ಲೇಖಕರು:
ಸಿ.ಎಚ್. ಹನುಮಂತರಾಯ ವಕೀಲರು
ನಾನು ಅದು ಹೇಗೆ ಬಿಜೆಪಿ ವಿರೋಧಿಯಾದೆನೋ ತಿಳಿಯದು. ಅದರಲ್ಲೂ ರಾಮಮಂದಿರ ನಿರ್ಮಾಣ, ಇಟ್ಟಿಗೆ ಪೂಜೆ, ಬಾಬ್ರಿ ಮಸೀದಿ ಧ್ವಂಸ ಇವೆಲ್ಲ ಸಂಗತಿಗಳು ಆ ಪಕ್ಷದ ಬಗ್ಗೆ ನನ್ನಲ್ಲಿರುವ ತಿರಸ್ಕಾರವನ್ನು ದ್ವಿಗುಣಗೊಳಿಸಿದವು. ಬಿ.ಜೆ.ಪಿ.ಯ ಟ್ರೇಡ್ ಯೂನಿಯನ್ ವಿರುದ್ಧದ ಅನೇಕ ಕ್ರಿಮಿನಲ್ ಪ್ರಕರಣದಲ್ಲಿ ನಾನು ಶ್ರಮಿಸಿದ್ದೆ. ಅದರ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿದ್ದೆ. ಆದರೆ ಅವರ ಇಟ್ಟಿಗೆ ಪೂಜೆ ಮಾತ್ರ ನನ್ನಲ್ಲಿ ಹೇಸಿಗೆ ಭಾವನೆಯನ್ನು ಹುಟ್ಟಿಸಿತು. ನನ್ನಲ್ಲಿ ಇಂಥ ಭಾವನೆಗಳು ಹುಟ್ಟುವುದಕ್ಕೆ ಲಂಕೇಶರ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆಯೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತೆ.
ನನಗೆ ತೀರಾ ಆಘಾತಕಾರಿಯಾಗಿ ಕಂಡ ವಿಷಯವೆಂದರೆ, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ನಡೆಸಿದ ರಾಮಮಂದಿರ ನಿರ್ಮಾಣ ಚಳವಳಿಗೆ ಡಾ. ಶಿವರಾಮ ಕಾರಂತರು ಬೆಂಬಲ ನೀಡಿದ್ದು. ವಿಎಚ್‍ಪಿಯವರು ರಾಮಮಂದಿರ ನಿರ್ಮಾಣದ ಸಂಬಂಧದಲ್ಲಿ ಸಹಿ ಸಂಗ್ರಹ ಮಾಡಿದಾಗ ಕಾರಂತರು ಸಹಿ ಮಾಡಿ ಮಂದಿರ ನಿರ್ಮಾಣವನ್ನು ಬೆಂಬಲಿಸಿದರು.
ಕಾರಂತರ ಬಗ್ಗೆ ನನ್ನಲ್ಲಿ ಭಕ್ತಿಪೂರ್ವಕ ಗೌರವ ಭಾವನೆಯಿತ್ತು. ಅವರು ತಮ್ಮನ್ನು ನಾಸ್ತಿಕ ಎಂದು ಬಿಂಬಿಸಿಕೊಂಡಿದ್ದರು. ತಮ್ಮ ಸೃಜನಶೀಲ ಸಾಹಿತ್ಯ, ನೇರ ನಡೆನುಡಿಗಳಿಂದ ಓದುಗರ ಮೇಲೆ ತಮ್ಮದೇ ಆದ ವಿಶಿಷ್ಟ ಛಾಪನ್ನು ಒತ್ತಿದ್ದರು. ಅವರ ಪ್ರಭಾವಕ್ಕೊಳಗಾಗಿದ್ದ ಓದುಗರಲ್ಲಿ ನಾನೂ ಒಬ್ಬನಾಗಿದ್ದೆ.
ಕಾರಂತರು ಸಂಘ ಪರಿವಾರದ ಪ್ರಣಾಳಿಕೆಯನ್ನು ಬೆಂಬಲಿಸಿದ್ದು ನೆಚ್ಚಿನ ನಾಯಕ ನಟ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಂತೆ ಭಾಸವಾಗಿತ್ತು. ಕಾರಂತರಂತೆಯೇ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರೂ ಸಹ ಸಂಘ ಪರಿವಾರದ ಸಿದ್ಧಾಂತಗಳನ್ನು ತಲೆಯ ಮೇಲೆ ಹೊತ್ತುಕೊಂಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಕಾರಂತರು ಮತ್ತು ಅಡಿಗರ ಈ ನಿಲುವುಗಳು ಅವರ ಸಾಹಿತ್ಯ ಕೃಷಿಯ ಬಂಜರು ಭಾಗಗಳಂತೆ ಕಾಣಿಸುತ್ತವೆ. ಆದರೆ ಲಂಕೇಶ್ ಅವರು ನಿಲುವನ್ನು ದಿಟ್ಟವಾಗಿ ‘ಪತ್ರಿಕೆ’ಯಲ್ಲಿ ಬರೆದರು. ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಎಂದು ಘೋಷಿಸಿದರು. ಸಂಘ ಪರಿವಾರದ ಕೊಳಕು ಪ್ರಣಾಳಿಕೆಯನ್ನು ಜಾಲಾಡಿ ಓದುಗರ ಮುಂದಿಟ್ಟರು. ಲಂಕೇಶರು ಇಂಥ ನಿಲುವುಗಳನ್ನು ತೆಗೆದುಕೊಳ್ಳಲು ಬೌದ್ಧಿಕ ಸರ್ಕಸ್ಸು ಮಾಡುತ್ತಿರಲಿಲ್ಲ. ಇವು ಮನಸ್ಸಿನ ಸಹಜ ಅನಿಸಿಕೆಯೆನ್ನುವಂತೆ ಅವರಿಂದ ಹೊಮ್ಮಿ ಬರುತ್ತಿದ್ದವು. ಇಂಥ ಜನಪರ ನಿಲುವುಗಳಿಂದಾಗಿ ಲಂಕೇಶರು ಭಿನ್ನರಾಗಿ ಕಾಣಿಸುತ್ತಾರೆ. ನಾನು ಕೋರ್ಟಿನಲ್ಲಿ ಬಿಡುವು ಸಿಕ್ಕಾಗ ಸಹೋದ್ಯೋಗಿಗಳೊಂದಿಗೆ ಕಾಫಿ ಹೀರುತ್ತ ಸಂಘ ಪರಿವಾರದವರ ಇಟ್ಟಿಗೆ ಯಾತ್ರೆಯನ್ನು ಲೇವಡಿ ಮಾಡುತ್ತ ಮಜಾ ತೆಗೆದುಕೊಳ್ಳುತ್ತಿದ್ದೆ. ಸಂಘ ಪರಿವಾರದ ಕೆಲವು ಲಾಯರ್ ಗಳು ನನ್ನನ್ನು ಬ್ರಾಹ್ಮಣ ವಿರೋಧಿ ಎಂದು ಬೆನ್ನ ಹಿಂದೆ ಕಿಚಾಯಿಸಲು ಶುರುಮಾಡಿದರು. ಆದರೆ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರೇ ಸ್ನೇಹಿತರಿದ್ದರು ಮತ್ತು ನನ್ನ ಹಿತೈಷಿಗಳಲ್ಲಿ ಅನೇಕ ಬ್ರಾಹ್ಮಣ ವಕೀಲರುಗಳು ಇದ್ದರು. ಸಂಘ ಪರಿವಾರವನ್ನು ವಿರೋಧಿಸಿದರೆ ಬ್ರಾಹ್ಮಣರನ್ನೇ ವಿರೋಧಿಸಿದಂತೆ ಎನ್ನುವ ವಾದ ಹೂಡುತ್ತಿದ್ದರು ಸಂಘ ಪರಿವಾರದ ಲಾಯರುಗಳು. ಒಂದು ದಿನ ಕೋರ್ಟ್‍ಗೆ ಬಂದಾಗ ನನಗೆ ಆಘಾತಕಾರೀ ಸುದ್ದಿಯೊಂದು ತಿಳಿಯಿತು. ವಕೀಲರ ಸಂಘದ ಸಭಾಭವನದಲ್ಲಿ ಇಟ್ಟಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಯಾರೋ ಬಂದು ಹೇಳಿದರು. ಅಂದಿನ ಕೋರ್ಟ್ ಕೇಸ್‍ಗಳ ಬಗ್ಗೆ ಮಾಡಿಕೊಂಡು ಬಂದಿದ್ದ ತಯಾರಿಗಳೆಲ್ಲ ನನ್ನ ತಲೆಯಿಂದ ಹಾರಿಹೋಗಿಬಿಟ್ಟವು. ಸಂಘ ಪರಿವಾರದ ಲಾಯರುಗಳ ನಡವಳಿಕೆ ಅತಿಯಾಯಿತು ಎನ್ನಿಸಿತು. ಆಗ ನನ್ನ ಜ್ಯೂನಿಯರ್ ಆಗಿದ್ದರು ನಾಚಪ್ಪ. ನಂತರ ಈತ ಕೊಡಗು ಪ್ರತ್ಯೇಕವಾಗಬೇಕು ಎನ್ನುವ ಚಳವಳಿಯನ್ನು ಆರಂಭಿಸಿದರು. ನಾಚಪ್ಪನನ್ನು ಕರೆದು, ‘ಇವರು ವಕೀಲರ ಸಂಘದಲ್ಲಿ ಇಟ್ಟಿಗೆ ಪೂಜೆ ಆಗುವುದನ್ನು ತಡೆಯಬೇಕು ನಾವೆಲ್ಲ ಸೇರಿ’ ಎಂದೆ. ನಾಚಪ್ಪನದು ಹೋರಾಟದ ಪ್ರವೃತ್ತಿ. ಕೂಡಲೇ ಯುವ ವಕೀಲರ ಗುಂಪನ್ನು ಸಂಘಟಿಸಿಕೊಂಡು ಬಂದ ನಾಚಪ್ಪ ಕ್ಯಾಂಟೀನ್ ನಿಂದ ಒಂದು ಗಡಿಗೆ ನೀರನ್ನೂ ತಂದ. ನಾವೆಲ್ಲ ಇಟ್ಟಿಗೆ ಪೂಜೆಯ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದೆವು. ಬಾಯಿ ಆರಿದಾಗ ಗಡಿಗೆಯಲ್ಲಿ ತಂದಿದ್ದ ನೀರನ್ನು ಕುಡಿದು ಗಂಟಲು ಸರಿಮಾಡಿಕೊಂಡು ಪುನಃ ಕೂಗುತ್ತಿದ್ದೆವು. ಒಬ್ಬ ಸನ್ಯಾಸಿಯನ್ನು ಇಟ್ಟಿಗೆ ಪೂಜೆಗಾಗಿ ಕರೆತರಲಾಗಿತ್ತು. ನಮ್ಮ ಈ ಗಲಾಟೆ ನೋಡಿದ ಆ ಸನ್ಯಾಸಿ ಅಲ್ಲಿಂದ ಓಟಕಿತ್ತ. ಅಂದು ನಾವು ಯಾವ ಕೇಸುಗಳನ್ನೂ ಅಟೆಂಡ್ ಮಾಡಲಿಲ್ಲ. ಸಂಜೆಯವರೆಗೆ ನಮ್ಮ ಪ್ರತಿಭಟನೆ. ಅದರಿಂದ ತಪ್ಪಿದ ಇಟ್ಟಿಗೆ ಪೂಜೆ, ಪಲಾಯನ ಮಾಡಿದ ಸನ್ಯಾಸಿಯ ಬಗ್ಗೆ ಹರಟೆ ಹೊಡೆದೆವು. ವಕೀಲರ ಸಂಘದಲ್ಲಿ ಇಟ್ಟಿಗೆ ಪೂಜೆ ನಡೆಸುವ ಯೋಜನೆ ರೂಪಿಸಿದವರಾರು ಎಂದು ಕೆದಕಿದೆವು. ಎಚ್.ಎಲ್. ನರಸಿಂಹಮೂರ್ತಿ ಎನ್ನುವ ವಕೀಲರು ಅದರ ಪ್ರಾಯೋಜಕರು ಎಂದು ತಿಳಿದುಬಂದಿತು. ಈ ನರಸಿಂಹಮೂರ್ತಿಗಳು ಕೆಲವು ಬಾರಿ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಹೀಗೆ ಇಟ್ಟಿಗೆ ಪೂಜೆ ಮೂಲಕ ಹಿಂದುತ್ವ ಪ್ರಜ್ಞೆಯನ್ನು ವಕೀಲರ ಮಧ್ಯೆ ಜಾಗೃತಗೊಳಿಸಿ ಅಧ್ಯಕ್ಷರಾಗಬಹುದು ಎನ್ನುವ ಉದ್ದೇಶ ಅವರದು ಎಂದು ಕೆಲವರು ಮಾತಾಡಿದರು. ಮತ್ತೆ ಕೆಲವರು ರಾಮನ ಇಟ್ಟಿಗೆಗಳು ಏನೆಲ್ಲ ಸ್ವಾರ್ಥಕ್ಕೆ ಬಳಕೆಯಾಗುತ್ತಿವೆ ನೋಡಿ ಎಂದು ಉದ್ಗಾರವೆಳೆದರು. ಕೆಲವು ಸೀನಿಯರ್ ಬ್ರಾಹ್ಮಣ ವಕೀಲರುಗಳು ನನ್ನ ಪ್ರತಿಭಟನೆಗಾಗಿ ಖಾಸಗಿಯಾಗಿ ಅಭಿನಂದಿಸಿದರು. ಇದೆಲ್ಲ ಆಗಿ ಕೆಲವು ದಿನಗಳ ನಂತರ ನಗರಕ್ಕೆ ಸಿಪಿಐ (ಎಂ) ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾಗಿದ್ದ ಇ.ಎಂ.ಎಸ್. ನಂಬೂದರಿಪಾದ್ ಬಂದರು. ಕಮ್ಯುನಿಸ್ಟ್ ಚಳವಳಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ವಕೀಲರುಗಳಾದ ಗೋಪಾಲಗೌಡ, ಎಚ್.ಎನ್. ನಾಗಮೋಹನ್ ದಾಸ್ ಮುಂತಾದವರು ಕೋಮು ಸೌಹಾರ್ದತೆಯ ಬಗ್ಗೆ ಇ.ಎಂ.ಎಸ್. ಅವರಿಂದ ವಕೀಲರ ಸಂಘದಲ್ಲಿ ಭಾಷಣ ಕಾರ್ಯಕ್ರಮ ಏರ್ಪಡಿಸೋಣ ಎಂದರು. ಅದಕ್ಕೆ ನಾನು ಮತ್ತು ಸಮಾನ ಮನಸ್ಕ ಗೆಳೆಯರು ಓಗೊಟ್ಟೆವು. ಇನ್ನೇನು ಇಎಂಎಸ್ ಭಾಷಣ ಆರಂಭಿಸುತ್ತಾರೆ ಎನ್ನುವಾಗ ಸಂಘ ಪರಿವಾರದ ಕೆಲವರು ವಕೀಲರು ‘ಅಂದು ನಮ್ಮ ಕಾರ್ಯಕ್ರಮಕ್ಕೆ ನೀವು ಅಡ್ಡಿಪಡಿಸಿದ್ದಿರಿ. ಇಂದು ನಾವು ಅಡ್ಡಿಪಡಿಸುತ್ತೇವೆ’ ಎಂದು ಗಲಾಟೆ ಆರಂಭಿಸಿದರು. ಈ ವಿವಾದದ ಹಿನ್ನೆಲೆ ತಿಳಿಯದಿದ್ದ ನಂಬೂದರಿಪಾದ್ ಅವರು ಏನು ಜಗಳ? ಎಂದು ಕೇಳಿದರು. ವಿಷಯ ತಿಳಿದ ಮೇಲೆ ಇಎಂಎಸ್ ಅವರು, ‘ಹಾಗಿದ್ದರೆ ನಾನು ಈ ಸಭಾಂಗಣದಲ್ಲಿ ಭಾಷಣ ಮಾಡುವುದಿಲ್ಲ. ಹೊರಗೆ ಮೈದಾನದಲ್ಲೇ ನಿಂತು ಮಾತಾಡುವೆ’ ಎಂದರು. ವಕೀಲರ ಸಂಘದ ಕಟ್ಟಡದ ಪಕ್ಕದಲ್ಲಿದ್ದ ಜಿಲ್ಲಾಧಿಕಾರಿಗಳ ಹಳೆಯ ಕಟ್ಟಡದ ಕೆಳಭಾಗದ ಕಾರಿಡಾರ್‍ನಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಹತ್ತಾರು ಕತ್ತೆಗಳು ನಿಲ್ಲುತ್ತಿದ್ದವು. ಆ ದಿನ ನಾವೆಲ್ಲಾ ಆ ಕತ್ತೆಗಳನ್ನು ಹೊರಗೆ ದಬ್ಬಿ ಜಾಗ ಸ್ವಚ್ಛಗೊಳಿಸಿ ನಂಬೂದರಿಪಾದ್ ರವರು ಅಲ್ಲಿ ನಿಂತು ಮಾತಾಡುವಂತೆ ಏರ್ಪಾಡು ಮಾಡಿದೆವು. ನಾವೆಲ್ಲಾ ಬಿಸಿಲಿನಲ್ಲೇ ನಿಂತು ಅವರ ಭಾಷಣ ಕೇಳಿದೆವು. ಸಭಾಂಗಣದಲ್ಲಾಗಿದ್ದರೆ ಕೇವಲ ವಕೀಲರುಗಳು ಮಾತ್ರ ಭಾಷಣ ಕೇಳುತ್ತಿದ್ದರು. ಜಿಲ್ಲಾಧಿಕಾರಿಗಳ ಕಟ್ಟಡದ ಹೊರಗಿನ ಸ್ಥಳದಲ್ಲಿ ಭಾಷಣ ಕಾರ್ಯಕ್ರಮ ನಡೆದದ್ದರಿಂದ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರೂ, ಕೇಸುಗಳಿಗಾಗಿ ಬಂದಿದ್ದ ಕಕ್ಷಿದಾರರೂ ಇಎಂಎಸ್ ಅವರ ಭಾಷಣ ಕೇಳಿದರು. ಆ ಕಾರ್ಯಕ್ರಮ ಅದ್ಭುತವಾಗಿ ಯಶಸ್ವಿಯಾಯಿತು. ನಮ್ಮ ಕೆಲವು ಯುವ ಲಾಯರ್‍ಗಳು ಸಂಘ ಪರಿವಾರದ ಲಾಯರ್ ಗಳಿಗೆ ಇಎಂಎಸ್ ನಂಬೂದರಿಪಾದ್ ಬ್ರಾಹ್ಮಣ ಎನ್ನುವುದು ನಿಮಗೆ ಗೊತ್ತಾ ಎಂದು ಕಿಚಾಯಿಸಿದರು. ಆ ವಕೀಲರ ಸಂಘಕ್ಕೆ ಎ.ಎನ್. ಜಯರಾಮ್ ಅಧ್ಯಕ್ಷರಾಗಿದ್ದರು. ಈಗ ಇವರು ಅಡ್ವೊಕೇಟ್ ಜನರಲ್ ಆಗಿದ್ದಾರೆ. ಡಿ.ಎಲ್. ಜಗದೀಶ್ ಸೆಕ್ರೆಟರಿಯಾಗಿದ್ದರು. ಈಗ ಇವರು ಎಂಎಲ್‍ಸಿ ಆಗಿದ್ದಾರೆ. ಇಎಂಎಸ್ ಅಂದಿನ ತಮ್ಮ ಭಾಷಣದಲ್ಲಿ ಇಟ್ಟಿಗೆ ಪೂಜೆ ಹೇಗೆ ದೇಶದ್ರೋಹಿ, ಸಮಾಜದ್ರೋಹಿ ಕೆಲಸವಾಗುತ್ತದೆಂದು ಒಂದೂವರೆ ಗಂಟೆ ಕಾಲ ಸವಿಸ್ತಾರವಾಗಿ ವಿವರಿಸಿದರು.
Follow Niruta Publications WhatsApp Channel for more updates by clicking the below link:
https://www.whatsapp.com/channel/0029Va9e9FJ7z4kZ46EkYR43
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |