Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಸನ್ಮಾರ್ಗ

5/21/2020

1 Comment

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟ : 408
Buy
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಲೇಖಕರ ಪರಿಚಯ
ಪ್ರಸ್ತಾವನೆ - ಕೃತಜ್ಞತೆ
 
1. ಅಧ್ಯಾಯ - ಒಂದು
ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ.
 
2. ಅಧ್ಯಾಯ - ಎರಡು, ಭಾಗ - ಒಂದು
ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು).
3. ಅಧ್ಯಾಯ - ಎರಡು, ಭಾಗ - ಎರಡು
ಪಂಚಭೂತಗಳು, ಚತುರಶರೀರಗಳು, ದೇಹದ ಅಂಗಗಳಲ್ಲಿ ಭಗವಂತ - ಮನುಷ್ಯನ ನಾಲ್ಕು ತರಹದ ಶರೀರದಲ್ಲಿ ಭಗವಂತನ ರೂಪಗಳು, ಮನುಷ್ಯ ಶರೀರದಲ್ಲಿ - ಅಂಗಗಳಲ್ಲಿ ಭಗವಂತನ ಅಸ್ತಿತ್ವ, ಕಾಯವೆಂಬ ಪಟ್ಟಣ-ದೇಹವೆಂಬ ದೇಹಾಲಯ - ಶರೀರವೆಂಬ ರಥ, ದೇಹ ಒಂದು ಪಟ್ಟಣ, ಒಂದು ದೇವಾಲಯ, ಮನುಷ್ಯ ಶರೀರ ಒಂದು ರಥವೂ ಹೌದು.
 
4. ಅಧ್ಯಾಯ - ಎರಡು, ಭಾಗ - ಮೂರು
ಮನುಷ್ಯ ದೇಹದಲ್ಲಿನ ನಾಡಿಗಳು ಮತ್ತು ಅವುಗಳ ಮಹತ್ವ, ಸುಷುಮ್ನಾನಾಡಿ, ಇಡಾ ಮತ್ತು ಪಿಂಗಳಾ ನಾಡಿಗಳು, ಇತರೆ ನಾಡಿಗಳು.
 
5. ಅಧ್ಯಾಯ - ಎರಡು, ಭಾಗ - ನಾಲ್ಕು
ಮನುಷ್ಯ ಶರೀರದಲ್ಲಿನ ಚಕ್ರಗಳು ಮತ್ತು ಅವುಗಳ ಪಾತ್ರ, ಮೂರಾಧಾರ ಚಕ್ರ, ಸ್ವಾಧಿಷ್ಟಾನ ಚಕ್ರ, ಮಣಿಪೂರ ಚಕ್ರ, ಸೂರ್ಯ ಚಕ್ರ, ಮಾನಸ ಚಕ್ರ - ಹೃದಯೋಧ್ವ ಕಮಲ, ಅನಾಹತ ಚಕ್ರ, ವಿಶುಧ್ಧ ಚಕ್ರ, ಆಜ್ಞಾ ಚಕ್ರ, ಸೋಮಚಂದ್ರ ಚಕ್ರ, ಲಲಾಟ ಚಕ್ರ, ಸಹುಸ್ರಾರ-ತುರೀಯ, ಗ್ರಂಥಿಗಳು, ಧ್ಯಾನ ಪ್ರಕ್ರಿಯೆಯಲ್ಲಿ ಸ್ವರಗಳು.
 
6. ಅಧ್ಯಾಯ - ಎರಡು, ಭಾಗ - ಐದು
ಜೀವಶಾಸ್ತ್ರದ ದೃಷ್ಟಿಯಲ್ಲಿ ಮನುಷ್ಯ ದೇಹ - ಪಂಚೇಂದ್ರಿಯಗಳು, ಹೃದಯ, ರಕ್ತ, ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಮೂತ್ರ ಜನನಾಂಗಗಳು, ಮೂಳೆ- ಕೀಲು - ಸ್ನಾಯು ವ್ಯವಸ್ಥೆ, ಗ್ರಂಥಿಗಳು.
 
7. ಅಧ್ಯಾಯ ಮೂರು, ಭಾಗ - ಒಂದು
ಆಹಾರ-ವ್ಯಾಖ್ಯೆ, ಆಹಾರದ ಅವಶ್ಯಕತೆ, ಅನ್ನಬ್ರಹ್ಮ, ಆಹಾರದ ವರ್ಗೀಕರಣ, ಸಾತ್ವಿಕ ಆಹಾರ, ರಾಜಸ ಆಹಾರ, ತಾಮಸ ಆಹಾರ, ಪಂಚಭೂತಗಳನ್ನಾಧರಿಸಿ ಆಹಾರದ ವರ್ಗೀಕರಣ, ರಸ ಆಧಾರಿತ ವರ್ಗೀಕರಣ, ಗುಣ ಆಧಾರಿತ ವರ್ಗೀಕರಣ, ರಸಾಯನಿಕ ಸಂಯೋಜನೆ ಮತ್ತು ಆಹಾರ ಮಾಡುವ ಕೆಲಸವನ್ನು ಆಧರಿಸಿ ಆಹಾರ ಪದಾರ್ಥಗಳ ವರ್ಗೀಕರಣ, ವೈವಿಧ್ಯತೆಯನ್ನಾಧರಿಸಿ ಆಹಾರದ ವರ್ಗೀಕರಣ, ಉತ್ಪತ್ತಿ ಮೂಲದ ವರ್ಗೀಕರಣ, ಸೇವಿಸುವ ವಿಧಾನವನ್ನು ಅನುಸರಿಸಿ ವರ್ಗೀಕರಣ, ಮನುಷ್ಯನ ಪ್ರಕೃತಿಗೆ ತಕ್ಕಂತೆ ಆಹಾರ.
 
8. ಅಧ್ಯಾಯ ಮೂರು, ಭಾಗ-ಎರಡು
ಆಹಾರದ ಇನ್ನಷ್ಟು ಮಾಹಿತಿ-ದೋಷಗಳು ಮತ್ತು ಆಹಾರ, ಮನಸ್ಸಿನ ಪ್ರವೃತ್ತಿ ಮತ್ತು ಆಹಾರ, ವಿರುದ್ಧ ಆಹಾರ, ಸಮತೂಕದ ಆಹಾರ, ಋತುಗಳಿಗೆ ತಕ್ಕಂತೆ ಆಹಾರ, ಅಡುಗೆ ಮನೆ ಮತ್ತು ಆಹಾರ ತಯಾರಿ, ಅಡುಗೆ ತಯಾರಿಸುವ ವಿಧಾನ, ಆಹಾರ ಪದಾರ್ಥಗಳನ್ನು ತಯಾರಿಸುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು, ಊಟದ ಜಾಗ, ಊಟದ ಎಲೆಗಳು-ತಟ್ಟೆಗಳು, ಊಟ ಬಡಿಸುವ ವಿಧಾನ, ಯಾವ ಅನ್ನ ತಿನ್ನಬಾರದು, ಊಟಮಾಡುವಾಗ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಅಂಶಗಳು, ಊಟದ ಪ್ರಕ್ರಿಯೆ, ಊಟಕ್ಕೆ ಸಂಬಂಧಪಟ್ಟ ಕೆಲವು ಧಾರ್ಮಿಕ ಅಂಶಗಳು, ನವಗ್ರಹಗಳು ಮತ್ತು ಧಾನ್ಯ, ನೇವೇದ್ಯ, ಚಂದ್ರಮಾನ ಸೂರ್ಯಮಾನ ಮಾಸಗಳು ಮತ್ತು ನಕ್ಷತ್ರಗಳು ರಾಸಿಗಳು, ಆಹಾರ ಪದಾರ್ಥಗಳಲ್ಲಿ ಭಗವಂತನ ರೂಪಗಳು.
 
9. ಅಧ್ಯಾಯ-ನಾಲ್ಕು
ದಿನಚರಿ- ಏಳುವುದು, ಶೌಚಕ್ರಿಯೆ, ದಂತಧಾವನ, ಬಾಯಿ ತೊಳೆಯುವುದು, ಮುಖ ತೊಳೆಯುವುದು, ಉಷ:ಪಾನ, ಬೆಳಗಿನ ಪಾನೀಯ, ಚಂಕ್ರಮಣ, ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಮುದ್ರೆಗಳು, ಸ್ನಾನ, ತೈಲಾಭ್ಯಂಗ, ಆಯುಷ್ಕರ್ಮ, ವಸ್ತ್ರ ಧಾರಣೆ, ಮುದ್ರ ಧಾರಣೆ, ಸಂಧ್ಯಾವಂದನೆ, ಪೂಜೆ, ಊಟ, ತಾಂಬೂಲ, ನಿದ್ರೆ ಮಾಡುವುದು, ಮಲಗುವಾಗ ತಲೆ ಯಾವ ದಿಕ್ಕಿಗೆ ಇರಬೇಕು, ಸದ್ವೃತ್ತ- ಸದಾಚಾರ.
 
10. ಅಧ್ಯಾಯ-ಐದು
ಮಂತ್ರಗಳು, ಗೋವಿಂದನಿಗೆ ಸುಪ್ರಭಾತ, ಜಗನ್ಮಾತೆಗೆ ವಂದನೆ, ಭೂತಾಯಿಗೆ ವಂದನೆ, ದೇವ ದೇವತೆಗಳಿಗೆ ವಂದನೆ. ಪವಮಾನ, ಮಧ್ವಾಚಾರ್ಯರು, ಜಯತೀರ್ಥರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರರು, ಸಮಸ್ತ ಲೋಕಕ್ಕಾಗಿ ಪ್ರಾರ್ಥನೆ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ತ್ರಿಮತಾಚಾರ್ಯರು, ಭಗವಂತ, ಲಕ್ಷ್ಮಿದೇವಿ, ತುಳಸಿ, ಗೋಮಾತೆ, ಸರಸ್ವತಿ, ಪಾರ್ವತಿ, ಶಿವ, ಗಣೇಶ, ಸುಬ್ರಹ್ಮಣ್ಯ, ನವಗ್ರಹಗಳು, ಗುರು ಇವರ ಮಂತ್ರಗಳು, ಯೋಗಾಸನ  ಪ್ರಾರಂಭಿಸುವ ಮುನ್ನ-ನಂತರ, ಸ್ನಾನ ಮಾಡುವಾಗ, ಊಟ ಮಾಡುವಾಗ, ವೇದವ್ಯಾಸ, ವಾಲ್ಮೀಕಿ, ಮನೋ ನಿವೇದನಾ ಮಂತ್ರಗಳು, ರಾತ್ರಿ ಮಲಗುವಾಗ ಹೇಳುವ ಮಂತ್ರಗಳು, ಪುಣ್ಯ ಶ್ಲೋಕ, ಚಿರಂಜೀವಿಗಳ ಸ್ಮರಣೆ, ಶಯನ ಮಂತ್ರ, ದು:ಸ್ವಪ್ನ ನಾಶನ ಮಂತ್ರ ಶಾಂತಿಮಂತ್ರಗಳು, ಬೇರೆ ಬೇರೆ ಧರ್ಮಗಳ ಪ್ರಾರ್ಥನೆ, ಸರ್ವಧರ್ಮ ಪ್ರಾರ್ಥನೆ.
 
ಅನುಬಂಧಗಳು:
1. ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿ ಗ್ರಂಥದಲ್ಲಿ ವಿವರಣೆಗೊಂಡ ಮನುಷ್ಯ ಶರೀರ    
2.  ಯೋಗಮಾರ್ಗ
3.  ಆಧಾರ ಗ್ರಂಥಗಳು
4.  ಶಬ್ದಕೋಶ

ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು  ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ,  ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ  ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ.

ನಮ್ಮದು ಕೃಷಿ ಪ್ರಧಾನ ಸಮಾಜ ಎಂದು ಬೀಗುತ್ತೇವೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತಪ್ಪಿಲ್ಲ. ರೈತನ ಉತ್ಪಾದನೆಗೆ ಯೋಗ್ಯಬೆಲೆ ಸಿಗುತ್ತಿಲ್ಲ. ಭತ್ತ, ಕಬ್ಬು, ತರಕಾರಿ, ಅಡಿಕೆ ಮುಂತಾದ ಬೆಳೆಗಳಿಗೆ ಉತ್ತಮ ಬೆಲೆ ನಿಗದಿಯಾಗಿಲ್ಲ, ಪೂರಕ ಸೇವೆಗಳು ತೃಪ್ತಿಕರವಾಗಿಲ್ಲ. ಸರಕಾರಗಳ ಬೆಂಬಲ ಸಾಲದು ಎನ್ನಿಸುತ್ತಿದೆ. ಆದರೂ ಆಹಾರ ಉತ್ಪಾದನೆಯಲ್ಲಿ ತುಂಬಾ ಪ್ರಗತಿಯನ್ನು ಸಾಧಿಸಿದ್ದೇವೆ, ಕೆಲವು ದಶಕಗಳ ಹಿಂದೆ ಆಹಾರವಿಲ್ಲದೆ ಸಾವುಗಳು ಸಂಭವಿಸುತ್ತಿದ್ದವು. ಹಸಿರು ಕ್ರಾಂತಿ ಮತ್ತು ಕ್ಷೀರಕ್ರಾಂತಿ, ತರಕಾರಿ ಉತ್ಪಾದನೆಯಲ್ಲಿ ಹೆಚ್ಚಳ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ಇವುಗಳ ಪರಿಣಾಮವಾಗಿ ಆಹಾರ ಪದಾರ್ಥಗಳು ಅವಶ್ಯವಿರುವಷ್ಟು ಉತ್ಪಾದನೆಯಾಗುತ್ತಿದೆ. ಈಗ ಹಸಿವಿನಿಂದ ಸತ್ತ ಸುದ್ದಿಗಳಿಲ್ಲ.


ಆದರೆ ನಮ್ಮ ಸಮಾಜದ ಮುಖ ಬದಲಿಯಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮುಂತಾದವುಗಳ ಜೊತೆ ಜೊತೆಗೆ ಕೈಗಾರಿಕಾ ಕ್ಷೇತ್ರ ಪ್ರಗತಿ ಹೊಂದುತ್ತಿದೆ. ಕೈಗಾರಿಕೀಕರಣ, ಪಶ್ಛಾತ್ತೀಕರಣ, ಬಹುರಾಷ್ಟ್ರೀಯ ಕಂಪನಿಗಳ ಆಗಮನ ಇತ್ಯಾದಿಗಳಿಂದಾಗಿ ಮಾರುಕಟ್ಟೆಯಲ್ಲಿ ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳು ಸುಲಭವಾಗಿ ಸಿಗುವಂತಾಗಿದೆ. ಇವುಗಳ ಜೊತೆಗೆ ಬ್ಯಾಂಕಿಂಗ್ ಉದ್ಯಮ, ವಿಮಾ ಕ್ಷೇತ್ರ, ನಿತ್ಯೋಪಯೋಗಿ ವಸ್ತುಗಳ ಉತ್ಪಾದನೆ-ಮಾರಾಟ ಮುಂತಾದ ಕ್ಷೇತ್ರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ, ಹೀಗೆ ಕೈಗಾರಿಕಾ ವಲಯಗಳಲ್ಲಿ ಮಹತ್ತರ ಬದಲಾವಣೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸೇವಾವಲಯಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುವುದಷ್ಟೆ ಅಲ್ಲ, ಅವುಗಳ ಪರಿಣಾಮವಾಗಿ ಇಡೀ ಕೈಗಾರಿಕಾ ಕ್ಷೇತ್ರದಲ್ಲಿಯೂ ಕ್ರಾಂತಿಕಾರಣ ಬದಲಾವಣೆಗಳು ಆಗುತ್ತಿವೆ. ಅಂತರಾಷ್ಟ್ರೀಯ ಬಂಡವಾಳ, ಸ್ಪರ್ಧೆ, ಉತ್ಪಾದನೆಗಳ ಪ್ರಭೇದ, ಸಮನ್ವಯದ-ಸಂಯೋಜನೆಯ ಕೊರತೆ, ಸಮರ್ಥ ಕಾನೂನುಗಳ ಅಲಭ್ಯತೆ ಅಥವಾ ಇದ್ದ ಕಾನೂನುಗಳ ಅಸಮರ್ಥ ಬಳಕೆ ಮುಂತಾದ ಅಂಶಗಳ ಪರಿಣಾಮವಾಗಿ ಎಲ್ಲಾ ಕಲಸುಮೇಲೋಗರವಾಗಿದೆ.

ಆಧುನಿಕ ಜೀವನ ಶೈಲಿ ಎಂದು ಪಾಶ್ವಾತ್ಯ ಅಂಧಾನುಕರಣೆ ಜಾಸ್ತಿಯಾಗಿಬಿಟ್ಟಿದೆ. ಪಾಶ್ವಾತ್ಯ ಜೀವನಶೈಲಿಯನ್ನು ಒಟ್ಟಾಗಿ ಒಪ್ಪಿಕೊಂಡುಬಿಟ್ಟಿದ್ದೇವೆ. ಅವರು ಓದಿದ್ದನ್ನು ನಾವು ಓದಬೇಕು. ಅವರು ಮಾಡಿದಂತಹ ನೌಕರಿಗಳನ್ನು ನಾವು ಮಾಡಬೇಕು. ಅವರು ತೊಟ್ಟಂತಹ ಬಟ್ಟೆ ನಾವು ತೊಡಬೇಕು. ಅವರು ತೊಟ್ಟಂತಹ ಬೂಟು ನಾವು ತೊಡಬೇಕು. ಅವರು ಉಂಡಂತೆ ನಾವು ಉಣಬೇಕು. ಅವರ ಜೀವನಶೈಲಿ ನಮ್ಮದಾಗಬೇಕು. ಕೊನೆಗೆ ಅವರು ಆಲೋಚಿಸಿದಂತೆಯೇ ನಾವು ಆಲೋಚಿಸಬೇಕು. ಹಾಗಾಗಿ ಆ ಜೀವನಶೈಲಿಗೆ ಬೇಕಾದ ವ್ಯವಸ್ಥೆಗಳ ಜೊತೆಗೆ, ಆ ವ್ಯವಸ್ಥೆಗಳಿಗೆ ಅಂಟಿಕೊಂಡ ಸಮಸ್ಯೆಗಳನ್ನೂ ತಂದುಕೊಂಡಿದ್ದೇವೆ.

ಈ  ಪರಿಸ್ಥಿತಿ ಬದಲಾಗಬೇಕು. ಅವರಲ್ಲಿದ್ದ ಒಳ್ಳೆಯದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸೋಣ, ಆದರೆ ಅವರ ಎಲ್ಲಾ ವ್ಯವಸ್ಥೆಗಳನ್ನು ಒಪ್ಪಿ, ತಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಆ ವ್ಯವಸ್ಥೆಗಳ ಜೊತೆಗೆ ಇದ್ದಂತಹ ಸಮಸ್ಯೆಗಳನ್ನು (ಉದಾ: ಕೈಗಾರಿಕೆ ಮತ್ತು ಕೊಳೆಗೇರಿಗಳು, ಬೃಹತ್ ಕೈಗಾರಿಕೆಗಳ ಪ್ರಾರಂಭ ಮತ್ತು ಗುಡಿಕೈಗಾರಿಕೆಗಳ ಸಾವು ಇತ್ಯಾದಿ) ತಂದುಕೊಂಡಿದ್ದೇವೆ, ಹಾಗಾಗಿ ಆ ಸಮಸ್ಯೆಗಳೂ ಇಲ್ಲಿ ಪುನರಾವರ್ತನೆಯಾಗುತ್ತವೆ, ಅಷ್ಟೆ. ಮನಿಲಾ (ಫಿಲಿಪೈನ್ಸ್) ವಿಶ್ವವಿದ್ಯಾಲಯಾದ ಕುಲಪತಿಯಾಗಿದ್ದ ಖ್ಯಾತ ಸಮಾಜಶಾಸ್ತ್ರಜ್ಞೆ ಡಾ. ಕುಸುಂಬಿಂಗ್ ಒಂದು ಕಡೆ ಹೇಳುತ್ತಾರೆ. “Don’t copy everything from the west.  Copy those what blends to your culture. But unfortunately, we, south-east asian counties, have copied not only the systems from the west, but also copied problems that are associated with the systems.”. ಹಾಗಾಗಿ ನಾವು ಒದ್ದಾಡುವಂತಾಗಿದೆ. 

ಈ ಅವಸ್ಥೆಗೆ ನಮ್ಮ ಇಂದಿನ ಶಿಕ್ಷಣಪದ್ಧತಿಯೂ ಸ್ವಲ್ಪಮಟ್ಟಿಗೆ ಕಾರಣವಾಗಿದೆ. ಆ ಶಿಕ್ಷಣ ಪದ್ಧತಿಯೂ ಪಾಶ್ವಾತ್ಯರದೇ. ಇಂದಿನ ಯುವಜನಾಂಗದ ಗುರಿ- ಗಮ್ಯಗಳೇ ಬೇರೆಯಾಗಿವೆ. ಹಗಲು-ರಾತ್ರಿ ಕಷ್ಟಪಟ್ಟು ಓದಿ ಇಲ್ಲವೇ ಕಂಠಪಾಠ ಮಾಡಿಯಾದರೂ ವೈದ್ಯಕೀಯ, ಇಲ್ಲವೇ ಒಂದು ಇಂಜಿನಿಯರಿಂಗ್ ಪದವಿ ಪಡೆಯುವುದು. ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸವನ್ನು ದೊರಕಿಸಿಕೊಳ್ಳುವುದು. ಆರು ತಿಂಗಳು ಇಲ್ಲವೇ ಒಂದು ವರ್ಷ ಕೆಲಸ ಮಾಡುವುದು. ಪಾಸ್ ಪೋರ್ಟ್ ಮಾಡಿಸಿಕೊಂಡು ಅಮೇರಿಕಾಕ್ಕೊ ಇಲ್ಲವೇ ಯುರೋಪ್ ರಾಷ್ಟ್ರಗಳಿಗೋ ಹಾರಿ ಹೋಗುವುದು. ಅಲ್ಲಿ ಹಣ ಮಾಡುವುದು ಇತ್ಯಾದಿ. ಇಲ್ಲಿ ಅವರ ತಾಯಿ - ತಂದೆ, ನಮ್ಮ ಹುಡುಗ-ಹುಡುಗಿ ಇವತ್ತು ಬಂದಾನು/ಳು ನಾಳೆ ಬಂದಾನು/ಳು ಎಂದು ಕಾದು ಕುಳಿತುಕೊಳ್ಳುವುದು. ಇದು ಇವತ್ತಿನ ಸಾಮಾನ್ಯ ಚಿತ್ರಣ.

ಇಲ್ಲಿರುವ ವಿದ್ಯಾವಂತ ಯುವಜನತೆಯು ವಿಷಯವೂ ಇದಕ್ಕಿಂತ ತೀರಾ ಭಿನ್ನವಾಗಿಯೇನೂ ಇಲ್ಲ. ವೈದ್ಯಕೀಯ ಇಲ್ಲವೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಪದವಿಯನ್ನು ಪಡೆಯುವುದು. ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬ್ಯಾಂಕಿಂಗ್ ಉದ್ಯಮ, ಜೀವವಿಮೆ, ಸೇವಾ ಕ್ಷೇತ್ರ, ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡುವುದು. ತಮ್ಮ ತಾಯಿ - ತಂದೆ, ಬಂಧು - ಬಳಗ ಇವರನ್ನೆಲ್ಲಾ ಹಳ್ಳಿಯಲ್ಲಿ ಬಿಟ್ಟು ಅಥವಾ ಬೇರೆ ಮನೆಯಲ್ಲಿಟ್ಟು ಇಲ್ಲವೇ ವೃದ್ಧಾಶ್ರಮದಲ್ಲಿಟ್ಟು ತಾವು (ಗಂಡ-ಹೆಂಡತಿ ಅಥವಾ ಯಾವುದೋ ಹುಡುಗ-ಇನ್ಯಾವುದೋ ಹುಡುಗಿ ಜೊತೆ ಜೊತೆ ಜೀವನ- Living Together system) ಬೇರೆಯೇ ಇದ್ದು, ನಿರಾತಂಕವಾಗಿ, ಸ್ವೇಚ್ಛೆಯಾಗಿ ಜೀವಿಸುವುದು ಜಾಸ್ತಿಯಾಗುತ್ತಿದೆ.

ಇಂತಹ ಯುವ ಜನಾಂಗದ ಮನೋಭೂಮಿಕೆ ಬದಲಾಗುತ್ತಿದೆ. ಅವರ ವರ್ತನೆಗಳು, ನಡತೆಗಳು ಬದಲಾಗುತ್ತಿವೆ. ಅವರು ಹಿಂದಿನಿಂದ ಬಂದಂತಹ ಕಟ್ಟಳೆಗಳಿಗೆ, ಸಂಪ್ರದಾಯಗಳಿಗೆ, ಪದ್ಧತಿಗಳಿಗೆ ಬೆಲೆ ಕೊಡುತ್ತಿಲ್ಲ. ಅಂತಹವರು ಹೆಚ್ಚು ಸ್ವಾರ್ಥ ಜೀವನವನ್ನು ನಡೆಸುತ್ತಾರೆ. ಅವರ ನೀತಿ ನಿಯಮಗಳೇ ಬೇರೆಯಾಗಿದೆ. ಸಾಮಾಜಿಕ ನಿಯಂತ್ರಣವನ್ನು ಮೀರಿ ನಡೆಯುತ್ತಾರೆ. ಅವರು ತಮ್ಮದೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡು ಅಲ್ಲಿ ವಿಹರಿಸುತ್ತಾರೆ.

ಅವರ ಜೀವನಪದ್ಧತಿಯೇ ಬೇರೆಯಾಗಿರುತ್ತದೆ. ಅವರ ಆಲೋಚನಾ ಶೈಲಿ, ವೇಷಭೂಷಣಗಳು, ಆಹಾರ ಪದ್ಧತಿ ಒಟ್ಟಾಗಿ ಜೀವನ ಶೈಲಿಯೇ ಬೇರೆಯಾಗುತ್ತಿದೆ. ಅವರ ಊಟದ ತಟ್ಟೆಯಲ್ಲಿ ರೊಟ್ಟಿ, ಮುದ್ದೆ, ಚಪಾತಿ, ಅನ್ನ-ಸಾಂಬಾರು ಮುಂತಾದವುಗಳ ಬದಲು ಬ್ರೆಡ್, ಬನ್ನು, ಸ್ಯಾಂಡ್ವಿಚ್, ಪಿಜ್ಜಾ, ಬರ್ಗರ್, ಮಂಚೂರಿ ಇತ್ಯಾದಿಗಳು ಜಾಗ ಮಾಡಿಕೊಂಡಿವೆ. ಕಾಫಿ, ಟೀ, ಕಷಾಯ, ಹಾಲು, ಮಜ್ಜಿಗೆ, ಎಳೆನೀರು, ಕಬ್ಬಿನ ಹಾಲು ಮುಂತಾದ ಪಾನೀಯಗಳು ಇರಬೇಕಾದ ಅವರ ಕೈಗಳಲ್ಲಿ ಪೆಪ್ಸಿ, ಕೋಕಾಕೋಲಾ, ಸ್ಟ್ರಿಂಟ್, ಥಮ್ಸಪ್, ಬೀರ್, ವೈನ್, ರಮ್, ಜಿನ್, ವಿಸ್ಕಿ, ಮುಂತಾದವುಗಳ ಬಾಟಲ್ಗಳು ಕಾಣಸಿಗುತ್ತವೆ. ನಗರ ಹಾಗೂ ದೊಡ್ಡ ಪಟ್ಟಣಗಳಲ್ಲಿ ಮಾತ್ರವಲ್ಲದೆ ಚಿಕ್ಕ ಪಟ್ಟಣಗಳಲ್ಲಿಯೂ ಈಗ ಹೋಟೆಲ್ಲುಗಳಿಗಿಂತ ದರ್ಶಿನಿಗಳು, ಪಿಜ್ಜಾಹಟ್ ಗಳೇ ಜಾಸ್ತಿಯಾಗುತ್ತಿವೆ. ಈ ಪಿಜ್ಜಾಹಟ್ಗಳ ಆಹಾರ ಯಾವಾಗಲಾದರೊಮ್ಮೆ ಇದ್ದರೆ ಸರಿ. ಅದು ಮಿತಿ ಮೀರಿದರೆ ಸಮಸ್ಯೆ.

ಇಂತಹ ಯುವ ಜನತೆಯ ಚಲನೆರಹಿತ ವೃತ್ತಿ, ಒತ್ತಡದ ಬದುಕು ಮತ್ತು ಆಹಾರ ಪದ್ಧತಿಯಲ್ಲಾದ ಬದಲಾವಣೆಯ ಪರಿಣಾಮವಾಗಿ ಸ್ಥೂಲದೇಹ, ಅಜೀರ್ಣ, ಅಪಚನದಿಂದ ಹೊಟ್ಟೆನೋವು, ಸಂಧಿವಾತ, ಅಧಿಕ ರಕ್ತದೊತ್ತಡ, ಮಧುಮೇಹ, ಬೆನ್ನುನೋವು ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲಾ ವೃತ್ತಿ ಸಂಬಂಧಿ, ಇಲ್ಲವೆ ಆಹಾರ ದೋಷದಿಂದ ಉಂಟಾದ ಆರೋಗ್ಯದ ಸಮಸ್ಯೆಗಳೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ನಾನು ತುಂಬಾ ವ್ಯಾಕುಲಗೊಂಡಿದ್ದೇನೆ. 

ಇಂತಹವರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆಲೋಚನಾ ಲಹರಿಯನ್ನು ಬೇರೆ ಮಾಡಿಕೊಳ್ಳಬೇಕು. ಆಹಾರ ಪದ್ಧತಿಯನ್ನು ಪರಾಮರ್ಶಿಸಿಕೊಳ್ಳಬೇಕು. ತಮ್ಮ ಜೀವನದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಅಂಶಗಳನ್ನು ತುಂಬಿಕೊಳ್ಳಬೇಕು. ವೃತ್ತಿ ಸಂಬಂಧಿ ರೋಗಗಳಿಂದ ರಕ್ಷಿಸಿಕೊಳ್ಳಲು ಚಟುವಟಿಕೆಯಿಂದ ಕೂಡಿದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ದಿನಚರಿಯನ್ನು ಬದಲಿ ಮಾಡಿಕೊಳ್ಳಬೇಕು. ದಿನಚರಿಯಲ್ಲಿ  ಆಸನ, ಪ್ರಾಣಾಯಾಮ, ಮುದ್ರಾ, ಧ್ಯಾನ, ಮುಂತಾದವುಗಳನ್ನು ರೂಢಿಸಿಕೊಳ್ಳಬೇಕು. ಇಂತಹ ಕವಲುದಾರಿಯಲ್ಲಿ ನಿಂತು, ಮಾರ್ಗದರ್ಶನಕ್ಕಾಗಿ ತಡಕಾಡುತ್ತಿರುವ ಇಂದಿನ ಯುವ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವ ಪುಸ್ತಕ ಸನ್ಮಾರ್ಗ. ಈ ಪುಸ್ತಕವನ್ನು ನಾನು ಬರೆಯಲು ಹೊರಟ ಹಿನ್ನಲೆ ಇದು. ಪ್ರೇರಣೆಯ ಮೊದಲಿನ ಅಂಶ ಇದು.

ನಾನಿಲ್ಲಿ ಇಂದಿನ ಯುವಜನಾಂಗವನ್ನು ಒಟ್ಟಾರೆಯಾಗಿ ದೂಷಿಸುತ್ತಿಲ್ಲ. ಯುವಕ-ಯುವತಿಯರಲ್ಲಿ ಬಹಳಷ್ಟು ಒಳ್ಳೆಯವರನ್ನೂ ನೋಡಿದ್ದೇನೆ. ಅವರ ಜೀವನ ಶೈಲಿ ತುಂಬಾ ಚೆನ್ನಾಗಿಯೂ ಇದೆ, ಆದರೆ ಇನ್ನುಳಿದ ಗಣನೀಯ ಪ್ರಮಾಣದ ಯುವಕ ಯುವತಿಯರು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಿಲ್ಲ. ಅವರ ಜೀವನಶೈಲಿ, ಸ್ವೇಚ್ಛಪ್ರವೃತ್ತಿ, ಆಹಾರಪದ್ಧತಿ ಮುಂತಾದವುಗಳನ್ನು ನೋಡಿದರೆ ಕಸಿವಿಸಿಯಾಗುತ್ತದೆ. ಅಂತಹ ಯುವಜನಾಂಗವನ್ನು ಗಮನದಲ್ಲಿರಿಸಿಕೊಂಡು ಬರೆದ ಪುಸ್ತಕ ಇದು.

ಈ ಪುಸ್ತಕವನ್ನು ಬರೆಯಲು ಪ್ರೇರೇಪಿಸಿದ ಎರಡನೇ ಅಂಶ ಇದು. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರ ಮಾರ್ಗದರ್ಶನದಲ್ಲಿ, ನಾನು ನನ್ನ ಪಿಹೆಚ್.ಡಿ. ಪದವಿಗಾಗಿ ಸಂಶೋಧನೆ ಕೈಕೊಂಡಿದ್ದೇನೆ, ಅವರ ನನ್ನ ಪರಿಚಯ 35 ವರ್ಷ ಹಿಂದಿನದು. ನಾನು ಸ್ಮಯೋರ್ ಕಂಪನಿಯಲ್ಲಿ 33 ವರ್ಷ ಕೆಲಸ ಮಾಡಿದ್ದು, ಅದರಲ್ಲಿನ ಕೊನೆಯ ಒಂದೆರಡು ವರ್ಷಗಳು ಆಡಳಿತಾತ್ಮಕ  ಕಾರಣಗಳಿಗಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಯಿತು. ಹಾಗಾಗಿ ನಾನು ಬೆಂಗಳೂರಿನಲ್ಲಿ ಎರಡೂವರೆ ವರ್ಷ ಇರಬೇಕಾಯಿತು. ಆ ಸಮಯದಲ್ಲಿ ಪ್ರೊ.ಮರುಳಸಿದ್ಧಯ್ಯನವರ ಮಾರ್ಗದರ್ಶನದಲ್ಲಿ, ನನ್ನ ಉತ್ಸಾಹೀ ಮಿತ್ರರಾದ ಶ್ರೀ ಎಂ.ಹೆಚ್. ರಮೇಶ್ ಅವರು ಸಮಾಜಕಾರ್ಯದ ಹೆಜ್ಜೆಗಳು ಮಾಸಿಕವನ್ನು ಪ್ರಾರಂಭಿಸಿದ್ದರು. ಮಾಸಿಕದ ಸಲಹಾಸಮಿತಿಯಲ್ಲಿ ಕೆಲಸ ಮಾಡಲು ನನಗೆ ಅವಕಾಶವನ್ನು ಕೊಟ್ಟರು. ಸಲಹಾಸಮಿತಿಯ ಸದಸ್ಯರು, ಸಂಪಾದಕರು, ಮುಂತಾದವರಿಗೆ ಪ್ರತಿ ತಿಂಗಳೂ ಲೇಖನಗಳನ್ನು, ಅನುಭವಗಳನ್ನು ಕ್ರೋಢೀಕರಿಸುವ ಜವಾಬ್ದಾರಿಯಿತ್ತು. (ಈಗ ಸಮಾಜಕಾರ್ಯದ ಹೆಜ್ಜೆಗಳು ಮಾಸಿಕ ತ್ರೈಮಾಸಿಕವಾಗಿ ಚೆನ್ನಾಗಿ ಬರುತ್ತಿದೆ.)

ಇಂತಹ ಸಮಯದಲ್ಲಿ ಒಂದು ದಿನ ಬೆಳಿಗ್ಗೆ ಸುಮಾರು ಎಂಟುವರೆ ಘಂಟೆಗೆ ಪ್ರೊ. ಮರುಳಸಿದ್ಧಯ್ಯನವರಿಂದ ನನಗೆ ದೂರವಾಣಿ ಕರೆ ಬಂತು. ಅಂದು ದ್ವಾದಶಿ. ಹಾಗಾಗಿ ಬೆಳಗ್ಗೆ ನಾನು ಪಾರಣಿ (ಊಟ) ಮಾಡುತ್ತಿದ್ದೆ. ಅವರೊಡನೆ ಮಾತನಾಡಲಾಗಲಿಲ್ಲ. ನನ್ನ ಹೆಂಡತಿ ಶ್ರೀಮತಿ ಜಯಶ್ರೀಯವರೇ ಉತ್ತರಿಸಿ ವಿಷಯ ತಿಳಿಸಿದರು. ನಾನು ಊಟವಾದ ಮೇಲೆ ಅವರೊಡನೆ ಮಾತನಾಡಿದೆ. ನಾನೊಬ್ಬ ಸಂಪ್ರದಾಯಸ್ಥ ಬ್ರಾಹ್ಮಣ. ಊಟ ಮಾಡುವಾಗ ಯಾರೊಡನೆಯೂ ಮಾತನಾಡುವುದಿಲ್ಲ. ಒಮ್ಮೆ ಊಟಕ್ಕೆ ಕುಳಿತುಕೊಂಡ ಮೇಲೆ ಮಧ್ಯೆ ಏಳುವುದಿಲ್ಲ. ಊಟವಾದ ನಂತರವೇ ಮೇಲೇಳುವುದು. ಊಟದ ಪ್ರಾರಂಭಕ್ಕೆ, ಊಟದ ನಂತರ ಮಂತ್ರ ಹೇಳಬೇಕು. ಉಂಡ ಅನ್ನ, ಅನ್ನಮಯ ಪ್ರಾಣಯಯಾದಿ ಕೋಶಗಳಿಗೆ ಹೋಗುತ್ತದೆ. ಇತ್ಯಾದಿ ಏನೇನೋ ಹೇಳಿದೆ. ಹಾಗಾಗಿ ನಾನು ತಮ್ಮೊಡನೆ ಮಾತನಡಲಾಗಲಿಲ್ಲ, ಕ್ಷಮಿಸಿ, ಎಂದೂ ಹೇಳಿದೆ. ಹೌದು, ನನಗೆ ಗೊತ್ತು. ಒಳ್ಳೆಯ ಸಂಪ್ರದಾಯ. ನಮ್ಮಲ್ಲಿಯೂ ಊಟಮಾಡುವಾಗ ಮೌನವ್ರತ ಆಚರಿಸುವ ಪದ್ಧತಿ ಇದೆ. ಈ ವಿಷಯದ ಬಗ್ಗೆ ಒಂದು ಲೇಖನ ಬರೆಯಿರಿ. ಸಮಾಜಕಾರ್ಯದ ಹೆಜ್ಜೆಗಳು ಮಾಸಿಕದಲ್ಲಿ ಪ್ರಕಟಿಸೋಣ ಎಂದು ತಿಳಿಸಿದರು. ಒಂದು ಲೇಖನ ಬೇಡ, ಇತರೆ ಅವಶ್ಯಕ ವಿಷಯಗಳನ್ನು ಸೇರಿಸಿ ಒಂದು ಪುಸ್ತಕವನ್ನು ಬರೆಯುತ್ತೇನೆ ಎಂದೆ. ಅವರು ಶುಭ ಹಾರೈಸಿದರು. ಇದು ಈ ಪುಸ್ತಕ ಬರೆಯಲು ಇದ್ದ ಎರಡನೇ ಪ್ರೇರಣೆ.

ಮೇಲೆ ತಿಳಿಸಿದ ಎರಡೂ ಪ್ರೇರಣೆಗಳನ್ನಿಟ್ಟುಕೊಂಡು ಅವಶ್ಯ ಮಾಹಿತಿ  ಸಂಗ್ರಹಿಸಿ ಈ ಕೃತಿಗಳನ್ನು ತಯಾರಿಸಿದ್ದೇನೆ. ಕೃತಿಯ ವಿನ್ಯಾಸ ಹೀಗಿದೆ. ಐದು ಅಧ್ಯಾಯಗಳು. ಮನುಷ್ಯನ ಸ್ವಭಾವವನ್ನು, ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು, ಅರಿಷಡ್ವರ್ಗಗಳು, ಯೋಗಮಾರ್ಗಗಳು, ಯೋಗ ಸಮನ್ವಯ ಮತ್ತು ಸ್ಧಿತಪ್ರಜ್ಞನ ಲಕ್ಷಣಗಳನ್ನು ಮೊದಲನೇ ಅಧ್ಯಾಯದಲ್ಲಿ ಪ್ರಸ್ತಾಪಿಸಿದ್ದೇನೆ. ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ, ಶರೀರದಲ್ಲಿ ಪಂಚ ಭೂತಗಳು, ಶರೀರದಲ್ಲಿ ಭಗವಂತನ ಅಸ್ತಿತ್ವ, ನಾಡಿಗಳು, ಚಕ್ರಗಳು, ಜೀವಶಾಸ್ತ್ರದ ದೃಷ್ಟಿಯಲ್ಲಿ ಮನುಷ್ಯ ಶರೀರ ಮುಂತಾದ ವಿಷಯಗಳ ವಿವರಣೆಯನ್ನು ಎರಡನೆ ಅಧ್ಯಾಯದಲ್ಲಿ ವಿವರಿಸಿದ್ದೇನೆ. ಆಹಾರ, ಅದರ ವರ್ಗೀಕರಣ, ಅವಶ್ಯಕತೆ, ಸಂಯೋಜನೆ,  ದೋಷಗಳು, ರಸಗಳು, ಆಹಾರ ಪದ್ದತಿ, ಆಹಾರದಲ್ಲಿ  ಭಗವಂತನ ರೂಪಗಳು ಇತ್ಯಾದಿ ಮಾಹಿತಿ ಮೂರನೇ ಅಧ್ಯಾಯದಲ್ಲಿ ಸಿಗುತ್ತವೆ. ಒಬ್ಬ ಸಾತ್ವಿಕನ ದಿನಚರಿ ಹೇಗಿರಬೇಕು ಎಂಬುದು ನಾಲ್ಕನೇ ಅಧ್ಯಾಯದ ವಿಷಯ. ಸದಾಚಾರದ ಬಗ್ಗೆಯೂ ಮಾಹಿತಿಯನ್ನು ಕೊಟ್ಟಿದ್ದೇನೆ. ಐದನೆಯ ಮತ್ತು ಕೊನೆಯ ಅಧ್ಯಾಯದಲ್ಲಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವತನಕ ಹೇಳಿಕೊಳ್ಳಬಹುದಾದ ಮಂತ್ರಗಳನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಬೇರೆ ಬೇರೆ ಧರ್ಮಗಳ ಪ್ರಾರ್ಥನೆ ಮತ್ತು ಸರ್ವಧರ್ಮ ಪ್ರಾರ್ಥನೆಯನ್ನು ಸೇರಿಸಿದ್ದೇನೆ. ಅನುಬಂಧದಲ್ಲಿ ಶ್ರೀ ಶಂಕರಾಚಾರ್ಯ ಪ್ರಣೀತ ಶರೀರದ ವ್ಯಾಖ್ಯಾನವನ್ನು ಲಗತ್ತಿಸಿದ್ದೇನೆ. ಪತಂಜಲಿ ಮಹರ್ಷಿ ಪ್ರಣೀತ ಅಷ್ಟಾಂಗ ಯೋಗದ ವಿವರಣೆಯೂ ಎರಡನೇ ಅನುಬಂಧದಲ್ಲಿ ಸಿಗುತ್ತದೆ. ಆಕರ ಸಾಹಿತ್ಯ ಮತ್ತು ಸಂಕ್ಷಿಪ್ತ ಶಬ್ದಕೋಶಗಳನ್ನು ಕೊಟ್ಟಿದ್ದೇನೆ. ಅಷ್ಟಾಂಗಯೋಗ, ಅದರಲ್ಲೂ ಧ್ಯಾನದ ಬಗ್ಗೆ ಬರೆಯುವಾಗ ಆಕರ ಸಾಹಿತ್ಯದಿಂದ     ಸಂಗ್ರಹಿಸಿದ ಮಾಹಿತಿಯ ಜೊತೆಗೆ ನನ್ನ ಅನುಭವವನ್ನೂ  ಹಂಚಿಕೊಂಡಿದ್ದೇನೆ. ಇದೇ ಅಂತಿಮವಲ್ಲ. ನಿಮ್ಮ ಧ್ಯಾನ ಪ್ರತಿಕ್ರಿಯೆಯ ಅನುಭವ ಬೇರೆಯೇ ಆಗಿರಬಹುದು. ನಾನು ದಾರಿ ತೋರಿಸಿದ್ದೇನೆ. ಸಾಧನೆ ನಿಮ್ಮದು. ಈ ಪುಸ್ತಕದಲ್ಲಿ ನಾನು ಯಾವ ಹೊಸ ತತ್ವಜ್ಞಾನವನ್ನು ಹೇಳಲು ಹೊರಟಿಲ್ಲ. ಇಲ್ಲಿ ನಾನು ಹೇಳಿರುವುದು ಎತ್ತಿಹಿಡಿದಿರುವುದು ಸನಾತನ ಧರ್ಮದ ಕೆಲವು ಮೌಲ್ಯಗಳನ್ನು, ಜೀವನ ಪದ್ಧತಿಯನ್ನು.
 
ಕೃತಜ್ಞತೆಗಳು
ಈ ಕೃತಿಯನ್ನು ರಚಿಸಲು ಒಟ್ಟು ನಲವತ್ತೆರಡು ಖುಷಿ ಮುನಿಗಳ, ಆಚಾರ್ಯರ, ವಿದ್ವಾಂಸರ, ವಿಷಯ ಪರಿಣಿತರ, ಸಂಪಾದಕರ, ಸಂಗ್ರಹಾಕರ ಐವತ್ತಾರು ಗ್ರಂಥಗಳನ್ನು ಪರಿಶಿಲಿಸಿದ್ದೇನೆ. ಶ್ರೀ ವ್ಯಾಸ ಮಹರ್ಷಿಗಳು, ಶ್ರೀ ಮಧ್ವಾಚಾರ್ಯರು, ಶ್ರೀ ಶಂಕರಾಚಾರ್ಯರು, ಶ್ರೀ ರಾಘವೇಂದ್ರ ತೀರ್ಥರು ಶ್ರೀ ಸಂಕರ್ಷಣ ಒಡೆಯರ್, ಶ್ರೀ ವಿಶ್ವೇಶತೀರ್ಥರು, ಶ್ರೀ ಭಕ್ತಿವೇದಾಂತ ಪ್ರಭುಪಾದರು, ಶ್ರೀ ಬನ್ನಂಜೆ ಗೋವಿಂದಾಚಾರ್ಯ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ.ಡಿ.ವಿ.ಗುಂಡಪ್ಪ, ಶ್ರೀ ಬಿ.ಕೆ.ಎಸ್. ಅಯ್ಯಂಗಾರ್, ಶ್ರೀ ರಂಗರಾಜ ಅಯ್ಯಂಗಾರ್, ಶ್ರೀ ಸ್ವಾಮಿ ಶಿವಾನಂದ ಅನು : ಶ್ರೀ ಶಿವಾನಂದ ಶ್ರೀಪಾದ, ಶ್ರೀ ಸುದೇಶ್ ಚಂದ್ರ, ಶ್ರೀಮತಿ ಸುಮನ್ ಚಿಪ್ಳೂಣ್ಕರ್, ಡಾ.ಸಿ.ಆರ್.ಚಂದ್ರಶೇಖರ್, ಶ್ರೀ ಎದುರ್ಕಳ ನಾರಾಯಣ ಭಟ್ಟ, ಸಂ : ಪ್ರೊ ಹಯವಡನ ಪುರಾಣಿಕ, ಪ್ರೊ ವೆಂಕಟಸುಬ್ಬಯ್ಯ, ಶ್ರೀ ಎನ್. ಬಸವಾರಾದ್ಯ, ಪ್ರೊ. ಮರಿಯಪ್ಪ ಭಟ್ಟ, ಶ್ರೀ ನರಸಿಂಹ ದಾಬಡೆ, ಶ್ರೀ ಗೋಪಾಲ ದೇಶಪಾಂಡೆ, ಶ್ರೀ ಆನಂದರಾವ್, ಶ್ರೀ ನರಸಿಂಹ ಮೂರ್ತಿ, ಡಾ. ಟಿ.ಎಸ್.ನಾಗರತ್ನ, ಶ್ರೀ ನಾಗೇಶ್ ರಂಗೋ ಕುಲಕರ್ಣಿ, ಶ್ರೀಮತಿ ಪ್ರೇಮಾ ರಮೇಶ್, ಡಾ.ವಿ.ಆರ್ ಪದ್ಮನಾಭ್ ರಾವ್, ಶ್ರೀ ವೆಂಕಟ ನರಸಿಂಹಾಚಾರ್, ಶ್ರೀ ಜಿ.ವೆಂಕಟೇಶ್, ಡಾ. ಶಿವಾಜಿ ಚವ್ಹಾಣ್, ಡಾ. ಗಾ.ನಂ.ಶ್ರೀಕಂಠಯ್ಯ, ಶ್ರೀ ಶ್ರೀನಿವಾಸ ಸು. ಮಠದ, ಶ್ರೀ ಮೈತ್ರಿಯಿ ಮೋಹನಾಚಾರ್ಯ, ಡಾ.ವಸುಂಧರಾ ಭೂಪತಿ, ಶ್ರೀ ರಾಘವೇಂದ್ರ ರಾವ್, ಶ್ರೀ ರಾಮವಿಠಲಾಚಾರ್ಯ, ಶ್ರೀ ಎಂ.ಎಲ್.ರಾಯಮಾನೆ, ಶ್ರೀ ಸಿ.ಡಬ್ಲು ಲೆಡ್ಬೀಟರ್ ಮುಂತಾದವರ ಕೃತಿಗಳನ್ನು ಓದಿದ್ದೇನೆ, ಉಲ್ಲೇಖಿಸಿದ್ದೇನೆ. ಕೆಲವು ಕಡೆ ವಿವರಗಳನ್ನು ಕೊಟ್ಟಿದ್ದೇನೆ. ಇನ್ನೂ ಕೆಲವು ಕಡೆ ಸಾರಾಂಶವನ್ನು ಹೇಳಲು ಪ್ರಯತ್ನಿಸಿದ್ದೇನೆ.
ಈ ಎಲ್ಲ ಹಿರಿಯರಿಗೆ, ವಿದ್ವಾಂಸರಿಗೆ, ಮಹನೀಯರಿಗೆ, ವಿಷಯ ಪರಿಣಿತರಿಗೆ ನನ್ನ ಕೃತಜ್ಞತಾಪೂರ್ವಕ ನಮಸ್ಕಾರಗಳು.

ಪ್ರೊ. ಮರುಳಸಿದ್ಧಯ್ಯನವರು ನಾನು ಈ ಪುಸ್ತಕ ಬರೆಯಲು ಪ್ರೇರಣೆ ನೀಡಿದ್ದಾರೆ. ಅವರಿಗೆ ನನ್ನ ಅನಂತ ಕೃತಜ್ಞತೆಗಳು. ಪೂರ್ಣಪ್ರಜ್ಞ ವಿದ್ಯಾಪೀಠದ ಸಂಶೋಧನ ಮಂದಿರದ ನಿರ್ದೇಶಕರಾದ ಡಾ.ಎ.ವಿ. ನಾಗಸಂಪಿಗೆ ಅವರು ನಾನು ಮಾಹಿತಿ ಸಂಗ್ರಹಣೆ ಮಾಡುವಾಗ ಸಹಾಯ ಮಾಡಿದ್ದಾರೆ. ಯಾವ ಮಾಹಿತಿಗಾಗಿ  ಯಾವ ಪುಸ್ತಕ ನೋಡಬೇಕೆಂದು ತಿಳಿಸಿದ್ದಾರೆ. ಅದರಂತೆಯೇ ಅದೇ ವಿದ್ಯಾಪಿಠದ ಉಪಾಧ್ಯಾಯರೂ ಮತ್ತು ನನ್ನ ಸೋದರರೂ ಆಗಿರುವ ವಿ.ಸಿ.ಆರ್. ಆನಂದತೀರ್ಥ ಅವರು ನಾನು  ಪುಸ್ತಕ ಬರೆಯುವ ಸಮಯದಲ್ಲಿ ನನಗೆ ಬಂದ ಅನುಮಾನಗಳನ್ನು ಬಗೆಹರಿಸಿದ್ದಾರೆ. ವಿ.ಜಿ.ಆರ್ ಹನುಮೇಶಾಚಾರ್, ಬೊಮ್ಮಾಘಟ್ಟ ಇವರು ನನಗೆ ಬೇಕಾದ ಮಾಹಿತಿಯನ್ನು ಒದಗಿಸಿದ್ದಾರೆ. ಈ ಮೂರೂ ವಿದ್ವಾಂಸರಿಗೂ ನಾನು ಕೃತಜ್ಞನಾಗಿದ್ದೇನೆ. ಮಿತ್ರರೇ ಆದ ಶ್ರೀ ಕಾರ್ತಿಕ್ ವಿ.ಕಾಳೆ ನನಗೆ ಬೇಕಾದ ರೇಖಾಚಿತ್ರಗಳನ್ನು ಬರೆದು ಕೊಟ್ಟಿದ್ದಾರೆ. ಅವರ ಉಪಕಾರವನ್ನು ನಾನು ಮರೆಯಲಾರೆ.

ಕನ್ನಡ ಪ್ರಾಧ್ಯಾಪಕರು ಹಾಗೂ ನನ್ನ ಮಿತ್ರರೂ ಆಗಿರುವ ಡಾ.ಮಾನಕರಿ ಶ್ರೀನಿವಾಸಾಚಾರ್ ಇವರು ನನ್ನ ವಿನಂತಿಯನ್ನು ಮನ್ನಿಸಿ, ಈ ಕೃತಿಗೆ ಮುನ್ನುಡಿ ಬರೆದುಕೊಟ್ಟಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಅಬಿನಂದನೆಗಳು.

ನನ್ನ ಹೆಂಡತಿ ಶ್ರೀಮತಿ ಜಯಶ್ರೀಯವರು, ನಾನು ಈ ಕೃತಿ ರಚಿಸುವಾಗ, ನಿಯತಕಾಲಿಕವಾಗಿ ಅನೇಕ ರೀತಿ ಸಹಾಯ ಮಾಡಿದ್ದಾರೆ. ಅವರ ಸಹಾಯವಿಲ್ಲದಿದ್ದರೆ  ನಾನು ಈ ಸ್ಥಿತಿಯನ್ನು ಮುಟ್ಟುತ್ತಿರಲಿಲ್ಲ. ಅವರಿಗೆ ನನ್ನ ಅಬಿನಂದನೆಗಳು.

ನನ್ನ ಸ್ನೇಹಿತರೂ ಮತ್ತು ನಿರುತ ಪಬ್ಲಿಕೇಷನ್ಸ್ ನ ಮುಖ್ಯಸ್ಥರೂ ಆಗಿರುವ ಶ್ರೀ ಎಂ.ಹೆಚ್. ರಮೇಶ್ ಅವರು ಈ ಕೃತಿಯನ್ನು ಪ್ರಕಟಿಸಲು ಮುಂದೆ ಬಂದಿದ್ದಾರೆ. ಶ್ರೀ ರಮೇಶ್ ಅವರು ಒಬ್ಬ ಬದ್ಧತೆಯುಳ್ಳ ಪ್ರಾಮಾಣಿಕ  ಸಮಾಜಕಾರ್ಯಕರ್ತ. ವೃತ್ಯಾತ್ಮಕ ಸಮಾಜಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರಗಳನ್ನು ಬಹಳ ಚೆನ್ನಾಗಿ ಮಾಡುತ್ತಾ ಬಂದಿದ್ದಾರೆ. ಸಮಾಜಕಾರ್ಯದ ಹೆಜ್ಜೆಗಳು  ನಿಯತಕಾಲಿಕವನ್ನು ತುಂಬಾ ವೈವಿಧ್ಯಪೂರ್ಣವಾಗಿ ಹೊರತರುತ್ತಿದ್ದಾರೆ. ಇವುಗಳ ಜೊತೆಗೆ ತಮ್ಮ ನಿರುತ ಪಬ್ಲಿಕೇಷನ್ಸ್ ವತಿಯಿಂದ ಪ್ರೊ. ಎಚ್.ಎಂ. ಮರುಳಸಿದ್ಧಯ್ಯ, ಪ್ರೊ. ಶಂಕರ ಪಾಠಕ್, ಪ್ರೊ. ಟಿ.ಕೆ.ನಾಯರ್, ಶ್ರೀ ಕೆ.ಸಿ. ಶಿವಶಂಕರ್, ಶ್ರೀಮತಿ  ಪದ್ಮ ಸುಬ್ಬಯ್ಯ ಮುಂತಾದ ಸಮಾಜಕಾರ್ಯ ಪ್ರಾಚಾರ್ಯರ, ವಿಷಯ ಪರಿಣಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗ ನನ್ನ ಕೃತಿ ಸನ್ಮಾರ್ಗವನ್ನೂ ಪ್ರಕಟಿಸಲು ಮುಂದಾಗಿದ್ದಾರೆ. ಅವರಿಗೆ ನನ್ನ ಅನಂತ ಕೃತಜ್ಞತೆಗಳು. ತುಂಬಾ ಅಚ್ಚುಕಟ್ಟಾಗಿ ಮುದ್ರಣಕಾರ್ಯ ಮಾಡಿದ ಮುದ್ರಕರಿಗೂ ನಾನು ಆಭಾರಿಯಾಗಿದ್ದೇನೆ.
 
15/03/2015                                                                           ಡಾ.ಸಿ.ಆರ್ ಗೋಪಾಲ್
ಈಶಾವಾಸ್ಯ, 198, ಅಗ್ನಿಶಾಮಕ ಠಾಣೆ ಎದುರು,
ಕೂಡ್ಲಿಗಿ ರಸ್ತೆ, ಭಾಗ್ಯಜೋತ್ಯಿ ಕಾಲೋನಿ,
ಸೊಂಡೂರು-583119, ಬಳ್ಳಾರಿ ಜಿಲ್ಲೆ.
1 Comment
Narayana Sagar
5/26/2022 04:35:11 am

valuable book by C R Gopal

Reply



Leave a Reply.


    Niruta Publications

    Social Workers- Karnataka

    Leaders Talk

    Ramesha Niratanka

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Picture
    WhatsApp Group

    Social Work Foot Prints
    Follow me on Academia.edu

    Archives

    July 2022
    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015

    Categories

    All
    Academic Books
    Conference Books
    English Books
    HR Books
    Kannada Books
    Social Work Books


    ​List Your Product on Our Website 


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com