'ಸುಮಂಗಲಿ ಸೇವಾಶ್ರಮ' ಮತ್ತು 'ಸುಶೀಲಮ್ಮ' ಇವು ಎರಡು ಶಬ್ದಗಳಲ್ಲ, ಒಂದೇ ಧ್ವನಿಯ ಎರಡು ಕಂಪನಗಳು. ಒಂದೇ ಸಂಸ್ಥೆ, ಸ್ಥಾವರ; ಇನ್ನೊಂದು ವ್ಯಕ್ತಿ, ಜಂಗಮ. ಮೊದಲಿನದ್ದು ಸ್ಥಾವರವಾದರೂ ಜಡವಲ್ಲ; ಎರಡನೆಯದು ಚಲನಶೀಲದ್ದಾದರೂ ಅಸ್ಥಿರವಲ್ಲ. ಸುಮಂಗಲಿ ಸೇವಾಶ್ರಮದಲ್ಲಿ ಸುಶೀಲಮ್ಮ ಕೆಲವು ಸಮಯಗಳಲ್ಲಿ ಇರದಿದ್ದಾಗಲೂ ಅಲ್ಲಿನ ವಾಸಿಗಳಿಗೆ ಕಾರ್ಯಕರ್ತರಿಗೆ ಮತ್ತು ಸಂದರ್ಶಕರಿಗೆ ಸುಶೀಲಮ್ಮ ಅಲ್ಲಿ ಓಡಿಯಾಡುತ್ತಿದ್ದಾರೆ, ತಮ್ಮೊಡನೆ ಸಂವಾದಿಸುತ್ತಿದ್ದಾರೆ ಎಂಬ ಭಾವನೆ ಬರುವ ಹಾಗೆ ಆ ಸಂಸ್ಥೆಯು ಕ್ರಿಯಾಶೀಲವಾಗಿರುತ್ತದೆ; ಸುಶೀಲಮ್ಮನವರು ಬೆಂಗಳೂರಿನಲ್ಲೇ ಎಲ್ಲಾದರೂ ಹೋಗುತ್ತಿರುವಾಗ, ಯಾರೊಡನೆಯಾದರೂ ಸಂಭಾಷಿಸುತ್ತಿರುವಾಗ ಅಥವಾ ಬೆಂಗಳೂರಿನ ಹೊರಗಡೆ ಪ್ರಯಾಣದಲ್ಲಿದ್ದಾಗ, ಕೆಲಸದಲ್ಲಿ ನಿರತರಾಗಿದ್ದಾಗ ಅವರು ವ್ಯಕ್ತಿಯಾಗಿ ಕಾಣಿಸದೆ ಅವರು ಹುಟ್ಟಿಹಾಕಿ ಬೆಳೆಸುತ್ತಲಿರುವ ಸಂಸ್ಥೆಯೇ ಜಂಗಮ ರೂಪುದಳೆದಿದೆ ಅನ್ನಿಸುತ್ತದೆ. ಸಂಸ್ಥೆ ಮತ್ತು ಅವರು ಸದ್ದು ಮಾಡದ ಕ್ರಾಂತಿ ಸಂಗತಿಗಳು. ನಮ್ಮ ಕಣ್ಣೆದುರಿಗೆ ಸೇವಾಶ್ರಮ ಬೆಳೆಯತ್ತಿರುವ, ತನ್ನ ಚಟುವಟಿಕೆಗಳನ್ನು ವಿಸ್ತಾರಗೊಳಿಸುತ್ತಲಿರುವ ಪರಿಯನ್ನು ನೋಡಿದರೆ ಸುಶೀಲಮ್ಮನವರ ಕರ್ತೃತ್ವಶಕ್ತಿ ಹೇಗೆ ಕುಡಿಯೊಡೆಯುತ್ತಲಿದೆ, ಅರಳುತ್ತಲಿದೆ ಎಂಬುದು ಸುಸ್ಪಷ್ಟವಾಗುತ್ತದೆ. ಸಮಾಜದಲ್ಲಿ ಆಗುತ್ತಲಿರುವ ವೈವಿಧ್ಯಮಯ ಚಟುವಟಿಕೆಗಳಲ್ಲಿ, ಅದರಲ್ಲೂ ಅನ್ಯಾಯ, ದೌರ್ಜನ್ಯ, ಶೋಷಣೆ, ಮೋಸ, ವಂಚನೆ, ಭ್ರಷ್ಟಾಚಾರ, ಇಂತಹ ಅಸ್ಪಷ್ಟ ಸಂಗತಿಗಳ ನಿವಾರಣೆಗೆ ಅವರು ಹಿಂಜರಿಯದೆ ಮುಂದಾಗುತ್ತಿರುವುದನ್ನು ಗಮನಿಸಿದರೆ ಅವರ ಕಿರುಗಾತ್ರದ, ಸಣಕಲು ದೇಹದಲ್ಲಿ ಅದೆಂತಹ ಚೇತನ ತುಂಬಿ ತುಳುಕುತ್ತಿರಬೇಕು ಎಂಬ ಸೋಜಿಗವಾಗುತ್ತದೆ. ಸಾಮಾಜಿಕ ಕಾರ್ಯಕರ್ತನಾಗಿ, ಸಮಾಜಕಾರ್ಯದ ಪ್ರಶಿಕ್ಷಕನಾಗಿ ನಾನು ಅವರಲ್ಲಿ ಕಂಡುಕೊಂಡುದುದೇನೆಂದರೆ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಜನ್ಯ ಸಮಾಜಕಾರ್ಯಕ್ಕೆ ಪ್ರಾಚ್ಯದ, ಅದರಲ್ಲೂ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಕಸಿ ಮಾಡುವ ಸಾಮರ್ಥ್ಯವನ್ನು. ನಾನು ನಮ್ಮ ಪ್ರಶಿಕ್ಷಣಾರ್ಥಿಗಳನ್ನು ಕ್ಷೇತ್ರಕಾರ್ಯಕ್ಕೆ ಸುಮಂಗಲಿ ಸೇವಾಶ್ರಮಕ್ಕೆ ಕಳಿಸುತ್ತಿದ್ದುದುಂಟು. ನೆರವನ್ನು ಹುಡುಕಿಕೊಂಡು ಬಂದ ಊನಶಕ್ತರನ್ನು ಆ ಆಶ್ರಮಕ್ಕೆ ಕಳಿಸುತ್ತಿದ್ದುದುಂಟು. ಆ ಆಶ್ರಮದಲ್ಲಿ ನಡೆಯುತ್ತಿದ್ದ ವಿಚಾರಸಂಕಿರಣಗಳಲ್ಲಿ, ಉಪನ್ಯಾಸಗಳಲ್ಲಿ ನಾನು ಭಾಗವಹಿಸುತ್ತಿದ್ದುದುಂಟು. ರಚನಾತ್ಮಕ ಕಾರ್ಯದಲ್ಲಿ ಆಸಕ್ತಿಯುಳ್ಳವರನ್ನು ಅಲ್ಲಿಗೆ ಕರೆದೊಯ್ದು ಇಲ್ಲವೇ ಕಳಿಸಿಕೊಟ್ಟೋ ಅಲ್ಲಿನ ವಿದ್ಯಮಾನಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದುದುಂಟು. ಅಲ್ಲಿನ ಭೌತ ವಾತಾವರಣ, ಅಲ್ಲಿನ ನಿವಾರಣಾ ಚಟುವಟಿಕೆಗಳು, ಇತ್ಯಾದಿಗಳು ಸುಶೀಲಮ್ಮನವರರ ವ್ಯಕ್ತಿತ್ವದ ಛಾಪನ್ನು ಪಡೆದಿರುವುದನ್ನು ಯಾರೂ ಗುರುತಿಸಬಹುದಾಗಿತ್ತು; ಈಗಲೂ ಹಾಗೆಯೆ. ಇವುಗಳನ್ನೆಲ್ಲಾ ಸ್ಥಳೀಯ ಸಂಸ್ಕೃತಿ ಜೀವಂತವಾಗಿರುವುದನ್ನು ಅಲ್ಲಿಗೆ ಹೋದವರು ಅನುಭವಿಸಬಹುದು. ಆಧುನಿಕ ಸಮಾಜಕಾರ್ಯ ವೃತ್ತ್ಯಾತ್ಮಕ ಪೋಷಕನ್ನು ಧರಿಸಿ, ಅದರ ಸಿದ್ಧಾಂತ-ವಿಧಾನ-ಸೂತ್ರಗಳು-ಮೌಲ್ಯಗಳು-ತಂತ್ರಗಳು-ಕೌಶಲ್ಯಗಳು, ಇತ್ಯಾದಿಗಳೆಲ್ಲಾ ಬಹುತೇಕ ಪಾಶ್ಚಾತ್ಯ ಸಂಸ್ಕೃತಿಯ ಮುದ್ರೆಯನ್ನು ಹೊಂದಿರುವವೇ. ಆದರೆ, ಭಾರತದಲ್ಲಿ ಇವು ನಿಜವಾಗಿಯೂ ವಿದೇಶಿಯೇ. ಅವು ಏನಿದ್ದರೂ ಮೇಲ್ಪದರಿನಲ್ಲಿ ವಿಜೃಂಭಿಸಬಹುದೇ ಹೊರತು ಇಲ್ಲಿನ ಜೀವನ ಪದ್ಧತಿಯ ನರನಾಡಿಗಳನ್ನು ಹೊಕ್ಕು ಅದರ ಕಣಕಣಗಳಲ್ಲಿ ಕರಗಿ ಒಂದಾಗಿರುವುದಿಲ್ಲವೆಂಬುದು ತರಬೇತಿ ಪಡೆದು ಕಾರ್ಯನಿರತರಾಗಿರುವ ಸಮಾಜಕಾರ್ಯಕರ್ತರ ಅನುಭವವಾಗಿದೆ. ಸುಶೀಲಮ್ಮನವರು ತಮ್ಮ ಚಿಂತನೆಯ ಮೂಲಕ, ತಾವು ಕೈಗೊಳ್ಳುವ ನಿರ್ಣಯಗಳ ಮೂಲಕ, ವಿವಿಧ ತೆರನ ಆಂದೋಲನಗಳಲ್ಲಿ ಭಾಗವಹಿಸುವುದರ ಮೂಲಕ ಭಾರತೀಯ ಸತ್ತ್ವವನ್ನು ಎತ್ತಿ ತೋರಿಸುತ್ತಾರೆ. ಇದು ಆಧುನಿಕ ಸಮಾಜಕಾರ್ಯಕರ್ತರಿಗೆ, ಅದರಲ್ಲೂ ಮಕ್ಕಳೊಡನೆ, ಮಹಿಳೆಯರೊಡನೆ, ಇತರ ಊನಶಕ್ತರೊಡನೆ, ಸಮುದಾದಯದ ವಿವಿಧ ಗುಂಪುಗಳೊಡನೆ ಕೆಲಸ ಮಾಡುವವರಿಗೆ, ಒಂದು ರೀತಿಯ ತಿರುವನ್ನು, ಹೀಗಾಗಿ, ವೃತ್ತ್ಯಾತ್ಮಕ ಸಮಾಜಕಾರ್ಯಕರ್ತರು ಸುಶೀಲಮ್ಮನವರ ಕರ್ತೃತ್ವ ಶಕ್ತಿಯಿಂದ ಸ್ಫೂರ್ತಿಯನ್ನೂ, ಮಾರ್ಗದರ್ಶನವನ್ನು ಪಡೆಯುವುದು ಲಾಭದಾಯಕ.
-ಡಾ.ಎಚ್.ಎಂ. ಮರುಳಸಿದ್ಧಯ್ಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|