Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications
  • General Books
  • >
  • ಅರ್ಧನಾರೀಶ್ವರ

ಅರ್ಧನಾರೀಶ್ವರ

SKU:
$0.00
Unavailable
per item
ಪರಿವಿಡಿ
​

  1. ಪ್ರವೇಶ
  2. ಶಿಲ್ಪಗಳು ಮತ್ತು ವರ್ಣಚಿತ್ರಗಳಲ್ಲಿ ಅರ್ಧನಾರೀಶ್ವರ
  3. ಪುರಾಣಗಳಲ್ಲಿ ಅರ್ಧನಾರೀಶ್ವರ
  4. ಜನಪದದಲ್ಲಿ ಅರ್ಧನಾರೀಶ್ವರ
  5. ಗ್ರೀಕ್‍ ಪುರಾಣಗಳಲ್ಲಿ ಉಭಯಲಿಂಗಿ ದೇವತೆಗಳು
  6. ಚೀನಿಯರ ದರ್ಶನಗಳಲ್ಲಿ ಉಭಯಲಿಂಗಿಯ ಕಲ್ಪನೆ
  7. ಮನೋವಿಜ್ಞಾನದಲ್ಲಿ ದೇವರ ಕಲ್ಪನೆ
  8. ಮನೋವಿಜ್ಞಾನದಲ್ಲಿ ದ್ವಿಲಿಂಗಿಯ (ಅರ್ಧನಾರೀಶ್ವರನ) ಕಲ್ಪನೆ
  9. ಕಾರ್ಲ್‍ ಯೂಂಗ್‍ನ ದ್ವಿಲಿಂಗಿ ಸಿದ್ಧಾಂತ
  10. ಆಧುನಿಕ ಸ್ತ್ರೀ-ಪುರುಷರ ಮಾನಸಿಕ ಪ್ರಪಂಚ
  11. Reference

ವಿಶ್ವದಲ್ಲಿ ದೇವರಿಲ್ಲದ ನಾಡಿಲ್ಲ, ದೇವರನ್ನು ಪೂಜಿಸದ ಜನರು ಅಪರೂಪ. ಭಾರತದಲ್ಲಂತೂ ದೇವರಿಲ್ಲದ ಊರೇ ಇಲ್ಲವೆಂದರೂ ಆಶ್ಚರ್ಯವಿಲ್ಲ. ನಮ್ಮ ದೇಶ ಗುಡಿಗೋಪುರಗಳಿಂದ ತುಂಬಿಹೋಗಿದೆ. ಜಗತ್ತಿನಲ್ಲಿ ದೇವರಲ್ಲಿ ನಂಬಿಕೆ ಇಲ್ಲದವರು ಬಹಳ ಕಡಮೆ. ದೇವರಿದ್ದಾನೆ, ಅವನೇ ನಮ್ಮನ್ನೆಲ್ಲಾ ಸೃಷ್ಟಿಸಿರುವವನು, ಪಾಲಿಸುವವನು ಎಂಬುದು ಆಸ್ತಿಕರೆಲ್ಲರ ನಂಬಿಕೆ. ಆದರೂ, ನಮ್ಮ ದೇವಾಲಯಗಳನ್ನೆಲ್ಲಾ ಕಟ್ಟಿದವರು, ಅವುಗಳಲ್ಲಿರುವ ವಿಗ್ರಹಗಳನ್ನೆಲ್ಲಾ ಕೊರೆದವರು ಮನುಷ್ಯರೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ದೇವರು ಮನುಷ್ಯನನ್ನು ಸೃಷ್ಟಿಸಿದನೋ, ಮನುಷ್ಯ ದೇವರನ್ನು ಸೃಷ್ಟಿಸಿದನೋ ಎಂಬುದು ಬಗೆಹರಿಯದ ವಿವಾದ. ಅದರ ವಿಚಾರವಾಗಿ ಬರೆಯುವುದು ಈ ಲೇಖನದ ಉದ್ದೇಶವಲ್ಲ. ಆದರೂ ದೇವಸ್ಥಾನಗಳನ್ನು ನಿರ್ಮಿಸಿ, ಅಲ್ಲಿ ವಿಗ್ರಹಗಳನ್ನು ಸ್ಥಾಪಿಸಿದವರು ಮನುಷ್ಯರೆಂಬುದನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ.
ದೇವಾಲಯಗಳನ್ನು ನಿರ್ಮಿಸುವಲ್ಲಿ ಮನುಷ್ಯನ ಅಪೂರ್ವ ಕಲಾತ್ಮಕ ಕೌಶಲ್ಯ ಅಪಾರವಾಗಿ ಅಭಿವ್ಯಕ್ತವಾಗಿರುವುದಕ್ಕೆ ಪ್ರಪಂಚದ ಎಲ್ಲೆಡೆ ಇರುವ ಸುಂದರ ಮತ್ತು ಅಷ್ಟೇನೂ ಸುಂದರವಲ್ಲದ ಬೃಹತ್ ದೇವಾಲಯಗಳೇ ಸಾಕ್ಷಿ. ಅದನ್ನು ಒತ್ತಿ ಹೇಳುವ ಆವಶ್ಯಕತೆ ಇಲ್ಲ. ಆಶ್ಚರ್ಯವಿರುವುದು ಅಲ್ಲಿ ಸೃಷ್ಟಿಸಲಾಗಿರುವ ದೇವರ ವಿಗ್ರಹಗಳ ವೈವಿಧ್ಯತೆಯಲ್ಲಿ. ನಮ್ಮ ದೇವರುಗಳ ವಿನ್ಯಾಸವನ್ನು ಕೊಂಚ ಪರಿಶೀಲಿಸಿ. ಕೆಲವು ದೇವರುಗಳಿಗೆ ಒಂದಕ್ಕಿಂತ ಹೆಚ್ಚು ತಲೆಗಳಿರುತ್ತದೆ (ಬ್ರಹ್ಮ, ಷಣ್ಮುಖ); ಕೆಲವಕ್ಕೆ ಎರಡಕ್ಕಿಂತ ಹೆಚ್ಚು ಕೈಗಳಿರುತ್ತವೆ (ಸಾಮಾನ್ಯವಾಗಿ ಎಲ್ಲ ದೇವತೆಗಳು); ಎರಡಕ್ಕಿಂತ ಹೆಚ್ಚು ಕಣ್ಣುಗಳಿರುತ್ತವೆ (ಶಿವ). ಕೆಲವಕ್ಕೆ ಪ್ರಾಣಿಗಳ ತಲೆ ಮನುಷ್ಯನ ದೇಹವಿರುತ್ತದೆ (ಹಯವದನ, ನರಸಿಂಹ); ಇನ್ನು ಕೆಲವಕ್ಕೆ ಮನುಷ್ಯನ ತಲೆ ಇದ್ದು ಪ್ರಾಣಿಯ ಶರೀರವಿರುತ್ತದೆ (ಈಜಿಪ್ಟ್ ನ ಸ್ಪಿಂಕ್ಸ್).     ಯಾಕೆ ಹೀಗೆ? ಪ್ರಾಯಶಃ ದೇವರು ನಮಗಿಂತ ಹೆಚ್ಚು ತಿಳಿದವನು, ಬುದ್ಧಿವಂತ, ಶಕ್ತಿವಂತ, ಎಂಬುದನ್ನು ಪ್ರತಿಬಿಂಬಿಸಲು ಇರಬಹುದೆ? ಅದೊತ್ತಟ್ಟಿಗಿರಲಿ. ನಮ್ಮೊಡನಿರುವ ಸಾವಿರಾರು ದೇವರುಗಳ ನಡುವೆ ಶರೀರದ ಅರ್ಧ ಗಂಡು ಅರ್ಧ ಹೆಣ್ಣು ಇರುವ ಅರ್ಧನಾರೀಶ್ವರ ಎಂಬ ಒಂದು ವಿಶಿಷ್ಟ ದೈವವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದೇಕೆ ಹೀಗೆ? ಹೀಗಿರಲು ಸಾಧ್ಯವೆ? ಅಂಥ ಅರ್ಧನಾರೀಶ್ವರನ ಕಲ್ಪನೆ ಎಲ್ಲಿ ಹುಟ್ಟಿತು, ಹೇಗೆ ಹುಟ್ಟಿತು, ಏಕೆ ಹುಟ್ಟಿತು, ಅದರ ಹಿನ್ನೆಲೆ ಏನು? ಇಂಥ ವಿಷಯಗಳನ್ನು ವಿಶ್ಲೇಷಿಸುವ ಒಂದು ಕಿರು ಪ್ರಯತ್ನ ಇಲ್ಲಿದೆ.

ಅರ್ಧನಾರೀಶ್ವರ ಭಾರತ ಮತ್ತು ಆಗ್ನೇಯ ಏಷ್ಯ ದೇಶಗಳಲ್ಲಿ ಬಹುವಾಗಿ ಕಂಡುಬರುವ ಒಂದು ದೈವಿಕ-ಪೌರಾಣಿಕ ಕಲ್ಪನೆ. ಭಾರತದ ಬಹುತೇಕ ಶೈವ ದೇವಾಲಯಗಳಲ್ಲಿ ಅರ್ಧನಾರೀಶ್ವರನ ವಿಗ್ರಹಗಳು ಕಂಡುಬರುತ್ತವೆ. ಆದರೆ, ಈ ದೇವರಿಗಾಗಿಯೇ ನಿರ್ಮಿತವಾದ ಆಲಯಗಳು ಮಾತ್ರ ಬಹಳ ಕಡಮೆ. ತಮಿಳುನಾಡಿನ ತಿರುಚೆಂಗೋಡಿನಲ್ಲಿ ಒಂದು (ಚಿತ್ರ- 1.1, 1.2, 1.3) ಮತ್ತು ಕಲ್ಲೈಕುರುಚಿ ತಾಲೂಕಿನಲ್ಲಿ ಐದು ಕಡೆ ಅರ್ಧನಾರೀಶ್ವರನ ದೇವಾಲಯಗಳಿರುವುದು ತಿಳಿದುಬಂದಿದೆ.

ಉಭಯಲಿಂಗಿಯ ಕಲ್ಪನೆ ವಿದೇಶಗಳಲ್ಲೂ ನಡೆದಿದೆ. ಭಾರತ ಮತ್ತು ಗ್ರೀಕ್ ದೇಶಗಳೆರಡರಲ್ಲೂ ಸುಮಾರು ಒಂದೇ ಕಾಲದಲ್ಲಿ ಈ ಕಲ್ಪನೆ ಹುಟ್ಟಿತೆಂದು ಹೇಳಲಾಗಿದೆ. ಭಾರತದಲ್ಲಿ ಅರ್ಧನಾರೀಶ್ವರನ ಕಲ್ಪನೆ ಕುಶಾನರ ಕಾಲದಲ್ಲಿ ಆರಂಭವಾಗಿ, ಗುಪ್ತರ ಕಾಲದಲ್ಲಿ ಪರಿಪೂರ್ಣತೆಯನ್ನು ಪಡೆಯಿತೆಂದು ಇತಿಹಾಸ ಹೇಳುತ್ತದೆ. ನಮ್ಮಲ್ಲಿರುವ ಹಲವಾರು  ಜಾನಪದ  ಕಥೆಗಳು,  ಪುರಾಣಗಳು  ಮತ್ತು  ಶಿಲ್ಪಶಾಸ್ತ್ರಗ್ರಂಥಗಳು ಅರ್ಧನಾರೀಶ್ವರನನ್ನು ಕುರಿತು ವಿಸ್ತಾರವಾಗಿ ಬರೆದಿವೆ.

