Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಭಾರತದಲ್ಲಿ ಸಮುದಾಯ ಸಂಘಟನೆಯ / ಅಭಿವೃದ್ಧಿಯ ಇತಿಹಾಸ  - 3

12/20/2019

0 Comments

 
Picture
ಯಹೂದಿಧರ್ಮ (ಹಿಬ್ರೂ ಧರ್ಮ)   
ಪಾಶ್ಚಾತ್ಯ ಜಗತ್ತಿನ ಪ್ರಮುಖ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗಿಂತಲೂ ಹಳೆಯದಾದ ಮತ್ತು ಈ ಎರಡೂ ಧರ್ಮಗಳಿಗೂ ಒಂದು ಹಿನ್ನೆಲೆಯನ್ನು ಒದಗಿಸಿದ ಧರ್ಮವೆಂದರೆ ಯಹೂದಿಧರ್ಮ. ಅದನ್ನು ಹಿಬ್ರೂ ಧರ್ಮವೆಂದೂ ಕರೆಯಲಾಗುತ್ತದೆ. ಇಸ್ರೇಲಿನಲ್ಲಿದ್ದು ಹಾಗೂ ಈ ಧರ್ಮವನ್ನು ಅನುಸರಿಸಿದವರನ್ನು ಜ್ಯೂ (Jew) ಜನಾಂಗವೆಂದು ಕರೆಯುತ್ತಾರೆ. ಇವರ ಮೂಲಪುರುಷ ಅಬ್ರಹಾಮ್. ಜ್ಯೂ ಜನಾಂಗದ ಪ್ರವಾದಿಯಾದ ಮೋಜಿಸ್ (ಮೋಶೆ) ಯಹೂದಿ ಧರ್ಮದ ಪ್ರವರ್ತಕ. ಪವಿತ್ರ ಗ್ರಂಥ ಬೈಬಲ್ಲಿನ ಹಳೆಯ ಒಡಂಬಡಿಕೆಯ ಐದು ಕಾಂಡಗಳ ರಚನೆಕಾರ ಇವನೇ. ವೇದಗಳಂತೆಯೇ ಬೈಬಲ್ ಕೂಡಾ ಒಬ್ಬರಿಂದ ಬರೆಯಲ್ಪಟ್ಟಿಲ್ಲ. ದಾರ್ಶನಿಕರಾದ 40 ಜನ ಗ್ರಂಥಕಾರರು ಬೈಬಲನ್ನು ರಚನೆ ಮಾಡಿದ್ದು, ಅವರ ಚಿಂತನೆಗಳಿಗೆ ಮೂಲಾಧಾರ ಮೋಜಿಸ್ ಬರೆದ ಈ ಐದು ಕಾಂಡಗಳೆಂದು ಹೇಳಲಾಗುತ್ತದೆ.  

ಯಹೂದಿಗಳು ಐಕದೇವೋಪಾಸನೆಯಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಅವರು ದೇವರನ್ನು ಯೆಹೋವಾ (Jehovah) ಎಂದು ಸಂಬೋಧಿಸುತ್ತಾರೆ. ದೇವರನ್ನು ಸಂಪ್ರದಾಯ, ಪ್ರಜ್ಞೆ ಮತ್ತು ಶ್ರದ್ಧೆಗಳಿಂದ ಅರಿಯಬಹುದು. ದೇವರು ಸತ್ಯ, ಸ್ವತಂತ್ರ, ಆನಂದಮಯ ಹಾಗೂ ಸಂತೃಪ್ತ. ಇದಕ್ಕೆ ವಿರುದ್ಧವಾಗಿ ಸೈತಾನ ಅಸತ್ಯ, ಅಸ್ವತಂತ್ರ, ದುಖಃಪ್ರದ ಮತ್ತು ಅಸಂತೃಪ್ತ. ದೇವರು ನಮ್ಮೆಲ್ಲರ ತಂದೆ.  ನಾವು ಅವನ ಮಕ್ಕಳು.  ಮಕ್ಕಳಾದ ನಾವು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅವನು ಸತ್ಫಲಗಳನ್ನು ಕೊಡುತ್ತಾನೆ. ಕೆಟ್ಟ ಕೆಲಸಗಳನ್ನು ಮಾಡಿದರೆ ಶಿಕ್ಷೆ ಕಾದಿದೆ. 

ಪ್ರವಾದಿ ಮೊಜೆಸನು (ಮೋಸೆಸ್) ಯಹೂದ್ಯ ಜನಾಂಗದ ತನ್ನ ಬಂದು ಬಾಂಧವರನ್ನು, ಇಜಿಪ್ತ ಸೇನೆಯ ಹಿಡಿತದಿಂದ ಪಾರುಮಾಡಿ ಕರೆತರುತ್ತಿರುವಾಗ ದೇವರ ವಾಣಿಯಾಯಿತು. ಅವುಗಳು ಜೀವನಕ್ಕೆ ಉಪಯೋಗವಾಗುವ ಉಪದೇಶಗಳಾಗಿವೆ. ಅವೇ ಹಳೇ ಒಡಂಬಡಿಕೆಯಲ್ಲಿ ಸಿಗುವ ಜಗತ್ಪ್ರಸಿದ್ಧವಾದ ದಶಾಜ್ಞೆಗಳು (Ten Commandments). ಅವುಗಳನ್ನು ಯಹೂದಿಗಳು ಮತ್ತು ಆನಂತರ ಕ್ರಿಶ್ಚಿಯನ್ನರು ತಮ್ಮ ಅನುಶಾಸನಗಳೆಂದು ಅಂಗೀಕರಿಸಿದ್ದಾರೆ.40 
  1. ನಾನೇ ನಿನ್ನ ದೇವರಾದ ಸರ್ವೇಶ್ವರ (ಯಹೋವ), ನಾನಲ್ಲದೆ ನಿನಗೆ ಬೇರೆ ದೇವರು ಇರಬಾರದು.
  2. ಆಕಾಶದಲ್ಲಿಯಾಗಲಿ, ಭೂಮಿಯಲ್ಲಾಗಲಿ ಅಥವಾ ನೀರಿನಲ್ಲಿಯಾಗಲಿ ಇರುವ ಯಾವ ರೂಪವನ್ನು ಅಥವಾ ವಿಗ್ರಹವನ್ನೂ ಪೂಜಿಸಬೇಡ, ಆರಾಧಿಸಬೇಡ.
  3. ನಿನ್ನ ದೇವರಾದ ಯಹೋವನ ಹೆಸರನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳಬೇಡ.    
  4. ಸಖ್ಖತ್ (ರವಿವಾರ) ದಿನವನ್ನು ವಿಶ್ರಾಂತಿಯ ದಿನವೆಂದು ಆಚರಿಸು. ಆದಿನ ದೇವರ ದಿನವೆಂದು ಆಚರಣೆ ಮಾಡು. ಪ್ರಾರ್ಥನೆ ಸಲ್ಲಿಸು. 
  5. ನಿನ್ನ ತಂದೆತಾಯಿಗಳನ್ನು ಗೌರವಿಸು.
  6. ಕೊಲೆ ಮಾಡಬೇಡ, ನರಹತ್ಯೆ ಮಾಡಬೇಡ.
  7. ವ್ಯಭಿಚಾರ ಮಾಡಬೇಡ, ಜೀವನದಲ್ಲಿ ಲೈಂಗಿಕ ಶಿಸ್ತನ್ನು ಅಳವಡಿಸಿಕೋ.
  8. ಕದಿಯಬೇಡ, ಕಳವು ಮಾಡಬೇಡ.  
  9. ನೆರೆಯವನ/ಮತ್ತೊಬ್ಬನ ವಿರುದ್ಧ ಸುಳ್ಳು ಸಾಕ್ಷಿ ಹೇಳಬೇಡ.
  10. ನೆರೆಯವನ/ಮತ್ತೊಬ್ಬನ ಹೆಂಡತಿಯನ್ನು ಅಪೇಕ್ಷಿಸಬೇಡ. ಅವನ ಮನೆ, ಹೊಲ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬೇಡ.
ಈ ದಶಾಜ್ಞೆಗಳು | ಅನುಶಾಸನಗಳು ಪಾಶ್ಚಾತ್ಯ ಸಮಾಜದ ಅರ್ಥಪೂರ್ಣ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿವೆ. ಈ ಅನುಶಾಸನಗಳಿಗೆ ವೈಯಕ್ತಿಕ ಆಯಾಮ ಇರುವಂತೆ ಒಂದು ಸಾಮಾಜಿಕ ಆಯಾಮವೂ ಇದೆ. ಇದು ಸಮುದಾಯಗಳಲ್ಲಿನ ಕಟ್ಟಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೆ, ಸದಸ್ಯರ ಸಂಬಂಧಗಳನ್ನು ವೃದ್ಧಿಗೊಳಿಸುತ್ತದೆ. ಇವು ವ್ಯಕ್ತಿಗಳ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯಕವಾಗುತ್ತವೆ.  ಇದು ಸಮಾಜಕಾರ್ಯದ ಪರಿಕಲ್ಪನೆಗಳಿಗೆ ಪೂರಕ. 

ಯಹೂದಿ ಧರ್ಮದಲ್ಲಿ ಗಂಡ-ಹೆಂಡತಿ, ತಂದೆ-ತಾಯಿಗಳು-ಮಕ್ಕಳ ಸಂಬಂಧ ತುಂಬಾ ಪವಿತ್ರ ಎಂದು ಭಾವಿಸಲಾಗುತ್ತದೆ. ನಿಷಿದ್ಧ ಪದಾರ್ಥಗಳನ್ನು ಸೇವಿಸದಿರಲು ಆದ್ಯತೆಯನ್ನು ಕೊಡಲಾಗಿದೆ. ಸ್ವೀಕರಿಸಬಹುದಾದ ಆಹಾರ ಪದ್ಧತಿಗಳ ಬಗ್ಗೆ ಯಹೂದಿ ಧರ್ಮದಲ್ಲಿ ಪ್ರಧಾನ್ಯತೆಯನ್ನು ನೀಡಲಾಗಿದೆ.  ಜ್ಯೂ ಜನಾಂಗದಲ್ಲಿ ಪರಸ್ಪರ ಸಹಾಯ ಸಹಕಾರಗಳಿಗೆ, ಸೌಹಾರ್ದಯುತ ತತ್ತ್ವಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ.  

ಯಹೂದಿಗಳ ಪವಿತ್ರಗ್ರಂಥ ತೋರಾದಲ್ಲಿ ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿರಿ ಮತ್ತು ಪ್ರೀತಿಯ ಅವಲಂಬನದಿಂದಲೇ ಸಾಮಾಜಿಕ ಹಾಗೂ ವ್ಯಕ್ತಿಗಳ ಪ್ರಗತಿಪಥ ನಿರಾತಂಕವಾಗಿ ಸಾಗುತ್ತದೆ ಎಂದು ಹೇಳಲಾಗಿದೆ. ತೋರಾ ಗ್ರಂಥದಲ್ಲಿ ನಿಮ್ಮ ನೆರೆಹೊರೆಯವರೊಡನೆ ನೀವು ಎಂತಹ ಸಂಪರ್ಕ - ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ.    

ನಿಮ್ಮ ಸೋದರನೊಬ್ಬನು (ನೆರೆಹೊರೆಯವನು, ನಿಮ್ಮ ಸಮುದಾಯದ ಸದಸ್ಯ) ನೀವು ವಾಸಿಸುತ್ತಿರುವ ನಗರವಲಯದಲ್ಲಿಯೇ ವಾಸಿಸುತ್ತಿದ್ದು, ಅವನಿಗೆ ಬಡತನ ಬಂದರೆ ನೀವು ಹೃದಯದಿಂದ ಕಠಿಣರಾಗದಿರಿ. ಕೈಗಳನ್ನು ಮುಚ್ಚದಿರಿ; ಮುಕ್ತ ಹಸ್ತದಿಂದ ಆ ನಿಮ್ಮ ಸೋದರನಿಗೆ ನಿಮ್ಮಲ್ಲಿದ್ದ ಅವಶ್ಯಕವಾದ ವಸ್ತುಗಳನ್ನು ಪೂರೈಸಿರಿ. ನೀವು ಬಡವನ ಬಗೆಗೆ ಅನಾಸ್ಥೆಯಿಂದ ಅಲಕ್ಷಿಸಬೇಡಿ. ಅವನು ಮನಸ್ಸಿನಲ್ಲಿ ನೊಂದುಕೊಂಡು ಉಸಿರು ಹಾಕಿದರೆ, ಅದು ನೀವು ಮಾಡಿದ ಪಾಪವೆಂದು ನಿಮ್ಮ ಸ್ವಾಮಿಯಾದ ದೇವರು ತಿಳಿಯುತ್ತಾನೆ. ಅವನಿಗೆ ನೀವು ನೀಡಬೇಕು ಮತ್ತು ನೀಡುವಾಗ ಮನಸ್ಸಿನಲ್ಲಿ ಕೊರಗಬಾರದು. ಸದ್ಭಾವನೆಯಿಂದ ನೀಡುತ್ತಿದ್ದಾಗ ನಿಮ್ಮ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ.41

ಆ ಗ್ರಂಥದಲ್ಲಿ ಖೈದಿಗಳಿಗೆ ಪರಿಹಾರ ನೀಡುವ ಬಗ್ಗೆಯೂ ಉಲ್ಲೇಖಗಳಿವೆ. ಹೀಗೆ ಸಮಾಜದ ಬಡವರ, ದುರ್ಬಲರ, ಸೆರೆಯಾದವರ, ಪೀಡಿತರ ವಿಚಾರವಾಗಿ ಅತ್ಯಂತ ದಯಾಪೂರ್ಣವಾಗಿ, ಉದರವಾಗಿ ನಡೆದುಕೊಳ್ಳಲು ಬೋಧಿಸಲಾಗಿದೆ.42 ಇವು ಬದುಕಿನ ಪ್ರಮುಖ ಮೌಲ್ಯಗಳಾಗಿವೆ. ಸಮಾಜಕಾರ್ಯದ ಮೌಲ್ಯಗಳೂ ಇವೇತಾನೆ. 
 
ಕ್ರೈಸ್ತ ಧರ್ಮ
ಯಹೂದ್ಯರ ಬೈಬಲ್ ಸಂಪ್ರದಾಯದ ಹಿನ್ನೆಲೆಯಲ್ಲಿ ಹುಟ್ಟಿದ ಎರಡು ಧರ್ಮಗಳಲ್ಲಿ ಒಂದು ಕ್ರೈಸ್ತಧರ್ಮ, ಇನ್ನೊಂದು ಇಸ್ಲಾಂ ಧರ್ಮ, ಯಹೂದ್ಯರ ಏಕದೇವೇಶ್ವರವಾದವನ್ನು ಕ್ರೈಸ್ತ ಅನುಯಾಯಿಗಳು ಒಪ್ಪಿಕೊಂಡು ಮುಂದುವರೆದಿದ್ದಾರೆ. ಯೇಸುಕ್ರಿಸ್ತನ ಅನುಭಾವಿಕ ಬೋಧನೆಗಳನ್ನು ಒಪ್ಪಿಕೊಂಡು, ಅವುಗಳನ್ನು ಅನುಸರಿಸಿಕೊಂಡು ಹೋಗುವವರು ಕ್ರೈಸ್ತರು. ಇಡೀ ಪ್ರಪಂಚದಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಧರ್ಮ ಕ್ರೈಸ್ತಧರ್ಮ. ಯಹೂದಿ ಧರ್ಮದ ಕೆಲವು ಕ್ಲಿಷ್ಟಕರ ನಿಯಮಗಳು, ಕುಟಿಲ ಕಂದಾಚಾರಗಳು, ಸ್ವಾರ್ಥಪರ ಪೂಜಾರಿಗಳಿಂದ ಸಾಮಾನ್ಯಜನ ದೂರ ಉಳಿಯುವಂತಾಯಿತು. ಲೋಕೋಪಯೋಗಿ ತತ್ವಗಳು ಜನಮಾನಸದಿಂದ ಮರೆಯಾಗತೊಡಗಿದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವರ ಮಗನಾದ ಯೇಸುವಿನ ಅವತಾರವಾಯಿತು.    

ಭಗವಂತನ ಭವ್ಯತೆಯನ್ನು, ಅಮೃತಮಯ ಕರುಣಾಶೀಲತೆಯನ್ನು ಯೇಸು ತನ್ನ ಸರಳವಾದ, ಹೃದಯಸ್ಪರ್ಶಿಯಾದ, ಪವಿತ್ರವಾದ ವಾಣಿಯಲ್ಲಿ ಬೋಧಿಸಿ, ಜನಮನದ ಅಂತಃಕರಣದ ಅನಭಿಷಿಕ್ತ ನಾಯಕನಾದನು; ಗುರುವಾದನು.43 ನಿಜ ಅರ್ಥದಲ್ಲಿ ದೇವದೂತನೇ ಆದನು. 

ಕ್ರೈಸ್ತ ಧರ್ಮ ಅನುಭಾವದ ಮತ್ತು ಅತೀಂದ್ರಿಯ ಸಿದ್ಧಾಂತದ ಮೇಲೆ ಅವಲಂಬಿತವಾದ ಧರ್ಮ. ಯಹೂದಿ ಧರ್ಮದ ದಶಾಜ್ಞೆಗಳ ಹಿನ್ನೆಲೆಯಲ್ಲಿ, ದೇವದೂತ ಯೇಸು ತನ್ನ ನವೀನ ದರ್ಶನದ ಭೂಮಿಕೆಯಲ್ಲಿ ಉಪದೇಶಿಸಿದ ನೀತಿಸೂತ್ರಗಳೇ ಕ್ರೈಸ್ತ ಧರ್ಮದ ತತ್ತ್ವಗಳಾಗಿವೆ. ಕ್ರೈಸ್ತಧರ್ಮ ಆಚಾರ ಪ್ರಧಾನವಾದುದು. ಇಲ್ಲಿ ಸದಾಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಕ್ರೈಸ್ತಮತವು ನೀತಿ, ಶೀಲ, ತ್ಯಾಗಗಳಿಗೆ ಅಧಿಕ ಮಹತ್ವ ನೀಡಿ, ಸಾಮಾಜಿಕ ಸಮಾನತೆಗಾಗಿ ಅಖಂಡವಾಗಿ ಯತ್ನಿಸಿತೆಂತಲೇ ಅದು ಮದ್ಯಪ್ರಾಚ್ಯದ ಹತ್ತಾರು ಧರ್ಮಗಳನ್ನು ಜಯಿಸಿ, ಲೋಕದ ಆದರಕ್ಕೆ ಪ್ರಾಪ್ತವಾಯಿತು.44 ಕ್ರೈಸ್ತ ತತ್ತ್ವಗಳು ತತ್ತ್ವಜ್ಞಾನದ ಬೆಳಕನ್ನು ಕೊಡುವುದರ ಜೊತೆಗೆ ಧಾರ್ಮಿಕ ಶಾಂತಿಯನ್ನೂ ಒದಗಿಸುವಂತಾಯಿತು. ಕ್ರೈಸ್ತ ಧರ್ಮಗಳ ತತ್ತ್ವಗಳು ಅರ್ಥೈಸಿಕೊಳ್ಳಲು ಸರಳವೂ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವೂ ಆಗಿವೆ. 

ನೀನು ಪ್ರಭುವಾದ ದೇವರನ್ನು ಪ್ರೀತಿಸು. ನಿನ್ನಂತೆಯೇ ನಿನ್ನ ನೆರೆಯವರನ್ನು ಪ್ರೀತಿಸು. ನಾವೆಲ್ಲಾ ಒಬ್ಬನೇ ದೇವರ ಮಕ್ಕಳು. ಹಾಗಾಗಿ ಎಲ್ಲಾ ಮಾನವರೂ ಅಣ್ಣತಮ್ಮಂದಿರು. ಪರಸ್ಪರರನ್ನು ಪ್ರೀತಿಸಿರಿ, ನಿಮ್ಮ ಹಗೆಯನ್ನೂ ಪ್ರೀತಿಸಿರಿ.  ನಿಮ್ಮನ್ನು ಬೈಯುವವರನ್ನು ಹರಸಿರಿ, ನಿಮ್ಮ ದ್ವೇಷಿಗಳಿಗೆ ಒಳಿತನ್ನು ಮಾಡಿ. ವ್ಯಭಿಚಾರವನ್ನಂತೂ ಮಾಡಲೇಬೇಡಿ. ಎಂತಹ ಕಷ್ಟ ಪ್ರಸಂಗವೇ ಬರಲಿ ಆಣೆ ಮಾಡಬೇಡಿ, ಯಾರಿಗೂ ಕೆಟ್ಟದ್ದನ್ನು  ಬಯಸಬೇಡಿ.  ಯಾರಾದರೂ ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನು ಮುಂದೆಮಾಡಿ. ಹೀಗೆ ನೈತಿಕ ಆದರ್ಶಗಳಿಂದ ದೈವಿಕತೆಗೆ ಏರಲು ಯೇಸು ಕರೆ ಕೊಡುತ್ತಾನೆ. ಸತ್ಯ, ಪ್ರೇಮ, ದಯೆ, ದಾನ, ಸಂಯಮ, ಔದಾರ್ಯ, ತ್ಯಾಗ, ಕ್ಷಮೆ, ಸರಳತೆ ಮುಂತಾದ ನೈತಿಕ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಭಗವಂತನಲ್ಲಿ ಅಚಲವಾದ ಶ್ರದ್ಧೆಯನ್ನಿಡಲು ತನ್ನ ಅನುಯಾಯಿಗಳಿಗೆ ಆದೇಶ ನೀಡುತ್ತಾನೆ.

ಕ್ರೈಸ್ತನು ಪ್ರತಿಪಾದಿಸಿದ ಭಗವಂತನ ರಾಜ್ಯತತ್ತ್ವವು ಒಂದು ಆದರ್ಶ ಸಮಾಜದ ಪ್ರತಿರೂಪ. ಪಾಶವೀ ಶಕ್ತಿಗಳಿಂದ, ತುಚ್ಛ-ದೌರ್ಬಲ್ಯಗಳಿಂದ ಕೂಡಿದ ಇಂದಿನ ಸಮಾಜಕ್ಕೆ, ಪ್ರೇಮ, ಸಮಾನತೆ, ವಿಶ್ವಾಸ, ಅಹಿಂಸೆ ಮುಂತಾದ ಸದ್ಗುಣಗಳಿಂದ ಕೂಡಿದ ದೈವೀ ಸಾಮ್ರಾಜ್ಯದ ಆದರ್ಶವನ್ನು ಕ್ರಿಸ್ತನು ಬೋಧಿಸಿದನು. ಇಂತಹ ದೈವೀ ಸಾಮ್ರಾಜ್ಯಕ್ಕೆ ನೈತಿಕ ಪುನರುದ್ಧಾನದ ಅವಶ್ಯಕತೆ ಬೇಕೆಂದು ಕ್ರಿಸ್ತನು ಹೇಳುತ್ತಾನೆ. ಯೇಸುವು ಸ್ವತಃ ದೇವರ ಮಗನಾದರೂ, ತನ್ನ ಯಾವ ತಪ್ಪಿಲ್ಲದಿದ್ದರೂ ಜಗತ್ತಿನ ಒಳಿತಿಗಾಗಿ ಪಾಪಿಗಳ ಉದ್ಧಾರಕ್ಕಾಗಿ ತಾನು ಸ್ವತಃ ಕಷ್ಟ, ನಿಷ್ಠುರ, ನೋವುಗಳನ್ನು ಅನುಭವಿಸಿದನು. ಸ್ವತಃ ನೋವನ್ನನುಭವಿಸಿಯಾದರೂ ಅನ್ಯರ ಕಲ್ಯಾಣವನ್ನು ಸಾಧಿಸಬೇಕು. ಇದು ಯೇಸುವಿನ ಜೀವನ ಸಂದೇಶ. ಇದೇ ಪಾಶ್ಚಾತ್ಯ ಸಮಾಜಕಾರ್ಯದ ತಾತ್ತ್ವಿಕ ಹಿನ್ನೆಲೆಯೂ ಆಗಿರುವ ಸಾಧ್ಯತೆ ಇದೆ.

ದೇವದೂತ ಯೇಸುವು ಬೋಧಿಸಿದ ತತ್ತ್ವಗಳಲ್ಲಿ ಧನ್ಯವಾಕ್ಯಗಳು ತುಂಬಾ ಪ್ರಮುಖವಾದವುಗಳು. ಇದು ಬೆಟ್ಟದ ಮೇಲಿನ ಬೋಧೆ ಎಂದೇ ಪ್ರಸಿದ್ಧಿಯಾಗಿದೆ. ಈ ಧನ್ಯವಾಕ್ಯಗಳು ಕೇವಲ ಜನಪ್ರಿಯ ಘೋಷಣೆಗಳಲ್ಲ. ಇವು ಬದುಕಿನ ಆಳದಿಂದ ಹೊರ ಹೊಮ್ಮಿದ ಸತ್ಯಗಳು. ಕ್ರಿಸ್ತನು ಧನ್ಯವಾಕ್ಯಗಳನ್ನು ಬೋಧಿಸುವಾಗ ಸಮಾಜದ ಕೆಳಸ್ಥರದವರು, ನೊಂದವರು, ಬೆಂದವರು, ನಿರಾಶ್ರಿತರು, ದುಃಖಿಗಳು, ಬಲಹೀನರು, ಹಸಿದವರು, ನೀತಿವಂತರು-ಇಂಥವರು ಅವನನ್ನು ಬಹಳವಾಗಿ ಕಾಡಿದ್ದು ನಿಜ. ಇಂಥಹವರಿಗೂ ಒಂದು ಸುಂದರ ಬದುಕು ಇದೆ, ಸುಂದರವಾದ ಭವಿಷ್ಯ, ನಿರೀಕ್ಷೆ ಇದೆ. ಇಂಥಹವರು ದೇವರ ರಾಜ್ಯ ಪ್ರವೇಶ ಮಾಡಲು ಅರ್ಹತೆ ಇದೆ ಎಂಬುದನ್ನು ತಿಳಿಸಿ ಅವರನ್ನು ಮೇಲಕ್ಕೆತ್ತಿದ್ದು ಬಹು ವಿಶೇಷ.45 ಸಮಾಜಕಾರ್ಯ ಸಿದ್ಧಾಂತವೂ ಇದೇ ಅಲ್ಲವೇ?

ಯೇಸುವು ಬೋಧಿಸಿದ ಧನ್ಯವಾಕ್ಯಗಳು, ಅಷ್ಟ ಭಾಗ್ಯಗಳು.46
  1. ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.
  2. ದುಃಖಿಗಳು ಭಾಗ್ಯವಂತರು: ದೇವರು ಅವರನ್ನು ಸಂತೈಸುವರು.
  3. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು.
  4. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು.
  5. ದಯಾವಂತರು ಭಾಗ್ಯವಂತರು; ದೇವರದಯೆ ಅವರಿಗೆ ದೊರಕುವುದು.
  6. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು.
  7. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು.
  8. ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು;  ಸ್ವರ್ಗ ಸಾಮ್ರಾಜ್ಯ ಅವರದು. 
ಈ ಧನ್ಯವಾಕ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ನಿಜವಾದ ಸಂತೋಷ ಪ್ರಾಪ್ತವಾಗುತ್ತದೆ. 
1. ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯ ಅವರದು - ಆತ್ಮದಲ್ಲಿ ಬಡವರಾಗಿರುವುದು ಎಂದರೆ ಆಧ್ಯಾತ್ಮಿಕತೆಯಲ್ಲಿ ಧಾರ್ಮಿಕತೆಯಲ್ಲಿ ನಮ್ರತೆಯಿಂದಿರುವವರು ಎಂದು ಅರ್ಥೈಸಿಕೊಳ್ಳಬಹುದಾಗಿದೆ.  ಆಧ್ಯಾತ್ಮಿಕತೆಯಲ್ಲಿ ಬಡವರಾಗಿರುವವರು (ವಿನೀತ ಭಾವ ಉಳ್ಳವರು) ಸಿರಿವಂತರೂ ಇದ್ದಾರೆ. ಅವರು ತಮ್ಮ ಸಿರಿತನವನ್ನು ಅವರ ನೆರೆಹೊರೆಯವರ ಒಳಿತಿಗೆ ಉಪಯೋಗಿಸುತ್ತಲೂ ಇರಬಹುದು.  ಆದರೆ ಯೇಸುವಿನ ಕಾಳಜಿ ಇರುವುದು ಆಧ್ಯಾತ್ಮಿಕತೆಯಲ್ಲಿ ನಮ್ರತೆಯಿಂದಿದ್ದು ತಮ್ಮ ದುಡಿಮೆಯಲ್ಲೇ, ತಮ್ಮ ಕಾಯಕದಲ್ಲೇ ಸುಖವನ್ನು ಕಾಣುವ, ತೃಪ್ತಿಯನ್ನು ಹೊಂದುವ ಜನಗಳ ಬಗ್ಗೆ. 

ಹಳೆ ಒಡಂಬಡಿಕೆಯಲ್ಲಿ ಪ್ರಸ್ತಾಪಗೊಂಡಿರುವ ದಶಾಜ್ಞೆಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದ ಒಬ್ಬ ಶ್ರೀಮಂತನು ತಾನು ನಿತ್ಯ ಜೀವಕ್ಕೆ ಬಾದ್ಯಸ್ಥನಾಗಬೇಕಾದರೆ ಏನು ಮಾಡಬೇಕು ಎಂದು ಕೇಳಿದಾಗ ಯೇಸುವು ಅವನಿಗೆ ನಿನಗೆ ಒಂದು ಕಡಿಮೆಯಾಗಿದೆ; ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವುದು47 ಎಂದು ಹೇಳಿದ. ಇದು ಯೇಸುವಿಗೆ ಬಡವರ ಬಗ್ಗೆ ಇದ್ದ ಕಾಳಜಿ.  ಬಡವರಿಗೆ ತಾವು ದೇವರ ಕೃಪೆಯಿಂದ ಎಲ್ಲಿ ವಂಚಿತರಾಗಿಬಿಡುತ್ತೇವೆ ಎಂಬ ವ್ಯಾಕುಲತೆ ಇರುತ್ತದೆ. ಅವರು ತಮ್ಮ ಪಾಪಕಾರ್ಯಕ್ಕೆ ದುಃಖಿಸುತ್ತಾರೆ ಹಾಗೂ ಪಶ್ಚಾತ್ತಾಪಪಡುತ್ತಾರೆ. ಹೀಗೆ ಪಶ್ಚಾತ್ತಾಪ ಪಡುವವರು ಭಾಗ್ಯವಂತರು. ದೇವರ ಕೃಪೆ ಅವರ ಮೇಲೆ ಇರುತ್ತದೆ. ಖ್ಯಾತ ಇಂಗ್ಲೀಷ್ ಸಂಸ್ಕೃತ ವಿದ್ವಾಂಸ ಶೇಷ ನವರತ್ನ ಅವರು ಆತ್ಮದಲ್ಲಿ ಬಡವರಾಗಿರುವುದು ಎಂದರೆ ಅಹಂಕಾರವಿಲ್ಲದಿರುವವರು ಎಂದು ಅರ್ಥೈಸುತ್ತಾರೆ.  ಅಹಂಕಾರ ಇಲ್ಲದಿರುವವರು ಧನ್ಯರು-ಪರಲೋಕದ ಸಾಮ್ರಾಜ್ಯ ಅವರದು ಎಂದು ವ್ಯಾಖ್ಯಾನಿಸುತ್ತಾರೆ. ಈ ಧನ್ಯವಾಕ್ಯದಲ್ಲಿ ಅಹಂಕಾರವನ್ನು ಬಿಡಲು ಯೇಸುವು ಕರೆಕೊಡುತ್ತಾರೆ. ಸ್ವಹಿತವನ್ನು ಕಡೆಗಣಿಸಿಯೂ ಬಡವರಿಗೆ, ದೀನರಿಗೆ, ದರಿದ್ರರಿಗೆ ದಾನಮಾಡಲು ಸಲಹೆ ಕೊಡುತ್ತಾನೆ. ಇದರಿಂದ ಅವನಿಗೆ ಪರಲೋಕದಲ್ಲಿ ಒಳ್ಳೆಯದಾಗುತ್ತದೆ.  ಬಡವರಿಗೆ, ದೀನರಿಗೆ, ದರಿದ್ರರಿಗೆ ನೆರವನ್ನು ಒದಗಿಸುವುದು ಸಮಾಜಕಾರ್ಯದ ಕೆಲಸಗಳಲ್ಲಿ ಒಂದು.

2. ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು-ಪ್ರತಿಯೊಬ್ಬರ ಬದುಕಿನಲ್ಲಿಯೂ ದುಃಖ ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ದುಃಖ ಮತ್ತು ಕಣ್ಣೀರು ತಂದವನು ಮನುಷ್ಯ ಎಂಬುದು ಕ್ರೈಸ್ತರ ನಂಬಿಕೆ.  ಪ್ರಕೃತಿಯ ವಿಕೋಪಗಳನ್ನು ಹೊರತುಪಡಿಸಿದರೆ, ಮನುಷ್ಯನ ದುಃಖಕ್ಕೆ ಮೂಲಕಾರಣ ಮನುಷ್ಯನ ವಿಕೃತ ಮನಸ್ಸಿನ ಚಟುವಟಿಕೆಗಳಾದ ಮೋಸ, ವಂಚನೆ, ಕ್ರೌರ್ಯ, ಅನ್ಯಾಯ, ಶೋಷಣೆ ಮುಂತಾದವುಗಳು. ಯಾವ ರಂಗದಲ್ಲೇ ಆಗಲಿ ಬಡವರು ಇವುಗಳ ಪರಿತಾಪದಿಂದಾಗಿ ದುಃಖಿಸುತ್ತಾರೆ. ಇಂತಹ ದುಃಖಿಗಳನ್ನು ದೇವರು ಸಮಾಧಾನಪಡಿಸುತ್ತಾನೆ. ಕ್ರಿಸ್ತನು ದುಃಖಿಗಳ ಕಣ್ಣೀರನ್ನು ಒರೆಸಿದ ಪರಿಯೇ ಬಹು ವಿಶೇಷ. ಈ ಸೇವೆಯ ಪರಿಯನ್ನು ಜಗತ್ತು ಬಹಳಷ್ಟು ಅನುಕರಣ ಮಾಡಿದೆ.48

3. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾದ್ಯಸ್ಥರು ಅವರು - ವಿನಯವಂತರು, ಸೌಮ್ಯ ಸ್ವಭಾವದವರು, ತಾಳ್ಮೆಯುಳ್ಳವರು, ವಿನೀತ ಭಾವನೆಯನ್ನು ಉಳ್ಳವರು, ದಯಾವಂತರು ಧನ್ಯರು. ಅವರೇ ಈ ನೆಲದ ಒಡೆಯರಾಗುವರು. ಇಲ್ಲಿ ಹೇಳಿರುವ ಗುಣ ವಿಶೇಷಗಳು ಸುಸಂಸ್ಕೃತ ವ್ಯಕ್ತಿಯ ಲಕ್ಷಣಗಳೇ ಆಗಿವೆ. ಒಬ್ಬನು ನಿನ್ನ ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ಒಡ್ಡು ಎನ್ನುವ ಯೇಸುವಿನ ಮಾತು ಬಲಹೀನತೆಯ ಪ್ರತೀಕವಲ್ಲ. ಬದಲಾಗಿ ಅದೊಂದು ಧಾಷ್ಟ್ರ್ಯದ (ದಿಟ್ಟತನದ) ಮಾತಾಗುತ್ತದೆ. ಹಾಗೆ ಪ್ರತಿಕ್ರಿಯಿಸಲು ಅತಿಶಯವಾದ ಧೈರ್ಯಬೇಕು. ಅದರಂತೆಯೇ ಮೇಲೆ ಹೇಳಿದ ವಿಶೇಷ ಗುಣಗಳು ಧೈರ್ಯವಂತನ ಲಕ್ಷಣಗಳೇ ಆಗಿವೆ. ಇವುಗಳೆಲ್ಲ ಬಹು ಶಕ್ತಿಯುತ, ಧನ್ಯತೆಯ ಗುಣಗಳೆಂದು ಕ್ರಿಸ್ತನು ಹೇಳುತ್ತಾನೆ. ದುಷ್ಟರು, ಅಹಂಕಾರಿಗಳು, ಹಿಂಸಾವಾದಿಗಳು, ಭಯೋತ್ಪಾದಕರು - ಇವರಾರು ಈ ಭೂಮಿಗೆ ಬಾಧ್ಯಸ್ಥರಾಗಲು ಸಾಧ್ಯವೇ ಇಲ್ಲ. ಇವರೆಲ್ಲರೂ ಈ ನೆಲದ ಅಂತಃಕರಣವನ್ನು ಛಿದ್ರಛಿದ್ರ ಮಾಡುವ ಹಿಂಸಾಮತಿಗಳು.49 ಹಾಗಾಗಿ ನಾವು ಈ ಸದ್ಗುಣಗಳನ್ನು ಬಳಸಿಕೊಳ್ಳಬೇಕು ಎಂಬುದು ತಾತ್ಪರ್ಯ (ಭಾವೈಕ್ಯತೆ ಒಂದು ಉದಾತ್ತ ಮೌಲ್ಯ).

