Niruta Publications
  • Home
  • About Us
  • Publication With Us
  • Editor's Blog
  • Niruta's Read & Write Initiative
  • Our Services
    • Translation & Typing
    • Publications >
      • Our Books
    • Human Resource
    • PoSH
    • NGO & CSR
    • Certificate Training Courses
  • Leaders Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Publication With Us
  • Editor's Blog
  • Niruta's Read & Write Initiative
  • Our Services
    • Translation & Typing
    • Publications >
      • Our Books
    • Human Resource
    • PoSH
    • NGO & CSR
    • Certificate Training Courses
  • Leaders Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಸಮಾಜಶಾಸ್ತ್ರದ ಕಿರು ವಿಶ್ವಕೋಶ

7/21/2017

1 Comment

 
Picture
ಚ.ನ. ಶಂಕರ್‍ರಾವ್‍, ಪು. 1034, ಬೆಲೆ : 325, ಜೈ ಭಾರತ್‍ ಪ್ರಕಾಶನ
ಆದರಣೀಯ ಓದುಗ ಮಿತ್ರರೆ,
ಕರ್ನಾಟಕದ ಸಹಸ್ರಾರು ಮಂದಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಇತರ ಸಾಮಾನ್ಯ ಆಸಕ್ತ ಓದುಗರು ಹಲವಾರು ವರ್ಷಗಳಿಂದಲೂ ನಿರೀಕ್ಷಿಸುತ್ತಾ ಬಂದಿರುವ “ಸಮಾಜಶಾಸ್ತ್ರದ ಪದಕೋಶ’’ವೊಂದು ಕೇವಲ “ಪದಕೋಶ” ಮಾತ್ರವಾಗಿಯಲ್ಲದೆ “ಸಮಾಜಶಾಸ್ತ್ರದ ಕಿರು ವಿಶ್ವಕೋಶ”ದ ರೂಪದಲ್ಲಿ ಇದೀಗ ಕನ್ನಡ ಭಾಷೆಯಲ್ಲಿ ಪ್ರಪ್ರಥಮವಾಗಿ ಹೊರಬರುತ್ತಿರುವುದು ನನಗೆ ಅತೀವವಾದ ಸಂತೋಷವನ್ನುಂಟು ಮಾಡಿದೆ. ಈ ನನ್ನ ಸಂತಸವನ್ನು ನನ್ನ ಎಲ್ಲಾ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ಈ ಪುಸ್ತಕವನ್ನು ಅವರ ಕೈಯಲ್ಲಿರಿಸಿ ಇದರ ಉದ್ದೇಶ ಸಾಫಲ್ಯಕ್ಕೆ ನೆರವಾಗಬೇಕೆಂದು ಕೋರುವೆನು.
ಸುಮಾರು 1000 ಮುದ್ರಿತ ಪುಟಗಳೊಂದಿಗೆ, 1806ರಷ್ಟು ಪದಗಳ/ಪರಿಕಲ್ಪನೆಗಳ ಅರ್ಥ ವಿವರಣೆಯನ್ನು, 228 ಮಂದಿ ಸಮಾಜ ಚಿಂತಕರ/ಸಮಾಜಶಾಸ್ತ್ರಜ್ಞರ ಪರಿಚಯವನ್ನು ನೀಡುವ, ಜೊತೆಗೆ ಅವರಲ್ಲಿ 107 ಮಂದಿ ಚಿಂತಕರ ಅಪರೂಪವಾದ ಛಾಯಾಚಿತ್ರಗಳನ್ನು ಒಳಗೊಂಡಿರುವ ಈ ಪುಸ್ತಕವು ನಮ್ಮ ಓದುಗರಿಗೆ ಬಹಳಷ್ಟು ತೃಪ್ತಿಯನ್ನು ತರಬಹುದೆಂದು ಆಶಿಸಲಾಗಿದೆ.

ಈ ಪುಸ್ತಕವು ಈ ರೂಪದಲ್ಲಿ ಮೂಡಿಬಂದಿರುವ ಹಿನ್ನೆಲೆಯ ಬಗ್ಗೆ ಪ್ರಸ್ತಾಪಿಸುವುದು ಇಲ್ಲಿ ಅಪ್ರಸ್ತುತವೆನ್ನಿಸದು.

ಯಾವುದೇ ಶಾಸ್ತ್ರ ಅಥವಾ ಸ್ಥಾಪಿತ ವಿಜ್ಞಾನದಲ್ಲಾದರೂ ಕೂಡ ಅದರ ಅಧ್ಯಯನಕ್ಕೆ ಸಂಬಂಧಿಸಿದ ಪ್ರಮುಖ ಪದಗಳ, ಪರಿಕಲ್ಪನೆಗಳ ಹಾಗೂ ಪಾರಿಭಾಷಿಕ ಪದಗಳ ಕುರಿತಾದ ಅರ್ಥ ವಿವರಣೆಯನ್ನು ಹೊಂದಿರುವ “ಪದಕೋಶ” ಅಥವಾ “ಶಬ್ದಕೋಶ” ಎಂಬುದಿರುವುದು. ಅಂತಹ ಪದಕೋಶವು ಆ ವಿಜ್ಞಾನದ ವಿಶಿಷ್ಟ ಭಂಡಾರವಾಗಿಯೂ ಇರುತ್ತದೆ. ಸಮಾಜ ವಿಜ್ಞಾನಗಳಲ್ಲಿ ನವೋದಿತ ವಿಜ್ಞಾನವಾಗಿರುವ “ಸಮಾಜಶಾಸ್ತ್ರ”ದಲ್ಲಿಯೂ ಕೂಡ ಹಲವಾರು ದಶಕಗಳ ಹಿಂದೆಯೇ ಅಂತಹ “ಶಬ್ದಕೋಶ”ವು ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿತ್ತು. ಈಗ ಅಂತಹ ಹಲವಾರು ಪದಕೋಶಗಳು ಲಭ್ಯವಿವೆ. ಆದರೆ ಈ ಯಾವುದೇ ಪದಕೋಶವೂ ಕೂಡ ತಾನು ಒಳಗೊಂಡಿರುವ ಪದಗಳ ಬಗ್ಗೆ ತೃಪ್ತಿಕರವಾದ ಅರ್ಥ ನೀಡುವುದರಲ್ಲಿ ಪೂರ್ಣವಾಗಿ ಯಶಸ್ವಿಯಾಗಿದೆ ಎನ್ನುವಂತಿಲ್ಲ. ಕ್ರಿಶ. 2000ದಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಾಶಿತವಾದ ಅಲ್ಲನ್ ಜಿ. ಜಾನ್ಸನ್‍ರವರ “ದಿ ಬ್ಲಾಕ್‍ವೆಲ್ ಡಿಕ್ಷನರಿ ಆಫ್ ಸೋಶಿಯಾಲಜಿ” ಎಂಬ ಪದಕೋಶದಲ್ಲಿಯೂ ಲೇಖಕರು “ಇಂತಹ ಪ್ರಯತ್ನ ಕಷ್ಟಸಾಧ್ಯ”ವಾದುದೆಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರುವುದಾದರೆ ಯಾವುದಾದರೂ ಹಂತದಲ್ಲಿ ಇಂತಹ ಪದಕೋಶಗಳು ಹೆಚ್ಚು ನಿಖರತೆಯತ್ತ ಸಾಗುವುದು ಸಾಧ್ಯ ಎಂಬ ಅಂಶವನ್ನು ಮಾತ್ರ ಅವಗಣಿಸಲಾಗದು.

ಸಮಾಜಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಆಕರ ಗ್ರಂಥಗಳು ಆಂಗ್ಲ ಭಾಷೆಯಲ್ಲಿರುವುದಾದರೂ ಅಂತಹ ಆಂಗ್ಲ ಭಾಷೆಯಲ್ಲಿಯೇ ಬಹಳ ಸಂತೃಪ್ತಿದಾಯಕವಾದ ಪದಕೋಶವೊಂದನ್ನು ಸಿದ್ಧಪಡಿಸಲು ಕಠಿಣವೆನಿಸುತ್ತಿರುವಾಗ ಸಮಾಜಶಾಸ್ತ್ರದ ಉತ್ತಮ ಗ್ರಂಥಗಳು ಬೆರಳೆಣಿಕೆಯಷ್ಟು ಮಾತ್ರವಿರುವ ಕನ್ನಡ ಭಾಷೆಯಲ್ಲಿ ಅಂತಹ ಪದಕೋಶವನ್ನು ಸಿದ್ಧಪಡಿಸುವ ಕಾರ್ಯದ ಸಮಸ್ಯೆಯನ್ನು ಊಹಿಸಿಕೊಳ್ಳಬಹುದಾಗಿದೆ. ಕನ್ನಡದ ವಿಷಯದಲ್ಲಿ ವಾಸ್ತವಿಕವಾಗಿ ಹೇಳುವುದಾದರೆ, ಸಮಸ್ಯೆಯ ಜಟಿಲತೆಗಿಂತಲೂ ಹೆಚ್ಚಾಗಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಗಂಭೀರ ಪ್ರಯತ್ನದ ಕೊರತೆಯಿಂದಾಗಿಯೇ ಈವರೆಗೂ ಉತ್ತಮ ಪದಕೋಶವೊಂದನ್ನು ಹೊರತರಲು ಸಾಧ್ಯವಾಗಿಲ್ಲ ಎನ್ನಬಹುದು.

ಸಮಾಜಶಾಸ್ತ್ರದ ಅಧ್ಯಾಪಕರುಗಳು ಪಬ್ಲಿಕ್ ಪರೀಕ್ಷೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಹಾಗೂ “ಕರ್ನಾಟಕ ಸಮಾಜಶಾಸ್ತ್ರ ಸಮ್ಮೇಳನ”ಗಳಲ್ಲಿ ಒಟ್ಟು ಸೇರಿದಾಗ ಕನ್ನಡ ಭಾಷೆಯ್ಲಿ “ಸಮಾಜಶಾಸ್ತ್ರ ಪದಕೋಶ”ವೊಂದನ್ನು ಚಿಸಬೇಕಾದ ಅಗತ್ಯವೊಂದಿದೆ ಎಂಬುದಾಗಿ ಹೇಳಿಕೊಳ್ಳುತ್ತಾ ಬಂದಿರುವುದನ್ನು ಬಿಟ್ಟರೆ ಈ ದಿಕ್ಕಿನಲ್ಲಿ ಬಹಳ ಗಂಭೀರ ಪ್ರಯತ್ನಗಳು ನಡೆದಂತಿಲ್ಲ. “ಕುವೆಂಪು ವಿಶ್ವವಿದ್ಯಾಲಯ”ದ ವತಿಯಿಂದ “ಸಮಾಜಶಾಸ್ತ್ರ ಪದಕೋಶ”ಕ್ಕೆ ಸಂಬಂಧಿಸಿದ ಕಮ್ಮಟವೊಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಒಮ್ಮೆ ನಡೆದಿದ್ದರೂ ಆ ಪ್ರಯತ್ನ ಅಲ್ಲಿಗೇ ನಿಂತಂತಿದೆ. ಧಾರವಾಡದ ಹಿರಿಯ ಸಮಾಜಶಾಸ್ತ್ರಜ್ಞ ಶ್ರೀ ಹೆಚ್.ವಿ. ನಾಗೇಶ್‍ರವರು ತಿಳಿಸಿದ್ದಂತೆ ಅಲ್ಲಿಯೂ ಅಂತಹ ಪ್ರಯತ್ನವೊಂದು ನಡೆದು ಅರ್ಧಕ್ಕೆ ನಿಂತುಹೋಗಿರಬೇಕು. “ಹಂಪಿ ಕನ್ನಡ ವಿಶ್ವವಿದ್ಯಾಲಯ”ದ ವತಿಯಿಂದ ಸಮಾಜವಿಜ್ಞಾನಗಳಿಗೆ ಸಂಬಂಧಿಸಿದಂತೆ ಸಮಗ್ರ ರೂಪದ ಪದಕೋಶವೊಂದನ್ನು ಹೊರತರುವ ಕಾರ್ಯವು ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ. ಈ ಪ್ರಯತ್ನಗಳ ಮುಂದುವರಿದ ಭಾಗವೆಂಬಂತೆ ಪದಕೋಶದ ರಚನೆಯ ಉದ್ದೇಶವನ್ನು ಸಾಧಿಸುವ ನನ್ನ ಪರಿಶ್ರಮದ ಫಲವಾಗಿ ಈ ಪುಸ್ತಕ “ಕಿರು ವಿಶ್ವಕೋಶ”ದ ರೂಪದಲ್ಲಿ ಹೊರಹೊಮ್ಮಿದೆ ಎಂದು ಹೇಳಬಯಸುವೆನು.
​

ಕನ್ನಡ ಭಾಷೆಯಲ್ಲಿ “ಸಮಾಜಶಾಸ್ತ್ರದ ಪದಕೋಶ” ರಚನೆಯ ನನ್ನ ಕಾರ್ಯವನ್ನು 1999ರ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿ ಬರವಣಿಗೆಯನ್ನು ಮುಂದುವರಿಸುತ್ತಾ ಹೋದಂತೆ ಆಂಗ್ಲ ಭಾಷೆಯಲ್ಲಿರುವ ಸಮಾಜಶಾಸ್ತ್ರೀಯ ಪದಗಳ/ಪರಿಕಲ್ಪನೆಗಳ ಕುರಿತು ಕೇವಲ ಕನ್ನಡ ಅರ್ಥವನ್ನು ನೀಡುವುದಕ್ಕೆ ಅಥವಾ ಅವುಗಳಿಗೆ ತತ್ಸಮಾನವಾದ ಕನ್ನಡ ಪದಗಳನ್ನು ಕಂಡುಕೊಳ್ಳುವುದಕ್ಕಷ್ಟೇ ನನ್ನ ಪ್ರಯತ್ನವನ್ನು ಸೀಮಿತಗೊಳಿಸದೆ ಜೊತೆಗೆ ಒಂದಿಷ್ಟು ಸಂಕ್ಷಿಪ್ತವಾದ ವಿವರಣೆಯನ್ನು ನೀಡುವ ನಿರ್ಧಾರ ಮಾಡಿದೆ. ಈ ಬಗ್ಗೆ ಹಲವರ ಸಲಹೆ/ಅಭಿಪ್ರಾಯಗಳನ್ನು ಪಡೆದು ಹಾಗೆ ಮಾಡುವುದೇ ಸೂಕ್ತವೆಂದು ನನ್ನ ಕಾರ್ಯವನ್ನು ಮುಂದುವರಿಸಿದೆ. ಶ್ರೀಯುತ ಹೆಚ್.ವಿ. ನಾಗೇಶ್‍ರವರು ನನ್ನ ಈ ಪ್ರಯತ್ನದ ವಿವರಗಳನ್ನು ಕೇಳಿ ತಿಳಿದುಕೊಂಡು ಈ ಪುಸ್ತಕವನ್ನು ಕೇವಲ “ಪದಕೋಶ” ಎನ್ನುವುದರ ಬದಲು “ಕಿರು ವಿಶ್ವಕೋಶ” ಎಂದು ಕರೆಯುವುದೇ ಸೂಕ್ತವೆಂದು ನೀಡಿದ ಸಲಹೆ ನನಗೆ ಬಹಳ ಹಿಡಿಸಿತು. ಅಂತೆಯೇ ಈ ಪುಸ್ತಕವನ್ನು “ಸಮಾಜಶಾಸ್ತ್ರದ ಕಿರು ವಿಶ್ವಕೋಶ” ಎಂದು ಹೆಸರಿಸಲಾಗಿದೆ. ಈ ಪುಸ್ತಕವನ್ನು “ಕಿರು ವಿಶ್ವಕೋಶ”ವೆಂದು ಹೆಸರಿಸಿದ್ದರ ಔಚಿತ್ಯದ ಕುರಿತು ಚರ್ಚೆ ಬೇಡವೆಂದು ಈ ವಿವರ ನೀಡುತ್ತಿರುವೆನು. “ಕಿರು ವಿಶ್ವಕೋಶ”ವೆಂಬ ಹೆಸರಿಗೆ ಅರ್ಹವಾದ ಕೆಲವು ಲಕ್ಷಣಗಳಾದರೂ ಈ ಪುಸ್ತಕದಲ್ಲಿವೆ ಎನ್ನಬಹುದಾದರೆ ಈ ಪುಸ್ತಕಕ್ಕೆ ಇರಿಸಿದ ಹೆಸರು ಸಾರ್ಥಕವಾದಂತೆ.

