ಜೋಡಿಹಕ್ಕಿಗಳನ್ನು ಒಂದೇ ಲೇಖನದಲ್ಲಿ ಹಿಡಿದಿಡುವ ಸಾಹಸ ಇಲ್ಲಿನ ಆಶಯ. ಮೂಲ ಕರ್ನಾಟಕವಾದರೂ ಐತಿಹಾಸಿಕ ಘಟನೆಯಿಂದ ಕೇರಳಕ್ಕೆ ವಲಸೆ ಹೋದ ಪೈ ವಂಶದ ಕುಡಿ ಡಾ.ಕೆ.ವಿ. ಶ್ರೀಧರನ್ ಆಂಧ್ರದ ಡಾ. ಉಮಾ ಅವರೊಡನೆ ಶ್ರೀಧರನ್ ನಡುವಯಸ್ಸಿನಲ್ಲಿ ಜೊತೆಗೂಡಿ ಕರ್ನಾಟಕದಲ್ಲಿ ಬದುಕಿ, ಇಲ್ಲಿಯೇ ಕೊನೆಯುಸಿರೆಳೆದರು. ಸಮಾಜಕಾರ್ಯದಲ್ಲಿ ತೊಡಗಿಕೊಂಡ ಅವರ ಬದುಕು ಅಪರೂಪದ್ದು. ಹೀಗಾಗಿ ಕರ್ನಾಟಕವು ಕೇರಳ ಆಂಧ್ರಗಳನ್ನು ಬೆಸೆದ ನಾಡಾಯ್ತು. ನಾನು ಅವರಿಬ್ಬರನ್ನು ಸೇರಿಸಿ ಬಳಸಿರುವ ಉಮಾ-ಶ್ರೀ ಸಂಯುಕ್ತ ಪದವನ್ನು ಅವರು ಬದುಕಿದ್ದಿದ್ದರೆ ಒಪ್ಪುತ್ತಿದ್ದರೊ, ಕಾಣೆ. ಯಾಕೆಂದರೆ, ಡಾ. ಉಮಾ ಅವರನ್ನು ಶ್ರೀಮತಿ ಉಮಾ ಎಂದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ; ಉಮಾ ಶ್ರೀಧರನ್ ಅಂದರೆ ಅವರಿಬ್ಬರೂ ಒಪ್ಪುತ್ತಿರಲ್ಲಿಲ್ಲವೇನೊ; ಶ್ರೀಧರನ್ ಯಾವಾಗಲೂ ಇವರು ಉಮಾ ಎಂದು ಪರಿಚಯಿಸುತ್ತಿದ್ದರೇ ಹೊರತು ಇವರು ನನ್ನ ಪತ್ನಿ ಉಮಾ ಎಂದು ಪರಿಚಯಿಸುತ್ತಿರಲಿಲ್ಲ. ಆದರೆ ಭಾರತೀಯ ಪರಂಪರೆಯ ಪ್ರಕಾರ ಪ್ರಕೃತಿ-ಪುರುಷ ಮತ್ತು ಅರ್ಧನಾರೀಶ್ವರ ಶಬ್ದಗಳಲ್ಲಿ ಮೊದಲು ಸ್ತ್ರೀ ಆನಂತರ ಪುರುಷ ಬರುತ್ತಾನೆ ಎಂಬುದನ್ನು ಮನದಂದು ಉಮಾ-ಶ್ರೀ ಸರಿಯಾದ ಪ್ರಯೋಗ ಎಂದು ನಾನು ಅಂದುಕೊಳ್ಳುತ್ತೇನೆ. ಪರಂಪರೆಯ ನಿಯಮಗಳಿಗೆ ಬದ್ಧರಾಗಿರದೆ, ಜೋಡಿಯಾಗುವುದರಲ್ಲಾಗಲಿ, ಬಾಳ್ವೆಯನ್ನು ನಡೆಸುವಲ್ಲಾಗಲಿ ಹೊಸತನವನ್ನು ತೋರಿಸಿದವರು ಆ ಇಬ್ಬರು. ಸಮಾಜಕಾರ್ಯಕರ್ತರ ಆಪ್ತವಲಯದಲ್ಲಿ ಶ್ರೀ ಎಂದು ಕರೆಯಲ್ಪಟ್ಟ ಡಾ. ಶ್ರೀಧರನ್ ಸಮಾಜಕಾರ್ಯದಲ್ಲಿ ಅತ್ಯುನ್ನತ ಪದವಿ ಡಾಕ್ಟರೇಟನ್ನು ಅಮೆರಿಕೆಯ ವಿಶ್ವವಿದ್ಯಾಲಯದಲ್ಲಿ ಪಡೆದವರು; ಉಮಾ ಅವರು ವೈದ್ಯಕೀಯ ಪದವಿ ಪಡೆದು ಉತ್ತಮ ವೈದ್ಯೆ ಆಗಿದ್ದವರು, ತಮ್ಮ ವೃತ್ತಿಯನ್ನು ತ್ಯಜಿಸಿ, ಮಕ್ಕಳ ಅಭ್ಯುದಯದ ಕಾರ್ಯದಲ್ಲಿ ಸಾಹಿತ್ಯ ಮತ್ತು ಚಿತ್ರ ರಚನೆಯ ಮೂಲಕ ತಮ್ಮನ್ನು ತೊಡಗಿಸಿಕೊಂಡವರು. ಅವರಿಬ್ಬರೂ ದೂರದ ಒಡಿಶಾದ ಬುಡಕಟ್ಟು ಜನಸಮುದಾಯದಲ್ಲಿ ಬೆರೆತು ಸಾಮಾಜಿಕ ಅಭ್ಯುದಯದಲ್ಲಿ ಸಾರ್ಥಕವಾಗಿ ಉಸಿರಾಡಿದವರು. ಅವರಿಬ್ಬರ ಬಗ್ಗೆ ಬರೆಯಬೇಕೆನ್ನಿಸಿದರೂ ಅವರು ದಾಖಲೆಗಳನ್ನು ಇರಿಸದೇ ಮರೆಯಾಗಿ ಹೋಗಿದ್ದಾರೆ. ಆದರೂ ಅವರು ದಾಖಲೆಗೆ ಅರ್ಹರು.
ಅವರ ವಿದ್ವತ್ತು, ಅವರ ಜಾಣ್ಮೆ, ಅವರ ನಯ-ವಿನಯಶೀಲತೆ, ಅವರ ನಿರ್ಲಿಪ್ತತೆ, ಅವರ ಅಪರಿಗ್ರಹ ಮನೋಭಾವ, ಲೌಕಿಕ ಸಂಪತ್ತಿನ ಬಗೆಗಿನ ಅನಾಸಕ್ತಿ, ಮಾನವತೆಯನ್ನು ವ್ಯಕ್ತಿತ್ವದ ಭಾಗವಾಗಿಸಿಕೊಂಡು ಬಾಳಿದ ಅವರು ನಮ್ಮನ್ನು ಬಹು ಬೇಗನೇ ಅಗಲಿದರೆಂಬುದೇ, ಸಮಾಜಕಾರ್ಯಕ್ಕೆ ಅವರ ಕೊಡುಗೆ ಕೇವಲ ನೆನಪು ಮಾತ್ರವೇ ಎಂಬುದು ದುಃಖದ, ವಿಷಾದದ ಸಂಗತಿ. ಡಾ.ಕೆ.ವಿ. ಶ್ರೀಧರನ್ ಕುರಿತು ಬರೆಯದೆ ಇರಲು ಸಾಧ್ಯವೇ ಇಲ್ಲ, ಅನ್ನಿಸುತ್ತದೆ. ಒಮ್ಮೆ ಅವರ ಬಗ್ಗೆ ಬರೆಯುವುದು ಏನುಂಟು, ಅನ್ನಿಸಿದರೆ ಇನ್ನೊಮ್ಮೆ ಅವರನ್ನು ಕುರಿತು ಎಷ್ಟೊಂದು ಹೇಳಬಹುದು ಅನ್ನಿಸುತ್ತದೆ. ಲೌಕಿಕದ ಕಣ್ಣಿಗೆ ಅವರು ಆದರ್ಶ ಅಲ್ಲವೆನ್ನಿಸಬಹುದು. ಆದರೆ, ಪಾರಲೌಕಿಕ ದೃಷ್ಟಿಯುಳ್ಳವರಿಗೆ ಅವರೊಂದು ದೊಡ್ಡ ರಹಸ್ಯ. ಪ್ರಾಸಂಗಿಕವಾಗಿ, ಅಮೆರಿಕೆಯ ಅವರ ಕಾಲೇಜಿನಲ್ಲಿ ಅವರು ಎಂಥ ಮಾನ್ಯ ವಿದ್ಯಾರ್ಥಿಯಾಗಿದ್ದರೆಂದರೆ, ಅವರಿಗೆ ಫಿಂಕ್ಸ್ (ಇನ್ಸ್ಕ್ರೂಟಬಲ್) ಎಂದು ಶಿಫಾರಸು ಪತ್ರ ನೀಡಿದ್ದರು ಎಂಬುದನ್ನು ಜ್ಞಾಪಿಸಿಕೊಳ್ಳಬೇಕಾಗುತ್ತದೆ. ಹಾಗಂದರೆ, ಆತನೊಬ್ಬ ದುರ್ಭೇದ್ಯ ವ್ಯಕ್ತಿ, ರಹಸ್ಯಮಯವಾದ ಸ್ವಭಾವ ಉಳ್ಳಾತ ಎಂದಾಗುತ್ತದೆ. ಅವರ ಜೀವನ ಚಿತ್ರವನ್ನು ಮನದಂದರೆ ಇದರ ಅರ್ಥ ಸ್ಪಷ್ಟವಾಗುತ್ತದೆ. ಡಾ. ಶ್ರೀಧರನ್ ನೆನಪಾದಾಗಲೆಲ್ಲಾ ಅವರ ಸ್ನೇಹಿತರ, ಗುರು-ಸಮಾನರ, ಸಹೋದ್ಯೋಗಿಗಳ, ವಿದ್ಯಾರ್ಥಿ ಮಿತ್ರರ ನೆನಪಾಗುತ್ತದೆ. ಅವರನ್ನು, ಸಾಮಾನ್ಯವಾಗಿ ಎಲ್ಲರೂ ಆಪ್ತವಾಗಿ ಸಂಬೋಧಿಸುತ್ತಿದ್ದುದು ಶ್ರೀ ಎಂದು. ಶ್ರೀ ಎಂದರೆ ಸಂಪತ್ತು ಎಂದು ಆಗುತ್ತದೆ. ಶ್ರೀ ಅವರು ಸ್ವಭಾವತಃ ಲೌಕಿಕ ವ್ಯವಹಾರದಲ್ಲಿ ನಿರ್ಲಿಪ್ತ. ಅಂದರೆ, ಅವರು ಇಹಲೋಕವನ್ನು ತ್ಯಜಿಸಿದಾಗ ಅವರಿಗೆ ಇದ್ದ ಆಸ್ತಿ ಏನೇನೂ ಇರಲಿಲ್ಲ. ಉಳಿದದ್ದೆಂದರೆ, ನಡು ವಯಸ್ಸಿನಲ್ಲಿ ಜೊತೆಗೂಡಿದ ವೈದ್ಯೆ ಡಾ. ಉಮಾ ಮಾತ್ರ. ಅವರೂ ಅನಾರೋಗ್ಯ ಪೀಡಿತೆ, ಅವರೂ ಮಾನವತೆಯನ್ನು ಮೈಗೂಡಿಸಿಕೊಂಡ ಸಾಹಿತಿ, ಕಲಾವಿದೆ, ಲೌಕಿಕವಾಗಿ ನಿರ್ಲಿಪ್ತೆ. ಒಂದು ರೀತಿಯಲ್ಲಿ ಅವರದ್ದು ಅಪರೂಪದ ಜೋಡಿ. ಶ್ರೀಧರನ್ ಹುಟ್ಟಿದ್ದು 1925, ತೀರಿದ್ದು 2005; ಉಮಾ ಹುಟ್ಟಿದ್ದು 1935, ತೀರಿದ್ದು 2006. ಅವರ ನೆನಪಾದಾಗಲೆಲ್ಲಾ ಸಮಾಜಕಾರ್ಯ ವಲಯದ ಇವರೆಲ್ಲಾ ಕಣ್ಮುಂದೆ ಸುಳಿಯುತ್ತಾರೆ; ಪ್ರೊ.ಎಂ.ವಿ.ಮೂರ್ತಿ, 1 ಪ್ರೊ.ಕೆ.ಎನ್. ಜಾರ್ಜ್, ಶ್ರೀ ಶಂಕರ ಪಾಠಕ 2 ಡಾ.ಎಂ. ವಿಶ್ವನಾಥನ್, ಡಾ.ಕೆ.ವಿ. ರಮಣ, ಡಾ.ಟಿ.ಕೆ. ನಾಯರ್, ಪ್ರೊ.ಎಂ.ಎಸ್. ಗೋರೆ, ಪ್ರೊ.ಸಾ.ಕೃ. ರಾಮಚಂದ್ರರಾವ್, ಎಂ.ವಿ.ರಾಜಶೇಖರನ್,3 ಡಾ.ಎಲ್.ಎಸ್.ಗಾಂಧೀದಾಸ್, ಅಲೆಕ್ಸಾಂಡರ್ ಷಾರ್ಟ್ ಪೂಲ್, ಕುಮಾರಿ ರೋಜ್ ಸುಸೈನಾಥನ್. ಶ್ರೀಧರನ್ ನನಗೆ ಪರಿಚಯವಾದದ್ದು ಅವರು ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಸಿಯಲ್ ಸೈನ್ಸಸ್ನ ನಿರ್ದೇಶಕರಾಗಿದ್ದಾಗ. ಅದು 1974ಕ್ಕಿಂತ ಮೊದಲು. ಆ ಸಂಸ್ಥೆಯ ವ್ಯವಸ್ಥಾಪಕರೊಡನೆ ಹೊಂದಿಕೊಂಡು ಹೋಗಲಿಲ್ಲ ಎಂಬ ಕಾರಣದಿಂದ ಅವರು ತಮ್ಮ ಹುದ್ದೆಯನ್ನು ಬಿಡಬೇಕಾಯ್ತು. ನೀತಿ ನಿಯಮಗಳನ್ನು ಗಾಢವಾಗಿ ನಂಬಿದ್ದ, ತತ್ತ್ವಗಳಿಗೆ ವಿರುದ್ಧವಾಗಿ ರಾಜೀಮನೋಭಾವ ಅವರಿಗೆ ಇರದಿದ್ದುದರಿಂದ ಅವರು ಆ ಸ್ಥಾನದಿಂದ ನಿರ್ಗಮಿಸಬೇಕಾಯ್ತು. ಆದರೆ, ಅವರ ಧೀಶಕ್ತಿಗೆ ತಲೆದೂಗುವವರು ಸಾಕಷ್ಟು ಜನರಿದ್ದರು; ಶಿಷ್ಯ ವೃಂದಕ್ಕೆ ಅವರು ಪರಮ ಆಪ್ತರಾಗಿದ್ದರು; ಸ್ವಭಾವತಃ ಯಾರನ್ನು ನೋಯಿಸದ, ತಮ್ಮ ಕಠಿಣ ನಿಲುವನ್ನು ಮೃದುವಾಗಿ ತಿಳಿಸುವ ಸೌಜನ್ಯ ವ್ಯಕ್ತಿತ್ತ್ವ ಅವರದ್ದು. ಆದರೆ, ಅವರನ್ನು ಒಪ್ಪಿಕೊಳ್ಳದ ದುಷ್ಟಶಕ್ತಿಗಳಿಗೆ ಅವರು ಬಲಿಯಾದದ್ದೂ ಉಂಟು. ಅವರು ಅಸಾಧಾರಣ ರೀತಿಯಲ್ಲಿ ಬೆಳೆಸುತ್ತಿದ್ದ ಸಮಾಜಕಾರ್ಯ ಶಾಲೆಯನ್ನು ಸರಕಾರ ವಶಪಡಿಸಿಕೊಂಡು ಅದನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದಾಗ, ಅದು ಒಂದು ಸ್ನಾತಕೋತ್ತರ ವಿಭಾಗವಾಗಿ ರೂಪಿತವಾದಾಗ ಅಲ್ಲಿಗೆ ಅವರನ್ನು ಸಹಜವಾಗಿ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳಬೇಕಾಗಿತ್ತು. ಹಾಗಾಗದೇ ಇರಲು ಅಂದಿನ ರಾಜ್ಯ ಸರಕಾರವೂ ಅವರ ವಿರುದ್ಧವಾಗಿ ನಿಂತಿತ್ತು. ಇದು ಪಿತೂರಿಯ ಕಾರಣವೆಂಬುದು ಸಾಬೀತಾದರೂ ಯಾರೂ ಏನೂ ಮಾಡಲಾಗಲಿಲ್ಲ. ಆ ಸಂದರ್ಭದಲ್ಲಿ ಹೊಸ ವಿಭಾಗಕ್ಕೆ ನೀವು ಸೇರಬಹುದಲ್ಲವೆ? ಎಂದು ಪ್ರೊ.ಎಂ.ವಿ. ಮೂರ್ತಿಯವರು ಸಲಹೆ ನೀಡಿದ್ದುದು ನನಗೆ ಚೆನ್ನಾಗಿ ನೆನಪಿದೆ. ಆಗ ನಾನು ಹೇಳಿದೆ ಖಚಿತವಾಗಿ, ಆ ಸ್ಥಾನಕ್ಕೆ ಅರ್ಹವಾದ ವ್ಯಕ್ತಿ ಎಂದರೆ ಡಾ.ಕೆ.ವಿ. ಶ್ರೀಧರನ್. ಕಾರಣ ಹಲವಾರು: ಅವರು ನನಗಿಂತ ಹಿರಿಯರು, ಹೆಚ್ಚು ಓದಿಕೊಂಡವರು, ಅಪಾರ ಅನುಭವವನ್ನು ಹೊಂದಿದವರು. ಪೂರ್ವ-ಪಶ್ಚಿಮ ಜಗತ್ತನ್ನು ಕಂಡವರು, ಧೀಮಂತರು. ಮಿಗಿಲಾಗಿ ಅವರು ಹಳೆಯ ಸಂಸ್ಥೆಯ ನಿರ್ದೇಶಕರಾಗಿದ್ದವರು, ಅದನ್ನು ಬೆಳೆಸಿದವರು ಎಂದು ಹೇಳಿದೆ. ಆದರೆ, ಅದಕ್ಕೆ ಅದು ಸಾಧ್ಯವಿಲ್ಲದ ಮಾತು. ಪ್ರಬಲ ಮುಖ್ಯಮಂತ್ರಿಯವರೇ ಶಾಸನ ಸಭೆಯಲ್ಲೇ ಹೇಳಿಕೆ ಕೊಟ್ಟಿದ್ದಾರೆ. ಡಾ. ಶ್ರೀಧರನ್ ಅವರನ್ನು ಆ ವಿಶ್ವವಿದ್ಯಾಲಯದ ಆವರಣದೊಳಗೆ ಕಾಲಿಡಲು ಅವಕಾಶವನ್ನು ಸರಕಾರ ಕೊಡುವುದಿಲ್ಲ ಎಂದು. ಹೀಗಾಗಿ ಅವರು ವಿಶ್ವವಿದ್ಯಾಲಯಕ್ಕೆ ಹೋಗುವ ಸಾಧ್ಯತೆ ಇಲ್ಲ. ಕರ್ನಾಟಕದಲ್ಲಿ ನೀವೇ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಸ್ನಾತಕೋತ್ತರ ಕೋರ್ಸನ್ನು ಮೊದಲು ಸ್ಥಾಪಿಸಲು ಕಾರಣಕರ್ತರಾಗಿದ್ದೀರಿ, ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಮ್ಮನ್ನು ಮೇಲ್ದರ್ಜೆಗೆ ಏರಿಸುವ ಸೂಚನೆಗಳಿಲ್ಲ. ಜೊತೆಗೆ, ಕರ್ನಾಟಕದಲ್ಲಿ ನೀವೇ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗಕ್ಕೆ ಮುಖ್ಯಸ್ಥರಾಗಲು ಸೂಕ್ತ ವ್ಯಕ್ತಿ.... ಎಂದು ಪ್ರೊ. ಮೂರ್ತಿ ಹೇಳಿದರು. ಹೀಗಾಗಿ ನಾನು ಆ ಜಾಗಕ್ಕೆ ಅರ್ಜಿ ಹಾಕಲು ನಿರ್ಧರಿಸಿದೆ. ಇದೂ ಅಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿಯಾಗಿದ್ದ ಶ್ರೀಮತಿ ಜಯಲಕ್ಷ್ಮಮ್ಮಣ್ಣಿ ಅವರು ಅರ್ಜಿ ಹಾಕಲು ಪ್ರೋತ್ಸಾಹಿಸಿದರು. ನಾನು ಆ ಸ್ಥಾನಕ್ಕೆ ಆಯ್ಕೆ ಆದೆ. ಬೆಂಗಳೂರು ವಿಶ್ವವಿದ್ಯಾಲಯ ಸೇರಿದ ನಂತರವೂ ನಾನು ಶ್ರೀಧರನ್ ಜೊತೆ ಅನ್ಯೋನ್ಯ ಸಂಬಂಧವನ್ನು ಮುಂದುವರಿಸಿದೆ. ಅವರೊಡನೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆ. ಅವರನ್ನು ವಿಭಾಗಕ್ಕೆ ಆಹ್ವಾನಿಸುತ್ತಿದ್ದೆ. ಅವರು ಅಚ್ಚರಿಯಿಂದ ಹೇಳುತ್ತಿದ್ದರು, ನೀವು ಧೈರ್ಯವಂತರು. ರಾಜ್ಯದ ಮುಖ್ಯಮಂತ್ರಿಯವರು ಶಾಸನ ಸಭೆಯಲ್ಲಿ ನನ್ನ ವಿರುದ್ಧ ಹೇಳಿದ್ದರೂ ನನ್ನನ್ನು ಆಹ್ವಾನಿಸುತ್ತಿದ್ದೀರಲ್ಲಾ! ನಾನು ಹೇಳಿದ್ದೆ: ಅದು ರಾಜಕೀಯದ ಮಾತು. ಶೈಕ್ಷಣಿಕ ವಲಯದ ನಿಮಯವೇ ಭಿನ್ನ. ಅವರ ಹೇಳಿಕೆಯು ಇಲ್ಲಿ ಹೇಗೆ ಅನ್ವಯವಾಗುತ್ತದೆ? ನಾವು ಮನ್ನಿಸುವುದು ಒಬ್ಬ ಧೀಮಂತ ವ್ಯಕ್ತಿಯನ್ನು. ಸಮಾಜಕಾರ್ಯದಲ್ಲಿ ನಿಮ್ಮಂಥ ಅಪರೂಪದ ವ್ಯಕ್ತಿ ಸಿಗುವುದುಂಟೇ? ಬಹುಶಃ ಮುಖ್ಯಮಂತ್ರಿಯವರಿಗೆ ನಿಮ್ಮ ಸ್ವತ್ತ್ವದ ಪರಿಚಯ ಇದ್ದಿರಲಿಕ್ಕಿಲ್ಲ; ಯಾವುದೋ ಪಿತೂರಿಯಿಂದ ಅವರು ಆ ರೀತಿ ಹೇಳಿರಬೇಕು. ನಿಜವಾಗಿಯೂ ನಿಮ್ಮನ್ನೇ ನಾನಿರುವ ಈ ಕುರ್ಚಿಯಲ್ಲಿ ಕೂಡಿಸಬೇಕಿತ್ತು. ಆಗ ನಾನು, ಬಹುಶಃ, ನಿಮ್ಮ ಅತಿಥಿಯಾಗಿ ಬರುತ್ತಿದ್ದೆ. ಎಂದೆಲ್ಲಾ ಹೇಳಿದುದು ನನಗೆ ನೆನಪಿದೆ. ನನ್ನ ಮಾತಿಗೆ ಅವರ ಉತ್ತರ ಮುಗುಳ್ನಗೆ ಅಷ್ಟೇ. ಡಾ. ಶ್ರೀಧರನ್ ಸಾಮಾಜಿಕ ಅಭ್ಯುದಯದಲ್ಲಿ ಸಾಕಷ್ಟು ಕೆಲಸ ಮಾಡಿದವರು. ಡಾ. ಉಮಾ ಜೊತೆ ಸೇರಿ ಒಡಿಸಾದ ಬುಡಕಟ್ಟು ಜನರ ಅಭ್ಯುದಯಕ್ಕೆ ಅವಿರತವಾಗಿ ಶ್ರಮಿಸಿದರು. ಅವರ ಅನುಭವಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದರು. ಅನೇಕ ಲೇಖನಗಳ ಮೂಲಕ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಗೊಳಿಸುತ್ತಿದ್ದರು. ಅವರ ವಿದ್ವತ್ತು, ಅವರ ಜಾಣ್ಮೆ, ಅವರ ನಯ-ವಿನಯಶೀಲತೆ, ಅವರ ನಿರ್ಲಿಪ್ತತೆ, ಅವರ ಅಪರಿಗ್ರಹ ಮನೋಭಾವ, ಲೌಕಿಕ ಸಂಪತ್ತಿನ ಬಗೆಗಿನ ಅನಾಸಕ್ತಿ, ಮಾನವತೆಯನ್ನು ವ್ಯಕ್ತಿತ್ವದ ಭಾಗವಾಗಿಸಿಕೊಂಡು ಬಾಳಿದ ಅವರು ನಮ್ಮನ್ನು ಬಹು ಬೇಗನೇ ಅಗಲಿದರೆಂಬುದೇ, ಸಮಾಜಕಾರ್ಯಕ್ಕೆ ಅವರ ಕೊಡುಗೆ ಕೇವಲ ನೆನಪು ಮಾತ್ರವೇ ಎಂಬುದು ದುಃಖದ, ವಿಷಾದದ ಸಂಗತಿ. ಡಾ.ಎಚ್.ಎಂ. ಮರುಳಸಿದ್ಧಯ್ಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|