ವಾರಾಣಸಿಯಲ್ಲಿ ನಡೆಯುವ ಈ ಕಥನ ವಿಧವೆಯರ ಬದುಕಿನ ದಾರುಣತೆಯನ್ನೂ, ಅವರ ಮೇಲೆ ಶಾಸ್ತ್ರಗಳ ಸಂಕೋಲೆಗಳ ಹಿಂದೆ ನಡೆಯುವ ಶೋಷಣೆಯನ್ನು ದಿಟ್ಟವಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.
ಅವಳು ವಿಧವೆ. ಅವನಿಗೆ ಅವಳ ಶ್ವೇತವಸ್ತ್ರಕ್ಕಿಂತ ಮನಸ್ಸಿನ ಬಣ್ಣಗಳೇ ಕಾಣುತ್ತಿವೆ. ಗಂಗೆಯ ದಡದ ನಡುರಾತ್ರಿಯದು. ಅವನು ಹೇಳುತ್ತಾನೆ. ‘ಸಮಯ ಬದಲಾಗುತ್ತಿದೆ. ಹಳೆಯ ಪರಂಪರೆ, ಮೂಢನಂಬಿಕೆಗಳು ಎಲ್ಲವೂ ನಾಶವಾಗುತ್ತಿವೆ’ ‘ಇಡೀ ಪರಂಪರೆಯೇ ನಾಶವಾಗಬೇಕೇ? ಅದರಲ್ಲಿ ಒಳ್ಳೆಯ ಅಂಶಗಳೂ ಇವೆಯಲ್ಲ, ಅವನ್ನಾದರೂ ಉಳಿಸಿ ಕೊಳ್ಳಬೇಕಲ್ಲವೇ?’ ಹೀಗೆ ಪರಂಪರೆಯ ಕ್ರೌರ್ಯ ಮತ್ತು ಅದರಿಂದ ಬಿಡುಗಡೆಗೊಳ್ಳುವ ದಾರಿಯಲ್ಲಿನ ಅಡೆತಡೆಗಳನ್ನು ತೋರಿಸುವ ಸಿನಿಮಾ ದೀಪಾ ಮೆಹ್ತಾ ಅವರ ‘ವಾಟರ್’. ದೀಪಾ ಮೆಹ್ತಾ ಅವರ ತ್ರಿವಳಿ ಸಿನಿಮಾಗಳ ಮೂರನೇ ಸಿನಿಮಾ ಇದು (ಮತ್ತೆರಡು ‘ಅರ್ಥ್’ ಮತ್ತು ‘ಫೈರ್’). ವಾರಾಣಸಿಯಲ್ಲಿ ನಡೆಯುವ ಈ ಕಥನ ವಿಧವೆಯರ ಬದುಕಿನ ದಾರುಣತೆಯನ್ನೂ, ಅವರ ಮೇಲೆ ಶಾಸ್ತ್ರಗಳ ಸಂಕೋಲೆಗಳ ಹಿಂದೆ ನಡೆಯುವ ಶೋಷಣೆಯನ್ನು ದಿಟ್ಟವಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಬ್ರಿಟಿಷರ ಕಾಲಘಟ್ಟದ ನಾಲ್ಕು ವಿಧವೆಯರನ್ನು ಇಟ್ಟುಕೊಂಡು ಕಥೆಯನ್ನು ಹೇಳುತ್ತ ಹೋಗಿದ್ದಾರೆ ದೀಪಾ. ಮಧುಮತಿ ವಿಧವೆಯರ ಆಶ್ರಮದ ಹಿರಿಯೆ. ಹಣ್ಣು ಹಣ್ಣು ಮುದುಕಿಯಾಗಿರುವ ಅವಳಿಗೆ ಕಟ್ಟುಪಾಡುಗಳಲ್ಲಿ ಅದಮ್ಯ ನಂಬಿಕೆ. ವಿಧವೆಯರು ಜೀವನಪರ್ಯಂತ ಜಪತಪಗಳಲ್ಲಿ ಕಳೆಯಬೇಕು. ಮದುವೆಯಾದರೆ ನರಕ ಖಂಡಿತ ಎನ್ನುವುದರಲ್ಲಿ ಅವಳಿಗೆ ಸಂದೇಹವಿಲ್ಲ. ಆದರೆ ಅವಳೇ ಊರಿನ ಶ್ರೀಮಂತರ ಕಾಮತೃಷೆಗಾಗಿ ವಿಧವೆಯರನ್ನು ಕಳಿಸುವ ದಂಧೆಯನ್ನೂ ಮಾಡುತ್ತಾಳೆ. ಶಕುಂತಲಾ ನಡುವಯಸ್ಸಿನ ವಿಧವೆ. ಅವಳು ವಿಧವಾಜೀವನವನ್ನು ಪರಂಪರಾ ನಿಷ್ಠಳಾಗಿಯೇ ಸಾಗಿಸುತ್ತಿದ್ದರೂ ಅವಳೊಳಗೆ ಗೊಂದಲವೂ ಇದೆ. ‘ವಿಧವೆಯರು ವಿವಾಹ ಆಗಲೇಬಾರದೇ?’ ಎಂದು ಅವಳು ಪಂಡಿತರನ್ನು ಕೇಳಬಲ್ಲಳು. ಇನ್ನು ಕಲ್ಯಾಣಿ ಬಾಲವಿಧವೆಯಾಗಿ ಆಶ್ರಮ ಸೇರಿದವಳು. ಈಗವಳಿಗೆ ಯೌವನ. ಊರಿನ ಹಿರಿಯ ಸೇಠ್ ಮಗನ ಜತೆ ಪ್ರೇಮವಾಗುತ್ತದೆ. ವಿಧವಾಶ್ರಮವೆಂಬ ಜೈಲಿನಿಂದ ತಪ್ಪಿಸಿಕೊಂಡು ಹೋಗಬೇಕು ಎಂಬ ಕನಸನ್ನು ಕಾಣುತ್ತಿರುವವಳು. ಆದರೆ ತಾನು ಪ್ರೇಮಿಸುತ್ತಿರುವ ಹುಡುಗನ ತಂದೆಯೇ ತನ್ನನ್ನು ಭೋಗಿಸಿದ್ದಾನೆ ಎಂಬುದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮನಸ್ಸೊಳಗೆ ಸಾಧ್ಯವಾಗಿಸಿಕೊಂಡ ಬಿಡುಗಡೆ ಸಮಾಜದಲ್ಲಿ ಸಾಧ್ಯವಾಗದೇ ಹೋಗುತ್ತದೆ. ಇನ್ನೊಬ್ಬಳು ಚೂಯಿಯಾ. ಈಗಷ್ಟೇ ಆಶ್ರಮ ಸೇರಿಕೊಂಡಿರುವ ಎಂಟು ವರ್ಷದ ಬಾಲವಿಧವೆ. ಅವಳು ಭವಿಷ್ಯದ ಬೆಳಕಿನ ಪ್ರತಿನಿಧಿಯೂ ಹೌದು. ಈ ನಾಲ್ಕು ಎಳೆಗಳನ್ನು ಇಟ್ಟುಕೊಂಡು ದೀಪಾ, ಮನುಷ್ಯಸಹಜ ಶ್ರೀಮಂತ ಜೀವನವನ್ನು ಅಕಾರಣವಾಗಿ ಬರಡುಗೊಳಿಸುವ ಸಂಪ್ರದಾಯಗಳ ಕ್ರೌರ್ಯವನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಮೊದಲಿನಿಂದಲೂ ಗಾಂಧೀಜಿ ಬೇರೆ ಬೇರೆ ಬಗೆಗಳಲ್ಲಿ ಉಲ್ಲೇಖಗೊಳ್ಳುತ್ತಲೇ ಹೋಗುತ್ತಾರೆ. ಕೊನೆಯಲ್ಲಿ ಅತ್ಯಾಚಾರಕ್ಕೊಳಗಾದ ಚೂಯಿಯಾಳನ್ನು ಶಕುಂತಲಾ ಗಾಂಧೀಜಿ ಪ್ರಯಾಣಿಸುತ್ತಿರುವ ರೈಲಿನಲ್ಲಿ ಹಾಕಿ ಕಳಿಸುವುದೂ ಚಿತ್ರಕ್ಕೆ ಸಿಕ್ಕಿರುವ ಅತ್ಯಂತ ಪ್ರಭಾವಿ ಮತ್ತು ಆಶಾದಾಯಕ ಅಂತ್ಯ. ಎ.ಆರ್. ರೆಹಮಾನ್ ಅವರ ಸಂಯೋಜನೆಯ ಎಲ್ಲ ಹಾಡುಗಳೂ ಮನಸ್ಸಿನೊಳಗೆ ಭಾವತರಂಗಗಳನ್ನು ಎಬ್ಬಿಸುವಷ್ಟು ಶಕ್ತವಾಗಿದೆ. ಗಿಲ್ಸ್ ನುಟ್‌ಜೆನ್ಸ್ ಅವರ ಕ್ಯಾಮೆರಾ, ಕತ್ತಲೆ ಬೆಳಕಿನ ಕಾವ್ಯಾತ್ಮಕ ಸಂಯೋಜನೆಯ ಮೂಲಕವೇ ಕಥೆಯನ್ನು ಇನ್ನೊಂದು ಮಟ್ಟಕ್ಕೆ ಏರಿಸುತ್ತದೆ. ಪುಟಾಣಿ ಕಲಾವಿದೆ ಸರಳಾ ಕಾರಿಯಾ ವಾಸಮ್ ಬಹು ಬೇಗ ನಮ್ಮ ಭಾವಕೋಶದ ಭಾಗವಾಗಿಬಿಡುತ್ತಾಳೆ. ಲೀಸಾ ರೇ, ಸೀಮಾ ಬಿಸ್ವಾಸ್, ಜಾನ್ ಅಬ್ರಾಂ ಎಲ್ಲರ ಅಭಿನಯವೂ ಇಷ್ಟವಾಗುವಂತಿದೆ. https://goo.gl/anPKcN ಕೊಂಡಿ ಬಳಸಿಕೊಂಡು ‘ವಾಟರ್’ ಸಿನಿಮಾ ನೋಡಬಹುದು. ಕೃಪೆ ಪ್ರಜಾವಾಣಿ 22-02-2018
0 Comments
Leave a Reply. |
Categories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |