ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಇವುಗಳ ಹಿನ್ನಲೆಯಲ್ಲಿ ಜಗತ್ತಿನ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಗಳ ವೇಗ ಮತ್ತು ತೀವ್ರತೆ ಹೆಚ್ಚುತ್ತಿವೆ. ಇವುಗಳಿಂದ ಉಂಟಾಗುತ್ತಿರುವ ಒತ್ತಡಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಸ್ಥೆಗಳು ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಇವುಗಳಲ್ಲಿ ಕೈಸನ್ (ನಿರಂತರ ಉತ್ತಮೀಕರಣ) ಜಸ್ಟ್ ಇನ್ ಟೈಮ್ (ಬೇಕಾದ ವಸ್ತುಗಳು ಬೇಕಾದ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಸರಬರಾಜಾಗುವುದು) ಕ್ವಾಲಿಟಿ ಸರ್ಕಲ್ಸ್ (ಗುಣಮಟ್ಟ ವೃತ್ತಗಳು) ಹಾಗೂ 5S (ಐದು ಎಸ್) ಮುಖ್ಯವಾದ ಕೆಲವು. ಇವೆಲ್ಲವೂ ರೂಪಿತವಾದದ್ದು ಜಪಾನಿನಲ್ಲಿ. ಈಗ ಪ್ರಪಂಚದೆಲ್ಲೆಡೆಯಲ್ಲೂ ಬಳಕೆಯಲ್ಲಿವೆ. 5S ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ಕೆಳಗೆ ಹೇಳಿದೆ. ಇದನ್ನು ಕೆಲವು ದಶಕಗಳ ಹಿಂದೆ ಹಿರೋಯುಕಿ ಹಿರಾನೊ ಎಂಬ ಜಪಾನಿನ ತಜ್ಞ ಹೇಳಿ ಕೊಟ್ಟ. ಜಪಾನಿಯರ ಭಾಷೆಯ ಎಸ್ ಅಕ್ಷರದಿಂದ ಪ್ರಾರಂಭವಾಗುವ ಐದು ಪದಗಳನ್ನು ಒಳಗೊಂಡಿರುವ ಈ ಸೂತ್ರ ಕಾರ್ಖಾನೆಗಳ ಗೃಹ ನಿರ್ವಹಣೆ ಮತ್ತು ಕಾರ್ಯಸ್ಥಳ ವ್ಯವಸ್ಥೆಗೆ ಪೂರಕವಾಗುವ ಒಂದು ಕಾರ್ಯ ವಿಧಾನ. ಸೀರಿ (seiri) , ಸೀಟನ್ (seiton), ಸೀಸೊ (seisoh) , ಸೀಕೆಟ್ಸು (seiketsu) , ಶಿಟ್ಸುಕೆ (shitsuke) ಎಂಬುವೇ ಈ ಪದಗಳು.
1. ಸೀರಿ (seiri), ಇದನ್ನು ಕನ್ನಡದ ಆಯ್ಕೆ ಮಾಡು ಮತ್ತು ಇಂಗ್ಲಿಷ್‍ನ ಸಾರ್ಟ್ (sort) ಎಂಬ ಪದಗಳಿಗೆ ಹೋಲಿಸಬಹುದು. ಕಾರ್ಯಸ್ಥಳದಲ್ಲಿ ಸಂಗ್ರಹವಾಗಿರುವ ಬೇಡದಿರುವ ವಸ್ತುಗಳನ್ನು ಅಲ್ಲಿಂದ ಉಚ್ಚಾಟಿಸಿ ಒಂದು ಕೇಂದ್ರಸ್ಥಳಕ್ಕೆ ಸಾಗಿಸಿ ಅವುಗಳಲ್ಲಿ ಅಪರೂಪವಾಗಿ ಉಪಯೋಗಿಸಲ್ಪಡಬಹುದಾದವುಗಳನ್ನು ಒಂದೆಡೆ ಜೋಡಿಸಿ ಇಡಬೇಕು. ಅನುಪಯುಕ್ತ ವಸ್ತುಗಳನ್ನು ಗುರುತಿಸಿ ಅವುಗಳ ಮೇಲೆ ಬಣ್ಣ ಬಣ್ಣದ, ಇಲ್ಲವೆ, ಗುರುತು ಮಾಡಿರುವ ಚೀಟಿಗಳನ್ನು ಇಡುವುದರಿಂದ ಅವುಗಳನ್ನು ಆಯ್ದು ಕಾರ್ಯಸ್ಥಳದಿಂದ ಹೊರಹಾಕಲು ಸುಲಭವಾಗುತ್ತದೆ. ಕಾರ್ಯಸ್ಥಳದಿಂದ ಹೊರಗೆ ಹಾಕಿದ ಅಂತಹ ವಸ್ತುಗಳಲ್ಲಿ ಉಪಯೋಗಕ್ಕೆ ಬಾರದವುಗಳನ್ನು ಕಾರ್ಖಾನೆಯಿಂದ ಹೊರಹಾಕಲು ಕ್ರಮ ತೆಗೆದುಕೊಳ್ಳಬೇಕು. ಈ ಕಾರ್ಯವಿಧಾನದಿಂದ ಅನುಪಯುಕ್ತ ವಸ್ತುಗಳು ಆಕ್ರಮಿಸಿದ್ದ, ಕಾರ್ಯಸ್ಥಳದ ಅಮೂಲ್ಯ ಭಾಗಗಳು ತೆರವುಗೊಳ್ಳುತ್ತವೆ. ಭಗ್ನವಾಗಿರುವ ಇಲ್ಲವೆ ಬೇರೆ ಕಾರಣಗಳಿಂದ ಉಪಯುಕ್ತತೆಯನ್ನು ಕಳೆದುಕೊಂಡಿರುವ ಸಾಧನ ಸಲಕರಣಿಗಳು ಮತ್ತು ಆವಶ್ಯಕತೆಗೆ ಮೀರಿ ಸಂಗ್ರಹವಾಗುವ ವಸ್ತುಗಳು ಹೊರಗೆ ಹಾಕಲ್ಪಡುವುದಕ್ಕೆ ಸಹಾಯವಾಗುತ್ತದೆ. 2. ಸೀಟನ್ (seiton) : ಇದನ್ನು ಕನ್ನಡದಲ್ಲಿ ಕ್ರಮಬದ್ಧ ಜೋಡಣೆ ಮತ್ತು ಇಂಗ್ಲಿಷ್‍ನಲ್ಲಿ ಸೆಟ್ ಇನ್ ಆರ್ಡರ್ (set in order) ಎನ್ನಬಹುದು. ಪ್ರತಿಯೊಂದು ವಸ್ತುವಿಗೂ ಒಂದು ಸ್ಥಳ, ಪ್ರತಿಯೊಂದು ವಸ್ತುವೂ ಅದರ ಸ್ಥಳದಲ್ಲಿ, ಎಂಬುದು ಇದರ ಮುಖ್ಯ ಉದ್ದೇಶ. ಬೇಕಾದ ವಸ್ತು ಬೇಕಾದ ಸಮಯಕ್ಕೆ ಸುಲಭವಾಗಿ ಕೈಗೆ ಸಿಗುವಂತೆ ಇದು ಮಾಡುತ್ತದೆ. ಹುಡುಕಾಟಕ್ಕೆ ವ್ಯಯವಾಗುವ ಸಮಯ, ದೇಹಚಲನೆ ಮತ್ತು ದೇಹ ಶಕ್ತಿ ಉಳಿಯುತ್ತವೆ. 3. ಸೀಸೊ (seisoh): ಇದಕ್ಕೆ ಸಮಾನಾರ್ಥಕ ಕನ್ನಡ ಪದ ಸ್ವಚ್ಛಗೊಳಿಸು, ಇಂಗ್ಲಿಷ್ ಪದ ಕ್ಲೀನ್ (clean). ಪ್ರತಿಯೊಂದು ವಸ್ತುವನ್ನೂ ಸದಾ ಸ್ವಚ್ಛವಾಗಿಡಬೇಕು ಎಂದು ಸೂಚಿಸುತ್ತದೆ, ಈ ಕಾರ್ಯ ವಿಧಾನ. ಧೂಳು, ಕಲುಷಿತ ತೈಲ, ಕೊಳೆ ತುಂಬಿದ ಜಿಡ್ಡು ಮತ್ತಿತರ ಕಲ್ಮಷದಿಂದ ವಸ್ತುಗಳನ್ನು ರಕ್ಷಿಸಬೇಕು. ತ್ಯಾಜ್ಯಗಳನ್ನು ಗುರುತಿಸಿ ಹೊರಹಾಕಬೇಕು. ಕೊಳೆ ಅಥವಾ ಕಲ್ಮಷದ ಮೂಲ ಮತ್ತು ಕಾರಣಗಳನ್ನು ಪತ್ತೆಹಚ್ಚಿ, ಅವುಗಳನ್ನು ನಿವಾರಿಸಬೇಕು. ಸ್ವಚ್ಛವಾದ ಕಾರ್ಯಸ್ಥಳ, ಸ್ವಚ್ಛಸಾಧನ ಸಲಕರಣಿಗಳು, ಸ್ವಚ್ಛಸೌಲಭ್ಯಗಳು ಉದ್ಯೋಗಿಗಳಲ್ಲಿ ಕೆಲಸ ಮಾಡಲು ಉತ್ಸಾಹ ಸೃಷ್ಟಿಸುತ್ತವೆ ಮತ್ತು ಅವುಗಳ ಬಗ್ಗೆ ಸ್ವಂತತೆಯ ಭಾವನೆಯನ್ನು ಜಾಗೃತಗೊಳಿಸುತ್ತವೆ. ಅವುಗಳಲ್ಲಿ ಆಗಬಹುದಾದ ಅಹಿತಕರ ಬದಲಾವಣೆಗಳನ್ನು ಗುರುತಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದರಲ್ಲಿ ಅವರು ಭಾಗಿಗಳಾಗುತ್ತಾರೆ, ಎಂದು ಸೂಚಿಸುತ್ತದೆ, ಈ ಕಾರ್ಯವಿಧಾನ. 4. ಸೀಕೆಟ್ಸು (seiketsu) : ಕನ್ನಡದಲ್ಲಿ ಮಾನಕೀಕರಣ ಮತ್ತು ಇಂಗ್ಲಿಷ್ನಲ್ಲಿ ಸ್ಟಾನ್ಡರ್ಡೈಸೇಶನ್ (standardisation) ಎಂಬ ಪದಗಳಿಗೆ ಇದನ್ನು ಹೋಲಿಸಬಹುದು. 5 S ನ ಮಿಕ್ಕ ಕಾರ್ಯವಿಧಾನಗಳನ್ನು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುವಂತೆ ಅವುಗಳಿಗೆ ಸೂಕ್ತ ಮಾನದಂಡಗಳನ್ನು ರಚಿಸಿ, ಪ್ರತಿಯೊಬ್ಬ ಉದ್ಯೋಗಿಯೂ ತನ್ನ ಒಂದು ನೋಟದಲ್ಲೇ ಕ್ರಮಬದ್ಧ ಮತ್ತು ಅಬದ್ಧ ಸ್ಥಿತಿಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸಬಲ್ಲವನಾಗುವಂತೆ, ದೃಶ್ಯ ಮಾಧ್ಯಮದ ನೆರವಿನಿಂದ ವ್ಯವಸ್ಥೆ ಮಾಡಬೇಕು. 5. ಶಿಟ್ಸುಕೆ (shitsuke) : ಕನ್ನಡದಲ್ಲಿ ಶಿಸ್ತು ಮತ್ತು ಇಂಗ್ಲಿಷ್‍ನಲ್ಲಿ ಡಿಸಿಪ್ಲಿನ್ (discipline) ಎಂದು ಅರ್ಥ ಕೊಡುತ್ತದೆ. ಬದಲಾವಣೆಗಳನ್ನು ವಿರೋಧಿಸುವುದು ಸಾಮಾನ್ಯವಾಗಿ ಮಾನವ ಸ್ವಭಾವ. ಯಥಾಸ್ಥಿತಿಗೆ ಮರಳಿ, ಹಿಂದೆ ಅನುಸರಿಸುತ್ತಿದ್ದ ಕಾರ್ಯವಿಧಾನದ ಹಿತವಲಯದಲ್ಲಿರಲು ಅವನು ಬಯಸುತ್ತಾನೆ. ಆದ್ದರಿಂದ 5 S ನ ಎಲ್ಲ ಅಂಶಗಳನ್ನೂ ಬಿಡದೆ ಪಾಲಿಸಿಕೊಂಡು ಹೋಗಲು ಪ್ರತಿಯೊಬ್ಬ ಉದ್ಯೋಗಿಗೂ ತರಬೇತಿ ಅತ್ಯಗತ್ಯ. ಜತೆಗೆ ಅವನೊಡನೆ. ನಿರಂತರ ಸಂಪರ್ಕವೂ ಬೇಕು. 5 S ಅವನ ದೈನಂದಿನ ಕಾರ್ಯ ಚಟುವಟಿಕೆಗಳ ಒಂದು ಅವಿಭಾಜ್ಯ ಅಂಗವಾಗಬೇಕಾದರೆ, ಸತತ ಅಭ್ಯಾಸ ಹಾಗೂ ಈ ಪ್ರಯತ್ನದಲ್ಲಿ ಅವನ ಸಕ್ರಿಯ ಪಾತ್ರ ಆವಶ್ಯಕ ಎಂದು ಶಿಟ್ಸುಕೆ ಹೇಳುತ್ತದೆ. ಈ ಕಾರ್ಯ ವಿಧಾನಗಳು ನಮ್ಮ ಮನೆಗಳಿಗೂ ಅನ್ವಯವಾಗಬಹುದಲ್ಲವೇ ? ಎಸ್.ಎ. ಶ್ರೀನಿವಾಸ ಮೂರ್ತಿ 17-09-2011
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |