ಎಚ್.ಐ.ವಿ. ಸೋಂಕಿರುವ ಕುರಿತು 2001 ರಿಂದ 2003 ರವರೆಗೆ ನಡೆಸಿದ ವಿವಿಧ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಶೇ 1% ರಷ್ಟು ಸೋಕಿರುವ ಮಕ್ಕಳಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಚ್.ಐ.ವಿ. ಸೋಂಕಿರುವುದು ಕಂಡು ಬಂದಿರುತ್ತದೆ. ಅದರಲ್ಲೂ ಕೊಪ್ಪಳ, ಬೆಳಗಾಂ, ವಿಜಾಪೂರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ಶೇ 2 ರಿಂದ 3 ರಷ್ಟು ಇರುವುದು ವರದಿಗಳಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ಐಚಾಪ್ ಹಾಗೂ ಕೆ.ಎಚ್.ಪಿ.ಟಿ (Karnataka Health Promotion Trust) ಯೋಜನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಎಚ್.ಐ.ವಿ. ಸೋಂಕಿರುವ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಪ್ರಾಯೋಜಕತ್ವ ಹಾಗೂ ವಿಶೇಷ ಪಾಲನಾ ಯೋಜನೆಗಳು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಿದೆ. ಹೀಗಾಗಿ, ಎಚ್.ಐ.ವಿ. ಸೋಂಕಿರುವ ಅಥವಾ ಬಾಧಿತರಾಗಿರುವ ಮಕ್ಕಳ ಪುನರ್ವಸತಿಯತ್ತ ಹೊಸ ಭರವಸೆ ಮೂಡಿದೆ. ಎಚ್.ಐ.ವಿ. ಹರಡಲು ವಲಸೆ, ಅಸುರಕ್ಷಿತ ಲೈಂಗಿಕ ಸಂಬಂಧಗಳು, ಜನರಲ್ಲಿ ಎಚ್.ಐ.ವಿ. ಅರಿವಿನ ಕೊರತೆ, ಅವ್ಯಾಹತವಾಗಿ ನಡೆಯುತ್ತಿರುವ ಬಾಲ್ಯ ವಿವಾಹಗಳು ಪ್ರಮುಖ ಕಾರಣಗಳಾಗಿವೆ. 2007ರಲ್ಲಿ ಕೆ.ಎಚ್.ಪಿ.ಟಿ. ನಡೆಸಿದ ಸಮೀಕ್ಷೆಯ ಪ್ರಕಾರ ಬಾಗಲಕೋಟ ಜಿಲ್ಲೆಯೊಂದರಲ್ಲೇ 2500 ಹಾಗೂ ವಿಜಾಪೂರ ಜಿಲ್ಲೆಯಲ್ಲಿ 1300 ಎಚ್.ಐ.ವಿ. ಸೋಂಕಿತರು ಹಾಗೂ ಬಾಧಿತ ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಜನರಲ್ಲಿ ಎಷ್ಟೇ ಅರಿವು ಮೂಡಿಸಿದರೂ, ಹೆಚ್ಐವಿ ಸೋಕಿತ ಮಕ್ಕಳನ್ನು ಕಂಡರೆ ಇಂದಿಗೂ ಸಾಮಾಜಿಕ ತಾರತಮ್ಯ ಕಂಡುಬರುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಕೆಲವು ಸ್ಥಳಗಳಲ್ಲಿ ಎಚ್.ಐ.ವಿ ಸೋಂಕಿರುವ ಮಕ್ಕಳನ್ನು ಮುಟ್ಟದೆ ದೂರದಿಂದಲೇ ಪರೀಕ್ಷೆ ಮಾಡುವ ಮತ್ತು ಚಿಕಿತ್ಸೆ ಕೊಡುವ ನಾಟಕವಾಡುವ ಪದ್ಧತಿ ಇದೆ. ಎಚ್.ಐ.ವಿ. ಇಂದಾಗಿ ತೊಂದರೆ ಇರುವ ಮಕ್ಕಳೆಂದರೆ: 1) ಪಾಲಕರು ಮತ್ತು ಪೋಷಕತ್ವ ಇಲ್ಲದ ಮಕ್ಕಳು, 2) ಪಾಲಕರಲ್ಲಿ ಒಬ್ಬರಿಗೆ ಸೋಕಿರುವ ಮಕ್ಕಳು, 3) ಇಬ್ಬರೂ ಸೋಕಿತರಾಗಿರುವ ಪಾಲಕರ ಮಕ್ಕಳು ಮತ್ತು 4) ಸೋಂಕಿಗೊಳಗಾದ ಪೋಷಕರಿದ್ದು ನಿರ್ಲಕ್ಷಿತ ಬಡ ಕುಟುಂಬದ ಮಕ್ಕಳು.
ಈ ಮಕ್ಕಳಿಗೆ ತಕ್ಷಣಕ್ಕೆ ಸಿಗಬೇಕಾದದ್ದು ಪೌಷ್ಟಿಕ ಆಹಾರ, ಆರೋಗ್ಯ, ವಸತಿ, ರಕ್ಷಣೆ, ಮನೋಸಾಮಾಜಿಕ ಬೆಂಬಲ ಮತ್ತು ಶಿಕ್ಷಣ. ಇವೆಲ್ಲವುಗಳನ್ನು ಅನುಕ್ರಮವಾಗಿ ತಲುಪಿಸಲೇಬೇಕಾಗಿದ್ದು ಸರಕಾರದ ಆದ್ಯ ಕರ್ತವ್ಯವಾಗಿದೆ. ಆದರೆ, ಯೋಜನೆಗಳ ಮಾಹಿತಿ ತಳಮಟ್ಟದಲ್ಲಿ (ಗ್ರಾಮೀಣ / ಕೊಳೆಗೇರಿ) ಪ್ರಚಾರವಾಗದೆ ಇರುವುದು ಯೋಜನೆಗಳ ಅನುಷ್ಠಾನದಲ್ಲಿ ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ. ಸದ್ಯ ಇಂತಹ ಬಹಳಷ್ಟು ಮಕ್ಕಳಿಗೆ ಸರಿಯಾಗಿ ಊಟವಿಲ್ಲ, ಪ್ರೀತಿಯೊಂದಿಗೆ ಆರೈಕೆ ಮಾಡುವ ಹೃದಯಗಳಿಲ್ಲ. ಹೀಗಾಗಿ ಅವರಿಗೆ ಮಾನಸಿಕ ಭದ್ರತೆ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ, ಐಸಿಟಿಸಿ, ಸಿಡಿ4, ಟಿಬಿ, ಎಆರ್‍ಟಿ ವ್ಯವಸ್ಥೆ ಉಚಿತವಾಗಿದೆ. ಆದರೆ, ಸಿಡಿ4, (ಬಿಳಿ ರಕ್ತ ಕಣಗಳು) 350 ಕ್ಕಿಂತ ಕಡಿಮೆ ಇದ್ದಾಗ ಈ ಸೌಲಭ್ಯ ಸಿಕ್ಕರೂ, ಈ ಚಿಕಿತ್ಸೆ ಪ್ರಾರಂಭಿಸಿದ ಮೇಲೆ ವಿಶೇಷವಾಗಿ ಪೌಷ್ಟಿಕ ಆಹಾರ ಅತ್ಯವಶ್ಯಕವಾಗಿರುತ್ತದೆ. ಉತ್ತಮ ಆಹಾರ ಸಿಗದಿದ್ದರೆ, ಈ ಮೇಲಿನ ಸೌಲಭ್ಯಗಳಿದ್ದರೂ ನಿರರ್ಥಕ ಹಾಗೂ ಈ ಮಕ್ಕಳು ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ. ಇಂತಹ ಮಕ್ಕಳ ಪುನರ್ವಸತಿ ಕಾರ್ಯಕ್ರಮಗಳು ನಡೆದರೂ, ಅಷ್ಟೊಂದು ಪರಿಣಾಮಕಾರಿಯಾದ ಅನುಷ್ಠಾನವಿಲ್ಲ. ಆದ್ದರಿಂದ ನಮ್ಮ ಸರಕಾರ ಹೆಚ್ಚಿನ ಗಮನ ಈ ಮಕ್ಕಳ ಕಡೆಗೆ ಹರಿಸುವದು ಅತ್ಯವಶ್ಯವಾಗಿದೆ. ಇಂತಹ ಮಕ್ಕಳ ಪುನರ್ವಸತಿ ಕಾರ್ಯದಲ್ಲಿ ತಜ್ಞರಿರುವ ತಲಾ ಒಬ್ಬೊಬ್ಬ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಮತ್ತು ಸರಕಾರಿ ಅಧಿಕಾರಿಗಳನ್ನು ಗುರುತಿಸಿ ಯೋಜನೆಯ ಅನುಷ್ಠಾನದ ಭಾಗಿದಾರರನ್ನಾಗಿ ನೇಮಿಸಬೇಕು. ಈ ಕುರಿತು ಶಾಲೆ-ಕಾಲೇಜು, ಅಧಿಕಾರಿಗಳು ಹಾಗೂ ಎಲ್ಲಾ ಹಂತದಲ್ಲಿರುವ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಅವಶ್ಯ. ಎಚ್.ಐ.ವಿ ಸೋಂಕಿತ ಮಕ್ಕಳ ರಕ್ಷಣೆಗಾಗಿ ಕೆಲವು ಸಲಹೆಗಳು:
ಬದುಕುವ (ಜೀವಿಸುವ) ಹಕ್ಕು - ಹೆಚ್ಐವಿ ಸೋಂಕಿತ ಗರ್ಭಿಣಿ ತಾಯಂದಿರನ್ನೇ ಆಸ್ಪತ್ರೆಯ ವೈದ್ಯರು ಮುಟ್ಟುತ್ತಿಲ್ಲ, ಹೀಗಾಗಿ ಮಗುವಿಗೆ ಸುರಕ್ಷಿತ ಜನನ ಹಾಗೂ ಪಾಲನೆ - ಪೋಷಣೆ ನೀಡುವವರೇ ಹಿಂದೆ ಸರಿದಾಗ ಬದುಕುವ ಹಕ್ಕು ಸಿಗಲು ಸಾಧ್ಯವೇ? ರಕ್ಷಣೆಯ ಹಕ್ಕು- ಕಾಯುವವರೇ ಕೊಲ್ಲುವವರಾದಾಗ ರಕ್ಷಿಸುವವರಾರು? ಹೆಚ್ಐವಿ ಸೋಂಕಿತರಾಗಿ ಪೋಷಕತ್ವವಿಲ್ಲದೆ ಹಾಗೂ ಕೆಲವರು ಮಕ್ಕಳಿಗೆ ಸೋಂಕಿಲ್ಲದಿದ್ದರೂ, ಇಂತಹವರು ಪಾಲಕರು ಎಂದು ಮಕ್ಕಳನ್ನು ಜರಿಯುವ ವ್ಯವಸ್ಥೆ ಶಾಲೆಯ / ಹಾಸ್ಟೆಲ್ ಒಳ - ಹೊರ ಚಿತ್ರಣವಿರುವಾಗ ರಕ್ಷಿಸುವುದು ಹೇಗೆ? (ಬೆಳಗಾವ ಶಾಲೆ ಪ್ರಕರಣ). ವಿಕಾಸ ಹೊಂದುವ ಹಕ್ಕು- ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆಹಾರ ಅತ್ಯವಶ್ಯ. ಇಂದು ಒಂದು ಮಗು ಬದುಕಲು ಆಹಾರ, ಆರೋಗ್ಯ, ಶಿಕ್ಷಣ, ವಸತಿ, ರಕ್ಷಣೆ, ಮನೋಸಾಮಾಜಿಕ ಬೆಂಬಲ ಅತ್ಯವಶ್ಯ ಆದಾಗ ಇಂತಹ ಮಕ್ಕಳಿರುವ ಕುಟುಂಬಗಳಲ್ಲಿ ಊಟವೂ ಇಲ್ಲ - ವಸತಿಯೂ ಇಲ್ಲ- ಮಾನಸಿಕ ಬೆಂಬಲವೂ ಇಲ್ಲದಿದ್ದರೆ ಹೇಗೆ ವಿಕಾಸ ಹೊಂದಲು ಸಾಧ್ಯ? ಭಾಗವಹಿಸುವ ಹಕ್ಕು- ಮಕ್ಕಳ ಹಕ್ಕು ಎನ್ನುವಾಗ, ಪ್ರತಿ ಮಗುವಿಗೆ ತನಗೆ ಬೇಕೆನಿಸಿದನ್ನು ಹೇಳುವ ಅಧಿಕಾರ ಬೇಕು ತಾನೆ? ಆದರೆ ಇವರ ಮಾತನ್ನು ಕೇಳುವ ವ್ಯವಧಾನ ಯಾರಿಗೆ ಇದೆ? ಹೇಳಲು ಮಗು ಸಿದ್ಧವಿದ್ದರೂ ಕೇಳುವ ಕಿವಿ ತೆರದಿರಬೇಕು. ಅದು ಸದ್ಯದ ವ್ಯವಸ್ಥೆಯಲ್ಲಿ ಕಂಡುಬರುತ್ತಿಲ್ಲ. ಇಂದಿನ ಯೋಜನೆಗಳು ಹೆಚ್ಚಿನ ಮಕ್ಕಳನ್ನು ತಲುಪದೆ ಕೆಲವು ಅಧಿಕಾರಿಗಳ-ಜನಪ್ರತಿನಿಧಿಗಳ ಜೇಬು ಭರ್ತಿ ಮಾಡುವ ವ್ಯವಸ್ಥೆಯಾಗಿದೆಯೇನೋ ಎಂಬ ಅನುಮಾನ ಗಟ್ಟಿಯಾಗುತ್ತದೆ. ಇನ್ನು ಮಕ್ಕಳನ್ನು ನೋಡುವ ಸಿಬ್ಬಂದಿಗಳು ಸೂತ್ರದ ಬೊಂಬೆಗಳಂತೆ ಮೇಲಿನಿಂದ ಬರುವ ಆದೇಶ ಅನುಷ್ಠಾನ ಮಾಡಿದ್ದೇವೆ, ಎನ್ನುವ ಸುಳ್ಳು ವರದಿ ಕಳುಹಿಸುತ್ತಲೆ ಮಕ್ಕಳ ಹಕ್ಕು - ಆರೋಗ್ಯ ಕಸಿದುಕೊಂಡಿದ್ದಾರೆ. ಕೆಲವು ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಕಂಡುಬರುತ್ತಿದೆ. ಆದಾಗ್ಯೂ ಕೆಲವು ಸ್ವಯಂ ಸೇವಾ ಸಂಸ್ಥೆಗಳು ರಾಜ್ಯದ ಕೆಲವು ಭಾಗಗಳಲ್ಲಿ ಸ್ವಪ್ರಯತ್ನದಿಂದ ಮಕ್ಕಳ ಪುನರ್ವಸತಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಡಿವೆ. ಇಂತಹ ಅನುಭವಿ ಸಂಸ್ಥೆಗಳ ಸಹಯೋಗದೊಂದಿಗೆ ಯೋಜನೆಗಳ ಅನುಷ್ಠಾನಗೊಳ್ಳಲಿ. ಸೋಂಕಿತ ಮಕ್ಕಳು ನಮ್ಮ ಮಕ್ಕಳೆಂದು ಭಾವಿಸಿದಾಗ ಸರಿಯಾದ ಉತ್ತರ ಸಿಕ್ಕೀತು. ವಾಸುದೇವ ತೋಳಬಂದಿ ನಿರ್ದೇಶಕರು, ಉಜ್ವಲ ಸಂಸ್ಥೆ, ವಿಜಾಪೂರ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|