ಈ ಜೀವ ತುಂಬಿದ ಚೇತನವಿಲ್ಲದ ಜಡ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು ಇರುವಂತೆ ಭಾವಕ್ಕೆ ಒಳಪಡದಂತೆ, ಅಳತೆಗೆ ವಶವಾಗದಂತೆ ಇರುವ ಆ ವಿಶೇಷಕ್ಕೆ ನಮಸ್ಕರಿಸುವೆ. ಆ ವಿಶೇಷವೆ ನೆಲ, ಜಲ, ಗಾಳಿ ಎನ್ನುವ ಡಿವಿಜಿಯವರ ಮಂಕುತಿಮ್ಮನ ಕಗ್ಗದ ತಾತ್ಪರ್ಯ ವಿಶೇಷವಾದದ್ದು. ಆಕಾಶದಲ್ಲಿ ತಾರೆಗಳು ನೂರಿದ್ದರೇನು. ಕತ್ತಲೆಯಲ್ಲಿ ನಡೆಯುವ ದಾರಿಗನಿಗೆ ಬೇಕಿರುವುದು ಬೆಳಕ ಕರುಣಿಸುವ ಒಂದು ಚಿಕ್ಕ ಹಣತೆಯೆ ಹೊರತು, ತಾರಾಮಂಡಲದ ತಾರೆಗಳಲ್ಲ. ಕತ್ತಲಲ್ಲಿ ದಾರಿಕಾಣದೆ ನಡೆಯುತ್ತಿರುವ ಮನುಷ್ಯನಿಗೆ ಜೊತೆಗಾರನಾಗಿ ಬೇಕಾಗಿರುವುದು ಮಾನವೀಯ ಮುಖದ ಮನುಷ್ಯನೇ ಹೊರತು ದೂರದ ದೇವರುಗಳಲ್ಲ. ಈ ಪ್ರಪಂಚದಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾಗಿರುವ ಈ ನೆಲ, ಜಲ, ಮನುಷ್ಯನ ಹಾರಾಟಕ್ಕೆ, ರಂಪಾಟಕ್ಕೆ, ಸಾಧನೆಗೆ, ಏಳಿಗೆಗೆ, ಕಾರಣವಾಗಿದೆ. ಈ ನೆಲ, ಜಲಗಳನ್ನು ಅನುಭವಿಸುವ ಹಕ್ಕು ಪ್ರತಿಯೊಂದು ಜೀವ ಜಂತುಗಳಿಗೂ ಇದೆ. ಅನುಭವಿಸುವಂತೆ ಮಾಡಬೇಕಾದುದ್ದು ನಮ್ಮ ಕರ್ತವ್ಯ ಕೂಡ. ಒಂದು ವಸ್ತುವನ್ನು ಸೃಷ್ಟಿಸುವ ಶಕ್ತಿ ನಮಗಿಲ್ಲ ಎಂದಾದರೆ ಒಂದು ವಸ್ತುವನ್ನು ನಾಶಪಡಿಸುವ ಹಕ್ಕು ನಮಗಿಲ್ಲ. ಭಾರತ ಸಂವಿಧಾನದ 14 ರಿಂದ 32ನೆಯ ವಿಧಿಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಶೈಕ್ಷಣಿಕ ಹಕ್ಕುನ್ನು, ಸಂವಿಧಾನಾತ್ಮಕ ಪರಿಹಾರತ್ಮಕ ಹಕ್ಕುಗಳನ್ನ ನೀಡಲಾಗಿದೆ. ಹಾಗೆಯೇ ರಾಜ್ಯ ನಿರ್ದೇಶಕರ ತತ್ತ್ವದಲ್ಲಿಯೂ ಅನೇಕ ಹಕ್ಕುಗಳನ್ನು ಹೊಂದುವ ಅವಕಾಶಗಳನ್ನು ನೀಡಲಾಗಿದೆ. ಇವುಗಳನ್ನ ಅದರ ಇತಿಮಿತಿಗಳಲ್ಲಿ ಬಳಸಿಕೊಂಡಿದ್ದರೆ ನಾವು ಇಂದು ನೆಲ ಜಲ ಮತ್ತು ಅದರ ಹಕ್ಕುಗಳ ಬಗ್ಗೆ ಚರ್ಚೆ ಮಾಡುತ್ತಿರಲ್ಲಿಲ್ಲವೇನೋ! ದುರಾದೃಷ್ಟವಶಾತ್ ಉಚಿತವಾಗಿ ಸಿಗುತ್ತಿದ್ದ ನೆಲ, ಜಲವನ್ನು ಮನುಷ್ಯ ಇಂದು ತನ್ನ ದುರಾಲೋಚನೆಯ ಹಾಗೂ ದೂರಾಕ್ರಮಣ ನೀತಿಗಳಿಂದಾದ ಪರಿಣಾಮವಾಗಿ ಶಾಲಾಕಾಲೇಜು, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಅರಿವು ಮೂಡಿಸಬೇಕಾಗಿದೆ. ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.
ಒಂಬತ್ತನೆಯ ದಶಕದಲ್ಲಿ ನಡೆದ ಉದಾರೀಕರಣದ ಫಲವಾಗಿ ಪ್ರತಿದಿನ ಎರಡು ಸಾವಿರ ಮಂದಿ ಕೃಷಿ ತೊರೆಯುತ್ತಿದ್ದಾರೆ. 20 ವರ್ಷಗಳಲ್ಲಿ ಒಟ್ಟು 70 ಲಕ್ಷ ಮಂದಿ ವ್ಯವಸಾಯದಿಂದ ವಿಮುಕ್ತರಾಗುತ್ತಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಇದು ಇನ್ನೂ ಮುಂದುವರಿಯಲಿದೆ. ಪ್ರತಿದಿನ 2000 ಮಂದಿ ಕೃಷಿಯಿಂದ ವಿಮುಕ್ತರಾಗುತ್ತಿರುವುದಕ್ಕೆ ನಮ್ಮ ಸರ್ಕಾರಗಳ ದೂರದೃಷ್ಟಿ ಇಲ್ಲದ ನೀತಿಗಳೇ ಕಾರಣವಾಗಿವೆ. ದೇಶದಲ್ಲಿ ನಗರಗಳಿಗೆ ವಲಸೆ ಹೋಗುತ್ತಿರುವವರ ಪ್ರಮಾಣ ಅಧಿಕವಾಗಿದೆ. ಭೂಮಿಯ ಒಡೆಯ ಇಂದು ಭಿಕಾರಿಯಾಗಿ ಬೇರೊಂದು ಊರಲ್ಲಿ ಇಟ್ಟಿಗೆ ಹೊರುತ್ತಿದ್ದಾನೆ. ಮಹಾನಗರಗಳಲ್ಲಿ ಜೀವನೋಪಾಯಕ್ಕಾಗಿ ಕೂಲಿಮಾಡುತ್ತಿದ್ದಾನೆ. ಅಸ್ತಿತ್ವರಹಿತ ಪ್ರಪಂಚದಲ್ಲಿ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದಾನೆ. ನಗರಕ್ಕೆ ವಲಸೆ ಬಂದ ಭೂಮಿಯ ಮಾಲಿಕರ ಮಕ್ಕಳು ಸರಿಯಾದ ಮಾರ್ಗದರ್ಶನವಿಲ್ಲದೆ ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ಹೆಣ್ಣುಮಕ್ಕಳ ಸ್ಥಿತಿಯನ್ನು ಕೇಳುವವರಿಲ್ಲ. ನಗರೀಕರಣದ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ಮನಸ್ಸಿಲ್ಲದ ಮನಸ್ಸಿನಿಂದ ಇಷ್ಟವಿಲ್ಲದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಂದ ವಶಪಡಿಸಿಕೊಂಡ ಹಣದಾಹಿಗಳು, ರಾಜಕಾರಣಿಗಳು, ಶ್ರೀಮಂತರು ಭೂಮಿಯನ್ನು ಅಡವಿಟ್ಟು ಕೋಟ್ಯಂತರ ರೂಪಾಯಿಗಳಿಸಿ ಐಷಾರಾಮಿ ಜೀವನ ನಡೆಸುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿದೆ. ಹಣದಾಹಿಗಳ ಈ ಪ್ರವೃತ್ತಿಗಳಿಂದ ದೇಶಾದ್ಯಂತ ಭೂಮಿಯ ನಿಜವಾದ ಮಾಲಿಕರ ಜೀವನ ಮೂರಾಬಟ್ಟೆಯಾಗಿದೆ. ಜಾರ್ಖಾಂಡ್ನ ಸುಮಾರು ಒಂದರಿಂದ ಎರಡು ಲಕ್ಷ ಹದಿಹರೆಯದ ಹುಡುಗಿಯರು ದೆಹಲಿಯಲ್ಲಿ 24 ಗಂಟೆಯೂ ದುಡಿಯುವಂತಾಗಿದೆ. ಉಕ್ಕು ತಯಾರಿಕಾ ಘಟಕಕ್ಕಾಗಿ ಒಡಿಶಾದಲ್ಲಿ ಖಾಸಗಿ ಕಂಪೆನಿಯೊಂದು ಬಡವರ 3800 ಎಕರೆ ಕೃಷಿಯ ಭೂಮಿಯನ್ನು ಖರೀದಿಸಿತು. ಆದರೆ ಅಲ್ಲಿ ಘಟಕ ಸ್ಥಾಪನೆಯಾಗಲೇ ಇಲ್ಲ. 15 ವರ್ಷಗಳ ಬಳಿಕ ಅದನ್ನು ವಿಶೇಷ ಆರ್ಥಿಕವಲಯವನ್ನಾಗಿ ಪರಿವರ್ತಿಸಿದ ಕಂಪೆನಿ ಅದನ್ನು ಪ್ರತಿ ಎಕರೆಗೆ `42 ಲಕ್ಷ ರೂಪಾಯಿಯಂತೆ ಬೇರೆ ಬೇರೆ ಉದ್ಯಮಿಗಳಿಗೆ ಮಾರಾಟ ಮಾಡಿತು. ಖಾಸಗಿಯವರ ಬದಲಿಗೆ ಸರ್ಕಾರವೇ ಜಮೀನು ಖರೀದಿಸುವುದಾಗಿ ನೂತನ ಭು ಮಸೂದೆ ಸಾರುತ್ತಿದೆ. ಇದು ಸರ್ಕಾರವೇ ದಲ್ಲಾಳಿಯಾಗಿ ಖಾಸಗಿಯವರಿಗೆ ಭೂಮಿ ಒದಗಿಸುವ ಹುನ್ನಾರ. ಎಲ್ಲ ವಿಶೇಷ ಆರ್ಥಿಕ ವಲಯಗಳೂ ಎಸ್ಟೇಟ್ ವ್ಯವಹಾರವಲ್ಲದೆ ಮತ್ತೇನು? ಅದೆಷ್ಟೋ ಕೃಷಿ ಜಮೀನುಗಳು ಇಂದು ರಾಜಕಾರಣಿಗಳ, ಖಾಸಗಿ ಕಂಪೆನಿಗಳ, ಶ್ರೀಮಂತರ ಸ್ವತ್ತುಗಳಾಗಿವೆ. ಈಗಾಗಲೇ ಕರ್ನಾಟಕ ಸರ್ಕಾರ ಲ್ಯಾಂಡ್ ಬ್ಯಾಂಕುಗಳನ್ನು ಸ್ಥಾಪಿಸಿ ಒಂದು ಲಕ್ಷಕ್ಕೂ ಹೆಚ್ಚು ಎಕರೆ ಜಮೀನನ್ನು ಖರೀದಿಸಿದೆ. ನವೆಂಬರ್ 2009ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ ` 3,93,000 ಕೋಟಿ ಹಣವನ್ನು ಹೂಡಿಕೆಯ 389 ಒಪ್ಪಂದಗಳಿಗೆ (ಎಂ.ಒ.ಯು) 40 ಖಾಸಗಿ ಕಂಪೆನಿಗಳು ಮತ್ತು ಕೆಲ ಸಾರ್ವಜನಿಕ ವಲಯದ ಸಂಸ್ಥೆಗಳು ಸಹಿ ಹಾಕಿವೆ. ಲ್ಯಾಂಡ್ ಬ್ಯಾಂಕಿನಲ್ಲಿರುವ ಭೂಮಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಕೆಲಸ ಈಗ ಭರದಿಂದ ನಡೆಯುತ್ತಿದೆ. ತನ್ನ ಸ್ವಂತ ಜಮೀನನ್ನು ಉಳಿಸಿಕೊಳ್ಳಲು ಹೋರಾಡುವ ರೈತರು ಹಣವಿಲ್ಲದೆ ಅಸಹಾಯಕರಾಗಿ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಫೀಸುಗಳಲ್ಲಿ, ಸರ್ಕಾರ ರೈತರ ಹಿತಕ್ಕಾಗಿ ಎಂದು ತೆರೆದಿರುವ ನೆಮ್ಮದಿಕೇಂದ್ರಗಳು ರೈತರ ಶೋಷಣೆಯ ಮಾರ್ಗವಲ್ಲದೆ ಮತ್ತೇನು? ಜಮೀನಿನ ಗೇಣಿ, ರಶೀದಿ, ಪಾಣಿ, ಪಟ್ಟಗಳನ್ನು ಪಡೆಯಬೇಕಾದರೆ ಗಂಟೆಗಟ್ಟಲೆ ಸರದಿಯಲ್ಲಿ ನಿಂತು. ದಿನವಿಡಿ ವ್ಯಯಿಸಿದರೂ ಸಿಗಲಾರದ ಪರಿಸ್ಥಿತಿ ಇರುವಾಗ ಭೂಮಿಯ ಒಡೆತನದ ಹಕ್ಕು ಗಗನ ಕುಸುಮವೇ ಸರಿ. ಭೂ ನೋಂದಣಿ ಕಾರ್ಯವಾಗಿದ್ದು, ಆತ ಅನಕ್ಷರಸ್ಥನಾಗಿದ್ದರೆ, ಅವನ ಕಥೆ ಮುಗಿದೇ ಹೋಯಿತು. ಮಧ್ಯವರ್ತಿಗಳಿಂದ ಹಿಡಿದು ಅಧಿಕಾರಗಳವರಿವಿಗೂ ಭೂಮಿಯ ನೋಂದಣಿ ಪ್ರಕ್ರಿಯೆ ಮುಗಿಯುವವರೆಗೆ ಸ್ವ-ಕಾರ್ಯದಿಂದಿಡಿದು ಸ್ವಾಮಿ ಕಾರ್ಯಗಳನ್ನು ಸಹ ಮಾಡಿಸಿಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಹಿತಾಸಕ್ತಿ, ನಗರಾಭಿವೃದ್ಧಿ, ಕೈಗಾರಿಕಾಭಿವೃದ್ಧಿ, ಎಂಬ ಹೆಸರಿನಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಭೂಮಿಯು ಯಾರ ಸ್ವತ್ತುಗಳಾಗುತ್ತವೆ ಎಂಬುದು ರಹಸ್ಯವಾಗಿ ಏನೂ ಉಳದಿಲ್ಲ. (ಕರ್ನಾಟಕದಲ್ಲಿ ನಡೆಯುತ್ತಿರುವ ಭೂಹಗರಣಗಳ ತನಿಖೆಗಳು) ಭಾರತದಲ್ಲಿ ಬಹುತೇಕ ಭೂಮಿಯು ಅನಕ್ಷರಸ್ಥ ರೈತರ ಒಡೆತನದಲ್ಲಿದ್ದು ಅವರಿಗೆ ಭೂಸ್ವಾಧೀನ ಕಾಯ್ದೆಗಳ ಗಾಳಿ ಗಂಧಗಳೇ ಗೊತ್ತಿರುವುದಿಲ್ಲ. ಇದರ ಅನುಕೂಲಪಡೆದ ಸರ್ಕಾರಗಳು, ಖಾಸಗಿ ಸಂಸ್ಥೆಗಳು, ಬೇಕಾಬಿಟ್ಟಿತನದಿಂದ ವರ್ತಿಸಿ ಭೂಮಿಯನ್ನ ಬಲವಂತದಿಂದ ಕಸಿಯುತ್ತಿವೆ. ಇದರ ಪರಿಣಾಮ ಇಂದು ಸರ್ಕಾರಗಳ ಅವನತಿಗೂ ನಿಧಾನವಾಗಿ ಕಾರಣವಾಗುತ್ತಿವೆ. ಕೇಂದ್ರ ಸರ್ಕಾರವು 1894ರ ಭೂಸ್ವಾಧಿನ ಮಸೂದೆಗೆ ಬದಲಾಗಿ ಭೂಸ್ವಾದೀನ, ಪುನರ್ವಸತಿ ಮತ್ತು ಪುನರ್ನೆಲೆ ಮಸೂದೆ-2011 ನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದೆ. ಈ ಕಾಯ್ದೆಯೂ 10 ರ ನಂತರ 11 ಎಂಬುದರಲ್ಲಿ ಸಂಶಯವಿಲ್ಲ. ಈ ಮಸೂದೆಯು ಮಾನವೀಯ ಅಂಶಗಳಿಗೆ ಒತ್ತು ನೀಡಿದ್ದು ಸಾಮಾಜಿಕ ಅಧ್ಯಯನದ ಬಳಿಕವಷ್ಟೇ, ನೋಟಿಫಿಕೇಶನ್ ಮಾಡಬೇಕೆಂಬುದು ಹಾಗೂ ಸಂಪೂರ್ಣ ಪರಿಹಾರ ನೀಡಿದ ಬಳಿಕವಷ್ಟೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂಬ ನಿರ್ದೇಶನದಿಂದ ಕೂಡಿದೆ. ಉಳಿದ ಅಂಶಗಳಲ್ಲಿ ತೀರಾ ಅನುಕಂಪ ರಹಿತ, ವ್ಯಾವಹಾರಿಕ ಗಣನೆ ಮತ್ತು ಲೆಕ್ಕಚಾರಗಳನ್ನು ಒಳಗೊಂಡಿದೆ. ಉದಾಹರಣೆಗೆ, ಪರಿಹಾರ ನೀಡುವ ವಿಷಯಗಳಲ್ಲಿ, ಏಕಗಂಟಿನ ಪರಿಹಾರದ ಪಟ್ಟಿ ಇದೆ. ಇದರ ಪ್ರಕಾರ ದನ ಕೊಟ್ಟಿಗೆ, ಪೆಟ್ಟಿ ಅಂಗಡಿ, ಅಥವಾ ವರ್ಕ್‍ಶಾಪ್ಗಳಿಗೆ ನೀಡುವ ಪರಿಹಾರವನ್ನು ಕನಿಷ್ಠ `25,000 ನಿಗದಿಪಡಿಸಿದೆ. ಆದರೆ ಕಾನೂನು ಜಾರಿಗೆ ಬಂದ ಬಳಿಕ, ವರ್ಷ ವರ್ಷ ಈ ಮೊತ್ತವನ್ನು ಯಾವುದೇ ಸೂಚ್ಯಂಕಕ್ಕೆ ಜೋಡಿಸಿ ಪರಿಹಾರವನ್ನು ಹೆಚ್ಚಿಸಬೇಕೆಂಬ ಯಾವ ನಿರ್ದೇಶನವೂ ಇಲ್ಲ ಅಂದರೆ ಇನ್ನು ಹತ್ತು ವರ್ಷದ ಬಳಿಕವೂ ರಾಜ್ಯಸರ್ಕಾರಗಳು ಈ ಕಾನೂನಿನ ಮರೆಯಲ್ಲಿ `30-35 ಸಾವಿರ ನೀಡಿ ಕೈತೊಳೆದುಕೊಳ್ಳಬಹುದು. ಈ ಕಾಯ್ದೆಯಲ್ಲಿ ಆದಿವಾಸಿ ಸಮುದಾಯಗಳಿಗೂ ಕೆಲವೊಂದು ಧಾರಾಳತೆಯನ್ನು ತೋರಿಸಿದ್ದರೂ ಅವರಿಗುಂಟಾಗುವ ಸಾಂಸ್ಕೃತಿಕ ಅಘಾತಕ್ಕೆ ಪರಿಹಾರ ಕಂಡುಕೊಳ್ಳುವ ಯಾವ ವಿವರಗಳೂ ಈ ಕಾನೂನಿನಲ್ಲಿ ಇಲ್ಲ. ಕಾಯ್ದೆಯ ವ್ಯಾಪ್ತಿ ಮತ್ತು ಸ್ವರೂಪ ಈ ಕಾಯ್ದೆಯ ಕಲಂ-1 ಎ ಪ್ರಕಾರ ಭೂಮಿಯನ್ನು ಸರ್ಕಾರ ತನ್ನ ಉಪಯೋಗಕ್ಕೆ ವಶಪಡಿಸಿಕೊಂಡಾಗ, ಸರ್ಕಾರ ವಶಪಡಿಸಿಕೊಂಡು ಅಂತಿಮವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಕಂಪೆನಿಗಳಿಗೆ ಜಮೀನನ್ನು ವರ್ಗಾಯಿಸುವ ಉದ್ದೇಶ ಹೊಂದಿದಾಗ, ಸಾರ್ವಜನಿಕ ಉದ್ದೇಶವನ್ನು ಪೋಷಿಸುವ ಖಾಸಗಿ ಕಂಪೆನಿಗಳಿಗಾಗಿ ಸರ್ಕಾರ ಜಮೀನು ವಶಪಡಿಸಿಕೊಂಡಾಗ ಈ ಕಾನೂನು ಅನ್ವಯವಾಗುತ್ತದೆ. ಸಮಸ್ಯೆ ಇಲ್ಲಿಂದಲೇ ಶುರು. ಸರ್ಕಾರ ಖಾಸಗೀ ಕಂಪೆನಿಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವ ಅಥವಾ ಅಂತಿಮವಾಗಿ ವರ್ಗಾಯಿಸುವ ತನ್ನ ಉದ್ದೇಶವನ್ನು ನೇರವಾಗಿ ಘೋಷಿಸುತ್ತದೆ. ಖಾಸಗಿ ಕಂಪೆನಿಗಳಿಗೆ ಜಮೀನು ನೀಡುವುದು ಸಾರ್ವಜನಿಕ ಉದ್ದೇಶ ಹೇಗಾಗುತ್ತದೆ ಎನ್ನುವುದು ಪ್ರಶ್ನೆಯಾಗಿ ಕಾಡುತ್ತದೆ. ಇದಕ್ಕಿಂತಲೂ ಗಂಡಾಂತರಕಾರಿ ಅಂಶ ಕಲಂ-2ರಲ್ಲಿದೆ. ಪರಿಹಾರ ಮತ್ತು ಪುನರ್ವಸತಿ ಅಂಶಗಳು ಹೀಗಿವೆ: ಖಾಸಗಿ ಕಂಪೆನಿಗಳು 100 ಎಕರೆಗೂ ಮಿಕ್ಕಿದ ಜಮೀನನ್ನು ಖರೀದಿಸಿದಾಗ ಸಾರ್ವಜನಿಕ ಉದ್ದೇಶಕ್ಕೆಂದು ಸ್ವಾದೀನ ಪಡಿಸುಕೊಡುವಂತೆ ಸರ್ಕಾರವನ್ನು ಕೋರಿದಾಗ ಅನ್ವಯವಾಗುತ್ತದೆ. ಅಥರ್ಾತ್, ಕಂಪೆನಿಯೊಂದು 100 ಎಕರೆ ಗಿಂತ ಕಡಿಮೆ ಜಮೀನು ಕೊಂಡಾಗ ಈ ಪುನರ್ವಸತಿ, ಪರಿಹಾರ, ಕಾಯ್ದೆಯ ಕಾನೂನು ಅನ್ವಯಿಸುವುದಿಲ್ಲ. ಸಾರ್ವಜನಿಕ ಉದ್ದೇಶವು ಕಲಂ-4 ರಲ್ಲಿ ಈ ರೀತಿ ಇದೆ. ಯಾವುದೇ ಅನುಕೂಲಕ್ಕಾಗಿ ಜಮೀನು ಸ್ವಾಧೀನ, ಖಾಸಗಿ ಕಂಪೆನಿಗಳಿಗೆ ಜಮೀನೂ ಸೇರಿ; ಈ ಪ್ರದೇಶದ ಶೇ.80 ಜನರು ಒಪ್ಪಿಗೆ ನೀಡಿದಾಗ, ಖಾಸಗಿ ಕಂಪೆನಿಯೊಂದು ಸಾರ್ವಜನಿಕ ಉದ್ದೇಶದ ಯೋಜನೆಗೆ ಜಮೀನು ಖರೀದಿಸಿ, ಉಳಿದ ಭಾಗದ ಸ್ವಾದೀನಕ್ಕೆ ಸಂಬಂಧಿತ ಸರ್ಕಾರದ ಮಧ್ಯಪ್ರವೇಶ ಕೋರಿದಾಗ, ಆ ಕಂಪನಿಯು ಈ ಕಾಯ್ದೆಯ ಕಾನೂನಿಗೆ ಒಳಪಡುತ್ತದೆ. ಈ ಕಾಯ್ದೆಯು ನಿರಾಪಯಕಾರಿಯಾಗಿ ಮೇಲ್ನೋಟಕ್ಕೆ ಕಂಡರೂ ಅಪಾಯವಿರುವುದು ಎಲ್ಲೆಂದರೆ,ಖಾಸಗಿ ಕಂಪೆನಿ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸುವ ಬದಲು ಸರ್ಕಾರವನ್ನು ಕೋರಿದರೆ, ಕೊಳ್ಳುವ ಖರ್ಚು ಕಡಿಮೆ, ಯಾಕೆಂದರೆ ಸರ್ಕಾರ ನಿಗದಿತ ಬೆಲೆ ಮಾರುಕಟ್ಟೆದರಕ್ಕಿಂತ ಎಷ್ಟೋ ಕಡಿಮೆ. (ಜನಾರ್ದನ ರೆಡ್ಡಿಯ ಉಕ್ಕುಕಾರ್ಖಾನೆಗೆ ಆಂಧ್ರ ಸರಕಾರ ಎಕರೆಗೆ `18 ಸಾವಿರ ರೂನಂತೆ ಜಮೀನು ಮಾರಾಟ ಮಾಡಿತ್ತು. ಇದೇ ಜಮೀನನ್ನು ಅಡವಿಟ್ಟ ರೆಡ್ಡಿ `350 ಕೋಟಿ ಸಾಲ ಪಡೆದಿದ್ದ). (ನನ್ನ ಸ್ನೇಹಿತರೊಬ್ಬರ 2 ಎಕರೆಯನ್ನು ಬಿ.ಡಿ.ಎ. ಕೇವಲ 15-20 ಲಕ್ಷಕ್ಕೆ ಖರೀದಿಸಿತ್ತು. ಆದರೆ ಅದರ ಮಾರುಕಟ್ಟೆ ಬೆಲೆ 2 ರಿಂದ 3 ಕೋಟಿ ಅಧಿಕ. ಇದೆಲ್ಲಾ ಗೊತ್ತಿದ್ದರೂ ಸರ್ಕಾರ ಅದೇಕೆ ಈ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತವೆಯೆಂಬುದು ಅರ್ಥವಾಗದ ಸಂಗತಿಯಾಗಿದೆ). ಮಾರುಕಟ್ಟೆ ದರವನ್ನು ನಿಗದಿಪಡಿಸುವಾಗ ಭಾಗ 3ರ ಕಲಂ ಪ್ರಕಾರ, ಆಯಾಯ ಪ್ರದೇಶದ ಕಳೆದ ಮೂರುವರ್ಷಗಳ ನೋಂದಣಿ ದಾಖಲೆಗಳ ಪ್ರಕಾರ ಅತ್ಯಂತ ಹೆಚ್ಚು ದರದಲ್ಲಿ ನೋಂದಣಿ ದರವನ್ನು ಮಾನದಂಡವಾಗಿ ಪರಿಗಣಿಸಿ ಅದರ ಮೂರುಪಟ್ಟು ದರವನ್ನ ಗ್ರಾಮಾಂತರ ಪ್ರದೇಶಗಳಲ್ಲಿ ಪರಿಹಾರದರವಾಗಿ ಎಕರೆಯೊಂದಕ್ಕೆ ನಿಗದಿಪಡಿಸಬೇಕು. ಹಾಗೆಯೇ ಜಮೀನು ಪಡೆಯುವ ಖಾಸಗಿ ಕಂಪೆನಿ ಪರಿಹಾರದ ಶೇ.35 ರಷ್ಟನ್ನು ತನ್ನ ಅಥವಾ ತನ್ನ ಅಧೀನ ಕಂಪೆನಿಗಳ ಕಂಪೆನಿಗಳ ಷೇರುಗಳ ಮೂಲಕ ನೀಡಬಹುದು. ಎಂದು ತಿಳಿಸಿದೆ. ಇದು ಎಷ್ಟು ಸಮಂಜಸ, ಸೂಕ್ತ ಪರಿಹಾರ ಎಂಬುದು ವಿಚಾರಮಾಡಬೇಕಾದ ಸಂಗತಿಯಾಗಿದೆ. ಅಂದರೆ ಪ್ರತಿಷ್ಠಿತ ಕಂಪೆನಿಗೆ ಜಮೀನು ಪಡೆಯುವ, ನಷ್ಟದಲ್ಲಿರುವ ತನ್ನ ಅಧೀನ ಕಂಪೆನಿಗಳ ಷೇರುಗಳನ್ನು ಪರಿಹಾರವಾಗಿ ನೀಡಿ ಕೈ ತೊಳೆದುಕೊಳ್ಳಬಹುದು. ಈ ಷೇರುಗಳ ಮೌಲ್ಯ ಸ್ಥಿರತೆಯ ಬಗ್ಗೆ ರಕ್ಷಣೆ ನೀಡುವ ಯಾವ ಪ್ರಸ್ತುತವೂ ಈ ಕಾನೂನಿನಲ್ಲಿ ಇಲ್ಲ. ಈ ಕಾಯ್ದೆಯ 9ನೆಯ ಅಧ್ಯಾಯದಲ್ಲಿ 61ನೆಯ ಕಲಂ ಪ್ರಕಾರ, ಸರ್ಕಾರವು ತಾನು ನೋಟಿಪೈ ಮಾಡಿಯೂ ವಶಪಡಿಸಿಕೊಳ್ಳದೆ ಬಿಟ್ಟ ಜಮೀನನ್ನು ಅದರ ಒಡೆಯನಿಗೆ ಮರಳಿಸುವ ಸ್ವಾತಂತ್ರ್ಯ ಹೊಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರವು ಈ ವ್ಯಕ್ತಿಗೆ ನಿರ್ಧರಿಸಿದ ಪರಿಹಾರ ನೀಡಬೇಕು. ಈ ಕಲಂ ಪರೋಕ್ಷವಾಗಿ ಡಿನೋಟಿಫಿಕೇಶನ್ನನ್ನ ಸಕ್ರಮಗೊಳಿಸುತ್ತದೆ. ಪರೋಕ್ಷವಾಗಿ ಸರ್ಕಾರಿ ಅಧಿಕಾರಿಗಳೇ ಸಂಬಂಧಪಟ್ಟ ಭೂಮಿದಾರರಿಗೆ ಅಲ್ಪಸ್ವಲ್ಪ ಧನಸಹಾಯ ನೀಡಿ ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುವ ಹುನ್ನಾರದ ಸಾಧ್ಯತೆಗಳೇ ಹೆಚ್ಚಾಗಿವೆ. ಹಾಗೆಯೇ ಕಲಂ 69ರ ಪ್ರಕಾರ ಸ್ವಾದೀನಕ್ಕೊಳಪಡಿಸಿದ ಜಮೀನನ್ನು 5 ವರ್ಷಗಳ ಕಾಲ (ಈಗ 10ವರ್ಷಗಳೆಂದು ತಿದ್ದುಪಡಿಯಾಗಿದೆ) ಉಪಯೋಗಿಸದೆ ಬಿಟ್ಟರೆ, ಅಂಥ ಜಮೀನನ್ನು ಅದರ ಒಡೆಯನಿಗೆ ಮರಳಿ ನೀಡಬೇಕಾಗುತ್ತದೆ. ಐದು ವರ್ಷ ಸುಮ್ಮನೆ ಇಟ್ಟುಕೊಂಡು, ಬಳಿಕ ಬೇಕಾಬಿಟ್ಟಿ ಮರಳಿಸುವ ಕ್ರಮವು ವ್ಯಾಪಕ ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಸಾಧ್ಯತೆಗೆ ಈ ಕಾನೂನು ರಹದಾರಿ ನೀಡುತ್ತದೆ. ನಮ್ಮ BDA, KIADB ಈ ರೀತಿಯ ಕೃತ್ಯಗಳಲ್ಲಿ ತೊಡಗಲು ಈ ಕಾನೂನುಗಳು ಅಧಿಕೃತತೆ ನೀಡುತ್ತದೆ. ಇದೇ ಅಧ್ಯಾಯದ ಶೆಡ್ಯೂಲ್ 2 ಪರಿಹಾರದ ವಿವರಗಳನ್ನು ಲೆಕ್ಕಹಾಕಿದರೆ ಯಾವ ಸಮಿತಿ ಈ ಉಪಾಯಗಳನ್ನು ನೀಡಿತು ಎಂದು ಹಾಸ್ಯಸ್ಪದ ಉಂಟಾಗುತ್ತದೆ. ಕಲಂ 8ರ ಪ್ರಕಾರ ಸದರಿ ಜಮೀನು ಬಳಕೆ ಮಾಡುವ ಕಂಪೆನಿಯು ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ನೀಡಬೇಕೆಂದು ಹೇಳಿವೆಯಾದರೂ ಕಂಪೆನಿಗಳು ಉದ್ಯೋಗ ನೀಡುವಲ್ಲಿ ವಿಫಲಾಗಿವೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 1,122 ಮಹಿಳೆಯರು ಸೇರಿದಂತೆ 6,604 ಮಂದಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯ ಅಪರಾಧ ದಾಖಲಾತಿ ವಿಭಾಗದ (ಎಸ್ಸಿಆರ್ಬಿ) ಪ್ರಕಾರ ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ, ಕಳೆದ ಮೂರು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಮೃತರ ಪೈಕಿ 11 ಬಾಲಕಿಯರು ಹಾಗೂ 9 ಬಾಲಕರೂ ಸೇರಿದ್ದಾರೆ. ರೈತರ ಆತ್ಮಹತ್ಯೆಗೆ ಸಾಲಬಾಧೆಯೋಂದೇ ಕಾರಣವಲ್ಲ. ಬದಲಿಗೆ ಭೂಸ್ವಾಧೀನ ಸಮಸ್ಯೆ, ಬರಗಾಲ ನೆರೆ ಹಾವಳಿ ಇತ್ಯಾದಿ ಪೃಕೃತಿ ವಿಕೋಪಗಳಿಂದ ಉಂಟಾದ ನಷ್ಟವೂ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 2008ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,737. ಈ ಪೈಕಿ 298 ಮಹಿಳೆಯರು. 2009ರಲ್ಲಿ 367 ಮಹಿಳೆಯರು ಸೇರಿದಂತೆ 2,282 ಮಂದಿ ಜೀವ ಕಳೆದುಕೊಂಡಿದ್ದಾರೆ. 2010ರಲ್ಲಿ ಸತ್ತವರ ಸಂಖ್ಯೆ 2,585 ಈ ಪೈಕಿ 457 ಮಹಿಳೆಯರು. ಭೂಮಿಯ ಹಕ್ಕನ್ನು ವಿಕೇಂದ್ರಿಕರಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ 2005-06ನೇ ಸಾಲಿನಲ್ಲಿ ನಮ್ಮ ಭೂಮಿ-ನಮ್ಮ ತೋಟ ಎಂಬ ಐದು ವರ್ಷಗಳ ಅವದಿಯ ಹೊಸ ಯೋಜನೆಯನ್ನು ರೂಪಿಸಿತ್ತು. ಇದರ ಮುಖ್ಯ ಉದ್ದೇಶ ಭೂರಹಿತ ಕೃಷಿಕಾರ್ಮಿಕರಿಗೆ, ಅದರಲ್ಲೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಆರ್ಥಿಕವಾಗಿ ಹಿಂದುಳಿದ ರೈತಾಪಿ ವರ್ಗಗಳಿಗೆ ಕೈತೋಟವನ್ನು ಬೆಳೆಸಲು ಭೂಮಿಯನ್ನು ನೀಡಿ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸುವುದು ಹಾಗೂ ಅವರಿಗೂ ಭೂಮಿಯ ಹಕ್ಕನ್ನು ಅನುಭವಿಸುವ ಗುರಿಯನ್ನು ಹೊಂದಿತ್ತು. ಈ ಯೋಜನೆಯು ರಾಜಕೀಯ ಏರಿಳಿತಗಳಿಂದಾಗಿ ಯಶಸ್ವಿಯಾಗಲಿಲ್ಲ. ಅದರ ಪ್ರಯೋಜನ ಯಾರಿಗೆ ಸೇರಿಬೇಕಿತ್ತೋ ಅವರಿಗೆ ಸೇರಲಿಲ್ಲ. ಕಾರಣ, ಗ್ರಾಮಪಂಚಾಯಿತಿಗಳಲ್ಲಿನ ಅವ್ಯವಹಾರಗಳಿಂದ ಕೂಡಿದ ವ್ಯವಸ್ಥೆಯು ಯೋಜನೆಯ ವೈಫಲ್ಯತೆ ಕಾರಣವಾಗಿದೆ. ಕೊನೆಯ ಮಾತು:- ಭೂಮಿಯ ಹಕ್ಕು ಪ್ರತಿಯೊಬ್ಬರಿಗೂ ಇದ್ದು, ವ್ಯವಹಾರಿಕ ಮನೋಭಾವದೀಂದ ನಾವೆಲ್ಲರೂ ಹೊರಬಂದಾಗ ಮಾತ್ರ ಭೂಮಿಯ ಹಕ್ಕು ಎಲ್ಲರಿಗೂ ದೊರೆಯುವಂತಾಗುತ್ತದೆ. ಏನೇ ಕಾನೂನು, ಕಾಯ್ದೆಗಳು ಮಾಡಿದರೂ ಅದರ ತಿರುಳು ತುಂಬಾ ಕಠಿಣವಾಗಿದ್ದು ಜನಸಾಮಾನ್ಯರ ಮಟ್ಟಕ್ಕೆ ತಲುಪುವಲ್ಲಿ ವಿಫಲವಾಗಿದೆ. ಭೂಮಿಯ ಹಕ್ಕಿಗೆ ಸಂಬಂಧಿಸಿದಂತೆ ಕಾಯ್ದೆಗಳು ಭೂಹಕ್ಕುಗಳ ಗಾಳಿ ಗಂಧವಿಲ್ಲದ ಅನಾನುಭವಿ ರಾಜಕಾರಣಿಗಳಿಂದ ಅನುಮೋದನೆ ಆಗುವುದಕ್ಕಿಂತ ಗ್ರಾಮೀಣ ಜನರ ಆಶೋತ್ತರಗಳಿಗೆ ಬೆಲೆ ನೀಡಿ ಗ್ರಾಮಪಂಚಾಯ್ತಿಗಳ ಮಟ್ಟದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಬೇಕಿದೆ. ಈ ಕ್ರಾಂತಿಗಳಲ್ಲಿ ಸಮಾಜಕಾರ್ಯಕರ್ತರಾದ ನಾವು ನೀವುಗಳೆಲ್ಲರೂ ಒಂದಾಗಿ ರೈತರ ಭೂ ಹಕ್ಕುಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಪ್ರಯತ್ನಗಳ ಮೂಲಕ ಅರಿವು ಮೂಡಿಸಬೇಕಾಗಿದೆ. ರೈತರು ತನ್ನ ಜಮೀನಿನಲ್ಲಿ ಸ್ವಂತದೊಂದು ವಾಸದ ಮನೆ ನಿರ್ಮಿಸಿಕೊಳ್ಳುವುದಕ್ಕೋ ನೂರೆಂಟು ವಿಘ್ನಗಳು ಎದುರಾಗಿ ಸ್ಥಳೀಯ ಅಧಿಕಾರಿಗಳು ಹಣ ಸುಲಿಗೆ ಮಾಡುತ್ತಿರುವುದನ್ನು ನಾವುಗಳು ನೋಡುತ್ತಿದ್ದು ಸುಮ್ಮನಿದ್ದೇವೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಭೂ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಅವರಿಂದ ಸಂಬಂಧಪಟ್ಟ ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದೆ. ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿನ ಸ್ವಯಂ ಸೇವಾಸಂಸ್ಥೆಗಳು ಕೇವಲ ಅಂಕಿ ಅಂಶಗಳ ಬೋಗಸ್ ಸಾಧನೆಗಳನ್ನು ತೋರಿಸುವುದನ್ನು ಒಟ್ಟು ನೈಜತೆಯ, ಪ್ರಾಮಾಣಿಕ ಕೆಲಸ ಮಾಡಬೇಕು (ರಾಮನಗರದಲ್ಲಿನ ಸ್ವಯಂಸೇವಾ ಸಂಸ್ಥೆಯೊಂದು ಬಡವರಿಗೆ ಉಚಿತವಾಗಿ ಮನೆ ನಿವೇಶನಗಳನ್ನು ಹಂಚುವ ಹೆಸರಿನಲ್ಲಿ ಪ್ರತಿಯೊಬ್ಬರಿಂದಲೂ 50,000ಗಳನ್ನು ಸಂಗ್ರಹಿಸುತ್ತದೆ. ಇದನ್ನು ವಿಚಾರಿಸಿ ಪ್ರಶ್ನಿಸಿದಾಗ ನಾವುಗಳು ಇದುವರೆವಿಗೂ ಹೋರಾಡಿದ್ದೇವೆ ಅದರ ಖರ್ಚಿಗಾಗಿ ಈ ಹಣ ಎಂದು ಸಬೂಬೂ ಹೇಳುತ್ತದೆ. ಇಂಥ ಅದೆಷ್ಟೋ ಸ್ವಯಂಸೇವಾ ಸಂಸ್ಥೆಗಳು ನಮ್ಮಲ್ಲಿವೆ. ಗ್ರಾಮ ಸೇವಕರುಗಳ ಮೂಲಕ ಪ್ರತಿ ತಿಂಗಳು ಗ್ರಾಮಪಂಚಾಯಿತಿ ಮಟ್ಟಗಳಲ್ಲಿ ಭೂ ಕಾಯ್ದೆಯ ಚರ್ಚಾ ಶಿಬಿರಗಳನ್ನು ಏರ್ಪಡಿಸಬೇಕು. ಭೂ ಮತ್ತು ಕಂದಾಯ ಇಲಾಖೆಗಳು ಭೂ ಹಕ್ಕುಗಳಿಗೆ ಸಂಬಂಧಿಸಿದಂತೆ ಬಿತ್ತಿ ಪತ್ರಗಳನ್ನು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಹಂಚಿ ಅರಿವು ಮೂಡಿಸಬೇಕಾಗಿದೆ. ಆಕರ ಗ್ರಂಥಗಳು 1. ಭೂ ಸ್ವಾದೀನ ಕಾಯ್ದೆ-1894 2. ಭೂ ಸ್ವಾದೀನ, ಪುನರ್ವಸತಿ ಮತ್ತು ಪುನರ್ನೆಲೆ ಮಸೂದೆ- 2011 (ಕರಡು ಪ್ರತಿ) 3. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 4. ಮಾನವೀಯ ಮುಖವಾಡ, ಧಾರಾಳ ಅಂಶ (ಲೇಖನ: ಪ್ರಜಾವಣಿ ಸೆಪ್ಟೆಂಬರ್ 2011) 5. ಭೂಮಿ ಎನ್ನುವ ಮಾರುಕಟ್ಟೆ ಸರಕು (ಪ್ರಜಾವಣಿ ಸೆಪ್ಟೆಂಬರ್ 2011) 6. ಪಿ.ಸಾಯಿನಾಥ್ ರವರ ವಿಶೇಷ ಭಾಷಣ (ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ) ಪೊನ್ನಸ್ವಾಮಿ ಎನ್. ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಅನುಪಮ ಕಾಲೇಜು ಬೆಂಗಳೂರು ರಮೇಶ್ ಎಂ.ಎಚ್. ಸಂಪಾದಕರು, ಸಮಾಜಕಾರ್ಯದ ಹೆಜ್ಜೆಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |