Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಕಾಡುಗೊಲ್ಲ ಮಹಿಳೆ : ಸಾಂಸ್ಕೃತಿಕ ಸಂಕಥನ

8/23/2018

2 Comments

 
Picture
ಲೇಖಕರು : ಡಾ. ಹೆಚ್.ಆರ್. ರೇಣುಕ
ಪುಟ : 192
ಮುನ್ನುಡಿ
ಜಾನಪದ ಅಧ್ಯಯನಗಳು ಇಂದು ಸಂಗ್ರಹಣ, ಪರಿಷ್ಕರಣ, ವಿಶ್ಲೇಷಣಾ ಹಂತಗಳನ್ನು ದಾಟುತ್ತಾ ಇತಿಹಾಸ, ಸಂಸ್ಕೃತಿಯ ಅನನ್ಯವಾದ ಸಂಗತಿಗಳಾಗುವ ಹಂತವನ್ನು ಮೀರಿ ಬದುಕನ್ನು ಕಟ್ಟಿಕೊಡುವ ಆರ್ಥಿಕ ಪ್ರಧಾನ ಯೋಜನೆಗಳಾಗಿ ರಾಜಕಾರಣ ನೀತಿ ನಿರುಪಗಳಾಗುತ್ತಿವೆ. ಜಾನಪದ ಅಧ್ಯಯನಗಳಲ್ಲಿ ಆಗಿರುವ ಈ ಬದಲಾವಣೆಯು ಅನೇಕ ಸಾಮಾಜಿಕ ಸಂಸ್ಥೆಗಳನ್ನು,  ಸಮುದಾಯ ಸಂಘಟನೆಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲ ಅತೀಸಣ್ಣ, ಸಣ್ಣ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮುನ್ನೆಲೆಗೆ ತರುತ್ತಿದೆ. ಹೀಗೆ ಹೊಸ ತಲಮಾರಿನ ಜಾನಪದ ಅಧ್ಯಯನಗಳು ಹೆಚ್ಚು ವಸ್ತು ನಿಷ್ಟವಾಗುತ್ತಿವೆ. ಸಮಗ್ರವಾಗಿದ್ದ ಜಾನಪದ ಅಧ್ಯಯನಗಳು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಅಭಿವೃದ್ಧಿ, ಬೌದ್ಧಿಕ, ಭೌತಿಕ, ಕಸುಬು, ಕಲೆ, ವೈದ್ಯ ಹೀಗೆ ನಾನಾ ಬಗೆಯಲ್ಲಿ ಸೂಕ್ಷ್ಮಗೊಂಡಿವೆ. ಜಾನಪದ ಅಧ್ಯಯನ ವಿಭಾಗಗಳು, ಅಧ್ಯಯನ ಪೀಠಗಳು, ಜಾನಪದ ವಿಶ್ವವಿದ್ಯಾನಿಲಯಗಳು ಈ ಸೂಕ್ಷ್ಮ ಅಧ್ಯಯನದ ಪ್ರತಿಫಲವಾಗಿವೆ ಎಂದರೆ ತಪ್ಪಾಗಲಾರದು. 
ಜಾನಪದೀಯ ಅಧ್ಯಯನಗಳು ಆರಂಭಗೊಂಡು ಅಂದಿನಿಂದ ಇಂದಿನವೆರಗೂ ಕಾಡುಗೊಲ್ಲ ಬುಡಕಟ್ಟು ಸಮುದಾಯವನ್ನು ನಿರಂತರವಾಗಿ ಶೋಧಿಸುತ್ತಲೇ ಬಂದಿದೆ. ಕಾಡುಗೊಲ್ಲ ಬುಡಕಟ್ಟಿನ ಹಿನ್ನಲೆ, ಇತಿಹಾಸ, ಸಾಹಿತ್ಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಜೀವನ, ಕಸುಬು, ಈ ಮೊದಲಾದವನ್ನು ಕುರಿತು ಸುಮಾರು ಎಂಭತ್ತಕ್ಕು ಹೆಚ್ಚು ಸಂಶೋಧನಾ ಪ್ರಧಾನ ಅಧ್ಯಯನಗಳು ಮಂಡಿತವಾದರೂ ಅಲ್ಲಿಗೆ ನಿಲ್ಲದೆ ಮುಂದುವರಿಯುತ್ತಲೇ ಇದೆ. ಇದು ಕಾಡುಗೊಲ್ಲ ಬುಡಕಟ್ಟಿನ ವೈವಿಧ್ಯಮಯವಾದ ಬದುಕಿನ ಸಿರಿವಂತಿಕೆಯನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ.

ಜಾನಪದೀಯ ಸಾಂಸ್ಕೃತಿಕ ಕರ್ನಾಟಕದಲ್ಲಿ ಕಾಡುಗೊಲ್ಲ ಬುಡಕಟ್ಟು ವಿಶಿಷ್ಟ ಸಮುದಾಯ. ಈ ಬುಡಕಟ್ಟು ಇಂದು ಜಾಗತೀಕರಣ ಆಧುನಿಕ ಬದುಕಿನ ತಿಕ್ಕಾಟಗಳ ನಡುವೆ ತಮ್ಮ ನೆಲಮೂಲ ಸಂಸ್ಕೃತಿಯನ್ನು ಕಾಪಾಡಿಕೊಂಡು ಬುಡಕಟ್ಟಾಗಿಯೆ ಉಳಿಯುವ ಅಭೀಪ್ಸೆಗಳನ್ನು ಎದೆಯಲ್ಲಿರಿಸಿಕೊಂಡು ಆಧುನಿಕ ಬದುಕಿನ ಮೈ ಪಡೆದು ಅನೇಕ ಸ್ಥಿತ್ಯಂತರಗಳನ್ನು ಎದುರಿಸುತ್ತಿದೆ. ಊರೊಟ್ಟಿಗಿನ ಬದುಕು ಬುಡಕಟ್ಟಿನ ಬದುಕಿನ ಬೇಲಿಯನ್ನು ದಾಟುವಂತೆ ಮಾಡಿದೆ. ವೃತ್ತಿ ಪಲ್ಲಟಗಳು ಉತ್ತಮ ಜೀವನಮಟ್ಟ  ಹೊಂದಲು ಸಹಾಯ ಮಾಡಿವೆ, ಶಿಕ್ಷಣ ನಾಗರೀಕ ಬದುಕನ್ನು ಸಾಧ್ಯ ಮಾಡಿವೆ. ಈ ಎಲ್ಲಾ ಬದಲಾವಣೆಗಳು ಬುಡಕಟ್ಟಿನ ಬದುಕನ್ನು ಆಮೂಲಾಗ್ರವಾಗಿ ಬದಲಾಯಿಸುತ್ತಿವೆ. ಆದರೂ ಈ ಬದಲಾವಣೆಗಳು ಸಾರ್ವತ್ರಿಕವಾಗಿಲ್ಲ. ನಗರ, ಜಿಲ್ಲಾ ಕೇಂದ್ರಗಳಿಗೆ ಹತ್ತಿರವಾಗಿರುವ ಬುಡಕಟ್ಟಿನಲ್ಲಿ ಆಗಿರುವಷ್ಟು ಸುಧಾರಣೆಗಳು ಗ್ರಾಮೀಣ ಸಮಾಜಕ್ಕೆ ಹತ್ತಿರವಾಗಿರುವ ಬುಡಕಟ್ಟಿನಲ್ಲಿ ಇಲ್ಲ. ಕಾಡುಗೊಲ್ಲ ಪುರುಷರಲ್ಲಿ ಉಂಟಾಗಿರುವ ಪ್ರಗತಿಮುಖಿಯಾದ ಬದಲಾವಣೆಗಳು ಕಾಡುಗೊಲ್ಲ ಮಹಿಳಾ ಬದುಕಿನಲ್ಲಿ ಉಂಟಾಗಿಲ್ಲ.

ಕಾಡುಗೊಲ್ಲ ಬುಡಕಟ್ಟು ಆಚರಣೆ, ಸಂಸ್ಕೃತಿ, ಸಾಹಿತ್ಯವನ್ನು ಸಮೃದ್ಧವಾಗಿ ಹೊಂದಿದ್ದು ಇವು ಪುರುಷ ಪ್ರಣೀತವಾಗಿವೆ. ಮಹಿಳಾ ಬದುಕಿನ ಮಾನವೀಯ ಅಪೇಕ್ಷೆಗಳು ಈ ಸಮೃದ್ಧತೆಯನ್ನು ನಿರ್ಬರಗೊಳಿಸುತ್ತಿವೆ. ಜೀವವಿರೋಧಿಯಾದ ಆಚರಣೆ ಸಂಸ್ಕೃತಿಯನ್ನು ಉಳಿಸಿಕೊಂಡು ಆಗಬೇಕಿರುವುದು ಏನೂ ಇಲ್ಲವಾದ್ದರಿಂದ ಬುಡಕಟ್ಟಿನ ಸಂಕೋಲೆಗಳನ್ನು ದಾಟಿ ಎಲ್ಲರಂತೆ ಸ್ವತಂತ್ರ ಬದುಕಿಗೆ ತೆರೆದುಕೊಳ್ಳ ಬಯಸುವ ಮಹಿಳಾ ಬದುಕಿನ ಹಂಬಲಗಳಿಗೆ ಇನ್ನಾದರೂ ಬುಡಕಟ್ಟು ದಾರಿ ಕೊಡಬೇಕಿದೆ. ಸಂಸ್ಕೃತಿಯ ಅನನ್ಯತೆಯ ಹೆಸರಿನಲ್ಲಿ ನಡೆಸುವ ಬುಡಕಟ್ಟಿನ ಆಚರಣೆಗಳು ಮಹಿಳಾ ಬದುಕಿನ ವೈವಿಧ್ಯತೆಯನ್ನೇ ಹೊಸಕಿ ಹಾಕಿವೆ. ಸಂಸ್ಕೃತಿಯೊಳಗೆ ಶ್ರೇಷ್ಠವೆನಿಸಿಕೊಂಡಿರುವ ಮಡಿತನವು ಮಹಿಳೆಯರ ಅಸ್ಮಿತೆಯನ್ನು ಮರೆಸಿವೆ  ಮಹಿಳಾ ವಿಷಯದಲ್ಲಿ ಬುಡಕಟ್ಟಿನ ಸಾಂಪ್ರದಾಯಿಕ ಮನುಸ್ಸು ಬದಲಾಗದೆ ವಿಧಿಯಿಲ್ಲ.

ಕಾಡುಗೊಲ್ಲ ಮಹಿಳಾ ಸಂಕಥನ ಪುಸ್ತಕವು ಕಾಡುಗೊಲ್ಲ ಮಹಿಳೆಯರ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವುದರ ಜೊತೆಗೆ ಬುಡಕಟ್ಟಿನ ಮಹಿಳೆಯರ ಬದುಕು ಬವಣೆಗಳನ್ನು ಮನೋಜ್ಞವಾಗಿ ಚಿತ್ರಿಸಿದೆ. ಈ ಮೌಖಿಕ ಸಂಸ್ಕೃತಿಯ ಒಳಗೆ ಸ್ತ್ರೀ ಶಕ್ತಿ ಮೂಲಗಳಿಗಿಂತ ಹೆಚ್ಚಾಗಿ ಸ್ತ್ರೀ ಶೋಷಣೆಯ ನೆಲೆಗಳಿರುವುದನ್ನು ಪುಸ್ತಕ ಸ್ಪಷ್ಟಪಡಿಸುತ್ತದೆ. ಉದಾಹರಣೆಗೆ ಈ ಪುಸ್ತಕದಲ್ಲಿರುವ ತಾಳೆ ದುರುಗಿಯ ಪ್ರಸಂಗವನ್ನು ಗಮನಿಸಬಹುದು. ಮಡಿ ಮೈಲಿಗೆಯ ನಡುವಿನ ಸಂಘರ್ಷದ ಸ್ವರೂಪವನ್ನು, ಲಿಂಗಭೇದ ನೀತಿಯನ್ನು ಈ ಪ್ರಸಂಗವು ವಿಶಿಷ್ಟವಾಗಿ ನಿರೂಪಿಸಿದೆ. ತಾಳೇದುರುಗಿ ಮೈಲಿಗೆಯ ವಿರುದ್ಧ ಸಿಡಿಯುವ ಮಹಿಳಾ ಮನೋವೇದನೆಯ ರಾಕ್ಷಸಿ ಶಕ್ತಿಯಾಗಿ  ಕಾಣಿಸಿಕೊಂಡು ಮೈಲಿಗೆಯ ಬಟ್ಟೆಯನ್ನೆ ಧರಿಸಿ ಮಡಿತವನ್ನು ಮೆಟ್ಟುತ್ತಾಳೆ. ಬುಡಕಟ್ಟಿನ ಮಹಿಳೆಯರು ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಈ ಪ್ರಸಂಗ ಮಾರ್ಗದರ್ಶನ ಮಾಡುತ್ತದೆ. ಕಾಡುಗೊಲ್ಲರ ಸಾಹಿತ್ಯದಲ್ಲಿ  ಲಭ್ಯವಿರುವ ಇಂತಹ ಮಹಿಳಾ ಇತಿಹಾಸವು ಈ ಮಹಿಳೆಯರ ಅಧೀನ ನೆಲೆಗಳನ್ನು ದಾಖಲಿಸುತ್ತದೆ. ಹಾಗೆಯೇ ವರ್ತಮಾನ ಬದುಕಿನೊಳಗಿರುವ ಬಾಲ್ಯವಿವಾಹ, ಮೈಲಿಗೆಯ ಆಚರಣೆಗಳು, ಶಿಕ್ಷಣಕ್ಕೆ ಪ್ರೋತ್ಸಾಹವಿಲ್ಲದಿರುವಿಕೆ, ಸಮಾನ ವೇತನರಹಿತ ದುಡಿಮೆ, ಕೂಲಿ ಮೊದಲಾದವು ಉತ್ತಮ ಬದುಕಿನಿಂದ ಈ ಮಹಿಳೆಯರನ್ನು ವಂಚಿತರನ್ನಾಗಿಸಿರವುದು ಚಿಂತನಾತ್ಮಕ ಸಂಗತಿಗಳೆನಿಸುತ್ತವೆ. ಕಾಡುಗೊಲ್ಲರ ಬುಡಕಟ್ಟನ್ನು ಕುರಿತು ಇದುವರೆಗು ಹಲವು ಅದ್ಯಯನಗಳು ನಡೆದಿವೆ. ಕಾಡುಗೊಲ್ಲ ಬುಡಕಟ್ಟಿನ ಮಹಿಳೆಯರನ್ನು ಕೇಂದ್ರೀಕರಿಸಿದ ಅಧ್ಯಯನಗಳೂ ವಿಫುಲವಾಗಿವೆ. ಈ ಅಧ್ಯಯನಗಳು ಕಾಡುಗೊಲ್ಲರ ಇತಿಹಾಸ ಸಾಹಿತ್ಯ ಸಂಸ್ಕೃತಿಯ ಶ್ರೇಷ್ಠತೆಯ ದಾಖಲೆಗೆ ಹೆಚ್ಚ್ಚು ಒತ್ತು ನೀಡಿವೆ. ಬುಡಕಟ್ಟಿನ ಮಹಿಳಾ ಪ್ರಧಾನ ಅಧ್ಯಯನಗಳು ಇದರಿಂದ ಹೊರತಾಗಿಲ್ಲ. ಮಹಿಳಾ ಸಂವೇದನೆಗಳಿಗೆ ಕಿವುಡಾಗಿರುವ ಈ ಅಧ್ಯಯನಗಳು ಅವರನ್ನು ಸಾಂಸ್ಕೃತಿಕವಾಗಿ ಶ್ರೇಷ್ಠತೆ ಎಂಬ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತವೆ. ಆದರೆ  ಈ ಬುಡಕಟ್ಟಿನ ಮಹಿಳೆಯರು ಹಲವು ಬಗೆಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಗಾಗಿರುವುದನ್ನು ಈ ಪುಸ್ತಕವು ಅವರ ಮಾತುಗಳಿಗೆ ಧ್ವನಿಯಾಗುವ ಮೂಲಕ ತೆರೆದಿಡುತ್ತದೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದ ರೀತಿ-ನೀತಿ ಬಗ್ಗೆ ನೀಡಿರುವ ಮಾಹಿತಿಗಳು ಅವರ ಅತೃಪ್ರ ಬದುಕನ್ನು ಸಂಕೇತಿಸುತ್ತವೆ.

ಕಾಡುಗೊಲ್ಲ ಬುಡಕಟ್ಟು ಸಮುದಾಯ ಇಂದು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಸಂಘಟಿತವಾಗಿ ಹೋರಾಡುತ್ತಿದೆ ಹಾಗೂ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಂಡೂ ಬುಡಕಟ್ಟಾಗಿ ಉಳಿದುಕೊಳ್ಳಬೇಕೆಂಬ ನಿರಂತರ ಪ್ರಯತ್ನದಲ್ಲಿದೆ. ಜೊತೆಗೆ ಆಧುನಿಕ ಬದುಕಿಗೆ ಮುಖಾಮುಖಿಯಾಗುತ್ತಾ ಅದನ್ನು ಒಪ್ಪಿಕೊಳ್ಳಲೇಬೇಕಾದ ಸ್ಥಿತ್ಯಂತರ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರ ನಿಲುವುಗಳು ಏನಾಗಿವೆ ಎಂಬುದು ಮುಖ್ಯವಾಗಿ ತಿಳಿದುಕೊಳ್ಳಲೇಬೇಕಾದ ಸಂಗತಿಯಾಗಿದೆ. ಈ ಪುಸ್ತಕದಲ್ಲಿ ಬುಡಕಟ್ಟಿನೊಳಗಿರುವ ಮೈಲಿಗೆ ಆಚರಣೆಗಳನ್ನು ವಿರೋಧಿಸುವ ಮತ್ತು ಸಾಮಾಜಿಕ ನಿರ್ಬಂಧಗಳನ್ನು ಮುರಿಯುವ ಹಾಗೂ ನಾಗರೀಕ ಬದುಕಿಗೆ ತೆರೆದುಕೊಳ್ಳುವ ಆಕಾಂಕ್ಷೆಗಳನ್ನು ಮಹಿಳೆಯರು ವ್ಯಕ್ತಪಡಿಸುತ್ತಾರೆ. ಬುಡಕಟ್ಟಿನೊಳಗಿರುವ ಪುರುಷ ಪರಮಾಧಿಕಾರವನ್ನು ಪ್ರತಿಭಟಿಸುವ ತಣ್ಣನೆಯ ಆಕ್ರೋಶ ಅವರ ಮಾತುಗಳಲ್ಲಿದೆ. ಬುಡಕಟ್ಟು ಕೇಂದ್ರಿತ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನಗಳು, ಇಂದಿನ ಬುಡಕಟ್ಟು ಸಂಸ್ಕೃತಿ ಅಳಿವಿನ ಅಂಚಿಗೆ ತಲುಪುತ್ತಿವೆ ಎಂಬ ಹಳಹಳಿಕೆಯಲ್ಲಿ ಅದರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ದಾಖಲಿಸುವ ಪ್ರಯತ್ನ ಮಾತ್ರವಾಗಿರದೆ, ಪ್ರಸ್ತುತ ಅವರ ಜೀವನ ಮಟ್ಟ ಸುಧಾರಣೆಯಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತ ಅಧ್ಯಯನ ನಡೆಸಬೇಕಾದ ತುರ್ತು ಇದೆ.

ಕಾಡುಗೊಲ್ಲ ಬುಡಕಟ್ಟಿನ ಸಮಸ್ಯೆಗಳಿಗೆ ಮಹಿಳಾ ಬದುಕಿಗೆ ಸಂಬಂಧಿಸಿದ ಆಚರಣೆಗಳು ಸಮಸ್ಯೆಯಾಗಿ ಕಾಣುವುದಿಲ್ಲ. ಬದಲಿಗೆ ಅವು ಸಾಂಸ್ಕೃತಿಕ ಅನನ್ಯತೆಯಾಗಿ ಗುರುತಿಸಿಕೊಳ್ಳುತ್ತವೆ. ಪುರುಷ ಪ್ರಧಾನ ಸಂಸ್ಕೃತಿಯ ಬೀಗುವಿಕೆಯನ್ನು ಇಲ್ಲಿನ ಮಹಿಳೆಯರ ಮಾತುಗಳು ಒಡೆಯಬಲ್ಲವಾಗಿವೆ. ಈ ಮಹಿಳೆಯರ ಸಮಸ್ಯೆಗಳು ಸಮಾಜದೊಳಗಿರುವ ವಿವಿಧ ಸಮುದಾಯಗಳ ಸಮಸ್ಯೆಗಳಂತೆಯೆ ಗೋಚರಿಸಿದರೂ ಆಂತರ್ಯದಲ್ಲಿ ಅವು ಭಿನ್ನವಾಗಿವೆ. ಹಟ್ಟಿಕೇಂದ್ರಿತ ಈ ಮಹಿಳಾ ಬದುಕನ್ನು ಕುರಿತು ಪ್ರತ್ಯೇಕ ಅಧ್ಯಯನಗಳು ಅಗತ್ಯವಾಗಿದ್ದು ಅಂತಹ ಪ್ರಯತ್ನವನ್ನು ಈ ಪುಸ್ತಕವು ನಿರ್ವಹಿಸಿದೆ. ಹತ್ತೊಂಬತ್ತನೆಯ ಶತಮಾನದಿಂದೀಚೆಗೆ  ಮಹಿಳಾ ಕೇಂದ್ರಿತ ಅಧ್ಯಯನಗಳು ವ್ಯಾಪಕವಾಗಿ ನಡೆಯುತ್ತಿವೆ. ವಿಭಿನ್ನ ಸಂಸ್ಕೃತಿಗಳನ್ನು ಹೊಂದಿರುವ ಭಾರತೀಯ ಸಮಾಜದಲ್ಲಿ ಮಹಿಳಾ ವಿಷಯವನ್ನು ಸಾರ್ವತ್ರೀಕರಿಸಿ ನಡೆಸಿರುವ ಅಧ್ಯಯನಗಳೇ ಹೆಚ್ಚು. ವಿಭಿನ್ನ ಸಂಸ್ಕೃತಿಗಳಂತೆಯೇ ಆಯಾ ಸಮಾಜದ ಮಹಿಳಾ ವಿಷಯಗಳು ವಿಭಿನ್ನವಾಗಿಯೆ ಇದ್ದು ಆಯಾ ಸಂಸ್ಕೃತಿಗಳ ಹಿನ್ನೆಲೆಯಲ್ಲಿಯೆ ಮಹಿಳಾ ಕೇಂದ್ರಿತ ಅಧ್ಯಯನಗಳು ನಡೆಯಬೇಕಿದೆ. ಹಾಗಿದ್ದಾಗ ಮಾತ್ರ ಅಧ್ಯಯನಗಳಿಂದ ರಚನಾತ್ಮಕ ಪರಿಣಾಮಗಳನ್ನು ನಿರೀಕ್ಷಿಸಬಹುದಾಗಿದೆ. ಕರ್ನಾಟಕದ ಸಂಸ್ಕೃತಿಗಳಲ್ಲಿ ಅನನ್ಯವಾಗಿರುವ ಕಾಡುಗೊಲ್ಲ ಬುಡಕಟ್ಟಿನ ಸಂಸ್ಕೃತಿಯೊಳಗೆ ಮಹಿಳಾ ವಿಷಯಗಳನ್ನು ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಹೀಗೆ ವಿವಿಧ ದೃಷ್ಟಿಕೋನಗಳಲ್ಲಿ ಈ ಪುಸ್ತಕವು ಉತ್ತಮವಾಗಿ ಪ್ರಸ್ತುತಪಡಿಸಿದೆ. ಇತರ ಸಮುದಾಯದ ಮಹಿಳೆಯರಿಗಿಂತ ಈ ಬುಡಕಟ್ಟಿನ ಮಹಿಳೆಯರ ಸ್ಥಿತಿಗತಿಗಳು ವಿಭಿನ್ನವಾಗಿರುವುದನ್ನು ಈ  ಪುಸ್ತಕವು ತಲಸ್ಪರ್ಶಿಯಾಗಿ ಅಧ್ಯಯನಕ್ಕೆ ಒಳಪಡಿಸಿದೆ. ಈ ಸಂಗತಿ ಈ ಬುಡಕಟ್ಟಿನ ಮಹಿಳೆಯರಿಗಾಗಿಯೆ ಕೈಗೊಳ್ಳಬೇಕಾದ ಪ್ರಗತಿಪರ ಕಾರ್ಯಗಳಿಗೆ ಮಾರ್ಗದರ್ಶನ ನೀಡುವಂತಿದೆ.

ಬುಡಕಟ್ಟಿನೊಳಗೆ ಇತ್ತೀಚಿಗೆ ಏರ್ಪಡುತ್ತಿರುವ ಆರ್ಥಿಕ ವಲಸೆಯು ಕಳವಳವನ್ನು ಹುಟ್ಟಿಸುತ್ತದೆ. ಮಹಿಳೆಯರು ಇರುವ ಸ್ಥಳದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳಲಾಗದೆ ದುಡಿಮೆಗಾಗಿ ನಗರಗಳ ಕಡೆ ಮುಖ ಮಾಡುತ್ತಿದ್ದಾರೆ, ಇದು ಈ ತಲಮಾರಿನ ಯುವತಿಯರು ಪ್ರೌಢ ಅಥವ ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗಕ್ಕೆ ನಗರಗಳ ಕಡೆಗೆ ವಲಸೆ ಹೋಗುವಂತೆ ಪ್ರೇರೇಪಿಸುತ್ತಿದೆ. ಬೌದ್ಧಿಕ ಅಸ್ತಿತ್ವವಿಲ್ಲದೆ ವಲಸೆಯಿಂದುಂಟಾದ ಆರ್ಥಿಕ ಸ್ವಾತಂತ್ರ್ಯ ಈ ಮಹಿಳೆಯರ ಬದುಕನ್ನು ಎತ್ತರಿಸುವಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ.

ಅಪಾರ ಮಾನವ ಸಂಪನ್ಮೂಲವನ್ನು ಹೊಂದಿರುವ ಭಾರತವು ತನ್ನ ಪ್ರಗತಿಗೆ ಮಹಿಳಾ ಸಮುದಾಯದ ಕೊಡುಗೆಯನ್ನು ನಿರ್ಲಕ್ಷಿಸುವಂತೆ ಇಲ್ಲ. ಸಾಂಪ್ರದಾಯಿಕವಾಗಿ ಭಾರತದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ದಮನಕ್ಕೆ ಒಳಗಾಗಿರುವ ಮಹಿಳೆಯರ ಸರ್ವತೋಮುಖ ಸಬಲೀಕರಣಕ್ಕಾಗಿ, ಸಮಾಜವು ಸನ್ನದ್ಧವಾಗಿ ಅಭಿವೃದ್ಧಿ ಯೋಜನೆಗಳು, ಉಚಿತ ಸೇವೆಗಳು, ಮೀಸಲಾತಿ, ಕಾನೂನು ಮತ್ತು ಶಾಸನಾತ್ಮಕ ಬೆಂಬಲವನ್ನು ನೀಡುತ್ತಿದ್ದರೂ ಮಹಿಳೆಯರು ಸಮಾನತೆಯನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಲಭ್ಯವಿರುವ ಎಷ್ಟೋ ಅವಕಾಶಗಳ ಕುರಿತು ಮಹಿಳೆಯರಿಗೆ ಅರಿವಿಲ್ಲ. ಅಭಿವೃದ್ಧಿ ಯೋಜನೆಗಳ ನೈಜ ಫಲಾನುಭವಿಯಾಗಲು ಸಾಧ್ಯವಾಗಿಲ್ಲ. ಕೆಲವೊಮ್ಮೆ ಅಧಿಕಾರಿಯ ಶಕ್ತಿಗಳು ಮಹಿಳೆಯರ ಸ್ವತಂತ್ರ ಅಸ್ಮಿತೆಯ ದಾರಿಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಬಿಡುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮುದಾಯ ಕೇಂದ್ರಿತ ಅಧ್ಯಯನಗಳು ಅದರಲ್ಲಿಯು ಮಹಿಳಾ ಅಧ್ಯಯನಗಳು ಹೆಚ್ಚು ತೀಕ್ಷ್ಣವಾಗಿ ಇರಬೇಕಾಗುತ್ತದೆ. ಮಹಿಳೆಯರ ಹಕ್ಕು ಅವಕಾಶಗಳನ್ನು, ಸಮಾನತೆಯನ್ನು ಪ್ರತಿರೋಧಿಸುವ ಸಂಗತಿಗಳ ನಿರ್ಮೂಲನೆಗೆ ಮೊದಲು ಆ ಸಂಗತಿಗಳ ಮೂಲ ಬೇರನ್ನು ಹುಡುಕಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಸೂಕ್ಷ್ಮ ಅಧ್ಯಯನಗಳ ಅಗತ್ಯವಿದೆ.

ಈಗಾಗಲೆ ಕಾಡುಗೊಲ್ಲ ಬುಡಕಟ್ಟನ್ನು ಕುರಿತು ಅಧ್ಯಯನಗಳು ನಡೆದಿದ್ದರು ಅವೆಲ್ಲಾ ಮಹಿಳಾ ಸಮಸ್ಯೆಗಳನ್ನು ವಸ್ತುನಿಷ್ಟವಾಗಿ ಗುರುತಿಸುವಲ್ಲಿ ಸಫಲವಾಗಿರಲಿಲ್ಲ. ಈ ಅಧ್ಯಯನಗಳಲ್ಲಿ ಕಂಡು ಬರುತ್ತಿದ್ದ ಮಹಿಳೆಯರು ಪುರುಷ ಪ್ರಧಾನ ಸಮಾಜದ ಎರಕದಲ್ಲಿ ಹೊಯ್ದ ಪ್ರತಿಮೆಗಳಾಗಿದ್ದರು. ಇದನ್ನು ಮನಗಂಡ ಕಾಡುಗೊಲ್ಲ ಬುಡಕಟ್ಟಿನ ಮಹಿಳೆಯರ ಬದುಕನ್ನು ಅವರ ಮಾತುಗಳಲ್ಲಿ ಕೇಳಿ, ಅವರ ಬದುಕನ್ನು ಸಮೀಪದಿಂದ ಗಮನಿಸಿ ಅವರ ನೈಜ ಸ್ಥಿತಿಯನ್ನು ಕುರಿತು ಅಧ್ಯಯನ ನಡೆಸಲು ರೇಣುಕರವರು ನನ್ನ ಬಳಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಕಾಡುಗೊಲ್ಲ ಮಹಿಳೆಯರನ್ನು ಕುರಿತು ಅಧ್ಯಯನ ನಡೆಸಬೇಕಾದ ನನ್ನ ಆಲೋಚನೆಗಳನ್ನು ಚರ್ಚಿಸಿದೆ ಮತ್ತು ಅಧ್ಯಯನ ನಡೆಸಲೇಬೇಕಾದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟೆ. ನನ್ನ ಆಲೋಚನೆಗಳನ್ನು ಗಂಭೀರವಾಗಿ ತೆಗೆದುಕೊಂಡ ಅವರು ಅಧ್ಯಯನ ನಡೆಸಿರುವ ಫಲ ಪುಸ್ತಕ ರೂಪದಲ್ಲಿ ತಮ್ಮ ಮುಂದಿದೆ. ಬುಡಕಟ್ಟುಗಳ ಮಹಿಳಾ ಅಧ್ಯಯನಗಳು ಅಂಕಿ ಸಂಖ್ಯೆಗಳ ದಾಖಲಾತಿಯಾಗಿರದೆ ಸಂಸ್ಕೃತಿಗಳ ಸಿರಿವಂತಿಕೆಯಲ್ಲಿ ಕರಗಿಹೋಗದೆ ಹೇಗೆ ಅಧ್ಯಯನ ನಡೆಸಬೇಕೆನ್ನುವುದಕ್ಕೆ ರೇಣುಕ ಅವರ ಕಾಡುಗೊಲ್ಲ ಮಹಿಳಾ ಸಾಂಸ್ಕೃತಿಕ ಸಂಕಥನ ಪುಸ್ತಕವು ಮಾದರಿಯಾಗಿದೆ. ಬುಡಕಟ್ಟಿನ ಅಧ್ಯಯನಗಳಿಗೆ ಇದು ಯೋಗ್ಯ ಪರಾಮರ್ಶನ ಕೃತಿಯಾಗಿದೆ.
​
ರೇಣುಕರವರು ಕ್ಷೇತ್ರಕಾರ್ಯ ನಡೆಸಿ ಸಂಗ್ರಹಿಸಿದ ಮಾಹಿತಿಗಳನ್ನು ಅತ್ಯಂತ ಸಮಾಧಾನ ಚಿತ್ತದಿಂದ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅಲ್ಲದೆ ಪೂರ್ವಗ್ರಹ ಪೀಡಿತರಾಗದೆ ವಸ್ತುನಿಷ್ಠ ನಿಲುವುಗಳನ್ನು ವ್ಯಕ್ತಪಡಿಸುವುದು ಗಮನಾರ್ಹ ಸಂಗತಿಯಾಗಿದೆ. ಜಾನಪದೀಯ ಅಧ್ಯಯನಗಳು ಸಿದ್ಧಾಂತಗಳಿಗೆ ಕಟ್ಟುಬಿದ್ದು ಚರ್ವಿತ ಚವರ್ಣವಾಗುತ್ತಿರುವ ಹೊತ್ತಿನಲ್ಲಿ ಕ್ಷೇತ್ರದಿಂದ ಸಂಗ್ರಹಿಸಿದ ಮಾಹಿತಿ ಒಳಗಿಂದಲೇ ಸಿದ್ಧಾಂತಗಳು ಹುಟ್ಟಿಕೊಳ್ಳಬೇಕು ಎಂಬುದಕ್ಕೆ ಈ ಪುಸ್ತಕ ಮಾದರಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
 
ಡಾ. ಮಂಜುನಾಥ ಬೇವಿನಕಟ್ಟಿ
ಪ್ರಾಧ್ಯಾಪಕರು, ವಿದ್ಯಾರಣ್ಯ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ
ಪರಿವಿಡಿ
ಅಧ್ಯಾಯ-1
ಪಾವಗಡ ತಾಲ್ಲೂಕಿನ ಭೌಗೋಳಿಕ, ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ
 
ಅಧ್ಯಾಯ-2
ಮೌಖಿಕ ಸಂಸ್ಕೃತಿ ಮತ್ತು ಮಹಿಳಾ ಚರಿತ್ರೆ  
 
ಅಧ್ಯಾಯ-3
ಕಾಡುಗೊಲ್ಲ ಸಾಹಿತ್ಯದಲ್ಲಿ ಮಹಿಳಾ ಪ್ರತಿನಿಧೀಕರಣ
 
ಅಧ್ಯಾಯ-4
ಕಾಡುಗೊಲ್ಲ ಕಂಟಕಾವರಣ
 
ಅಧ್ಯಾಯ-5
ಗೊಲ್ಲ ಕಡಗ
 
ಅಧ್ಯಾಯ-6
ಜೆನಿಗೆ
 
ಅಧ್ಯಾಯ-7
ಗಣೆ
*            ಶೈಕ್ಷಣಿಕ ಮತ್ತು ರಾಜಕೀಯ ಜೀವನ
*            ವಲಸೆಯ ಕಥನ
*            ಅಭಿವೃದ್ಧಿ ಕಥನ
 
ಅಧ್ಯಾಯ-8
ಕಾಡುಗೊಲ್ಲ ಬುಡಕಟ್ಟಿನ ಸ್ತ್ರೀವಾದಿ ಸಂಕಥನ
 
ಸಮಾರೋಪ
 
ಪರಾಮರ್ಶನ ಸಾಹಿತ್ಯ
2 Comments
Gopala Krishna D
1/25/2020 09:43:52 pm

ಕಾಡುಗೊಲ್ಲ ಮಹಿಳೆ
ಸಾಂಸ್ಕೃತಿಕ ಸಂಕತನ

Reply
Ramesha H.E link
4/14/2024 11:13:26 am

Please book report

Reply



Leave a Reply.


    Niruta Publications

    Social Workers- Karnataka

    Leaders Talk

    Ramesha Niratanka

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Picture
    WhatsApp Group

    Social Work Foot Prints
    Follow me on Academia.edu

    Archives

    July 2022
    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015

    Categories

    All
    Academic Books
    Conference Books
    English Books
    HR Books
    Kannada Books
    Social Work Books


    ​List Your Product on Our Website 


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com