ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ರಮೇಶ ಎಂ.ಎಚ್. ಪುಟ : 174
ಪರಿವಿಡಿ ಅಧ್ಯಾಯ-1 ವ್ಯಕ್ತಿಗತ ಸಮಾಜಕಾರ್ಯ 1.1 ಪೀಠಿಕೆ 1.2 ಪರಿಕಲ್ಪನೆ ಮತ್ತು ವಿಕಾಸ 1.3 ಅರ್ಥ ಮತ್ತು ವ್ಯಾಖ್ಯೆಗಳು 1.4 ಮೂಲಭೂತ ಪರಿಕಲ್ಪನೆಗಳು 1.5 ಉದ್ದೇಶಗಳು ಅಧ್ಯಾಯ-2 ವ್ಯಕ್ತಿಗತ ಸಮಾಜಕಾರ್ಯದ ತತ್ವಗಳು 2.1 ವೈಯಕ್ತೀಕರಣದ ತತ್ವ 2.2 ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ತತ್ವ 2.3 ಅಂಗೀಕಾರದ/ಸ್ವೀಕಾರ ತತ್ವ 2.4 ನಿಯಂತ್ರಿತ ಭಾವನೆಗಳ ಅಂತರ್ಗತ ತತ್ವ 2.5 ತೀರ್ಪುರಹಿತ ಪ್ರವೃತ್ತಿಯ ತತ್ವ 2.6 ಅರ್ಥಿಯ ಸ್ವ-ನಿರ್ಣಯದ ತತ್ವ 2.7 ಗೌಪ್ಯತೆಯ ತತ್ವ 2.8 ಅರ್ಥಪೂರ್ಣ ಸಂಬಂಧ ತತ್ವ 2.9 ಸಂವಹನ ತತ್ವ 2.10 ಸ್ವ-ಅರಿವಿನ ತತ್ವ 2.11 ಸಾಮಾಜಿಕ ಚಟುವಟಿಕೆಯ ತತ್ವ 2.12 ವರ್ತನೆ ಮಾರ್ಪಡಿಸುವಿಕೆಯ ತತ್ವ 2.13 ಸಾಮಾಜಿಕ ಕಲಿಕೆಯ ತತ್ವ ಅಧ್ಯಾಯ-3 ವ್ಯಕ್ತಿಗತ ಸಮಾಜಕಾರ್ಯದ ಘಟಕಾಂಶಗಳು 3.1 ವ್ಯಕ್ತಿ/ಅರ್ಥಿ 3.2 ಸಮಸ್ಯೆ 3.3 ಸ್ಥಳ 3.4 ಪ್ರಕ್ರಿಯೆ/ವಿಧಾನ 3.5 ವೃತ್ತಿಪರ ಪ್ರತಿನಿಧಿ ಅಧ್ಯಾಯ-4 ವ್ಯಕ್ತಿಗತ ಸಮಾಜಕಾರ್ಯ ಪ್ರಕ್ರಿಯೆ 4.1 ಆರಂಭಿಕ ಭೇಟಿ 4.2 ಮನೋ-ಸಾಮಾಜಿಕ ಅಧ್ಯಯನ 4.3 ಸಾಮಾಜಿಕ ರೋಗನಿಧಾನ/ರೋಗನಿರ್ಣಯ 4.4 ಚಿಕಿತ್ಸೆ ಅಧ್ಯಾಯ-5 ವ್ಯಕ್ತಿಗತ ಸಮಾಜಕಾರ್ಯದ ಮಾರ್ಗದೃಷ್ಟಿಗಳು 5.1 ಮನೋವಿಶ್ಲೇಷಣಾ ಮಾರ್ಗದೃಷ್ಟಿ 5.2 ಮನೋ-ಸಾಮಾಜಿಕ ಸಿದ್ಧಾಂತ 5.3 ಸಮಸ್ಯೆ ಪರಿಹರಿಸುವ ಮಾದರಿ/ಸಿದ್ಧಾಂತ 5.4 ನಡವಳಿಕೆ ಬದಲಾವಣೆ/ಮಾರ್ಪಡಿಸುವಿಕೆಯ ಸಿದ್ಧಾಂತ 5.5 ವಿಷಮಸ್ಥಿತಿ/ಬಿಕ್ಕಟ್ಟಿನ ಮಧ್ಯಸ್ಥಿಕೆ 5.6 ಎಕ್ಲೆಕ್ಟಿಕ್ ಮಾಗೃದೃಷ್ಟಿ ಅಧ್ಯಾಯ-6 ವ್ಯಕ್ತಿಗತ ಸಮಾಜಕಾರ್ಯದ ಸಾಧನಗಳು ಮತ್ತು ತಂತ್ರಗಳು 6.1 ಸಂದರ್ಶನ 6.2 ಗೃಹ ಭೇಟಿ 6.3 ಸಂಪನ್ಮೂಲ ಕ್ರೋಢೀಕರಣ 6.4 ಉಲ್ಲೇಖಿತ 6.5 ಪರಿಸರ ಮಾರ್ಪಡಿಸುವಿಕೆ 6.6 ವ್ಯಕ್ತಿಗತ ಸಮಾಜಕಾರ್ಯದ ಸಂಬಂಧ 6.7 ಸಂವಹನ 6.8 ದಾಖಲೀಕರಣ ಅಧ್ಯಾಯ-7 ವಿವಿಧ ಸಂರಚನೆಗಳಲ್ಲಿ ವ್ಯಕ್ತಿಗತ ಸಮಾಜಕಾರ್ಯಕರ್ತರ ಪಾತ್ರ 7.1 ಮಕ್ಕಳ ಕಲ್ಯಾಣ 7.2 ಕುಟುಂಬ ಕಲ್ಯಾಣ 7.3 ಮಹಿಳೆಯರು 7.4 ಸಮುದಾಯ ಮತ್ತು ಗ್ರಾಮೀಣ ಅಭಿವೃದ್ಧಿ 7.5 ಔದ್ಯೋಗಿಕ ಕ್ಷೇತ್ರ / ರಚನೆಗಳು 7.6 ಆರೋಗ್ಯ ಪಾಲನಾ ಕ್ಷೇತ್ರ / ರಚನೆ 7.7 ಪರಿಸರ ಅನುಬಂಧಗಳು 1. ವ್ಯಕ್ತಿಗತ ಸಮಾಜಕಾರ್ಯ ವರದಿಯ ಮಾದರಿ 2. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಪಠ್ಯಕ್ರಮ 3. ಮಾದರಿ ಪ್ರಶ್ನೆಗಳು ಆಕರ ಗ್ರಂಥಗಳು ಪುಟ ತಿರುಗಿಸುವ ಮುನ್ನ.. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ವೃತ್ತಿಯಾಗಿ ಪರಿಗಣಿಸಲ್ಪಟ್ಟ ಸಮಾಜಕಾರ್ಯ, ಭಾರತಕ್ಕೆ ಪ್ರಶಿಕ್ಷಣ ಮಾದರಿಯಲ್ಲಿ ಲಗ್ಗೆಯಿಟ್ಟಿದ್ದು 1936ರಲ್ಲಿ ಮತ್ತು ಕರ್ನಾಟಕಕ್ಕೆ 1960ರ ದಶಕದಲ್ಲಿ. ಸಮಾಜದ ಬಹುಪಾಲು ಸಮಸ್ಯೆಗಳೊಂದಿಗೆ ವ್ಯವಹರಿಸುವ ವಿಶಿಷ್ಟ ವಿಷಯವಾದ ಸಮಾಜಕಾರ್ಯ ಒಂದು ಸ್ವತಂತ್ರ ವೃತ್ತಿಯಲ್ಲ. ಇತರ ಸಮಾಜವಿಜ್ಞಾನ - ವಿಜ್ಞಾನ - ಶಾಸ್ತ್ರ ಹಾಗೂ ವೃತ್ತಿಗಳ ಸಹಯೋಗ ಮತ್ತು ಸಹಕಾರವಿಲ್ಲದೆ ತನ್ನ ಗುರಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಸಮಾಜಕಾರ್ಯ ಒಂದು ಅಂತರ್-ಶಿಸ್ತೀಯ, ಅಂತರ್-ವೃತ್ತೀಯ ಕ್ರಿಯೆಯಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲಿದೆ. ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ಸಮಾಜಕಾರ್ಯ ಪ್ರಶಿಕ್ಷಣವನ್ನು ಯಥಾವತ್ತಾಗಿ ಭಾರತದಲ್ಲಿ ಅಳವಡಿಸಿಕೊಳ್ಳಲಾಗಿ, ಇಂದಿಗೂ ಅದೇ ರೀತಿಯಲ್ಲಿ ಬೋಧಿಸಲ್ಪಡುತ್ತಿದೆ. ಒಂದು ವೇಳೆ ಅಂದು ಆಮದು ಮಾಡಿಕೊಂಡ ಪ್ರಶಿಕ್ಷಣದ ಮಾದರಿಯನ್ನು ಭಾರತದ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಯಿಸಿ ಬೋಧಿಸಿದ್ದಿದ್ದರೆ, ಬಹುಶಃ ಇಂದು ಸಮಾಜಕಾರ್ಯ ವೃತ್ತಿ ಮತ್ತಷ್ಟು ವೇಗವಾಗಿ ಬೆಳವಣಿಗೆ ಹೊಂದಿರುತ್ತಿತ್ತು. ಜೊತೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಚನೆಯಾದ ಸಾಹಿತ್ಯದ ಅವಲಂಬನೆ ಕಡಿಮೆಯಾಗಿರುತ್ತಿತ್ತು ಮತ್ತು ಭಾರತ ದೇಶದ ಸ್ಥಳೀಯ ಭಾಷೆಗಳಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಯಾಗುತ್ತಿತ್ತು. ಆದರೆ ಪ್ರಶಿಕ್ಷಣದ ಜೊತೆಗೆ ಅಲ್ಲಿನ ಪಠ್ಯಕ್ರಮ ಹಾಗೂ ಮಾದರಿಯ ಯಥಾವತ್ತು ಅನುಕರಣೆ ಸ್ಥಳೀಯ ಭಾಷೆಗಳಲ್ಲಿ ಸಮಾಜಕಾರ್ಯ ಸಾಹಿತ್ಯದ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.
ಸಮಾಜಕಾರ್ಯ ವೃತ್ತಿಯ ಕಾರ್ಯಕ್ಷೇತ್ರ ದಿನಕಳೆದಂತೆ ವಿಶಾಲವಾಯಿತು ಅಂತೆಯೇ ಅದನ್ನು ಒಂದು ವಿಷಯವನ್ನಾಗಿ ಅಭ್ಯಸಿಸುವವರ ಸಂಖ್ಯೆ ಅಧಿಕವಾಗತೊಡಗಿತು. ಇದರ ಪರಿಣಾಮ ದೇಶದ ಬಹುಪಾಲು ವಿಶ್ವವಿದ್ಯಾಲಯಗಳಲ್ಲಿ ಇತರೆ ಸಮಾಜ ವಿಜ್ಞಾನಗಳಂತೆ ಸಮಾಜಕಾರ್ಯವೂ ಸಹ ಒಂದು ಪ್ರಮುಖ ವಿಷಯವಾಗಿ ಪ್ರತ್ಯೇಕ ವಿಭಾಗದಲ್ಲಿ ಬೋಧಿಸಲ್ಪಡಲಾರಂಭಿಸಿತು. ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳಿಗೆ ಲಗ್ಗೆ ಇಡುವ ವಿದ್ಯಾರ್ಥಿಗಳ ಸಂಖ್ಯೆ ಏರಿದಂತೆ, ಸ್ನಾತಕೋತ್ತರ ಪದವಿ ಹಂತದಲ್ಲಿ ಸಮಾಜಕಾರ್ಯವನ್ನು ಒಂದು ವಿಷಯವನ್ನಾಗಿ ಅಭ್ಯಸಿಸುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು. ಹೀಗೆ ಸ್ನಾತಕೋತ್ತರ ಪದವಿಗೆ ದಾಖಲಾದ ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯನ್ನು ಹೊಂದಿದವರೆಂಬುದು ಗಮನಾರ್ಹ. ಮೂಲತಃ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನ್ಮತಳೆದ ಸಮಾಜಕಾರ್ಯದ ಮೂಲ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಸಮರ್ಪಕವಾಗಿ ಆಚರಣೆಗೆ ತರುವುದು ಪದವಿಗೆ ದಾಖಲಾದ ಗ್ರಾಮೀಣ ಹಾಗೂ ಮಾತೃಭಾಷಾ ಶಿಕ್ಷಣ ಮಾಧ್ಯಮ ಹಿನ್ನೆಲೆಯನ್ನು ಹೊಂದಿದವರಿಗೆ ಅಕ್ಷರಶಃ ಕಷ್ಟದ ಕೆಲಸವಾಯಿತು. ಇದನ್ನು ಅರಿತ ಕೆಲ ವಿಷಯತಜ್ಞರು ಭಾರತದಲ್ಲಿ ಸಮಾಜಕಾರ್ಯ ಪ್ರಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸಮಾಜಕಾರ್ಯದ ಮೂಲಪರಿಕಲ್ಪನೆಗಳನ್ನು ಸಮಗ್ರವಾಗಿ ಅರ್ಥೈಸುವ ದೃಷ್ಟಿಯಿಂದ ಸ್ಥಳೀಯ ಭಾಷೆಗಳಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಚಿಸಲು ಪ್ರಯತ್ನಿಸಿದರು. ಈ ಪ್ರಯತ್ನ ಪ್ರೊ. ಎಚ್. ಎಂ. ಮರುಳಸಿದ್ದಯ್ಯರವರಿಂದ ಕನ್ನಡ ಭಾಷೆಯಲ್ಲಿ ಆರಂಭವಾಯಿತು. ಡಾ. ರಮೇಶ್ ಎಂ. ಸೋನಕಾಂಬಳೆಯವರು ಕನ್ನಡ ಭಾಷೆಯಲ್ಲಿ ಸಮಾಜಕಾರ್ಯದ ಸಾಹಿತ್ಯ ಕೃಷಿಗೆ ಆಸಕ್ತಿ ತೋರಿಸಿ ಸಮಾಜಕಾರ್ಯ ವೃತ್ತಿ ಎಂಬ ಪುಸ್ತಕವನ್ನು ಹೊರತಂದಿರುವುದನ್ನು ಹೊರತುಪಡಿಸಿದರೆ ಬೇರೆ ಯಾರೂ ಇಂತಹ ಅಧಿಕೃತ ಪ್ರಯತ್ನಗಳನ್ನು ಮಾಡಿಲ್ಲವೆಂದರೆ ತಪ್ಪಾಗದು. ಯಾವುದೇ ಹೊಸ ವಿಚಾರ, ವಿಷಯ, ಪರಿಕಲ್ಪನೆಯನ್ನು ಸರಳವಾಗಿ, ಸಮಗ್ರವಾಗಿ ಹಾಗೂ ಆಳವಾಗಿ ಅರ್ಥೈಸಿಕೊಳ್ಳಲು ಮಾತೃಭಾಷೆಯೇ ಸೂಕ್ತ ಎಂಬುದು ಬಹುಪಾಲು ಶಿಕ್ಷಣ ತಜ್ಞರ ವಾದವಾಗಿದೆ. ಆದರೆ ಸಮಾಜಕಾರ್ಯ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯ ಭಾರತದ ಸ್ಥಳೀಯ ಭಾಷೆಗಳಲ್ಲಿ ರಚನೆಯಾದ ಪ್ರಮಾಣ ತೀರಾ ವಿರಳ. ಈ ಹಿಂದೆ ಸ್ನಾತಕೋತ್ತರ, ಎಂಫಿಲ್ ಹಾಗೂ ಪಿ.ಎಚ್ಡಿಗೆ ಮಾತ್ರ ಸಿಮಿತವಾಗಿದ್ದ ಸಮಾಜಕಾರ್ಯ ಪ್ರಶಿಕ್ಷಣ ಇಂದು ಪದವಿ ತರಗತಿಗಳಿಗೂ ವಿಸ್ತರಿಸಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಬಿ.ಎಸ್.ಡಬ್ಲ್ಯೂ ಪದವಿಯನ್ನು ಬೋಧಿಸಲ್ಪಡುತ್ತಿರುವ ಎಲ್ಲ ಸರ್ಕಾರಿ ಕಾಲೇಜುಗಳಿಗೆ ಖಾಯಂ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ. ಆದರೆ ಬಿ.ಎಸ್.ಡಬ್ಲ್ಯೂ ಪದವಿಗೆ ದಾಖಲಾದ ಪ್ರಶಿಕ್ಷಣಾರ್ಥಿಗಳಿಗೆ ಬೋಧಿಸಲು ಯಾವುದೇ ಅಧಿಕೃತ ಪಠ್ಯಪುಸ್ತಕಗಳು ಕನ್ನಡ ಭಾಷೆಯಲ್ಲಿ ಇಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಗಳಲ್ಲಿ ನಡೆಯಬೇಕಿದ್ದ ಸಮಾಜಕಾರ್ಯ ಸಾಹಿತ್ಯದ ಕೃಷಿ ಹಿಂದೆಂದಿಗಿಂತಲೂ ಇಂದು ಅನಿವಾರ್ಯವಾಗಿ ಮತ್ತು ಅಧಿಕೃತವಾಗಿ ಜರುಗಬೇಕಿದೆ. ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಿದ ಕೆಲ ವಿಚಾರವಂತ ವೃತ್ತಿಪರ ಸಮಾಜಕಾರ್ಯಕರ್ತರು ಹಾಗೂ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಸೇವಾನಿರತರಾದವರು ನಿರುತ ಪಬ್ಲಿಕೇಷನ್ಸ್ ಸಂಸ್ಥೆಯ ಕಛೇರಿಯಲ್ಲಿ ಸಭೆಸೇರಿ ಈ ವಿಚಾರವನ್ನು ಗಂಭೀರವಾಗಿ ಚರ್ಚಿಸಿ ಸಮಾಜಕಾರ್ಯ ಸಾಹಿತ್ಯವನ್ನು ರಚಿಸುವ ಯೋಜನೆಯನ್ನು ಸಿದ್ಧಪಡಿಸಿದರು. ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಫಲವಾಗಿ ರಚನೆಯಾದ ಪುಸ್ತಕ ವ್ಯಕ್ತಿಗತ ಸಮಾಜಕಾರ್ಯದ ಪರಿಚಯ. ವ್ಯಕ್ತಿಗತ ಸಮಾಜಕಾರ್ಯದ ಮೂಲಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾಧ್ಯಮದ ಹಿನ್ನೆಲೆಯನ್ನು ಹೊಂದಿರುವವರಿಗೆ ಸರಳವಾಗಿ ಮತ್ತು ಸಮಗ್ರವಾಗಿ ಅರ್ಥೈಸುವುದೇ ಈ ಪುಸ್ತಕ ರಚನೆಯ ಮೂಲ ಉದ್ದೇಶವಾಗಿದೆ. ಆದ ಕಾರಣ ಸದರಿ ಪುಸ್ತಕವನ್ನು ಸಾಧ್ಯವಾದಷ್ಟು ಸರಳ ಭಾಷೆಯಲ್ಲಿ, ಸಮಗ್ರವಾಗಿ, ಉದಾಹರಣೆಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದೇನೆ. ವ್ಯಕ್ತಿಗತ ಸಮಾಜಕಾರ್ಯದ ಮೂಲ ಪರಿಕಲ್ಪನೆಗಳು, ತತ್ವಗಳು, ಘಟಕಗಳು, ಪಕ್ರಿಯೆ, ಮಾರ್ಗದೃಷ್ಟಿಗಳು, ಸಾಧನ ಮತ್ತು ತಂತ್ರಗಳ ಜೊತೆಗೆ ಆಚರಿಸಲ್ಪಡುವ ವಿವಿಧ ಕ್ಷೇತ್ರಗಳ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸಿದ್ದು, ಮೂಲ ಅರ್ಥಕ್ಕೆ ಧಕ್ಕೆಯಾಗದ ಹಾಗೆ ಎಚ್ಚರ ವಹಿಸಲಾಗಿದೆಯೆಂದು ತಿಳಿಯಬಯಸುತ್ತೇನೆ. ಅವಶ್ಯಕತೆ ಮತ್ತು ಅನಿವಾರ್ಯತೆಗಳನ್ನು ಮನಗಂಡು ವಿಷಯದ ಕೆಲ ಪ್ರಮುಖ ಅಂಶಗಳನ್ನು/ವಿಚಾರಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ನೀಡಿದ್ದು, ಇದು ವಿಚಾರ-ಗ್ರಹಿಕೆಯಲ್ಲಿ ಓದುಗರಿಗೆ ನೆರವಾಗುವುದೆಂದು ಭಾವಿಸುತ್ತೇನೆ. ಪಠ್ಯಪುಸ್ತಕ ರೂಪದಲ್ಲಿ ರಚನೆಯಾದ ಈ ಪುಸ್ತಕ ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮ, ಮಾದರಿ / ನಿರೀಕ್ಷಿತ ಪ್ರಶ್ನೆಗಳು ಮತ್ತು ಬಹುಆಯ್ಕೆ ಪ್ರಶ್ನೆಗಳನ್ನೂ ಒಳಗೊಂಡಿದ್ದು, ಪದವಿ ಮತ್ತು ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳಿಗೆ, ಅಧ್ಯಾಪಕರಿಗೆ, ವೃತ್ತಿಪರ ಸಮಾಜಕಾರ್ಯಕರ್ತರಿಗೆ ಮತ್ತು ಸದರಿ ವಿಷಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಒಂದು ಉಪಯುಕ್ತ ಹಾಗು ಮಾರ್ಗದರ್ಶಿ ಸಾಧನವಾಗುತ್ತದೆ ಎಂಬ ಆಶಾಭಾವನೆಯನ್ನು ಹೊಂದಿದ್ದೇನೆ. ಆರಂಭದಲ್ಲಿ ನಾನು ಬರೆದ ಕೆಲವು ಬರಹಗಳನ್ನು ತಿದ್ದಿ, ಕನ್ನಡ ಭಾಷೆಯಲ್ಲಿ ಬರವಣಿಗೆಯನ್ನು ಮುಂದುವರೆಸಲು ಹುರಿದುಂಬಿಸಿ ಪ್ರೋತ್ಸಾಹಿಸಿದ ಕೀರ್ತಿ ಪ್ರೊ. ಎಚ್.ಎಂ. ಮರುಳಸಿದ್ಧಯ್ಯನವರಿಗೆ ಮತ್ತು ಶ್ರೀಯುತ ಪ್ರಕಾಶ್ ಕಾಮತ್ರವರಿಗೆ ಸಲ್ಲುತ್ತದೆ. ಇವರಿಗೆ ನಾನು ಕೃತಜ್ಞನಾಗಿರುತ್ತೇನೆ. ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ರಚಿಸಬೇಕೆಂಬ ನನ್ನ ಬಹುದಿನಗಳ ಕನಸಿಗೆ ನೀರೆರೆದು ಪೋಷಿಸಿದ ಸರ್ವರಿಗೂ ಅಭಿನಂದನೆಗಳು, ವ್ಯಕ್ತಿಗತ ಸಮಾಜಕಾರ್ಯದ ಮೂಲ ಪರಿಕಲ್ಪನೆಗಳಿಗೆ ಚ್ಯುತಿ ಬಾರದ ಹಾಗೆ ವಿಷಯ ದೋಷಗಳನ್ನು ಕಾಲ-ಕಾಲಕ್ಕೆ ಪರಿಶೀಲಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡುತ್ತಿದ್ದ ನನ್ನ ನೆಚ್ಚಿನ ಗುರುಗಳಾದ ಶ್ರೀಮತಿ ಶಶಿಕಿರಣ್ ಶೆಟ್ಟಿರವರಿಗೆ ಹಾಗೂ ಪುಸ್ತಕದಲ್ಲಿ ಬಳಸಿರುವ ಭಾಷಾ ಶೈಲಿಯನ್ನು ಪರಿಶೀಲಿಸಿ, ಸರಳ ಪದಗಳನ್ನು ಉಪಯೋಗಿಸಲು ಸಲಹೆ ನೀಡುವುದರ ಜೊತೆಗೆ ಅಕ್ಷರ ಮತ್ತು ಪದ ದೋಷಗಳನ್ನು ಹೆಕ್ಕಿತೆಗೆದ ನನ್ನ ವಿದ್ಯಾರ್ಥಿ ವೃಂದಕ್ಕೆ ಪ್ರಮುಖವಾಗಿ ಶ್ರೀಮತಿ ಸುನೀತಾ ಬಿ.ಸಿ., ಕು|| ಮೀನಾ ಜಿ., ಚಿ|| ಸುಧಾಕರ ಸಿ.ಎನ್. ಕು|| ದಿವ್ಯಾಶ್ರೀ, ಕು|| ಶೈಲಾ ಸಿ.ಜೆ ಮತ್ತು ಕು|| ದಿವ್ಯಾ ಎಂ. ರವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು. ಮಾದರಿ ಪ್ರಶ್ನೆಗಳನ್ನು ರಚಿಸಿಕೊಡುವುದರ ಮೂಲಕ ಪುಸ್ತಕದ ಗುಣಮಟ್ಟವನ್ನು ಇಮ್ಮಡಿಗೊಳಿಸಿದ ಪ್ರೊ. ಕೋದಂಡರಾಮ, ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ ಇವರಿಗೆ ಕೃತಜ್ಞನಾಗಿರುತ್ತೇನೆ. ಅರ್ಥಗರ್ಭಿತ ಮುನ್ನುಡಿಯನ್ನು ಬರೆದುಕೊಟ್ಟು ಲೇಖಕರಿಗೆ ಶುಭಹರಿಸಿದ ಡಾ. ರಮೇಶ್ ಬಿ., ಪ್ರಾಧ್ಯಾಪಕರು, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು ಇವರಿಗೆ ನಾನು ಆಭಾರಿಯಾಗಿರುತ್ತೇನೆ. ಅಂದವಾದ ಪದಜೋಡಣೆ ಮತ್ತು ಸುಂದರವಾದ ಮುಖಪುಟ ವಿನ್ಯಾಸ ಮಾಡಿದ ಶ್ರೀಯುತ ಶಿವಕುಮಾರ್ ರವರಿಗೆ ಅಭಿನಂದನೆಗಳು. ಅಂತಿಮವಾಗಿ, ಸಮಾಜಕಾರ್ಯ ಪರಿಕಲ್ಪನೆಗಳನ್ನು ಇಂಗ್ಲೀಷಿನಲ್ಲಿ ಅರ್ಥಮಾಡಿಕೊಳ್ಳುವ ಸಂದರ್ಭದಲ್ಲಿ ಎದಿರಾಗುತ್ತಿದ್ದ ಸಮಸ್ಯೆಗಳನ್ನು ನನ್ನೊಂದಿಗೆ ಹಂಚಿಕೊಂಡ ನನ್ನ ಆತ್ಮೀಯ ವಿದ್ಯಾರ್ಥಿ ಮಿತ್ರರೇ ಈ ಪುಸ್ತಕ ರಚನೆಗೆ ಮೂಲ ಪ್ರೇರಣೆ. ಇವರೆಲ್ಲರನ್ನೂ ನಾನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ ಹಾಗೂ ಈ ಪುಸ್ತಕ ಅವರೆಲ್ಲರಿಗೂ ಪ್ರಿಯವಾಗುವುದೆಂದು ಆಶಿಸುತ್ತೇನೆ. ಪುಸ್ತಕದಲ್ಲಿ ದಾಖಲಾದ ಯಾವುದೇ ಉದಾಹರಣೆ/ ಪದಬಳಕೆ/ ವಿಷಯ ಇತ್ಯಾದಿಗಳು ಅಸಮಂಜಸ ಅಥವಾ ಅಪ್ರಸ್ತುತ ಎಂದೆನಿಸಿದರೆ ತಕ್ಷಣ ಪ್ರಕಾಶಕರ ಗಮನಕ್ಕೆ ತರಲು ಕೋರಿದೆ ಹಾಗೂ ಕಂಡುಬರುವ ಯಾವುದೇ ತಪ್ಪು / ದೋಷಕ್ಕೆ ಸಂಬಂಧಿಸಿದ ಹಿಮ್ಮಾಹಿತಿ / ಸಲಹೆ / ಸೂಚನೆಗಳಿಗೆ ಸದಾ ಸ್ವಾಗತ. ಗಂಗಾಧರ ರೆಡ್ಡಿ ಎನ್ ರಮೇಶ ಎಂ.ಎಚ್.
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|