ಈ ಪುಸ್ತಕದ ಹೆಸರನ್ನು “ಸಮಾಜಶಾಸ್ತ್ರದ ಕಿರು ವಿಶ್ವಕೋಶ” ಎಂಬುದಾಗಿ ಇರಿಸಿದ ಮಾತ್ರಕ್ಕೆ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ತ ವಸ್ತು/ವಿಷಯಗಳೂ ಇದರಲ್ಲಿ ನಿಶ್ಚಿತವಾಗಿಯೂ ಅಡಕವಾಗಿವೆ ಎಂದು ಭಾವಿಸಲಾಗದು. ಅಂತಹ ಉದ್ದೇಶ ನನಗೆ ಇದ್ದಿರಲೂ ಇಲ್ಲ. ಪುಸ್ತಕವನ್ನು ಓದುತ್ತಾ ಹೋಗುವ ಓದುಗರು ಇದರಲ್ಲಿ ಅಳವಡಿಸದೇ ಇರುವ ಹಲವಾರು ಪದಗಳ ಹಾಗೂ ಚಿಂತಕರ ಪಟ್ಟಿಯನ್ನು ಬೆಳೆಸುತ್ತಾ ಹೋಗಿ ಸ್ವಲ್ಪ ಮಟ್ಟಿಗೆ ನಿರಾಶೆಗೊಳ್ಳಲೂಬಹುದು. ಭಾರತೀಯ ಸಂದರ್ಭಗಳಿಗೆ ತಕ್ಕುದಾದ ಹಲವಾರು ಪದಗಳ ಹಾಗೂ ಭಾರತೀಯ ಚಿಂತಕ ಬಗೆಗಿನ ಉಲ್ಲೇಖ ಕಡಿಮೆಯಾಯಿತು ಎಂಬ ಭಾವನೆ ನನ್ನ ಮನಸ್ಸಿನಲ್ಲಿಯೂ ಇದೆ. ಅದೇನೇ ಇದ್ದರೂ, ವಿಶ್ವಕೋಶ ರಚನೆಯ “ಆರಂಭಿಕ ಯತ್ನ”ವೆಂಬ ವಿನಾಯಿತಿಯಂತೂ ಈ ಪುಸ್ತಕಕ್ಕೆ ಇದ್ದೇ ಇರುತ್ತದೆ. ಆದಾಗ್ಯೂ ಅಂತಹ ಕೊರತೆಯನ್ನು ಸೂಕ್ತ ಸಲಹೆಯೊಡನೆ ನನ್ನ ಗಮನಕ್ಕೆ ಅವಶ್ಯವಾಗಿ ತರಬೇಕೆಂಬುದು ನನ್ನ ವಿಶೇಷ ವಿನಂತಿ.

ಈ ಪುಸ್ತಕದ ಉದ್ದೇಶ ಹಾಗೂ ವಿಶೇಷ ಲಕ್ಷಣಗಳ ಕುರಿತು, ಅದನ್ನು ಬಳಸಬೇಕಾದ ಕ್ರಮದ ಬಗ್ಗೆ ವಿವರ ನೀಡಲು ಹಾಗೂ ಈ ಪುಸ್ತಕ ರಚನೆಯಲ್ಲಿ ನನಗೆ ನೆರವು ನೀಡಿದ ಎಲ್ಲಾ ವ್ಯಕ್ತಿಗಳ, ಸಂಸ್ಥೆಗಳ ಹಾಗೂ ಇನ್ನಿತರ ಮೂಲಗಳ ಬಗ್ಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಪುಸ್ತಕದ ಆರಂಭಿಕ ಪುಟಗಳಲ್ಲಿ ಪ್ರತ್ಯೇಕವಾಗಿ ಬರೆದಿರುತ್ತೇನೆ. ಈ ಪ್ರಯತ್ನದ ಯಶಸ್ಸು ಹಾಗೂ ಸಾರ್ಥಕತೆ ನಮ್ಮ ಓದುಗರ ಪ್ರೋತ್ಸಾಹವನ್ನು ಅವಲಂಬಿಸಿದೆ ಎನ್ನಬಹುದು.

ಸಮಾಜಶಾಸ್ತ್ರದ ಅಧ್ಯಾಪಕರಲ್ಲಿ ಹಾಗೂ ಕಾಲೇಜು ಗ್ರಂಥಪಾಲಕರಲ್ಲಿ ಒಂದು ವಿನಮ್ರ ವಿನಂತಿ. ಸಮಾಜಶಾಸ್ತ್ರದಂತಹ ನವೋದಿತ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳು ತೀರಾ ಅಪರೂಪವಾಗಿರುವಾಗ, ಅಂತಹ ಪ್ರಯತ್ನವನ್ನು ಮಾಡಿದವರಿಗೆ ದಯಮಾಡಿ ಸೂಕ್ತ ಪ್ರೋತ್ಸಾಹ ನೀಡಿ ಬೆಂಬಲಿಸಿರಿ. ವಿ.ವಿ.ಗಳ ಪಠ್ಯಕ್ರಮದ ಆಧಾರದಲ್ಲಿ ಬರೆದ ಪುಸ್ತಕಗಳಿಗೆ ಮಾತ್ರ ಕಾಲೇಜು ಗ್ರಂಥಾಲಯಗಳು ಪ್ರೋತ್ಸಾಹ ನೀಡುವುದಾದರೆ ಈ ಪುಸ್ತಕದಂತಹ ಆಕರ ಗ್ರಂಥವನ್ನು ರಚಿಸುವ “ವ್ಯರ್ಥ ಪರಿಶ್ರಮ”ಕ್ಕೆ ಯಾರೂ ತೊಡಗಲಾರರು. ಸರ್ಕಾರದ ಕಡೆಯಿಂದ ಎಂತಹ ಪ್ರಯತ್ನಗಳಿಗೆ ಆರ್ಥಿಕ ಸಹಾಯ ಲಭ್ಯವಿಲ್ಲದೇ ಇರುವುದರಿಂದ ತಮ್ಮ ಕಡೆಯಿಂದಲಾದರೂ ಸೂಕ್ತ ನೆರವು ಪ್ರೋತ್ಸಾಹದ ರೂಪದಲ್ಲಿ ಸಿಗುವುದೆಂಬ ಭರವಸೆ ನನ್ನದು.

ಈ ಪುಸ್ತಕದ ರಚನೆಯಲ್ಲಿ ಸಹಾಯ ನೀಡಿದ ಎಲ್ಲರನ್ನೂ ಹಾಗೂ ಎಲ್ಲಾ ಸಂಸ್ಥೆಗಳನ್ನು ಕೃತಜ್ಞತೆಯಿದ ಇನ್ನೊಮ್ಮೆ ಸ್ಮರಿಸುವೆನು. ಪುಸ್ತಕವನ್ನು ತರಿಸಿಕೊಂಡು ನೋಡಿದ ಮೇಲೆ ತಮಗೆ ಸೂಕ್ತ ಕಂಡ ಸಲಹೆಗಳನ್ನು ನೀಡಿ ತಾವು ಗುರುತಿಸಿದ ದೋಷ ಇಲ್ಲವೇ ಕೊರತೆಗಳನ್ನು ತಿಳಿಯಪಡಿಸಿ ಈ ಪುಸ್ತಕವು ಮರುಮುದ್ರಣ ಕಾಣುವುದಾದರೆ, ಆ ಸಂದರ್ಭದಲ್ಲಿ ಅದನ್ನು ಉತ್ತಮಗಳಿಸಲು ಸಹಾಯಕರಾಗಬೇಕೆಂದು ಪ್ರಾರ್ಥಿಸುವೆನು.
 
ಚ.ನ. ಶಂಕರ್‍ರಾವ್
ಮಂಗಳೂರು 

26-10-2001
1 Comment
SURESH link
7/2/2018 09:36:47 am

Suresh Basappa pasahalli

Reply



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Social Work Foot Prints

    Categories

    All
    ಸಮಾಜಕಾರ್ಯ


    List Your Product on Our Website 

    Picture
    Niruta Catalogue 2021
    File Size: 5822 kb
    File Type: pdf
    Download File


    RSS Feed


SITE MAP


Site

  • HOME
  • ABOUT US
  • EDITOR'S BLOG
  • BLOG
  • ONLINE STORE
  • VIDEOS
  • TRANSLATION & TYPING

TRAINING

  • TRAINING PROGRAMMES
  • CERTIFICATE TRAINING COURSES

NGO & CSR

  • POSH
  • CSR

Human Resource

  • MHR LEARNING ACADEMY
  • RECRUITMENT SERVICES
  • DOMESTIC ENQUIRY
  • TRADEMARK
  • CONSULTING

JOB

  • FIND FREELANCE JOBS
  • CURRENT JOB OPENINGS

OUR OTHER WEBSITES

  • WWW.MHRSPL.COM
  • WWW.NIRATANKA.ORG
  • WWW.HRKANCON.COM

Subscribe


Subscribe to Newsletter


JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com