ಭಾರತೀಯ ಸಮುದಾಯ ಸಂಘಟನೆಯ ಉಗಮವನ್ನು ವೇದಪೂರ್ವ ಕಾಲದ ಆರ್ಯರ ಜೀವನಪದ್ಧತಿಯಲ್ಲಿಯೇ ಗುರುತಿಸಬಹುದಾಗಿದೆ. ವೇದಪೂರ್ವದಲ್ಲಿ, ಇಡೀ ಭಾರತದೇಶ (ಅಖಂಡ ಭಾರತ)ದಲ್ಲಿ ಸಾವಿರಾರು ಜನಾಂಗಗಳು, ಬುಡಕಟ್ಟುಗಳು, ಸಮುದಾಯಗಳು, ಪಂಗಡಗಳು, ಕುಲಗಳು ಎಂದು ಕರೆಯಲ್ಪಡುವ ಗುಂಪುಗಳು ಅಸ್ಥಿತ್ವದಲ್ಲಿದ್ದವು ಎಂಬ ಅಂಶವನ್ನು ಚರಿತ್ರೆ ದಾಖಲಿಸಿದೆ. ಜನರು ಇಂತಹ ಚಿಕ್ಕ ಚಿಕ್ಕ ಪ್ರಾಚೀನ ಸಮುದಾಯಗಳಲ್ಲಿ ಸಹಜೀವನ ಮಾಡುತ್ತಿದ್ದರು.1 ವೇದಪೂರ್ವ ಕಾಲದ ಸಮುದಾಯಗಳ ಸಹಜೀವನ ಮತ್ತು ಸಂಘಟನೆಯ ಅಂಶಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅವರ ಯಜ್ಞ, ಸತ್ರ, ಕ್ರತು, ದಾನ ಮುಂತಾದ ಶಬ್ದಗಳ, ಪರಿಕಲ್ಪನೆಗಳ, ಪದ್ಧತಿಗಳ ಹಾಗೂ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಯಜ್ಞದ ಬಹುಪುರಾತನ ರೂಪವೆಂದರೆ ಸತ್ರ ಮತ್ತು ಕ್ರತು. ಪೂರ್ವದ ಆರ್ಯರು ಕೈಕೊಳ್ಳುತ್ತಿದ್ದ ಸಾಮೂಹಿಕ ದುಡಿಮೆಯೇ ದೇವತೆಗಳು ನಡೆಸುತ್ತಿದ್ದರೆನ್ನಲಾದ ಸತ್ರ. ಜೀವನಪೋಷಣೆ ಮತ್ತು ಸಂತಾನೋತ್ಪತ್ತಿಗಾಗಿ ಸಮುದಾಯದಲ್ಲಿ ನಿತ್ಯವೂ ಕೈಕೊಳ್ಳುತ್ತಿದ್ದ ಚಟುವಟಿಕೆಗಳ ಮೊತ್ತವೇ ಸತ್ರ.... ಸತ್ರದ ಪ್ರಮುಖ ಲಕ್ಷಣವೆಂದರೆ, ಅದರಲ್ಲಿ ಭಾಗವಹಿಸುವ ಎಲ್ಲರೂ ಋತ್ ವಿಜರು (ಋತ್ವಿಜರು, ಬ್ರಾಹ್ಮಣರು, ಯಜ್ಞಮಾಡುವ ಕರ್ತೃಗಳು) ಮತ್ತು ಯಜಮಾನರು. ಅದು ಆದಿಸ್ಥಿತಿಯ ಪ್ರಕಾರದಲ್ಲಿನ ಸಾಮೂಹಿಕ ಕ್ರಿಯೆಯಾಗಿತ್ತು; ಯಾವೊಂದು ಭೇದವಿಲ್ಲದೆ ಅಥವಾ ಶ್ರಮ ವಿಭಜನೆ (Division of Labour) ಇಲ್ಲದೆ ಅದರ ಸಾಮೂಹಿಕ ದುಡಿಮೆಯಲ್ಲಿ ಎಲ್ಲರೂ ಭಾಗವಹಿಸುತ್ತಿದ್ದರು.2 ಇದು ಯಜ್ಞದ ಮೊದಲನೆ ಅಂಗವಾದ ಸತ್ರದ ವಿವರಣೆ. ಸಾರಾಂಶ ರೂಪವಾಗಿ ಹೀಗೆ ಹೇಳಬಹುದು. ಅವರ ಬದುಕು ಮತ್ತು ಚಟುವಟಿಕೆಗಳು ಸಾಮೂಹಿಕವಾಗಿದ್ದವು. ದುಡಿಮೆ ಸಾಮೂಹಿಕವಾಗಿತ್ತು. ಯಾವ ಶ್ರಮವಿಭಜನೆಯೂ ಇದ್ದಿಲ್ಲ. ಯಜ್ಞ ಜೀವನ ಪೋಷಣೆ, ರಕ್ಷಣೆ ಹಾಗೂ ಸಂತಾನೋತ್ಪತ್ತಿಗೆ ಬೇಕಾದ ಎಲ್ಲಾ ಚಟುವಟಿಕೆಗಳಿಗೂ, ಕೆಲಸಗಳಿಗೂ ಸಂಬಂಧಿಸಿದ್ದಾಗಿತ್ತು. ಯಜ್ಞ ಒಂದು ಜೀವನಪದ್ಧತಿಯಾಗಿತ್ತು.
ಇನ್ನು ಸತ್ರದ ಎರಡನೇ ಅಂಶ. ಸತ್ರದ ಎರಡನೇ ವೈಲಕ್ಷಣ್ಯವು ಯಜ್ಞಫಲವು ದುಡಿಮೆಯ ಪರಿಣಾಮ. ಇದು ಜಂಟಿ ಅಥವಾ ಸಾಮೂಹಿಕ ಉತ್ಪನ್ನವಾಗಿತ್ತು; ಇದನ್ನು ಸಾಮೂಹಿಕವಾಗಿ ಮತ್ತು ಸಮಾನವಾಗಿ ಹಂಚಿಕೊಳ್ಳಬೇಕೆಂಬುದೂ, ಸಾಮೂಹಿಕವಾಗಿ ಅನುಭೋಗಿಸಬೇಕೆಂಬುದೂ ಕ್ರಮವಾಗಿತ್ತು.3 ಸತ್ರದ ಮೊದಲನೆ ಅಂಶ ಸಾಮೂಹಿಕ ದುಡಿಮೆಗೆ ಸಂಬಂಧಿಸಿದಂತೆ, ಎರಡನೇ ಅಂಶ ಸಾಮೂಹಿಕವಾಗಿ ಮತ್ತು ಸಮಾನವಾಗಿ ಹಂಚಿಕೊಳ್ಳುವ ಪ್ರಕ್ರಿಯೆಗೆ ಹಾಗೂ ಅನುಭವಿಸುವ ಕ್ರಿಯೆಗಳಿಗೆ ಸಂಬಂಧಿಸಿದ್ದಾಗಿದೆ. ಸರಳವಾಗಿ ಹೇಳಬೇಕೆಂದರೆ ಎಲ್ಲರೂ (ಯಾವ ತಾರತಮ್ಯವಿಲ್ಲದೆ) ಸಮಾನವಾಗಿ ದುಡಿಯುತ್ತಿದ್ದರು ಮತ್ತು ಬಂದ ಫಲವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ಇದು ಸ್ವಸಂಘಟನೆಯ ಮೂಲ. ಆ ಸಮುದಾಯಗಳಲ್ಲಿ ಯುದ್ಧಗಳು ಎರಡು ಕಾರಣಗಳಿಗಾಗಿ ನಡೆಯುತ್ತಿದ್ದವು. ಒಂದು, ಸಮುದಾಯದ ರಕ್ಷಣೆಗೆ. ಎರಡು, ಯಜ್ಞದ (ಅಶ್ವಮೇಧಯಾಗ ಇತ್ಯಾದಿ) ಭಾಗವಾಗಿ ನಡೆಯುವ ಯುದ್ಧಗಳು. ಯುದ್ಧದ ಮೂಲಕ ಪಡೆದ ವಸ್ತುಗಳನ್ನು ಮತ್ತು ಸಮುದಾಯದ ಪರವಾಗಿ ಕೂಡಿರಿಸಿದ್ದ ಬಳಕೆಯ ವಸ್ತುಗಳನ್ನು, ಅಂದರೆ, ಆಯುಧಗಳು, ವಸ್ತ್ರಗಳು, ಗಡಿಗೆಮಡಿಕೆಗಳು, ಇತ್ಯಾದಿಗಳನ್ನು, ಸಮುದಾಯಕ್ಕೆ ಹಬ್ಬಗಳಲ್ಲಿ, ಕಾಲಕಾಲಕ್ಕೆ ಹಂಚುವುದನ್ನು ದಾನ ಎಂದು ಪರಿಗಣಿಸಲಾಗುತ್ತಿತ್ತು.4 ದಾನ ಯಜ್ಞದ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ದಾನ ಎಂದರೆ, ಹಂಚುವಿಕೆಯು ಬುಡಕಟ್ಟಿನ (ಜನಾಂಗದ) ಮುಖ್ಯಸ್ಥರು ತನ್ನ ಇಚ್ಛೆಗೆ ಅನುಗುಣವಾಗಿ ಮಾಡಬಹುದಾದ ಅಥವಾ ಮಾಡಿರಬಹುದಾದ ಖಾಸಗಿ ಕ್ರಿಯೆಯಾಗಿರಲಿಲ್ಲ. ಯಾಕೆಂದರೆ, ಗೆದ್ದು ವಶಪಡಿಸಿಕೊಂಡ ಸಂಪತ್ತು ಇಡೀ ಸಮುದಾಯಕ್ಕೆ ಸೇರಿರುತ್ತಿತ್ತು. ದಾನವೂ ಒಂದು ಸಾಮಾಜಿಕ ಕ್ರಿಯೆಯಾಗಿತ್ತು. ಇದನ್ನು ಕೆಲವು ಸಂದರ್ಭಗಳಲ್ಲಿ, ಅಂದರೆ, ಅದು ಬೇಕಾದಾಗ ಮತ್ತು ಪ್ರತಿಯೊಂದು ಯುದ್ಧದ ಅಥವಾ ದಂಡಯಾತ್ರೆಯ ಕೊನೆಯಲ್ಲಿ, ಹಮ್ಮಿಕೊಳ್ಳಲಾಗುತ್ತಿತ್ತು.5 ಈ ಪ್ರಕ್ರಿಯೆಗಳು ಋಗ್ವೇದ ಕಾಲದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ನಡೆದುಕೊಂಡು ಬಂದಹಾಗೆ ಕಾಣುತ್ತವೆ. ಇಲ್ಲಿ ಮೂಲಭೂತವಾಗಿ ಗಮನಿಸಬೇಕಾದ ಅಂಶವೆಂದರೆ ದಾನ ಪ್ರಕ್ರಿಯೆ ಜನಾಂಗದ ಯಜಮಾನನ ಸ್ವಂತ ಕೆಲಸವಾಗಿರಲಿಲ್ಲ. ಹಾಗೇನೇ ಯಜಮಾನ ದಾನವನ್ನು ತನಗೆ ಬೇಕಾದವರಿಗೆ, ತನಗೆ ಬೇಕಾದಷ್ಟು ಕೊಡುವ ಕಾರ್ಯವಾಗಿರಲಿಲ್ಲ. ದಾನ ಒಂದು ಸಾಮೂಹಿಕ ಕ್ರಿಯೆಯಾಗಿತ್ತು. ಜನಾಂಗದ ಹಿರಿಯ ಗುಟ್ಟಾಗಿ ಮಾಡುವ ಕೆಲಸವಾಗಿರಲಿಲ್ಲ. ದಾನ ರೂಪವಾಗಿ ಕೊಡಲ್ಪಡುವ ವಸ್ತುಗಳು ಇಡೀ ಸಮುದಾಯಕ್ಕೆ ಸೇರಿದ ಆಸ್ತಿಯಾಗಿದ್ದಿತು. ಹಾಗಾಗಿ ಆ ವಸ್ತುಗಳ ಮೇಲೆ ಸಮುದಾಯದ ಎಲ್ಲ ಸದಸ್ಯರಿಗೂ ಹಕ್ಕಿತ್ತು. ಪರಿಣಾಮವಾಗಿ ದಾನವಸ್ತುಗಳು ಸಮುದಾಯದ ಸದಸ್ಯರಲ್ಲಿ ಸಮನಾಗಿ ಹಂಚಲ್ಪಡುತ್ತಿದ್ದವು. ನಿಗದಿತ ಕೆಲಸಗಳನ್ನು ಮಾಡುವಾಗ ಸಮಾನತೆ ಮತ್ತು ಬಂದ ಫಲಗಳನ್ನು ಹಂಚುವಾಗ ಸಮಾನತೆಗಳನ್ನು ಕಾಯ್ದುಕೊಳ್ಳಲಾಗುತ್ತಿತ್ತು. `ದಾನ ಶಬ್ದವನ್ನು ಋಗ್ವೇದದಲ್ಲಿ ವಿಭಜನೆ (Division) ಎಂದು ಅರ್ಥೈಸಲಾಗುತ್ತದೆ. ಇದು ಸಾಮಾನ್ಯವಾಗಿ ದ ಧಾತುವಿನಿಂದ ಬಂದಿದೆ. ದ ಎಂದರೆ ವಿಭಜಿಸು ಎಂದಾಗುತ್ತದೆ. ಇದು ದಾನದ ಮೂಲ ಪರಿಕಲ್ಪನೆ. ಆದುದರಿಂದ ಅದಕ್ಕೆ (ಆಧುನಿಕ ಕಾಲದಲ್ಲಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಪ್ರಯೋಗದಲ್ಲಿರುವ ಶಬ್ದ) ದಾನದ (Charity ಅನುಕಂಪದ ಆಧಾರದ ಮೇಲೆ ಮಾಡುವ ಸಹಾಯ) ಅರ್ಥಸಿರಿಯಾಗಲಿ ಅಥವಾ ಕೃಪಾಕಟಾಕ್ಷವಾಗಲಿ ಇದ್ದಿದ್ದಿಲ್ಲ.6 ವೇದಕಾಲದಲ್ಲಿಯೂ ಯಜ್ಞಕ್ಕೆ ವಿಶಾಲವಾದ ಅರ್ಥವನ್ನು ಕಲ್ಪಿಸಲಾಗಿತ್ತು. ಯಜುರ್ವೇದದ ತೈತರೀಯ ಬ್ರಾಹ್ಮಣದಲ್ಲಿ ಯಜ್ಞತತ್ತ್ವದ ಬಗ್ಗೆ ಹೇಳಲಾಗಿದೆ. ಸರ್ವಾಗತಿರ್ಯಾಜುಷೀಹೈವ್ ಶಶ್ವತ್-ಜೀವನದ ಕಾರ್ಯಗಳೆಲ್ಲಾ ಯಜ್ಞ, ಕಾರ್ಯಕ್ಷೇತ್ರವೆಲ್ಲಾ ಯಜ್ಞ ಭೂಮಿ, ಜೀವಿಗಳೆಲ್ಲಾ ಯಜಮಾನರು (ಅಂದರೆ ಕರ್ತೃಗಳು-ಕೆಲಸ ಮಾಡುವವರು). ಅತಿಸ್ಥೂಲ ಬಾಹ್ಯ ಕ್ರಿಯೆಯಿಂದ ಹಿಡಿದು ಅತಿ ಸೂಕ್ಷ್ಮ ಆಧ್ಯಾತ್ಮದ ವ್ಯಾಪಾರದವರೆಗೆ ಎಲ್ಲವೂ ಯಜ್ಞ, ಎಂದು ವೇದ ವಿದ್ವಾನ್ ಪ್ರೊ. ಕೆ.ಎಸ್. ನಾರಾಯಣಾಚಾರ್ ವ್ಯಾಖ್ಯಾನಿಸಿದ್ದಾರೆ.7 ಇದನ್ನು ಹೀಗೆ ಅರ್ಥೈಸಿಕೊಳ್ಳಬಹುದು. ವೇದಕಾಲದ ಜನಜೀವನ ತುಂಬಾ ಸಂಕೀರ್ಣವಾಗಿರದೆ ಬಹಳ ಸರಳವಾಗಿತ್ತು. ಬದುಕಿನ ವಿವಿಧ ಮುಖಗಳ ಎಲ್ಲಾ ಚಟುವಟಿಕೆಗಳೂ ಯಜ್ಞದ ಭಾಗವೇ ಆಗಿದ್ದವು. ಯಜ್ಞದಲ್ಲಿ ಭಾಗವಹಿಸುವ ಎಲ್ಲರೂ ಯಜಮಾನರು. ಆರ್ಥಿಕ ಕ್ರಿಯೆಗಳು, ಸಾಮುದಾಯಿಕ ರಕ್ಷಣೆ, ಧಾರ್ಮಿಕ ಕಾರ್ಯಗಳು ಮುಂತಾದವುಗಳಲ್ಲದೆ ಆಧ್ಯಾತ್ಮದ ಚಿಂತನೆಗಳೂ, ತಾತ್ತ್ವಿಕ ಪರಿಕಲ್ಪನೆಗಳ ಸ್ಥಾಪನೆ, ಅನುಷ್ಠಾನ ಮುಂತಾದ ಕೆಲಸಗಳೂ ಯಜ್ಞದ ಭಾಗಗಳೇ ಆಗಿದ್ದವು. ಹಾಗೇನೇ ಯಜ್ಞದ ಫಲವನ್ನು (ಸೋಮರಸವಾಗಲಿ, ನೇವೇದ್ಯವಾಗಲಿ ಹಾಗೂ ಇತರೆ ವಸ್ತುಗಳು-ಆಹಾರ, ಇತರೆ ಜೀವನಾವಶ್ಯಕತೆಗಳು) ಸಮಾನವಾಗಿ ಹಂಚುವುದೂ ಯಜ್ಞದ ಅವಿಭಾಜ್ಯ ಅಂಗವೇ ಆಗಿತ್ತು. ಈ ಎಲ್ಲಾ ಚಟುವಟಿಕೆಗಳೂ ಋತ್ವಿಜರ, ಮುಂದಾಳುಗಳ ಸಂಘಟನೆಯಿಂದಲೇ ನಡೆಸಿದ ಕಾರ್ಯಗಳಾಗಿದ್ದವು. ಸಾಮೂಹಿಕ ಸಾಮಾಜಿಕ ಕ್ರಿಯೆಯೇ ಪರಸ್ಪರ ನೆರವು; ಇದನ್ನೇ ಯಜ್ಞ ಎನ್ನಲಾಗುತ್ತಿತ್ತು. ಸಂಸ್ಕೃತ ಭಾಷೆಯಲ್ಲಿ ಯಜ್ಞ ಶಬ್ದಕ್ಕೆ ಉತ್ಪನ್ನಕ್ಕಾಗಿ ಜತೆಗೂಡಿ ಸಾಗುವುದು ಎಂದೇ ಅರ್ಥ.8 ಯಜ್ಞವಿಧಾನ ಒಂದು ಜೀವನಪದ್ಧತಿಯೇ ಆಗಿತ್ತು. ಪ್ರೊ. ರಾಜರಾಮ ಶಾಸ್ತ್ರಿಯವರು (ಅನು: ಪ್ರೊ.ಎಚ್.ಎಂ.ಮರುಳಸಿದ್ಧಯ್ಯ) ಇನ್ನೊಂದು ಅಂಶವನ್ನು ಹೇಳುತ್ತಾರೆ. ಸಾಮುದಾಯಿಕ ದುಡಿಮೆ ಯೋಜನಾ ಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕಾದರೆ, ದುಡಿಮೆಯ ಪ್ರಕ್ರಿಯೆಗೆ ಮಾರ್ಗದರ್ಶನ ಮಾಡಲು ಕೆಲವು ಕ್ರಿಯಾತ್ಮಕರನ್ನು (Functionaries) ಸಮುದಾಯ ಚುನಾಯಿಸುತ್ತಿತ್ತು. ಕೆಲಸಗಳ ವೈವಿಧ್ಯತೆ ಬೆಳೆದಂತೆ, ಬೇರೆ ಬೇರೆ ಕೆಲಸಗಳಿಗೆ, ಆಯಾ ಕ್ಷೇತ್ರಗಳಲ್ಲಿ ಜ್ಞಾನ ಕೌಶಲ್ಯ ಇರುವವರನ್ನು ನಾಯಕರನ್ನಾಗಿ ಆರಿಸಲಾಗುತ್ತಿತ್ತು. ಅವರನ್ನು ಬ್ರಾಹ್ಮಣಸ್ಪತಿ, ಗಣಪತಿ, ಯುದ್ಧಾಧಿಪತಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅಂತಹ ನಿಯೋಜಿತ ಕೆಲಸ ಮುಗಿದ ಮೇಲೆ ಅವರು ಹಿಂದಿರುಗಿ ಸಮುದಾಯದಲ್ಲಿ ಬೆರೆತು ಹೋಗುತ್ತಿದ್ದರು, ಶ್ರೀಸಾಮಾನ್ಯರಾಗುತ್ತಿದ್ದರು.9 ಸಮುದಾಯದ ಪ್ರತಿಯೊಬ್ಬ ಸದಸ್ಯನೂ ಸ್ವಲ್ಪ ಹೆಚ್ಚು ಕಡಿಮೆ ಎಲ್ಲ ಕೆಲಸಗಳನ್ನು ಬಲ್ಲವನಾಗಿರುತ್ತಿದ್ದ. ಶ್ರಮವಿಭಜನೆ, ಕ್ಷೇತ್ರ ಪ್ರಾವೀಣ್ಯತೆ ಮುಂತಾದ ಪರಿಕಲ್ಪನೆಗಳು ಯಾರಿಗೂ ಪರಿಚಯ ಇರಲಿಲ್ಲ. ಉತ್ಪಾದನೆ, ಹಂಚುವಿಕೆ, ರಕ್ಷಣೆ, ಆರೋಗ್ಯ ರಕ್ಷಣೆ ಮುಂತಾದ ಕೆಲಸಗಳು ಎಲ್ಲರಿಗೂ ತಿಳಿದ ವಿಷಯಗಳಾಗಿದ್ದವು. ಸಮುದಾಯದ ಎಲ್ಲ ಸದಸ್ಯರು ಒಬ್ಬರಿಗೊಬ್ಬರು ಸಹಕರಿಸಿ ಅನ್ಯೋನ್ಯ ಜೀವನ ನಡೆಸುತ್ತಿದ್ದರು. ಇಂದಿನ ಸಮುದಾಯ ಸಂಘಟಕರು ನಿರೀಕ್ಷಿಸುವ ಸ್ವಸಹಾಯ, ಸ್ವಾವಲಂಬನೆ, ಫಲಾನುಭವಿಗಳ ಭಾಗವಹಿಸುವಿಕೆ, ಸಂಯೋಜನೆ, ಸಂಘಟನೆ, ನಾವು ಎನ್ನುವ ಭಾವನೆ, ಒಮ್ಮತ, ಒಗ್ಗಟ್ಟು ಮುಂತಾದ ಪರಿಕಲ್ಪನೆಗಳನ್ನು ಸ್ವಾಭಾವಿಕವಾಗಿಯೇ ಅವರು ರೂಢಿಸಿಕೊಂಡಿದ್ದರು. ಅದಕ್ಕಾಗಿ ಅವರಿಗೆ ಯಾರೂ ವೃತ್ಯಾತ್ಮಕ ತರಬೇತಿ ಕೊಡುವ ವ್ಯವಸ್ಥೆ ಇದ್ದಿಲ್ಲ. ಬದಲಾದ ಪರಿಸ್ಥಿತಿ ಕಾಲಕ್ರಮದಲ್ಲಿ ಬದಲಾವಣೆಗಳಾದವು. ಪಾರಸ್ಪರಿಕ ನೆರವಿನ ಸಮಾಜವು ನಿಧಾನವಾಗಿ, ಎಲ್ಲಾ ದೃಷ್ಟಿಗಳಿಂದಲೂ, ವರ್ಗ ಸಮಾಜಕ್ಕೆ ಹಾದಿಮಾಡಿಕೊಟ್ಟಿತು. ಸಮುದಾಯದ ಇಡಿಯ ಅಸ್ತಿತ್ವವನ್ನು ಎಡೆಬಿಡದೆ ಅದರ ಉದ್ದಗಲಕ್ಕೂ ವ್ಯಾಪಿಸಿ ಜೀವನದ ಮಾರ್ಗವೇ ಆಗಿರಬೇಕಾದ ಯಜ್ಞವು ಆಗಾಗ (ನಿಯತಕಾಲಿಕವಾಗಲೀ ಅಥವಾ ಬೇಕೆಂದಾಗ) ನೆರವೇರಿಸುವಂಥ ಧರ್ಮಾಚರಣೆಯ ಸಮಾರಂಭವಾಗಿ ರೂಪುಗೊಂಡಿತು.10 ಆಗಲೂ ಎಲ್ಲರೂ ಒಟ್ಟಾಗಿ ಯಜ್ಞ ಮಾಡಿ, ಅದರಿಂದ ಬಂದ ಫಲವನ್ನು ಹಂಚಿಕೊಳ್ಳುವ ಪದ್ಧತಿಯಿತ್ತು. ಆದರೆ ಈ ಬದಲಾದ ಪರಿಸ್ಥಿತಿಯಲ್ಲಿ ಸತ್ರ ಮತ್ತು ಕ್ರತುಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡು ಬೇರೆ ಅರ್ಥವ್ಯಾಪ್ತಿಯನ್ನು ಪಡೆಯುವಂತಾಯಿತು. ಆನಂತರ, ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ, ವ್ಯಕ್ತಿಯ ಗುಣ ಮತ್ತು ಕರ್ಮ (ಮಾಡುವ ಕೆಲಸ)ಗಳ ಆಧಾರದ ಮೇಲೆ ವರ್ಣಗಳು ಸೃಷ್ಟಿಯಾದವು. ನಿರಂತರವಾಗಿ ನಡೆಯುತ್ತಿದ್ದ ಯಜ್ಞ ಕ್ರಿಯೆಯು ಕಾಲಕಾಲಕ್ಕೆ ಅಥವಾ ಬೇಕೆಂದಾಗ ಮಾಡುವ ಕ್ರಿಯಾವಿಧಿಯಾಗಿ ಉಳಿಯುವಂತಾಯಿತು. ರಾಜರು ಹಾಗೂ ಹಣವಂತರು, ಋತ್ವಿಜರ ಮಾರ್ಗದರ್ಶನದಲ್ಲಿ ಬೇಕೆಂದಾಗ ನೆರವೇರಿಸುವ ಆರಾಧನಾ ಪದ್ಧತಿಯಾಯಿತು. ಯಜ್ಞದಲ್ಲಿ ಭಾಗವಹಿಸಿದ ಎಲ್ಲರಿಗೂ, ಅದರ ಫಲ ಸಿಗುತ್ತದೆಂಬ ಕಲ್ಪನೆಯನ್ನು ಜನರು ನಂಬುವಂತಾಯಿತು. ಋತ್ವಿಜರಲ್ಲಿ ಯಜ್ಞಗಳನ್ನು ಮಾಡಿಸುವ, ಯಾಜ್ಞಿಕರು ಎಂದು ಕರೆಯಲ್ಪಡುವ ಒಂದು ಉಪವರ್ಗವೇ ಅಸ್ತಿತ್ವಕ್ಕೆ ಬಂದಿತು. ರಾಜರು, ಋತ್ವಿಜರ ಮಾರ್ಗದರ್ಶನದಲ್ಲಿ ಯಜ್ಞಗಳನ್ನು ಮಾಡುವಂತಾಯಿತು ಅಥವಾ ಋತ್ವಿಜರು ಮಾಡುವ ಯಜ್ಞಗಳಿಗೆ ಖರ್ಚನ್ನು ಭರಿಸುವುದು, ರಕ್ಷಣೆಯನ್ನು ಒದಗಿಸುವುದು ಮುಂತಾದ ಪದ್ಧತಿಗಳು ಜಾರಿಗೆ ಬಂದವು. ಈ ಬದಲಾದ ಪರಿಸ್ಥಿತಿಯಲ್ಲಿ ದಾನ ತನ್ನ ಮೂಲ ಅರ್ಥವನ್ನು (ಹಂಚುವುದು) ಕಳೆದುಕೊಂಡು, ಯಜ್ಞಕರ್ತೃ (ರಾಜ, ಹಣವಂತ ಇತ್ಯಾದಿ) ಪುಣ್ಯಸಂಚಯಕ್ಕಾಗಿ ಕೊಡುವ ಒಂದು ಕ್ರಿಯೆಯಾಗಿ ಮಾರ್ಪಾಟಾಯಿತು. ದಾನ ಹಿಂದಿನ ದಿನಗಳಲ್ಲಿ ಒಂದು ಸಾರ್ವತ್ರಿಕ ಕ್ರಿಯೆಯಾಗಿದ್ದು, ಈಗ ಅದು ಒಂದು ಖಾಸಗಿ ಚಟುವಟಿಕೆಯಾಗಿ ರೂಪುಗೊಂಡಿತು. ಯಜ್ಞಕರ್ತೃ ದಾನವನ್ನು ತನಗೆ ಬೇಕಾದವರಿಗೆ (ಋತ್ವಿಜರಿಗೆ, ಬಡವರಿಗೆ, ದಾನದ ಅವಶ್ಯಕತೆ ಇರುವವರಿಗೆ (Needy) ಕೊಡುವಂತಾಯಿತು. ಕಾಲ ಬದಲಾದಂತೆ ಸಮುದಾಯದ ರಚನೆ, ಸಂಬಂಧಗಳು, ಕ್ರಿಯೆಗಳು, ಮುಂತಾದವುಗಳು ಬದಲಾದವು. ಸಾರ್ವತ್ರಿಕ ಸಮೂಹ ಜೀವನದ ಜಾಗದಲ್ಲಿ ಖಾಸಗಿ ಜೀವನ, ಆಸ್ತಿ ಸಂಗ್ರಹಣೆ, ಕೆಲಸಗಳಲ್ಲಿ ವೈವಿಧ್ಯತೆ, ವೈಯಕ್ತಿಕ ಆದಾಯ ಮುಂತಾದವುಗಳು ಅಸ್ತಿತ್ವಕ್ಕೆ ಬಂದವು. ಋಗ್ವೇದದ ನಂತರದ ಕಾಲ ಋಗ್ವೇದದ ಅಪರ ಕಾಲದಲ್ಲಿ ಯಜ್ಞಗಳ ಮುಂದಾಳತ್ವವನ್ನು ವಹಿಸಿಕೊಂಡ ಯಾಜ್ಞಿಕ ಅಥವಾ ಪುರೋಹಿತನಿಗೆ ಕುಶಲ ಸಮಾಜಕಾರ್ಯಕರ್ತನೆಂದು ಪಟ್ಟ ಕಟ್ಟಲಾಯಿತು ಎಂದು ಹೇಳುವ ಪ್ರೊ.ಶಾಸ್ತ್ರಿಯವರ ಮಾತು ಸರಿಯಾಗಿಯೇ ಇದೆ. ಯಜ್ಞದ ಖರ್ಚನ್ನು ಒದಗಿಸುವ ಯಜಮಾನ ಅಥವಾ ಗೃಹಸ್ಥ ಅರ್ಥಿಯಾಗುತ್ತಿದ್ದ. ಯಜ್ಞಕ್ಕೆ ಎಲ್ಲರೂ ತಮ್ಮ ತಮ್ಮ ಕೈಲಾದ ಕಾಣಿಕೆಯನ್ನು (ಹಣ ಇಲ್ಲವೇ ಇತರೆ ವಸ್ತುಗಳು) ಸಲ್ಲಿಸುತ್ತಿದ್ದರು. ಯಾಜ್ಞಿಕ, ಯಜ್ಞವನ್ನು ಯಶಸ್ವಿಯಾಗಿ ನಡೆಸಿ, ತಾನು ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ದಕ್ಷಿಣೆಯನ್ನು (ಹಣ ಹಾಗೂ/ಇಲ್ಲವೇ ವಸ್ತ್ರಗಳು, ವಸ್ತುಗಳು) ಪಡೆಯುತ್ತಿದ್ದ. ಈ ವ್ಯವಸ್ಥೆಯಲ್ಲಿ ಒಂದು ಸಮುದಾಯವೇ ಅರ್ಥಿಯಾಗಿರುವುದನ್ನು ಕಾಣಬಹುದಾಗಿದೆ. ಯಜ್ಞದ ಜಾಗವನ್ನು ಬದಲಾಯಿಸಿ ಬೇರೆ ಪ್ರದೇಶದ ಸಮುದಾಯದ ಸದಸ್ಯರಿಗೂ ಯಜ್ಞದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು.11 ಈ ಯಜ್ಞ ಪ್ರಕಾರದಲ್ಲಿಯೂ ಸಮುದಾಯದ ಎಲ್ಲ ಸದಸ್ಯರು ಹಣ, ವಸ್ತುಗಳು, ಶ್ರಮದಾನ ಮುಂತಾದ ರೂಪಗಳಲ್ಲಿ ತಮ್ಮ ದೇಣಿಗೆಯನ್ನು ಸಲ್ಲಿಸುತ್ತಿದ್ದರು ಮತ್ತು ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿದ್ದರು. ಪ್ರತಿಫಲ, ಅಲ್ಲಿ ಸಿಗುವ ಅನುಕೂಲಗಳ ಜೊತೆಗೆ, ಪುಣ್ಯ ಸಂಪಾದನೆಯ ರೂಪದಲ್ಲಿ ಸಂಚಯಗೊಳ್ಳುತ್ತದೆಯೆಂದೂ, ಅದನ್ನು ಜನ್ಮ ಜನ್ಮಾಂತರಗಳಲ್ಲಿ, ಸ್ವರ್ಗದಲ್ಲಿ ಅನುಭವಿಸಬಹುದೆಂಬ ಕಲ್ಪನೆಯೂ ವೃದ್ಧಿಗೊಂಡಿತು. ಯಜ್ಞದ ಮೂಲಕ ಸಮುದಾಯಕ್ಕೆ ನೀಡಿದ ಸೇವೆಯೆಂದರೆ ಶ್ರಮದಾನ ದಿಂದ ಕೃಷಿಯ ಸಹಕಾರ, ಅನ್ಯರ ಆಕ್ರಮಣದ ವಿರುದ್ಧವಾಗಿ ಸಮುದಾಯದ ರಕ್ಷಣೆ, ಸಾರ್ವಜನಿಕ ಆರೋಗ್ಯ ಮತ್ತು ವಾತಾವರಣದ ನೈರ್ಮಲ್ಯ ಹಾಗೂ ದುಃಸ್ಥಿತಿಯಲ್ಲಿರುವವರಿಗೆ ಉಪಶಮನ ನೀಡಿಕೆ ಮತ್ತು ಅವರ ಕ್ಷೇಮ. ನಿಜವಾಗಿ ಹೇಳಬೇಕೆಂದರೆ, ಜನರು ಪ್ರಾಕೃತಿಕ ವಿಕೋಪಗಳಿಗೆ ಪಕ್ಕಾಗುತ್ತಿದ್ದರೂ ಈ ರೀತಿಯ ಸಮುದಾಯ ಸಂಘಟನೆಯಿಂದ ಅವರು ಸಂಪೂರ್ಣ ಸಾಮಾಜಿಕ ಭದ್ರತೆಯನ್ನು ಅನುಭೋಗಿಸುತ್ತಿದ್ದರು.12 ವೇದಕಾಲ ನಂತರದ ಬ್ರಾಹ್ಮಣಗಳ ಸಮಯದಲ್ಲಿ ಕ್ರಿಯಾವಿಧಿಗಳಿಗೆ ಹೆಚ್ಚು ಆದ್ಯತೆಯನ್ನು ಕೊಟ್ಟಿತ್ತಾದರೂ, ಅರಣ್ಯಕಗಳ ಸಮಯದಲ್ಲಿ, ಯಾಜ್ಞಿಕ ಪದ್ಧತಿಯ ಕೆಲವು ಭಾಗಗಳು ನಿಗೂಢವೂ ಹಾಗೂ ಇಂದ್ರಿಯಾತೀತ ರಹಸ್ಯಮಯವೂ ಆದುದರ ಹಿನ್ನೆಲೆಯಲ್ಲಿ, ಧ್ಯಾನ ಭಾಗಕ್ಕೆ ಹೆಚ್ಚು ಮಹತ್ವವನ್ನು ಕೊಡುವಂತಾಯಿತು. ಇದೇ ಪ್ರವೃತ್ತಿ ಉಪನಿಷತ್ಕಾಲದಲ್ಲಿಯೂ ಮುಂದುವರೆಯಿತು. ಇದರ ಪರಿಣಾಮವಾಗಿ ಉಪನಿಷತ್ತುಗಳಲ್ಲಿ ಜ್ಞಾನಕ್ಕೆ, ತಾತ್ವಿಕ ಚಿಂತನೆಗಳಿಗೆ, ಚರ್ಚೆ ಹಾಗೂ ಸಿದ್ಧಾಂತಗಳ ಸ್ಥಾಪನೆಗೆ ಮೀಸಲಿಡಲಾಯಿತು. ಆ ನಂತರದ ಭಗವದ್ಗೀತೆಯಲ್ಲಿಯೂ, ಕರ್ಮಯೋಗಕ್ಕಿಂತ ಜ್ಞಾನ ಯೋಗ ಉತ್ತಮ ಮತ್ತು ಅದು ಧ್ಯಾನಯೋಗಕ್ಕೆ ಕೊಂಡೊಯ್ಯುತ್ತದೆ ಎಂಬ ಕಾರಣಕ್ಕಾಗಿ, ಈ ಮಾತನ್ನು ಪುನರುಚ್ಚರಿಸಲಾಯಿತು. ಹಾಗಾಗಿ ಯಜ್ಞಕ್ಕೆ ಮುಂಚೆ ಇದ್ದ ಪ್ರಾಮುಖ್ಯತೆಯಲ್ಲಿ, ಸಾಮೂಹಿಕ ಭಾಗವಹಿಸುವಿಕೆಯಲ್ಲಿ ಸ್ಪಲ್ಪಮಟ್ಟಿನ ಬದಲಾವಣೆಯನ್ನು ಕಾಣಲಾಯಿತು. ಪಂಚ ಮಹಾಯಜ್ಞಗಳು ಆನಂತರದ ದಿನಗಳಲ್ಲಿ, ವೇದಗಳಿಂದ ಅನುಮೋದಿಸಲ್ಪಟ್ಟ ಶ್ರೋತ ಯಜ್ಞಗಳ ಪ್ರಾಮುಖ್ಯತೆ ಕಡಿಮೆಯಾಗಿ, ಅವುಗಳ ಸ್ಥಾನದಲ್ಲಿ ಪ್ರಕೃತಿ ಮತ್ತು ಸಮಾಜದ ವಿರುದ್ಧ ಎಸಗಿದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಪಂಚ ಮಹಾಯಜ್ಞಗಳನ್ನು ಸೃಷ್ಟಿಸಲಾಯಿತು.13 ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ಮನುಷ್ಯಯಜ್ಞ, ಇವೇ ಆ ಐದು ಮಹಾಯಜ್ಞಗಳು, ಇದರಲ್ಲಿದ್ದ ಬ್ರಹ್ಮಯಜ್ಞ ವೇದ ಪ್ರಣೀತವೇ. ಆದರೆ ಇದರ ಪ್ರಾಮುಖ್ಯತೆ, ಮಾಡುವ ವಿಧಾನ, ಸಮುದಾಯದ ಸದಸ್ಯರ ಭಾಗವಹಿಸುವಿಕೆ ಇವುಗಳಲ್ಲಿ ಬದಲಾವಣೆ ಬಂದಹಾಗೆ ಕಾಣಿಸುತ್ತದೆ. ದೇವತೆಗಳ ಪ್ರೀತಿಗಾಗಿ, ಅವರ ಕೃಪೆಗಾಗಿ ಮಾಡುವ ಯಜ್ಞ ದೇವಯಜ್ಞ, ಹಿರಿಯ ಪೀಳಿಗೆಗೆ, ಜನಾಂಗದ ಹಿರಿಯ ಜೀವಿಗಳಿಗೆ ಅವರ ಮರಣ ನಂತರ, ನಿಯತಕಾಲಿಕವಾಗಿ ಮಾಡುವ ಆಚರಣೆಗೆ ಪಿತೃಯಜ್ಞ ಎನ್ನುತ್ತಾರೆ. ಮೃತರಾದ ಹಿರಿಯರಿಗೆ ಆಗಿಂದಾಗ್ಗೆ ಮಾಡುವ ಪಕ್ಷ, ವೈದೀಕ, ತರ್ಪಣ ಮಾಡುವುದು/ಕೊಡುವುದು ಪಿತೃಯಜ್ಞ. ದುರ್ಬಲರು, ಪತಿತರು, ರೋಗಿಗಳು, ಪಶು ಪಕ್ಷಿಯಾದಿ ಇತರ ಜೀವಿಗಳಿಗೆ ಆಹಾರಾದಿಗಳನ್ನು ಒದಗಿಸುವುದು ಭೂತಯಜ್ಞ. ಇಂತಹವರಿಗೆ, ಜೀವಿಗಳಿಗೆ ಆಹಾರ ಒದಗಿಸಿದರೆ ಅವರ ಅಂತರ್ಯಾಮಿಯಾದ ದೇವರು ಪ್ರೀತನಾಗುತ್ತಾನೆ ಮತ್ತು ಪರಿಣಾಮವಾಗಿ ದೇವರು ನಮಗೆ ಒಳ್ಳೆಯದನ್ನು ಮಾಡುತ್ತಾನೆಂಬ ಗ್ರಹಿಕೆ ಈ ಯಜ್ಞದ ಮನೋಭೂಮಿಕೆಯಾಗಿರುತ್ತದೆ. ಭೂತದಯೆ ಈ ಯಜ್ಞದ ತಿರುಳು. ಪ್ರತಿಯೊಬ್ಬ ವ್ಯಕ್ತಿ ಇತರರನ್ನು ತನ್ನವರೆಂದು ಭಾವಿಸಿ ಅವರೊಡನೆ ಸಹಕರಿಸಿ, ಅವರೊಡನೆ ಸಹಜೀವನ ನಡೆಸಲು ಸಹಕಾರಿಯಾಗುವಂತೆ ಮನುಷ್ಯನು ಸಿದ್ಧಗೊಳಿಸಿ, ನಿರ್ಗತಿಕರಿಗೆ, ದುರ್ಬಲರಿಗೆ, ಅನಾಥರಿಗೆ, ಸ್ತ್ರೀಯರಿಗೆ, ಮಕ್ಕಳಿಗೆ, ಅತಿಥಿಗಳಿಗೆ, ಉತ್ತಮರಿಗೆ, ಋಷಿಗಳಿಗೆ, ಸದ್ಬ್ರಾಹ್ಮಣರಿಗೆ, ಇತರರಿಗೆ ಸತ್ಕಾರ, ಊಟ ಉಪಚಾರ, ಸಹಾಯ, ದಾನ ಮುಂತಾದವುಗಳನ್ನು ಮಾಡುವುದು/ಕೊಡುವುದು ಮನುಷ್ಯ ಯಜ್ಞ. ಈ ಯಜ್ಞಗಳನ್ನು ಮಾಡುತ್ತಾ ಗೃಹಸ್ಥನು ಪರಿಶುದ್ಧನೂ, ಪವಿತ್ರನೂ ಪರೋಪಕಾರಿಯೂ ಆಗುವುದೇ ಇವುಗಳ ಉದ್ದೇಶ. ಇದರಿಂದ ಸಮುದಾಯಕ್ಕೆ ಒಳಿತು. ಸಮಾಜ ಕಾರ್ಯಕರ್ತರೂ, ಸಮುದಾಯ ಸಂಘಟಕರೂ ಮಾಡುವುದೂ ಇದನ್ನೇ ತಾನೆ. ಈ ಯಜ್ಞಗಳನ್ನು ಮಾಡಿದರೆ ಕರ್ತೃವಿಗೆ (ಯಜ್ಞ ಮಾಡಿದವನಿಗೆ) ಈ ಜನುಮದಲ್ಲಿ ಮತ್ತು ಮುಂಬರುವ ಜನ್ಮಗಳಲ್ಲಿ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂಬ ಪರಿಕಲ್ಪನೆಯೇ ಈ ಯಜ್ಞಗಳ ಹಿಂದಿರುವ ತತ್ತ್ವ. ಹಾಗಾಗಿ ರಾಜರು, ಹಣವಂತರು, ಋಷಿಮುನಿಗಳು, ಗೃಹಸ್ಥರು ಯಜ್ಞಗಳನ್ನು ಮಾಡುತ್ತಿದ್ದರು. ಈ ಮೊದಲೇ ಹೇಳಿದಂತೆ ಅಂದಿನ ಸಮುದಾಯಗಳು ತುಂಬಾ ಚಿಕ್ಕವಿದ್ದವು. ಅವುಗಳ ಮುಖ್ಯಸ್ಥನನ್ನು ರಾಜನೆಂದು ಸಂಬೋಧಿಸಲಾಗುತ್ತಿತ್ತು. ಇಂತಹ ರಾಜನು ತನ್ನ ರಾಜ್ಯದ ಆಡಳಿತವನ್ನು ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದನು. ಅವನಿಗೆ ಸಲಹೆ ಸೂಚನೆಗಳನ್ನು ಕೊಡಲು, ಮಾರ್ಗದರ್ಶನ ಮಾಡಲು ಮಂತ್ರಿಗಳು, ರಾಜಗುರುಗಳು, ಪುರೋಹಿತರು ಮುಂತಾದವರು ಇರುತ್ತಿದ್ದರು. ರಾಜನು ತನ್ನ ಪ್ರಜೆಗಳ ರಕ್ಷಣೆಯೂ ಸೇರಿದಂತೆ ಅವರ ಸಮಗ್ರ ಒಳಿತಿಗೆ ಶ್ರಮಿಸುತ್ತಿದ್ದನು. ರಾಜನು ಎರಡು ಸಂದರ್ಭಗಳಲ್ಲಿ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದ. ಒಂದು, ಶತೃಗಳಿಂದ ಮತ್ತು ಇತರೆ ಸಮುದಾಯಗಳಿಂದ ತನ್ನವರನ್ನು ರಕ್ಷಿಸಲು, ಇನ್ನೊಂದು, ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸಲು, ರಾಜ್ಯವನ್ನು ವಿಸ್ತರಿಸಲು. ಸಾರ್ವಭೌಮತ್ವವನ್ನು ಪ್ರತಿಪಾದಿಸಲು ಅಶ್ವಮೇಧಯಾಗದಂತಹ ಯಾಗಗಳ ಅಂಗವಾಗಿ ಯುದ್ಧಗಳನ್ನು ಮಾಡಬೇಕಾಗಿತ್ತು. ಸೋತವರು ಗೆದ್ದವರಿಗೆ ಕಷ್ಟಕಾಣಿಕೆಗಳನ್ನು (ಬಂಗಾರದ ಆಭರಣಗಳು, ಯುದ್ಧ ಸಾಮಗ್ರಿಗಳು, ವಸ್ತ್ರಗಳು ಹಣ ಇತ್ಯಾದಿ) ಸಲ್ಲಿಸುತ್ತಿದ್ದರು. ಗೆದ್ದ ರಾಜನು ತನ್ನ ಯಾಗದ ನಂತರ ಈ ಸಂಪತ್ತನ್ನು ಯಜ್ಞ ಮಾಡಿಸಿದ ಋತ್ವಿಜರಿಗೆ, ಬಡವರಿಗೆ, ದೀನರಿಗೆ, ಅವಶ್ಯವಿದ್ದವರಿಗೆ ಉದಾರವಾಗಿ ಕೊಡುತ್ತಿದ್ದ. ಇದು ನಮ್ಮ ಪುರಾಣಗಳಲ್ಲಿ ದಾಖಲಾಗಿದೆ. ಅಂದಿನ ರಾಜನು ತಾನೂ ಯಜ್ಞಗಳನ್ನು ಮಾಡುತ್ತಿದ್ದ. ಋಷಿಗಳು, ಋತ್ವಿಜರು, ಯಾಜ್ಞಿಕರು ಯಜ್ಞಗಳನ್ನು ಮಾಡುವ ಪ್ರಸ್ತಾವನೆಯನ್ನು ಮಂಡಿಸಿದರೆ, ಅವರಿಗೆ ಯಜ್ಞಕ್ಕೆ ಬೇಕಾದ ಎಲ್ಲಾ ಪರಿಕರಿಗಳನ್ನು ಒದಗಿಸುತ್ತಿದ್ದ. ಇದಕ್ಕೆ ರಾಮಾಯಣದಲ್ಲಿನ ಒಂದು ಉದಾಹರಣೆಯನ್ನು ನೋಡಬಹುದು. ಮಹರ್ಷಿ ವಿಶ್ವಾಮಿತ್ರ ಯಜ್ಞ ಮಾಡಲು ಸಂಕಲ್ಪಿಸಿ, ದಶರಥ ಚಕ್ರವರ್ತಿಯನ್ನು ಕಂಡು ತನ್ನ ಯಜ್ಞ ಸಂಕಲ್ಪದ ವಿಷಯವನ್ನು ತಿಳಿಸುತ್ತಾರೆ. ಯಜ್ಞವು ಯಾವ ಅಡೆತಡೆ ಇಲ್ಲದೆ, ಸಾಂಗವಾಗಿ ನಡೆಯಲು, ಮುಂದೆ ಒದಗಬಹುದಾದ ರಾಕ್ಷಸರ (ಯಜ್ಞಕ್ಕೆ ಧಕ್ಕೆ ತರುವವರು) ಕಿರುಕುಳವನ್ನು ನಿರೀಕ್ಷಿಸಿ, ಯಜ್ಞ ರಕ್ಷಣೆಗೆ, ದಶರಥನ ಮಗ ರಾಮಚಂದ್ರನನ್ನೇ ಕಳಿಸಿಕೊಡು ಎಂದು ವಿನಂತಿಸಿಕೊಳ್ಳುತ್ತಾರೆ. ಜೊತೆಗೆ ಯಜ್ಞದ ರಕ್ಷಣೆ ರಾಜನ ಕರ್ತವ್ಯಗಳಲ್ಲಿ ಒಂದು ಎಂದು ನೆನಪಿಸುತ್ತಾನೆ. ಅದೇ ಸಭೆಯಲ್ಲಿ ಉಪಸ್ಥಿತರಿದ್ದ ರಾಜಗುರು ವಶಿಷ್ಠ ಮಹರ್ಷಿ, ದಶರಥನಿಗೆ ರಾಮಚಂದ್ರನನ್ನು ಕಳಿಸಿಕೊಡಲು ಮಾರ್ಗದರ್ಶನ ಮಾಡುತ್ತಾನೆ. ಅದರಂತೆ ದಶರಥನು ತನ್ನ ಮಕ್ಕಳಾದ ರಾಮ ಲಕ್ಷ್ಮಣರನ್ನು ಯಜ್ಞ ರಕ್ಷಣೆಗೆ ಕಳಿಸುತ್ತಾನೆ. ಇದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಒಂದು; ರಾಜನು, ಋತ್ವಿಜರು ಯಜ್ಞ ಮಾಡಿದರೆ, ಅವರಿಗೆ ಯಜ್ಞಪರಿಕರಗಳನ್ನು ಒದಗಿಸುವುದು ಜೊತೆಗೆ, ಯಜ್ಞರಕ್ಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಎರಡು; ರಾಜನಿಗೆ ತನ್ನ ಕರ್ತವ್ಯದ ಬಗ್ಗೆ ಎಚ್ಚರಿಸಿ, ಅವನಿಗೆ ಮಾರ್ಗದರ್ಶನ ಮಾಡಿದ್ದಾರೆ. ಒಬ್ಬ ಸಮುದಾಯ ಸಂಘಟಕ ಮಾಡುವ ಕೆಲಸವನ್ನೇ ಆ ಸಂದರ್ಭದಲ್ಲಿ ಮಹರ್ಷಿ ವಶಿಷ್ಠರು ಮಾಡಿದ್ದಾರೆ. ಈ ಯಜ್ಞಗಳ ಭಾಗವಾಗಿ ಇಷ್ಟಾಪೂರ್ತ ಪದ್ಧತಿಯನ್ನು ವಿಧಿಸಲಾಯಿತು. ಇಷ್ಟಗಳು, ಯಜ್ಞ ಯಾಗಾದಿಗಳ ಸಂಬಂಧಿ, ಕ್ರಿಯಾವಿಧಿಯಾಗಿ ಅಗ್ನಿಗೆ ಸಲ್ಲಿಸುವ ನಿವೇದನೆಗಳು, ಅಲ್ಲದೆ ಸ್ತೋತ್ರ ಪದ್ಯಗಳು, ಮಂತ್ರಾಭಿಚಾರಗಳು ಇಇ. ಪೂರ್ತವು ವಾಪಿ, ಕೂಪ, ತಟಾಕಾದಿಗಳನ್ನು ಅಂದರೆ, ಬಾವಿ, ಕೆರೆ, ಜಲಸಂಗ್ರಹ, ಕಾಲುವೆ, ಇತ್ಯಾದಿಗಳನ್ನು ನಿರ್ಮಿಸುವುದು; ಮರಗಳನ್ನು ನೆಡುವುದು; ಅರಣ್ಯಗಳನ್ನು ಬೆಳೆಸುವುದು; ದೇವಸ್ಥಾನ, ಛತ್ರ (ಸತ್ರ), ಆರಾಮಧಾಮ (ಯಾತ್ರಾರ್ಥಿಗಳಿಗೆ, ಪ್ರಯಾಣಿಕರಿಗೆ ಇರುವ ವಿಶ್ರಾಂತಿ ಧಾಮಗಳು), ಶಾಲೆ, ಆಸ್ಪತ್ರೆ, ಇತ್ಯಾದಿಗಳನ್ನು ಕಟ್ಟಿಸುವುದು; ರಸ್ತೆ, ಉದ್ಯಾನ, ಸಾರ್ವಜನಿಕ ತೋಟ ವಿನ್ಯಾಸಗೊಳಿಸುವುದು, ಸ್ನಾನಘಟ್ಟ, ಸೇತುವೆ ಇಇ ನಿರ್ಮಿಸುವುದು, ಈ ಎಲ್ಲಾ ಕಾರ್ಯಗಳನ್ನು ಔಪಚಾರಿಕವಾಗಿಯೂ, ಸಮಾರಾಧನೆಯ ಮೂಲಕವಾಗಿಯೂ ದೇವಪೂಜೆಯೆಂದು, ಜನಸೇವೆಗೆಂದು (ಜನಸೇವೆಯೂ ಜನಾರ್ಧನನ ಸೇವೆಯೇ, ದೇವಪೂಜೆಯೇ) ಅರ್ಪಿಸಲಾಗುತ್ತಿತ್ತು.14 ಅತಿಥಿಗಳಿಗೆ ವೈಯಕ್ತಿಕ ವಸ್ತುಗಳಿಂದ, ಅಪೇಕ್ಷಿತಗಳಿಂದ ಆದರಿಸುವುದೂ ಇಷ್ಟವೇ. ಇಂದಿನ ಸಮಾಜಕಾರ್ಯ ಪರಿಭಾಷೆಯಲ್ಲಿ ಹೇಳುವುದಾದರೆ ಇಷ್ಟಗಳನ್ನು ಪೂರೈಸುವುದನ್ನು ವ್ಯಕ್ತಿಗತ ಸಮಾಜಕಾರ್ಯವೆಂತಲೂ, ಪೂರ್ತಗಳನ್ನು ಪೂರೈಸುವುದನ್ನು ವೃಂದಗತ ಸಮಾಜಕಾರ್ಯ ಹಾಗೂ ಸಮುದಾಯ ಸಂಘಟನೆ ಎಂತಲೂ ಅರ್ಥೈಸಿಕೊಳ್ಳಬಹುದಾಗಿದೆ. ಇದರ ಮುಂದಿನ ಕಾಲದಲ್ಲಿ (ಮಹಾಭಾರತ, ಭಾಗವತ ಇತ್ಯಾದಿ ಪುರಾಣಕಾಲ) ಇಷ್ಟ-ಪೂರ್ತಗಳ ಪಟ್ಟಿಗೆ ಮನೋರೋಗ (ಮನಸ್ಸಿಗೆ ಸಂಬಂಧಪಟ್ಟ ವ್ಯಾಕುಲತೆ, ಖಿನ್ನತೆ, ವಿಷಾದ, ಚಿಂತೆ, ನಿರುತ್ಸಾಹ, ವಿಕಲತೆ, ಅಸ್ಥಿರತೆ ಇಇ)ವನ್ನು ಸೇರಿಸಿ ಅವುಗಳಿಗೆ ಚಿಕಿತ್ಸೆಯನ್ನು ಕೊಡುವುದೂ ಯಜ್ಞ-ದಾನ-ಇಷ್ಟ-ಪೂರ್ತಗಳ ವ್ಯಾಪ್ತಿಗೆ ತರಲಾಯಿತು. ಹಾಗಾಗಿ ಅಂದಿನ ರಾಜರಿಗೆ, ಸಾಮಂತರಿಗೆ, ಹಣವಂತರಿಗೆ ಬಂದ ಮನೋಜಾಢ್ಯವನ್ನು ಮಾರ್ಗದರ್ಶನ, ಆಪ್ತ ಸಲಹಾಲೋಚನಾ (Guidence, Counselling Method - case work) ಪದ್ಧತಿಗಳ ಮೂಲಕ ದೂರ ಮಾಡಿದ್ದಾರೆ. ಅಂದಿನ ಋಷಿಗಳು, ತಪಸ್ವಿಗಳು, ಯೋಗಿಗಳು, ಋತ್ವಿಜರು, ಅವತಾರ ಪುರುಷರು ಈ ಕೆಲಸವನ್ನು ಮಾಡಿದ್ದಾರೆ. ಅಂತಹ ಅನೇಕ ಉದಾಹರಣೆಗಳು ಚರಿತ್ರೆಯಲ್ಲಿ ದಾಖಲಾಗಿವೆ. ಅವುಗಳಲ್ಲಿ ಕೆಲವನ್ನು ನೋಡಬಹುದಾಗಿದೆ. ದಶರಥ ಪುತ್ರ ಶ್ರೀರಾಮಚಂದ್ರನ ಉದಾಹರಣೆಯನ್ನು ಮೇಲೆ ನೋಡಿದ್ದೇವೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಮಯದಲ್ಲಿನ, ಗೀತೆ ಎಂಬ ಅಭಿದಾನದಿಂದ ಪ್ರಸಿದ್ಧಿಯಾಗಿರುವ ಶ್ರೀಕೃಷ್ಣ - ಅರ್ಜುನ ಸಂವಾದ ಅಂತಹುದೇ ಇನ್ನೊಂದು ಉದಾಹರಣೆ. ಮಹಾಭಾರತದ ಈ ಪ್ರಸಂಗ ಎಲ್ಲರಿಗೂ ತಿಳಿದಿರುವಂತಹುದೇ. ಕುರುಕ್ಷೇತ್ರ ಯುದ್ಧ ಪ್ರಾರಂಭಿಸುವ ಮುನ್ನ ಅರ್ಜುನ ಉಭಯ ಪಕ್ಷಗಳ ವೀರರನ್ನು, ರಥಿಗಳನ್ನು, ಮಹಾರಥಿಗಳನ್ನು ನೋಡುತ್ತಾನೆ. ತಮ್ಮ ವಿರುದ್ಧ ಯುದ್ಧ ಮಾಡಲು ನಿಂತ ಎಲ್ಲರೂ ಅವನಿಗೆ ಗೊತ್ತಿದ್ದವರೇ, ಬಂಧುಗಳೆ. ದುರ್ಯೋಧನಾದಿಗಳು ಅವನಿಗೆ ದಾಯಾದಿಗಳೇ, ಅಣ್ಣ ತಮ್ಮಂದಿರೇ, ಸೇನಾದಂಡ ನಾಯಕರಾದ ಭೀಷ್ಮರು ಅವನ ಪಿತಾಮಹರು. ಮತ್ತೊಂದು ಸೇನೆಯನ್ನು ಮುನ್ನಡೆಸುತ್ತಿರುವವರು ಅವನ ವಿದ್ಯಾಗುರು ದ್ರೋಣಾಚಾರ್ಯರು. ಇನ್ನೊಂದು ದಂಡಿನ ನಾಯಕ ಸಂಸ್ಥಾನದ ಗುರು ಕೃಪಾಚಾರ್ಯರು. ಶತ್ರುಪಕ್ಷದಲ್ಲಿ ಯುದ್ಧಕ್ಕಾಗಿ ನಿಂತಿರುವ ವೀರರಲ್ಲಿ ಶಲ್ಯ ಮಹಾರಾಜ ಸೋದರ ಮಾವ, ಬ್ರಾಹ್ಮೀಕ ರಾಜ ಮುತ್ತಾತ, ಗಾಂಧಾರಾಧಿಪತಿ ಶಕುನಿ ಮಾವ, ಅಶ್ವತ್ಥಾಮ ಗುರುಪುತ್ರ ಹಾಗೂ ಸಹಪಾಠಿ, ಹೀಗೆ ಎದುರಿಗೆ ಇವರನ್ನು ಯುದ್ಧದಲ್ಲಿ ಕೊಲ್ಲಲು ಬಂದ ಎಲ್ಲರೂ ಬಂಧುಗಳೇ, ಹಿರಿಯರೇ, ಗುರುಗಳೇ, ಪರಿಚಿತರೇ ಆಗಿದ್ದರು. ಇವರನ್ನು ನೋಡಿ ಅರ್ಜುನನಿಗೆ ಆಘಾತವಾಯಿತು. ಭಯ, ಶೋಕಗಳಿಂದ ಕುಸಿದು ಹೋಗುತ್ತಾನೆ. ತಾವು ಯುದ್ಧದಲ್ಲಿ ಗೆಲ್ಲಬೇಕೆಂದರೆ ಇವರೆಲ್ಲರನ್ನೂ ಕೊಲ್ಲಬೇಕು. ಈ ಪರಿಸ್ಥಿತಿಯಿಂದ ಅವನು ಚಿಂತೆಗೆ ಒಳಗಾದ. ಅವರ ಬುದ್ಧಿಗೆ ಮಂಕು ಕವಿಯಿತು, ತಲೆ ಗೊಂದಲದ ಗೂಡಾಯಿತು. ಅವನು ಮಹತ್ತರವಾದ ಕ್ಷೊಭೆಗೆ ಈಡಾದ. ಈ ಹಿರಿಯರನ್ನು ಬಂಧುಗಳನ್ನು, ಗುರುಗಳನ್ನು, ಸ್ನೇಹಿತರನ್ನು ಕೊಂದು, ಯುದ್ಧದಲ್ಲಿ ಗೆದ್ದು ಪಡೆಯುವ ರಾಜ್ಯ ತನಗೆ ಬೇಡವೇ ಬೇಡ. ರಾಜ್ಯವನ್ನು ದುರ್ಯೋಧನಾದಿಗಳಿಗೇ ಬಿಟ್ಟುಕೊಟ್ಟು, ತಾನು ಸನ್ಯಾಸಿಯಾಗಿ ಅರಣ್ಯಕ್ಕೆ ಹೋಗಿ ತಪಸ್ಸನ್ನಾಚರಿಸಿ ಮೋಕ್ಷಕ್ಕಾಗಿ ಪ್ರಯತ್ನಿಸುತ್ತೇನೆಂದು ನಿರ್ಣಯಿಸಿ, ಬಿಲ್ಲುಬಾಣಗಳನ್ನು ರಥದಲ್ಲಿಟ್ಟು, ದುಃಖಿತನಾಗಿ ಕುಳಿತು ಬಿಟ್ಟ. ಈ ಸಮಯದಲ್ಲಿ ಅರ್ಜುನನ ಮನಸ್ಸು ನಿರಾಶೆಯಿಂದ, ಖಿನ್ನತೆಯಿಂದ, ಗೊಂದಲದಿಂದ ಕೂಡಿತ್ತು. ಅರ್ಜುನನ ಈ ನಿರಾಶೆಯನ್ನು ಹೋಗಲಾಡಿಸಬೇಕಾಗಿತ್ತು. ಅವನ ಅನುಮಾನಗಳನ್ನು, ಗೊಂದಲಗಳನ್ನು ಪರಿಹರಿಸಬೇಕಾಗಿತ್ತು. ಅವನನ್ನು ಖಿನ್ನತೆಯಿಂದ ಹೊರತರಬೇಕಾಗಿತ್ತು. ಅವನಿಗೆ ಪರಿಸ್ಥಿತಿಯ ಅರಿವನ್ನು ಉಂಟುಮಾಡಬೇಕಾಗಿತ್ತು. ಅವನ ಕರ್ತವ್ಯದ ಬಗ್ಗೆ ಅವನಿಗೆ ತಿಳಿಹೇಳಬೇಕಾಗಿತ್ತು. ಅವನ ಮನಸ್ಸನ್ನು ಪರಿವರ್ತಿಸಿ ಅವನನ್ನು ಯುದ್ಧಕ್ಕೆ ಅಣಿಗೊಳಿಸಬೇಕಾಗಿತ್ತು. ಒಟ್ಟಾರೆಯಾಗಿ ಪರಿಸ್ಥಿತಿಯನ್ನು ನಿಭಾಯಿಸಿ, ಯುದ್ಧವನ್ನು ಏರ್ಪಡಿಸಿ, ಯುದ್ಧದಲ್ಲಿ ಗೆದ್ದು, ಧರ್ಮರಾಜ್ಯವನ್ನು ಸಂಘಟಿಸಬೇಕಾಗಿತ್ತು. ಅರ್ಜುನನ ಮನಸ್ಸಿನ ಪರಿವರ್ತನೆಗೆ ಒಬ್ಬ ಮನಸೋಪಚಾರಕ ಬೇಕಾಗಿತ್ತು. ಯುದ್ಧದ ಅವಶ್ಯಕತೆ, ತಾತ್ವಿಕ ಹಿನ್ನೆಲೆ, ಬದುಕಿನ ಧ್ಯೇಯೋದ್ಧೇಶಗಳು, ಅವನ್ನು ಕಂಡುಕೊಳ್ಳುವ ವಿಧಾನ, ಧರ್ಮ, ಕರ್ತವ್ಯ ಮುಂತಾದ ವಿಷಯಗಳನ್ನು ತಿಳಿಸಿ ಅವನ ಪ್ರವೃತ್ತಿಯಲ್ಲಿ ಮಾರ್ಪಾಟನ್ನು ತರಬೇಕಾಗಿತ್ತು. ಇದನ್ನು ಒಬ್ಬ ಮನಃಶಾಸ್ತ್ರಜ್ಞ, ಒಬ್ಬ ಮನಸೋಪಚಾರಕ ಮಾಡಬಲ್ಲ. ಅದನ್ನು ಪುರುಷೋತ್ತಮ, ಧರ್ಮರಕ್ಷಕ, ವೇದಾಂತ ಪ್ರವರ್ತಕ, ರಾಜಕೀಯ ಮುತ್ಸದ್ಧಿ, ದೀಮಂತ ಸಂಘಟಕನಾದ ಶ್ರೀಕೃಷ್ಣ ಬಹು ಯಶಸ್ವಿಯಾಗಿ ಮಾಡಿದ. ಪ್ರಾರಂಭದ ಹಂತದಲ್ಲಿ ಅರ್ಜುನನಿಗೆ ಬಂದ ಅನುಮಾನಗಳಷ್ಟೇ ಅಲ್ಲದೆ, ಅವರ ಸಂವಾದದುದ್ದಕ್ಕೂ ಬಂದ ಇತರೆ ಸಂದೇಹಗಳನ್ನು ಯಶಸ್ವಿಯಾಗಿ ಪರಿಹರಿಸಿ, ಅವನ ಮಾನಸಿಕ ಪರಿವರ್ತನೆಯನ್ನು ಮಾಡಿದ. ಅವನ ಕರ್ತವ್ಯದ ಬಗ್ಗೆ ಅವನನ್ನು ಎಚ್ಚರಿಸಿದ. ಅವನನ್ನು ಯುದ್ಧಕ್ಕೆ ಅಣಿಗೊಳಿಸಿದ. ಮುಂದೆ ನಡೆದದ್ದು ಇತಿಹಾಸ. ಈ ಪ್ರಸಂಗದಲ್ಲಿ ಅರ್ಜುನ ಅರ್ಥಿಯಾದರೆ ಶ್ರೀಕೃಷ್ಣ ಒಬ್ಬ ಸಮಾಜಕಾರ್ಯಕರ್ತ, ಒಬ್ಬ ಮನಃಶಾಸ್ತ್ರಜ್ಞ, ಒಬ್ಬ ಮನಸೋಪಚಾರಕ ಹಾಗೂ ಒಬ್ಬ ಸಂಘಟಕನಾಗಿ ಕಾರ್ಯ ನಿರ್ವಹಿಸಿದ. ಈ ಪ್ರಕ್ರಿಯೆಯಲ್ಲಿ ಶ್ರೀ ಕೃಷ್ಣ ಅರ್ಜುನನ ಆಧ್ಯಾತ್ಮಿಕ ಪ್ರಶ್ನೆಗಳಿಗೂ ಉತ್ತರಿಸುತ್ತಾ ಸಮಾಜಕಾರ್ಯ ಆಧ್ಯಾತ್ಮಿಕ ಪರಿಕಲ್ಪನೆಗಳನ್ನೂ ಒಳಗೊಂಡಿರುತ್ತದೆ ಎಂದು ಸಾಬೀತುಪಡಿಸಿದ. ಇದರ ಜೊತೆಗೆ ಸಮುದಾಯ ಸಂಘಟನೆಯಲ್ಲಿ, ವ್ಯಕ್ತಿಗತ ಸಮಾಜಕಾರ್ಯ ಸೇರಿದೆ ಎಂದೂ ತೋರಿಸಿಕೊಟ್ಟ. ಈ ಹಿನ್ನೆಲೆಯಲ್ಲಿ ಗೀತೆ ಒಂದು ಕಾವ್ಯ ಆಗಿರುವಂತೆ, ಒಂದು ತತ್ತ್ವಶಾಸ್ತ್ರ ಗ್ರಂಥವೂ ಹೌದು. ಹಾಗೇನೆ ಗೀತೆ ವೈದ್ಯಕೀಯ ಸಮಾಜಕಾರ್ಯಕ್ಕೆ ಉಪಯುಕ್ತವಾಗುವ ಮನಶ್ಯಾಸ್ತ್ರದ ಹೊತ್ತಗೆಯೂ ಹೌದು. ಮೇಲೆ ಇಷ್ಟಪೂರ್ತಗಳ ಬಗ್ಗೆ ಹೇಳಲಾಗಿದೆ. ಈ ಪದ್ಧತಿಗಳನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಇಷ್ಟಗಳೆಂದರೆ ಅಗ್ನಿಗೆ ಅರ್ಪಿಸುವ ನಿವೇದನೆಗಳು. ಇವುಗಳು ಹವಿಸ್ಸು (ಆಜ್ಯ-ತುಪ್ಪ, ಕ್ಷೀರ-ಹಾಲು, ಧಾನ್ಯಗಳು, ಅನ್ನ, ಒಂಬತ್ತು ತರಹದ ಒಣ ಕಟ್ಟಿಗೆಗಳು ಇತ್ಯಾದಿ), ಯಜ್ಞದಲ್ಲಿ ಆಹ್ವಾನ ಮಾಡಿದ ದೇವತೆ ಹಾಗೂ ಅಧಿದೇವತೆಗಳಿಗೆ ಸಂಬಂಧಿಸಿದ ಮಂತ್ರಗಳು ಮತ್ತು ಮಂತ್ರಾಭಿಚಾರಗಳನ್ನು ಒಳಗೊಂಡಿದೆ. ಇವುಗಳ ಬಗ್ಗೆ ಸರಿಯಾಗಿ ತಿಳಿದಿರುವ ಮತ್ತು ಸೂಕ್ತ ಮಂತ್ರಗಳನ್ನು ತಿಳಿದ ಋತ್ವಿಜರೇ ಆ ಕೆಲಸಕ್ಕೆ ನಿಯೋಜನೆಗೊಳ್ಳುತ್ತಾರೆ. ಇನ್ನು ಪೂರ್ತಗಳು. ಇದರ ಪಟ್ಟಿಯೇ ತುಂಬಾ ದೊಡ್ಡದಿದೆ. ಈ ಪೂರ್ತಗಳು ಸಾರ್ವಜನಿಕರ, ಜನಸಾಮಾನ್ಯರ, ಬಡವರ, ರೋಗಿಷ್ಠರ ಉಪಯೋಗಕ್ಕಾಗಿ ಮಾಡಿದಂತಹ ಕೆಲಸಗಳು. 1. ವಾಪಿ, ಕೂಪ, ತಟಕಾದಿಗಳನ್ನು ಅಂದರೆ ಬಾವಿ, ಕೆರೆ, ಜಲಸಂಗ್ರಹ, ಕಾಲುವೆ ಇತ್ಯಾದಿಗಳನ್ನು ನಿರ್ಮಿಸುವುದು. ಬಾವಿಗಳಲ್ಲಿ ನಾನಾವಿಧ. ಸೇದುವ ಬಾವಿ, ಇಳಿದು ನೀರು ತುಂಬುವ ಬಾವಿ, ಸಮುದಾಯ ಬಾವಿ ಇತ್ಯಾದಿ. ಕುಡಿಯುವ ನೀರಿನ ಸಲುವಾಗಿ ತೆಗೆದ ಬಾವಿಗಳು ಸೇದುವ ಬಾವಿಗಳು. ಸಾರ್ವಜನಿಕರು ಅರಣ್ಯದಿಂದ ತಮ್ಮ ದಿನಬಳಕೆಗೆ ಕಟ್ಟಿಗೆಯನ್ನು ಹೊತ್ತುಕೊಂಡು ಬರುವಾಗ, ಕಟ್ಟಿಗೆ ಭಾರವಾದರೆ ಅಲ್ಲಲ್ಲಿ ಇಳಿಸಲು ಐದು ಅಡಿ ಎತ್ತರದ ಕಲ್ಲಿನ ಬೆಂಚುಗಳನ್ನು ಮಾಡಿರುತ್ತಾರೆ. ಆ ಬೆಂಚುಗಳ ಮೇಲೆ ತಮ್ಮ ಕಟ್ಟಿಗೆಯ ಹೊರೆಯನ್ನು ಇಳಿಸಿ ಸುಧಾರಿಸಿಕೊಳ್ಳುತ್ತಾರೆ. ಆಗ ನೀರು ಕುಡಿಯಲು ಇಳಿಯುವ ಬಾವಿಗಳನ್ನು ತೋಡಿಸಿರುತ್ತಾರೆ. ಇಂತಹ ಬಾವಿಗಳು ಚಿಕ್ಕವಿದ್ದು ಆಕೃತಿಯಲ್ಲಿ ದುಂಡಗಿರುತ್ತವೆ. ಸುತ್ತಲೂ ಕಲ್ಲಿನ ಕಟ್ಟಡ ಇದ್ದು ಒಂದು ಕಡೆ ಮಾತ್ರ ಇಳಿಯುವ ಹಾಗೆ ಮೆಟ್ಟಿಲುಗಳನ್ನು ಮಾಡಿರುತ್ತಾರೆ. ಕಟ್ಟಿಗೆ ತರುವಾಗ ನೀರು ಕುಡಿದು ದಣಿವಾರಿಸಿಕೊಳ್ಳಲು ಈ ವ್ಯವಸ್ಥೆ ಇರುತ್ತದೆ. ಮತ್ತೊಂದು ಸಮುದಾಯ ಬಾವಿ. ಇದು ಇಡೀ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವಂತಹದು. ಇದಕ್ಕೆ ನಾಲ್ಕು ದಿಕ್ಕಿಗೂ ಮೆಟ್ಟಲುಗಳು ಇರಬಹುದು. ಇಲ್ಲವೇ ಮೂರು ದಿಕ್ಕಿಗೆ ಮೆಟ್ಟಲುಗಳಿದ್ದು, ಒಂದು ದಿಕ್ಕಿಗೆ ಕಪಿಲೆಯಿಂದ ನೀರೆತ್ತಲು ವ್ಯವಸ್ಥೆ ಇರುತ್ತದೆ. ಅನೇಕ ರಾಜರು ಇಂತಹ ದೊಡ್ಡ ಬಾವಿಗಳನ್ನು ಕಟ್ಟಿಸಿದ್ದಾರೆ. ಇನ್ನು ಕೆರೆ, ಜಲಸಂಗ್ರಹ ಮತ್ತು ಕಾಲುವೆಗಳು. ಕೆರೆಗಳಲ್ಲಿ ಎರಡು ವಿಧ. ಒಂದು, ದೊಡ್ಡ ಕೆರೆಗಳು, ನೂರಾರು ಎಕರೆಗಳಿಗೆ ಕೃಷಿಯ ಉದ್ದೇಶಕ್ಕಾಗಿ ನೀರನ್ನು ಒದಗಿಸುವಂತಹವು. ಇಂತಹ ಕೆರೆಗಳು ರಾಜರ ಇಲ್ಲವೇ ಗ್ರಾಮ ಪಂಚಾಯಿತಿಯ ಸ್ವಾಧೀನದಲ್ಲಿ ಇರುತ್ತಿದ್ದವು. ಇನ್ನೊಂದು, ಚಿಕ್ಕ ಕೆರೆಗಳು. ಇವು ಹತ್ತಾರು ಎಕರೆ ಬೇಸಾಯ ಮಾಡಲು ಬೇಕಾಗುವ ನೀರನ್ನು ಒದಗಿಸುತ್ತವೆ. ಸಾಮಾನ್ಯವಾಗಿ ಇಂತಹವುಗಳನ್ನು ಕುಂಟೆ ಎಂದು ಕರೆಯುವುದು ಉಂಟು. ಇಂತಹ ಕುಂಟೆಗಳು ಜಮೀನುದಾರರ, ಇಲ್ಲವೇ ದೊಡ್ಡ ರೈತರಿಂದ ಕಟ್ಟಿಸಿದಂತಹವುಗಳಾಗಿರುತ್ತಿದ್ದವು. ಇನ್ನೊಂದು ಪ್ರಕಾರದ ಜಲಸಂಗ್ರಹಗಳು ಎಂದರೆ ಗೋಕಟ್ಟೆಗಳು, ಹೊಂಡಗಳು, ಪುಷ್ಕರಣಿಗಳು. ಗೋಕಟ್ಟೆಗಳು, ಹೆಸರೇ ಹೇಳುವ ಹಾಗೆ ದನಕರುಗಳಿಗೆ ಕುಡಿಯಲು ನೀರು ಒದಗಿಸುವಂತಹ ಜಲಸಂಗ್ರಹಗಳು. ಇವುಗಳನ್ನು ಅರಣ್ಯಗಳಲ್ಲಿ, ಅರಣ್ಯಗಳ ದಾರಿಗಳಲ್ಲಿ, ಗ್ರಾಮಗಳ ಸಮೀಪದ ಪ್ರದೇಶಗಳಲ್ಲಿ ಕಟ್ಟಲಾಗುತ್ತಿತ್ತು. ಬರಗಾಲದಲ್ಲಿ ಆ ನೀರನ್ನು ಕೆಡಿಸದಂತೆ ಕಾವಲು ಇರಿಸಲಾಗುತ್ತಿತ್ತು. ಕಾಲಕಾಲಕ್ಕೆ ಅವನ್ನು ದುರಸ್ಥಿ ಮಾಡಲಾಗುತ್ತಿತ್ತು. ನಂತರ ಪುಷ್ಕರಿಣಿಗಳು, ಹೊಂಡಗಳು. ಇವು ದೇವಸ್ಥಾನಗಳ ಹತ್ತಿರ, ಆಶ್ರಮಗಳ ಹತ್ತಿರ ಹಾಗೂ ಮಠಗಳ ಹತ್ತಿರ, ಯಾತ್ರಾರ್ಥಿಗಳ ಉಪಯೋಗಕ್ಕಾಗಿ ನಿರ್ಮಿಸಿದಂತಹವು. ಕಾಲುವೆಗಳು ದೂರದ ನದಿಯಿಂದ, ಜಲಾಶಯಗಳಿಂದ ಕೃಷಿಭೂಮಿಗೆ, ದಿನಬಳಕೆಗೆ, ಬಟ್ಟೆಬರೆ ತೊಳೆಯಲು, ಸ್ನಾನ ಮಾಡಲು ಗ್ರಾಮದ ಹತ್ತಿರ-ಗ್ರಾಮದಲ್ಲಿ ತೋಡಿದಂತಹ ಜಲಮೂಲಗಳು. ಈ ಎಲ್ಲ ಜಲಮೂಲಗಳ ಮೂಲ ಉದ್ದೇಶ ಜನಸಾಮಾನ್ಯರಿಗೆ, ದನಕರುಗಳಿಗೆ ಕುಡಿಯಲು ಹಾಗೂ ದಿನಬಳಕೆಗೆ ಮತ್ತು ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುವುದು. ಇದನ್ನು ರಾಜರು, ರಾಣಿಯರು, ಅಮಾತ್ಯರು, ದಂಡನಾಯಕರು, ಸಾಮಂತರು, ಮಾಂಡಲೀಕರು ಮಾಡಿಸುತ್ತಿದ್ದರು. ಕೆಲವು ಕಡೆ ಗ್ರಾಮದ-ಗ್ರಾಮಗಳ ಜನರೇ ಒಟ್ಟುಗೊಡಿ (ಸಂಘಟನೆಗೊಂಡು) ಇಂತಹ ಜಲಮೂಲಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಇಂತಹ ಜನಪರ (ಸಮಾಜಕಲ್ಯಾಣ) ಕೆಲಸಗಳು ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದಿವೆ. ಚರಿತ್ರೆಯಲ್ಲಿ ಮಯೂರವರ್ಮ, ವಿಜಯನಗರದ ಅರಸರು, ಮೈಸೂರು ಅರಸರು, ಹೀಗೆ ಸ್ವಲ್ಪ ಹೆಚ್ಚು ಕಡಿಮೆ ಎಲ್ಲಾ ರಾಜರೂ ಇಂತಹ ಕೆಲಸಗಳನ್ನು ಮಾಡಿದ್ದಾರೆ. 