4. ನ್ಯಾಯ ನೀತಿಗಾಗಿ ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು - ಸಮಷ್ಟಿ ಹಿತವನ್ನು ಕಾಪಾಡಲು ನ್ಯಾಯದ ಒಂದು ವ್ಯವಸ್ಥೆ ಇರಬೇಕು. ಅದಕ್ಕೊಂದು ನೀತಿ ಸಂಹಿತೆ ತುಂಬಾ ಅವಶ್ಯ.  ಅದನ್ನು ಸಾಮುದಾಯಿಕ ಹಿನ್ನೆಲೆ, ಸಾಂಸ್ಕೃತಿಕ ಹಿನ್ನೆಲೆ, ಕಾಲ ಮತ್ತು ದೇಶಕ್ಕೆ ತಕ್ಕಂತೆ ರೂಪಿತಗೊಳ್ಳುತ್ತದೆ. ಇದನ್ನು ಆಯಾ ಸಮುದಾಯದ ಸದಸ್ಯರು ಒಪ್ಪಿಕೊಳ್ಳಬೇಕು. ಅನುಸರಿಸಬೇಕು.  ಅಂದಾಗ ವ್ಯಷ್ಟಿಗೂ ಸಮಷ್ಟಿಗೂ ಹಿತ.  ಇದನ್ನರಿತು ಬಾಳಬೇಕು.  ಹೀಗೆ ವ್ಯಷ್ಟಿ ಸಮಷ್ಟಿ ಹಿತಗಳನ್ನು ಕಾಯ್ದುಕೊಳ್ಳಲು ಬೇಕಾದ ನ್ಯಾಯ-ನೀತಿಗಾಗಿ ಹಾತೊರೆಯುವವರು, ಹಸಿದು ಬಾಯಾರಿದವರು, ಅವುಗಳನ್ನು ಅನುಸರಿಸುವರು ಭಾಗ್ಯವಂತರು-ಧನ್ಯರು. ಅವರಿಗೆ ನ್ಯಾಯ ದೊರೆಯುವುದು, ಒಳ್ಳೆಯದಾಗುವುದು. ಕ್ರಿಸ್ತನು ಇಂಥವರನ್ನು `ಭಾಗ್ಯವಂತರು ಎಂದು ಕರೆದದ್ದು ಬಹು ಅನನ್ಯ. ಉಪವಾಸದಿಂದ ಸಾಯುವವನು ರೋಟ್ಟಿಚೂರಿಗೆ ತವಕಿಸುವಂತೆ, (ನೀರಡಿಕೆ ಉಳ್ಳವನು) ಗುಟುಕು ನೀರಿಗಾಗಿ ತೊಳೆಲಾಡುವಂತೆಯೇ ಎಲ್ಲಾರೂ ನೀತಿಗಾಗಿಯೂ ತವಕಪಡಬೇಕೆನ್ನುವ ಈ ಧನ್ಯವಾಕ್ಯದ ಪರಿಯೇ ಬಹು ಸೊಗಸು.50 

5. ದಯಾವಂತರು ಭಾಗ್ಯವಂತರು; ದೇವರದಯೆ ಅವರಿಗೆ ದೊರಕುವುದು- ದಯೆ, ಕರುಣೆ ಮಾನವ ಬದುಕಿನ ಒಂದು ದೊಡ್ಡ ಮೌಲ್ಯ. ಬಡವರು, ನಿರ್ಗತಿಕರು, ರೋಗಿಗಳು, ಬದುಕಿನಲ್ಲಿ ನೊಂದಿರುವವರು ಮುಂತಾದವರನ್ನು ಅನುಕಂಪದಿಂದ ನೋಡುವುದು, ಅವರಿಗೆ ಬೇಕಾದ ಸಹಾಯಮಾಡಿ ಅವರನ್ನು ಸಂತೈಸುವುದು ಮುಂತಾದವುಗಳನ್ನು ಮಾಡಲು ದಯಾಪರ ಮನಸ್ಸು ಬೇಕು. ಇಂತಹ ದಯಾಪರ ಮನಸ್ಸುಳ್ಳವರು ಭಾಗ್ಯವಂತರು - ಧನ್ಯರು. ಅಂತಹವರಿಗೆ ದೇವರ ದಯೆ ನಿಶ್ಚಿತರೂಪದಲ್ಲಿ ಸಿಗುತ್ತದೆ. ದಯೆಯ ಪ್ರಾಮುಖ್ಯತೆಯನ್ನು ಎಲ್ಲಾ ಧರ್ಮಗಳೂ ಸಾರಿವೆ. 

ಕ್ರೈಸ್ತರು ತಮ್ಮ ಪ್ರಾರ್ಥನೆಯಲ್ಲಿ, ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವಂತೆ ನಮ್ಮ ತಪ್ಪುಗಳನ್ನು ಕ್ಷಮಿಸು ಎಂದು ಮೊರೆಯಿಡುತ್ತಾರೆ. ಇದು ಯೇಸು ಕಲಿಸಿದ ಪಾಠಗಳಲ್ಲಿ ಒಂದು. ಈ ಮಾತಿನ ಅರ್ಥ ದಯೆ ಅಲ್ಲದೇ ಬೇರೇನಿಲ್ಲ. ದಿಕ್ಕಿಲ್ಲದವರನ್ನು ಪರಾಂಬರಿಸುವವನು ಧನ್ಯನು; ಯೇಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು (ಕೀರ್ತನೆ 41.1), ಎಂಬ ನಂಬಿಕೆ ಅವರದು. ಹಸಿದವರ, ಬಟ್ಟೆಬರೆ, ಮನೆಮಠ ಇಲ್ಲದ ನಿರ್ಗತಿಕರ, ಅನಾಥ, ದಿಕ್ಕು, ದೆಶೆ ಇಲ್ಲದವರ ಬದುಕು ಎಷ್ಟು ಬೇಗುದಿಯೇ ಅಷ್ಟೇ ಬೇಗುದಿ ಅವರ ಸಂಗಡ ಇರುವ ಇತರರ ಬದುಕು ಸಹ, ದೀನದೆಶೆಯಲ್ಲಿರುವ ಬದುಕಿಗೊಂದು ಕರುಣೆಯ ಕಿರಣವನ್ನು ತೋರಿಸುವುದು ಧನ್ಯತೆಯ ಲಕ್ಷಣ... ಕೇವಲ ಕರುಣೆ ತೋರಿಸುವುದಾಗಲಿ, ಕೇವಲ ಸಹಾಯ ಮಾಡುವುದಾಗಲಿ ಅಲ್ಲ, ಬದಲು ಆ ನೊಂದ ಜೀವಿಯ ಬದುಕಿನೊಳಗೆ ಪ್ರವೇಶ ಮಾಡುವುದು. ಆ ಜೀವಿಯ ಕಣ್ಣಿನಿಂದಲೇ, ಅವನ ಮನಸ್ಸಿನಿಂದಲೇ ಅವನ ಬದುಕಿನ ಒಳಗುದಿಯನ್ನು ನೋಡುವುದು ಎಂದರ್ಥ.51 ಯೇಸುಕ್ರಿಸ್ತ ಈ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ. ಪ್ರಾಯಶಃ ಈ ತತ್ತ್ವ ಪಾಶ್ಚಾತ್ಯ ಸಮಾಜಕಾರ್ಯ ಪರಿಕಲ್ಪನೆಗೆ ಮೂಲ ಹೇತುವಾಗಿರಬಹುದು. 

6. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು - ಇತರೆ ಧರ್ಮಗಳಲ್ಲಿ ಇರುವಂತೆಯೇ, ಕ್ರೈಸ್ತ ಧರ್ಮದಲ್ಲಿಯೂ ಅಂತರಂಗ-ಬಹಿರಂಗ ಶುದ್ಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ಬಹಿರಂಗ ಶುದ್ಧಿ ಖಚಿತವಾಗಿಯೂ ಬೇಕು. ಆಚಾರ ವಿಚಾರಗಳನ್ನು ಪಾಲಿಸುವುದಾಗಲೀ, ದಾನ ಧರ್ಮಗಳನ್ನು ಮಾಡುವುದಾಗಲಿ ಬದುಕಿಗೆ ಒಳಿತನ್ನು ತಂದು ಕೊಡುವ ಅಂಶಗಳೆ. ಆದರೆ ಇವುಗಳನ್ನು ಇನ್ನೊಬ್ಬರು ನೋಡಲಿ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿ ಎಂದು ಮಾಡುವುದಲ್ಲ. ಬಹಿರಂಗ ಶುದ್ಧಿಯ ಜೊತೆಗೆ ಅಂತರಂಗ ಶುದ್ಧಿಯೂ ಬಹಳ ಮುಖ್ಯವಾದುದು. ನಮ್ಮ ಎಲ್ಲ ಆಚಾರ-ವಿಚಾರಗಳು, ದಾನ ಧರ್ಮದ ಆಚರಣೆಗಳು ಅಂತರಂಗ ಶುದ್ಧಿಯ ಪರಿಣಾಮವಾಗಿ ರೂಪುಗೊಂಡಿರಬೇಕು. ಬಹಿರಂಗ ಶುದ್ಧಿಯೊಂದರಿಂದಲೇ ದೇವರು ಖಚಿತವಾಗಿ ಸಿಗಲಾರ. ದೇವರನ್ನು ತಲುಪಲು ಅಂತರಂಗ ಶುದ್ಧಿ ಅತಿ ಅವಶ್ಯ. ಕೆಟ್ಟ ಮನಸ್ಸಿನಿಂದ, ಸ್ವಾರ್ಥ ಪ್ರವೃತ್ತಿಯಿಂದ ಹಾಡುವ ಕೀರ್ತನೆಗಳು, ಪೂಜೆ ಪುನಸ್ಕಾರಗಳು, ದೇವರ ಹೆಸರಿನಲ್ಲಿ ಮಾಡುವ ಕಾಣಿಕೆ, ದಾನ ಇತ್ಯಾದಿಗಳು ಯಾವ ಫಲವನ್ನೂ ನೀಡಲಾರವು. ಹಾಗಾಗಿ ಅಂತರಂಗ ಶುದ್ಧತೆಗೆ ಹೆಚ್ಚಿನ ಆದ್ಯತೆ. ನಿರ್ಮಲ ಮನಸ್ಸಿನಿಂದ ಶುದ್ಧ ಚಿತ್ತದಿಂದ, ನಿಷ್ಕಪಟ ಅಂತಃಕರಣದಿಂದ ಮಾಡುವ ಪೂಜಾದಿಗಳು, ಜನತೆಯ ಸೇವಾ ಕಾರ್ಯಗಳು ಭಗವಂತನನ್ನು ಮುಟ್ಟುತ್ತವೆ. ಭಗವಂತನು ಅವುಗಳನ್ನು ಸ್ವೀಕರಿಸುತ್ತಾನೆ. ತತ್ಫಲವಾಗಿ ದೇವರು ನಿಮಗೆ ಒಳಿತನ್ನು ಕರುಣಿಸುತ್ತಾನೆ. ಪರಿಶುದ್ಧ ಹೃದಯಿಗಳು ನೀವಾದರೆ ನೀವೇ ಧನ್ಯರು. ನಿಮಗೆ ದೇವರ ದರ್ಶನ ಆಗುತ್ತದೆ. 
 
7. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು - ಭಿನ್ನಾಭಿಪ್ರಾಯ, ಅಸಹಕಾರ, ಅಸಮಾಧಾನ, ಅತೃಪ್ತಿ, ಅಶಾಂತಿ, ಘರ್ಷಣೆ, ಕಿತ್ತಾಟ, ಜಗಳ, ಗಲಭೆ, ಕೋಲಾಹಲ ಹೋರಾಟ, ಯುದ್ಧ ಮುಂತಾದವುಗಳು ಯಾವುದೇ ಕುಟುಂಬವನ್ನು, ಸಂಸ್ಥೆಯನ್ನು, ಸಮುದಾಯವನ್ನು, ಸಮಾಜವನ್ನು, ದೇಶವನ್ನು ಹಾಗೂ ಇಡೀ ಜಗತ್ತನ್ನು ಅವನತಿಯ ಕಡೆಗೆ, ಅಶಾಂತಿಯ ಕಡೆಗೆ ಕೊಂಡೊಯ್ಯುತ್ತವೆ. ಇವುಗಳಿಂದ ಯಾರಿಗೂ ಶಾಂತಿ ಸಮಾಧಾನಗಳಿಲ್ಲ. ಗಂಡ-ಹೆಂಡತಿ, ತಂದೆ-ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ, ಬಂಧು-ಬಳಗ, ಮಾಲಿಕ-ನೌಕರ, ಸರಕಾರ-ಉದ್ಯೋಗಿ, ನೆರೆ-ಹೊರೆ, ಊರು-ಕೇರಿ, ಒಂದು ದೇಶ-ಇನ್ನೊಂದು ದೇಶ ಇವರುಗಳ ಮಧ್ಯೆ ಶಾಂತಿ-ಸಮಾಧಾನಗಳ ಕೊರತೆಯಾದರೆ ಬದುಕೇ ದುರ್ಭರವಾಗುತ್ತದೆ. ಜಗತ್ತಿನ ಬೇರೆ ಬೇರೆ ವಲಯಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಕಾರಣಗಳಿಂದ, ಮಾರಕಾಸ್ತ್ರಗಳ ಸಂಗ್ರಹ, ರಕ್ಷಣೆಯ ಹೆಸರಲ್ಲಿ ದುರುಪಯೋಗ, ಜೀವಹಾನಿ ಮುಂತಾದವುಗಳ ಪರಿಣಾಮವಾಗಿ ಇಡೀ ಮಾನವಕುಲವೇ ವಿನಾಶದ ಅಂಚಿಗೆ ಬಂದು ನೀಂತಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು ಎಂದು ಹೇಳುವ ಯೇಸುವಿನ ಮಾತು ತುಂಬಾ ಔಚಿತ್ಯಪೂರ್ಣ ಮತ್ತು ಸಕಾಲಿಕ. ಕುಟುಂಬ, ನೆರೆಹೊರೆ, ಊರು, ಪಟ್ಟಣ, ತಾಲ್ಲೂಕು, ಜಿಲ್ಲಾ, ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟಗಳಲ್ಲಿ ಶಾಂತಿಗಾಗಿ ಶ್ರಮಿಸುವವರು ಧನ್ಯರು. ಅವರು ದೇವರ ಮಕ್ಕಳು ಎಂದು ಕರೆಸಿಕೊಳ್ಳುವುದರಲ್ಲಿ ಯಾವ ಅಭ್ಯಂತರವೂ ಇಲ್ಲ.

8. ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು. ಸ್ವರ್ಗ ಸಾಮ್ರಾಜ್ಯ ಅವರದು-ಒಳ್ಳೆಯ ನಡವಳಿಕೆಯ ನೀತಿ ಮಾರ್ಗ ಕ್ರೈಸ್ತ ಧರ್ಮದ ಪ್ರಮುಖ ತತ್ತ್ವಗಳಲ್ಲಿ ಒಂದು. ಯೇಸು ತನ್ನ ಅನುಯಾಯಿಗಳಿಗೆ ಸುಖದ ಆದರ್ಶವನ್ನೇನೂ ಬೋಧಿಸಲಿಲ್ಲ. ಅವನು ತೋರಿಸಿದ ದಾರಿ ಹಿಂಸೆ, ಕಷ್ಟ, ನೋವು, ಅವಮಾನ, ಅವಹೇಳನಗಳಿಂದ ಕೂಡಿದ್ದಾಗಿತ್ತು. ಯೇಸುವು ತನ್ನ ಅನುಯಾಯಿಗಳ ಪರವಾಗಿ ಹಿಂಸೆಯನ್ನು ಅನುಭವಿಸಿದ, ಅವಮಾನವನ್ನು ಸಹಿಸಿಕೊಂಡ, ಕಷ್ಟ ಕೋಟಲೆಗಳನ್ನು ತಾಳಿಕೊಂಡ. ಸಮಷ್ಟಿ ಹಿತದ ನೀತಿಮಾರ್ಗ ಕಷ್ಟ ನಿಷ್ಟುರಗಳಿಂದ ಕೂಡಿರುತ್ತದೆ ಎಂದು ಬೋಧಿಸಿದ ಮತ್ತು ಅದರಂತೆ ನಡೆದು ತೋರಿಸಿದ. ಯೇಸುವು ಈ ತತ್ತ್ವದ ಮಹತ್ವವನ್ನು ಚೆನ್ನಾಗಿ ಅರಿತಿದ್ದ. ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ತನ್ನ ಅನುಯಾಯಿಗಳು ಅದರಂತೆ ನಡೆಯಲಿ ಎಂದು ಆಶಿಸಿದ. ನನ್ನ ನಿಮಿತ್ತವಾಗಿ ಜನರು ನಿಂದಿಸಿ, ಹಿಂಸೆಪಡಿಸಿ, ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು. (ಮತ್ತಾಯ 5; 11-12) ಎಂದು ಬೋಧಿಸಿದ.  

ಜಗತ್ತಿನ ಶ್ರೀಮಂತ ರಾಷ್ಟ್ರಗಳು ಬಡವರನ್ನು, ಹಿಂಸೆಪಡುವವರನ್ನು, ಶೋಷಣೆಗೆ ಒಳಗಾದವರನ್ನು, ನೀತಿಗೆ ಹಸಿದು ಬಾಯಾರಿದವರನ್ನು ನೋಡುವ ದೃಷ್ಟಿಯೇ ಬೇರೆ, ಕ್ರಿಸ್ತನ ದೃಷ್ಟಿಯೇ ಬೇರೆ. ಕ್ರಿಸ್ತನು ಜಲಗಾರನ ಮನೆ, ಮನಸ್ಸಿನೊಳಗೆ ಪ್ರವೇಶ ಮಾಡಿದ ರೀತಿಯೇ ಬಹು ಮುಖ್ಯ. ಸುಂಕದವರು, ದಲಿತರು, ಸಮಾರ್ಯದವರು, ನಿರ್ಗತಿಕರು, ಕುಷ್ಠರೋಗಿಗಳು, ವೇಶ್ಯೆಯರು, ನೊಂದು ಬೆಂದವರು, ಕುಂಟ ಕುರುಡರು - ಇಂಥವರ ಕಣ್ಣೀರನ್ನು ಒರೆಸಿದ ಪರಿಯೇ ಅನನ್ಯ. ಇಂಥಹವರಿಗೆ ದೇವರ ರಾಜ್ಯದ ನಿರೀಕ್ಷೆಯು ದಕ್ಕಿದ್ದು ವಿಶೇಷ. ಅಂಥವರಿಗೆ ದೇವರ ರಾಜ್ಯ ಅವರ ಮರಣದ ನಂತರ ಸಿಗುವುದಲ್ಲ. ಅವರಿಗೆ ಅದು ಈಗಲೇ ಲಭ್ಯವಾಗುತ್ತದೆ ಎಂದು ಯೇಸು ಹೇಳುತ್ತಾನೆ.   

ಕ್ರಿಸ್ತನ ಈ ಧನ್ಯವಾಕ್ಯಗಳು ಜಗತ್ತಿನೆಲ್ಲೆಡೆ ಇರುವ ಸೇವಾ ಕೇಂದ್ರಗಳಿಗೆ ಪ್ರೇರಣೆ ಎನ್ನುವುದು ಸತ್ಯ. ಆಸ್ಪತ್ರೆಗಳು, ಶಾಲೆಗಳು, ಅಂಗವಿಕಲರಿಗೆ ಶಾಲೆ, ವೈದ್ಯಕೀಯ ಸೇವೆ, ಕುಷ್ಠ ರೋಗಿಗಳ ಆಶ್ರಯಧಾಮಗಳು, ಅನಾಥ ಮಕ್ಕಳಿಗೆ, ನಿರ್ಗತಿಕರಿಗೆ ಆರೈಕೆ, ವಿಧವೆಯರು, ಬೀದಿಮಕ್ಕಳು - ಇಂತಹ ಲಕ್ಷಾಂತರ ನೊಂದ ಜೀವಿಗಳ ಬದುಕಿಗೆ ಬಲ ಮತ್ತು ಬೆಳಕನ್ನು ತೋರಿಸಲು ಕ್ರಿಸ್ತನ ಈ ಬೋಧನೆಗಳೇ ಬಹುಮುಖ್ಯ ಕಾರಣ, ಲಕ್ಷಾಂತರ ಕ್ರೈಸ್ತರು ಈ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈ ತೊಡಗಿಸುವಿಕೆಯಲ್ಲಿ ಅವರ ಮನಸ್ಸಿನೊಳಗೆ ಒಂದು ರೀತಿಯ ಸಂಭ್ರಮವಿದೆ.52

ಬಹುಶಃ ಪಾಶ್ಚಾತ್ಯ ಜಗತ್ತಿನ ಸಮಾಜಕಾರ್ಯ ಪರಿಕಲ್ಪನೆಗಳಿಗೆ ಮತ್ತು ಯೋಜನೆಗಳಿಗೆ ಈ ಧಾರ್ಮಿಕ ಹಿನ್ನೆಲೆಯೇ ಕಾರಣೀಭೂತ ಆಗಿರಬಹುದಾಗಿದೆ.
 
ಸಿಖ್ ಧರ್ಮ
ಭಾರತ ದೇಶದಾದ್ಯಾಂತ ಅನೇಕಾನೇಕ ಋಷಿಗಳು, ಸಂತರು, ದಾರ್ಶನಿಕರು, ಆಳ್ವಾರರು, ದಾಸರು, ಶರಣರು, ತೀರ್ಥಂಕರರು, ಜ್ಞಾನಿಗಳು, ಭಕ್ತರು ಆಗಿಹೋಗಿದ್ದಾರೆ. ಅದರಂತೆಯೇ ಜಗತ್ತಿನ ಇತರ ಪ್ರದೇಶಗಳಲ್ಲಿಯೂ ಸಂತರು, ಯೇಸು, ಬುದ್ಧ, ಜರತೃಷ್ಟ್ರ, ಪೈಗಂಬರ್, ಸೂಫೀಸಂತರಂತಹವರೂ ವಿವಿಧ ಸಮಾಜಗಳಿಗೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಈ ದೇವದೂತರೆಲ್ಲಾ, ಸಿದ್ಧಪುರುಷರೆಲ್ಲಾ ತಮ್ಮ ಸಾಧನೆಯಿಂದ ಕಂಡುಕೊಂಡ ಸತ್ಯವನ್ನು ಆಯಾ ಸಮಾಜಗಳಿಗೆ ತಿಳಿಸಿ, ಆಯಾ ಸಮಾಜದ ಸದಸ್ಯರುಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅದರಂತೆ ಉತ್ತರ ಭಾರತದಲ್ಲಿ 15ನೇ ಶತಮಾನ ಕಂಡ ಗುರುನಾನಕರು ಅಂಥ ದಾರ್ಶನಿಕರಲ್ಲಿ ಒಬ್ಬರು.  

ಗುರುನಾನಕರು ಬೋಧಿಸಿದ ತತ್ತ್ವಗಳು ಪಾಂಡಿತ್ಯ, ತರ್ಕದ ಮೇಲೆ ಆಧಾರವಾಗಿಲ್ಲ. ಬದಲಾಗಿ ಅವು ನಾನಕರ ನಿರಂತರ ಧ್ಯಾನದಿಂದ ಹುಟ್ಟಿಕೊಂಡ ಸತ್ಯಗಳಾಗಿವೆ. ಅವರ ಸಾಧನೆಯ ಪ್ರಾಮಾಣಿಕ ಅನುಭವ ಆಗಿವೆ. ಗುರುನಾನಕರು ವಿನಯದ ಸಾಕಾರ ಮೂರ್ತಿಗಳಾಗಿದ್ದರು. ಅವರು ತಮ್ಮ ವೃತ್ತಿಯಿಂದ ತಮಗೆ ಬಂದ ವರಮಾನವನ್ನೆಲ್ಲಾ ಅವಶ್ಯವಾದುದನ್ನು ಮಾತ್ರ ಇಟ್ಟುಕೊಂಡು, ಬಡವರಿಗೆ ಹಂಚಿಬಿಟ್ಟರು. ನಿರಂತರ ಧ್ಯಾನ, ಗೀತರಚನೆ, ಚಿಂತನೆ, ಅನುಯಾಯಿಗಳಿಗೆ ಮಾರ್ಗದರ್ಶನ ಮಾಡುವುದರಲ್ಲಿಯೇ ತಮ್ಮ ಜೀವನವನ್ನು ಸವೆಸಿದರು.  ಗುರುನಾನಕರ ಕಾಲಘಟ್ಟದಲ್ಲಿ, ಉತ್ತರ ಭಾರತದಲ್ಲಿ, ಹಿಂದು ಮುಸ್ಲಿಮರ ತಿಕ್ಕಾಟ ಹೆಚ್ಚಾಗಿತ್ತು. ಅದನ್ನು ನೋಡಿದ್ದ ಗುರುನಾನಕರು ಬಹಳ ನೊಂದಿದ್ದರು. ಅವರ ತಿಕ್ಕಾಟಕ್ಕೆ ಪರಿಹಾರವೆಂಬಂತೆ, ಹಿಂದು-ಇಸ್ಲಾಂ ಧರ್ಮಗಳ ಕೆಲವು ಪರಿಕಲ್ಪನೆಗಳನ್ನು ಸ್ವೀಕರಿಸಿ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಂಡುಕೊಂಡ ಸತ್ಯದ ಮಜಲುಗಳನ್ನು ಕ್ರೋಢೀಕರಿಸಿ ಸಿಖ್ ಧರ್ಮದ ತತ್ತ್ವಗಳನ್ನು ರೂಪಿಸಿದರು. ಸಿಖ್ ಮತವು ಹಿಂದೂ ಹಾಗೂ ಇಸ್ಲಾಂ ಧರ್ಮದ ತತ್ತ್ವಗಳಿಂದ ಪರಿಪೋಷಿತವಾಗಿ ಮೂಡಿಬಂದ ಮತವಾಗಿದೆ. ಆದರೆ ಆಚಾರ ವಿಚಾರಗಳಲ್ಲಿ, ತಾತ್ತ್ವಿಕವಾಗಿ ಬಹುಮಟ್ಟಿಗೆ ಹಿಂದೂ ಧರ್ಮವನ್ನೇ ಹೋಲುತ್ತದೆ.53

ಸಿಖ್ಧರ್ಮದ ತತ್ತ್ವಗಳನ್ನು ಹೀಗೆ ಸಮೀಕರಿಸಬಹುದು. ದೇವರು ಒಬ್ಬನೇ, ಜಗತ್ತು ಒಂದೇ. ಮಾನವಕುಲವನ್ನು ದೃಷ್ಟಿಸಿದವನು ಒಬ್ಬನೇ ದೇವರು. ದೇವರನ್ನು ಪ್ರೀತಿಸು. ಮನುಷ್ಯರೆಲ್ಲಾ ಸಮಾನರು. ಅವರನ್ನು ಅವರ ಚಾರಿತ್ರ್ಯದಿಂದ ಗೌರವಿಸಬೇಕು, ಕುಲದಿಂದಲ್ಲ. ಮನುಷ್ಯರೆಲ್ಲಾ ದೇವರ ಸ್ವರೂಪವೇ ಆಗಿದ್ದಾರೆ.  ಅವರನ್ನು ಪ್ರೀತಿಸು. ದೇವರಿಗೆ ಪ್ರಾಮಾಣಿಕ ಭಕ್ತಿಯನ್ನು ತೋರಿಸು. ಪ್ರಾರ್ಥನೆ ಹಾಗೂ ಧ್ಯಾನವನ್ನು ಕಾಲಕಾಲಕ್ಕೆ ಮಾಡು. ಇದೇ ಸದ್ಗತಿಗೆ ದಾರಿ. ಮನುಷ್ಯನಿಗೆ ಶುದ್ಧ ಚಾರಿತ್ರ್ಯವೇ ತುಂಬಾ ಪ್ರಮುಖವಾದುದು. ಸಿಖ್ ಧರ್ಮದ ಉನ್ನತ ಆದರ್ಶವೆಂದರೆ ಬಂಧುಗಳ ಸೇವೆ (ಸಮುದಾಯದವರ ಸೇವೆ). ಬಂಧು-ಬಾಂಧವರ ಸೇವೆಯೇ ಪ್ರೀತಿಯ ನಿಜವಾದ ಅಭಿವ್ಯಕ್ತಿ. ಅಹಂಕಾರವನ್ನು ತೊರೆದು ಸತ್ಕರ್ಮಗಳನ್ನು ಮಾಡುವುದು ಸಿಖ್ ಧರ್ಮದವರು ತಮಗಾಗಿ ರೂಪಿಸಿಕೊಂಡ ಆದರ್ಶ. ಇಲ್ಲಿ ಸತ್ಕರ್ಮ ಎಂದರೆ ಸಮಷ್ಟಿ ಹಿತಕ್ಕೆ ಮಾಡಬೇಕಾದ ಕೆಲಸ ಎಂದು ಅರ್ಥೈಸಬಹುದಾಗಿದೆ.  

ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು. ದೇವರ ಹೆಸರನ್ನು ಭಕ್ತಿಯಿಂದ ಸ್ಮರಿಸು. ನಿನ್ನ ಪಾಲಿನ ಆಹಾರವನ್ನು ಸೇವಿಸು. ಪ್ರತಿಯೊಬ್ಬರೂ ದುಡಿಯಬೆಕು. ದುಡಿದು ಗಳಿಸಿದ್ದನ್ನು ಹಕ್ಕುದಾರರೆಲ್ಲಾ ಹಂಚಿಕೊಂಡು ಉಪಭೋಗಿಸಬೇಕು. ಯಾರೊಬ್ಬರೂ ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳಬಾರದು. ದಾನ-ಧರ್ಮ ಮಾಡಬೇಕು.54 ತಾವು ಸಂಪಾದಿಸಿದ ಹಣದಲ್ಲಿ ಹತ್ತನೇ ಒಂದು ಪಾಲನ್ನು ದಾನಮಾಡಿ ಉಳಿದುದರಲ್ಲಿ ಸಂಸಾರ ನಡೆಸುವ ಸಿಖ್ಖರು ಸದ್ಗೃಹಸ್ಥರಾಗಿ ಬಾಳುವವರು.55 ಪ್ರಾಯಶಃ ಈ ತತ್ತ್ವ ಸಿಖ್ ಸಮುದಾಯದಲ್ಲಿ ಸಮಾಜಕಾರ್ಯ ಪರಿಕಲ್ಪನೆಯನ್ನು ಹುಟ್ಟುಹಾಕಿರಬಹುದಾಗಿದೆ. 

ಇಹಲೋಕದಲ್ಲಿರುವ ಬದುಕು ಹೇಯವಲ್ಲ. ಬದುಕನ್ನು ಭಗವಂತನ ಸಾಕ್ಷಾತ್ಕಾರಕ್ಕಾಗಿ ಬಳಸಬೇಕು. ಸೇವೆ ಅದರ ಮಂತ್ರವಾಗಬೇಕು.56 ಸಿಖ್ಧರ್ಮದ ಪವಿತ್ರಗ್ರಂಥ ಗಂಥಸಾಹೇಬಿನ ಪಠಣವನ್ನು ಗುರುದ್ವಾರಗಳಲ್ಲಿ ಮಾಡುವುದು ಸಂಪ್ರದಾಯ. ಧಾರ್ಮಿಕ ಪ್ರವಚನ, ಸಂಗೀತ, ಸೇವೆ, ಅನ್ನ ಸಂತರ್ಪಣೆ, ಸಿಹಿತಿಂಡಿ, ಪ್ರಸಾದ ವಿತರಣೆ ಇವೆಲ್ಲಾ ಗುರುದ್ವಾರ ಕಂಡುಬರುವ ಸಮಾಜಮುಖಿ ಕಾರ್ಯಗಳಿಗೆ ಒಂದು ಮಾದರಿ. ಇದು ಸಮುದಾಯಕ್ಕೆ, ಸಮಾಜಕ್ಕೆ ವಿಸ್ತಾರಗೊಳ್ಳುವುದೇ ಸಮಾಜಕಾರ್ಯದ ಹಿನ್ನೆಲೆ. 
 
ಸೂಫೀ ಧರ್ಮ
ಹಜರತ್ ಮಹಮ್ಮದ್ ಪೈಗಂಬರ್ ಸೂಫಿಧರ್ಮದ ಸ್ಥಾಪಕರು. ಅಂತಿಮ ಸತ್ಯ ಒಂದೇ. ದೇವರು ಒಬ್ಬನೇ. ಈ ಏಕಮೇವ ಸತ್ಯಕ್ಕೆ ಬೇರೆ ಬೇರೆ ಹೆಸರುಗಳನ್ನಿಟ್ಟು ಅದನ್ನು ತಿಳಿಯಬಯಸುತ್ತೇವೆ (ಎಕಂ ಸತ್, ವಿಪ್ರಾ ಬಹುದಾ ವದಂತಿ-ಋಗ್ವೇದ). ಸೂಫಿ ಧರ್ಮವು ತನ್ನ ಮೂಲವನ್ನು ಇಸ್ಲಾಂ ಧರ್ಮದಲ್ಲಿ ಕಂಡು ಕೊಂಡಿದೆ. ಆನಂತರ ಭಾರತೀಯ ಮತ್ತು ಕ್ರಿಶ್ಚಿಯನ್ ಮತಗಳಿಂದ ಪ್ರಭಾವಿತವಾಗಿದೆ ಎಂದು ಹೇಳಲಾಗುತ್ತಿದೆ. ಇಸ್ಲಾಂ ಧರ್ಮದ ಭಕ್ತಿಮಾರ್ಗವೇ ಸೂಫೀ ಪಂಥ ಎಂದು ವ್ಯಾಖಾನಿಸಲಾಗುತ್ತದೆ. ಸೂಫೀ ಮಾರ್ಗ ಸತ್ಯ ಮತ್ತು ಭಕ್ತಿಗಳ ಮಾರ್ಗವಾಗಿದೆ. ಆತ್ಮನು ಭಗವಂತನನ್ನು ಹೊಂದಬೇಕಾದರೆ ಕ್ರಮಿಸಬೇಕಾದ ಏಳು ಹಂತಗಳು ಹೀಗಿವೆ.57 
  1. ದೇವರ ಸೇವೆ, ಪ್ರಾಯಶ್ಚಿತ್ತ ಮಾಡಿಕೊಂಡು ಪರಿಶುದ್ಧನಾಗುವುದು. 
  2. ಭಕ್ತಿ, ಲೌಕಿಕ ಕಾಮನೆಗಳಿಂದ ದೂರವಿದ್ದು ದೇವರನ್ನು ಪ್ರೀತಿಸುವುದು.
  3. ತ್ಯಾಗ, ಭಕ್ತನು ತನ್ನದೆಲ್ಲವನ್ನು ಇನ್ನೊಬ್ಬರಿಗೆ ಕೊಡುವುದು. ವೈರಾಗ್ಯ ತಾಳಿ ಭಗವಂತನನ್ನು ಅವಲಂಬಿಸುವುದು.
  4. ದೇವರ ರೂಪ, ಗುಣ, ಸ್ವಭಾವಗಳನ್ನು ಚಿಂತಿಸುವುದು.
  5. ಆವೇಶ, ಆನಂದ - ಸಾಧನೆಯ ಫಲಶೃತಿಗಳನ್ನು ಅನುಭವಿಸುವುದು.
  6. ದೇವರ ಸತ್ಯ ಸ್ವರೂಪ ತಿಳಿಯುವುದು.
  7. ಐಕ್ಯ, ದೇವರ ಸಂಪರ್ಕ, ಸಂಬಂಧ, ದೇವರೊಂದಿಗೆ ಒಂದಾಗುವುದು.
ಈ ಸಾಧನಾ ಮಾರ್ಗ ಬದುಕಿನ ಮೌಲ್ಯಗಳನ್ನು ಒಳಗೊಂಡಿದೆ, ಆಧ್ಯಾತ್ಮಿಕ ಮೌಲ್ಯಗಳನ್ನೂ ರೂಢಿಸಿಕೊಂಡಿದೆ. ತ್ಯಾಗ ಮತ್ತು ವೈರಾಗ್ಯಗಳ ಮೂಲಕ ಸಮಾಜಕಾರ್ಯ ಮೌಲ್ಯಗಳಿಂದಲೂ ಕೂಡಿದೆ. ತನ್ನದನ್ನು ಅವಶ್ಯವಿರುವ ಇನ್ನೊಬ್ಬರಿಗೆ ಹಂಚುವುದು ಮಾನವ ಬದುಕಿನ ಮೌಲ್ಯದ ಜೊತೆಗೆ ಸಮಾಜಸೇವೆ, ಸಮಾಜಕಾರ್ಯದ ಪರಿಕಲ್ಪನೆಯೂ ಆಗಿವೆ. 
 
ಕನ್ಫ್ಯೂಶಿಯಸ್ ಧರ್ಮ
ಜಗತ್ತಿನ ನಾಲ್ಕನೇ ಒಂದು ಭಾಗದಷ್ಟು ಜನರಿಂದ ಕೂಡಿದ ಚೈನಾ ದೇಶದಲ್ಲಿ ಪ್ರಸಿದ್ಧಿಯಿರುವ ಮೂರು ಧರ್ಮಗಳಲ್ಲಿ ಕನ್ಫ್ಯೂಶಿಯಸ್ ಧರ್ಮವೂ ಒಂದು. ಬೌದ್ಧಧರ್ಮ ಮತ್ತು ಟಾವೋ ಧರ್ಮಗಳು ಉಳಿದ ಎರಡು ಧರ್ಮಗಳು. ಚೈನಾ ದೇಶದ ಸಾಂಸ್ಕೃತಿಕ ಪರಂಪರೆಯಿಂದ ಬಂದ ಜ್ಞಾನಭಂಡಾರವನ್ನು ಹಲವು ಹತ್ತುಕಡೆಗೆ ಹಬ್ಬಿಸಿದ ಕೀರ್ತಿ ಕನ್ಫ್ಯೂಶಿಯಸ್ಗೆ ಸಲ್ಲುತ್ತದೆ. ಚೈನಾ ಸಂಸ್ಕೃತಿಯ, ಮನುಷ್ಯನ ಬದುಕಿಗೆ ಬೇಕಾಗುವ ಆಚಾರ ವಿಚಾರಗಳ, ಮೂಲಭೂತ ತತ್ತ್ವಗಳ ಪುನರುತ್ಥಾನ ಮಾಡಿ ಚೈನಾ ದೇಶದ ಅನಭಿಷಿಕ್ತ ಸಾಮ್ರಾಟ್ ಎಂದೆನಿಸಿಕೊಂಡ. ಸಾಂಸ್ಕೃತಿಕ ಅಂಶಗಳು, ಸಂಪ್ರದಾಯ, ಆಚಾರ-ವಿಚಾರಗಳಿಗೆ ಹೆಚ್ಚು ಮಹತ್ವವನ್ನು ಕೊಡುತ್ತಿದ್ದ ಕನ್ಫ್ಯೂಶಿಯಸ್ ಅವುಗಳಿಂದಲೇ ಸಮಾಜದಲ್ಲಿ ಶಾಂತಿ-ಸಮಾಧಾನಗಳು ನೆಲೆಸುತ್ತವೆ ಎಂದು ಬಲವಾಗಿ ನಂಬಿದ್ದ. ಹಾಗಾಗಿ ಸಾಂಸ್ಕೃತಿಕ ಪುನರುತ್ಥಾನಕ್ಕೆ ತನ್ನನ್ನು ತೊಡಗಿಸಿಕೊಂಡ. ಸಾಂಸ್ಕೃತಿಕ ಪರಂಪರೆ, ತಲೆಮಾರಿನಿಂದ ತಲೆಮಾರಿಗೆ ನಿರಂತರವಾಗಿ ಹರಿದುಬರಬೇಕು. ಹಾಗಾಗದಿದ್ದರೆ ಅದೇ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಮೂಲಕಾರಣವಾಗುತ್ತದೆ. ಈ ಸಾಂಸ್ಕೃತಿಕ ಪ್ರವಾಹ ನಿರಂತರವಾಗಿರಬೇಕು, ಆದರೆ ಕುರುಡು ವಿಧೇಯತೆ ಆಗಬಾರದು.  ಅದೊಂದು ಬುದ್ಧಿಪೂರ್ವಕವಾಗಿ ಪ್ರಜ್ಞಾಪೂರ್ವಕವಾಗಿ ಪ್ರವಹಿಸಬೇಕು.  ಅದರಂತೆಯೇ ಕಾಲಕಾಲಕ್ಕೆ ತಕ್ಕ ಮಾಪರ್ಾಟುಗಳೂ ಅದಕ್ಕೆ ಸೇರಿಕೊಳ್ಳಬೇಕು. ಇದು ಕನ್ಫ್ಯೂಶಿಯಸ್ನ ಚಿಂತನೆ. ಅದಕ್ಕಾಗಿ ತನ್ನ ಆಯುಷ್ಯವನ್ನೆಲ್ಲಾ ಸಮಾಜ ಹಾಗೂ ಮಾನವ ಕಲ್ಯಾಣಕ್ಕಾಗಿಯೇ ವಿನಿಯೋಗಿಸಿದ.

ಕನ್ಫ್ಯೂಶಿಯಸ್ ನೀತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿದ್ದ. ಮನುಷ್ಯ ಸ್ವಭಾವತಃ ಒಳ್ಳೆಯವನೆ. ಪರಿಸ್ಥಿತಿ, ಸಮಯ, ಸಂದರ್ಭ ಅವನನ್ನು ಬದಲಾಯಿಸುತ್ತದೆ. ಅದಕ್ಕೆ ಅಜ್ಞಾನ, ತಿಳುವಳಿಕೆಯ ಕೊರತೆಗಳೇ ಕಾರಣ. ಇದರಿಂದ ಮುಕ್ತಿ ಪಡೆಯಲು ನೈತಿಕತೆಯ ಅವಶ್ಯಕತೆ ಇದೆ. ಮನುಷ್ಯ ನೀತಿವಂತನಾದರೆ ಅವನ ಬದುಕು ಹಸನಾಗುತ್ತದೆ. ಮನುಷ್ಯ ಸತ್ಯವಂತನಾಗಬೇಕು.  ಸತ್ಯ ದೇವರ ನಿಯಮ. ಸತ್ಯ ವ್ಯಕ್ತಿಯ ನಿಜಸ್ವರೂಪದ ಸಾಕ್ಷಾತ್ಕಾರ. ಮಾನವನು ಸಮಾಜದಲ್ಲಿ ತನ್ನ ಬಾಂಧವರ ಸಂಗಡ ಮುಕ್ತ ಮನಸ್ಸಿನಿಂದ, ಪ್ರೇಮದಿಂದ ಬದುಕಬೇಕು. ನಿಷ್ಕಳಂಕ ಪ್ರೇಮದ ಮಾರ್ಗವನ್ನು ಅನುಸರಿಸದಿದ್ದರೆ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಪ್ರೀತಿ, ಪ್ರಾಮಾಣಿಕತೆ ದೇವರ ಪ್ರಾಪ್ತಿಗೆ ಸಾಧಕವಾಗಿದೆ. ಮನುಷ್ಯರ ಜೀವನದ ಮೂಲತತ್ತ್ವಗಳಾಗಿವೆ. ಒಬ್ಬರನ್ನೊಬ್ಬರು ಪ್ರೀತಿಸಬೇಕು. ಎಲ್ಲ ಜೀವಿಗಳ ಬಗೆಗೆ ಉದಾರ ಸಹಾನುಭೂತಿಯೇ ಶ್ರೇಷ್ಠ ಮನುಷ್ಯನ ಲಕ್ಷಣ.58 ಕನ್ಫ್ಯೂಶಿಯಸ್ ನೀತಿವಂತನ ಲಕ್ಷಣಗಳನ್ನು ಬಹಳ ಸರಳವಾಗಿ ಹಾಗೂ ನೇರವಾಗಿ ಹೇಳುತ್ತಾನೆ. ನೀತಿವಂತನು ವಿಶ್ವದ ವ್ಯಾಪಕವಾದ ನೈತಿಕ ನಿಯಮಗಳಿಗೆ ಅನುಸಾರವಾಗಿ ಬಾಳುತ್ತಾನೆ. ಅವನ ನಡವಳಿಕೆ ಎಂದಿಗೂ ವಿಶ್ವದ ಸ್ವಾಸ್ಥ್ಯಕ್ಕೆ, ದೇಶದ ಸ್ವಾಸ್ಥ್ಯಕ್ಕೆ, ಸಮಾಜದ ಸ್ವಾಸ್ಥ್ಯಕ್ಕೆ, ವ್ಯಕ್ತಿಯ ಸ್ವಾಸ್ಥ್ಯಕ್ಕೆ ಮಾರಕವಾಗುವುದಿಲ್ಲ. ನೀತಿವಂತರು ಜನರ ಹೊಗಳಿಕೆ ತೆಗಳಿಕೆಗಳಿಗೆ ದಿವ್ಯ ನಿರ್ಲಕ್ಷ್ಯದಿಂದಿರುತ್ತಾರೆ. 

ಕನ್ಫ್ಯೂಶಿಯಸ್ ವರ್ಗಭಾವನೆಯನ್ನು ಎಂದೂ ಪೋಷಿಸಲಿಲ್ಲ. ಅವನಿಗೆ ಬಡವರ ಬಗ್ಗೆ ತುಂಬಾ ಅನುಕಂಪ. ಅವನೊಬ್ಬ ಮಾನವ ಹಕ್ಕುಗಳ ಪ್ರತಿಪಾದಕ. ಅವನ ನೀತಿ ವಾಕ್ಯಗಳಂತೂ ಸರಳ, ಅರ್ಥಗರ್ಭಿತ ಹಾಗೂ ಆಚರಣೆಗೆ ಯೋಗ್ಯ. ಎಲ್ಲರೊಂದಿಗೂ ದಯೆಯಿಂದ  ವರ್ತಿಸು. ಅವರಿಗೆ ಸಹಾಯ ಮಾಡು. ಇತರರನ್ನು ತನ್ನಂತೆಯೇ ಬಗೆ, ನಿನ್ನ ಬಂಧು-ಬಾಂಧವರನ್ನು ಪ್ರೀತಿಸು.  ಅಂತರಂಗದ ಶುದ್ಧಿಗೆ ಆದ್ಯತೆ ಕೊಡು, ಇತ್ಯಾದಿ.

ಒಮ್ಮೆ ಅವನ ಶಿಷ್ಯನೊಬ್ಬ ಬಂದು ಹೀಗೆ ಕೇಳುತ್ತಾನೆ. ``ಒಡೆಯ, ನಾನು ದೇವರ ಸೇವೆ ಹೇಗೆ ಮಾಡಲಿ ? ಅದಕ್ಕೆ ಕನ್ಫ್ಯೂಶಿಯಸ್ ಕೊಟ್ಟ ಉತ್ತರ ಬಹಳ ಮೌಲ್ಯಯುತವಾಗಿದೆ. ``ನೀನು ಮನುಷ್ಯರ ಸೇವೆಯನ್ನು ಮಾಡಲು ಕಲಿತಿಲ್ಲ; ದೇವರ ಸೇವೆಯನ್ನು ಹೇಗೆ ಮಾಡಲು ಸಮರ್ಥನಾಗುತ್ತೀ?59 ಇದು `ಜನಸೇವೆಯೇ ಜನಾರ್ದನ ಸೇವೆ' ಎಂಬ ಸನಾತನ ಧರ್ಮದ ಮಾತಿನಂತಿದೆ. ಇದು ಸಮಾಜಕಾರ್ಯದ ಮೌಲ್ಯವೂ ಆಗಿದೆ.

ಕನ್ಫ್ಯೂಶಿಯಸ್ ತನ್ನ ಜೀವಿತಾವಧಿಯಲ್ಲಿ ದಾಖಲೆಯ ಪುಸ್ತಕ, ಪರಿವರ್ತನೆಯ ಪುಸ್ತಕ, ಪ್ರಾರ್ಥನಾ ಗೀತೆಗಳ ಪುಸ್ತಕ, ವಸಂತ ಮತ್ತು ಶರತ್ಕಾಲದ ಸಂಗತಿಗಳು ಮತ್ತು ಧರ್ಮ ಕಾರ್ಯಗಳ ಇತಿಹಾಸ ಎಂಬ ಐದು ಪುಸ್ತಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಒಂದು, ಎರಡು ಮತ್ತು ನಾಲ್ಕನೇ ಪುಸ್ತಕಗಳು ಹೆಚ್ಚಾಗಿ ನೀತಿಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಆಡಳಿತಕ್ಕೆ ಸಂಬಂಧಪಟ್ಟಿವೆ ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ ಅವನ ಬೋಧನೆಗಳು ದಾಖಲಾಗಿವೆ.

ಕನ್ಫ್ಯೂಶಿಯಸ್ ಬೋಧಿಸಿದ ಪ್ರತಿಯೊಬ್ಬರಿಗೂ ಉಪಯೋಗವಾಗುವ, (ಹಾಗೇನೆ ಸಮಾಜಕಾರ್ಯಕರ್ತರಿಗೂ), ನೀತಿ ತತ್ತ್ವಗಳು.
*  ಸ್ನೇಹ ಯಾರ ಜೊತೆ ಬೇಕು-ಬೇಡ
- ಅನುಭವಿಗಳು, ಚಾರಿತ್ರವಂತರು ಹಾಗೂ ನಂಬಿಕಸ್ತರ ಸ್ನೇಹ ಬೇಕು.
- ದುರ್ಮಾರ್ಗಿಗಳು, ಅತಿವಿನಯಿಗಳು, ಸಿಹಿ ಮಾತನಾಡುವವರ ಸ್ನೇಹ ಹಾನಿಕಾರಕ.

* ಶ್ರೇಯಸ್ಕರ ಸಂತೋಷಗಳು
- ಧರ್ಮ, ಸಾಹಿತ್ಯ, ಸಂಗೀತದಲ್ಲಿ ದೊರೆವ ಸಂತೋಷ.
- ಅನ್ಯರ ಒಳಿತಿನಲ್ಲಿ ಆಸಕ್ತಿಯನ್ನು ವಹಿಸುವುದರಲ್ಲಿನ ಸಂತೋಷ.
- ಯೋಗ್ಯ ಸ್ನೇಹಿತರ ಸಂಸರ್ಗದ  ಸಂತೋಷ.

* ಶ್ರೇಯಸ್ಕರವಲ್ಲದ ಸಂತೋಷಗಳು
-  ದೈತ್ಯಸಾಹಸ, ಅನುಚಿತ ವೀರತನವನ್ನು ಪ್ರದರ್ಶಿಸುವುದು.
-  ಉದ್ದೇಶರಹಿತ ಅಲೆತದಲ್ಲಿ ನಿರತನಾಗುವುದು.
-  ಆಡಂಬರದ ಔತಣಕೂಟದಲ್ಲಿ ಭಾಗವಹಿಸುವುದು.

* ಮನುಷ್ಯ ಪತನಗೊಳ್ಳುವ ಮೂರು ತಪ್ಪುಗಳು
-  ಸಂದರ್ಭಕ್ಕೆ ಮುನ್ನವೇ ಆತುರದಿಂದ ಆಡಿದ ಮಾತು.
-  ಸಂದರ್ಭ ಬಂದಾಗ ಮೌನವಹಿಸುವುದು.
-  ಪರಿಸ್ಥಿತಿಯ ಗಾಂಭೀರ್ಯವನ್ನರಿಯದೆ ಮಾತನಾಡುವುದು.
 
* ಬದುಕನ್ನು ಉನ್ನತಗೊಳಿಸುವ ತತ್ತ್ವಗಳು.
- ತಾರುಣ್ಯಕ್ಕಿಂತ ಮುಂಚೆಯೇ ಕಾಮನೆಗಳನ್ನು ಇಚ್ಛಿಸದಿರುವುದು.
- ಅಹಂಕಾರ, ಸ್ಪರ್ಧೆ ಮುಂತಾದ ಮಾನಸಿಕ ಪ್ರವೃತ್ತಿಗಳ ಮೇಲೆ ಹಿಡಿತ.
- ವೃದ್ಧಾಪ್ಯದಲ್ಲಿ ಮಹತ್ವಾಕಾಂಕ್ಷೆಗಳಿಂದ ದೂರವಿರುವುದು.    

* ಮನುಷ್ಯನಿಗೆ ಇರಬೇಕಾದ ಭಯ
- ದೇವರ ಭಯ - ಹಿರಿಯರ ಭಯ - ಸಂತರ ಭಯ.

* ಜೀವನದ ಬೆಳವಣಿಗೆಗೆ ಬೇಕಾದ ಅಂಶಗಳು
- ವಸ್ತುವಿನ ಅರಿವಿನ ಹಂಬಲ - ಕಲಿಯುವುದು| ಕಲಿಕೆ| ಶಿಕ್ಷಣ
- ಪ್ರಾಮಾಣಿಕತೆ, ನಿಯತ್ತು, ನಿಷ್ಠೆ - ಸರಳ ಧ್ಯೇಯಗಳು,
- ಸ್ವಸಹಾಯ, ಸ್ವಾವಲಂಬನೆ - ಕೌಟುಂಬಿಕ ಶಿಸ್ತು.
- ಪ್ರಾಂತೀಯ ಸ್ವಾಯತ್ತ  ಸರಕಾರ - ವಿಶ್ವ ಸ್ವಾಯತ್ತ ಸರಕಾರ.    

*  ಬದುಕನ್ನು ಉತ್ತಮಗೊಳಿಸಬಲ್ಲ ಸತ್ಸಂಬಂಧಗಳು 
-  ಗಂಡ-ಹೆಂಡತಿ ನಡುವೆ, ತಂದೆ-ಮಕ್ಕಳ ನಡುವೆ.
-  ಆಳುವವರು - ಪ್ರಜೆಗಳ ನಡುವೆ, ಹಿರಿಯರು-ಕಿರಿಯರ ನಡುವೆ, ಸ್ನೇಹಿತರ ನಡುವೆ.   

* ನೀತಿಶಾಸ್ತ್ರದ ಐದು ವಿಚಾರಗಳು
- ಮಾನವೀಯತೆ - ಸನ್ಮಾರ್ಗ - ಮರ್ಯಾದೆ - ಜ್ಞಾನ, ತಿಳುವಳಿಕೆ - ಪ್ರಾಮಾಣಿಕತೆ.

* ವಿದ್ಯಾಭ್ಯಾಸದ ಮೂಲ ಸಾಧ್ಯತೆಗಳು
1. ಜೆನ್ - ಆತ್ಮ ಗೌರವ ಮತ್ತು ಮಾನವೀಯ ಅನುಕಂಪ
2. ಚುನ್ ತ್ಸು - ಪ್ರಬುದ್ಧ ವ್ಯಕ್ತಿತ್ವ - ಭಾವದ, ಬುದ್ಧಿಯ ಅಲ್ಪತನದಿಂದ ಹೊರತಾದದ್ದು - ಇನ್ನೊಬ್ಬರಿಗೆ ನನ್ನಿಂದ ಏನು ಮಾಡಲಿಕ್ಕಾದೀತು ಎಂದು ನಿರ್ಣಯಿಸುವ ತನ್ನತನವನ್ನು ಬೆಳೆಸಿಕೊಳ್ಳುವುದು.  
3. ಲಿ - ಔಚಿತ್ಯ ಪ್ರಜ್ಞೆ - ಯಾವುದನ್ನು ಹೇಗೆ ಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವ ಶಕ್ತಿ. ಮೇಲೆ ತಿಳಿಸಿದ ಐದು ಸತ್ಸಂಬಂಧಗಳ ಔಚಿತ್ಯವನ್ನು ಕಂಡುಕೊಳ್ಳುವುದು.
4. ತೆ - ಆಳುವವರಿಗೆ ಜನರ ಬಗ್ಗೆ ಪ್ರೀತಿ, ವಿಶ್ವಾಸಗಳನ್ನು ತಂದುಕೊಡುವ ನಿಲುವು. ರಾಜ್ಯಭಾರ ದೌರ್ಜನ್ಯದಿಂದಲ್ಲ, ಪ್ರೀತಿಯಿಂದ ಎಂಬ ಸೌಜನ್ಯ.   
5. ಪೆನ್ - ಕಾವ್ಯ, ಸಂಗೀತ, ಕಲೆ, ಸೌಂದರ್ಯಾನುಭವ, ಆಧ್ಯಾತ್ಮಿಕ ಅನುಭೂತಿ, ಇವು ಮನುಷ್ಯನನ್ನು ತಿದ್ದುತ್ತವೆ, ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುತ್ತವೆ ಎಂಬ ಪ್ರಜ್ಞೆ.

ಕನ್ಫ್ಯೂಶಿಯಸ್ ಪ್ರತಿಪಾದಿಸಿದ ಈ ನೀತಿ ಸೂತ್ರಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಒಂದು, ಮನುಷ್ಯನ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಲು ಉಪಯೋಗಿಸಬಹುದಾದ ಮೌಲ್ಯಗಳು, ಎರಡು ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಉತ್ತಮ ಸಂಬಂಧಗಳನ್ನು ಅಭಿವೃದ್ಧಿಪಡಿಸುವುದು. ಗಂಡ-ಹೆಂಡತಿ ಸಂಬಂಧ, ತಂದೆ-ಮಕ್ಕಳ ಸಂಬಂಧ, ಆಳುವವರು-ಪ್ರಜೆಗಳ ಸಂಬಂಧ, ಹಿರಿಯರ-ಕಿರಿಯರ ಸಂಬಂಧ ಮತ್ತು ಸ್ನೇಹಿತರ ಆತ್ಮೀಯರ ಸಂಬಂಧ, ಇವು ಬಹಳ ಮುಖ್ಯ ಎಂದು ಕನ್ಫ್ಯೂಶಿಯಸ್ ಹೇಳುತ್ತಾನೆ. ಈ ಸಂಬಂಧಗಳಿಂದ ಸಮಾಜದಲ್ಲಿ ಒಂದು ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ.  ಇದರ ಫಲವಾಗಿ ಸಮಾಜದಲ್ಲಿ ಸಂಬಂಧಗಳು ಕೆಟ್ಟು ಉದ್ಭವವಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ. ಸಮಾಜಕಾರ್ಯಕರ್ತನಿಗೂ, (ಸಮುದಾಯ ಸಂಘಟಕನಿಗೂ) ಈ ಸಂಬಂಧಗಳ ಬೆಲೆ ಗೊತ್ತಿದೆ. ತನ್ನ ಉದ್ದೇಶ ಸಾಧನೆಗಾಗಿ ಇಂತಹ ಸಂಬಂಧಗಳ ಉಪಯೋಗವನ್ನು ಪಡೆದುಕೊಳ್ಳುತ್ತಾನೆ.

ಸಮಾಜಕಾರ್ಯಕರ್ತರಿಗೆ ನೇರವಾಗಿ ಸಂಬಂಧಿಸಿದ ಸಮಾಜಕಾರ್ಯ ಮೌಲ್ಯಗಳೂ ಈ ನೀತಿಗುಚ್ಚದಲ್ಲಿವೆ. ನೀನು ಮನುಷ್ಯರ ಸೇವೆಯನ್ನು ಮಾಡಲು ಮೊದಲು ಕಲಿ. ಆನಂತರ ದೇವರ ಸೇವೆ ಮಾಡಲು ಅರ್ಹನಾಗುತ್ತಿ ಎಂಬ ಕನ್ಫ್ಯೂಶಿಯಸ್ ಮಾತು ನೇರವಾಗಿ ಸಮಾಜ ಸೇವೆ/ಸಮಾಜಕಾರ್ಯಕ್ಕೆ ಸಂಬಂಧಿಸಿದ್ದೇ ಆಗಿದೆ. ಎಲ್ಲರೊಂದಿಗೆ ದಯೆಯಿಂದ ವರ್ತಿಸು ಎನ್ನುವ ವಾಕ್ಯವೂ ಇಂತಹದೇ ಇನ್ನೊಂದು ಮೌಲ್ಯವಾಗಿದೆ. ಅನ್ಯರ ಒಳಿತಿನಲ್ಲಿ ಆಸಕ್ತಿಯನ್ನು ವಹಿಸು, ಎಂದು ಹೇಳುವ ಅವನ ನೀತಿಸೂತ್ರ ಸಮಾಜಕಾರ್ಯ ಪರಿಕಲ್ಪನೆಗಳಿಗೆ ಪೂರಕವಾದ ಅಂಶವೇ ಆಗಿದೆ. ಹೀಗೆ ಸಂತ ಕನ್ಫ್ಯೂಶಿಯಸ್ ಪ್ರತಿಪಾದಿಸಿದ ನೀತಿಸೂತ್ರಗಳು ಸಮಾಜಕಾರ್ಯಕರ್ತರಿಗೂ ಮಾರ್ಗದರ್ಶಕಗಳಾಗಿವೆ.  ಸಮಾಜಕಾರ್ಯಕ್ಕೆ ಪೂರಕವಾಗಿವೆ.   
 
ಟಾವೋ ಧರ್ಮ
ಕನ್ಫ್ಯೂಶಿಯಸ್ ಧರ್ಮ ಚೈನಾದೇಶದಲ್ಲಿ ಪ್ರಚಾರಗೊಳ್ಳುವುದಕ್ಕಿಂತ ಮುಂಚೆ ಅಲ್ಲಿ ಟಾವೋ ಧರ್ಮ ಪ್ರಚಲಿತವಿತ್ತು. ಟಾವೋ ಧರ್ಮದ ಸ್ಥಾಪಕ ಲಾವೋತ್ಸೆ ಅಥವಾ ಲಾವುತ್ಸು ಎಂಬ ಸಂತ. ಇವನು ಸಾಮಾನ್ಯ ಬದುಕಿನ ಜಂಜಾಟದಿಂದ ಬೇಸತ್ತು, ಅದರಿಂದ ದೂರವುಳಿದು, ಸದಾ ಧ್ಯಾನದಲ್ಲಿ ನಿರತನಾಗಿರುತ್ತಿದ್ದನಂತೆ. ಆ ಸಮಯದಲ್ಲೇ ಟಾವೋ ಮತ್ತು ಟೆಹ್ ಎಂಬ ಎರಡು ಕೃತಿಗಳನ್ನು ರಚಿಸಿದನೆಂದು ಹೇಳಲಾಗಿದೆ. 

ವಿಶ್ವದ ಎಲ್ಲಾ ಕೆಲಸಗಳಿಗೆ, ಎಲ್ಲಾ ಜ್ಞಾನಕ್ಕೆ, ಎಲ್ಲಾ ಇಚ್ಛಾಶಕ್ತಿಗೆ ಮೂಲ ಟಾವೋ. ಜಗತ್ತಿನ ಎಲ್ಲಾ ಚಟುವಟಿಕೆಗಳ ಮೂಲ ಟಾವೋ. ಎಲ್ಲಾ ಜ್ಞಾನ ಟಾವೋದಿಂದ ಬಂದಿರುವಂತಹದು. ಎಲ್ಲಾ ಇಚ್ಛಾಶಕ್ತಿಗೆ ಪ್ರೇರಣೆ ಟಾವೋ. ಭೂಮಿ, ನೀರು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹ, ಗಾಳಿ ಹೀಗೆ ಎಲ್ಲೆಡೆಯೂ ಟಾವೋ ವ್ಯಾಪಿಸಿದೆ. ಭೂಮಿ ಬೆಳೆಯುವುದು, ನೀರು ತಂಪಾಗಿರುವುದು/ ತಣಿಸುವುದು, ಸೂರ್ಯ ಬೆಳಕನ್ನು ಕೊಡುವುದು/ಸುಡುವುದು, ಚಂದ್ರ ತಂಪನ್ನು ಕೊಡುವುದು, ಗಾಳಿ ಬೀಸುವುದು, ನಕ್ಷತ್ರ ಹೊಳೆಯುವುದು, ಗ್ರಹ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಹೀಗೆ ಎಲ್ಲಾ ಚಟುವಟಿಕೆಗಳಿಗೆ ಮೂಲ ಕಾರಣ ಟಾವೋ, ಟಾವೋ ಅನಂತ ಶಕ್ತಿ ಉಳ್ಳದ್ದು, ಯಾವಾಗಲೂ ಇರುವಂತಹದು. ಎಲ್ಲಿಯೂ ಇರುವಂತಹದು. ಇದು ನಿಗೂಢವಾಗಿರುವಂತಹದು. ಜಗತ್ತಿನ ಎಲ್ಲಾ ವ್ಯಾಪಾರ ನಡೆಯುವುದಕ್ಕೆ ಟಾವೋ ಕಾರಣ. ಸಂಕ್ಷಿಪ್ತವಾಗಿ ಇದು ಟಾವೋ ಸಿದ್ಧಾಂತ. ಇದು ಹಿಂದೂ ಧರ್ಮದ ಶಕ್ತಿದೇವತೆಯ ಪರಿಕಲ್ಪನೆಗೆ ಸಮಾನವಾದ ಸಿದ್ಧಾಂತದ ಹಾಗೆ ಪರಿಭಾವಿಸಬಹುದಾಗಿದೆ.  

ಟೆಹ್ ಎಂದರೆ ಟಾವೋದ ಸಾಕ್ಷಾತ್ಕಾರ, ಟಾವೋದ ಸಾಧನಾಪಥ. ಸುಂದರ ಮತ್ತು ಸಾತ್ವಿಕದ ಆ ಪರಿಪೂರ್ಣದಲ್ಲಿ ನಿಶ್ಚಯವಾಗಿ ಬದುಕುವುದೇ ಟೆಹ್, ಟಾವೋ ಬೆಳಕಾದರೆ ಟೆಹ್ ಕಿರಣಂ. ಟೆಹ್ದ ಮೂಲಕವೇ ಟಾವೋದ ಅಭಿವ್ಯಕ್ತಿ, ಟಾವೋ ಗುರಿಯಾದರೆ ಟೆಹ್ ಸಾಧನಾ ಮಾರ್ಗ, ಮನುಷ್ಯ ಶುದ್ಧವಾಗಿ, ಸರಳನಾಗಿ, ಆತ್ಮಜ್ಞಾನದ ಸಾಕ್ಷಾತ್ಕಾರದಲ್ಲಿ ತೊಡಗಬೇಕು. ದೈಹಿಕ ವಾಸನೆಗಳ ಹಾಸಿಗೆಯಿಂದ ಮೇಲೆದ್ದು ಪರಿಶುದ್ಧ ಸತ್ಯದ ಸಂಯಮದ ಬಾಳನ್ನು ಬಾಳಿದರೆ ಟಾವೋ ಪ್ರಾಪ್ತಿಯಾಗುತ್ತದೆ.61 ಟಾವೋ-ಟೆಹ್-ಷಿಂಗ್ ಗ್ರಂಥ ಉಪದೇಶಿಸಿದ ಶೂನ್ಯಸ್ಥಿತಿಯ ಸಂಪಾದನೆ ಎಂದರೆ ಇದೇ ಆಗಿದೆ.  ಈ ಸಾಧನಾ ಮಾರ್ಗ ಹಿಂದೂ ಧರ್ಮದಲ್ಲಿ ಪ್ರತಿಪಾದನೆಗೊಂಡಿರುವ ಸಾತ್ವಿಕ ಪ್ರವೃತ್ತಿ ಮತ್ತು ಸ್ಥಿತಿಪ್ರಜ್ಞ ಮನೋಭೂಮಿಕೆಗೆ ಹೋಲಿಸಬಹುದಾಗಿದೆ.  

ಟಾವೋ ಎಲ್ಲರಿಗೂ ಸಾಧ್ಯವಾಗಬಹುದಾದ ಗುರಿಯಾಗಿದೆ. ಇಂತಹ ಆತ್ಮಜ್ಞಾನದ ಸಾಧನೆಗೆ ನಿಸ್ವಾರ್ಥತೆ, ಪರಿಶುದ್ಧತೆ, ಮನಶ್ಶಾಂತಿ ಮುಂತಾದವುಗಳು ಪ್ರಾರಂಭದ ಮೆಟ್ಟಿಲುಗಳಾಗಿ ಪರಿಣಮಿಸುತ್ತವೆ. ಟಾವೋ ಧರ್ಮದ ನೀತಿ ತತ್ತ್ವಗಳು ತುಂಬಾ ಸರಳ ಮತ್ತು ಆಚರಣೆಗೆ ಯೋಗ್ಯವಾದ ಮೌಲ್ಯಗಳಾಗಿವೆ.  ಸಭ್ಯತೆ, ಮಿತವ್ಯಯ, ಬೇರೆಯವನ್ನು ಹತ್ತಿಕ್ಕದಿರುವುದು, ಪರಸ್ಪರ ಪ್ರೀತಿ, ಗೌರವ, ಅಂತಃಕರಣ, ವಿನಯ ಹಾಗೂ ನಮ್ರತೆಯಿಂದ ಜೀವಿಸುವುದು ಇನ್ನು ಮುಂತಾದ ಅಂಶಗಳು ಎಂತಹವನನ್ನೂ ಒಳ್ಳೆಯವರನ್ನಾಗಿ, ಪರೋಪಕಾರಿಯನ್ನಾಗಿ ಪರಿವರ್ತಿಸುತ್ತವೆ. ಸಭ್ಯತೆ, ಪ್ರೀತಿ, ವಿನಯ, ನಮ್ರತೆ, ಗೌರವ ಮುಂತಾದವು ಸಮಾಜಕಾರ್ಯಕರ್ತನೂ ಒಪ್ಪಿಕೊಂಡಂತಹ ಬದುಕಿನ ಮೌಲ್ಯಗಳಾಗಿವೆ. ಪರಸ್ಪರ ಪ್ರೀತಿ ಇದ್ದಲ್ಲಿ, ಅಂತಃಕರಣವಿದ್ದಲ್ಲಿ ಸೇವೆ, ಸಹಾಯ, ತ್ಯಾಗ ಮುಂತಾದವುಗಳು ತಂತಾನೇ ತುಂಬಿಕೊಳ್ಳುತ್ತವೆ. ಪ್ರೀತಿ-ಅಂತಃಕರಣಗಳು ತಮ್ಮ ಔಚಿತ್ಯವನ್ನು ಕಂಡುಕೊಳ್ಳುವುದು ಸೇವೆ-ತ್ಯಾಗಗಳಿಂದ. ಇದು ಸಮಾಜ ಸೇವೆಗೆ - ಸಮಾಜಕಾರ್ಯಕ್ಕೆ ಪ್ರೇರಣೆಯಾಗುವ ಅಂಶಗಳಾಗಿವೆ. ಟೇಹ್ ಸಾಧನಾಮಾರ್ಗದಲ್ಲಿ ಯೋಗ, ಧ್ಯಾನ ಭಂಗಿ, ನಿಯಮಿತ ಉಸಿರಾಟ ಇವೆಲ್ಲವೂ ಇದೆ.  ಆದರೆ ಸಾಧನಾ ಪಥ  ಸರಳ ಮತ್ತು ಸಹಜ. ಆಡಂಬರ, ಪ್ರದರ್ಶನ, ಉತ್ಸವ, ಶಿಷ್ಟಾಚಾರಗಳಿಗೆ ಆದ್ಯತೆ ಇಲ್ಲ. ಮೌನಕ್ಕೆ, ಧ್ಯಾನಕ್ಕೆ ಹೆಚ್ಚು ಆದ್ಯತೆ. ನಿರಂತರ ಸಾಧನೆಯಿಂದ ಚೈತನ್ಯ ಪ್ರಭೆ ಮೂಡುತ್ತದೆ. ಇದು ಸಾಕ್ಷಾತ್ಕಾರಕ್ಕೆ ಅನುವು ಮಾಡಿಕೊಡುತ್ತದೆ.  

ಪರಮ ಒಳಿತೆಂಬುದು ಜಲದೇವಿಯರ ಹಾಗೆ
ಎಲ್ಲವನು ಪೋಷಿಪುದು ಯತ್ನವಿಲ್ಲದೆಯೆ.
(ಟಾವೋ ಟೀಚಿಂಗ್, ಅಧ್ಯಾಯ-8)62

ಎಲ್ಲರಿಗೆ ಒಳಿತನ್ನು ಬಯಸುವ ಈ ಜೀವನ ಮೌಲ್ಯ ಸಮಾಜಕರ್ತನಿಗೂ ಅನುಕರಣೀಯ.

ಪರಮಸತ್ಯ ಎಂದರೆ ಏನು ಎಂಬ ತಾತ್ತ್ವಿಕ ಪರಿಪ್ರಶ್ನೆಯಿಂದ ಆರಂಭವಾಗುವ ಟಾವೋ, ಅದರೊಂದಿಗೆ ತದಾತ್ಮ್ಯ ಹೊಂದುವುದು ಹೀಗೆ ಎಂಬ ಧರ್ಮದೊಂದಿಗೆ ಕೊನೆಗೊಳ್ಳುತ್ತದೆ.63
 
ಪಿಂಟೋ ಧರ್ಮ
ಜಪಾನಿನಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಗಳನ್ನು ರೂಪಿಸಿ ಬೆಳೆಸಿದ ಧರ್ಮಗಳಲ್ಲಿ ಕನ್ಫ್ಯೂಶಿಯಸ್, ಟಾವೊ, ಬೌದ್ಧ ಧರ್ಮಗಳ ಜೊತೆಗೆ ಪಿಂಟೋ ಧರ್ಮವೂ ಸೇರಿದೆ. ಇದನ್ನು ಧರ್ಮ, ಸಿದ್ಧಾಂತ ಎನ್ನುವುದಕ್ಕಿಂತ ರಾಷ್ಟ್ರ ಭಕ್ತಿ, ಸ್ವಾಮಿಭಕ್ತಿ, ಜೀವನ ಶ್ರದ್ಧೆ ಎನ್ನಬಹುದು.64 ಜಪಾನಿ ಸಾಮ್ರಾಟನನ್ನು ಸೂರ್ಯದೇವತೆಯ ಪ್ರತಿನಿಧಿಯೆಂದೂ, ಅವನಿಗೆ ತೋರಿಸುವ ನಿಷ್ಠೆ ತಮ್ಮ ಆದ್ಯ ಕರ್ತವ್ಯವೆಂದೂ ಜಪಾನಿಯರು ನಂಬಿ ನಡೆಯುತ್ತಾರೆ (ರಾಜಾ ಪ್ರತ್ಯಕ್ಷದೇವತಾ ಎಂಬ ಪರಿಕಲ್ಪನೆ ಹಿಂದೂ ಸಂಸ್ಕೃತಿಯಲ್ಲಿತ್ತು). ಪಿಂಟೋ ಧರ್ಮದ ಅನುಯಾಯಿಗಳು ಪ್ರಕೃತಿ ದೇವತೆಗಳನ್ನು ಪೂಜಿಸುತ್ತಾರೆ.  ಈ ದೇವತೆಗಳಲ್ಲಿ ಎರಡು ಬಗೆ. ಉಪಕಾರಿ ದೇವತೆಗಳು, ಇನ್ನೊಂದು ಅಪಕಾರಿ ಶಕ್ತಿಗಳು.

ಸೂರ್ಯ, ಭೂಮಿ, ಅನ್ನ, ಸಮುದ್ರ, ಪರ್ವತ, ನದಿ, ವೃಕ್ಷ, ಇತ್ಯಾದಿಗಳು ಉಪಕಾರಿ ದೇವತೆಗಳು. ಹಾಗೇನೆ ಅಗ್ನಿ, ವರುಣ, ಬಿರುಗಾಳಿ ಇವರು ಕ್ರೂರ ದೇವತೆಗಳು. ಈ ದೇವತೆಗಳು ಹೆಣ್ಣು ದೇವತೆಗಳಾಗಿದ್ದು, ಅವುಗಳಿಗೆ ಯಜಮಾನಿ ಸೂರ್ಯದೇವಿ. ಅವಳೇ ಮುಖ್ಯ ದೇವತೆ. ಉಳಿದ ದೇವತೆಗಳು ಅವಳ ಅಧೀನ. ಹಾಗಾಗಿ ಜಪಾನೀಯರು ಏಕದೇವೋಪಾಸನೆಯನ್ನು ಅನುಸರಿಸುತ್ತಾರೆ. ಅವಳ ವಂಶಜರೇ ಜಪಾನಿನ ಸಾಮ್ರಾಟ್ ಎಂದು ನಂಬುತ್ತಾರೆ. ಈ ಪ್ರಕೃತಿ ದೇವತೆಗಳ ಜೊತೆಗೆ, ಮಾನವ ದೇವತೆಗಳನ್ನೂ ಪೂಜಿಸುತ್ತಾರೆ. ತಮ್ಮ ಸಂತತಿಯ ಹಿರಿಯರೇ ಮಾನವ ದೇವತೆಗಳು (ಪಿತೃ ದೇವತೆಗಳು). ದೇವ ಮಂದಿರಗಳಲ್ಲಿ, ಅವರ ಮನೆಗಳಲ್ಲಿ ಈ ಎರಡೂ ತರಹದ ದೇವತೆಗಳಿಗೆ ಜಾಗವಿದೆ. ಈ ದೇವತೆಗಳಿಗೆ ಗ್ರಹಣ ಶಕ್ತಿ ಮತ್ತು ಅತಿ ಮಾನವಶಕ್ತಿಗಳು ಇವೆ. ದೇವತೆಗಳಿಗೆ ವಿಧೇಯರಾಗಿದ್ದರೆ ಅವರು ಒಳ್ಳೆಯದನ್ನು ಮಾಡುತ್ತಾರೆಂಬ ನಂಬಿಕೆಯಿದೆ.   

ಜಪಾನಿಯರು ಪಿಂಟೋ ಧರ್ಮದ ತತ್ತ್ವಗಳ ಆಧಾರದ ಮೇಲೆ ತಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಜೀವನವನ್ನು ರೂಪಿಸಿಕೊಂಡಿದ್ದಾರೆ. ಜಪಾನಿಯರ ಮೂಲ ಧರ್ಮ ಪಿಂಟೋ ಆದರೂ, ಆ ಧರ್ಮದ ತತ್ತ್ವಾದರ್ಶಗಳನ್ನು ಅವರು ರೂಢಿಸಿ, ಅನುಸರಿಸಿಕೊಂಡು ಬಂದಿದ್ದರೂ, ಅವರ ಮೇಲೆ ಚೀನದ ಆಧ್ಯಾತ್ಮಿಕ - ನೈತಿಕ ತತ್ತ್ವಗಳ ಪ್ರಭಾವವೂ ಆಗಿದೆ.  ಮೊದಲಿನ ದಿನಗಳಲ್ಲಿ ಕನ್ಫ್ಯೂಶಿಯಸ್ ಧರ್ಮದ ಪ್ರಭಾವ ಮತ್ತು ನಂತರದ ದಿನಗಳಲ್ಲಿ ಬೌದ್ಧ ಧರ್ಮದ ಪ್ರಭಾವ ಆಗಿರುವುದನ್ನು ಯಾರು ಅಲ್ಲಗಳೆಯುವಂತಿಲ್ಲ.  ಪರಿಣಾಮವಾಗಿ ಅವರ ಆಚಾರ-ವಿಚಾರಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆಯೆಂದು ಹೇಳಲಾಗಿದೆ. ಆ ಧರ್ಮಗಳಲ್ಲಿ ಬಿನ್ನಾಭಿಪ್ರಾಯಗಳಿದ್ದರೂ, ಕಿತ್ತಾಟಗಳಿದ್ದರೂ, ಪುನಃ ಸನಾತನ ಪಿಂಟೋಧರ್ಮ ಪ್ರಸಿದ್ಧಿ ಪಡೆಯಿತು ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಪ್ರೀತಿ, ಸರಳತೆ, ಶುದ್ಧ ಚಾರಿತ್ಯ, ಸತ್ಯ, ಪ್ರಾಮಾಣಿಕತೆ, ನೀತಿಯುತ ಜೀವನ ಪಿಂಟೋ ಧರ್ಮದಲ್ಲಿ ಪ್ರತಿಪಾದನೆಗೊಂಡ, ಜಪಾನಿಯರು ಅನುಸರಿಸುತ್ತಿರುವ, ಬದುಕಿನ ಮೌಲ್ಯಗಳಾಗಿವೆ.65 ಧಾರ್ಮಿಕ ಸಮಾರಂಭಗಳು ಈ ಮೌಲ್ಯಗಳನ್ನು ವೃದ್ಧಿಸುತ್ತವೆ ಎಂದೂ ಅವರು ನಂಬುತ್ತಾರೆ.  ಅವುಗಳ ಜೊತೆಗೆ, ಬೌದ್ಧ ಧರ್ಮದ ಜತೆಗೆ ಬಂದ ಮಾನವ ಚಿಂತನೆಯಲ್ಲಿ ಅಪೇಕ್ಷಣೀಯವಾದ ತರ್ಕ, ತಾತ್ತ್ವಿಕತೆ, ಸಮಾಜಸೇವೆ ಮುಂತಾದ ಮೌಲ್ಯಗಳೂ ಸೇರಿ ಬದುಕನ್ನು ಇನ್ನಷ್ಟು ಹಸನುಗೊಳಿಸಿವೆ. ರೋಗಿಷ್ಟರಿಗೆ, ಶಾರೀರಿಕ ಊನಶಕ್ತರಿಗೆ ವೈದ್ಯಕೀಯ ಸೇವೆ ಸಲ್ಲಿಸುವ ಪ್ರವೃತ್ತಿಯೂ ಬಲಗೊಂಡಿದೆ.66

ಪಿಂಟೊಧರ್ಮದ ಮುಖ್ಯ ಹತ್ತು ತತ್ತ್ವಗಳು ಹೀಗಿವೆ.   
  1. ದೇವತೆಗಳ ಇಚ್ಛೆಯನ್ನು ಮೀರಬಾರದು (ಈ ತತ್ತ್ವ ಸ್ವನಿಗ್ರಹಕ್ಕೆ ಸಹಾಯವಾಗುತ್ತದೆ).
  2. ಹಿರಿಯರಿಗೆ ತರ್ಪಣ ನೀಡುವ ಕರ್ತವ್ಯವನ್ನು ಮರೆಯಬಾರದು.
  3. ರಾಜ್ಯದ ಆಜ್ಞೆಯನ್ನು ಉಲ್ಲಂಘಿಸಬಾರದು. (ಇದು ಸಾಮಾಜಿಕ ಶಿಸ್ತಿಗೆ ಒತ್ತುಕೊಡುತ್ತದೆ).
  4. ದೇವತೆಗಳ ದಿವ್ಯತೆಯಿಂದ ಮಾನವ ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂಬುದನ್ನು ಮರೆಯಬಾರದು.
  5. ಇಡೀ ಜಗತ್ತೇ ಒಂದು ಕುಟುಂಬ ಎಂದು ಮರೆಯಬಾರದು (ವಸುಧೈವ ಕುಟುಂಬಕಮ್ - ಹಿಂದೂಧರ್ಮ).
  6. ವ್ಯಕ್ತಿಯ ಶಕ್ತಿ ಹಾಗೂ ಸಾಧನೆಗಳು ಸೀಮಿತ ಎಂಬ ಎಚ್ಚರ.
  7. ಬೇರೆಯವರು ಸಿಟ್ಟು ಮಾಡಿಕೊಂಡರೂ ನೀವು ಸಿಟ್ಟಿಗೇಳಬಾರದು.
  8. ನಿಮ್ಮ ಪಾಲಿನ ಕೆಲಸವನ್ನು ನೀವು ಮಾಡಬೇಕು (ಕರ್ಮಣ್ಯೇವಾಧಿಕಾರಸ್ತೆ - ಗೀತೆ)
  9. ಧಾರ್ಮಿಕ ಉಪದೇಶಗಳನ್ನು ವಿರೋಧಿಸಿ, ತೆಗಳಬಾರದು.
  10. ಪರಧರ್ಮೀಯರ ಉಪದೇಶಗಳಿಂದ ಆಕರ್ಷಿತರಾಗಬಾರದು (ಸ್ವಧರ್ಮೇ ನಿಧನಂ ಶ್ರೇಯಃ - ಗೀತೆ).
ಪಿಂಟೊ ಧರ್ಮದಲ್ಲಿ ಪ್ರತಿಪಾದನೆಗೊಂಡ ಪ್ರೀತಿ, ಸರಳತೆ, ಶುದ್ಧ ಚಾರಿತ್ರ್ಯ, ಪ್ರಾಮಾಣಿಕತೆ, ಸತ್ಯ, ಸಮಾಜಸೇವೆ, ಊನಶಕ್ತರಿಗೆ ವೈದ್ಯಕೀಯ ನೆರವು, ಜಗತ್ತೇ ಒಂದು ಕುಟುಂಬ ಎಂಬ ಪರಿಕಲ್ಪನೆ, ನಿಮ್ಮ ಕೆಲಸವನ್ನು ನೀವು ಮಾಡಿ ಮುಂತಾದ ಮೌಲ್ಯಗಳು ಸಮಾಜಕಾರ್ಯ ಮೌಲ್ಯಗಳೇ ಆಗಿವೆ.  ಸಮಾಜಕಾರ್ಯಕರ್ತ ತನ್ನ ಜೀವನದಲ್ಲಿ ಹಾಗೂ ವೃಕ್ತಿಯನ್ನು ಅಳವಡಿಸಿಕೊಳ್ಳುವ ಸೂತ್ರಗಳೇ ಆಗಿವೆ. ಪಿಂಟೋ ಧರ್ಮದ ಸಾಂಸ್ಕೃತಿಕ ಪರಂಪರೆ ಈ ಮೌಲ್ಯಗಳನ್ನು ವೃದ್ಧಿಸಿಕೊಂಡು ಬಂದಿದೆ.67
 
ಬಹಾಯಿ ಧರ್ಮ
ಜಗತ್ತಿನ ಇತರೆ ಧರ್ಮಗಳಿಗೆ ಹೋಲಿಸಿದರೆ ಬಹಾಯಿ ಧರ್ಮ ತೀರಾ ಇತ್ತೀಚಿನದು. ಪರ್ಷಿಯಾದ ರಾಜಧಾನಿ ತೆಹ್ರಾನ್ನಲ್ಲಿ ಕ್ರಿಸ್ತಶಕ 19ನೇ ಶತಮಾನದಲ್ಲಿ ಬಹಾಉಲ್ಲಾ ಎಂಬ ಪ್ರವಾದಿಯಿಂದ ಬಹಾಯಿ ಧರ್ಮ ಸ್ಥಾಪನೆಯಾಯಿತು. ``ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿ ಆಗುತ್ತದೆಯೇ ಮತ್ತು ಅಧರ್ಮವೂ ಹೆಚ್ಚುತ್ತದೆಯೋ ಆಗ ಸ್ವಯಂ ಅವತಾರ ಮಾಡುತ್ತೇನೆ (ಗೀತೆ 4-7),68 ಎಂಬ ಕೃಷ್ಣನ ಮಾತಿನಂತೆ; ನಾನು ಈಗ ಹೋಗುತ್ತೇನೆ, ಪುನಃ ನಿಮ್ಮೊಟ್ಟಿಗೆ, ನಿಮ್ಮಲ್ಲಿ ಬರುತ್ತೇನೆ69 ಎಂಬ ಯೇಸುವಿನ ಮಾತಿನಂತೆ ಭಗವಂತನು ಕಾಲಕಾಲಕ್ಕೆ ಪತಿತ ಜನಾಂಗದ ಉದ್ಧಾರಕ್ಕೆ ಭಗವಂತ | ದೇವದೂತರು ಅವತರಿಸುತ್ತಾರೆ ಎಂಬ ಪ್ರೇರಣೆಯೇ ಬಹಾಯಿ ಧರ್ಮದ ಮೂಲಪ್ರೇರಣೆಯಾಗಿದೆ. ಲೋಕದ ಸಮಸ್ತ ಸಂತರನ್ನು ದಾರ್ಶನಿಕರನ್ನು, ತತ್ತ್ವಜ್ಞಾನಿಗಳನ್ನು ಬಹಾಯಿಧರ್ಮ ಗೌರವಿಸುತ್ತದೆ. ಸಮಸ್ತ ಮಾನವ ಕಲ್ಯಾಣಕ್ಕಾಗಿ, ಮಾನವ ಸ್ವಭಾವದ ಉನ್ನತೀಕರಣಕ್ಕಾಗಿ, ಉದಾತ್ತೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಲಾಗಿದೆ.  ಎಲ್ಲಾ ಧರ್ಮಗಳ ತಿರುಳು ಒಂದೇ. ಎಲ್ಲಾ ಸಂತರು ಪ್ರತಿಪಾದಿಸಿದ ಮೌಲ್ಯಗಳು ಒಂದೇ ಎನ್ನುವ ಬಹಾಯಿಗಳು ಜಗತ್ತಿನ ಐಕ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ.   

ಬಹಾಯಿಧರ್ಮದ ತತ್ತ್ವಗಳು ಹೀಗಿವೆ.
  1. ಮಾನವಕುಲದ ಏಕತೆ  (ವಸುಧೈವ ಕುಟುಂಬಕಮ್-ಹಿಂದೂಧರ್ಮ).
  2. ಸತ್ಯದ ನಿರ್ಭೀತ ಶೋಧನೆ, ಸತ್ಯ ಮಾರ್ಗವನ್ನು ಅನುಸರಿಸುವುದು. 
  3. ಸಮಸ್ತಧರ್ಮಗಳ ಮೂಲ ಒಂದೇ ಆಗಿದೆ (ಸಂಪ್ರದಾಯಗಳು ಬೇರೆ ಇರಬಹುದು).
  4. ಧರ್ಮವೂ ಐಕ್ಯಕ್ಕೆ ಪ್ರೇರಣೆಯಾಗಬೇಕು (ವಿಭಜನೆಗೆ ಅಲ್ಲ).
  5. ಎಲ್ಲಾ ಧಾರ್ಮಿಕ, ಸಾಮಾಜಿಕ, ರಾಷ್ಟ್ರೀಯ, ಜನಾಂಗೀಯ ಸಂಕುಚಿತ ವಿಚಾರಗಳು - ಭಿನ್ನಾಭಿಪ್ರಾಯಗಳು  ನಿವಾರಿಸಲ್ಪಡಲಿ.
  6. ಧರ್ಮವು ಜ್ಞಾನ ಮತ್ತು ಪ್ರಜ್ಞೆಗೆ ಪೂರಕವಾಗಲಿ.
  7. ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಹಕ್ಕು - ಸೌಲಭ್ಯಗಳು ದೊರಕಲಿ.
  8. ಮಾತೃಭಾಷೆಯ ನಂತರ, ಜಾಗತಿಕ ಭಾಷೆ ಮತ್ತು ಶಿಕ್ಷಣ ನೀತಿಗಳು ರೂಪಿತವಾಗಲಿ.          
  9. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗೆ ಆಧ್ಯಾತ್ಮಿಕ ಪರಿಹಾರ ದೊರೆಯಲಿ.
  10. ಅಂತರಾಷ್ಟ್ರೀಯ ನ್ಯಾಯಮಂಡಳಿಯು ನೆಲೆಗೊಳ್ಳಲಿ.
  11. ಶಾಶ್ವತ ಜಾಗತಿಕ ಶಾಂತಿಯು ಸ್ಥಾಪಿತವಾಗಲಿ.
  12. ಜಗತ್ತಿಗೆ (ಸಮಾಜಕ್ಕೆ) ಪವಿತ್ರ ಜೀವಿಗಳ ಮಾರ್ಗದರ್ಶನ ದೊರೆಯಲಿ. ದೇವರು ಒಬ್ಬನೆ (ಏಕಂಸತ್, ವಿಪ್ರಾ ಬಹುದಾ ವದಂತಿ - ಋಗ್ವೇದ). ಮಾನವಕುಲ ಒಂದೇ. ಎಲ್ಲ ಸಂತರು ಬೋಧಿಸಿರುವುದು ಪ್ರೇಮ ಮತ್ತು ಐಕ್ಯತೆ. ದೇವರು ನಮ್ಮನ್ನು ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯಲು ಸಂತರನ್ನು ಕಳಿಸುತ್ತಾನೆ.
ಮಾನವಧರ್ಮದ ಮೂಲ ಧ್ಯೇಯ ಸಾಂಸ್ಕೃತಿಕ ಪ್ರಗತಿ ಮತ್ತು ನಾಗರೀಕತೆಯ ವಿಕಾಶ. ಮನುಷ್ಯ ತನ್ನೆಲ್ಲಾ ಶಕ್ತಿಯನ್ನು ಈ ಕೆಲಸಗಳಿಗೆ ಉಪಯೋಗಿಸಬೇಕು. ಇದರ ಅಂತಿಮ ಗುರಿ ಮಾನವ ಕುಲದ ಏಕತೆ ಮತ್ತು ಶಾಂತಿ ಸಮಾಧಾನಗಳು. ಜಗತ್ತು ಅನೇಕ ಪ್ರಾದೇಶಿಕ ಹಾಗೂ ಜಾಗತಿಕ ಯುದ್ಧಗಳನ್ನು ಕಂಡಿದೆ.  ಅವುಗಳ ಫಲಿತಾಂಶ ಜೀವಹಾನಿ ಮತ್ತು ಸಂಸ್ಕೃತಿಯ ನಾಶ. ಇದು ತಪ್ಪಬೇಕಾದರೆ ಐಕ್ಯತೆ, ಶಾಂತಿ, ಸಮಾನತೆ ಮುಂತಾದ ಮೌಲ್ಯಗಳಿಗಾಗಿ ಶ್ರಮಿಸುವ ಸಂತರ ಅವಶ್ಯಕತೆ ಇದೆ.  ಸಮಾಜಕಾರ್ಯಕರ್ತನ ಉದ್ದೇಶಗಳೂ ಇವೇ ಆಗಿವೆ.

ಧರ್ಮಗಳು ವಿಭಜನೆಗೆ ಕಾರಣವಾಗಿರುತ್ತಿರುವುದನ್ನು ನಿತ್ಯವೂ ನೋಡುತ್ತೇವೆ.  ಇವು ಐಕ್ಯತೆಗೆ ಕಾರಣವಾಗಲಿ ಎಂಬ ಆಶಯ ಬಹಾಯಿ ಧರ್ಮದ್ದು. ಸಮಾಜಗಳಲ್ಲಿ, ಸಮುದಾಯಗಳಲ್ಲಿ ಅನೇಕ ಕಾರಣಗಳಿಗಾಗಿ ಸಂಕುಚಿತ ಧ್ಯೇಯ - ದೋರಣೆಗಳು ವಿಜೃಂಭಿಸುತ್ತಿವೆ. ಇಂತಹ ಸಂಕುಚಿತ ಅಭಿಪ್ರಾಯಗಳು ನಿವಾರಣೆಗೊಳ್ಳಲು ಧರ್ಮ ಶ್ರಮಿಸಬೇಕು ಎಂದು ಬಹಾಯಿಧರ್ಮ ಹೇಳುತ್ತದೆ.  ಇಂತಹ ಸಂಕುಚಿತ ಮನೋಭಿಪ್ರಾಯಗಳು ಬದಲಾಗಬೇಕೆಂದು ಸಮಾಜಕಾರ್ಯಕರ್ತನೂ ಪ್ರಯತ್ನಿಸುತ್ತಾನೆ. ಸ್ತ್ರೀ-ಪುರುಷ ಸಮಾನತೆಯನ್ನು ಈ ಧರ್ಮ ಪ್ರತಿಪಾದಿಸುತ್ತದೆ. ಇದು ಸಮಾಜಕಾರ್ಯದ ಒಂದು ಆಶಯವೂ ಆಗಿದೆ. ನಮ್ಮ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರ ದೊರೆಯಲಿ ಎಂದು ಈ ಧರ್ಮ ಅಪೇಕ್ಷಿಸುತ್ತದೆ. ಭಗವದ್ಗೀತೆಯ ಆಶಯವೂ ನಮ್ಮ ವೈವಿಧ್ಯಮಯ ಆಧ್ಯಾತ್ಮಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಆಗಿದೆ. ಸಮಾಜಕಾರ್ಯ ಪ್ರತಿಪಾದಿಸುವ ಮೌಲ್ಯಗಳ ವಿಶಾಲ ಚೌಕಟ್ಟಿನಲ್ಲಿ ಈ ಅಂಶಗಳೂ ಸೇರಿವೆ. ಹೀಗೆ ಬಹಾಯಿಧರ್ಮವೂ, ಸಮಾಜಕಾರ್ಯಕ್ಕೂ ಉಪಯೋಗವಾಗುವ, ಅನೇಕ ಬದುಕಿನ ಮೌಲ್ಯಗಳನ್ನು ಎತ್ತಿಹಿಡಿದಿದೆ.70
 
ಅಡಿಟಿಪ್ಪಣಿಗಳು
40. 1. ಅನುವಾದಕ ಸಮಿತಿ - ಪವಿತ್ರ ಬೈಬಲ್, ಕರ್ನಾಟಕ ಪ್ರಾಂತೀಯ ಕ್ಯಾಥೋಲಿಕ ಧರ್ಮಾಧ್ಯಕ್ಷರುಗಳ ನಿಯೋಗ, 75, ಮಿಲ್ಲರ್ಸ್ ರಸ್ತೆ, ಬೆನ್ಸನ್ ಟೌನ್, ಬೆಂಗಳೂರು - 46, 2008, ಧರ್ಮೋಪದೇಶ ಕಾಂಡ 5 (ವಿಮೊ 20. 1-17) ಪುಟ 279-281.
       2. ಶೇಷ ನವರತ್ನ - ಜಾಗತಿಕ ಧರ್ಮಗಳು, ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ - 1, 1998, ಪು 137-138.
41. ಶೇಷ ನವರತ್ನ, ಪು 153.
42. ಅದೇ ಪು 153.
43.  ಶೇಷ ನವರತ್ನ, ಪು 158.
44. ಅದೇ ಪು 161.
45. ವಿಲಿಯಂ - `ಯೇಸುಕ್ರಿಸ್ತ, ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ, ಶಿವಮೊಗ್ಗ ಜಿಲ್ಲೆ 577401, 2015, ಪು 115.
46. ಅನುವಾದಕ ಸಮಿತಿ - ಪವಿತ್ರ ಬೈಬಲ್, ಪು.ಮತ್ತಾಯ 5. 3-10.
47. ವಿಲಿಯಂ - ಯೇಸುಕ್ರಿಸ್ತ, ಪು 118.
48. ಅದೇ, ಪು 119.
49. ಅದೇ, ಪು 120.
50. ಅದೇ, ಪು 121.
51. ಅನುವಾದಕ ಸಮಿತಿ - ಪವಿತ್ರ ಬೈಬಲ್ - ಕೀರ್ತನೆ 41.1 ಪು 846.
52. ವಿಲಿಯಂ - `ಯೇಸುಕ್ರಿಸ್ತ, ಪು 130 (ಎರಡು ಉಲ್ಲೇಖಗಳಿವೆ).
53. ಎದುರ್ಕಳ ಶಂಕರನಾರಾಯಣ ಭಟ್ಟ - ಪು 583.
54. ವಿವರಗಳಿಗೆ ನೋಡಿ, ಶೇಷ ನವರತ್ನ, ಪು 135.
55. ಡಾ.ಹೆಚ್. ರಾಮಚಂದ್ರಸ್ವಾಮಿ, ಪು 489.
56. ಎದುರ್ಕಳ ಶಂಕರನಾರಾಯಣ ಭಟ್ಟ - 592.
57. ಪ್ರೊ. ಎಚ್.ಎಂ. ಮರುಳಸಿದ್ಧಯ್ಯ (ಸಂ) - ಸಮಾಜಕಾರ್ಯದ ಶಬ್ದಕೋಶ, ನಿರುತ ಪಬ್ಲಿಕೇಷನ್ಸ್, 244, 3ನೇ ಮುಖ್ಯ ರಸ್ತೆ, ಪೂರ್ಣಚಂದ್ರ ರಸ್ತೆ, ಎಂ.ಪಿ.ಎಂ ಲೇಔಟ್, ಅಂಬೇಡ್ಕರ್ ಕಾಲೇಜ್ ಎದುರು, ಮಲ್ಲತ್ತಹಳ್ಳಿ, ಬೆಂಗಳೂರು - 56, 2014, ಪು-92.  
58. ಶೇಷ ನವರತ್ನ, ಪು - 242&244.
59. ಅದೇ ಪು 241.
60. 1. ಪ್ರೊ. ಎಚ್.ಎಂ ಮರುಳಸಿದ್ಧಯ್ಯ (ಸಂ) ಪು 81-82.
      2. ಡಾ. ಹೆಚ್. ರಾಮಚಂದ್ರಸ್ವಾಮಿ, ಪು 287-294.   
61. ಶೇಷ ನವರತ್ನ, ಪು 235.
62. ಡಾ. ಹೆಚ್. ರಾಮಚಂದ್ರಸ್ವಾಮಿ ಪು 254
63. ಡಾ. ಹೆಚ್. ರಾಮಚಂದ್ರಸ್ವಾಮಿ ಪು 259
64. ಡಾ. ಹೆಚ್. ರಾಮಚಂದ್ರಸ್ವಾಮಿ ಪು 305.
65. ಶೇಷ ನವರತ್ನ, ಪು. 249.
66. ಡಾ. ಹೆಚ್. ರಾಮಚಂದ್ರಸ್ವಾಮಿ 309.
67. ವಿವರಗಳಿಗೆ ನೋಡಿ:
      1.ಶೇಷ ನವರತ್ನ -`ಜಾಗತಿಕ ಧರ್ಮಗಳು
      2. ಡಾ. ಹೆಚ್.ರಾಮಚಂದ್ರಸ್ವಾಮಿ - ಲೋಕಧರ್ಮಗಳು.
68. ಶ್ರೀ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ - ಭಗವದ್ಗೀತಾ ಯಥಾರೂಪ, ಭಕ್ತಿವೇದಾಂತ ಟ್ರಸ್ಟ್, ಹರೇಕೃಷ್ಣಗಿರಿ, ಇಸ್ಕಾನ್, ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು - 10. 1998, ಪು.211.
69. ಶೇಷ ನವರತ್ನ, ಪು.250. 
70. ವಿವರಗಳಿಗೆ ನೋಡಿ ಶೇಷ ನವರತ್ನ - ಜಾಗತಿಕ ಧರ್ಮಗಳು. 
 
...............................ಮುಂದುವರೆಯುತ್ತದೆ............................... 

0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com