದ ಮರೆಯಾಗುವರಿಗೂ (2000) ನಾವು ಅವರ ಕುಟುಂಬದೊಡನೆ ಬೆರೆತದ್ದು ಅವಿಸ್ಮರಣೀಯ. (ಈ ಸಂದರ್ಭದಲ್ಲಿ ಪ್ರೊ.ಮೂರ್ತಿಯವರ ಮಗಂದಿರಾದ ಶ್ರೀ. ಅಂಬರೀಷರಾಜ ಮತ್ತು ಶ್ರೀ. ನಹುಷರಾಜ ಇವರೂ ನಮಗೆ ತುಂಬಾ ಆತ್ಮೀಯರಾದರೆಂಬುದನ್ನು ನೆನೆಯಲೇ ಬೇಕು. ಶ್ರೀ ಅಂಬರೀಷರಾಜ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ, ಸಿಬ್ಬಂದಿ ಆಡಳಿತೆ, ಇವುಗಳಲ್ಲಿ ಆಳವಾದ ಛಾಪನ್ನು ಒತ್ತಿದವರು; ಶ್ರೀ ನಹುಷರಾಜರವರು ತಮ್ಮ ವ್ಯವಹಾರ ಚಾತುರ್ಯದಿಂದ ಹೆಸರುಗಳಿಸುದಲ್ಲದೆ ಬೆಂಗಳೂರು ಕಿಡ್ನಿ ಫೌಂಡೇಷನ್ಗೆ ಬೆನ್ನೆಲುಬಾಗಿ ಅತ್ಯುಪಯುಕ್ತ ಕಾರ್ಯ ನಡೆಸಿದ್ದಾರೆ. ಇವರಿಂದಲೂ ಪ್ರೊ.ಮೂರ್ತಿ ಮತ್ತು ಅವರ ಪತ್ನಿಯವರ ಜೀವನದ ಒಳನೋಟಗಳನ್ನು ನಾನು ಪಡೆಯಲು ಸಾಧ್ಯವಾಯಿತು). ನಾನು ವೈಯುಕ್ತಿಕವಾಗಿ ಅವರಿಂದ ಪಡೆದದ್ದು ಬೆಳಕಿನ ದಾರಿಯನ್ನು, ಜ್ಞಾನದ ನಿಧಿಯನ್ನು, ಜನರೊಡನೆ ಹೇಗೆ ಸೊಗಸಾದ ಸಂಬಂಧವನ್ನು ಕಾಪಾಡಿಕೊಂಡು ಹೋಗಬೇಕೆಂಬ ಪರಿಯನ್ನು, ಅನ್ಯರಲ್ಲಿರುವ ಗುಣವನ್ನು ಗುರುತಿಸಿ ಮೆಚ್ಚುವ ರೀತಿಯನ್ನು, ಸಣ್ಣತನವನ್ನು ಕ್ಷಮಿಸುವ ಔದಾರ್ಯವನ್ನು, ಮಾನವ ಜೀವನವನ್ನು ದೊಡ್ಡದನ್ನಾಗಿಸುವ ಮಾರ್ಗವನ್ನು, ನಮ್ಮ ಸಂಸ್ಕೃತಿಯನ್ನು ಗೌರವಿಸಿ ಅದನ್ನು ಮೈಗೂಡಿಸಿಕೊಂಡು ಬಾಳುವ ಆವಶ್ಯಕತೆಯನ್ನು, ಲೌಕಿಕ ವ್ಯವಹಾರಗಳ ಒಳಗಿದ್ದೂ ಅದಕ್ಕೆ ಅಂಟಿಕೊಳ್ಳದ ನಿರ್ಮಮತೆಯನ್ನು, ದಾಂಪತ್ಯವೆಂಬುದರ ರಸ ನಿಷ್ಪತ್ತಿಯ ದರ್ಶನವನ್ನು, ಸಮಾಜಕಾರ್ಯವನ್ನು ಹೇಗೆ ನಮ್ಮ ಜೀವನದ ಉಸಿರನ್ನಾಗಿಸಿಕೊಳ್ಳಬೇಕೆಂಬ ಕಲೆಯನ್ನು. ಅವರ ಬಗ್ಗೆ ಇನ್ನೆಷ್ಟನ್ನೂ ಹೇಳಬಹುದು.
 
ಡಾ.ಎಚ್.ಎಂ. ಮರುಳಸಿದ್ಧಯ್ಯ
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    Picture

    Social Work Learning Academy

    Join WhatsApp Channel

    Picture
    For more details

    Picture
    For more details

    Picture
    For more details

    Picture
    For more details

    Niruta Publications

    Social Work Foot Prints

    Leaders Talk

    Ramesha Niratanka

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA CITIZENS CONNECT

  • NIRATHANKA CITIZENS CONNECT

JOB

  • JOB PORTAL​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For more details
Picture
For more details
Picture
For more details


Picture
Follow Niruta Publications WhatsApp Channel
Follow Social Work Learning Academy WhatsApp Channel
Follow Social Work Books WhatsApp Channel



JOIN OUR ONLINE GROUPS


ONLINE STORE


Copyright Niruta Publications 2021,    Website Designing & Developed by: www.mhrspl.com