ಲೇಖಕರು:
ಸಿ.ಎಚ್. ಹನುಮಂತರಾಯ ವಕೀಲರು
ಸಾಹುಕಾರ್ ಎನ್ನುವ ಸೆಷನ್ಸ್ ಜಡ್ಜ್ ರ ಮುಂದೆ ಕೇಸ್ ನಡೆಯುತ್ತಿತ್ತು.
ಮೊಕದ್ದಮೆಯ ಮೂವರು ಡಿಫೆನ್ಸ್ ವಿಟ್ನೆಸ್ ಗಳ ಸಾಕ್ಷಿ ಹೇಳಿಕೆ ಇತ್ತು. ವಿಟ್ನೆಸ್ ಬಾಕ್ಸ್ ನಲ್ಲಿ ನಿಂತಿದ್ದ ಮೂವರ ಪೈಕಿ ಒಬ್ಬರಿಗೆ ಸಾಕ್ಷಿ ಹೇಳಿಕೆ ನೀಡುವುದಕ್ಕೆ ಪೂರ್ವದಲ್ಲಿ ದೇವರ ಹೆಸರಲ್ಲಿ ಪ್ರಮಾಣ ಮಾಡುವಂತೆ ಕೋರ್ಟ್ ಆಫೀಸರ್ ಹೇಳಿದ. ಮೂವರಲ್ಲಿ ಮುಂದೆ ನಿಂತಿದ್ದ ತಿಮ್ಮಪ್ಪಯ್ಯ ಎನ್ನುವ ಸಾಕ್ಷಿ “ಕೋರ್ಟ್ ಆಫೀಸರ್ ಮೂಲಕ ನಾನು ಪ್ರಮಾಣ ಮಾಡುವುದಿಲ್ಲ” ಅಂದ. ಜಡ್ಜ್ ಕ್ಷಣಕಾಲ ಮುಗುಳ್ನಕ್ಕು, “ಇದು ಕೋರ್ಟ್, ತಮಾಷೆಗೆ ಅವಕಾಶವಿಲ್ಲ” ಎಂದರು. “ನಾನು ತಮಾಷೆ ಮಾಡುತ್ತಿಲ್ಲ ಸಾರ್. ಗಂಭೀರವಾಗಿಯೇ ಹೇಳುತ್ತಿದ್ದೇನೆ” ಎಂದ. “ಆಯಿತು ಕೋರ್ಟ್ ಆಫೀಸರ್ ಬೇಡದಿದ್ದರೆ ನಾನೇ ಮಾಡಿಸುವೆ. ಹೂ ಹೇಳಿ ನಾನು ಹೇಳಿದಂತೆ ಎಂದು, ‘I do swear in the name of god that what I shall state shall be the truth, the whole truth and nothing but the truth’ ಎಂದು ಹೇಳಿದರು. ಆಗ ಸಾಕ್ಷಿ “ನೀವು ಹೇಳಿದ ರೀತಿಯಲ್ಲಿ ಪ್ರಮಾಣ ಮಾಡಿ ಸಾಕ್ಷಿ ಹೇಳಿಕೆ ನೀಡುವ ಅಗತ್ಯವಿಲ್ಲ” ಎಂದ.
ಜಡ್ಜ್ ಸರಳ ಸ್ವಭಾವದವರಂತೆ ಕೆಂಡರು. ಕೋಪ ಪ್ರದರ್ಶಿಸಲಿಲ್ಲ. ಈ ಸಾಕ್ಷಿ ಸ್ವಲ್ಪ ಉದ್ದಟತನದವನಂತೆ ಇದ್ದಾನೆ ಎನ್ನುವಂತೆ ನೋಡಿ “ಕಾನೂನಿಗೆ ಎಲ್ಲರೂ ತಲೆ ಬಾಗಬೇಕು. ನೀನು ಕಾನೂನಿಗಿಂತ ದೊಡ್ಡವನಲ್ಲ” ಎಂದರು.
“ನಾನು ಹೇಳುತ್ತಿರುವುದೂ ಅದನ್ನೇ ಸ್ವಾಮಿ. ನ್ಯಾಯಾಧೀಶರು ಕಾನೂನಲ್ಲಿ ಇಲ್ಲದ್ದನ್ನು ಹೇಳಿ ಕಾನೂನಿನ ಹಾದಿ ತಪ್ಪಿಸಕೂಡದು” ಎಂದು ನಮ್ರವಾಗಿಯೇ ಹೇಳಿದ. ಇದ್ದಕ್ಕಿದ್ದಂತೆ ನ್ಯಾಯಾಧೀಶರ ಮುಖ ಕಪ್ಪಿಟ್ಟಿತು. ಸೃಷ್ಟಿಯಾಗಿದ್ದ ಸನ್ನಿವೇಶವನ್ನು ಸರಳವಾಗಿ ನಿಭಾಯಿಸುವ ಧಾಟಿಯಲ್ಲಿದ್ದ ನ್ಯಾಯಾಧೀಶರು ಸ್ವಲ್ಪ ಕುಪಿತಗೊಂಡಂತೆ ಕಂಡರೂ ಅದನ್ನು ಮರೆಮಾಚಿಕೊಳ್ಳುತ್ತ, “ಆಯಿತು, ನಿಮಗೆ ಕಾನೂನು ಗೊತ್ತಿದೆಯೆ? ಪ್ರಮಾಣ ಮಾಡದೆ ಸಾಕ್ಷಿ ಹೇಳುವುದು ಶಿಕ್ಷಾರ್ಹ ಅಪರಾಧ ಎನ್ನುವುದು?” ಎಂದರು. “ಸ್ವಾಮಿ ದಯವಿಟ್ಟು ಓಥ್ಸ್ ಆಕ್ಟ್ ಅನ್ನು ಓದಿಕೊಂಡು ಬಂದು ಈ ಮಾತನ್ನು ಹೇಳಬೇಕು” ಎಂದಾಗ ಇಡೀ ಕೋರ್ಟ್ ಸ್ತಬ್ಧವಾಗಿ ಹೋಯಿತು. ನ್ಯಾಯಾಧೀಶರ ಮುಖ ಬೆವರತೊಡಗಿತು. ಮುಂದೆ ಮಾತಾಡುವ ಆತ್ಮವಿಶ್ವಾಸ ನ್ಯಾಯಾಧೀಶರಲ್ಲಿ ಉಳಿಯಲಿಲ್ಲ. ಕೇಸನ್ನು ಮಧ್ಯಾಹ್ನಕ್ಕೆ ಹಾಕಿ ಉಳಿದ ಕೇಸ್ ಗಳಿಗೂ ಬೇಗ ಬೇಗ ಡೇಟ್ ಗಳನ್ನು ಕೊಟ್ಟು ತಮ್ಮ ಚೇಂಬರ್ ಗೆ ಹೊರಟುಹೋದರು. ಮಧ್ಯಾಹ್ನ ಮೂರು ಗಂಟೆಗೆ ತಿಮ್ಮಪ್ಪಯ್ಯ ವಿಟ್ನೆಸ್ ಬಾಕ್ಸ್ ನಲ್ಲಿ ಬಂದು ನಿಂತಾಗ ನ್ಯಾಯಾಧೀಶರು “ನೀವು ಹೇಳಿದ್ದೇ ಸರಿ. ನ್ಯಾಯಾಲಯವೂ ಕಾನೂನಿಗೆ ಹೇಗೆ ಕುರುಡಾಗಿರುತ್ತದೆ ಎನ್ನಲು ಈ ಘಟನೆಯೇ ಸಾಕ್ಷಿ. ಕಾನೂನು ತಿಳಿಯದೆ ನಿಮಗೇ ಏನೇನೊ ಅಂದು ಮನನೋಯಿಸಿದ್ದಕ್ಕೆ ನ್ಯಾಯಾಲಯದ ಪರವಾಗಿ ಕ್ಷಮೆ ಕೋರುವೆ. ನೀವು ಕಾನೂನು ಪಂಡಿತರೇ ಇರುವಂತೆ ಕಾಣುತ್ತದೆ. ಪ್ರಮಾಣ ಕಾಯ್ದೆಯಲ್ಲಿರುವ ಯಾವುದೇ ರೀತಿಯಲ್ಲಿ ನೀವು ನಿಮ್ಮ ಸಾಕ್ಷಿ ಹೇಳಿಕೆಯನ್ನು ನೀಡಬಹುದು…’’ ಎಂದಾಗ ಇಡೀ ಕೋರ್ಟ್ ಬೆಚ್ಚಿಬಿದ್ದಿತು. ನಂತರ ಗೊತ್ತಾಯಿತು ತಿಮ್ಮಪ್ಪಯ್ಯ ನೋಡಲು ಕೃಷಿಕರಂತೆ ಕಾಣುತ್ತಿದ್ದರೂ ಕಾನೂನು ಪದವಿ ಪಾಸು ಮಾಡಿದವರಾಗಿದ್ದರು. ಆದರೆ, ವೃತ್ತಿಗೆ ಬಾರದೆ ಕೃಷಿಯಲ್ಲಿ ತೊಡಗಿದ್ದರು. ಕೋರ್ಟ್ ಹಾಲ್ ನಿಂದ ಹೊರಬಂದ ತಿಮ್ಮಪ್ಪಯ್ಯನವರನ್ನು ಪ್ರಾಸಿಕ್ಯೂಟರ್, ಡಿಫೆನ್ಸ್ ಲಾಯರ್, ಸರ್ಕಲ್ ಇನ್ಸ್ ಪೆಕ್ಟರ್ ಎಲ್ಲ ಮುತ್ತಿಕೊಂಡರು. ನ್ಯಾಯಾಧೀಶರಿಂದಲೇ ಕ್ಷಮೆ ಕೇಳಿಸಿಕೊಂಡ ತಿಮ್ಮಪ್ಪಯ್ಯನ ಕೈಯನ್ನು ಕುಲುಕಿ ಹಾಗೇ ಸ್ವಲ್ಪಹೊತ್ತು ಹಿಡಿದುಕೊಂಡಿದ್ದೆ. “ನಿಮ್ಮೊಂದಿಗೆ ಮಾತಾಡಬೇಕು ನಾನೂ ಲಾ ಸ್ಟುಡೆಂಟ್’’ ಎಂದೆ. ಎಲ್ಲ ಕಾಫೀಗೆ ಹೋದೆವು. ಹೋಟೆಲ್ ನಲ್ಲಿ ತಿಮ್ಮಪ್ಪಯ್ಯ ಪ್ರಮಾಣ ಕಾಯ್ದೆ ಬಗ್ಗೆ ಒಂದು ಲೆಕ್ಚರ್ ಕೊಟ್ಟರು. ಬ್ರಿಟಿಷರು ಭಾರತವನ್ನು ತಮ್ಮ ಆಡಳಿತಕ್ಕೆ ಒಳಪಡಿಸಿದಾಗ ನಮ್ಮ ದೇಶದಲ್ಲಿ ಏಕರೀತಿಯ ನ್ಯಾಯ ವಿತರಣೆ ಇರಲಿಲ್ಲ. ವಿವಿಧ ಮತ, ಧರ್ಮ, ಪಂಥ, ಬುಡಕಟ್ಟುಗಳ ಜನ ತಮತಮಗೆ ತಿಳಿದ ರೀತಿಯಲ್ಲಿ ನ್ಯಾಯ ನಿಷ್ಕರ್ಷಿಸುತ್ತಿದ್ದರು. ಬ್ರಿಟಿಷರು ಒಂದು ಅಂಶವನ್ನು ಗಮನಿಸಿದ್ದರು: ಭಾರತೀಯರಲ್ಲಿ ದೇವರ ಭಯ ಬಹಳಷ್ಟಿದೆ, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದರೆ ಸತ್ಯ ಹೊರಬೀಳುತ್ತದೆ ಎಂದು. 1973 ರಲ್ಲಿ ಇಂಗ್ಲೆಂಡ್‍ನ ಪಾರ್ಲಿಮೆಂಟ್‍ನಲ್ಲಿ ಭಾರತದ ನ್ಯಾಯಾಲಯಗಳಲ್ಲಿ ಸಾಕ್ಷಿದಾರರಿಂದ ಹೇಗೆ ಪ್ರಮಾಣ ಮಾಡಿಸಬೇಕೆಂದು ದೊಡ್ಡ ಡಿಬೇಟ್ ನಡೆಯಿತು. ಪರಿಣಾಮವಾಗಿ ಓಥ್ಸ್ ಆಕ್ಟ್ 1873 ಜಾರಿಗೆ ಬಂದಿತು. ದೇವರ ಹೆಸರಿನಲ್ಲಿ ಪ್ರಮಾಣ ಮಾಡದಿರುವುದು ಅಪರಾಧವೆಂದು ಓಥ್ಸ್ ಆಕ್ಟ್ ಹೇಳಿತು. ಆದರೆ ಸ್ವಾತಂತ್ರ್ಯ ಹೋರಾಟದೊಂದಿಗೆ ಬೆಳೆದು ಬಂದ ಕಮ್ಯುನಿಸ್ಟ್ ಚಳವಳಿಯ ನಾಯಕರು ಕೋರ್ಟ್ ಗಳಲ್ಲಿ ತಮಗೆ ದೇವರ ಮೇಲೆ ನಂಬಿಕೆಯಿಲ್ಲವೆಂದೂ ಹಾಗೆ ಪ್ರಮಾಣ ಮಾಡುವುದು ಸಾಕ್ಷಿಯ ವ್ಯಕ್ತಿತ್ವದ ಸಮಗ್ರತೆಯನ್ನೇ ಪ್ರಶ್ನಿಸಿದಂತಾಗುವುದು ಎಂದೂ ವಾದಿಸುತ್ತ ಬಂದರು. ಸ್ವಾತಂತ್ರ್ಯ ನಂತರವೂ ಇ.ಎಂ.ಎಸ್. ನಂಬೂದಿರಿಪಾದ್, ಎ.ಕೆ. ಗೋಪಾಲನ್, ಪಿ. ಸುಂದರಯ್ಯ, ತೆರಿಮಲ ನಾಗಿರೆಡ್ಡಿಯಂಥ ಮಹಾನ್ ಕಮ್ಯುನಿಸ್ಟ್ ಮುಂದಾಳುಗಳು ಕೋರ್ಟ್ ಗಳಲ್ಲಿ ಈ ಬಗ್ಗೆ ತೀವ್ರ ಆಕ್ಷೇಪಣೆ ಮಾಡುವುದರೊಂದಿಗೆ ಲಾ ಕಮೀಷನ್ ಮೇಲೆ ಒತ್ತಾಯವನ್ನೂ ತಂದರು. ಇದೆಲ್ಲದರ ಪರಿಣಾಮವಾಗಿ 1969 ರಲ್ಲಿ ಪಾರ್ಲಿಮೆಂಟ್ ನಲ್ಲಿ ಪ್ರಮಾಣ ಕಾಯ್ದೆಯ ಬಗ್ಗೆ ಚರ್ಚೆ ನಡೆದು ತಿದ್ದುಪಡಿ ತರಲಾಯಿತು. 1969ರ ಪ್ರಮಾಣ ಕಾಯ್ದೆಯ ಮೂಲ ಆ್ಯಕ್ಟ್ ನ ಅಂಶಗಳನ್ನು ಹಾಗೇ ಇರಿಸಿಕೊಂಡು ಅದಕ್ಕೆ ಹೊಸತಾಗಿ ಕೆಲ ಅಂಶಗಳನ್ನು ಸೇರಿಸಲಾಯಿತು. ಅವುಗಳ ಪೈಕಿ ಮುಖ್ಯವಾದ ಎರಡು ಅಂಶಗಳಿವೆ ಆ ಅಂಶಗಳು:
ಈ ಹೊಸ ಪ್ರಮಾಣ ಕಾನೂನು ದೇವರ ಭಯದ ಸ್ಥಾನದಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಸಮಗ್ರತೆ, ಘನತೆಗಳನ್ನು ತಂದುಕೊಟ್ಟಿತು. ಹಾಗೆಯೇ ಪ್ರಮಾಣ ಎನ್ನುವುದು ಸಾಕ್ಷಿಯಿಂದ ಸತ್ಯ ಹೊರಗೆಡಹುವ ಟೆಕ್ನಿಕ್ ಅಥವಾ ಟ್ರಿಕ್ ಮಾತ್ರ ಅಲ್ಲವೆಂದೂ ವ್ಯಾಖ್ಯಾನಿಸಿತು. ಈಗಲೂ ಈ ಪ್ರಮಾಣ ಕಾಯ್ದೆಯ ಪರಿಜ್ಞಾನವಿಲ್ಲದೆಯೇ ಕೋರ್ಟ್ ಗಳಲ್ಲಿ ನಿತ್ಯ ರೂಢಿಗತ ಪ್ರಮಾಣಗಳು ಮಾಡಲ್ಪಡುತ್ತಲೇ ಇರುತ್ತವೆ. ಮಾರನೆ ದಿನ ಪ್ರೊ. ಜನಾರ್ದನ್ ಅವರಿಗೆ ಈ ಘಟನೆಯನ್ನು ವಿವರಿಸಿದೆ. ಆಗ ಅವರು, “ಕಾನೂನಿನ ಉತ್ಕೃಷ್ಟಜ್ಞಾನ ತನಗಷ್ಟೇ ಇರುತ್ತೆ ಎನ್ನುವ ಪೂರ್ವಗ್ರಹದಿಂದ ನ್ಯಾಯಾಧೀಶರು ಕಟಕಟೆಯಲ್ಲಿ ನಿಂತವರನ್ನು ನೋಡುತ್ತಿರುತ್ತಾರೆ. ಅಂಥ ಧೋರಣೆಗೆ ಇಂಥ ಚುರುಕುಗಳು ಆಗಾಗ ಬೇಕಾಗುತ್ತವೆ. ಆ ಜಡ್ಜ್ ನಿಜವಾಗ್ಲೂ ದೊಡ್ಡ ಮನುಷ್ಯ. ಓಪನ್ ಕೋರ್ಟ್ ನಲ್ಲಿ ಪ್ರಮಾಣ ಕಾಯ್ದೆ ಬಗೆಗೆ ತಮಗಿದ್ದ ಅಜ್ಞಾನವನ್ನು ಒಪ್ಪಿಕೊಂಡರಲ್ಲ. ಇಂಥವರು ಬಹಳ ವಿರಳ” ಎಂದರು.
Follow Niruta Publications WhatsApp Channel for more updates by clicking the below link:
https://www.whatsapp.com/channel/0029Va9e9FJ7z4kZ46EkYR43
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|