2. ಅರಣ್ಯಗಳನ್ನು ರಕ್ಷಿಸುವುದು, ಬೆಳೆಸುವುದು, ರಸ್ತೆಯ ಇಕ್ಕಡೆಗಳಲ್ಲಿ ಗಿಡಗಳನ್ನು ನೆಡುವುದು ಮತ್ತು ಅವುಗಳನ್ನು ಕಾಪಾಡುವುದು ಪೂರ್ತದ ಒಂದು ಭಾಗವೇ ಆಗಿತ್ತು. ಅರಣ್ಯಗಳು ಪ್ರಕೃತಿಯ ಅಂಗಗಳೇ ಆಗಿವೆ. ಅರಣ್ಯಗಳಿಂದ ಮಳೆ ಹೆಚ್ಚು. ಮಳೆಯಿಂದ ಬೆಳೆ ಹೆಚ್ಚು. ಬೆಳೆಯಿಂದ ಸಮೃದ್ಧಿ. ಹಾಗಾಗಿ ಅರಣ್ಯಗಳನ್ನು ಬೆಳೆಸುವುದು, ರಕ್ಷಿಸುವುದು ಅವ್ಯಾಹತವಾಗಿ ಬೆಳೆದು ಬಂದಿದೆ. ಆಯುರ್ವೇದ ಶಾಸ್ತ್ರದಲ್ಲಿ, ಎಲ್ಲ ಸಸ್ಯ ಸಂಪತ್ತಿನ ಗುಣದೋಷಗಳನ್ನು ಹೇಳುವುದರ ಜೊತೆಗೆ ಅವುಗಳ ರಕ್ಷಣೆಯ ಬಗ್ಗೆಯೂ ತಿಳಿಸಲಾಗಿದೆ. ಚರಿತ್ರೆಯ ಉದ್ದಕ್ಕೂ ಗ್ರಾಮ ಪಂಚಾಯಿತಿಗಳು ಹೇಗೆ ಉಳಿದುಕೊಂಡು ಬಂದಿವೆಯೋ, ಅದರಂತೆಯೇ ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅರಣ್ಯ ಪಂಚಾಯಿತಿಗಳು ಅಸ್ತಿತ್ವದಲ್ಲಿದ್ದವು. ಅದಕ್ಕೂ ಸದಸ್ಯರನ್ನು ಆರಿಸಲಾಗುತ್ತಿತ್ತು. ಆ ಪಂಚಾಯಿತಿಯಲ್ಲಿ ಅಧ್ಯಕ್ಷ ಇರುತ್ತಿದ್ದ. ಅವನ ನಾಯಕತ್ವದಲ್ಲಿ ಅರಣ್ಯ ವೃದ್ಧಿ, ರಕ್ಷಣೆ, ಬೇಸಿಗೆಯಲ್ಲಿ ಬೆಂಕಿ ಬಿದ್ದರೆ ಆರಿಸುವುದು, ಒಣ ಕಟ್ಟಿಗೆ ವಿಲೇವಾರಿ ಮುಂತಾದ ಕೆಲಸಗಳು ನಡೆಯುತ್ತಿದ್ದವು. ರಸ್ತೆಯ ಎರಡೂ ಬದಿಗೆ ಸಾಲು ಮರಗಳನ್ನು ನೆಡುವುದು ಇತಿಹಾಸದ ದೀರ್ಘ ಅವಧಿಯಲ್ಲಿ ಅಲ್ಲಲ್ಲಿ ಕಾಣುತ್ತೇವೆ. ಸಾಮ್ರಾಟ್ ಆಶೋಕನಿಂದ ಇಂದಿನ ಸಾಲುಮರದ ತಿಮ್ಮಕ್ಕ ಅವರವರೆಗೆ ರಾಜರು, ಸಾಮಂತರು, ಊರು ಹಿರಿಯರು ಹಾಗೂ ಜನಸಾಮಾನ್ಯರು ಇಂತಹ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಸಾಲು ಮರಗಳನ್ನು ನೆಡಲು ಫಲ ಕೊಡುವ, ದೀರ್ಘ ಬಾಳಿಕೆ ಬರುವ ಹುಣಸೆ, ನೇರಳೆ, ಆಲ, ಬೇವು, ಅರಳಿ, ಮುಂತಾದ ಮರಗಳನ್ನು ಆರಿಸಿಕೊಳ್ಳುತ್ತಿದ್ದರು ಎಂಬ ವಿಷಯವೂ ತುಂಬಾ ಕುತೂಹಲಕಾರಿಯಾದದ್ದು. 3. ದೇವಸ್ಥಾನ, ಛತ್ರ, ಆರಾಮಧಾಮ, ಶಾಲೆ/ಆಶ್ರಮ, ಆಸ್ಪತ್ರೆಗಳು:- ಭರತಖಂಡದ, ಆಸೇತು ಹಿಮಾಲಯ ಪರ್ಯಂತ, ಯಾವ ರಾಜ್ಯದಲ್ಲೇ ನೋಡಲಿ, ಪ್ರಸಿದ್ಧ ದೇವಾಲಯಗಳು, ಪಗೋಡಗಳು, ಮಸೀದಿ, ಚರ್ಚುಗಳು ಆಯಾಕಾಲದ ಚಕ್ರವರ್ತಿಗಳಿಂದ, ರಾಜರಿಂದ, ರಾಜಪ್ರತಿನಿಧಿಗಳಿಂದ, ಅಮಾತ್ಯರಿಂದ, ದಂಡನಾಯಕರಿಂದ, ಋಷಿಮುನಿಗಳಿಂದ, ಸಂತರಿಂದ, ಆಚಾರ್ಯರಿಂದ, ಮುಸ್ಲಿಮ್ ಅರಸರಿಂದ ಹಾಗೂ ಕ್ರೈಸ್ತ ಪಾದ್ರಿಗಳಿಂದ ಕಟ್ಟಿಸಿದ ಸಂಘ ಸಂಸ್ಥೆಗಳಾಗಿವೆ. ದೇವಸ್ಥಾನಗಳು ಬರೇ ದೇವಸ್ಥಾನಗಳಾಗಿರದೆ ವಿದ್ಯಾ ಕೇಂದ್ರಗಳೂ ಆಗಿದ್ದವು. ಸಂಗೀತ, ಸಂಸ್ಕೃತಿ, ಸಾಹಿತ್ಯ, ನೃತ್ಯ, ಕಲೆ ಮುಂತಾದವುಗಳನ್ನು ಪೋಷಿಸುವ ಕೆಲಸವನ್ನು ದೇವಸ್ಥಾನಗಳು ಮಾಡಿವೆ. ಈ ಧಾರ್ಮಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ತಗಲುವ ಖರ್ಚನ್ನು ಅರಸರು, ಅರಸರ ಪ್ರತಿನಿಧಿಗಳು ಭರಿಸುತ್ತಿದ್ದರು. ಇಲ್ಲವೇ ದೇವಸ್ಥಾನಗಳು ಹಾಗೂ ಇತರೆ ಧಾರ್ಮಿಕ ಸಂಸ್ಥೆಗಳು ಪೋಷಿಸುತ್ತಿದ್ದವು. ಅದರಂತೆಯೇ, ಅರಸರು, ಧಾರ್ಮಿಕ ಸಂಸ್ಥೆಗಳು ಅವಶ್ಯವಿದ್ದವರಿಗೆ ಅನ್ನಛತ್ರಗಳನ್ನು, ಯಾತ್ರಿಕರಿಗೆ ಹಾಗೂ ಪ್ರಯಾಣಿಕರಿಗೆ ಉಪಯುಕ್ತ ಆಗುವ ವಿಶ್ರಾಂತಿಧಾಮಗಳನ್ನು ಕಟ್ಟಿಸಿದ ಉದಾಹರಣೆಗಳು ಇತಿಹಾಸದುದ್ದಕ್ಕೂ ಸಿಗುತ್ತವೆ. ಅರಸರು ಋಷಿಗಳಿಗೆ ಆಶ್ರಮಗಳನ್ನು ಕಟ್ಟಿಸುತ್ತಿದ್ದರು. ಋಷಿಗಳು, ಆಚಾರ್ಯರು, ಮುಂತಾದವರು ಅವುಗಳಲ್ಲಿ ಸನಾತನ ಧರ್ಮಶಾಸ್ತ್ರ, ವೇದ, ಉಪನಿಷತ್ತು, ಗೀತೆ, ಇತ್ಯಾದಿಗಳನ್ನು ಅಭ್ಯಸಿಸುವ ಸಲುವಾಗಿ ವಿದ್ಯಾಪೀಠಗಳನ್ನು ಪ್ರಾರಂಭಿಸುತ್ತಿದ್ದರು. ವಿದ್ಯಾರ್ಥಿಗಳಿಗೆ, ಜ್ಞಾನಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ ವಿದ್ಯೆಯನ್ನು ಹೇಳಿಕೊಡಲಾಗುತ್ತಿತ್ತು. ಇಂತಹ ಆಶ್ರಯಗಳಲ್ಲಿ ಆಯುರ್ವೇದ ಶಾಸ್ತ್ರದ ಬಗ್ಗೆಯೂ ಅಭ್ಯಾಸ ಮಾಡಲು ಅವಕಾಶ ಇರುತ್ತಿತ್ತು. 4. ರಸ್ತೆ, ಉದ್ಯಾನ, ಸಾರ್ವಜನಿಕ ತೋಟ ಮುಂತಾದವುಗಳನ್ನು ಅರಸರು ಅಭಿವೃದ್ಧಿಪಡಿಸುತ್ತಿದ್ದರು. ಅಂತರಾಜ್ಯ ರಸ್ತೆ, ಅಂತರಗ್ರಾಮ ರಸ್ತೆಗಳನ್ನು ರಾಜರ ಕಡೆಯಿಂದ ರಚಿಸಲಾಗುತ್ತಿತ್ತು. ಪಟ್ಟಣಗಳಲ್ಲಿ, ದೊಡ್ಡ ಗ್ರಾಮಗಳಲ್ಲಿ ಉದ್ಯಾನಗಳನ್ನು ಸಾರ್ವಜನಿಕ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಉದ್ಯಾನಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯಲಾಗುತ್ತಿತ್ತು. ಅದರಂತೆಯೇ ಸಾರ್ವಜನಿಕ ತೋಟಗಳಿಂದ ಬಂದ ಫಲಗಳನ್ನು, ಉತ್ಪಾದನೆಗಳನ್ನು ಅನ್ನಛತ್ರಗಳಿಗೆ ಹಾಗೂ ವಿರಾಮಧಾನಗಳಿಗೆ ಕಳಿಸಲಾಗುತ್ತಿತ್ತು. ರಾಜರಿಗೆ, ರಾಜಮನೆತನದ ಇತರೆ ಸದಸ್ಯರಿಗೆ ಬೇರೆಯೇ ಉದ್ಯಾನಗಳು ಹಾಗೂ ಹೂದೋಟಗಳನ್ನು ನಿರ್ಮಿಸಲಾಗುತ್ತಿತ್ತು. 5. ಸ್ನಾನಘಟ್ಟಗಳು, ಧೋಬಿಕಟ್ಟೆಗಳು ಹಾಗೂ ಸೇತುವೆಗಳು:- ದೇವಸ್ಥಾನಗಳು ಹಾಗೂ ಗ್ರಾಮಗಳಲ್ಲಿ ಸ್ನಾನಘಟ್ಟಗಳನ್ನು ನಿರ್ಮಿಸಲಾಗುತ್ತಿತ್ತು. ತುಂಬಾ ಪುರಾತನ ದೇವಸ್ಥಾನಗಳಲ್ಲಿ ಇಂತಹ ಸ್ನಾನಘಟ್ಟಗಳನ್ನು ಇಂದಿಗೂ ನೋಡಬಹುದಾಗಿದೆ. ಅಗಸರಿಗೆ ಬಟ್ಟೆ ತೊಳೆದು, ಆರಿಸಲು ಗ್ರಾಮಗಳಲ್ಲಿ ಧೋಬಿ ಕಟ್ಟೆಗಳನ್ನು ಕಟ್ಟಲಾಗುತ್ತಿತ್ತು. ಹಾಗೇನೆ ಕೋಟೆಯ ಮುಂಭಾಗ, ಹಳ್ಳ ಕೊಳ್ಳಗಳ ಅಡ್ಡಲಾಗಿ ಸೇತುವೆಗಳನ್ನು ರಚಿಸಲಾಗುತ್ತಿತ್ತು. ಇಂತಹ ರಚನೆಗೆ ಕಲ್ಲು, ಇಟ್ಟಗೆ ಹಾಗೂ ಗಾರೆ (ಸುಣ್ಣ, ಉಸಕು, ಲೋಳೆಬೆಲ್ಲ ಇತ್ಯಾದಿಗಳ ಮಿಶ್ರಣ)ಗಳನ್ನು ಉಪಯೋಗಿಸಲಾಗುತ್ತಿತ್ತು. ಈ ಎಲ್ಲಾ ಕೆಲಸಗಳು ಯಜ್ಞದ ಭಾಗವಾಗಿ ಮಾಡಲ್ಪಡುತ್ತಿದ್ದವು. ಇಂತಹವುಗಳನ್ನು ಮಾಡಿದ ನಂತರ, ಯಜ್ಞ ಕರ್ತೃ ಅಥವಾ ದಾನಿಗಳಿಂದ ಸಂಕಲ್ಪ ಮಾಡಿಸಿ, ಅವುಗಳನ್ನು ಸಾರ್ವಜನಿಕರ ಬಳಕೆಗೆ ಬಿಡಲಾಗುತ್ತಿತ್ತು. ಹೀಗೆ ಜನಪರ ಕೆಲಸಗಳನ್ನು ಮಾಡಿದರೆ, ಪರರಿಗೆ ಉಪಕಾರವಾಗುವ ಕರ್ತವ್ಯಗಳನ್ನು, ಕಾಯಕಗಳನ್ನು ಮಾಡಿದರೆ ಆ ಕರ್ತೃವಿಗೆ ಪುಣ್ಯ ಸಂಚಯವಾಗಿ, ಅವನಿಗೆ ಈ ಜನುಮದಲ್ಲಿ ಅಲ್ಲದೆ ಮುಂದಿನ ಜನುಮಗಳಲ್ಲಿಯೂ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂಬ ಮನೋಭೂಮಿಕೆ ಅವರದಾಗಿತ್ತು. ಇಂಥಹ ಮನೋಭೂಮಿಕೆಯೇ ಅವರಿಂದ ಇಂತಹ ಜನಹಿತ ಕೆಲಸಗಳನ್ನು ಮಾಡಿಸುತ್ತಿತ್ತು. ಇದು ಯಜ್ಞದ ಪರಿಕಲ್ಪನೆ. ಭಗವದ್ಗೀತೆಯ ಮೂರನೇ ಅಧ್ಯಾಯದಲ್ಲಿಯೂ ಯಜ್ಞದ ಬಗ್ಗೆ ಪ್ರಸ್ತಾಪಿಸಲಾಗಿದೆ. ಯಜ್ಞ ಶಬ್ದಕ್ಕೆ ಇಲ್ಲಿ ಎರಡು ಅರ್ಥಗಳನ್ನು ಕಲ್ಪಿಸಲಾಗಿದೆ. ಒಂದು, ಯಜ್ಞಕುಂಡವನ್ನು ಮಾಡಿಕೊಂಡು, ಅಗ್ನಿಯನ್ನು ಪ್ರತಿಷ್ಠಾಪಿಸಿಕೊಂಡು, ದೇವತೆಗಳನ್ನು ಆಹ್ವಾನಿಸಿಕೊಂಡು, ಅಗ್ನಿಯಲ್ಲಿ ಮಾಡುವ ಹೋಮಕ್ಕೆ ಯಜ್ಞ ಎಂದು ಕರೆಯುವುದು. ಇದು ಯಜ್ಞದ ಸೀಮಿತ ಅರ್ಥ. ಯಜ್ಞದ ಪರಿಕಲ್ಪನೆಗೆ ಇನ್ನೊಂದು ವಿಶಾಲ ಅರ್ಥವಿದೆ. ಯಜ್ಞವೆಂದರೆ ಭಗವಂತನ ಅಥವಾ ಅವನಿಗಾಗಿ ಮಾಡುವ ತ್ಯಾಗಪೂರ್ವಕವಾದ (ಸಮಾಜ) ಸೇವೆ. ಕೆಲಸ ಮಾಡಲು ನಾನು ಅಧಿಕಾರಿ (ಕರ್ಮಣ್ಯೇವಾಧಿಕಾರಸ್ತೇ), ಅದರಿಂದ ಬರುವ ಫಲಕ್ಕಲ್ಲ ಎಂಬ ನಿಷ್ಕಮಭಾವದಿಂದ ಮಾಡಿದ ಕೆಲಸಗಳು ಯಜ್ಞದ ಕ್ರಿಯೆಗಳೇ ಆಗಿರುತ್ತವೆ. ``ಸ್ವಾರ್ಥದ ಉದ್ದೇಶದಿಂದ ನಡೆಸುವ ಕಾರ್ಯಗಳೇ ಸಂಸಾರದಲ್ಲಿ ನಮ್ಮನ್ನು ಬಿಗಿಯುವ ಶೃಂಖಲೆಗಳಾಗುವವು. ಭಗವಂತನ ಪೂಜಾರೂಪವಾಗಿ ನಾವು ಕರ್ಮಗಳನ್ನು ಮಾಡಹೊರಟರೆ, ಅದೇ ನಮ್ಮ ಆತ್ಮಸೌಂದರ್ಯವನ್ನು ಬೆಳಗಿಸುವ ಪುಷ್ಪಾಹಾರ, ಆಭರಣಗಳಾಗುವವು...ಕರ್ಮಗಳನ್ನು ಯಜ್ಞರೂಪವಾಗಿ ಆಚರಿಸಬೇಕೆಂಬ ಹೊಸ ಸಂಗತಿಯನ್ನು ತಿಳಿಸಲಾಗಿದೆ. (ಸ್ವಾರ್ಥ) ತ್ಯಾಗ ಮತ್ತು (ಸಮಾಜ) ಸೇವೆ ಇವೆರಡು ಯಜ್ಞದಲ್ಲಿ ಅಡಕವಾದ ಅಂಶಗಳು. ಭಗವತ್ ಸೇವಾ ದೃಷ್ಟಿಯಿಂದ ನಮ್ಮಲ್ಲಿರುವ ವಸ್ತುವಿನ ತ್ಯಾಗದೊಂದಿಗೆ ನಡೆಸುವ ಕ್ರಿಯೆಯೇ ಯಜ್ಞವಾಗುವುದು...ಭಗವಂತನಿಗೆ ಪ್ರೀತಿಯಾಗಲಿ ಎಂಬ ಉದ್ದೇಶದಿಂದ ಅವನ ಪೂಜಾರೂಪವಾಗಿ, ಫಲದ ಆಸಕ್ತಿ ಇಲ್ಲದೆ ಮಾಡುವ ಸತ್ಕಾರ್ಯಗಳೆಲ್ಲಾ ಯಜ್ಞಗಳಾಗುವವು.15 ಯಾವ ಫಲಾಪೇಕ್ಷೆಯೂ ಇಲ್ಲದೇ, ನಮ್ಮಲ್ಲಿರುವ ವಸ್ತುಗಳು, ಹಣ, ಸಮಯ, ಅಧಿಕಾರ ಇತ್ಯಾದಿಗಳನ್ನು ತ್ಯಾಗಮಾಡಿ (ಖರ್ಚು ಮಾಡಿ) ಮಾಡುವ ಎಲ್ಲಾ ಸತ್ಕರ್ಮಗಳೇ, ಸಮಾಜ ಸೇವಾ ಚಟುವಟಿಕೆಗಳೇ ಯಜ್ಞದ ಕ್ರಿಯಾಚರಣೆಗಳೆನಿಸುತ್ತವೆ. ಇಲ್ಲಿ ವ್ಯಕ್ತಿ ತನ್ನ ಹಿತವನ್ನು ತ್ಯಾಗಮಾಡಿ ಸಮಷ್ಟಿಹಿತವನ್ನು ಕಾಪಾಡುವಲ್ಲಿ ಉದ್ಯುಕ್ತನಾಗುತ್ತಾನೆ. ಇದು ಯಜ್ಞದ ವಿಸ್ತೃತಾರ್ಥ. ಹಿಂದೂ ಧರ್ಮದ ಸಮಾಜಕಾರ್ಯ ಪರಿಕಲ್ಪನೆಯ ಮೂಲ. ದಾನ ಕೊಡುವವನ ಮನೋಧರ್ಮ ಹೇಗಿರಬೇಕೆಂದೂ ತೈತರೀಯ ಉಪನಿಷತ್ತಿನಲ್ಲಿ ಹೇಳಲಾಗಿದೆ. ದಾನವನ್ನು ಸತ್ಪಾತ್ರರಿಗೆ (ದಾನ ಸ್ವೀಕರಿಸಲು ಯೋಗ್ಯತೆ-ಅರ್ಹತೆ ಇರುವವರು, ದಾನದ ವಸ್ತುಗಳನ್ನು ಹಣವನ್ನು ಸ್ವೀಕರಿಸಲು ಅವಶ್ಯಕತೆ ಇರುವವರು-ಬಡವ, ನಿರ್ಗತಿಕ, ಗತಿ ಇಲ್ಲದ, ದರಿದ್ರ ಇತ್ಯಾದಿ) ಮಾತ್ರ ಕೊಡಬೇಕು. ಅಪಾತ್ರರಿಗೆ ಕೊಟ್ಟರೆ ವ್ಯರ್ಥ, ದಾನದ ದುರುಪಯೋಗವಾಗುತ್ತದೆ. ಶ್ರದ್ಧಯಾ ದೇಯಮ್| ಅಶ್ರದ್ಧಯಾ ಅದೇಯಮ್| ಶ್ರೀಯಾ ದೇಯಮ್| ಹ್ರೀಯಾ ದೇಯಮ್| ಭಿಯಾ ದೇಯಂ| ಸಂವಿದಾ ದೇಯಮ್|| 16 ಶ್ರದ್ಧೆಯಿಂದ ಕೊಡಬೇಕು. ಅಶ್ರದ್ದೆಯಿಂದ ಕೊಡಬಾರದು. ತನ್ನ ಶಕ್ತಿಗೆ ತಕ್ಕಂತೆ ಕೊಡಬೇಕು. ವಿನಯಭಾವದಿಂದ ಕೊಡಬೇಕು. ಭಯ ಭಕ್ತಿಯಿಂದ ಕೊಡಬೇಕು. ಮಿತ್ರ ಭಾವದಿಂದ ಕೊಡಬೇಕು. ದಾನ ಸ್ವೀಕರಿಸುವವನನ್ನು ಗೌರವದಿಂದ ಕಾಣಬೇಕು. ದಾನಗಳಲ್ಲಿ ಅನೇಕ ಪ್ರಕಾರಗಳಿವೆ. ಅನ್ನದಾನ, ವಿದ್ಯಾದಾನ, ಸಂಪತ್ದಾನ, ಭೂದಾನ, ಶ್ರಮದಾನ, ಆಶ್ರಯದಾನ, ಸುವರ್ಣದಾನ, ಗೋದಾನ, ಅಭಯದಾನ ಮತ್ತು ಆತ್ಮ ಬಲಿದಾನ. (ಮಹಿಳಾ ಸಮಾನತೆಯ ಆಧುನಿಕ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಕನ್ಯಾದಾನವನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ). ಇವುಗಳ ಜೊತೆಗೆ ಯಜ್ಞಕ್ಕೆ ಉಪಯೋಗಿಸಲ್ಪಡುವ ಪರಿಕರಗಳು, ದೇವ ಪೂಜೆಗೆ ಉಪಯೋಗವಾಗುವ ಪೂಜಾಸಾಮಗ್ರಿ, ದಿನಬಳಕೆಯ ವಸ್ತುಗಳು ಮುಂತಾದವುಗಳನ್ನು ದಾನಕೊಡುವ ವಸ್ತುಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ದೇವಪೂಜೆಗೆ, ಉಪಯೋಗಿಸಲ್ಪಡುವ ಮೂರ್ತಿಗಳು, ಕೌಪ್ಯ (ಬೆಳ್ಳಿ) ಪಾತ್ರೆಗಳು, ತಾಮ್ರ, ಹಿತ್ತಾಳೆ ಪಾತ್ರೆಗಳು, ವಸ್ತ್ರಗಳು, ಸಾಲಿಗ್ರಾಮ-ಲಿಂಗ, ಚಕ್ರಾಂಕಿತ, ಧ್ಯಾನ, ಗುಡ (ಬೆಲ್ಲ), ವಾಯನ (ಅಕ್ಕಿ, ತೆಂಗಿನಕಾಯಿ, ತಾಂಬುಲ, ದಕ್ಷಿಣೆ), ಶಂಖ, ಘಂಟೆ, ಗೋಪಿಚಂದನ, ವಿಭೂತಿ, ಮುದ್ರಗಳು, ದರ್ಭಾಸನ, ತುಳಸಿ ಮಾಲೆ, ಸ್ಪಟಿಕ ಮಾಲೆ, ರುದ್ರಾಕ್ಷಿ ಮಾಲೆ, ಕಮಲಮಣಿ ಮಾಲೆ, ಹಾಲು, ಮೊಸರು, ಜೇನುತುಪ್ಪ, ನವನೀತ (ಬೆಣ್ಣೆ), ತಕ್ರ (ಮಜ್ಜಿಗೆ), ಫಲ (ಹಣ್ಣುಗಳು), ಹೂವುಗಳು, ಸುಗಂಧ ದ್ರವ್ಯಗಳು, ಶಾಕ (ತರಕಾರಿ), ವ್ಯಜನ (ಬೀಸಣಿಕೆ), ಅರಿಷಿಣ, ಕುಂಕುಮ, ಬಳೆಗಳು, ಉದಕುಂಬ (ನೀರು ತುಂಬಿದ ತಾಮ್ರದ ಕೊಡ), ಛತ್ರಿ, ಉಪಾನ (ಪಾದರಕ್ಷೆ), ತೈಲ, ಹಾಸಿಗೆ ಚಾಪೆ, ಪುಸ್ತಕ, ಬಾಗಿನ, ಶಲ್ಯ, ಕುಪ್ಪಸ, ಊರುಗೋಲು, ದೀಪ, ಬತ್ತಿ ಮುಂತಾದವುಗಳು ದಾನ ಕೊಡಬಹುದಾದ ವಸ್ತುಗಳು, ಇತ್ತೀಚಿನ ದಿನಗಳಲ್ಲಿ ಬಹಳ ಪ್ರಚಲಿತವಿರುವ ರಕ್ತದಾನವನ್ನು ಈ ಪಟ್ಟಿಗೆ ಸೇರಿಸಬಹುದಾಗಿದೆ. ಅಡಿ ಟಿಪ್ಪಣಿಗಳು
...............................ಮುಂದುವರೆಯುತ್ತದೆ...............................
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|