ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ದೊರೆಸ್ವಾಮಿಗಳು ಹೋರಾಡಲು ಮುನ್ನಡೆಯದಿದ್ದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಲ್ಲ, ಅವರ ನಿಷ್ಠೆ ಅಚಲ, ಸಂಕಲ್ಪದೃಢ, ನಿರ್ಭೀತ ಮನೋನಿಶ್ಚಯ. ತಮ್ಮ ಆದರ್ಶಗಳ ಸಾಧನೆಗಾಗಿ ರಣರಂಗಕ್ಕೆ ಮುನ್ನಗ್ಗಿ ಅವಿರತ ಹೋರಾಟದಲ್ಲಿ ತೊಡಗುವುದು ಅವರ ಜಾಯಮಾನ. ಜಾತೀಯ ಪಿತೂರಿಗಳಿಂದ ಕುಲಷಿತಗೊಂಡಿದ್ದ ಕರ್ನಾಟಕ ಏಕೀಕರಣ ಸಮಸ್ಯೆಯ ಬಗ್ಗೆ ಎಲ್ಲರನ್ನು ಒಂದುಗೂಡಿಸಿ ದಂಡುಕಟ್ಟಿ ದುಡಿದದ್ದೂ, ಸರ್ವೋದಯ ಕಾರ್ಯಗಳಿಗೆ ಟೊಂಕಕಟ್ಟಿ ರಾಜ್ಯದಾದ್ಯಂತ ಅಡ್ಡಾಡಿ ಜಾತೀಯ ದ್ವೇಷಪೂರಿತ ಗುಂಪುಗಳ ನಡುವೆ ಸೌಹಾರ್ದವೇರ್ಪಡಿಸಿದ್ದೂ, ಅವರ ಮಹತ್ವದ ಸಾಧನೆಗಳಲ್ಲಿ ಒಂದು ಹಾಗೂ ಭಾರತ ಸೇವಕ ಸಮಾಜದ ಪ್ರತಿನಿಧಿಯಾಗಿ, ಕೊಳೆಗೇರಿಗಳ ಸುಧಾರಣೆಗೆ ಕಂಕಣ ಕಟ್ಟಿ ದುಡಿದರೂ ಅವರ ಸಾಧನೆಗೆ ಇಟ್ಟ ಮತ್ತೊಂದು ಗರಿ. ದುಡ್ಡೆ ದೊಡ್ಡಪ್ಪ ಎಂದು ಹಂಬಲಿಸುತ್ತಿರುವ ಇಂದಿನ ಕ್ಷುದ್ರ ಸಮಾಜ, ನೈತಿಕ ಅಧಃಪತನದತ್ತ ದಾಪುಗಾಲು ಹಾಕುತ್ತಿದೆ. ಇಂದಿನ ಹವಾಲಾಯುಗದ, ಆಯರಾಂ, ಗಯಾರಾಂ ಹಾಗೂ ಸುಖ್ರಾಂಗಳು ಈ ಹವಾಲಾಯುಗದ ಅಧಿದೇವತೆಗಳಾಗಿ ಮೆರೆಯುತ್ತಿದ್ದಾರೆ. ರಭಸವಾಗಿ ಸರ್ವನಾಶದತ್ತ ಧಾವಿಸುತ್ತಿರುವ ಈ ಸಮಾಜದ ನೈತಿಕ ಅಧಃಪತನವನ್ನು ತಡೆಯಬೇಕಾದಲ್ಲಿ ಇಂತಹ ಸಮಾಜೋದ್ಧಾರಕರ ಚಿಂತನ ಮತ್ತು ಕಾರ್ಯತತ್ಪರತೆಯ ಬಗ್ಗೆ ಜನರು ಆಸಕ್ತಿ ತೋರಿ, ಅರ್ಥಮಾಡಿಕೊಂಡು ತಾವೇನು ಮಾಡಬಹುದೆಂದು ವಿವೇಚಿಸಿ ಆ ಮಾರ್ಗದಲ್ಲಿ ಇಂತಹ ಹಿರಿಯ ಚೇತನಗಳ ಜೊತೆಯಲ್ಲಿ ದಿಟ್ಟ ಹೆಜ್ಜೆಯನಿಟ್ಟರೆ ಅಧೋಗತಿಯ ಕಡೆ ಸಾಗುತ್ತಿರುವ ಸಮಾಜವನ್ನು ಮತ್ತೊಮ್ಮೆ ಮೇಲೆತ್ತಿ ಅದರ ಸರ್ವ ರೀತಿಯ ಅಭಿವೃದ್ಧಿಗೆ ಶ್ರಮಿಸುವ ಮನಸ್ಸನ್ನು ಮಾಡುವ ಕಡೆ ತಮ್ಮ ಮನಸ್ಸುಗಳನ್ನು ನಿರ್ಧರಿಸಬೇಕಾದ ಅಗತ್ಯವಿದೆ.
ದೊರೆಸ್ವಾಮಿಯವರು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ಸಮಾಜದ ಮೂಲ ನೈತಿಕತೆಗೆ ಪೆಟ್ಟುಬಿಳಬಹುದು ಎನ್ನುವ ಕಡೆಯಲೆಲ್ಲ ದೊಡ್ಡ ಧ್ವನಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಹೇಗಿದ್ದವೆಂದರೆ ಕುಡಿತದ ಅಂಗಡಿ ವಿರುದ್ದ ಸತ್ಯಾಗ್ರಹಗಳನ್ನು ನೆಡೆಸಿದ್ದು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಪ್ರಸ್ಥುತ ಮೈಸೂರು ರೋಡಿನಲ್ಲಿನ ಪೊಲೀಸ್ ವಸತಿಗೃಹಗಳ ಪಕ್ಕದಲ್ಲಿ ಒಂದು ಸಾರಾಯಿ ಅಂಗಡಿ ಹಾಗೂ ಹೆಂಡದಂಗಡಿ ಇದ್ದವು. ಈ ಸಾರಾಯಿ ಅಂಗಡಿಗಳಲ್ಲಿ ಸರಿ ಸುಮಾರು 13 ಜನಕ್ಕೂ ಹೆಚ್ಚು ಜನರು ಮಾರಾಟದಲ್ಲಿ ತೊಡಗಿರುತ್ತಿದ್ದರು. ಅದು ಹೆಚ್ಚಾಗಿ ಕಾರ್ಮಿಕರು ವಾಸಿಸುವ ಪ್ರದೇಶ. ಆ ಸಾರಾಯಿ ಅಂಗಡಿಯ ಪಕ್ಕದಲ್ಲೆ ಒಂದು ದೇವಸ್ಥಾನವು ಸಹ ಇತ್ತು. ಈ ಸಾರಾಯಿ ಅಂಗಡಿಯನ್ನು ಮುಚ್ಚಿಸಬೇಕೆಂದು ಸ್ಥಳೀಯ ಜನ ತೀರ್ಮಾನಿಸಿ ಮಾರ್ಗದರ್ಶನಕ್ಕಾಗಿ ದೊರೆಸ್ವಾಮಿಯವರ ಬಳಿ ಹೋದರು. ಹೋರಾಟ ಶಾಂತಿಯುತವಾಗಿ ನಡೆಯುವುದಾದರೆ ಮಾತ್ರ ನಾವು ಇದರಲ್ಲಿ ಕೊಡಿಕೊಳ್ಳುತ್ತೇವೆಂದು ತಿಳಿಸಿ ಹೋರಾಟಕ್ಕಿಳಿದರು. ಇವರ ಜೊತೆಯಲ್ಲಿ ಸರ್ವೋದಯ ಮಿತ್ರರಾದ ನೀಲಕಂಠಯ್ಯ ಗಣಾಚಾರಿ, ಗರುಡ ಶರ್ಮ ಮತ್ತು ಇತರರು ಪೂರ್ವಭಾವಿಯಾಗಿ ಸ್ಥಳಕ್ಕೆ ಭೇಟಿ ನೀಡಿ ರೂಪುರೇಷೆಗಳನ್ನು ರಚಿಸಿದರು. ಸರ್ದಾರ್ ಕೆ.ಎ.ವೆಂಕಟರಾಮಯ್ಯನವರು ಚಳುವಳಿಯ ನಾಯಕತ್ವ ವಹಿಸಿಕೊಂಡರು. ಆ ಸಾರಾಯಿ ಅಂಗಡಿ ಎದುರಿಗೆ ಒಂದು ಚಿಕನ್ ಬೀರಿಯಾನಿ ಮತ್ತು ಬೋಂಡಾ ಅಂಗಡಿಯಿತ್ತು. ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚು ವ್ಯಾಪಾರ ಬೀರಿಯಾನಿ ಅಂಗಡಿಗೂ ಹಾಗೂ 300ರೂಗು ಹೆಚ್ಚು ಬೊಂಡಾ ಅಂಗಡಿಯವನಿಗೆ ವ್ಯಾಪಾರವಾಗುತಿತ್ತು. ಇದರಿಂದ ಆ ಸಾರಾಯಿ ಅಂಗಡಿಯ ವ್ಯಾಪಾರ ಎಷ್ಟು ಜೋರಾಗಿತ್ತು ಎಂಬುದನ್ನು ತಿಳಿಯಬಹುದು. ಸಾರಾಯಿ ಅಂಗಡಿ ವಿರುದ್ದ ಸತ್ಯಾಗ್ರಹ ಪ್ರಾರಂಭಿಸುವ ಮೋದಲು ಬಿರಿಯಾನಿ ಅಂಗಡಿ ಹಾಗೂ ಬೋಂಡಾ ಅಂಗಡಿಗಳನ್ನು ಯುವಕರೆಲ್ಲರ ಸಹಕಾರದಿಂದ ಮುಚ್ಚಿಸಿ ನಂತರ ಸಾರಾಯಿ ಅಂಗಡಿ ಮುಂದೆ ಚಳುವಳಿ ಪ್ರಾರಂಭಿಸಿದರು. ಈ ಪ್ರದೇಶದ ಸಾಮಾಜಿಕ ವಸ್ತು ಸ್ಥಿತಿ ಹೇಗಿತ್ತೆಂದರೆ ಒಂದು ಕಾಲಕ್ಕೆ ನಿರುದ್ಯೋಗಿಗಳಾಗಿ ಮದ್ರಾಸ್ ಪ್ರಾಂತ್ಯದಿಂದ ವಲಸೆ ಬಂದವರು ಇಲ್ಲಿ ನೆಲೆನಿಂತಿದ್ದರು. ಕಾಲಾ ನಂತರದಲ್ಲಿ ಈ ಜನ ತಮ್ಮ ಜೀವನೋಪಾಯಕ್ಕಾಗಿ ಈ ವರ್ಗದ ಜನ ಕೂಲಿ ಮಾಡುತ್ತಿದ್ದರು ಮತ್ತೆ ಕೇಲವರು ಪಕ್ಕದಲ್ಲೆ ಇದ್ದ ಮಿಲ್ಲುಗಳಿಗೆ ಕೆಲಸಕ್ಕೆ ಸೇರಿಕೊಂಡು ಈ ಭಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ಇಲ್ಲಿಯೇ ವಾಸವಾಗಿದ್ದ ವಿದ್ಯಾಭ್ಯಾಸವನ್ನು ಪಡೆದ ಯುವಕರು ಕುಡಿತದಿಂದಾಗುವ ಸಮಸ್ಯೆಗಳು ಮತ್ತು ಅದರಲ್ಲಿ ನೊಂದು, ಬೆಂದು, ಮುಂದಿನ ಜನಾಂಗವಾದರೂ ಈ ಶಾಪದಿಂದ ಪಾರಾಗಲಿ ಎಂಬ ಅಭಿಲಾಷೆ ಹೊಂದಿದ್ದವರು ಈ ಚಳುವಳಿಯಲ್ಲಿ ಕೂಡಿಕೊಂಡರು. ಕುಡುಕರೇ ಕುಡಿತದಂಗಡಿ ಬೇಡ ಎಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಮೊದಲ ಪ್ರಯೋಗ ಇದು. ಚಳುವಳಿಯಲ್ಲಿ ಭಾಗವಹಿಸಿದ ಕಾರ್ಯಕರ್ತರು ದೇವಸ್ಥಾನದ ಪಕ್ಕದಲ್ಲೇ ಇರುವ ಈ ಸಾರಾಯಿ ಅಂಗಡಿಗೆ ಕುಡಿಯಲು ಬರಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದರು ಸುಮಾರು ನೂರಕ್ಕೆ 90 ಜನ ಹಿಂತಿರುಗುತ್ತಿದ್ದರು. ಕುಡಿತದ ಚಟಕ್ಕೆ ಬಿದ್ದ ಕೆಲವರು ಕಣ್ಣು ತಪ್ಪಿಸಿ ಹೋಗಿ ಕುಡಿಯುತ್ತಿದ್ದರು. ಇದನ್ನು ವಿಫಲಗೋಳಿಸಲು ಸಾರಾಯಿ ಅಂಗಡಿಯ ಮಾಲೀಕರು ಏನೆಲ್ಲ ಪ್ರಯತ್ನಿಸಿದರು ಅದು ಪ್ರಯೋಜನವಾಗಲಿಲ್ಲ. ಸುಮಾರು ಒಂದು ತಿಂಗಳ ಕಾಲ ಸತ್ಯಾಗ್ರಹ ನೆಡೆದು ಯಶಸ್ವಿಯಾಯಿತು. ಕೊನೆಗೆ ಕುಡಿತದ ಅಂಗಡಿಯನ್ನು ಅಲ್ಲಿಂದ ತೆರವುಗೊಳಿಸಿದ ಸಾಧನೆ ದೊರೆಸ್ವಾಮಿಯವರಿಗೆ ಸಲ್ಲಬೇಕು. ಮತ್ತೊಂದು ಘಟನೆಯಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಪ್ರತಿ ಒಂದು ತೊಟ್ಟು ನೀರಿಗೂ ಹಣ ತೆರಬೇಕೆಂದು ಸರ್ಕಾರ ತೀರ್ಮಾನಿಸಿತು. ಅಲ್ಲಿಯವರೆಗೂ ಸುಮಾರು 20,000 ಲೀಟರ್ ನೀರು ಪ್ರತಿ ಮನೆಗೂ ಉಚಿತವಾಗಿ ದೊರೆಯುತ್ತಿತ್ತು. ಬೆಂಗಳೂರಿನ ಆರೋಗ್ಯ ಹಾಗೂ ನೈರ್ಮಲ್ಯಗಳನ್ನು ಕಾಪಾಡಲು ಈ ರೀತಿಯ ಸೌಲಭ್ಯವನ್ನು ಬಹಳ ಹಿಂದಿನಿಂದ ನೀಡಲಾಗಿತ್ತು. ಈ ಸೌಲಭ್ಯವನ್ನು ಸರ್ಕಾರ ಹಿಂತೆಗೆದುಕೊಂಡದ್ದನ್ನು ಪ್ರತಿಭಟಿಸಿ ಸತ್ಯಾಗ್ರಹ ಪ್ರಾರಂಭಿಸಿದರು. ಇದರಲ್ಲಿ ಟಿ. ಸುಬ್ರಹ್ಮಣ್ಯ, ಎಂ.ಎಸ್. ಕೃಷ್ಣನ್, ಟಿ.ಆರ್. ಶಾಮಣ್ಣ, ಕೆ.ಎಂ. ನಾಗಣ್ಣ ಹಾಗೂ ದೊರೆಸ್ವಾಮಿ ಮುಂತಾದವರೆಲ್ಲ ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು ಅನೇಕ ಭಾರಿ ಬಂಧನಕ್ಕೂ ಒಳಗಾಗಿದ್ದರು. ಒಮ್ಮೆ ಇದರ ವಿರುದ್ಧ ಬೃಹತ್ ಮೆರವಣಿಗೆಯನ್ನು ಸಂಘಟಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಪೊಲೀಸರು ಗೋಪಾಲಗೌಡರ ವೃತ್ತದ ಬಳಿ ಮೆರವಣಿಗೆಯನ್ನು ತಡೆದು ಇವರನ್ನೆಲ್ಲ ಬಂಧಿಸಿ ನೇರವಾಗಿ ಕೋರಮಂಗಲ ಬಳಿ ಇರುವ ಪೊಲೀಸ್ ಹೆಡ್ ಕ್ವಾರ್ಟರ್ಸ್‍ಗೆ ಕರೆದೊಯ್ದುರು. ಅಲ್ಲೊಂದು ದೊಡ್ಡ ಹಜಾರದಲ್ಲಿ ಇವರನ್ನೆಲ್ಲ ಕೂಡಿ ಮರುದಿನ ಬೆಳಗ್ಗೆ ಬಿಡುಗಡೆ ಮಾಡಿದರು ಅದರೂ ಒಂದು ವರ್ಷ ಅವ್ಯಾಹತವಾಗಿ ಹೋರಾಡಿದ್ದರ ಫಲವಾಗಿ, ಸರ್ಕಾರಕ್ಕೂ ಮತ್ತು ಸತ್ಯಾಗ್ರಹಿಗಳಿಗೂ ಒಂದು ಒಪ್ಪಂದ ಏರ್ಪಟ್ಟು ಈ ಹಿಂದೆ ಇದ್ದಂತೆಯೇ 25,000 ಲೀಟರ್ ಉಚಿತ ನೀರನ್ನು ಪ್ರತಿ ಮನೆಗೂ ಒದಗಿಸುವ ಭರವಸೆ ದೊರೆಯಿತು. ಇಂದಿಗೂ ದೊರೆಸ್ವಾಮಿಯವರು ನಾಗರಿಕರಿಗೆ ಒದಗಿಸಲಾಗುತ್ತಿರುವ ನೀರಿನ ಧರವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ ಉಚಿತ ನೀರಿನ ಸೌಲಭ್ಯವನ್ನು ಕಿತ್ತುಹಾಕಲಾಗಿದೆ. ಬೆಂಗಳೂರಿನ ಪೌರರು ಮತ್ತೊಂದು ನೀರಿನ ಸತ್ಯಾಗ್ರಹಕ್ಕೆ ಅಣಿಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಎಚ್ಚರಿಸುತ್ತಲೇ ಬರುತಿದ್ದಾರೆ. ದೊರೆಸ್ವಾಮಿಯವರು ಪಾಲ್ಗೊಂಡ ಮತ್ತೊಂದು ಮಹತ್ತರವಾದ ಹೋರಾಟ ಎಂದರೆ ಕೈಗಾ ಅಣುಸ್ಥಾವರದ ವಿರುದ್ಧ ಹೋರಾಟ. ಈ ಹೋರಾಟ ನಡೆದದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಕಾರವಾರದಲ್ಲಿ. ಅಣುಸ್ಥಾವರ ಒಂದನ್ನು ಪಶ್ಚಿಮ ಘಟ್ಟದ ದಟ್ಟವಾದ ಅರಣ್ಯದಲ್ಲಿ ಕೈಗಾ ಎಂಬ ಹಳ್ಳಿಯಲ್ಲಿ ಸ್ಥಾಪಿಸಲು Atomic Energy Commission ತೀರ್ಮಾನ ಮಾಡಿತು. ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿಯಾಗಿದ್ದಾಗ ಈ ಜಾಗವನ್ನು ನಿಗದಿ ಪಡಿಸಲಾಯಿತು. ಈ ಮಧ್ಯೆ ಕೇಂದ್ರ ಸರ್ಕಾರ ಸಹ ಕಾರವಾರ ಬಂದರನ್ನು ರಕ್ಷಣಾ ಇಲಾಖೆಗೆ ವರ್ಗಾಯಿಸಿತು. ಏನಾದರೂ ಯುದ್ಧಗಳು ನಡೆದರೆ ಮಿಲಿಟರಿ ನೆಲೆಗಳ ಮೇಲೆ ಬಾಂಬ್ ದಾಳಿ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಅಣುಸ್ಥಾವರವನ್ನು ಮಿಲಿಟರಿ ನೆಲೆಗಳ ಹತ್ತಿರ ಸ್ಥಾಪಿಸುವುದು ಸರಿಯಾದ ನಿರ್ಧಾರವಲ್ಲ ಹಾಗೂ ಅಣುಸ್ಥಾವರಗಳಿಂದ ಹೊರಡುವ ವಿಕಿರಣಗಳು ವಿಷಪೂರಿತವಾಗಿರುತ್ತವೆ. ಈ ವಿಕಿರಣಗಳು ಮನುಷ್ಯನ ಶರೀರವನ್ನು ಹೊಕ್ಕರೆ ಚರ್ಮ ಸಂಬಂಧವಾದ ರೋಗಗಳು, ಕ್ಯಾನ್ಸರ್, ಗರ್ಭಸ್ರಾವ, ಗರ್ಭಪಾತಗಳಾಗುವ ಸಂಭವವುಂಟು. ಈ ವಿಕಿರಣಗಳು ಗರ್ಭಿಣಿಯರ ಗರ್ಭವನ್ನು ಹೊಕ್ಕರೆ ಹುಟ್ಟುವ ಮಕ್ಕಳು ಅಂಗವಿಕಲರಾಗಿ ಇಲ್ಲವೇ ಮಾನಸಿಕ ರೋಗಿಗಳಾಗಿ ಜನಿಸುವರು. ಅಂದರೆ ಅಣುಸ್ಥಾವರ ಸ್ಥಾಪನೆಯಿಂದ ಈಗಿನ ತಲೆಮಾರಿನವರನ್ನು ಮಾತ್ರವಲ್ಲ, ಮುಂದಿನ ಪೀಳಿಗೆಯನ್ನು ವಿನಾಶಗೊಳಿಸುವ ಸಾಧ್ಯತೆಗಳಿವೆ. ಅಣುಸ್ಥಾವರದ ಆಯಸ್ಸು ಕೇವಲ 25 ವರ್ಷ ಮಾತ್ರ ಆದರೆ ಅದರಿಂದ ಉಂಟಾಗಬಹುದಾದ ವಿನಾಶಗಳ ಪರಿಣಾಮ ಸಾವಿರಾರು ವರ್ಷ ಅದರ ವಿಕಿರಣಗಳು ಮಾರಕವನ್ನುಂಟು ಮಾಡುತ್ತಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಕೈಗಾದಲ್ಲಿ ಅಣುಸ್ಥಾವರ ಸ್ಥಾಪನೆ ಮಾಡಬೇಡಿ ಎಂದು ಪರಿಸರ ವಾದಿಗಳು ಪಟ್ಟುಹಿಡಿದರು. ಆದರೆ ಸರ್ಕಾರ ಮತ್ತು ಅಣುಶಕ್ತಿ ಆಯೋಗ ತಾವು ಅದನ್ನು ಸ್ಥಾಪಿಸಿಯೇ ತೀರುವುದಾಗಿ ನಿರ್ಧರಿಸಿದವು. ಜನತೆಯನ್ನು ಜಾಗೃತಗೊಳಿಸಿ ಅವರನ್ನು ಸರ್ಕಾರದ ವಿರೋಧವಾಗಿ ಸಂಘಟಿಸುವುದು ಪರಿಸರವಾದಿಗಳಿಗೆ ಅನಿವಾರ್ಯವಾಯಿತು. ಈ ಸಂದರ್ಭದಲ್ಲಿ ದೊರೆಸ್ವಾಮಿಯವರು ಸುಮಾರು ಎರಡು ವರ್ಷಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗೆ ಹೋಗಿ ಜನರಲ್ಲಿ ತಿಳುವಳಿಕೆ ಮೂಡಿಸಿದ್ದರಲ್ಲದೆ ಅವರೆಲ್ಲರನ್ನು ಹೋರಾಟಕ್ಕೆ ಅಣಿಗೊಳಿಸಿದರು. ಕಾರವಾರದಲ್ಲಿ ಒಂದು ಹೋರಾಟದ ಸಮಿತಿಯನ್ನು ರಚಿಸಿ ಇಡೀ ಕರ್ನಾಟಕದ ಪರಿಸರ ಪ್ರೇಮಿಗಳ ಒಂದು ಬೃಹತ್ ರ್ಯಾಲಿಯನ್ನು ಕಾರವಾರದಲ್ಲಿ ನೆಡೆಸಿದರು. ಅಣುಸ್ಥಾವರ ಸ್ಥಾಪಿಸಲಾಗುವ ಕೈಗಾದಲ್ಲಿ ಒಂದು ಸತ್ಯಾಗ್ರಹ ನಡೆಸುವ ತೀರ್ಮಾನ ಕೈಗೊಂಡು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಕಾಲೇಜುಗಳಿಗೂ ಹೋಗಿ ಅಣುಸ್ಥಾವರದಿಂದ ಆಗುವ ಅನಾಹುತದ ಬಗ್ಗೆ ತಿಳುವಳಿಕೆ ಮೂಡಿಸಿದರು. ಈ ಕೆಲಸದಲ್ಲಿ ದೊರೆಸ್ವಾಮಿಯವರೊಂದಿಗೆ ಡಾ|| ಎ.ಎನ್. ನಾಗರಾಜ್, ನಾಗೇಶ್ ಹೆಗ್ಡೆ ಮುಖ್ಯವಾಗಿ ಭಾಗವಹಿಸಿದ್ದರು. ಸತ್ಯಾಗ್ರಹಿಗಳು ಕಾರವಾರದಿಂದ ಪಾದಯಾತ್ರೆಯನ್ನು ಕೈಗೊಂಡರು. ಇದರಲ್ಲಿ ಡಾ|| ಕುಸುಮ ಸೊರಬ್, ಬಿ.ಪಿ.ಕದಂ, ಅಪ್ಪಿಕೋ ಚಳುವಳಿಯ ನಾಯಕ ಪಾಂಡುರಂಗ ಹೆಗ್ಡೆ, ಸತ್ಯವ್ರತ ಹಾಗೂ ದೊರೆಸ್ವಾಮಿ ಸೇರಿದಂತೆ ಸಾವಿರಾರು ಜನ ಭಾಗವಹಿಸಿದರು. ಆದರೆ ಅನಂತರದಲ್ಲಿ ಕೈಗಾ ಚಳುವಳಿ ಕರ್ನಾಟಕದ ಉಳಿದ ಭಾಗದಲ್ಲಿರುವ ಪರಿಸರ ಪ್ರೇಮಿಗಳ ಉದಾಸೀನ ನಿಲುವಿನಿಂದ ಕೈಗಾ ಸತ್ಯಾಗ್ರಹ ವಿಫಲವಾಯಿತಾದರೂ, ಈ ಘಟನೆಯಿಂದ ದೊರೆಸ್ವಾಮಿಯವರಿಗೆ ಪರಿಸರದ ಬಗ್ಗೆ ಇರುವ ಕಾಳಜಿಯನ್ನು ಗುರುತಿಸಬಹುದು. ಇದಿಷ್ಠೆ ಅಲ್ಲದೆ ದೊರೆಸ್ವಾಮಿಯವರು ಕೇಂದ್ರ ಸರ್ಕಾರ ನೂತನ ಆರ್ಥಿಕ ನೀತಿ ಜಾರಿಗೆ ತಂದು ಬಂಡವಾಳ ಶಾಹಿಗಳಿಗೆ ಮಣೆ ಹಾಕಲು ಸರ್ಕಾರೀ ಸ್ವಾಮ್ಯದ ಕಾರ್ಖಾನೆಗಳನ್ನು, ಉದ್ಯಮಗಳನ್ನು ಬೇರೆಯವರಿಗೆ ಮಾರಿಬಿಡುವ ಇಲ್ಲವೇ ಮುಚ್ಚಿಬಿಡುವ ಉದ್ದೇಶ ಹೊಂದಿದೆ ಹಾಗೂ ಬಡವರನ್ನು ಕಡೆಗಣಿಸಲಾಗುತ್ತಿದೆ ಎಂದು ಅದರ ವಿರುದ್ಧ ಧ್ವನಿ ಎತ್ತಿದರು ಅವುಗಳ ಜೊತೆ ಜೊತೆಯಲ್ಲಿಯೇ ಕಾರ್ಗಿಲ್ ಕಂಪನಿ ವಿರುದ್ಧದ ಸತ್ಯಾಗ್ರಹ, ಭೂಧಾನ ಚಳುವಳಿ ಹಾಗೂ ಗೋಹತ್ಯಾ ವಿರೋಧಿ ಚಳುವಳಿ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧದ ಹೊರಾಟಗಳು ಪ್ರಮುಖವಾಗಿವೆ. ಈ ರೀತಿಯ ಹತ್ತು ಹಲವು ಸಾಮಾಜಿಕ ಕಳಕಳಿಯ ಹೋರಾಟಗಳನ್ನು ದೊರೆಸ್ವಾಮಿಯವರು ನಡೆಸುತ್ತ ಬಂದಿದ್ದಾರೆ. ಇಂದಿನ ಈ ಅಭದ್ರ, ಅರಾಜಕತೆಯಿಂದ ಕೂಡಿರುವ ಸಮಾಜದಲ್ಲಿ ಸಮಾಜದ ನೈತಿಕ ವಿಚಾರಗಳನ್ನು ಅಧಃಪತನದ ಹಾದಿಗೆ ತಳ್ಳಿರುವ ಇಂದಿನ ಪ್ರಜಾಪ್ರತಿನಿಧಿಗಳ ಮಧ್ಯ ದೊರೆಸ್ವಾಮಿಯವರಂತಹ ಸರಳ ಸಜ್ಜನಿಕೆಯ ಸಾಮಾಜಿಕ ಪರಿವರ್ತಕರು ತೀರ ವಿರಳ. ಆಕರ ಗ್ರಂಥಗಳು 1. ಎಚ್.ಎಸ್. ದೊರೆಸ್ವಾಮಿ, ನೆನಪಿನ ಸುರುಳಿ ತೆರೆದಾಗ, ಸಾಹಿತ್ಯ ಮಂದಿರ ಪ್ರಕಾಶನ, ಬೆಂಗಳೂರು 2. ಎಚ್.ಎಸ್. ದೊರೆಸ್ವಾಮಿ, ಹೋರಾಟದ ದಿಟ್ಟ ಹೆಜ್ಜೆಗಳು, ಸಾಹಿತ್ಯ ಮಂದಿರ ಪ್ರಕಾಶನ, ಬೆಂಗಳೂರು 3. ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಚಳುವಳಿ, ಪಾನ್ಯಂ ಪ್ರಕಾಶನ, ಬೆಂಗಳೂರು 4. ಡಾ|| ಟಿ. ಪದ್ಮ, ಎಚ್.ಎಸ್. ದೊರೆಸ್ವಾಮಿ, ಪ್ರಸಾರಂಗ, ಬೆಂಗಳೂರು ಸಂದರ್ಶನಗಳು 1. ಎಚ್.ಎಸ್. ದೊರೆಸ್ವಾಮಿ, ದಿನಾಂಕ, 1 ಜುಲೈ 2010, ಬೆಂಗಳೂರು 2. ಎಂ.ಎನ್. ಹನುಮಂತರಾವ್, ದಿನಾಂಕ, 6 ಡಿಸೆಂಬರ್ 2010, ತುಮಕೂರು ಪತ್ರಿಕೆಗಳು/ನಿಯತಕಾಲಿಕೆಗಳು 1. ಪ್ರಜಾವಾಣಿ 2. ವಿಶ್ವ ಕರ್ನಾಟಕ 3. ವಿಜಯ ಕರ್ನಾಟಕ 4. ಸಂಯುಕ್ತ ಕರ್ನಾಟಕ 5. ಹೊಸತು 6. ಇತಿಹಾಸ ದರ್ಪಣ 7. ಸಮಾಜ ಕಾರ್ಯದ ಹೆಜ್ಜೆಗಳು ನವೀನ್.ಬಿ.ಎನ್ ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |