ಲೇಖಕರು: ಡಾ. ಸಿ.ಆರ್. ಗೋಪಾಲ್ ಪುಟಗಳು: 245
ಪರಿವಿಡಿ ಮುನ್ನುಡಿ ಪ್ರಕಾಶಕರ ನುಡಿ ಪ್ರಸ್ತಾವನೆ-ಕೃತಜ್ಞತೆ ಲೇಖಕರ ಪರಿಚಯ 1. ಅಧ್ಯಾಯ ಒಂದು ಪೀಠಿಕೆ, ಭಾಷಣ ಒಂದು ಕಲೆ, ಭಾಷಣದ ವ್ಯಾಖ್ಯೆ-ವಿವರಣೆ, ಭಾಷಣದ ಉದ್ದೇಶ, ಭಾಷಣದ ಅಂಶಗಳು. 2. ಅಧ್ಯಾಯ ಎರಡು ಭಾಷಣದ ವೇದಿಕೆ / ಸ್ಥಳ, ಮಹತ್ವ, ಉಪಯೋಗ . 3. ಅಧ್ಯಾಯ ಮೂರು ಭಾಷಣದ ವೈಶಿಷ್ಟ್ಯಗಳು, ಗುಣಲಕ್ಷಣಗಳು, ಆತ್ಮವಿಶ್ವಾಸ, ಸಕಾರಾತ್ಮಕ-ನಕಾರಾತ್ಮಕ ಭಾವನೆಗಳು. 4. ಅಧ್ಯಾಯ ನಾಲ್ಕು ಭಾಷಣದ ವೈವಿಧ್ಯತೆ :- ಪ್ರಕಾರಗಳು, ವೇದಿಕೆ ಮತ್ತು ಭಾಷಣಗಳು, ನಿರೂಪಣೆ, ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ, ಪರಿಚಯ, ಉದ್ಘಾಟನೆ, ಮುಖ್ಯ ಅತಿಥಿಗಳ ಭಾಷಣ, ಬೀಳ್ಕೊಡಿಗೆ, ಸಮಾರೋಪ, ಅಧ್ಯಕ್ಷರ ಭಾಷಣ, ಅಭಿನಂದನಾ ಭಾಷಣ, ಸಂತಾಪ ಸೂಚನ ಭಾಷಣ, ಪ್ರಶಸ್ತಿ ಸ್ವೀಕಾರ ಸಮಯದಲ್ಲಿ ಭಾಷಣ, ವಂದನಾರ್ಪಣೆ, ವಾರ್ಷಿಕ ಆಚರಣೆಗಳು, ಹಬ್ಬಗಳು, ಜಯಂತಿಗಳು. 5. ಅಧ್ಯಾಯ ಐದು ಭಾಷಣದ ಸಿದ್ಧತೆ :- ಮಾನಸಿಕ ತಯಾರಿ, ಮನುಷ್ಯನ ಶಕ್ತಿ ಸಾಮರ್ಥ್ಯಗಳಿಗೆ ಸೂತ್ರ, ವಿಷಯದ ಆಯ್ಕೆ, ಉತ್ತಮ ಕೇಳುಗನ ಲಕ್ಷಣಗಳು, ವಿಷಯ ಸಂಗ್ರಹ, ಮಾಹಿತಿಯ ಮೂಲಗಳು, ಕರಡುಭಾಷಣ. ಅಭ್ಯಾಸ. 6. ಅಧ್ಯಾಯ ಆರು ಸಭಾಕಂಪವನ್ನು ಗೆಲ್ಲಿ :- ವ್ಯಾಖ್ಯೆ, ಕಾರಣಗಳು, ಪರಿಹಾರೋಪಾಯಗಳು, ದಶಸೂತ್ರಗಳು. 7. ಅಧ್ಯಾಯ ಏಳು ಭಾಷಣದ ಮಂಡನೆ :- ಸಂವಹನ, ಸಂಭಾಷಣೆ, ಭಾಷಣ, ಸಂವಹನ ಕೌಶಲಗಳು, ಭಾಷೆ, ವಾಕ್ಪ್ರವಾಹ, ವಸ್ತ್ರಸಂಹಿತೆ, ವೇದಿಕೆಯ ಮೇಲೆ ನಿಮ್ಮ ಅಸ್ತಿತ್ವ, ವಾಚನಾಪೀಠ, ಹಾವಭಾವ, ದೇಹವಿನ್ಯಾಸ, ಸಂಬೋಧನೆ, ಭಾಷಣದ ಆರಂಭ, ಅನುಸರಣೆ. 8. ಅಧ್ಯಾಯ ಎಂಟು ಭಾಷಣಗಳಲ್ಲಿ ಉದ್ಧೃತಗಳು-ಉದ್ಧರಣಗಳು :- ದೇವರು ಒಬ್ಬನೆ, ಭಗವದ್ಗೀತೆಯಲ್ಲಿ, ಸುಭಾಷಿತಗಳು, ಮಂಕುತಿಮ್ಮನ ಕಗ್ಗ, ಶರಣ ಸಾಹಿತ್ಯ, ದಾಸ ಸಾಹಿತ್ಯ, ಗಾದೆಮಾತುಗಳು. 9. ಅಧ್ಯಾಯ ಒಂಬತ್ತು ಭಾಷಣಗಳಲ್ಲಿ ಶ್ರವಣ-ದೃಶ್ಯ ಮಾಧ್ಯಮಗಳು :- ಗಮನಿಸುವ ಅಂಶಗಳು, ಮಾರ್ಗದರ್ಶಿ ಸೂತ್ರಗಳು, ಧ್ವನಿವರ್ಧಕಗಳು, ಭಾಷಣಪೀಠ, ಬೆಳಕಿನ ವ್ಯವಸ್ಥೆ, ದೃಶ್ಯ ಪರಿಕರಗಳು, ಕಪ್ಪು/ಬಿಳಿ ಹಲಗೆ, ಮೇಲ್ಭಾಗದ ಪ್ರಕ್ಷೇಪಕ, ಜಾರಿಕೆ ಪ್ರಕ್ಷೇಪಕ, ಚಲನಚಿತ್ರ/ಕಿರುಚಿತ್ರ ಪ್ರಕ್ಷೇಪಕ, ಧ್ವನಿಮುದ್ರಕ ಸಾಧನ, ದೃಶ್ಯ-ಶ್ರವಣ ಮುದ್ರಿತ ಸಾಧನ, ಲ್ಯಾಪ್ಟಾಪ್. 10. ಅಧ್ಯಾಯ ಹತ್ತು ವ್ಯವಸ್ಥಾಪಕರು ಮತ್ತು ವೇದಿಕೆಯ ಏರ್ಪಾಡು :- ಯಾರು ವ್ಯವಸ್ಥಾಪಕರಾಗಬಹುದು, ವ್ಯವಸ್ಥಾಪಕರ ಸಭೆ, ಆಹ್ವಾನ ಪತ್ರಿಕೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ವೇದಿಕೆ, ಪಟ್ಟಿ ಪತಾಕೆ, ವೇದಿಕೆಯ ಮೇಲಿನ ಆಸನ ವ್ಯವಸ್ಥೆ, ಸಭಿಕರ ಆಸನ ವ್ಯವಸ್ಥೆ, ಕಾರ್ಯಕ್ರಮ ಪಟ್ಟಿ, ಸಭಾ ಮರ್ಯಾದೆ, ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪ್ರಕ್ರಿಯೆ. 11. ಅಧ್ಯಾಯ ಹನ್ನೊಂದು ಸಭಿಕರು-ಸಭಿಕರಲ್ಲಿ ವೈವಿಧ್ಯತೆ, ಕೇಳುವ ಕಲೆ, ಕೇಳುವ ಪ್ರಕ್ರಿಯೆಯ ಅಂಶಗಳು, ಕೇಳುಗರು ಗಮನಿಸಬೇಕಾದ ಅಂಶಗಳು, ಟಿಪ್ಪಣಿ ಹೇಗೆ ಮಾಡಿಕೊಳ್ಳಬೇಕು, ಕೇಳುವುದರಿಂದ ಆಗುವ ಅನುಕೂಲಗಳು. 12. ಅಧ್ಯಾಯ ಹನ್ನೆರಡು ಶ್ರೇಷ್ಠ ಭಾಷಣಕಾರರ ಕೆಲವು ಮಾದರಿಗಳು. ಅನುಬಂಧಗಳು 1. ಆಕರ ಸಾಹಿತ್ಯ 2. ಶಬ್ದಕೋಶ ಮುನ್ನುಡಿ ಹಿರಿಯ ಸಾಹಿತಿಗಳು ಹಾಗೂ ವಾಗ್ಮಿ ಡಾ. ಸಿ.ಆರ್. ಗೋಪಾಲ್ ಅವರು ರಚಿಸಿದ ಭಾಷಣ ಕೈಪಿಡಿ ಒಂದು ಸಂಶೋಧನಾ ಗ್ರಂಥವಾಗಿದೆ. ಭಾಷಣ ಒಂದು ಕಲೆ ಎಂದು ಜಗತ್ತಿನಾದ್ಯಂತ ಪರಿಗಣನೆಗೆ ಒಳಗಾಗಿದೆ. ಮಾತನಾಡುವವರೆಲ್ಲ ಭಾಷಣಕಾರರಾಗಲು ಸಾಧ್ಯವಿಲ್ಲ. ಅದೇ ರೀತಿ ಉಪನ್ಯಾಸ ಮಾಡುವವರು ಭಾಷಣಕಾರರಲ್ಲ. ಏಕೆಂದರೆ ಉಪನ್ಯಾಸವೆಂಬುದು ತರಗತಿಯ ಮಿತಿಯಲ್ಲಿ ವಿಷಯದ ನಿರ್ದಿಷ್ಟತೆಯಲ್ಲಿ ಹೇಳುವ ಬೋಧನೆ. ಇದು ಶೈಕ್ಷಣಿಕ ಶಿಸ್ತಿನ ಬೋಧನೆ. ಆದರೆ ಭಾಷಣ ಹಾಗಲ್ಲ, ಅಲ್ಲಿ ಕಲಿಯುವ ಆಸಕ್ತಿಯ ವಿದ್ಯಾರ್ಥಿಗಳಿರುವುದಿಲ್ಲ. ಅದಕ್ಕೆ ಬದಲಾಗಿ ಕೇಳುವ ಕುತೂಹಲದ ಪ್ರೇಕ್ಷಕರಿರುತ್ತಾರೆ. ಜೊತೆಗೆ ಕೇಳುಗರೆಲ್ಲ ಒಂದೇ ಮನೋಧರ್ಮದವರಲ್ಲ, ಒಂದೇ ಮನಸ್ಥಿತಿಯವರೂ ಅಲ್ಲ. ಭಿನ್ನ ಭಿನ್ನ ಅಭಿರುಚಿಯ, ಭಿನ್ನ ಭಿನ್ನ ಆಸಕ್ತಿಗಳ, ಭಿನ್ನ ಸಮುದಾಯಗಳ ಗುಂಪುಗಳು ಅಲ್ಲಿರುತ್ತವೆ. ಹೀಗಾಗಿ ಭಾಷಣ ಆಯಾ ಭಾಷಣಕಾರನ / ಭಾಷಣಕಾರ್ತಿಯ ಕಲಾತ್ಮಕ ಮೆರುಗಿನಿಂದಾಗಿ ಅದು ಸ್ವೀಕಾರ ಅಥವಾ ನಿರಾಕರಣೆಗೆ ಒಳಗಾಗುತ್ತದೆ. ಭಾಷಣಕ್ಕೆ ಜನಸಾಮಾನ್ಯರು, ಪಂಡಿತರು, ಜ್ಞಾನಿಗಳು ಹೀಗೆ ಎಲ್ಲರೂ ಸಮಾವೇಶಗೊಂಡಿರುತ್ತಾರೆ. ಎಲ್ಲರಿಗೂ ನಿಲುಕುವ ನೆಲೆಯೊಳಗೆ ಪ್ರಿಯವಾಗುವ ನಿಟ್ಟಿನಲ್ಲಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಭಾಷಣಕಾರ / ಭಾಷಣಕಾರ್ತಿಗೆ ಮಾತು ಗೊತ್ತಿದ್ದರೆ ಸಾಲದು. ಮಾತನ್ನು ಆಕರ್ಷಣೀಯವಾಗಿ ಬಳಸುವುದರ ಜೊತೆಗೆ ಆಲೋಚನಾಪೂರ್ಣವಾಗಿ ಪ್ರಬುದ್ಧತೆಯಲ್ಲಿ ಬಳಸುವ ಪ್ರೌಢಿಮೆ ಇರಬೇಕಾಗುತ್ತದೆ. ವಿಚಾರವಿಲ್ಲದ ಯಾವುದೇ ಮಾತು ಜೊಳ್ಳಾಗುತ್ತದೆ. ವಿಚಾರ ತುಂಬಿದ್ದರೂ ಆಕರ್ಷಣೀಯ ನಿರೂಪಣೆ ಇಲ್ಲದ ಮಾತು ನೀರಸವಾಗುತ್ತದೆ. ಹೀಗಾಗಿ ಇವೆರಡನ್ನೂ ಸಮತೂಕದಲ್ಲಿ ಬಳಸುವ ಔಚಿತ್ಯ ಪ್ರಜ್ಞೆ ಭಾಷಣ ಮಾಡುವವರಿಗೆ ಇರಬೇಕಾಗುತ್ತದೆ. ಇದು ಕಲಾವಂತಿಕೆಯಿಂದ ಪ್ರಯೋಗವಾಗುವ ಮಾತುಗಾರಿಕೆ. ಹೀಗಾಗಿಯೇ ಭಾಷಣ ಶಬ್ದಾಡಂಬರವಲ್ಲ, ವಿಚಾರಗಳ ತುರುಕುವಿಕೆಯಲ್ಲ, ಅದೊಂದು ಸೃಜನಶೀಲ ಕಲೆ.
ಇಂತಹ ಭಾಷಣಕಲೆಯ ಕುರಿತು ಸಾಹಿತಿ ಚಿಂತಕರಾದ ಸಿ.ಆರ್. ಗೋಪಾಲ್ ಅವರು ತಮ್ಮ ಅನುಭವವನ್ನು ಒಟ್ಟಾಗಿ ಕ್ರೋಡೀಕರಿಸಿ, ಸಮಗ್ರ ಚಿಂತನೆ ನಡೆಸಿ ಈ ಕೃತಿಯನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಪ್ರಯೋಗವಾಗುವ ಭಾಷಣಕಲೆ ಬಗ್ಗೆ ಕೆಲವು ಸಾಮಾನ್ಯೀಕೃತಗೊಂಡ ಮೂಲಭೂತ ವಿಚಾರಗಳನ್ನು ಮೊದಲಿಗೆ ಪ್ರಸ್ತಾಪಿಸುತ್ತಾರೆ. ಆನಂತರದಲ್ಲಿ ಭಾಷಣದ ವಿಷಯ, ವಿಚಾರ, ವಿಭಾಗ ಇತ್ಯಾದಿ ಹಲವು ಬಗೆಗಳಲ್ಲಿ ಅದರ ಒಳ ಪ್ರಭೇದಗಳನ್ನು ವಿವರಿಸಿದ್ದಾರೆ. ಉದಾ:- ಭಾಷಣಕಾರರಲ್ಲಿ ಧರ್ಮಗುರುಗಳು, ರಾಜಕಾರಣಿಗಳು, ವೃತ್ತಿಭಾಷಣಕಾರರು, ಹವ್ಯಾಸಿ ಭಾಷಣಕಾರರು, ಸಮಾಜಸೇವಕರು ಹೀಗೆ ನಾನಾಬಗೆಯ ಭಾಷಣಕಾರರ ಪಟ್ಟಿಯನ್ನೇ ಕೊಟ್ಟಿದ್ದಾರೆ. ಜೊತೆಗೆ ಪ್ರತಿಯೊಬ್ಬರೂ ಆಡುವ ಮಾತುಗಳ ಹಿಂದಿನ ತಾತ್ವಿಕತೆ ಕುರಿತು ಸೂಕ್ಷ್ಮವಾಗಿ ವಿವರಿಸುತ್ತಾರೆ. ಒಂದು ರೀತಿಯಲ್ಲಿ ಅವರ ಈ ಸೂಕ್ಷ್ಮಗ್ರಹಿಕೆ ಅಚ್ಚರಿ ಹುಟ್ಟಿಸುವಷ್ಟು ವಿಪುಲವಾಗಿದೆ. ಹಾಗೆಯೇ ಭಾಷಣ ಮಾಡುವವರು ಎದುರುಗೊಳ್ಳುವ ಸಮುದಾಯಗಳ, ಗುಂಪುಗಳ ನಿರ್ದಿಷ್ಟತೆಯ ಬಗೆಗೂ ಇವರು ವಿವರಣಾಪೂರ್ಣವಾಗಿ ಮಾತನಾಡಿದ್ದಾರೆ. ಅವರ ಮನೋಧರ್ಮ, ಗ್ರಹಿಕೆಯ ಸಂಸ್ಕೃತಿ, ಆಸಕ್ತಿ-ಅನಾಸಕ್ತಿ, ಆಪ್ತತೆ ಮತ್ತು ಬದ್ಧತೆ ಈ ಎಲ್ಲವುಗಳ ಹಿನ್ನೆಲೆಯಲ್ಲಿ ಭಾಷಣಕಾರ / ಭಾಷಣಕಾರ್ತಿ ಮತ್ತು ಕೇಳುಗರ ಸಂವಹನ ಸ್ವೀಕರಣ ಸಾಧ್ಯತೆಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಜೊತೆಗೆ ಭಾಷಣ ಮಾಡುವವರು ಹೇಗೆ ಭಾಷಣ ಆರಂಭಿಸಬೇಕು ಎಂಬ ನಿರ್ದೇಶನಗಳನ್ನೂ ಕೊಟ್ಟಿದ್ದಾರೆ. ಯಾವುದೇ ವಿಚಾರವನ್ನು ಮಂಡಿಸುವ ಮುನ್ನ ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆ ಜೊತೆಗೆ ನಿರಂತರವಾಗಿ ಜ್ಞಾನಗ್ರಹಿಕೆಯ ಸಾಧ್ಯತೆಗಾಗಿ ಅಧ್ಯಯನಶೀಲರಾಗಬೇಕಾದ ಅಗತ್ಯತೆ ಕುರಿತು ವಿಸ್ತಾರವಾಗಿ ಮಂಡಿಸಿದ್ದಾರೆ. ಹಳ್ಳಿಗಾಡಿನ ರೈತ ಮುಖಂಡರ, ಚಳುವಳಿಗಾರರ, ರಾಜಕೀಯ ನಾಯಕರ, ಕಾರ್ಮಿಕ ನಾಯಕರ, ಧಾರ್ಮಿಕ ಗುರುಗಳ, ವ್ಯಕ್ತಿತ್ವ ವಿಕಸನದ ಬೋಧಕರ ಹೀಗೆ ಎಲ್ಲ ಬಗೆಯ ಭಾಷಣಕಾರ / ಭಾಷಣಕಾರ್ತಿಯರ ವ್ಯಕ್ತಿ ವಿಶಿಷ್ಟತೆಗಳನ್ನು ನಿರ್ದೇಶಿಸಿದಂತೆ ಇವರ ಬರೆಹವಿದೆ. ಹಾಗಾಗಿಯೇ ಇದು ಕೇವಲ ಭಾಷಣಕಲೆ ಕುರಿತ ಪಠ್ಯಪುಸ್ತಕ ಮಾದರಿಯ ಮಾರ್ಗದರ್ಶಿ (ಗೈಡ್) ಅಲ್ಲ. ಅದಕ್ಕಿಂತ ಭಿನ್ನವಾಗಿ ಭಾಷಣಕಾರರನ್ನು ರೂಪಿಸುವ ಒಂದು ಉಪಯುಕ್ತ ಬೋಧನಾ ಗ್ರಂಥವಾಗಿದೆ. ಕನ್ನಡದಲ್ಲಿ ಇದುವರೆಗೆ ಇಂತಹ ಸಮಗ್ರ ವಿವರಗಳನ್ನೊಳಗೊಂಡ ಭಾಷಣಕಲೆ ಕುರಿತ ಪುಸ್ತಕ ಪ್ರಕಟಗೊಂಡಿಲ್ಲ. ಕನ್ನಡ ಸಾರಸ್ವತಲೋಕಕ್ಕೆ ಇಂಥದೊಂದು ಅಪರೂಪದ ಅನನ್ಯ ಕೃತಿಯನ್ನು ಅರ್ಪಿಸುತ್ತಿರುವ ಡಾ. ಸಿ.ಆರ್. ಗೋಪಾಲ್ ಅವರಿಗೆ ಅಭಿನಂದನೆಗಳು. ಡಿ.ವಿ.ಜಿ.ಯವರ ಕಗ್ಗದ ಪದ್ಯಗಳು, ಸಂಸ್ಕೃತ ಸುಭಾಷಿತಗಳು ಪ್ರತಿ ಅಧ್ಯಾಯಕ್ಕೂ ಮೆರುಗು ನೀಡಿವೆ. ಕೊನೆಯ ಅಧ್ಯಾಯದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಗಾಂಧೀಜಿ, ಅನಕೃ, ಮಾಸ್ತಿ, ಬೇಂದ್ರೆ, ಶಿವರಾಮಕಾರಂತ, ಕುವೆಂಪು ಮುಂತಾದವರ ಮಾದರಿ ಭಾಷಣಗಳನ್ನೊಳಗೊಂಡ ಈ ಕೃತಿ ಭಾಷಣಕಲೆಯ ಕುರಿತಾದ ಮೇರುಕೃತಿ. ಡಾ. ವಸುಂಧರಾ ಭೂಪತಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|