2020ರ ವರ್ಷ ಹಲವು ಸವಾಲುಗಳನ್ನು ಮತ್ತು ಬದಲಾವಣೆಗಳನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದೆ. ಪದವಿ, ಹಣ, ಆಸ್ತಿ, ಹೊನ್ನು, ಮಣ್ಣು, ಅಧಿಕಾರ ಮೊದಲಾದವುಗಳ ಬೆನ್ನು ಹತ್ತಿ ಹೊರಟ ಮನುಷ್ಯನನ್ನು ಕಣ್ಣಿಗೆ ಕಾಣದ ವೈರಸ್ ಒಂದು ಅಲುಗಾಡದಂತೆ ತಡೆದು ನಿಲ್ಲಿಸಿದೆ. ಪೂರ್ತಿ ಜಗತ್ತನ್ನೇ ತಲ್ಲಣಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು 2020 ಮಾರ್ಚ 11 ರಂದು 'ಜಾಗತಿಕ ಪಿಡುಗು' ಎಂದು ಘೋಷಿಸಿದೆ. ಈ ರೀತಿಯ ಸಾಂಕ್ರಾಮಿಕ ಮಹಾಮಾರಿ ಮೊದಲನೆಯದೇನಲ್ಲ. ಮನುಕುಲದ ವಿಕಾಸದೊಟ್ಟಿಗೆ ಅವುಗಳ ತಾಂಡವ ಮಿಳಿತಗೊಂಡಿದೆ. ಆರನೇ ಶತಮಾನದ ಜಗತ್ತಿನ ಅತ್ಯಂತ ಭೀಕರ ಜಸ್ಟೀನಿಯನ್ ಪ್ಲೇಗ್ನಿಂದ ಹಿಡಿದು ಕಳೆದ ಶತಮಾನದ ಸ್ಪ್ಯಾನಿಷ್ ಫ್ಲ್ಯೂವರೆಗೂ ಮಾರಣಾಂತಿಕ ಪಿಡುಗುಗಳು ಮಾನವನ ಅಹಂಕಾರಕ್ಕೆ ಸರಿಯಾದ ಸವಾಲುಗಳನ್ನೇ ಒಡ್ಡಿವೆ. ಮನುಷ್ಯ ಸಮೂಹ ಈ ಅನಪೇಕ್ಷಿತ ಲಾಕ್ ಡೌನ್ ನಿಂದಾಗಿ ಯಾತನೆಗೆ ಗುರಿಯಾಗಿದೆ. ಜಾತಿ, ಧರ್ಮ, ಲಿಂಗ, ಜನಾಂಗ, ಬಣ್ಣ, ಗಡಿಗಳ ಎಲ್ಲೆ ಮೀರಿ ಕೊರೊನಾ ಎಂಬ ಮಹಾಮಾರಿ ಹಬ್ಬುತ್ತಿದೆ. ಎಲ್ಲೆಡೆ ಹತಾಶೆ, ನರಳಾಟದ ಛಾಯೆ ಎದ್ದು ಕಾಣುತ್ತಿದೆ. ಕೃಷಿಕರು, ಕೂಲಿಕಾರ್ಮಿಕರು, ದಿನಗೂಲಿಗಳು, ಆಟೋಚಾಲಕರು ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿಗಳು, ಹಣ್ಣು-ತರಕಾರಿ ವ್ಯಾಪಾರಿಗಳು, ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳು ಮೊದಲಾದವುದವರ ದುಡಿಯುವ ಕ್ಷೇತ್ರಗಳು ಬೇರೆ-ಬೇರೆ. ಆದರೆ, ಎಲ್ಲರ ಯಾತನೆ ಮಾತ್ರ ಒಂದೇ. ಇದೀಗ ಎದುರಾಗಿರುವ ಅಸಾಮಾನ್ಯ, ಅಸದೃಶ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವಲ್ಲಿ ಜನತೆ ಅಪಾರ ಧೈರ್ಯ ತೋರುವ ಜರೂರತ್ತಿದೆ. ಕೋವಿಡ್-19 ಸೃಷ್ಟಿಸಿರುವ ಈ ಜಾಗತಿಕ ಬಿಕ್ಕಟ್ಟು ಹತ್ತು ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ. ಇವುಗಳಲ್ಲಿ ವೈಯಕ್ತಿಕ ಮತ್ತು ಸಾಮುದಾಯಿಕ ಜವಾಬ್ದಾರಿಗಳ ಕುರಿತು ವ್ಯಾಪಕ ಚಿಂತನೆ ನಡೆದಿದೆ. ಜೊತೆ-ಜೊತೆಗೆ ವಿವಿಧ ಕ್ಷೇತ್ರಗಳ ತಜ್ಞರು, ವೈದ್ಯರು, ಪೊಲೀಸರು, ದಾದಿಯರು, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತೆಯರ ಕೊಡುಗೆಗಳ ಬಗ್ಗೆ, ಅವರ ಪಾತ್ರಗಳ ಬಗ್ಗೆ ವಿಶ್ಲೇಷಣೆಗಳೇ ತುಂಬಿವೆ. ಈ ಸಂದರ್ಭದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಸಾಮಾಜಿಕ ಜವಾಬ್ದಾರಿಯ ಜೊತೆಗೆ ವೃತ್ತಿಪರ ಪಾತ್ರವನ್ನು ಪರಾಮರ್ಶಿಸುವ ಚಿಕ್ಕ ಪ್ರಯತ್ನ ಈ ಲೇಖನದಲ್ಲಿದೆ. ಸರ್ವವ್ಯಾಪಿಯಾಗಿ ಹರಡುವ ಕೊರೊನಾ ವೈರಸ್ನ ಪ್ರವೃತ್ತಿ ಕರ್ನಾಟಕ ಮತ್ತು ದೇಶದ ಇತರ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಕೈಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ, ತಿರುಗಾಡಲು ಸ್ವಾತಂತ್ರ್ಯವಿಲ್ಲ, ದುಡ್ಡಿದ್ದರೂ ಬೇಕಾದ ವಸ್ತು ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೃಷ್ಟಿಸಿದ ಪಲ್ಲಟವು ಉಳಿದೆಲ್ಲ ಕ್ಷೇತ್ರಗಳಂತೆ ಸಮಾಜಕಾರ್ಯಕ್ಕೆ ಹೊಸ ರೀತಿಯಲ್ಲಿ ಯೋಚಿಸುವಂತೆ ಪ್ರೇರೇಪಿಸಿದೆ. ಇಡೀ ಜಗತ್ತು ಒಂದೇ ಅವಧಿಯಲ್ಲಿ ಮನೆಯೊಳಗೆ ಅಡಗಿ ಕುಳಿತಿದೆ. ಇನ್ನೊಂದೆಡೆ ಲಾಕ್ ಡೌನ್ ನಿಂದ ಮನೆಯೊಳಗೆ ಕೌಟುಂಬಿಕ ದೌರ್ಜನ್ಯಗಳು ಎಗ್ಗಿಲ್ಲದೇ ಹೆಚ್ಚಾಗಿವೆ. ಗಂಡ-ಹೆಂಡತಿಯರ ನಡುವೆ ಕೌಟುಂಬಿಕ ಸಂಘರ್ಷಗಳು, ಕಲಹಗಳು ವರದಿಯಾಗುತ್ತಿವೆ. ಮಾರ್ಚ್ 23 ರಿಂದ ಏಪ್ರಿಲ್ 16ರವರೆಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 239 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಬಂದಿವೆ. ಈ ಸನ್ನಿವೇಶ ಅಪಾಯಕಾರಿ. ಸಮಾಜಕಾರ್ಯಕರ್ತರು ಟೆಲಿಫೋನಿಕ್ ಕೌಟುಂಬಿಕ ಆಪ್ತಸಮಾಲೋಚನೆ ಒದಗಿಸುವ ಮೂಲಕ ಸಾಧ್ಯವಾದಷ್ಟು ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಮೇಲೆ ಸೋಂಕಿತರನ್ನು ಪತ್ತೆ ಮಾಡುವ ಬಹುಮುಖ್ಯ ಕೆಲಸವಾಗಬೇಕಿದೆ. ಸೋಂಕಿತರ ತಪಾಸಣೆ, ಅವರೊಂದಿಗೆ ನಿಕಟ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಮತ್ತು ತಪಾಸಣೆ ಕಾರ್ಯದಲ್ಲಿ ಸಮಾಜಕಾರ್ಯಕರ್ತರು ಸಕ್ರಿಯವಾಗಿ ಆರೋಗ್ಯ ಇಲಾಖೆಯೊಂದಿಗೆ ಹಾಗೂ ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತೆಯರೊಂದಿಗೆ ಕೈ ಜೋಡಿಸಬಹುದು. ಯುನೆಸ್ಕೋ ವರದಿಯ ಪ್ರಕಾರ ಜಗತ್ತಿನ ವಿದ್ಯಾರ್ಥಿ ಸಮುದಾಯದ ಶೇಕಡಾ 91ರಷ್ಟು ವಿದ್ಯಾರ್ಥಿಗಳು ಕೋವಿಡ್-19ರ ಪ್ರಭಾವಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಸುಮಾರು 32 ಕೋಟಿ ಮಕ್ಕಳು ಮನೆಯಲ್ಲಿ ಒತ್ತಾಯದ ರಜೆ ಕಳೆಯುತ್ತಿದ್ದಾರೆ. ಮಕ್ಕಳು ತರಗತಿ ಬೋಧನೆಯ ಪ್ರಯೋಜನ ಕಳೆದುಕೊಂಡು, ಪರೀಕ್ಷೆಗಳು ಮುಂದೂಡಲ್ಪಟ್ಟು ಭವಿಷ್ಯದ ಕಲಿಕೆಯ ಕುರಿತು ಗೊಂದಲಗೊಂಡಿದ್ದಾರೆ. ಸಮಾಜಕಾರ್ಯಕರ್ತರು ಶಾಲಾ ಸನ್ನಿವೇಶದಲ್ಲಿ ಬಳಸಬಹುದಾದ ಸಮಾಜಕಾರ್ಯದ ತಂತ್ರ, ವಿಧಾನ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ದೂರವಾಣಿ ಅಥವಾ ಸಮೂಹ ಸಂವಹನಗಳ ಮೂಲಕ ಅವರ ಗೊಂದಲ ನಿವಾರಿಸುವ ಕೆಲಸ ಮಾಡಬಹುದು. ಮಕ್ಕಳು ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದರಿಂದ ಮನರಂಜನೆ ಮತ್ತು ಮಾಹಿತಿಗಾಗಿ ಅಂತರ್ಜಾಲದ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅಪರಿಚಿತರೊಡನೆ ಸಂವಹನ, ಲೈಂಗಿಕ ಪ್ರಚೋದನೆ ನೀಡುವ ವೆಬ್ ಸೈಟ್ ಗಳ ವೀಕ್ಷಣೆ, ಲೈಂಗಿಕ ದುರ್ಬಳಕೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ನಿಟ್ಟಿನಲ್ಲಿ ಮಕ್ಕಳ ಆನ್ ಲೈನ್ ಅನುಭವ ಸುರಕ್ಷಿತವಾಗಿರುವಂತೆ ಮಕ್ಕಳಿಗೆ, ಪೋಷಕರಿಗೆ ಜಾಗೃತಗೊಳಿಸುವ ಮತ್ತು ಅವರನ್ನು ಹೆಚ್ಚರಿಸುವ ಕಾರ್ಯವನ್ನು ಸಮಾಜಕಾರ್ಯಕರ್ತರು ಮಾಡಬಹುದು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿವೆ. ಕುಡಿಯಲು ಮದ್ಯ ಸಿಗದೇ ಕೆಲವು ಮದ್ಯವ್ಯಸನಿಗಳು ಮಾನಸಿಕ ಸಮಸ್ಯೆಗಳಿಂದ ಬಳಲುವ, ಆತ್ಮಹತ್ಯೆ ಮಾಡಿಕೊಂಡಿರುವ, ಸ್ಯಾನಿಟೈಸರ್ ಸೇವನೆ ಮಾಡಿ ಸತ್ತಿರುವ ಘಟನೆಗಳು ವರದಿಯಾಗಿವೆ. ದೀರ್ಘಕಾಲ ಮತ್ತು ಅತಿಯಾದ ಮದ್ಯಪಾನ ಮಾಡುವ ವ್ಯಕ್ತಿಯು ಇದ್ದಕಿದ್ದಂತೆ ಕುಡಿಯುವುದನ್ನು ನಿಲ್ಲಿಸಿದಾಗ ಕೆಲವು ಮನೋ-ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸ್ಥಿತಿಯನ್ನು 'ಆಲ್ಕೊಹಾಲ್ ವಿತ್ಡ್ರಾವಲ್ ಸಿಂಡ್ರೋಮ್' ಎಂದು ಕರೆಯುತ್ತಾರೆ. ಈ ಸಮಸ್ಯೆಯಿರುವ ಮದ್ಯವ್ಯಸನಿಗಳಿಗೆ ಮನೋ ವೈದ್ಯಕೀಯ ಅಥವಾ ಆಪ್ತಸಮಾಲೋಚನೆ ಸೇವೆಗಳನ್ನು ಸಮಾಜಕಾರ್ಯಕರ್ತರು ಒದಗಿಸಬಹುದು. ಕೊರೊನಾ ದಿಗ್ಬಂಧನದಿಂದಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಾದ ವೃದ್ಧರು, ಅಂಗವಿಕಲರು, ವಿಧವೆಯರು, ಕಟ್ಟಡ ಕೂಲಿ ಕಾರ್ಮಿಕರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದಲ್ಲಿರುವ ಬ್ಯಾಂಕ್ ಗಳಿಗೆ ಬಂದು ಪಿಂಚಣಿ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸರ್ಕಾರ ಮೂರು ತಿಂಗಳ ಪಿಂಚಣಿಯನ್ನು ಮುಂಗಡವಾಗಿ ವಿತರಿಸುವ ಕಾರ್ಯ ಮಾಡುತ್ತಿದ್ದು, ಫಲಾನುಭವಿಗಳಿಗೆ ಈ ಪಿಂಚಣಿಯನ್ನು ಸಕಾಲಕ್ಕೆ ದೊರೆಯುವಂತೆ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುವಲ್ಲಿ ಸಮಾಜಕಾರ್ಯಕರ್ತರು ಶ್ರಮಪಡಬಹುದು. ಆರೋಗ್ಯ ಇಲಾಖೆಯೊಂದಿಗೆ ಸ್ವಯಂ ಸೇವಕರಾಗಿ ಸಮಾಜಕಾರ್ಯಕರ್ತರು ಕೆಲಸ ಮಾಡುವ ಬಹುದೊಡ್ಡ ಅವಕಾಶವಿದೆ. ಮಾಸ್ಕ್ ಧರಿಸುವಿಕೆ, ಪದೇ-ಪದೇ ಸ್ಯಾನಿಟೈಸರ್ ಅಥವಾ ಸೋಪಿನಿಂದ ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟೆನ್ಸಿಂಗ್)ದ ಕುರಿತು ಅರಿವು ಮೂಡಿಸುವ ಕೆಲಸದ ಜೊತೆಗೆ, ಸಂಪರ್ಕ ತಡೆ (ಕ್ವಾರಂಟೈನ್), ಕೊರೊನಾ ರೋಗ ಲಕ್ಷಣ, ಸೋಂಕಿತರ ಪತ್ತೆ, ತಪಾಸಣೆ ಮೊದಲಾದ ಕಾರ್ಯಗಳಲ್ಲಿ ಸಮಾಜಕಾರ್ಯಕರ್ತರು ತಮ್ಮನ್ನು ತಾವು ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಬಹುದು. ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಕಾರಣದಿಂದ ಮನುಷ್ಯನಲ್ಲಿ ಒಂಟಿತನ, ಆತಂಕ, ದುಗುಡ, ಖಿನ್ನತೆ, ಉದ್ವೇಗ, ಮೊದಲಾದ ಮಾನಸಿಕ ಸಮಸ್ಯೆಗಳು ಭಾಧಿಸುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಟೆಲಿಥೈರಪಿ ಸಮಾಜಕಾರ್ಯಕರ್ತರಾಗಿಯೂ ಕೂಡ ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಹಾಯ ಮಾಡಬಹುದು. ಚೈನೀಸ್ ಅಸೋಸಿಯೇಶನ್ ಆಪ್ ಸೋಷಿಯಲ್ ವರ್ಕರ್ಸ್ ಸದಸ್ಯರು ಚೀನಾದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಸಮಾಜಕಾರ್ಯಕರ್ತರ ಬೆಂಬಲ ಕೈಪಿಡಿ (ಸಪೋರ್ಟ್ ಮ್ಯಾನ್ಯುವಲ್)ಯನ್ನು ಬಿಡುಗಡೆಗೊಳಿಸಿ ಮಹಾಮಾರಿಯ ನಿಯಂತ್ರಣಕ್ಕೆ ಸಮಾಜಕಾರ್ಯದ ಮೂಲಭೂತ ತತ್ವಗಳು ಮತ್ತು ವಿಧಾನಗಳ ಅನ್ವಯಿಕೆಯ ಕುರಿತು ಸಮಗ್ರ ಕ್ರಿಯಾ ಯೋಜನೆಯನ್ನು ಪ್ರಕಟಿಸಲಾಗಿದೆ. ಜೊತೆಗೆ ಸಮಾಜಕಾರ್ಯಕರ್ತರಿಗೆ ಅಲ್ಲಿನ ವೃತ್ತಿಪರ ಸಮಾಜಕಾರ್ಯ ಸಂಸ್ಥೆಗಳು ಆನ್ಲೈನ್ ತರಬೇತಿ ಕಾರ್ಯಗಾರಗಳನ್ನು ಆರಂಭಿಸಿವೆ. ಸಾರ್ಸ್, ಎಬೋಲಾ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಮಾಜಕಾರ್ಯಕರ್ತರು ಯಶಸ್ವಿಯಾದ ಸಾಕಷ್ಟು ಉದಾಹರಣೆಗಳಿವೆ. ಈ ರೀತಿಯ ಜಾಗತಿಕ ಮಹಾಮಾರಿಗಳ ನಿಯಂತ್ರಣಕ್ಕೆ ಕೇವಲ ವೈದ್ಯಕೀಯ ಪ್ರತಿಕ್ರಿಯೆಯಷ್ಟೇ ಸಾಕಾಗುವುದಿಲ್ಲ. ಬದಲಿಗೆ ಜನರಲ್ಲಿ ಅರಿವು ಮೂಡಿಸಲು, ಮಾಹಿತಿ ಪಸರಿಸಲು, ಅಗತ್ಯ ನೆರವು ನೀಡಲು, ಸಮುದಾಯವನ್ನು ಜಾಗೃತಗೊಳಿಸಲು, ಅನಾಹುತದ ಅಪಾಯವನ್ನು ಕಡಿಮೆ ಮಾಡಲು ಸಮಾಜಕಾರ್ಯಕರ್ತರ ಅಗತ್ಯತೆ ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಹಾಗಾಗಿ ಸರ್ಕಾರಗಳು ಇನ್ನಾದರೂ ಅಗತ್ಯ ಸಮಾಜಕಾರ್ಯಕರ್ತರ ಸಂಪರ್ಕ ಜಾಲವನ್ನು ಬಲಪಡಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ. UGC NET Training for Social Work
ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯಕರ್ತ ಎರಡು ಅಂಶಗಳಿಗೆ ಆದ್ಯತೆಯನ್ನು ನೀಡಬೇಕಾಗುತ್ತದೆ. ಒಂದು ವೈಯಕ್ತಿಕ ಹಂತದಲ್ಲಿ, ಮತ್ತೊಂದು ಸಮುದಾಯದ ಹಂತದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಅಂದಾಜಿಸಬೇಕು. ವ್ಯಕ್ತಿ ಮತ್ತು ಸಮುದಾಯಗಳೆರಡನ್ನು ರಕ್ಷಿಸುವ ಹೊಣೆಗಾರಿಕೆ ಸಮಾಜಕಾರ್ಯಕರ್ತನಿಗಿರುತ್ತದೆ. ಕೊರೊನಾದಂತಹ ರೋಗ ತಗುಲಿದಾಗ ಅದು ಮಕ್ಕಳಲ್ಲಿ, ಪ್ರೌಢರಲ್ಲಿ, ಕುಟುಂಬಗಳಲ್ಲಿ ಮತ್ತು ವಯಸ್ಕರಲ್ಲಿ, ವೃದ್ಧರಲ್ಲಿ ಅನೇಕ ದೈಹಿಕ, ಮಾನಸಿಕ ಹಾಗೂ ಆರ್ಥಿಕ ತಲ್ಲಣಗಳನ್ನು ತಂದೊಡ್ಡುತ್ತದೆ. ಈ ಸಂದರ್ಭದಲ್ಲಿ ತತ್ ಕ್ಷಣದಲ್ಲಿ ಅಗತ್ಯವಾದದ್ದು ಮನೋ-ವೈಜ್ಞಾನಿಕ ಪ್ರಥಮ ಚಿಕಿತ್ಸೆ. ಕೊರೊನಾ ಸೋಂಕು ಹರಡಬಹುದೆಂಬ ಭಯ ಹೊಂದಿರುವವರಿಗೆ, ಸೋಂಕಿತರ ಸಂಪರ್ಕದಲ್ಲಿರುವವರಿಗೆ, ಸೋಂಕಿತರಿಗೆ ಈ ಸೇವೆಯನ್ನು ಒದಗಿಸುವ ಮೂಲಕ ಮುಂದಾಗಬಹುದಾದ ಅನಾಹುತಗಳನ್ನು ಆರಂಭದಲ್ಲಿಯೇ ತಡೆಗಟ್ಟಬಹುದು. ಕೊರೊನಾ ಸೋಂಕು ಹರಡುವಿಕೆ ನಿಂತ ನಂತರ ಅದು ಉಂಟು ಮಾಡುವ ಆಘಾತ, ನಂತರದ ಒತ್ತಡ ನಿಜಕ್ಕೂ ಸವಾಲಿನದು. ಅನೇಕ ಗುಣಮುಖಗೊಂಡ ರೋಗಿಗಳು ಮಾನಸಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಒತ್ತಡಕ್ಕೆ ಸಂಬಂಧಿಸಿದ ಲಕ್ಷಣಗಳಿಂದ ಬಳಲುತ್ತಿದ್ದು ಪುನಃ ಕಾಯಿಲೆಗೆ ಗುರಿಯಾಗಬಹುದೆಂಬ ಭಯದಿಂದ ಮಾನಸಿಕ ಅಸ್ವಸ್ಥತೆಗೆ ಗುರಿಯಾಗುತ್ತಾರೆ. ಈ ಸನ್ನಿವೇಶದಲ್ಲಿ ಸಮಾಜಕಾರ್ಯಕರ್ತರು ಮನೋ-ವೈಜ್ಞಾನಿಕ ಆರೋಗ್ಯ ಸೇವೆಗಳನ್ನು ಒದಗಿಸಬಹುದು. ದೀರ್ಘಕಾಲದ ಲಾಕ್ ಡೌನ್ ನಿಂದಾಗಿ ಅರೆಕಾಲಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭಯ ಅನುಭವಿಸುತ್ತಿರುತ್ತಾರೆ. ವ್ಯಕ್ತಿಗಳ ಆರ್ಥಿಕ ಸ್ಥಿತಿಗತಿಗಳನ್ನು ಕೂಡ ಹದಗೆಟ್ಟಿರುತ್ತವೆ. ಈ ಸಂದರ್ಭದಲ್ಲಿ ವ್ಯಕ್ತಿ ಖಿನ್ನತೆಗೆ ಗುರಿಯಾಗಿ ಉದ್ಯೋಗದ ಅಭದ್ರತೆಯ ಕಾರಣದಿಂದ ಆತ್ಮಹತ್ಯೆಯಂತಹ ಯತ್ನಗಳಿಗೂ ಪ್ರಯತ್ನಿಸುತ್ತಾನೆ. ಈ ತರಹದ ಪ್ರಕರಣಗಳಲ್ಲಿ ಸಮಾಜಕಾರ್ಯಕರ್ತರು ಸೂಕ್ತ ಧೈರ್ಯ, ಸಾಂತ್ವನ ನೀಡಿ ಜೀವನೋತ್ಸಾಹ ತುಂಬುವ ಕೆಲಸ ಮಾಡಬಹುದು. ವ್ಯಕ್ತಿ, ವೃಂದ ಮತ್ತು ಸಮುದಾಯಗಳೊಂದಿಗೆ ವಿವಿಧ ವಿಧಾನಗಳ ಮೂಲಕ ಕಾರ್ಯನಿರ್ವಹಿಸುವ ಸಮಾಜಕಾರ್ಯಕರ್ತರು ಅಗತ್ಯವೆನಿಸಿದರೆ ಸಾಂದರ್ಭಿಕ ಬೆಂಬಲ, ಭರವಸೆ, ಪ್ರೇರೇಪಣೆ ನೀಡುವಂತಹ ಕ್ರಿಯಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ನೀವೂ ಸಹ ನಿಮ್ಮ ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ನಿಮ್ಮ ಲೇಖನಗಳನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ ಮತ್ತು ನಮ್ಮ ಇತರೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುತ್ತೇವೆ. [email protected] ಆಲ್ಬರ್ಟ್ ರಾಬರ್ಟ್ ರವರ ಏಳು ಹಂತಗಳ ಬಿಕ್ಕಟ್ಟಿನ ಹಸ್ತಕ್ಷೇಪವನ್ನು ಗಮನಿಸಿ ಸಮಾಜಕಾರ್ಯಕರ್ತರ ಪಾತ್ರವನ್ನು ನೋಡುವುದಾದರೆ ಅಪಾಯವನ್ನು ಅಂದಾಜಿಸುವುದು, ಸಮಸ್ಯೆಗಳನ್ನು ಗುರುತಿಸುವುದು, ಭಾವನೆಗಳೊಂದಿಗೆ ಸೂಕ್ತವಾಗಿ ವ್ಯವಹರಿಸುವುದು, ಪರ್ಯಾಯ ಮಾರ್ಗಗಳನ್ನು ಹುಡುಕುವುದು, ಸುರಕ್ಷತೆಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು ಸೇರಿದಂತೆ ಅಂತಿಮವಾಗಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತವಾಗಿ ಪರಿಹರಿಸುವ ವೃತ್ತಿಪರತೆಯನ್ನು ಪ್ರತಿಯೊಬ್ಬ ಸಮಾಜಕಾರ್ಯಕರ್ತ ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ.
ಚೀನಾದಲ್ಲಿರುವ ವೆಸ್ಟ್ ಚೀನಾ ಹಾಸ್ಪಿಟಲ್ನಲ್ಲಿ ವೈದ್ಯರು, ಮನೋವೈದ್ಯರು, ಮನಃಶಾಸ್ತ್ರಜ್ಞರು ಮತ್ತು ಸಮಾಜಕಾರ್ಯಕರ್ತರನ್ನೊಳಗೊಂಡ ಕೋವಿಡ್-19 ಮನೋ-ವೈಜ್ಞಾನಿಕ ಬಿಕ್ಕಟ್ಟು ಹಸ್ತಕ್ಷೇಪ ಮಾದರಿಯೊಂದನ್ನು ಪ್ರತಿಪಾದಿಸಲಾಗಿದೆ. ಈ ಮಾದರಿಯಲ್ಲಿ ಸೋಂಕಿತರು, ಪ್ರತ್ಯೇಕವಾಗಿಸಲ್ಪಟ್ಟಿದ್ದವರು, ರೋಗಲಕ್ಷಣ ಕಂಡು ಬಂದವರು, ಕುಟುಂಬದ ಸದಸ್ಯರು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರಿಗೆ ಅಗತ್ಯ ಮನೋ-ವೈದ್ಯಕೀಯ ಚಿಕಿತ್ಸೆಯನ್ನು ದೂರವಾಣಿ ಮತ್ತು ಅಂತರ್ಜಾಲಗಳ ಮೂಲಕ ಸಮಾಜಕಾರ್ಯಕರ್ತರನ್ನು ಬಳಸಿಕೊಂಡು ನೀಡಲಾಗುತ್ತಿದೆ. ಈ ಮಾದರಿಯನ್ನು ಭಾರತದಲ್ಲಿಯೂ ಕೂಡ ಅಳವಡಿಸಿಕೊಳ್ಳಬಹುದು. ಕೊರೊನಾ ವೈರಸ್ ಸೃಷ್ಟಿಸಿರುವ ಈ ಸಾಮೂಹಿಕ ಒತ್ತಡಗಳನ್ನು ಮೀರಿ ಸಂಯೋಜಿತ ಒಗ್ಗಟ್ಟಿನಿಂದ ಸಮಾಜಕಾರ್ಯಕರ್ತರು ಕೆಲಸ ಮಾಡುವ ಸನ್ನಿವೇಶ ಎದುರಾಗಿದೆ. ಸಮಾಜಕಾರ್ಯ ವೃತ್ತಿಪರ ತಂಡವಾಗಿ ಬಿಕ್ಕಟ್ಟನ್ನು ಮೀರಿದ ಮತ್ತು ಮೀರುವಂತಹ ಸುಸ್ಥಿರ, ಉತ್ತಮ ಮತ್ತು ಆರೋಗ್ಯವಂತ ಸಮಾಜವೊಂದನ್ನು ಕಟ್ಟುವಂತಹ ಪಣತೊಡಬೇಕಾಗಿದೆ. ಎಲ್ಲೆಡೆ ತುಂಬಿರುವ ಭಯ, ದುಃಖ, ಅಶಾಂತಿ, ನೋವನ್ನು ಪರಿಹರಿಸುವ ಎಲ್ಲಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ನಮ್ಮ ಸಮಾಜಕಾರ್ಯ ವೃತ್ತಿ ಕಲಿಸಿಕೊಟ್ಟಿದೆ. ಅದನ್ನು ಮನುಕುಲದ ಉಳಿವಿಗಾಗಿ ಕಲ್ಯಾಣಕ್ಕಾಗಿ ಶಕ್ತಿ ಮೀರಿ ಬಳಸುವ ಕಾಲಘಟ್ಟದಲ್ಲಿದ್ದೇವೆ. ದಯವಿಟ್ಟು ನಿಮ್ಮ ವೃತ್ತಿಪರ ನೆರವಿನ ಹಸ್ತ ನೊಂದವರ ಕಣ್ಣೀರನ್ನೊರೆಸಲು ಸಿದ್ದವಾಗಿಟ್ಟುಕೊಳ್ಳಿ. ಹಿರೆರೊ (2012)ರವರ ಪ್ರಕಾರ ತುರ್ತು ಸಂದರ್ಭಗಳಲ್ಲಿ ಸಮಾಜಕಾರ್ಯ ವೃತ್ತಿಪರರಾದ ನಾವು ವಿಭಿನ್ನ ಹಾಗೂ ವೈಶಿಷ್ಟಪೂರ್ಣ ಪಾತ್ರಗಳನ್ನು ಪೋಷಿಸಬೇಕಾಗುತ್ತದೆ. ಸನ್ನಿವೇಶದ ಸ್ವರೂಪವನ್ನು ಜನರಿಗೆ ಅರ್ಥೈಸುವ, ಸಾಮಾಜಿಕ ಗುಂಪುಗಳಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವ, ತೊಂದರೆಗೊಳಗಾದ ಜನರಿಗೆ ಅವರ ಭಾವನೆಗಳನ್ನು ನಿರ್ವಹಿಸಲು ಸಹಾಯ ಮಾಡುವ, ಸಮಸ್ಯೆ-ಸವಾಲುಗಳನ್ನು ಎದುರಿಸಲು ಹೊಸ ಮಾರ್ಗಗಳನ್ನು ತೋರುವ, ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಪರಿವರ್ತಿಸುವ ಗುರಿಗಳನ್ನೆಲ್ಲಾ ಒಬ್ಬ ವೃತ್ತಿಪರ ಸಮಾಜಕಾರ್ಯಕರ್ತ ಹೊಂದಿರಬೇಕಾಗುತ್ತದೆ. ಅದು ಅವನ ವೃತ್ತಿಪರ ಹೊಣೆಗಾರಿಕೆಯೂ ಹೌದು. ಸಮಾಜಕಾರ್ಯಕರ್ತ-ಅರ್ಥಿಗಳ ನಡುವಿನ ಸಂಬಂಧ/ಸಂಪರ್ಕಗಳ ಕುರಿತಂತೆ ಕೊರೊನಾ ವೈರಸ್ನ ಸಾಮಾಜಿಕ ಅಂತರದಿಂದಾಗಿ ಹೊಸದಾಗಿ ಬಳಸುತ್ತಿರುವ ಸಂವಹನ ತಂತ್ರಜ್ಞಾನಗಳು ಕೆಲವೊಂದು ಮೂಲಭೂತ ಪ್ರಶ್ನೆಗಳನ್ನೇ ಹುಟ್ಟುಹಾಕಿದೆ. ಟೆಲಿ ಕೌನ್ಸಲಿಂಗ್, ಆನ್ಲೈನ್ ಕೌನ್ಸಲಿಂಗ್, ವಿಡಿಯೋ ಕಾನ್ಫರೆನ್ಸಿಂಗ್, ಆಟೋಮೇಟೆಡ್ ಟುಟೋರಿಯಲ್ಸ್ಗಳು ವೃತ್ತಿಪರ ಸಮಾಜಕಾರ್ಯ ಕ್ಷೇತ್ರಕ್ಕೆ ಹೊಸ ಸಾಧ್ಯತೆಗಳನ್ನು ಮುಕ್ತವಾಗಿಸಿದೆ. ಸಾಂಕ್ರಾಮಿಕ ರೋಗ/ಪಿಡುಗುಗಳ ಸಂದರ್ಭದಲ್ಲಿ ಸಮಾಜಕಾರ್ಯಕರ್ತರ ಪಾತ್ರದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಥವಾ ವೃತ್ತಿಪರ ಸಮಾಜಕಾರ್ಯಕರ್ತ ಸಂಘಗಳ ಬಳಿ ನಿರ್ದಿಷ್ಟ, ನಿಗದಿತ ಮಾರ್ಗದರ್ಶಿ ಸೂತ್ರಗಲೇ ಇಲ್ಲ. ಇವುಗಳ ಕುರಿತಂತೆ ಇರುವ ಬರವಣಿಗೆಯೂ ಕೂಡ ಅತ್ಯಂತ ವಿರಳ. ಸಾಂಕ್ರಾಮಿಕ ರೋಗದ ಸ್ಫೋಟದ ನಂತರ ಅದರ ನಿರ್ವಹಣೆಗೆ ಪೂರ್ವಭಾವಿ ತಯಾರಿಯ ಅಗತ್ಯತೆ ಇರುತ್ತದೆ. ಸಾರ್ಸ್ ಪಿಡುಗು ಹರಡಿದ ಸಂದರ್ಭದಲ್ಲಿ ವೈದ್ಯಕೀಯ ಸಮಾಜಕಾರ್ಯಕರ್ತರ ಅನುಭವ ನಿಜಕ್ಕೂ ಸವಾಲಿನದಾಗಿತ್ತು. ಈ ಸಮಸ್ಯೆ ಪುನಃ ಕೊರೊನಾದ ಸಂದರ್ಭದಲ್ಲಿಯೂ ಎದುರಾಗಿದೆ. ಹಾಗಾಗಿ ಸಮಾಜಕಾರ್ಯ ವೃತ್ತಿಪರ ಸಂಸ್ಥೆಗಳು ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ವೃತ್ತಿಪರ ಸಮಾಜಕಾರ್ಯಕರ್ತರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗಬೇಕಿದೆ. ಪ್ರಶಾಂತ ಹೆಚ್.ವೈ, ಸಹಾಯಕ ಪ್ರಾಧ್ಯಾಪಕರು, ಸಮಾಜಕಾರ್ಯ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಹಾವೇರಿ-581110.
4 Comments
Ashok R
5/6/2020 06:16:37 am
nice article,
Reply
Vasudeva Sharma
5/6/2020 09:32:49 am
Good narration and argument. Well written and timely.
Reply
Nagaraj M Hadapad
5/6/2020 09:29:20 pm
Such a effective writing Sir govt has to use all social worker who are already in field to give motivation to others also come to work valuterly and then come to know the Social worker also one of the responsible person in the Society....tq u Sir.
Reply
Government First Grade College
5/11/2020 10:16:59 pm
Nice article..I feel, couple of issues needs to be incorporated.
Reply
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |