Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications
  • Novels / Stories
  • >
  • ಸಮಾಜಸೇವೆಯ ಮಿನುಗುತಾರೆ ಮೀನಾ

ಸಮಾಜಸೇವೆಯ ಮಿನುಗುತಾರೆ ಮೀನಾ

SKU:
$0.00
Unavailable
per item
ಅಂದು ಮೀನಾಕ್ಷಿಯ ಸಂಭ್ರಮ ಹೇಳತೀರದು. ಉತ್ಸಾಹ ಅವಳಲ್ಲಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಎಲ್ಲಾ ಕೈವಾಡ ಅವಳದೇ. ಆ ಶುಕ್ರವಾರ ಕಾರ್ತಿಕ ಶುದ್ಧ ದ್ವಾದಶಿ-ಉತ್ಥಾನ ದ್ವಾದಶಿ. ಹೆಣ್ಣು ಮಕ್ಕಳು ತುಳಸೀದೇವಿಗೆ ಬೃಂದಾವನದಲ್ಲಿ ಪೂಜೆ ಮಾಡುವ ವಿಶೇಷ ದಿನ. ಪರಮ ಪೂಜ್ಯ ಪತಿವ್ರತೆ ವೃಂದೆಯನ್ನು ನೆನಪು ಮಾಡುವ ದಿನ. ತನ್ನ ಪಾತೀವ್ರತ್ಯ ಬಲದಿಂದ ತನ್ನ ಗಂಡ ಜರಾಸಂಧನನ್ನು ಅಜೇಯನನ್ನಾಗಿ ಮಾಡಿದ್ದ ಸತಿ. ದೇವತೆಗಳು ತಮ್ಮ ಶತ್ರುವಾದ ಜರಾಸಂಧನನ್ನು ದಮನ ಮಾಡಲಾಗದೆ ಅವನನ್ನು ದಮನ ಮಾಡುವಂತೆ ಮಹಾ ವಿಷ್ಣುವನ್ನು ಪ್ರಾರ್ಥಿಸಿದರು. ವೃಂದೆಯ ಪಾತೀವ್ರತ್ಯವನ್ನು ಭಂಗಪಡಿಸಿದ ಹೊರತು ಜರಾಸಂಧನನ್ನು ಗೆಲ್ಲುವುದು ಅಸಾಧ್ಯವೆಂದು ತಿಳಿದಿದ್ದ ವಿಷ್ಣು ಜರಾಸಂಧನು ಯುದ್ಧ ಮಾಡಲು ಹೊರಗೆ ಹೋಗಿದ್ದಾಗ ಅವನ ರೂಪ ಧರಿಸಿ ವೃಂದೆಯನ್ನು ಸೇರಿದ, ವಿಷ್ಣು ಆಕೆಯ ಪಾತೀವ್ರತ್ಯ ಭಂಗ ಮಾಡಿದ. ಆ ಗಳಿಗೆಯಲ್ಲೇ ಜರಾಸಂಧನ ಸೋಲು ಸಾವಾಗಿತ್ತು. ಸತ್ಯ ತಿಳಿದ ವೃಂದೆ ವಿಷ್ಣುವಿಗೂ ಪತ್ನಿ ವಿಯೋಗವಾಗಲೆಂದು ಶಪಿಸಿ, ಚಿತೆಯಲ್ಲಿ ಪ್ರಾಣಬಿಟ್ಟಳು. ವೃಂದೆ ಗತಿಸಿದ ಜಾಗದಲ್ಲೇ ತುಳಸೀ ಬೆಳೆಯಿತು. ಬೃಂದಾವನ ನಿರ್ಮಿತವಾಯಿತು. ತುಳಸಿ ಮಹಾವಿಷ್ಣುವಿನ ಪ್ರೀತಿ ಪಾತ್ರಳಾದಳು. ಹೀಗಾಗಿ ಉತ್ಥಾನ ದ್ವಾದಶಿ, ಹೆಣ್ಣು ಮಕ್ಕಳು ತುಳಸಿಗೆ ವೃಂದಾವನದಲ್ಲಿ ವಿಶೇಷ ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸೆಂದು ಪ್ರಾರ್ಥಿಸುವ ವಿಶೇಷ ದಿನ.

ವೃಂದಾವನವನ್ನು ಯಥಾಶಕ್ತಿ ಅಲಂಕರಿಸಿ, ಕಬ್ಬಿನ ಜಲ್ಲೆಗಳನ್ನು ಮುಂದೆ ಇಟ್ಟು. ನೆಲ್ಲಿಕಾಯಿ, ಗಂಧ, ಧೂಪ, ದೀಪಗಳಿಂದ ತುಳಸಿಯನ್ನು ಪೂಜಿಸುವುದು ವಾಡಿಕೆ.

ಮೀನಾಕ್ಷಿ ಅವಳ ತಂಗಿ ಶಾರದ ಮನೆಯ ಹಿಂಭಾಗದಲ್ಲಿ ಬೃಂದಾವನವನ್ನು ಅಲಂಕರಿಸಿದ್ದರು. ಬೃಂದಾವನದಲ್ಲಿ ಬೆಳೆದಿದ್ದ ತುಳಸಿ ಸುವಾಸನೆ ಬೀರಿ ರಾರಾಜಿಸುತ್ತಿತ್ತು. ತುಳಸಿಕಟ್ಟೆಯ ಮುಂದೆ ಅಕ್ಕಪಕ್ಕಗಳಲ್ಲಿ ದೀಪಗಳು ಪ್ರಜ್ವಲಿಸುತ್ತಿದ್ದವು. ಮೀನಾ ಶಾರದ ಭಕ್ತಿಯಿಂದ ತುಳಸಿಯನ್ನು ಮಲ್ಲಿಗೆ, ರೋಜಾ, ಸುಗಂಧರಾಜ ಪುಷ್ಪಗಳಿಂದ ಪೂಜಿಸಿ, ಬೃಂದಾವನಕ್ಕೆ ಹರಿಸಿನ ಕುಂಕುಮ ಹಚ್ಚಿ, ಹಣ್ಣು ಹಾಲುಗಳ ನೈವೇದ್ಯ ಮಾಡಿ ಅಲ್ಲೇ ನಿಂತಿದ್ದ ಅವರ ಅಣ್ಣಂದಿರಿಗೂ, ನನಗೂ ಪ್ರಸಾದ ಕೊಟ್ಟರು. ಅವರ ಮುಖಗಳಲ್ಲಿ ಅಪಾರ ಸಂತೋಷ, ತೃಪ್ತಿ ಎದ್ದು ಕಾಣುತ್ತಿತ್ತು. ನಾವುಗಳು ಪ್ರಸಾದ ತೆಗೆದುಕೊಂಡ ನಂತರ ಒಳಾಂಗಣದಲ್ಲಿ ಕುರ್ಚಿಗಳ ಮೇಲೆ ಕೂತು ಮಾತನಾಡುತ್ತಿದ್ದೆವು. ಈ ಬೃಂದಾವನದಲ್ಲಿ ತುಳಸಿಪೂಜೆ ಯಾವಾಗ ಆರಂಭವಾಯಿತು, ಇದರಿಂದ ಪೂಜಿಸುವ ನಮ್ಮ ಹೆಣ್ಣು ಮಕ್ಕಳ ಅಭೀಷ್ಟಗಳು ನಿಜವಾಗಿ ಈಡೇರುತ್ತವೆಯೇ, ಇದರ ನಿಜವಾದ ಅರ್ಥವೇನು ಎಂದು ಅನಂತರಾಮ್ ಪ್ರಶ್ನಿಸಿದರು. ಭಕ್ತಿಯಿಂದ ತುಳಸಿಮಾತೆಯನ್ನು ಪೂಜಿಸಿದರೆ ಏನಾದರೂ ಒಳ್ಳೆಯದಾಗಬಹುದು ಎಂದ ಶ್ರೀನಿವಾಸ. ಅಷ್ಟರಲ್ಲಿ ನನಗೆ ಆ ದಿನ ಕಾಲೇಜಿನ ಗ್ರಂಥಾಲಯದಿಂದ ತಂದಿದ್ದ ಹಿಂದೂ ವ್ರತಗಳು, ಪೂಜೆಗಳು ಮತ್ತು ಸಂಪ್ರದಾಯಗಳು ಎಂಬ ಪುಸ್ತಕದ ಜ್ಞಾಪಕ ಬಂತು. ಅದನ್ನು ನನ್ನ ಕೈಚೀಲದಲ್ಲಿ ಒಳಗಿನ ಕೊಠಡಿಯಲ್ಲಿಟ್ಟಿದ್ದೆ. ಅದರಲ್ಲಿ ಅನಂತನ ಪ್ರಶ್ನೆಗೆ ಉತ್ತರ ಸಿಗಬಹುದೆಂದು ಹೇಳಿ ಅದನ್ನು ತರಲು ಒಳಗಿನ ಕೊಠಡಿಗೆ ಹೋದೆ. ಅಲ್ಲಿ ಮೀನಾಕ್ಷಿ ಕನ್ನಡಿಯ ಮುಂದೆ ನಿಂತು ತನ್ನ ಹಣೆಯ ಮೇಲಿನ ಕುಂಕುಮ ಸರಿಮಾಡಿಕೊಳ್ಳುತ್ತಿದ್ದಳು. ನಾನು ಒಳಗೆ ಹೋಗಲೋ ಬೇಡವೋ ಎಂದು ಯೋಚಿಸುತ್ತ ಹೊಸಲ ಬಳಿ ನಿಂತೆ. ನನ್ನನ್ನು ನೋಡಿದ ಮೀನಾ ಯಾಕೆ ಅಲ್ಲೇ ನಿಂತಿರಿ ಒಳಗೆ ಬನ್ನಿ ಎಂದಳು. ಏನಾದರೂ ಬೇಕಿತ್ತೇ ಎಂದು ಕೇಳಿದಳು. ಏನಿಲ್ಲ ಇಲ್ಲಿಟ್ಟಿದ್ದ ನನ್ನ ಕೈಚೀಲ ತೆಗೆದುಕೊಳ್ಳಲು ಬಂದೆ ಎಂದೆ. ಅದರಲ್ಲಿ ಒಂದು ಪುಸ್ತಕವಿದೆ. ಅದನ್ನು ನಿಮ್ಮಣ್ಣ ಅನಂತನಿಗೆ ಕೊಡಬೇಕಿತ್ತು. ಅದಕ್ಕೇಕೆ ಸಂಕೋಚ ಒಳಗೆ ಬನ್ನಿ ಎಂದಳು. ನಾನು ಕೊಠಡಿಯೊಳಗೆ ಹೋಗಿ ಕೈಚೀಲದಿಂದ ಪುಸ್ತಕ ತೆಗೆದುಕೊಳ್ಳುತ್ತಿದ್ದೆ. ತಕ್ಷಣ ನನ್ನ ಬೆನ್ನ ಮೇಲೆ ಭಾರ ಹಾಕಿದಂತಾಯಿತು. ಮೀನಾ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು. ಅವಳ ಬಿಸಿ ಉಸಿರು ನನ್ನ ಮುಖದ ಮೇಲೆ ಹರಡುತ್ತಿತ್ತು. ನನ್ನ ದೇಹದಲ್ಲಿ ವಿದ್ಯುತ್ ಪ್ರವೇಶಿಸಿದ ಅನುಭವವಾಯಿತು. ಅವಳು ನನ್ನಿಂದ ಏನು ನಿರೀಕ್ಷಿಸುತ್ತಿದ್ದಾಳೆ ಎಂದು ಯೋಚಿಸಿದೆ. ಅವಳ ಬಂಧನದಿಂದ ನಾನು ನನ್ನನ್ನು ಬಿಡಿಸಿಕೊಂಡೆ. ಅವಳು ಏನೂ ಹೇಳದೆ ನನ್ನನ್ನು ನೋಡುತ್ತಿದ್ದಳು. ನನಗೆ ಏನು ಹೇಳಬೇಕೆಂದು ತೋಚಲಿಲ್ಲ. ಬೇಸರವಾಯಿತೆ ಮೀನಾಕ್ಷಿ, ಯಾರಾದರೂ ನೋಡಿದರೆ ನನ್ನನ್ನು ಏನೆನ್ನುತ್ತಾರೊ ಎಂಬ ಭಯವಾಯಿತು. ಅದಕ್ಕೆ ಹೀಗೆ ಪ್ರತಿಕ್ರಿಯಿಸಿದೆ ಎಂದೆ. ಅವಳು ನಿಮ್ಮನ್ನು ಮೊದಲ ಬಾರಿ ನೋಡಿದಾಗ ನನ್ನ ಮನಸ್ಸಿನಲ್ಲಿ ನಿಮ್ಮ ಮೇಲೆ ಪ್ರೀತಿ ಉದ್ಭವಿಸಿತು. ಇದನ್ನು ಬಿಟ್ಟುಬಿಟ್ಟು ಹೇಳಲು ಸಾಧ್ಯವಾಗಲಿಲ್ಲ. ಈ ಉತ್ಥಾನದ್ವಾದಶಿ ಇದು ನಿಮಗೆ ತಿಳಿಸಲೇಬೇಕೆನಿಸಿತು. ಈ ರೀತಿ ತಿಳಿಸಿದ್ದೀನಿ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದು ನಿಮಗೆ ಬಿಟ್ಟ ವಿಷಯ ಎಂದಳು. ಮರೆಯಲಾರದ ರೀತಿ ನಿನ್ನ ಅಭೀಷ್ಟ ನನಗೆ ವ್ಯಕ್ತಪಡಿಸಿದ್ದೀಯ, ಯೋಚಿಸುತ್ತೀನಿ ಎಂದು ಹೇಳಿ ನನ್ನ ಪುಸ್ತಕ ತೆಗೆದುಕೊಂಡು ಕೋಣೆಯಿಂದ ಆಚೆ ಬಂದೆ.

