Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಪ್ರಶಸ್ತಿ

5/21/2020

0 Comments

 
Picture
ಲೇಖಕರು : ಆರ್. ಉಷಾ
ಪುಟ : 120
Buy
ಪರಿವಿಡಿ
1.         ಪ್ರಶಸ್ತಿ  
2.         ಹೊಸ ಬೆಳಕು
3.         ಡೈಮಂಡ್ ಮೆಡಲ್
4.         ಗೋಸುಂಬೆ
5.         ನಂಬಿಕೆ
6.         ಹಗಲುಗನಸು
7.         ಕುಬ್ಜ
8.         ಏಕಾಂಗಿ
9.         ಊಸರವಳ್ಳಿಗೊಂದು ಪತ್ರ
10.       ಸಾಲ
ಶ್ರುತಿಯವರ ‘ಕೃತಿ’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಅದಕ್ಕಾಗಿ ಪ್ರಮುಖ ಸಾಂಸ್ಕೃತಿಕ ಸಂಸ್ಥೆಯೊಂದು ಅವರನ್ನು ಸನ್ಮಾನಿಸಲು ಸಮಾರಂಭವೊಂದನ್ನು ಏರ್ಪಡಿಸಿತ್ತು. ಅದಕ್ಕೆ ನನ್ನನ್ನು ಅಧ್ಯಕ್ಷತೆ ವಹಿಸಲು ಆಹ್ವಾನಿಸಿದ್ದರು. ಸುಮಾರು ಇಪ್ಪತ್ತೈದು ವರ್ಷಗಳಲ್ಲಿ ಶ್ರುತಿಯವರು ತಮ್ಮ ಕಥೆ-ಕಾದಂಬರಿಗಳಿಂದ ಜನರ ಮನದ ಶ್ರುತಿಯನ್ನು ಮೀಟತೊಡಗಿದ್ದರು. ಆದರೆ ಅವರು ಮಾತ್ರ ಅಗೋಚರರಾಗಿದ್ದರು. ಪತ್ರಿಕಾ ಸಂಪಾದಕರೂ ಸಹ ಅವರನ್ನು ನೋಡಿದ್ದಾರೋ ಇಲ್ಲವೋ ತಿಳಿಯದು. ಅವರ ಫೋಟೋ ಮತ್ತು ವಿಳಾಸವನ್ನೇನಾದರೂ ಸಂಪಾದಕರಲ್ಲಿ ಕೇಳಿದರೆ ಫೋಟೋ ಗೊತ್ತಿಲ್ಲ. ಆದರೆ ವಿಳಾಸ ಮಾತ್ರ ಯಾರಿಗೂ ತಿಳಿಯಲೇ ಕೂಡದೆಂದು ಶ್ರುತಿಯವರು ನಿವೇದಿಸಿಕೊಂಡಿದ್ದಾರೆಂದು ಹೇಳುತ್ತಾರೆ. ಯಾವುದೇ ಸಭೆ, ಸಮಾರಂಭ ನಡೆದರೂ ಅಲ್ಲಿ ಶ್ರುತಿಯವರಿಗಾಗಿ ಅರಸುತ್ತಿದ್ದೆ, ಮೊದಮೊದಲು. ಅನಂತರ, ದುರಭಿಮಾನದವರನ್ನೇನು ನೋಡುವುದು ಎಂದುಕೊಂಡು ಸುಮ್ಮನಾಗಿದ್ದೆ. ಇಂದು ಸಂಜೆ ನೋಡುತ್ತೇನಲ್ಲ ಎಂಬ ಸಂತೋಷ, ಮತ್ತೇನೋ ಅತಿರೇಕದ ಭಾವನೆ, ಏಕೆಂದು ತಿಳಿದಿಲ್ಲ ಮಾತ್ರ.
ನಾನು ಕಾದಂಬರಿ ಬಗ್ಗೆ ಎರಡು ಮಾತುಗಳನ್ನಾಡಬೇಕಾಗಿದ್ದುದರಿಂದ, ಅದನ್ನು ಕೂಲಂಕಷವಾಗಿ ಓದಿದ್ದೆ. ಒಂದು ರೀತಿಯಲ್ಲಿ ಶೋಷಣೆಗೊಳಗಾದ ಹೆಣ್ಣಿನ ಕಥೆ ಎನ್ನಬಹುದು.
 
ಅದರ ಸಾರಾಂಶ ಹೀಗಿದೆ :
ಕಥಾನಾಯಕಿ ಕೃತಿ ಅನಾಥ ಹೆಣ್ಣು. ಹುಟ್ಟಿದ ನಾಲ್ಕು ವರ್ಷಗಳಲ್ಲೇ ಅಪಘಾತದಲ್ಲಿ ತಂದೆತಾಯಿಗಳನ್ನು ಕಳೆದುಕೊಂಡವಳು. ತಂದೆತಾಯಿಯರದು ಅಂತರ್ಜಾತೀಯ ವಿವಾಹವಾದ್ದರಿಂದ ಯಾವ ಬಂಧು-ಬಳಗ ಸಹ ಆ ಮಗುವನ್ನು ಸಾಕಲು ಮುಂದಾಗಲಿಲ್ಲ. ಯಾರೋ ಪುಣ್ಯಾತ್ಮರು ಆ ಮಗುವನ್ನು ಅನಾಥಾಶ್ರಮಕ್ಕೆ ತಂದು ಬಿಟ್ಟರು. ಮಗು ಹಾಗೂ ಹೀಗೂ ಬೆಳೆಯುತ್ತ ವಿದ್ಯೆ ಕಲಿಯುತ್ತಿತ್ತು. ಬೆಳೆದು ದೊಡ್ಡವಳಾಗಿ ಹೈಸ್ಕೂಲು ಅಭ್ಯಾಸ ಮುಗಿಯುವ ಹೊತ್ತಿಗೆ ಆ ಆಶ್ರಮಕ್ಕೆ ಒಬ್ಬ ಹುಡುಗ ಬಂದ. ಕೃತಿಯನ್ನು ತಾನು ಮದುವೆಯಾಗುವುದಾಗಿಯೂ, ತನಗೆ ಅವಳನ್ನು ಮದುವೆ ಮಾಡಿಕೊಡಬೇಕೆಂದೂ ವಾರ್ಡನ್ ಅವರನ್ನು ಕೇಳಿದ. ವಾರ್ಡನ್ ಅವನ ಹಿಂದುಮುಂದು ವಿಚಾರಿಸಿದಾಗ, ಅವನಿಗೆ ತಂದೆ ತಾಯಿ ಇಲ್ಲವೆಂದೂ, ಒಡಹುಟ್ಟಿದವರು ಇರುವರಾದರೂ ಅನಾಥಾಶ್ರಮದ ಹುಡುಗಿಯನ್ನು ಮದುವೆಯಾಗಲು ಅವರು ಒಪ್ಪುವುದಿಲ್ಲವಾದ್ದರಿಂದ ಮದುವೆಗೆ ಬರುವುದಿಲ್ಲ ಎಂದೂ ತಿಳಿಯಿತು. ಆರ್ಥಿಕ ಪರಿಸ್ಥಿತಿ ಸಹ ಹೇಳಿಕೊಳ್ಳುವಂತಿರಲಿಲ್ಲ. ಸಿಕ್ಕ ಅವಕಾಶವನ್ನು ಬಿಟ್ಟು ಕೊಡಲಿಚ್ಛಿಸದ ವಾರ್ಡನ್ ಸಾಮೂಹಿಕ ವಿವಾಹದೊಂದಿಗೆ ಕೃತಿಯನ್ನು ಧಾರೆಯೆರೆದು ಕೊಟ್ಟರು.

ಕೃತಿ ತನ್ನ ಸಂಸಾರವನ್ನು ಗಂಡನ ಜೊತೆ ಹೂಡಿದಳು. ಕೃತಿಗಂತೂ ಗಂಡ ಎಂದರೆ ನಿಜವಾದ ದೇವರೇ. ಹಣ-ಕಾಸು, ಒಡವೆ, ಸೈಟು, ಮನೆ, ವಾಹನ ಏನೆಲ್ಲ ಆಮಿಷ ತೋರಿಸಿ ಕರೆದು ಹೆಣ್ಣು ಕೊಡುವ ಈ ಕಾಲದಲ್ಲಿ ಅಂತಹವರನ್ನೆಲ್ಲಾ ತ್ಯಜಿಸಿ ತನ್ನಂಥ ಅನಾಥಳನ್ನು ಮದುವೆಯಾಗಬೇಕೆಂದರೆ, ಎಂಥ ಒಳ್ಳೆಯ ಗುಣ ತನ್ನ ಗಂಡನದು; ಎಷ್ಟು ಒಳ್ಳೆಯವರು ಎಂದು ಹಿರಿಹಿರಿ ಹಿಗ್ಗಿದ್ದಾಳೆ. ತನ್ನ ಅದೃಷ್ಟ ಸಹ ಬದಲಾಯಿತೆಂದು, ಇನ್ನಾದರೂ ನೆಮ್ಮದಿಯಿಂದ ಇರಬಹುದೆಂದು ಸುಖಿಸುತ್ತಾಳೆ.

ಆದರೆ, ಆ ಗಂಡನೋ ಸಂಶಯ ಪಿಶಾಚಿ. ಅವಳು ಕೂತರೂ ತಪ್ಪು, ನಿಂತರೂ ತಪ್ಪು; ಜನರಲ್ಲಿ ಬೆರೆತರೂ ತಪ್ಪು, ಬೆರೆಯದಿದ್ದರೂ ತಪ್ಪು, ಅವರು ಹೊರ ಹೊರಟಾಗ ಅಲ್ಲಿ ಇಲ್ಲಿ ನೋಡುತ್ತಿದ್ದರೆ, ``ಏನ್ ನೋಡ್ತಿದೀಯ ? ಒಳ್ಳೆ ವಂಶದಲ್ಲಿ ಹುಟ್ಟಿದ್ದರೆ ತಾನೇ ಒಳ್ಳೇ ಬುದ್ದಿ ಬರೋದು. ಎಷ್ಟೇ ಆದ್ರೂ ಬೆರ್ಕೆ ಮುಂಡೆ. ನೀನ್ ಚೆನ್ನಾಗಿದ್ದೀಯಾಂತ ದುರಹಂಕಾರ ನಿಂಗೆ. ನಾನು ಚೆನ್ನಾಗಿಲ್ಲ ಅಂತ ಚೆನ್ನಾಗಿರೋರ್ನ ನೋಡ್ತಾ ನಿಂತ್ಕೋಬೇಡ ಬಾ ಎನ್ನುವಾಗ ಕೃತಿಯ ಕಂಗಳಲ್ಲಿ ಗಂಗಾಭವಾನಿಯೇ ! ಆದರೂ ಯಾರಾದರೂ ನೋಡಿಯಾರೆಂಬ ಭಯ. ಮನೆಗೆ ಬಂದರೆ, ಊಟವೂ ಮಾಡದೆ ಮುಸುಗಿಕ್ಕಿ ಮಲಗುವ ಗಂಡನ ಪರಿ ನೋಡಿ, ``ನೋಡಿ, ನೀವು ತಿಳಿದಷ್ಟು ನಾನು ಕೆಟ್ಟೋಳಲ್ಲ. ನಂಗೂ ಒಂದ್ ಬಾಳೂಂತ ನೀವ್ ಕೊಟ್ಟಿರೋದಕ್ಕೆ ನಾನು ನಿಮ್ ಪಾದ ತೊಳ್ದು ನೀರ್ಕುಡೀತೀನಿ. ನನ್ ಪ್ರಾಣ ಹೋದ್ರೂ ಕೃತಜ್ಞಳಾಗಿ ಚಿರಋಣಿಯಾಗಿರ್ತೀನಿ-ಎಂದು ಗಂಡನ ಪಾದ ಹಿಡಿದು ಬಿಕ್ಕುತ್ತಾ, ಗಂಡನನ್ನು ಸಮಾಧಾನಿಸಿ ಊಟಕ್ಕೆಬ್ಬಿಸಿ ಉಣ್ಣಿಸಿ ಮಲಗಿಸುತ್ತಾಳೆ. ಪುನಃ ಯಥಾ ಪ್ರಕಾರ ಮಾರನೆಯ ದಿನ ನಾಯಿಬಾಲ ಡೊಂಕು.

ಹಾಗೂ ಹೀಗೂ ಕೆಲ ವರ್ಷಗಳಲ್ಲಿ ಎರಡು ಮಕ್ಕಳಾದ ಮೇಲೊಮ್ಮೆ, ಮನೆಯಲ್ಲಿ ಗಂಡ ಸಂತೋಷದಲ್ಲಿದ್ದಾಗ ``ನೀವ್ ಯಾಕೇಂದ್ರೆ ನನ್ಮೇಲೆ ಅನುಮಾನ ಪಡೋದು? ನನ್ ಪ್ರೀತೀಲಿ ನಿಮ್ಗೇನಾದ್ರೂ ಕೊರತೆ ಕಂಡಿದ್ಯಾ ? ನಾ ನಿಮ್ಮನ್ ಎಷ್ಟ್ ಪ್ರೀತಿಸ್ತೀನಿ, ಪೂಜಿಸ್ತೀನೀಂತ ನೀವೇ ಎಷ್ಟೋ ಸಲ ಹೇಳ್ತೀರಿ. ಆದ್ರೆ ಅನುಮಾನ ಪಡೋದು ಮಾತ್ರ ಬಿಟ್ಟಿಲ್ಲ ಎಂದು ರಮಿಸಿ ಕೇಳಿದಾಗ, ಗಂಡ ತನ್ನ ಬಂಧು-ಬಳಗ, ಒಡಹುಟ್ಟಿದವರು ಹಾಗೂ ಸ್ನೇಹಿತರು ತನಗೆ ಆಗಾಗ ``ಅದು ಎಷ್ಟೇ ಆದ್ರೂ ಬೆರಕೆ ಜಾತಿ ಕಣೋ. ಅದಕ್ಕೆ ಆ ಮುಂಡೇದಕ್ಕಷ್ಟು ರೂಪ. ನಿನ್ಗೂ, ಅವಳ್ಗೂ ಎಲ್ಲಿಂದೆಲ್ಗೆ ಜೋಡಿ ? ಹಗಲು-ರಾತ್ರಿಯಂತೆ. ಆದಷ್ಟೂ ಹುಷಾರು ಎನ್ನುವ ಉತ್ಪ್ರೇಕ್ಷೆಯ ಬೋಧನೆ ಮಾಡುತ್ತಾರೆ ಎಂಬ ರಹಸ್ಯವನ್ನು ಬಯಲು ಮಾಡಿದ. ಆದರೆ, ಆ ಸ್ನೇಹಿತರೇ, ಬಂಧು-ಬಳಗದವರೇ, ಎಷ್ಟೋ ಸಲ ಒಂದು ಛಾನ್ಸ್ ಸಿಕ್ಕರೆ ನೋಡೋಣ ಎಂದು ಪ್ರಯತ್ನಪಟ್ಟು ಛೀಮಾರಿ ಹಾಕಿಸಿಕೊಂಡದ್ದನ್ನು ಮಾತ್ರ ಬೋಧಿಸಿಲ್ಲ ಎಂದು ನಿಟ್ಟುಸಿರಿಟ್ಟಳು ಕೃತಿ.

ಮಕ್ಕಳಿಬ್ಬರೂ ಶಾಲೆಗೆ ಹೋಗುವಂತಾದಾಗ ಕೃತಿ ತಾನೂ ಕೆಲಸಕ್ಕೆ ಸೇರಿದರೆ ಆರ್ಥಿಕವಾಗಿ ಸ್ವಲ್ಪವಾದರೂ ಅನುಕೂಲ ಆಗುತ್ತದೆಂದರೆ ಬೇಡವೆನ್ನುವ ಗಂಡ ಹಾಗೂ ಹೀಗೂ ರಮಿಸಿ ಒಪ್ಪಿಸಲು ಪ್ರಯತ್ನಿಸಿದಾಗ ಅದರ ಕಾರಣವೂ ತಿಳಿಯಿತು. ಗಂಡನ ಜೊತೆ ಕೆಲಸ ಮಾಡುತ್ತಿದ್ದ ಹೆಣ್ಣೊಬ್ಬಳಿಗೆ ಮದುವೆಯಾಗಿ ಮಕ್ಕಳಿದ್ದರೂ ಸಹ, ಬೇರಾರನ್ನೋ ಕಟ್ಟಿಕೊಂಡು ಫಾರಿನ್ನಿಗೆ ಹೋಗಿ, ಪುನಃ ಅವನನ್ನೂ ಬಿಟ್ಟು ಫಾರಿನ್ನವನನ್ನೇ ಕಟ್ಟಿಕೊಂಡು ಅಲ್ಲೇ ನೆಲೆಸಿದ್ದಾಳಂತೆ. ಹೆಂಗಸರು ಕೆಲಸಕ್ಕೆ ಹೋದರೆ ಇದೇ ಹಣೆಬರಹ ಎನ್ನುವ ಹಿತವಚನ. ``ಸಾವಿರಕ್ಕೊಬ್ಬರೋ ಲಕ್ಷಕ್ಕೊಬ್ಬರೋ ಹಾಗೆ ಮಾಡಿದ್ರೆ ಎಲ್ಲರೂ ಹಾಗೇ ಇರ್ತಾರೇನ್ರಿ ? ನೀವೇ ಯೋಚ್ನೆ ಮಾಡಿ ಎನ್ನುವ ಕೃತಿಯ ಅನುನಯದ ನುಡಿಗೆ, ``ಸಾಕ್ಸಾಕು, ನನ್ ತಲೆ ತಿನ್ಬೇಡ. ಇರೋದ್ರಲ್ಲಿ ಮಾಡ್ಕೊಂಡು ಬಿದ್ದಿರು ಎನ್ನುವ ಉಪದೇಶ.

ಮೊದಲೇ ಗಂಡನ ಸಂಶಯ ಸ್ವಭಾವವನ್ನರಿತಿದ್ದ ಕೃತಿ ಸುಮ್ಮನಾದಳು. ಅನಂತರ ತಾನೇ ಯಾವುದಾದರೊಂದು ಸಣ್ಣ ಉದ್ಯಮ ಮನೆಯಲ್ಲೇ ಪ್ರಾರಂಭಿಸಬೇಕೆಂದು ಯೋಚಿಸಿ, ಗಂಡನನ್ನು ಕಾಡಿ ಬೇಡಿ ಒಪ್ಪಿಸಿ, ಎಲೆಕ್ಟ್ರಿಕ್ ಸ್ವಿಚ್ ತಯಾರು ಮಾಡುವ ಸಣ್ಣ ಉದ್ಯಮಕ್ಕೆ ಕೈ ಹಾಕಿದಳು. ಆಗಾಗ್ಗೆ ಮಿಗಿಸಿಟ್ಟ ದುಡ್ಡಿನ ಜೊತೆ ತನ್ನಲ್ಲಿದ್ದ ಸಣ್ಣಪುಟ್ಟ ಚಿನ್ನವನ್ನೆಲ್ಲಾ ಮಾರಿ, ಸ್ವಲ್ಪ ಬಡ್ಡಿ ಸಾಲ ತೆಗೆದುಕೊಂಡು, ಬಂಡವಾಳ ಹೂಡಿದಳು. ಹೆಸರಿಗೆ ಮಾತ್ರ ಹೆಂಗಸರ ಉದ್ಯಮಗಳಿಗೆಲ್ಲ ಅನುಕೂಲ ಮಾಡಿಕೊಡುತ್ತೇವೆ. ಹಾಗೆ, ಹೀಗೆ ಎಂದೆಲ್ಲ ಅನಗತ್ಯ ಪ್ರಚಾರ ಮಾಡುವ ಬ್ಯಾಂಕಿಗೆ ಅಲೆದೂ ಅಲೆದೂ ರೋಸಿ ಕಾಲಿನ ಚಪ್ಪಲಿ ಸವೆದು ನೆತ್ತಿ ಸುಟ್ಟು ತಲೆನೋವು ಬಂತೇ ಹೊರತು, ಬ್ಯಾಂಕಿನ ಸಾಲ ಮಾತ್ರ ಸಿಗಲಿಲ್ಲ.

ಹಗಲೂ ರಾತ್ರಿ ಕಷ್ಟಪಟ್ಟು ಸುಮಾರು ಎಂಟು ವರ್ಷಗಳಲ್ಲಿ ಸ್ವಂತ ಮನೆ, ಮನೆಗೆ ಬೇಕಾಗುವ ಸಾಮಾನು ಎಲ್ಲ ರೆಡಿಯಾದವು. ತಾನು ಸಹಕರಿಸದಿದ್ದರೂ ಇಷ್ಟೆಲ್ಲಾ ದುಡಿದಳಲ್ಲ ಎನ್ನುವ ಅಭಿಮಾನವಿಲ್ಲದಿದ್ದರೂ ದುಡೀತೀನೀಂತ ನನ್ಹತ್ರ ನಿನ್ ಅಹಂಕಾರ ತೋರಿಸ್ಬೇಡ ಹಾಗೆ, ಹೀಗೆ ಎಂದೆಲ್ಲಾ ನಿಂದಿಸುವ ಪೂರ್ವಗ್ರಹ ಪೀಡಿತ ಭಾವನೆಯ ಗಂಡನಿಗೆ ಸಹನೆ ಎಲ್ಲಿರಬೇಕು ? ``ನಂದು ನಿಮ್ದು ಬೇರೆ ಬೇರೇನಾ ? ಎಲ್ಲ ಒಂದೇ ಅಲ್ವಾ ? ನಮ್ದು ಅನ್ರೀ ಎಂದಾಗ, ``ಮುಚ್ಚೇಬಾಯಿ, ಯಾರ್ಹತ್ರ ಮಾತಾಡ್ತಿದೀಯಾಂತ ಗೊತ್ತು ತಾನೇ ? ನೋಡು, ನಾನೇ ಒಂದು ಬಿಸಿನೆಸ್ಸು ಶುರು ಮಾಡಿದ್ದೀನಿ. ನೀನೇನಾ ಮಹಾ ಬಿಸಿನೆಸ್ಸು ಮಾಡೋಳು ? ನೋಡ್ತಾ ಇರು ಎನ್ನುವ ಆಟಾಟೋಪದ ಉತ್ತರ.

ಗಂಡನ ಬಿಸಿನೆಸ್ಸಿನಲ್ಲಿ ಲಾಭವಿಲ್ಲದಿದ್ದರೂ ಲಾಸಂತೂ ಆಗುತ್ತಿತ್ತು. ಹಾಕಿದ ಬಂಡವಾಳಕ್ಕೆ ಬಡ್ಡಿಯೂ ಬಾರದಷ್ಟು ಹೀನಾಯ ಸ್ಥಿತಿಗೆ ಆ ವ್ಯಾಪಾರ ಮುಟ್ಟಿತ್ತು. ಇಷ್ಟಲ್ಲದೆ, ಸ್ನೇಹಿತರಿಗೆಲ್ಲಾ ದುಡ್ಡು ಪೋಲು ಮಾಡುವ ಹವ್ಯಾಸವೂ ಆತನನ್ನು ಬಿಟ್ಟಿರಲಿಲ್ಲ. ಕೃತಿ ಬುದ್ಧಿ ಹೇಳ ಹೊರಟರೆ, ``ದುಡ್ಡು ದುಡ್ಡು ಅಂತ ಯಾಕೆ ಸಾಯ್ತೀಯ ? ಆರಡಿ ಮೂರಡೀಲಿ ಹೂಳೋವಾಗ ತಗೊಂಡು ಹೋಗ್ತೀಯಾ? ಎಂಬ ಮಾತಿನ ಸಿಡಿಮಿಡಿ. ದಿನದ 24 ಗಂಟೆಗಳೂ ದುಡಿಮೆಗೆ ಸಾಲದೆನ್ನುವಂತೆ ಕಷ್ಟಪಟ್ಟು ಬೆವರು ಸುರಿಸಿ ದುಡಿದಿದ್ದ ಕೃತಿಗೆ ದುಡ್ಡಿನ ಬೆಲೆ ತಿಳಿದಿತ್ತು. ಹಾಗೆಂದು, ಅವಳೇನೂ ಜಿಪುಣಿಯಲ್ಲ. ಅನಾಥ ಬಾಲಕನಿಗೆ ಮನೆಯಲ್ಲಿ ಆಶ್ರಯವಿತ್ತಿದ್ದಳು. ಮದುವೆ ಕೆಲಸ ಕಾರ್ಯಗಳಿಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದಳು. `ಜಲ ಹರಿಯುತ್ತಿದ್ದರೆ ಮಾತ್ರ ಉಕ್ಕುವ ಅವಕಾಶ. ಇಲ್ಲದಿದ್ದರೆ ನಿಂತಲ್ಲೇ ನಿಂತು ಪಾಚಿ ಕಟ್ಟುತ್ತದೆ. ಹಾಗೆಂದು ನೀರನ್ನು ಸೇದಿ ಸೇದಿ ರಸ್ತೆಗೆ ಸುರಿಯುವ ಬದಲು ದೇವರಿಗೆ ಅಭಿಷೇಕ ಮಾಡುವುದು ಅವಳ ಅಭೀಷ್ಟ. ಗಂಡನ ರೀತಿ ನೋಡಿ ನಿಟ್ಟುಸಿರು ಬಿಡುತ್ತಾಳೆ ಕೃತಿ. ಇನ್ನೂ ಮನೆಯ ಸಾಲ ಪೂರ್ತಿ ಮುಗಿದಿಲ್ಲ. ಅನಾಥಾಶ್ರಮದ ಹುಡುಗಿಯ ಮದುವೆ ಆದಾಗ ಬಾರದಿದ್ದ ಬಂಧುಗಳೆಲ್ಲರಿಗೂ ಈಗ ಕೃತಿ ಎಂದರೆ ಪಂಚಪ್ರಾಣ. ಅದೂ ಎಲ್ಲಿಯವರೆಗೆ ಎಂಬುದು ಸಹ ಅವಳಿಗೆ ಗೊತ್ತು. ಜೇನಿರುವವರೆಗೆ ನೊಣ ಮುತ್ತುತ್ತೆ ಎಂಬ ಅಂಶ ಅವಳಿಗೆ ಜೀವನ ಕಲಿಸಿರುವ ಪಾಠ. ಆದರೆ ಈ ಗಂಡ ಎನ್ನಿಸಿಕೊಂಡಿರುವ, ಅವಳು ದೇವರು ಎಂದುಕೊಂಡಿರುವ ಪ್ರಾಣಿ ಅರ್ಥ ಮಾಡಿಕೊಂಡರೆ ತಾನೇ !

ಹಾಗೂ ಹೀಗೂ ಹತ್ತು ವರ್ಷಗಳು ನಡೆಸಿದ ಉದ್ಯಮವನ್ನು ಕೈಬಿಟ್ಟಳು. ಬದುಕಿರುವ ಕೆಲವೇ ದಿನಗಳಲ್ಲಿ ಶಾಂತಿ ಬೇಕಾಗಿತ್ತು. ಎಲ್ಲಿಯ ಶಾಂತಿ ? ಸದಾ ಸಿಡಿಮಿಡಿಗೊಳ್ಳುವ, ನಿಂದಿಸುವ ಗಂಡ. ಮಾನಸಿಕ ನೆಮ್ಮದಿ ಇದ್ದರಾದರೂ ಉದ್ಯಮವನ್ನು ಮುಂದುವರಿಸಬಹುದಿತ್ತು. ಎಷ್ಟು ದುಡಿದರೂ ಎರಡು ಹೊತ್ತಿನ ಊಟ, ಒಂದು ತಿಂಡಿ-ಇದಕ್ಕಿಂತ ಹೆಚ್ಚೇನೂ ತಿನ್ನಲು ಸಾಧ್ಯವಿಲ್ಲವೆಂದು ಚೆನ್ನಾಗಿ ಮನಗಂಡಳು.

ಮದುವೆಯಾದ ಇಪ್ಪತ್ತು ವರ್ಷಗಳನ್ನು ಒಂದಿಲ್ಲೊಂದು ಕಾರಣಕ್ಕೆ ಕಣ್ಣೀರಿನಲ್ಲಿ ಕಳೆದಿದ್ದಳು. ಅನಾಥಾಶ್ರಮದಲ್ಲಿ ಅರೆಹೊಟ್ಟೆ ಉಂಡೇ ನೆಮ್ಮದಿಯಿಂದ ಇದ್ದ ಅವಳು ಈ ಕಣ್ಣೀರಿನ ಬಾಳಿಗೆ ತಿಲಾಂಜಲಿಯನ್ನಿಡಬಯಸಿದ್ದಳು. ಏನು ಮಾಡುವುದು ? ಆತ್ಮಹತ್ಯೆ ಮಾಡಿಕೊಂಡರೆ ಜನ ಇಲ್ಲ ಸಲ್ಲದ ನೂರಾರು ಕಥೆ ಕಟ್ಟುತ್ತಾರೆ. ಗಂಡನನ್ನು ಬಿಟ್ಟು ಹೊರಟರೆ ಓಡಿ ಹೋದವಳ ಮಗಳನ್ನು ಯಾರು ಮದುವೆಯಾಗುತ್ತಾರೆ ? ಸಮಾಜ ತನ್ನನ್ನು ಗಂಡ ಬಿಟ್ಟವಳೆಂದು ಆಡಿಕೊಳ್ಳುತ್ತದೆ.

ಅವಳು ಕಂಡಿದ್ದ ಕನಸಾದರೂ ಎಂಥದು ? ಅನ್ಯೋನ್ಯ ದಾಂಪತ್ಯ, ಆದರ್ಶ ದಾಂಪತ್ಯ, ಪುಟ್ಟ ಮನೆ, ಮುದ್ದಾದ ಮಕ್ಕಳು, ತಾವು ಅಜ್ಜಿ ತಾತ ಆಗೋದು, ಗಂಡನೇ ತನ್ನನ್ನು `ಅಜ್ಜಿ ಎಂದು ಕರೆಯುವುದು, ಮಾಂಗಲ್ಯ ಭಾಗ್ಯ, ಮುತ್ತೈದೆ ಸಾವು, ಹೀಗೆ ಅನೇಕ.

ಈ ಕನಸುಗಳನ್ನೆಲ್ಲಾ ನನಸಾಗಿ ಮಾಡಲು ಶ್ರಮಿಸಿ, ಗಂಡನನ್ನೆಷ್ಟೋ ಅನುಸರಿಸಿದ್ದಳು. ಹೇಗಾದರೂ ಗಂಡನ ಮನಸ್ಸನ್ನು ತಿದ್ದಲು ಪ್ರಯತ್ನಪಟ್ಟು ಹೆಣಗಿದ್ದಳು. ಹುಟ್ಟುಗುಣ ಸುಟ್ಟರೂ ಹೋಗೊಲ್ಲ ಎನ್ನುವ ಹಾಗೆ, ಅರ್ಥವೇ ಮಾಡಿಕೊಳ್ಳದ ಗಂಡನೊಡನೆ ಹೇಗೆ ಏಗಿಯಾಳು ? ಈಚೆಗಂತೂ ಅವಳ ಸಹನೆ ಮಿತಿ ಕಟ್ಟೆ ಒಡೆಯುತ್ತಿತ್ತು. ತನಗಿಂತ ಎತ್ತರಕ್ಕೆ ಬೆಳೆದು ನಿಂತ ತನ್ನ ಮಕ್ಕಳೆದುರಲ್ಲಿ ತಾನು ಗಂಡನೊಡನೆ ಜಗಳಕ್ಕೆ ನಿಲ್ಲುವುದು ಎಂಥ ಆಭಾಸ !

ಒಂದು ದಿನ ಗಂಡನನ್ನು ಕೇಳಿದಳು: ``ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತೆ ನೀವಾಡುತ್ತಿದ್ದೀರಿ. ನಾನ್ ನಿಮ್ ಜತೆ ಇರೋದು ಇಷ್ಟವಿಲ್ದಿದ್ರೆ ಹೇಳಿ. ನಾನೆಲ್ಲಾದ್ರೂ ಹೋಗ್ತೀನಿ. ಅವಳಿಗೆ ಸಿಕ್ಕ ಉತ್ತರ: ``ಹಾಳಾಗ್ಹೋಗು. ನೀನಿಲ್ಲಾಂತ ಅಳೋರು ಯಾರೂ ಇಲ್ಲ. ಮೊದ್ಲೇ ಹೇಳಿ ಕೇಳಿ ಅನಾಥೆ. ರೇಡಿಯೋ ನುಡಿಯುತ್ತಿತ್ತು: `ಯಾರಿಗೆ ಯಾರುಂಟು ಎರವಿನ ಸಂಸಾರ; ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ.’

ಗಂಡನಿಗೆ ತನ್ನ ಆವಶ್ಯಕತೆಯೇ ಇಲ್ಲದ ಮೇಲೆ ಯಾಕಾದರೂ ಇರಬೇಕು? ಇಷ್ಟು ದಿನ ಬಗ್ಗಿದ್ದು ಸಾಕು. ಸೊಂಟ ಬಗ್ಗುವಷ್ಟು ಬಗ್ಗಬಹುದು; ಮುರಿಯುವಂತೆ ಬಗ್ಗಲು ಸಾಧ್ಯವೇ ? ಸಹನೆಗೂ ಒಂದು ಮಿತಿ ಇಲ್ಲವೇ ? ಯಾರೇನಾದರೂ ಅಂದುಕೊಳ್ಳಲಿ. ಇನ್ನು ಮಾತ್ರ ಹೆದರಬಾರದು. ನೆಮ್ಮದಿಯಿಲ್ಲದ ಬದುಕು ಏಕೆ? ಹಿಂದೆ, ಹೀಗೇ ಎಷ್ಟೋ ಸಲ ನಿರ್ಧರಿಸಿ, ಸೋತು ಗೆಲ್ಲುವುದೇ ಹೆಣ್ಣಿನ ಗುರಿಯೆಂಬ ಹಟದಿಂದ ಮತ್ತೆ ಒಂದಾಗುತ್ತಿದ್ದಳು. ಭೂಮಿಗೆ ಪ್ರಳಯವೇ ಕೊನೆಯಂತೆ; ಸಾಮಾನ್ಯ ಹೆಣ್ಣಾದ ತನ್ನ ಸಹನೆಗೂ ಕೊನೆ ಇದ್ದೇ ಇದೆ. ಆತ್ಮಹತ್ಯೆ ಮಾಡಿಕೊಳ್ಳುವುದೇ ? ಅಬಲಾಶ್ರಮಕ್ಕೆ ಹೋಗುವುದೇ ? ಗಂಡ ಬಿಟ್ಟವಳೆನಿಸಿಕೊಳ್ಳಬಾರದೆಂದು ಎಷ್ಟು ದಿನ ಅನುಸರಿಸುವುದು ? ಬಗ್ಗಿದಷ್ಟೂ ಹಾಕಿ ತುಳಿಯುತ್ತಿದ್ದರೆ ನನಗಾದರೂ ಜೀವನ ಎಲ್ಲಿದೆ ? ಈ ದಿನಕ್ಕೆ ಈ ಮನೆಯ ಋಣ ಮುಗಿದಂತೆಯೇ. ಹೋಗಲೇಬೇಕೆನ್ನುವ ಹಟ ಮನದಲ್ಲಿ. ಆದರೆ ಪ್ರತಿ ಬಾರಿಯೂ ಸೋಲುತ್ತಿದ್ದ ಮನ ಈ ಬಾರಿಯೂ ಸೋಲು ಎಂದು ಕೂಗಿದಂತಾಗುತ್ತಿತ್ತು. ಇಜ್ಜೋಡು ಸಂಸಾರ ಸಾಧ್ಯವೇ ? `ಇಲ್ಲ ಎಂಬ ನಿರ್ಧಾರದೊಡನೆ ಯಾರೂ ಮನೆಯಲ್ಲಿಲ್ಲದ ಸಮಯ ನೋಡಿ ಒಂದು ಪತ್ರ ಬರೆದಿಟ್ಟಳು. ತನ್ನ ಮಕ್ಕಳ ಭವಿಷ್ಯಕ್ಕೆ ಯಾವ ತೊಂದರೆ ಮಾಡದೆ ಅವರಿಗಾದರೂ ಹಸನು ಬಾಳನ್ನು ದೊರಕಿಸಿಕೊಡಬೇಕೆಂಬ ನಿವೇದನೆಯ ಪತ್ರ. ಮನೆ ಬಿಟ್ಟು ಹೊರಡುತ್ತಾಳೆ, ಕೃತಿ. ಗಂಡ ಮನೆಗೆ ಬಂದಾಗ ಪತ್ರ ನೋಡಿ ಸಂತೋಷ ಪಡುತ್ತಾನೆ! ಎರಡು ದಿನಗಳ ಅನಂತರ ಪತ್ರಿಕೆಯಲ್ಲಿ `ರೈಲಿನಡಿ ಮಹಿಳೆಯ ಆತ್ಮಹತ್ಯೆ ವರದಿ ಮೂಡುತ್ತದೆ. `ಸುಮಾರು ನಲವತ್ತು ವರುಷದ ಮಹಿಳೆ ರೈಲಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ, ಶವ ಗುರುತು ಹಿಡಿಯಲು ಅಸಾಧ್ಯವೆನ್ನುವಷ್ಟು ಜಜ್ಜಿ ಹೋಗಿರುವುದಾಗಿಯೂ ವರದಿ ತಿಳಿಸಿತ್ತು. ಶವದ ಮೇಲಿದ್ದ ಬಟ್ಟೆಯ ಗುರುತಿನಿಂದ ಆ ಶವ ಕೃತಿಯದೆಂದು ಮಕ್ಕಳು, ಗಂಡ ತಿಳಿಯುತ್ತಾರೆ.

ಇದಿಷ್ಟು ಕಥಾ ಸಾರಾಂಶ. ನನ್ನನ್ನು ಆಮೂಲಾಗ್ರವಾಗಿ ಕಲಕಿದ ವಸ್ತು.
ಸಭಾಂಗಣ ಕಿಕ್ಕಿರಿದಿತ್ತು. ನಾನು ಒಳಗೆ ಕಾಲಿಟ್ಟ ಕೂಡಲೆ, ನನ್ನನ್ನು ಸಂಸ್ಥೆಯ ಅಧ್ಯಕ್ಷರು ವೇದಿಕೆಯತ್ತ ಕರೆದೊಯ್ದು ಕೂಡಿಸಿದರು. ಮುಖ್ಯ ಅತಿಥಿಯಾಗಿ ಮಂತ್ರಿಮಹೋದಯರು ಆಗಮಿಸಿದ್ದರು. ಅನಂತರ, ಸ್ವಲ್ಪ ಸ್ಥೂಲವಾದ ಮೈ. ಸಂಪೂರ್ಣ ಬೆಳ್ಳಿಗೂದಲನ್ನು ಎತ್ತಿಕಟ್ಟಿದ ತುರುಬು, ಹಣೆಯ ಅರ್ಧ ತುಂಬಿದ ದುಂಡು ಕುಂಕುಮ, ಕಣ್ಣಿಗೆ ಕಪ್ಪು ಕನ್ನಡಕ, ಪ್ರಿಂಟೆಡ್ ಸಿಲ್ಕ್ ಸೀರೆಯುಟ್ಟು ಬರುತ್ತಿದ್ದ ವ್ಯಕ್ತಿಯನ್ನು ತೋರಿಸಿ ``ಇವರೇ ಶ್ರುತಿ, ನಿಮ್ಮನ್ನು ಆಹ್ವಾನಿಸಲು ಇವರೇ ಕಾರಣ ಎಂದು ಸಂಸ್ಥೆಯ ಅಧ್ಯಕ್ಷರು ಹೇಳಿದಾಗ, ನನಗಂತೂ ಬಹಳವೇ ಹಿಗ್ಗಾಯಿತು, ನನ್ನನ್ನು ನೋಡಿರದಿದ್ದರೂ ಸಹ ಎಂಥ ಅಭಿಮಾನ! ಅದೂ ಒಬ್ಬ ಅತ್ಯುತ್ತಮ ಲೇಖಕಿಯನ್ನು ಸಾಮಾನ್ಯನಾದ ನಾನು ಗೌರವಿಸುವುದೇನು ಸಾಮಾನ್ಯದ ಮಾತೇ ಎಂದು ಹಿಗ್ಗಾಯಿತು. ಈ ಲೇಖಕಿಯ ಕಥೆ-ಕಾದಂಬರಿಗಳನ್ನೋದಿ ನನ್ನ ವ್ಯಕ್ತಿತ್ವವನ್ನೇ ಪೂರಾ ಬದಲಾಯಿಸಿಕೊಂಡಿದ್ದಕ್ಕೆ ಸಾರ್ಥಕವೆನಿಸಿತ್ತು.

ಸ್ವಾಗತ, ಅತಿಥಿ ಭಾಷಣ ಆದಮೇಲೆ ಶ್ರುತಿಯವರು ಎದ್ದು ನಿಂತು ತಮಗೆ ವಾಚಕರಿಂದ ಕೃತಿ ಕಾದಂಬರಿ ಬಗ್ಗೆ ಅನೇಕ ಪ್ರಶ್ನೆಗಳು ಬಂದಿರುವುದಾಗಿಯೂ ಸಮಯಾಭಾವದಿಂದ ಕೇವಲ ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವುದಾಗಿಯೂ ಹೇಳಿದರು.

ಮೊದಲನೇ ಪ್ರಶ್ನೆ: `ಕೃತಿಯ ಗಂಡ ಇಷ್ಟಪಟ್ಟವಳನ್ನೇ ಮದುವೆಯಾದರೂ ಹಾಗೆ ನಡೆದುಕೊಂಡದ್ದೇಕೆ ?

``ಕೃತಿಯ ಗಂಡ ತಾನವಳನ್ನು ಉದ್ಧಾರ ಮಾಡಬೇಕೆಂದೇನೂ ಮದುವೆಯಾಗಲಿಲ್ಲ. ಅನಾಥಾಶ್ರಮದ ಬಾಲಕಿಯನ್ನು ವರದಕ್ಷಿಣೆಯಿಲ್ಲದೆ ಮದುವೆಯಾದವನೆಂದೂ ತಾನು ದೊಡ್ಡ ಆದರ್ಶವಾದಿಯೆಂದೂ ಪತ್ರಿಕೆಗಳಲ್ಲಿ ಫೋಟೋ ಹಾಗೂ ಪ್ರಚಾರ ಸಿಗುವುದೆಂದೂ ಹಾಗೆ ಮಾಡಿದ. ಜೊತೆಗೆ ಕೃತಿ ರೂಪವತಿ; ಅವನು ಅಷ್ಟೇ ಕುರೂಪಿ. ಒಂದೇ ಏಟಿಗೆ ಎರಡು ಹಣ್ಣು ಹೊಡೆದ.

ಎರಡನೇ ಪ್ರಶ್ನೆ: `ಗಂಡ ಕುಡುಕನಲ್ಲ, ಕುಂಟನಲ್ಲ, ಕುರುಡನಲ್ಲ. ಇಂಥವರನ್ನೇ ಕಟ್ಟಿಕೊಂಡು ಹೆಣಗುತ್ತಿರುವ ನಮ್ಮ ಸಮಾಜದಲ್ಲಿ ಕೃತಿ ಗಂಡನನ್ನು ಬಿಟ್ಟ ಕಾರಣವೇನು?

`ಕೃತಿ ನಿಜವಾದ ಬುದ್ಧಿಜೀವಿ, ಸ್ವಾಭಿಮಾನಿ ಸಹ. ಗಂಡ ಕುಡುಕ ಅಥವಾ ಕುರುಡ-ಕುಂಟರಾದರೆ ಸಮಾಜದ ಅನುಕಂಪ-ಕರುಣೆ ಅವಳ ಮೇಲೆ ಇರುತ್ತದೆ. ಆದರೆ ಕೃತಿಯ ವಿಷಯ ಹಾಗಲ್ಲ. ಅವಳು ಮೊದಲೇ ಅನಾಥಳು. ಅನಾಥಾಶ್ರಮದಲ್ಲಿ ಇವಳಿಗಿಂತ ದೊಡ್ಡವರೆಲ್ಲಾ ಇವಳ ಅದೃಷ್ಟಕ್ಕೆ ಕರುಬಿದ್ದರು. ರೋಗ ರಟ್ಟು ಸಂಸಾರ ಗುಟ್ಟು ಎನ್ನುವುದು ಅವಳಿಗೆ ರಕ್ತಗತವಾಗಿತ್ತು. ಗಂಡನ ಕಡೆಯ ನೆಂಟರಿಷ್ಟರ ಮುಂದೆ ತಾವು ಬರಿಗೈಯವರಾದರೆ ಆಡಿಕೊಂಡು ನಗುವವರ ಮುಂದೆ ಎಡವಿಬಿದ್ದಂತಾಗುತ್ತದೆಂದು, ಹಾಗೂ ಅವಳು ಹುಟ್ಟಿದಾಗಿನಿಂದಲೂ ಕಷ್ಟ ಪಟ್ಟಿದ್ದರಿಂದ ದುಡ್ಡಿನ ಬೆಲೆ ತಿಳಿದುಕೊಳ್ಳಬೇಕೆಂದು ಗಂಡನಿಗೆ ಪ್ರತಿಸಲ ತಿಳಿ ಹೇಳುತ್ತಿದ್ದಳು. ತನ್ನ ಗಂಡ ಸಂಶಯ ಪಿಶಾಚಿ ಎಂದಾಗಲೀ ಸದಾ ಜಗಳವಾಡುತ್ತಿರುತ್ತಾನೆಂದಾಗಲೀ ಯಾವ ಮಧ್ಯಮ ವರ್ಗದ ಗೃಹಿಣಿಯೂ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಕೃತಿಯ ಮನದ ಬೇಗುದಿಯನ್ನು ಗಂಡ ಅರಿತವನೇ ಅಲ್ಲ. ಇಪ್ಪತ್ತು ವರ್ಷದ ಬಾಳಿನಲ್ಲಿ ಒಂದು ದಿನವಾದರೂ ಅವಳನ್ನು ಸಂತೈಸಲಿಲ್ಲ. ಅವನಲ್ಲಿ ಸಮಾಜಕ್ಕೆ ಕುಂದೇನೂ ಕಾಣುತ್ತಿರಲಿಲ್ಲ. ಆದರೆ ಕೃತಿಗೆ ಹಗಲು ರಾತ್ರಿ ಅವನೊಡನೆ ಏಗುವುದರಲ್ಲಿ ಸಾಕಾಗುತ್ತಿತ್ತು. ಕೆಳವರ್ಗ-ಮೇಲು ವರ್ಗದವರು ಗಂಡನನ್ನು ವಿಚ್ಛೇದನ-ಮರುಮದುವೆ ಇರಲಿ, ಗಂಡನನ್ನು ಬಿಟ್ಟು ಒಂಟಿಯಾಗಿ ಬಾಳುವುದನ್ನು ನೆನಸಿಕೊಂಡೇ ನಡುಗುತ್ತಾರೆ. ಇದೂ ಒಂದು ರೀತಿ ಹೆಣ್ಣಿನ ಶೋಷಣೆ ! ಕೃತಿಯ ಉದ್ಯಮವನ್ನು ಮೇಲೆ ಮೇಲೆ ಬೇಡವೆನ್ನುತ್ತಿದ್ದ ಗಂಡ ಅವಳು ಅದನ್ನು ಬಿಟ್ಟ ಮೇಲೆ ಅವನ ಸಿಡಿಮಿಡಿ ಹೆಚ್ಚಾಗತೊಡಗಿತು. ಆಗ ಕಾರಣ ಕೇಳಿದಾಗ `ಹಾಳಾಗಿ ಹೋಗು’ ಎಂದ ಗಂಡ. ಅಂದು ಆಕೆ ಅಂತಿಮ ನಿರ್ಧಾರ ತೆಗೆದುಕೊಂಡಳು.

ಮೂರನೇ ಪ್ರಶ್ನೆ: `ಮನೆಬಿಟ್ಟು ಹೊರಟ ಕೃತಿಯ ಶವ ಎರಡು ದಿನಗಳ ಬಳಿಕ ದೊರೆತದ್ದು ಹೇಗೆ?

``ಕೃತಿ ಪತ್ರ ಬರೆದ ನಂತರ ಮನಸ್ಸು ಬದಲಾಯಿಸಿ ತನ್ನ ಮನೆಯಲ್ಲೇ ಅಡಗಿ ಕೂತಳು. ಗಂಡ ತನಗಾಗಿ ಅರಸಬಹುದು ಎಂಬ ಆಸೆಯಿಂದ. ಆದರೆ ಗಂಡ ಪತ್ರ ಹರಿದು ಹಾಕಿ `ಪೀಡೆ ತೊಲಗಿತು ಎಂದು ಜೋರಾಗಿ ನಕ್ಕಾಗ ಅವಳಿಗೆ ಭೂಮಿ ಬಾಯ್ದೆರೆಯಬಾರದೇ ಎನಿಸಿತು. ಮರುಕ್ಷಣವೇ ಇನ್ನು ಸೋಲಲು ಸಾಧ್ಯವೇ ಇಲ್ಲ ಎಂದು ಯಾರಿಗೂ ತಿಳಿಯದಂತೆ ಮನೆಯಿಂದ ಹೊರಟು ಅಬಲಾಶ್ರಮಕ್ಕೆ ಸೇರಿ ದಿನಗಳೆಯತೊಡಗಿದಳು. ಗಂಡ-ಮಕ್ಕಳು ತಿಳಿದಂತೆ ಆಕೆ ಸಾಯಲಿಲ್ಲ. ಈ ವಿಷಯ ನನಗೆ ಹೇಗೆ ತಿಳಿಯಿತು ಎಂದು ನಿಮಗೆ ಅಚ್ಚರಿಯೇ ? ಆಕೆ ನನ್ನ ಆಪ್ತ ಗೆಳತಿ. ನಾವು ಒಂದೇ ಜೀವ-ಎರಡು ದೇಹ ಎಂಬಂಥವರು.

ಶ್ರುತಿಯವರು ಅಳತೊಡಗಿದರು. ನಾನು ಕ್ಷೊಭೆಗೊಳಗಾದೆ. ಸಭೆಯಲ್ಲಿ ಗುಸುಗುಸು ಆರಂಭವಾಯಿತು. ಯಾರೋ ಕೂಗಿದರು: ``ನಿಮ್ಮ ಪತಿದೇವರಿಗೆ ಎಂದು ಅರ್ಪಣೆ ಮಾಡಿದ್ದೀರಿ. ಆದರೆ ಅವರ ಬಗ್ಗೆ ಏನೂ ಹೇಳಿಲ್ಲ...”
​
``ನನ್ನ ವೈಯಕ್ತಿಕ ವಿಷಯದ ಪ್ರಸ್ತಾಪ ಇಲ್ಲಿ ಬೇಡ ಎನ್ನುತ್ತ ಶ್ರುತಿಯವರು ಪುಸ್ತಕದಲ್ಲಿ ತಮ್ಮ ಹೆಸರು ಬರೆದು, ಕನ್ನಡಕ ತೆಗೆದು ನನ್ನೆಡೆಗೆ ಬಂದರು. ಆ ಕಣ್ಣುಗಳನ್ನು ನೋಡುತ್ತಿದ್ದಂತೆ ನನಗೆ ಗಾಬರಿಯಾಯಿತು. ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಇಪ್ಪತ್ತೈದು ವರ್ಷಗಳ ಹಿಂದೆ ನನ್ನಿಂದ ದೂರವಾದ ನನ್ನ ಪತ್ನಿ ಕಥಾನಾಯಕಿ ಕೃತಿ ಹಾಗೂ ಶ್ರುತಿ ನನ್ನ ಮುಂದೆ ನಿಂತಿದ್ದಳು.
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Social Work Foot Prints
    Follow me on Academia.edu

    Archives

    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015

    Categories

    All
    Academic Books
    Conference Books
    HR Books
    Kannada Books
    Social Work Books


    ​List Your Product on Our Website 

    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com