ನಾನು ಕೈಚೀಲದಲ್ಲಿದ್ದ ಪುಸ್ತಕವನ್ನು ತೆಗೆದುಕೊಂಡು ಬಂದು ಅನಂತನಿಗೆ ಕೊಟ್ಟು, ಅಲ್ಲೇ ಕುಳಿತೆ. ನೀನು ಕೇಳಿದ ಕೆಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ ಇದನ್ನು ಓದಿ ನಂತರ ನನಗೆ ಕೊಡು ಎಂದೆ ಅನಂತನಿಗೆ. ಶ್ರೀನಿವಾಸ ಅನಂತ ಅವರಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತನಾಡುತ್ತ ಕೂತರು. ನಾನು ದೈಹಿಕವಾಗಿ ಅಲ್ಲಿದ್ದರೂ ನನ್ನ ಮನಸ್ಸೆಲ್ಲಾ ಮೀನನಲ್ಲೇ ಲೀನವಾಗಿತ್ತು. ಆ ಸಂಜೆ ಅವಳು ಭಾವೋದ್ರೇಕದಿಂದ ನನ್ನನ್ನು ಅಪ್ಪಿಕೊಂಡ ಚಿತ್ರವೇ ನನ್ನ ಕಣ್ಣು ಮುಂದೆ ಬರುತ್ತಿತ್ತು.

ನನಗೂ ಮೀನಳಿಗೂ ಅಂತಹ ನಿಕಟ ಸಂಬಂಧವೇನೂ ಇರಲಿಲ್ಲ. ಅಪರೂಪವಾಗಿ, ನನ್ನ ಮಿತ್ರ ಶೀನುವಿನೊಡನೆ ಅನಂತನನ್ನು ನೋಡಲು ಅವರ ಮನೆಗೆ ಹೋಗಿದ್ದೆ. ಆಗ ಮೀನಾಳನ್ನು, ಅವಳ ಸಹೋದರಿ ಶಾರದಳನ್ನು ಭೇಟಿ ಮಾಡಿದ್ದೆ. ಮೀನಾಳದು ಸರಳ ಸ್ವಭಾವದ ನಡವಳಿಕೆ. ನಿಸ್ಸಂಕೋಚ ಪ್ರಕೃತಿ. ಅದೇ ಅವಳ ತಂಗಿ ಶಾರದ ಗಂಭೀರ ಪ್ರವೃತ್ತಿ, ಮಾತು ಕಡಿಮೆ. ಆದರೆ ಇಬ್ಬರೂ ಸ್ನೇಹಮಯರು. ಅವರ ಅಣ್ಣ ಅನಂತ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ಅವನು ಭೂಗರ್ಭ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಮೈಸೂರಿನಿಂದ ಅವನಿಗೆ ಮಂಗಳೂರಿಗೆ ವರ್ಗವಾದಾಗ ಮನೆ ನೋಡಿಕೊಳ್ಳಲು ಯಾವ ಗಂಡಸರೂ ಇರಲಿಲ್ಲ. ಮಲತಾಯಿ, ರೋಗದಿಂದ ಹಾಸಿಗೆ ಹಿಡಿದಿದ್ದ ತಂದೆ, ಮದುವೆ ವಯಸ್ಸಿಗೆ ಬಂದಿದ್ದ ಇಬ್ಬರು ತಂಗಿಯರು. ಅವರನ್ನು ಬಿಟ್ಟು ಹೋಗಲು ಅವನಿಗೆ ಬಹಳ ಚಿಂತೆಯಾಗಿತ್ತು. ಆದರೆ ಬೇರೆ ದಾರಿಯಿರಲಿಲ್ಲ. ಆಗ ಶ್ರೀನಿವಾಸನನ್ನು ಆಗಿಂದಾಗ್ಯೆ ತನ್ನ ಮನೆಯವರ ಯೋಗಕ್ಷೇಮ ನೋಡಿಕೊಳ್ಳುತ್ತಾ ತನಗೆ ದೂರವಾಣಿಯಲ್ಲಿ ಸಮಾಚಾರ ತಿಳಿಸುತ್ತಿರಬೇಕೆಂದು ಹೇಳಿದ್ದ. ಶೀನು ಗೆಳೆಯನಿಗೆ ಅಭಯ ವಚನ ಕೊಟ್ಟು ಹೋಗಿ ಬರುವಂತೆ ಹೇಳಿದ. ತಾನು ಅವನ ಮನೆಯವರನ್ನು ನೋಡಿಕೊಳ್ಳುವುದಾಗಿ ಆಶ್ವಾಸನೆ ಕೊಟ್ಟನು. ನಾನೂ ಸಹ ಶ್ರೀನಿವಾಸನ ವಟಾರದಲ್ಲಿ ಒಂದು ಕೊಠಡಿಯಲ್ಲಿ ವಾಸಿಸುತ್ತಿದ್ದೆ. ಅವನ ಜೊತೆಯಲ್ಲಿ ಆಗಿಂದಾಗ್ಯೆ ಮೀನಾ, ಶಾರದಾ ಅವರ ತಂದೆ, ಮಲತಾಯಿಯರನ್ನು ನೋಡಲು ಹೋಗಿ ಬರುತ್ತಿದ್ದೆ. ಆದರೆ ಎಂದೂ ನಾನು ಮೀನಾ ಜೊತೆಯಲ್ಲಿ ಕೂತು ನಮ್ಮ ವೈಯಕ್ತಿಕ ವಿಚಾರಗಳನ್ನಾಗಲೀ ನಮ್ಮ ಭವಿಷ್ಯದ ವಿಚಾರಗಳಾಗಲಿ ಹೇಳಿಕೊಂಡಿರಲಿಲ್ಲ. ಆದರೆ ಅವಳಿಗೆ ಅವಳ ಅಣ್ಣ ಅನಂತನ ಮೂಲಕ ಹಾಗೂ ನನ್ನ ಮಿತ್ರ ಶ್ರೀನಿವಾಸನ ಮುಖಾಂತರ ನನ್ನ ಕುಟುಂಬದ ಹಿರಿಯರ ವಿಚಾರ, ನಮ್ಮ ಊರಿನಲ್ಲಿ ಅವರ ಸ್ಥಾನ, ನಾನು ಸ್ನಾತಕೋತ್ತರ ಪದವೀಧರನಾಗಿದ್ದು, ಮೈಸೂರು ಮಹಾರಾಜರಿಂದ ನನಗೆ ಬಂದ ಮೂರು ಸುವರ್ಣ ಪದಕಗಳ ವಿಚಾರ ಎಲ್ಲಾ ಅವಳಿಗೆ ತಿಳಿದಿತ್ತು. ಸಾಧ್ಯವಾದರೆ ಮುಂದಿನ ವಿದ್ಯಾಭ್ಯಾಸಕ್ಕೆ ಅಮೇರಿಕಾಗೆ ಹೋಗಲು ಪ್ರಯತ್ನಿಸುತ್ತಿದ್ದುದು ಅವಳಿಗೆ ತಿಳಿದಿತ್ತು.

ಒಮ್ಮೆ ನಾನೂ ಶ್ರೀನಿವಾಸ ಅವರುಗಳ ಯೋಗಕ್ಷೇಮ ವಿಚಾರಿಸಲು ಮೀನಳ ಮನೆಗೆ ಹೋಗಿದ್ದಾಗ, ಅವಳ ಮನೆಯ ವಿಚಾರ ಹೇಳುತ್ತಾ ಅವಳ ಹಿರಿಯ ಅಣ್ಣ ಸುರೇಂದ್ರನಿಗೆ ಕೇಂದ್ರ ಸರ್ಕಾರದಲ್ಲಿ ಆಂತರಿಕ ರಕ್ಷಣಾ ಇಲಾಖೆಯಲ್ಲಿ ಉನ್ನತ ಪದವಿ ಕೊಟ್ಟಿದ್ದರೆಂದು ಬಿಹಾರದಲ್ಲಿ ಉದ್ಯೋಗ ಮಾಡಲು ಹೋಗುತ್ತಾರೆಂದು ಹೇಳಿದಳು. ಆಗ ಶೀನು ಕೇಂದ್ರ ಸರ್ಕಾರದ ಉದ್ಯೋಗ ಒಳ್ಳೆಯದು. ಅವರಿಗೆ ಒಳ್ಳೆಯ ಸಂಬಳ ದೊರಕುತ್ತೆ. ಆದರೆ ಅಷ್ಟು ದೂರ ಒಬ್ಬರೇ ಹೋಗುವುದಕ್ಕಿಂತ ಮದುವೆ ಮಾಡಿಕೊಂಡು ಹೆಂಡತಿಯೊಡನೆ ಹೋಗಿ ಸಂಸಾರದೊಡನೆ ಇದ್ದರೆ ಒಳ್ಳೆಯದಲ್ಲವೆ. ಹೆಂಡತಿ ಊಟ, ತಿಂಡಿ, ಯೋಗಕ್ಷೇಮ ನೋಡಿಕೊಳ್ಳಲು ಇರುತ್ತಾರೆ. ಇಲ್ಲವಾದರೆ ಒಂಟಿ ಜೀವನ ಕಷ್ಟವಾಗುತ್ತದೆ ಎಂದ. ನೀವು ಹೇಳಿದ್ದೆ ನಾನು ಶಾರದಾ ನಮ್ಮ ಅಣ್ಣನಿಗೆ ಹೇಳುತ್ತಿದ್ದೇವೆ. ನಮ್ಮ ಮಲತಾಯಿ ಅವರನ್ನು ಮದುವೆ ಮಾಡಿಕೊಂಡು ಹೋಗುವಂತೆ ಬಲವಂತ ಮಾಡುತ್ತಿದ್ದಾರೆ. ಯಾರಾದರೂ ಒಳ್ಳೆಯ ಮನೆತನದ, ಪದವೀಧರಳಾದ ಒಳ್ಳೆಯ ಹುಡುಗಿ ವಿವಾಹಕ್ಕಿದ್ದರೆ ನಿಮಗೆ ತಿಳಿದಿದ್ದರೆ ಹೇಳಿ. ನಾವು ಅವರನ್ನು ಸಂಪರ್ಕಿಸುತ್ತೀವಿ ಎಂದಳು ಮೀನಾ.

ಅಷ್ಟರಲ್ಲಿ ನಾನು ನೋಡಿ ಮೀನಾ ನಮ್ಮೂರಿನಲ್ಲಿ ರಾಮನಾಥ್ ಎಂಬ ಕಾಫೀ ವ್ಯಾಪಾರಸ್ಥರಿದ್ದಾರೆ. ಒಳ್ಳೆ ಮಧ್ಯಮ ವರ್ಗದ ಕುಟುಂಬ, ಅವರಿಗೆ ಕಮಲ ಎಂಬ 18 ವರ್ಷ ವಯಸ್ಸಿನ ಮಗಳಿದ್ದಾಳೆ. ಅವಳು ನೋಡಲು ಚೆನ್ನಾಗಿದ್ದಾಳೆ. ಆದರೆ ಪದವೀಧರೆಯಲ್ಲ. ನಾನು ಆ ಹುಡುಗಿಯ ಭಾವಚಿತ್ರ ಕಳಿಸಿಕೊಡುತ್ತೇನೆ. ನಿಮಗೆ ಇಷ್ಟವಾದರೆ ಅವರನ್ನು ವಿಚಾರಿಸೋಣ ಎಂದೆ.

ನಮ್ಮ ಮಲತಾಯಿ ತಂಗಿಯರಿಗೆ ಈ ವಿಚಾರ ತಿಳಿಸುತ್ತೇವೆ. ನೀವು ಆ ಹುಡುಗಿಯ ಛಾಯಾಚಿತ್ರ ತರಿಸಿಕೊಡಿ ಎಂದಳು ಮೀನಾ. ನಾನು ದೂರವಾಣಿ ಮೂಲಕ ರಾಮನಾಥ್ರೊಡನೆ ಮಾತನಾಡಿ ಕಮಲಳ ಛಾಯಾಚಿತ್ರ ನನಗೆ ಕಳುಹಿಸುವಂತೆ ಹೇಳಿದೆ. ಒಂದು ವಾರದ ನಂತರ ಫೋಟೋ ಬಂದು ಮೀನಾಳಿಗೆ ಕೊಟ್ಟು ಅವರೆಲ್ಲ ಇಷ್ಟಪಟ್ಟರೆ ಹುಡುಗಿಯನ್ನು ನೋಡಲು ಏರ್ಪಾಡು ಮಾಡುತ್ತೇನೆಂದು ಹೇಳಿದ.

ಆ ಸಂಜೆ ಅನಂತ ನಮ್ಮನ್ನು ನೋಡಲು ಬಂದ. ಅವನಣ್ಣ ಸುರೇಂದ್ರ ಬೆಂಗಳೂರಿಂದ ಬಂದಿದ್ದಾನೆಂದು, ಮನೆಯಲ್ಲಿ ಎಲ್ಲರೂ ಕಮಲಳ ಭಾವಚಿತ್ರ ನೋಡಿ ಅವಳನ್ನು ನೋಡಲು ಇಚ್ಛಿಸಿದ್ದಾರೆಂದು ಅವಳನ್ನು ಮೈಸೂರಿಗೇ ಕರೆಸಿದರೆ ಮನೆಯಲ್ಲಿ ಎಲ್ಲರೂ ನೋಡಬಹುದೆಂದು ಹೇಳಿದ. ರಾಮನಾಥರು ಸಂಪ್ರದಾಯಸ್ತರು. ಅವರು ಮಗಳನ್ನು ಕರೆದುಕೊಂಡು ಮೈಸೂರಿಗೆ ಬರಲು ಒಪ್ಪುವುದಿಲ್ಲ. ನಾವುಗಳೇ ಅವರಲ್ಲಿಗೆ ಹೋಗಿ ಬರಬೇಕಾಗಬಹುದೆಂದು ತಿಳಿಸಿದೆ. ಅದಕ್ಕೆ ಅನಂತ ಆಗಬಹುದು. ನಾನು ಮಂಗಳವಾರ ಬರಲು ರಜಾ ಪಡೆಯುವುದು ಕಷ್ಟ. ಶಾರದಾ ಮೀನಾರಲ್ಲಿ ಯಾರಾದರೂ ಒಬ್ಬರು ಮನೆಯಲ್ಲಿ ಅಪ್ಪ, ಮಲತಾಯಿಯನ್ನು ನೋಡಿಕೊಳ್ಳಲು ಇರಬೇಕಾಗುತ್ತದೆ. ಅಣ್ಣ ಸುರೇಂದ್ರ, ಶಾರದಾ ಅಥವಾ ಮೀನಾ ಯಾರಾದರೂ ಒಬ್ಬರು ಹುಡುಗಿಯನ್ನು ನೋಡಲು ಹೋಗಿ ಬರಬಹುದೆಂದ ಅನಂತ. ರಾಮನಾಥರಿಗೆ ನಾವು ಅವರ ಮಗಳನ್ನು ನೋಡಲು ಕೋಲಾರಕ್ಕೆ ಹೋಗುವ ತಾರೀಖು ತಿಳಿಸಿದೆ. ಶ್ರೀನಿವಾಸ, ಸುರೇಂದ್ರ, ನಾನು, ಮೀನಾ, ಹುಡುಗಿಯನ್ನು ನೋಡಲು ಕೋಲಾರಕ್ಕೆ ಹೊರಟೆವು.

ಕೋಲಾರದಲ್ಲಿ ಬಸ್ ನಿಲ್ದಾಣದಲ್ಲಿ ನಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ರಾಮನಾಥರವರೇ ಬಾಡಿಗೆ ಕಾರಿನಲ್ಲಿ ಬಂದಿದ್ದರು. ಕೋರ್ಟಿನ ಬಳಿಯಿದ್ದ ಅವರ ಮನೆಗೆ ಕರೆದುಕೊಂಡು ಹೋದರು. ಬಾಗಿಲಲ್ಲೆ ನಿಂತಿದ್ದ ಅವರ ಭಾರ್ಯೆ ರೇವತಿಯವರು ನಗುಮುಖದಿಂದ ನಮ್ಮನ್ನು ಸ್ವಾಗತಿಸಿದರು. ರಾಮನಾಥರಿಗೆ ನಾನು ಸುರೇಂದ್ರನ ಪರಿಚಯ ಮಾಡಿಸಿ, ಅವರು ಕೇಂದ್ರ ಸರ್ಕಾರದ ಉದ್ಯೋಗದ ಮೇಲೆ ಬಿಹಾರ್ಗೆ ಬಂದು ತಿಂಗಳಾದ ಮೇಲೆ ಹೋಗುವರೆಂದೂ ಅವರ ವಿಚಾರವೆಲ್ಲ ಅವರನ್ನು ಕೇಳಿ ತಿಳಿದುಕೊಳ್ಳುವಂತೆ ಹೇಳಿದೆ. ಅಷ್ಟರಲ್ಲಿ ರೇವತಿಯವರು ಎಲ್ಲರಿಗೂ ಹಾಲು, ಹಣ್ಣು ತಿನಿಸುಗಳನ್ನು ತಂದರು. ಅವರ ಮಗಳು ಕಮಲಾನೇ ಸಂಕೋಚವಿಲ್ಲದೆ ಅದನ್ನು ಎಲ್ಲರಿಗೂ ಕೊಟ್ಟಳು.

ರಾಮನಾಥ ರೇವತಿಯನ್ನು ಕಮಲಳನ್ನು ಅಲ್ಲೇ ಕೂಡುವಂತೆ ಹೇಳಿದರು. ಬಿಳಿಸೀರೆ, ಕಪ್ಪು ಕುಬಸ ತೊಟ್ಟು, ಮಲ್ಲಿಗೆ ಹೂವು ಮುಡಿದುಕೊಂಡಿದ್ದ ಕಮಲ ತಾಯಿಯ ಪಕ್ಕದಲ್ಲಿ ಜಮಖಾನದ ಮೇಲೆ ಕುಳಿತಳು. ಅವಳ ತಾಯಿಯ ಹೋಲಿಕೆ ಅವಳಿಗಿತ್ತು. ವಿಶಾಲವಾದ ಕೇಶರಾಶಿ, ಉದ್ದವಾದ ಮೂಗು ಮತ್ತು ವಿಶಾಲವಾದ ಕಣ್ಣುಗಳಿಂದ ಅವಳು ನೋಡಲು ಆಕರ್ಷಕವಾಗಿದ್ದಳು. ಸುರೇಂದ್ರ ಅವಳನ್ನು ನೋಡುತ್ತಿದ್ದ. ಆದರೆ ಅವನ ಯಾವ ಪ್ರತಿಕ್ರಿಯೆಯೂ ಅವನ ಮುಖದಲ್ಲಿ ಕಾಣುತ್ತಿರಲಿಲ್ಲ. ಮೀನಾ, ರೇವತಿ ಕಮಲಳ ಬಳಿ ಕುಳಿತಿದ್ದರು. ಅವಳೇ ಅವರಿಬ್ಬರನ್ನು ಅನೇಕ ವಿಚಾರಗಳು ಕೇಳಿ ತಿಳಿದುಕೊಂಡಳು. ಕಮಲ ಕೋಲಾರದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ್ದರು. ಅವಳಿಗೆ ಮುಂದೆ ವ್ಯಾಸಂಗ ಮಾಡಿ ಪದವೀಧರಳಾಗಬೇಕೆಂಬ ಆಶೆಯಿತ್ತು. ಆದರೆ ಅವಳ ತಾಯಿ ತಂದೆಯರಿಗೆ ಅವಳಿಗೆ ವಿವಾಹ ಮಾಡಿ ಗಂಡನ ಮನೆಗೆ ಕಳುಹಿಸುವುದು ಒಳ್ಳೆಯದೆಂದು ನಿರ್ಧರಿಸಿದ್ದರು. ತಮ್ಮ ಕಣ್ಣು ಮುಂದೆ ಗೃಹಿಣಿಯಾಗಿ ಸೌಭಾಗ್ಯವತಿಯಾಗಿ ಒಳ್ಳೆಯ ಮನೆ ಸೇರಿದರೆ ಅದಕ್ಕಿಂತ ಹೆಚ್ಚಿನ ಸಂತೋಷ ತಮಗೆ ಇನ್ನು ಯಾವುದು ಎಂದರು ರೇವತಿ. ನೋಡು ಕಮಲಾ ನೀನು ನಮ್ಮ ಅಣ್ಣ ಸುರೇಂದ್ರನ ವಿಚಾರ ಕೇಳಬೇಕೆಂದಿದ್ದರೆ ಅವನನ್ನೇ ಇಲ್ಲಿ ಕರೆಯುತ್ತೇವೆ ಎಂದಳು ಮೀನಾ. ಕಮಲಾ ಮೀನಳಿಗೆ ಏನೂ ಹೇಳದೆ ತನ್ನ ತಾಯಿ ರೇವತಿಯನ್ನು ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದಳು. ನೋಡು ಕಮಲಾ ನಿನ್ನ ಭವಿಷ್ಯದ ಪ್ರಶ್ನೆ ಇದು. ಮೀನಾ ಹೇಳಿದಂತೆ ಅವರ ಅಣ್ಣನೊಡನೆ ಮಾತನಾಡು ಎಂದರು. ರೇವತಿ, ಕಮಲಳನ್ನು, ಮೀನಾ ಅವರ ಅಣ್ಣ ಸುರೇಂದ್ರನ ಬಳಿ ಕರೆದುಕೊಂಡು ಹೋಗಿ ಅವನೊಡನೆ ಹೊರ ಅಂಗಳದಲ್ಲಿ ಕುಳಿತು ಮಾತನಾಡುವಂತೆ ಹೇಳಿದಳು. ಸುರೇಂದ್ರನೇ ಮಾತು ಶುರು ಮಾಡಿ ನೋಡಿ ಸಂಕೋಚ ಪಡದೆ ನನ್ನ ವಿಚಾರ ಏನಾದರೂ ತಿಳಿಯಬೇಕೆಂದರೆ ಕೇಳಿ ಎಂದ. ನೀವು, ಉತ್ತರ ಇಂಡಿಯಾಗೆ ಯಾವಾಗಲಾದ್ರೂ ಹೋಗಿದ್ದೀರಾ, ದೆಹಲಿ, ಕಲ್ಕತ್ತ, ಭುವನೇಶ್ವರ ಇಂಥ ಸ್ಥಳಗಳಿಗೆ ಹೋಗಿದ್ದೀರಾ, ಅವಕಾಶ ಬಂದು ನಾನು ಆ ಕಡೆ ಕೆಲವು ವರ್ಷಗಳ ಕಾಲ ಇರಬೇಕಾದರೆ ನಿಮಗೆ ಇಷ್ಟವಾಗುತ್ತದೆಯೇ? ಇಲ್ಲಾ ಕರ್ನಾಟಕದಲ್ಲಿ ಇರಬೇಕೆಂದು ಇದೆಯಾ ಎಂದು ಕೇಳಿದ ಸುರೇಂದ್ರ.

ನನಗೆ ಕರ್ನಾಟಕದಲ್ಲಿ ಇದ್ದರೆ ಚೆನ್ನ ಅನಿಸುತ್ತೆ. ಆದರೆ ಉತ್ತರ ಭಾರತವನ್ನು ನೋಡುವ ಆಶೆಯಿದೆ. ಅವಕಾಶ ಬಂದರೆ ಅಲ್ಲಿ ಎರಡು ವರ್ಷಗಳ ಕಾಲ ಇರಬೇಕಾದರೆ, ನಾನು ಇರಬಲ್ಲೆ ಎಂದಳು ಕಮಲ. ನಾನೂ ನಿಮ್ಮನ್ನು ಅದೇ ಪ್ರಶ್ನೆ ಕೇಳಬಹುದೇ ಎಂದ ಸುರೇಂದ್ರ.

ನೀವು ನಿಮ್ಮ ಉದ್ಯೋಗಕ್ಕಾಗಿ ಉತ್ತರ ಭಾರತದಲ್ಲೇ ಇರಲು ಇಚ್ಛಿಸುತ್ತೀರಾ ಅಥವಾ ಕೆಲವು ವರ್ಷಗಳು ಕೆಲಸ ಮಾಡಿ ಮೈಸೂರು ಸೀಮೆಗೆ ಬರಲು ಇಷ್ಟಪಡುತ್ತೀರಾ. ಹೀಗೆ ಮಾಡಲು ಸಾಧ್ಯವಾಗುತ್ತದೆಯೇ ಎಂದಳು.

ಈಗ ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಭುವನೇಶ್ವರದಲ್ಲಿರ ಬೇಕಾಗುತ್ತೆ. ಆಮೇಲೆ ಕರ್ನಾಟಕಕ್ಕೆ ಹಿಂತಿರುಗಲು ಸಾಧ್ಯ. ನನಗೆ ಕರ್ನಾಟಕದಲ್ಲಿ ಇರಲು ಇಷ್ಟ ಎಂದ ಸುರೇಂದ್ರ.

ನೀವೇನಾದರೂ ಹಿಂದಿ ಭಾಷೆ ಕಲಿತಿದ್ದೀರಾ ಎಂದರು ಸುರೇಂದ್ರ. ಹಿಂದಿಯಲ್ಲಿ, ವಿಶಾರದ ಮಾಡಿದ್ದೇನೆ. ಓದಿ ಬರೆದು ಮಾತನಾಡಬಲ್ಲೆ ಎಂದಳು. ಕಮಲಾ, ರೇವತಿ, ರಾಮನಾಥ ಸಹ ಮಾತಿನಲ್ಲಿ ಸೇರಿದರು. ಅವರವರ ಸಂಸಾರಗಳ ವಿಚಾರ ಮಾತನಾಡುತ್ತಿರಲು ಸಂಜೆ ಆರು ಗಂಟೆ ಆಯ್ತು. ಮೈಸೂರಿಗೆ ಪ್ರಯಾಣ ಮಾಡಲು ಕಾಲವಾಗುತ್ತಿರುವುದರಿಂದ ಅನಂತ ಸರಿ ನೀವು ನಮ್ಮ ಮಗಳನ್ನು ನೋಡಿದ್ದೀರಿ. ಅವಳನ್ನು ವಿವಾಹವಾಗಲು ನಿಮಗೆ ಇಷ್ಟವೇ ತಿಳಿಸಿ. ನಂತರ ಮುಂದಿನ ಮಾತನಾಡೋಣ ಎಂದರು ರಾಮನಾಥ. ಅಷ್ಟರಲ್ಲಿ ರೇವತಿಯವರು ಅಡಿಗೆ ಮನೆಯಲ್ಲಿ ತಯಾರಿಸಿಟ್ಟಿದ್ದ ಕಾಫಿ ಎಲ್ಲರಿಗೂ ತಂದು ಕೊಡುವಂತೆ ಹೇಳಿದರು. ಕಮಲ ಕೂಡಲೇ ಒಳಗಿಂದ ಎಲ್ಲರಿಗೂ ಕಾಫಿ ತಂದು, ಸುರೇಂದ್ರನಿಗೆ ತನ್ನ ಕೈಯಿಂದಲೇ ಕಾಫಿ ಕೊಟ್ಟಳು. ಸುರೇಂದ್ರ ಮೈಸೂರು ಸೇರಿದ ಮೇಲೆ ತನ್ನ ಅಭೀಷ್ಠ ತಿಳಿಸುವುದಾಗಿ ಹೇಳಿದ. ಮೈಸೂರು ಸೇರಿದ ಮೇಲೆ, ಅಂತಿಮ ನಿರ್ಧಾರಕ್ಕೆ ಬರುವ ಮುಂಚೆ, ತನ್ನ ತಂದೆ, ಮಲತಾಯಿ, ತಂಗಿ ಶಾರದ ಕಮಲಳನ್ನು ನೋಡಬೇಕೆನ್ನುತ್ತಾರೆಂದು, ರಾಮನಾಥರು, ರೇವತಿಯರು ತಮ್ಮ ಮಗಳು ಕಮಲಳೊಡನೆ ಮೈಸೂರಲ್ಲಿ ತಮ್ಮ ಮನೆಗೆ ಬಂದು ಹೋಗಬೇಕೆಂದು ತಿಳಿಸಿದನು. ರಾಮನಾಥ, ರೇವತಿಯವರು ಕಮಲಳೊಡನೆ ಮೈಸೂರಿಗೆ ಬಂದು ಸುರೇಂದ್ರನ ತಂದೆ, ಮಲತಾಯಿಯರೊಡನೆ ಮಾತನಾಡಿದರು. ಕಮಲಳನ್ನು ನೋಡಿ, ಮಾತನಾಡಿ ಅವಳನ್ನು ಅವರು ಇಷ್ಟಪಟ್ಟರು. ಕಮಲಾ ಶಾರದ ಬಹಳ ಹತ್ತಿರದ ಬಂಧುಗಳಂತೆ, ಗೆಳೆಯರಂತೆ, ಆ ದಿನ ಬಹಳ ಕಾಲ ಜೊತೆಯಲ್ಲಿ ಮಾತನಾಡುತ್ತ ಕಾಲ ಕಳೆದರು. ಮನೆಯವರು ಕಮಲೆಯನ್ನು ಸೊಸೆಯಾಗಿ ಮಾಡಿಕೊಳ್ಳಲು ಒಪ್ಪಿದರು. ಶ್ರಾವಣ ಮಾಸದಲ್ಲಿ ಒಳ್ಳೆಯ ದಿನ ಮದುವೆ ಮಾಡಲು ಎರಡು ಕುಟುಂಬಗಳೂ ಒಪ್ಪಿದರು, ರಾಮನಾಥ, ತಮ್ಮ ಹೆಂಡತಿ ಮಗಳೊಡನೆ ಮಾರನೇ ದಿನ ಕೋಲಾರಕ್ಕೆ ಹಿಂತಿರುಗಿದರು.

ಒಂದು ತಿಂಗಳಾದ ಮೇಲೆ, ಶ್ರಾವಣ ಶುಕ್ರವಾರ ದಶಮಿ, ಕಮಲಾ ಸುರೇಂದ್ರನ ಮದುವೆಯ ಏರ್ಪಾಡಾಯಿತು. ರಾಮನಾಥರ ಕಡೆ ಮದುವೆ ಕಾರ್ಯಗಳಲ್ಲಿ ಓಡಾಡಲು ನಾನಿರಬೇಕಾಯಿತು. ಹುಡುಗ ಹಾಗೂ ಹುಡುಗಿಯರಿಬ್ಬರ ಕುಟುಂಬಗಳಿಗೂ ನಾನು ಮಿತ್ರನಾಗಿದ್ದರಿಂದ ಯಾವ ಸಂಕೋಚ, ಜಂಜಾಟವಿಲ್ಲದೆ ಎಲ್ಲಾ ವ್ಯವಹಾರಗಳೂ ಸುಲಭವಾಗಿ ನಿರ್ವಹಿಸಲು ಸಾಧ್ಯವಾಯಿತು. ಅದೇ ರೀತಿ ಮೀನಾ ರೇವತಿ ರಾಮನಾಥರೊಡನೆ ಎಲ್ಲಾ ಮದುವೆ ಕಾರ್ಯಗಳು ಸುಲಭವಾಗಿ ಏರ್ಪಡಿಸುತ್ತಿದ್ದಳು. ಅನಂತ ಮತ್ತು ಶಾರದೆ ಅವರ ಕಡೆ ಬಂದ ಮಿತ್ರರನ್ನು ನೋಡಿಕೊಳ್ಳುತ್ತಿದ್ದರು. ನಾನು ಮೀನಾ ಜೊತೆಯಲ್ಲೇ ನಿಂತು ಎಲ್ಲಾ ಮದುವೆ ಕಾರ್ಯಗಳಲ್ಲಿ ಓಡಾಡುತ್ತಿದ್ದುದರಿಂದ ಇದು ಎಲ್ಲರ ಗಮನವನ್ನು ಸೆಳೆದಿತ್ತು. ಪ್ರಶ್ನಾರ್ಥಕ ದೃಷ್ಟಿಯಿಂದ ಅವರು ನಮ್ಮನ್ನು ನೋಡುತ್ತಿದ್ದರು. ಸುರೇಂದ್ರನನ್ನು, ಅವನ ಎಷ್ಟೋ ಮಂದಿ ಬಳಗದವರು ಅವನ ತಂಗಿ ಮೀನಳಿಗೂ ನನಗೂ ಮದುವೆ ಸಂಬಂಧ ಏರ್ಪಾಡಾಗಿದೆಯಾ ಎಂದು ಕೇಳುತ್ತಿದ್ದರು. ಸುರೇಂದ್ರನಿಂದ ಕೇಳಿದ ಈ ಮಾತು ಮೀನಳಿಗೆ ಸಂತೋಷ ಕೊಟ್ಟಿತ್ತು.

ಆ ದಿನ ಆರತಕ್ಷತೆ, ಸಂಜೆ ಸಂಗೀತ ಹಾಗೂ ಬಂದು ಹೋಗುತ್ತಿದ್ದ ಅತಿಥಿಗಳ ಆತಿಥ್ಯದಲ್ಲಿ ಮೀನಾ ನಾನು ಜೊತೆಯಲ್ಲಿ ಓಡಾಡಬೇಕಾಯಿತು. ಶಾರದ ಅನಂತ ಅಡಿಗೆ ಹಾಲಿನಲ್ಲಿ, ಅಡಿಗೆಯವರ ಉಸ್ತುವಾರಿಯಲ್ಲಿ ಬಂದು ಹೋಗುತ್ತಿದ್ದ ಬಂಧುಮಿತ್ರರಿಗೆ ಕೊಡಬೇಕಾದ ಉಡುಗೊರೆಗಳನ್ನು ಸಿದ್ಧ ಮಾಡುವುದರಲ್ಲಿ ನಿರತರಾಗಿದ್ದರು. ಇದರಿಂದ ನಾನು, ಮೀನ ಹೊರಗೆ ಎಲ್ಲಾ ನಿರ್ಧರಿಸಬೇಕಾಗಿತ್ತು. ಮದುವೆಯ ಆ ಎರಡು ಮೂರು ದಿವಸಗಳು, ಮೀನಾಳ ಮತ್ತು ನನ್ನ ಸಂಪರ್ಕ ನಿಕಟವಾಯಿತು. ಮದುವೆಯಾಗಿ, ಮೈಸೂರಿಗೆ ನಮ್ಮನ್ನು ಬೀಳ್ಕೊಡುವ ದಿನ ರಾಮನಾಥ, ರೇವತಿಯವರು ನಮ್ಮನ್ನು ಮದುವೆಯಲ್ಲಿ ಅವರಿಗೆ ಮಾಡಿದ ಸೇವೆಗೆ ವಂದಿಸಿ, ಆಶೀರ್ವಾದ ಮಾಡಿ, ನಮಗೆ ಯಾವಾಗ ನೀವು ಸಿಹಿ ಊಟ ಹಾಕಿಸುತ್ತೀರಿ ನಿಧಾನ ಮಾಡಬೇಡಿ ಎಂದು ಮುಗುಳುನಗುತ್ತ ಬೀಳ್ಕೊಟ್ಟರು.

ಕಮಲಳೊಡನೆ ಮೈಸೂರಿಗೆ ಹಿಂದಿರುಗಿದ ಸುರೇಂದ್ರ ಎರಡು ವಾರಗಳಲ್ಲಿಯೇ ಅವಳೊಡನೆ ಬಿಹಾರದ ಕೆಲಸಕ್ಕೆ ಸೇರಲು ನಿರ್ಗಮಿಸಿದ. ಅನಂತ ಕೆಲಸದ ಮೇಲೆ ಮಂಗಳೂರಿಗೆ ಹೊರಟುಹೋದ. ಮೀನಾ, ಶಾರದ ಎಂದಿನಂತೆ ಇಬ್ಬರೇ ಮೈಸೂರಿನಲ್ಲಿ ತಂದೆ ಮಲತಾಯಿಯರನ್ನು ನೋಡಿಕೊಳ್ಳುತ್ತ ನಿಂತರು. ಇದರ ಜೊತೆಗೆ ಅದೇ ವರ್ಷ ಬಿ.ಎಸ್.ಸಿ. ಪರೀಕ್ಷೆಗೆ ಶಾರದಾ ತುಂಬಾ ವ್ಯಾಸಂಗ ಮಾಡಬೇಕಿತ್ತು. ಸುರೇಂದ್ರ, ಅನಂತರಾಮುರನ್ನು ಅವರುಗಳು ಮೈಸೂರಿಗೆ ಹೊರಡುವ ಮುಂಚೆ ನೋಡಲು ಅವರ ಮನೆಗೆ ಹೋಗಿದ್ದೆ. ಆದರೆ ಮೀನಾಳ ಜೊತೆ ಜಾಸ್ತಿ ಮಾತನಾಡಲು ಸಮಯವಿರಲಿಲ್ಲ. ಅಲ್ಲಿಂದ ಬರುವ ಮುಂಚೆ, ಮೀನಳಿಗೂ ಶಾರದೆಗೂ ನನ್ನಿಂದ ಏನಾದ್ರೂ ಸಹಾಯ ಬೇಕಾದ್ರೆ ನನಗೆ ತಿಳಿಸಬೇಕೆಂದು ಹೇಳಿ ಬಂದಿದ್ದೆ.

ನಾನು ಎಂ.ಎ. ಸ್ನಾತಕೋತ್ತರ ಪದವಿಗೆ ಕೊಡಬೇಕಾದ ಪ್ರಬಂಧ ಶೀಘ್ರವಾಗಿ ಕೊಡಬೇಕಾದುದರಿಂದ ಎರಡು ವಾರದ ಕಾಲ ಮೀನಾ ಮನೆಗೆ ಹೋಗಲು ಆಗಲಿಲ್ಲ. ನನ್ನ ಮಿತ್ರ ಶ್ರೀನಿವಾಸ ಅವರನ್ನು ವಿಚಾರಿಸಿಕೊಳ್ಳುತ್ತಿದ್ದ. ನನ್ನ ಪ್ರಬಂಧದ ಕರಡು ಸಿದ್ಧ ಮಾಡಿದ ಮೇಲೆ ನಾನು ಆ ಶನಿವಾರ ಸಂಜೆ ಮೀನಾ, ಶಾರದೆಯರನ್ನು ನೋಡಲು ಅವರ ಮನೆಗೆ ಹೋದೆ. ಶಾರದೆಯು ಬಂದು ಮನೆ ಬಾಗಿಲು ತೆರೆದು ನನ್ನನ್ನು ಒಳಗೆ ಕರೆದಳು. ಅವರ ಅಣ್ಣಂದಿರು ಇಬ್ಬರು ಹೊರಟು ಹೋದ ಮೇಲೆ ಮನೆಯಲ್ಲಿರಲು ಬೇಸರವಾಗಿದೆಯೆಂದು ನಾನೂ ಕೂಡ ಅಲ್ಲಿಗೆ ಹೋಗಿ ಅವರನ್ನು ನೋಡದಿರುವುದು ಒಂದು ಕಾರಣವೆಂದಳು. ಸ್ವಲ್ಪ ಕಾಲ ಶಾರದೆಯ ವ್ಯಾಸಂಗ, ಮನೆಯ ವಿಚಾರ, ಕೇಳಿದ ಮೇಲೆ ಮೀನಾ ಎಲ್ಲಿ ಕಾಣುತ್ತಿಲ್ಲ ಎಂದೆ. ಅವಳೂ ಕೂಡ ಒಂದು ತರಹ ಬೇಸರದಿಂದಿದ್ದಾಳೆ, ಜಾಸ್ತಿ ಮಾತೂ ಇಲ್ಲ. ಹಿತ್ತಲಲ್ಲಿ ಹೂಗಿಡಗಳ ಬಳಿ ಇದ್ದಾಳೆ ನೋಡಿ ಎಂದಳು. ನಾನು ಮೀನಳ ಬಳಿ ಹೋಗಿ ಹೇಗಿದ್ದೀರಿ ಎಂದೆ. ಹೀಗೆ ನೋಡಿ ಎಂದಳು. ಮೀನಾಕ್ಷಿಯ ಹೃದಯದಲ್ಲಿ ಭಾವತರಂಗಗಳು ಉಬ್ಬಿದ ಸಮುದ್ರದ ಮೇಲಿನ ಅಲೆಗಳಂತೆ ಒಂದರ ಮೇಲೊಂದು ಬರುತ್ತಿದ್ದವು. ಅಪೇಕ್ಷೆ ಹಾಗೂ ನಿರೀಕ್ಷೆಗಳು ತಾಳಲಯಗಳಿಗೀಡಾದ ಸಂಗೀತ ಲಹರಿಯಂತೆ ಮೂಡಿ ಮೋಡಿ ಹಾಕಿ ಓಡುತ್ತಿದ್ದವು. ಹಿತ್ತಲ ಬಾವಿ ಕಟ್ಟೆಗೆ ಒರಗಿ ಕೂತಿದ್ದ ಮೀನಳಿಗೆ ಪಶ್ಚಿಮ ದಿಗಂತದಲ್ಲಿ ಮರೆಯಾಗುತ್ತಿರುವ ಕೆಂಪು ಬಣ್ಣದ ರವಿಯ ಅಂದವಾಗಲಿ, ಕಾರ್ತಿಕದ ಮೃದುವಾದ ಶೀತಲ ಮಾರುತದ ಅಪ್ಪಿಗೆಯಾಗಲಿ ಅವಳಿಗಿದ್ದಂತೆ ಕಾಣಲಿಲ್ಲ. ಅರೆ ತೆರೆದ ಕಣ್ಣು ಬಾಹ್ಯ ಪ್ರಪಂಚದ ಆಗುಹೋಗುಗಳನ್ನು ನಿರ್ಲಕ್ಷಿಸಿದ್ದಂತೆ ತೋರುತ್ತಿದ್ದವು. ಅದಾವುದೂ ಅಂತರಂಗದ ಸೆಳೆತದಲ್ಲಿದ್ದ ಮೀನಾಳ ಮನಸ್ಸಿನ ತೆರೆಯ ಮೇಲೆ ಕಳೆದ ಚಿತ್ರಗಳು ಮೂಡಿ ಬರುತ್ತಿದ್ದವು.
​
ಏನು ಮೀನಾ ಗಾಢವಾದ ಯೋಚನೆಯಲ್ಲಿದ್ದೀರಿ. ಪರಿಸರದ ಪರಿವೆಯೇ ಇಲ್ಲದೆ ಏನು ಭಾದಿಸುತ್ತಿದೆ? ಎಂದೆ.

ಸುರೇಂದ್ರನ ವಿವಾಹಕ್ಕಾಗಿ, ಮದುವೆಯಲ್ಲಿ ನಾವಿಬ್ಬರು ನಿಕಟವರ್ತಿಗಳಾಗಿ ಓಡಾಡಿದ್ದೇ ನೆನಪು ಬರುತ್ತಿತ್ತು. ನಮ್ಮ ಈ ಮೈತ್ರಿತ್ವದಲ್ಲಿ ಮುಂದಿನ ನಮ್ಮ ಸಹಬಾಳ್ವೆಯ ಕನಸು ಕಾಣುತ್ತಿದ್ದೆ. ಮದುವೆಯಾದ ಒಂದು ತಿಂಗಳಿಂದ ನೀವು ಈ ಕಡೆ ಬರತಾ ಇಲ್ಲ. ನಿಮಗೆ ನನ್ನನ್ನು ನೋಡಬೇಕೆನಿಸಲಿಲ್ಲವೆ ಎಂದು ಕೇಳಿದಳು ಮೀನಾ……………

  • Facebook
  • Twitter
  • Pinterest
  • Google+
Not Available
Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com