ಅರ್ಧನಾರೀಶ್ವರ, ಹೆಸರೇ ಹೇಳುವಂತೆ, ಉಭಯಲಿಂಗಿ (androgynous)  ದೈವ; ಅರ್ಧ ಹೆಣ್ಣು ಅರ್ಧ ಗಂಡುಗಳ ಸಂಯೋಜನೆಯಿಂದ ಸೃಷ್ಟಿಯಾಗಿರುವ ಕಲ್ಪನೆ; ಹಿಂದುಗಳ ಪೂಜ್ಯ ದೈವ ಶಿವ ಮತ್ತು ಪಾರ್ವತಿಯರ ಸಂಯುಕ್ತ ಚಿತ್ರ. ಈ ಕಲ್ಪನೆ ವಿಶ್ವದಲ್ಲಿನ ಪುರುಷ ಮತ್ತು ಪ್ರಕೃತಿಗಳ ಸಂಯೋಗವನ್ನು ಅಭಿವ್ಯಕ್ತಿಸುತ್ತದೆ ಎಂದು ನಮ್ಮ ಧಾರ್ಮಿಕ ಗ್ರಂಥಗಳು ನಿರೂಪಿಸಿವೆ. ಶಕ್ತಿಸ್ವರೂಪಿಣಿಯಾದ ಶಿವೆಯನ್ನು ಶಿವನಿಂದ ಬೇರ್ಪಡಿಸುವುದು ಸಾಧ್ಯವಿಲ್ಲ ಎಂಬುದನ್ನು ಅರ್ಧನಾರೀಶ್ವರನ ಕಲ್ಪನೆ  ಪ್ರತಿಪಾದಿಸುತ್ತದೆ.  ಈ  ಕಲ್ಪನೆ  ಅರ್ಧನಾರೀಶ್ವರನಾದ  ಶಿವನೇ  ಸರ್ವಸ್ವ, ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವಕರ್ತೃ, ಸರ್ವಜ್ಞ ಎಂಬ ಸೂತ್ರದ ಸಾಂಕೇತಿಕ ಅಭಿವ್ಯಕ್ತಿ ಎನ್ನುವ ನಂಬಿಕೆ ಬೆಳೆದು ಬಂದಿದೆ.

ಅರ್ಧನಾರೀಶ್ವರನನ್ನು ಹಲವಾರು ನಾಮಗಳಿಂದ ಕರೆಯಲಾಗಿದೆ. ಅರ್ಧನಾರೀಶ, ಅರ್ಧನಾರೀನಟೇಶ್ವರ, ಹಾಗೂ ನರನಾರಿಯೆಂದು ಅಲ್ಲಲ್ಲಿ ಕರೆದಿದ್ದಾರೆ; ತಮಿಳರು ಅಮ್ಮೈಯಪ್ಪನ್ ಎಂದು ಕರೆದಿದ್ದಾರೆ. ಅಸ್ಸಾಮಿನಲ್ಲಿ ಅರ್ಧಯುವತೀಶ್ವರ ಎಂದು ಕರೆಯುಲಾಗುತ್ತಿದೆ. ಗುಪ್ತರ ಕಾಲದ ಪುಷ್ಪದಂತ ಎಂಬುವವನು ತನ್ನ ಮಹಿಮ್ನಾಸ್ತವದಲ್ಲಿ ದೇಹಾರ್ಧಾಂಗತಾನನೆಂದು ಹೆಸರಿಸಿದ್ದಾನೆ. ಉತ್ಪಲ ಎಂಬುವವನು ಅರ್ಧಗೌರೀಶ್ವರ ಎಂದು ಕರೆದಿದ್ದಾನೆ. ವಿಷ್ಣುಧರ್ಮೋತ್ತರ ಪುರಾಣದಲ್ಲಿ ಗೌರೀಶ್ವರನೆಂದು ಕರೆಯಲಾಗಿದೆ. ಒಂದೆಡೆ  ಪರಂಗದ ಎಂದು ಕರೆದದ್ದಿದೆ.

ಕೆಲವರು ಹೇಳಿರುವಂತೆ, ಭರತಖಂಡದಲ್ಲಿ ಅರ್ಧನಾರೀಶ್ವರನ ಕಲ್ಪನೆ ವೇದಗಳಲ್ಲಿ ಹೇಳಿರುವ ಯಮ-ಯಮಿಯರ ಸಂಯುಕ್ತ ಚಿತ್ರಣದಿಂದ ಪ್ರೇರಿತವಾಗಿರಬಹುದು. ಬೇರೆಯವರು ಊಹಿಸುವಂತೆ, ಎತ್ತು-ಹಸುವಿನಂತೆ ಚಿತ್ರಿತವಾಗಿರುವ ಅಗ್ನಿ, ಅಥವಾ ಸಕಲ ಸೃಷ್ಟಿಕರ್ತನೆಂದು ಕರೆಯಲಾಗಿರುವ ಪ್ರಜಾಪತಿಯಿಂದ ಪ್ರೇರಿತವಾಗಿರಬಹುದು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಆತ್ಮ (ಪುರುಷ), ಹೆಣ್ಣು-ಗಂಡಾಗಿ ವಿಭಾಗವಾಗಿ, ಅವು  ಒಂದರೊಡನೊಂದು  ಕೂಡಿ,  ಜೀವ  (ಪ್ರಪಂಚ)  ಸೃಷ್ಟಿಯಾಯಿತೆಂದು ಹೇಳಲಾಗಿದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ ರುದ್ರನನ್ನು (ಶಿವನ ಮೊದಲ ಹೆಸರು) ಉಭಯಲಿಂಗಿಯಂತೆ ಚಿತ್ರಿಸಲಾಗಿದೆ.

ಗ್ರೀಕ್ ಪುರಾಣಗಳಲ್ಲೂ ಉಭಯಲಿಂಗಿಯ (Hermaphroditus and Phrygian Agdistis)   ಪ್ರಸ್ತಾಪವಿದೆ. ಸ್ಟೊಬಾಯಸ್ (Stobaeus)  ಎಂಬ ಗ್ರೀಕ್ ಬರಹಗಾರ ಭಾರತದೊಡನೆ ಪರೋಕ್ಷ ಸಂಪರ್ಕ ಪಡೆದು, ಅರ್ಧನಾರೀಶ್ವರನ ವಿಚಾರವಾಗಿ ತಿಳಿದು ಬರೆದಿರುವನೆಂದು ಹೇಳಲಾಗುತ್ತಿದೆ. ಗ್ರೀಕ್ ಪುರಾಣಕತೆಗಳಲ್ಲಿ ಪ್ರಸ್ತಾಪಿಸಿರುವ ಉಭಯಲಿಂಗಿ ಕಲ್ಪನೆಯನ್ನು ಕುರಿತು ಮುಂದೆ ವಿವರವಾಗಿ ಹೇಳಲಾಗುವುದು.

ಭಾರತದಲ್ಲಿ ಪ್ರಚಲಿತವಿದ್ದ ಶೈವ ಮತ್ತು ಶಾಕ್ತಪಂಥಗಳ ನಡುವಿನ ವೈಮನಸ್ಯವನ್ನು ಹೋಗಲಾಡಿಸಿ, ಹೊಂದಾಣಿಕೆ ತರುವ ಪ್ರಯತ್ನ ಅರ್ಧನಾರೀಶ್ವರನ ಕಲ್ಪನೆಗೆ ಪ್ರಮುಖ ಕಾರಣವಿರಬಹುದು ಎಂಬ ವಾದವೂ ಅಲ್ಲಲ್ಲಿ ಕೇಳಿಬರುತ್ತಿದೆ. ಶೈವರು ಮತ್ತು ವೈಷ್ಣವರ ನಡುವೆ ಸಾಮರಸ್ಯ ತರಲು, ಹರಿಹರನ ಕಲ್ಪನೆ ಉದ್ಭವವಾಗಿರುವಂತೆ, ಇಲ್ಲಿ ಕೂಡ ನಡೆದಿರಬಹುದೆಂಬುದು ಒಂದು ಊಹೆ. 
 
ಅರ್ಧನಾರೀಶ್ವರ ಸ್ತ್ರೀ-ಪುರುಷ ಶಕ್ತಿಗಳ ಸಂಯೋಗದ ಸಂಕೇತ; ಹಲವು ದರ್ಶನಗಳು ಪ್ರತಿಪಾದಿಸಿರುವ, ವಿಶ್ವದಲ್ಲಿ ಸದಾ ಕ್ರಿಯಾಶೀಲವಾಗಿರುವ ಪರಸ್ಪರ ವಿರೋಧ ಶಕ್ತಿಗಳ ಸಮನ್ವಯದ ಅಭಿವ್ಯಕ್ತಿ. ಅರ್ಧನಾರೀಶ್ವರನ ಗಂಡು ಭಾಗ ಪುರುಷ; ಹೆಣ್ಣು ಭಾಗ ಪ್ರಕೃತಿ. ಪುರುಷ ಜಡ, ನಿಷ್ಕ್ರಿಯ, ಅನಾಸಕ್ತ. ಪ್ರಕೃತಿ ಕ್ರಿಯಾಶೀಲ, ಕಾರ್ಯನಿರತವಾದುದು. ಇವೆರಡು ಬೇರೆ ಬೇರೆಯಾಗಿ ಕಂಡುಬಂದರೂ, ಒಂದನ್ನೊಂದು ಆಕರ್ಷಿಸುತ್ತ, ಅಪ್ಪಿಕೊಳ್ಳಲು,  ಒಂದುಗೂಡಲು  ಯಾವಾಗಲೂ  ಪ್ರಯತ್ನಿಸುತ್ತಿರುತ್ತವೆ.  ಪುರುಷ-ಪ್ರಕೃತಿಗಳ  ಸಂಯೋಗವಿಲ್ಲದೆ  ಜೀವೋತ್ಪತ್ತಿ  ಸಾಧ್ಯವಿಲ್ಲ  ಎನ್ನುವುದು  ಎಲ್ಲರಿಗೂ ತಿಳಿದ ವಿಷಯ. ಒಂದು ರೀತಿಯಲ್ಲಿ ಅರ್ಧನಾರೀಶ್ವರನ ಕಲ್ಪನೆ ದ್ವೈತದ ಆಚೆಗಿರುವ ಪರಿಪೂರ್ಣತೆಯನ್ನು (ಅದ್ವೈತವನ್ನು) ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಒಬ್ಬ ಚಿಂತಕನ ಪ್ರಕಾರ ದೇವರು ಶಿವನೂ ಹೌದು, ಪಾರ್ವತಿಯೂ ಹೌದು; ಹೆಣ್ಣೂ ಹೌದು, ಗಂಡೂ ಹೌದು; ತಂದೆಯೂ ಹೌದು, ತಾಯಿಯೂ ಹೌದು; ಜಡವೂ ಹೌದು, ಕ್ರಿಯೆಯೂ ಹೌದು; ಸೃಷ್ಟಿಕರ್ತನೂ ಹೌದು, ಲಯಕರ್ತನೂ ಹೌದು; ಭಯಂಕರನೂ ಹೌದು, ಸೌಮ್ಯನೂ ಹೌದು (Kinsley, 1998). ಶಿವನ ಕೈಯ್ಯಲ್ಲಿರುವ ಜಪಮಾಲೆ ತ್ಯಾಗ, ವಿರಕ್ತಿ, ಮತ್ತು ಆಧ್ಯಾತ್ಮಿಕತೆಯ ಸಂಕೇತವಾದರೆ. ಪಾರ್ವತಿಯ ಕೈಯಲ್ಲಿರುವ ದರ್ಪಣ ವಾಸ್ತವಿಕತೆಯ, ಭೌತಿಕತೆಯ, ಪ್ರಾಪಂಚಿಕತೆಯ, ಹಾಗು ಮಾಯೆಯ ಸಂಕೇತ. ಹೀಗೆ. ಅರ್ಧನಾರೀಶ್ವರನ ಕಲ್ಪನೆಯಲ್ಲಿ ಆಧ್ಯಾತ್ಮಿಕತೆ ಮತ್ತು ಭೌತಿಕತೆಗಳ ಸಂಗಮವಾಗಿದೆ; ಆಧ್ಯಾತ್ಮಿಕತೆಯ ಪ್ರತೀಕವಾದ ಶಿವ ವಾಸ್ತವಿಕತೆಯ (ಪ್ರಾಪಂಚಿಕದ) ಪ್ರತೀಕವಾದ ಪಾರ್ವತಿಯನ್ನು ವರಿಸಿದ್ದಾನೆ; ಅವಳೊಡನೆ ಐಕ್ಯವಾಗಿದ್ದಾನೆ; ಎರಡು ಪರಸ್ಪರ ವಿರೋಧಿಸುವ ಶಕ್ತಿಗಳ, ನಿಯಮಗಳ, ಜೀವನ ಶೈಲಿಗಳ ನಡುವೆ ಸಾಮರಸ್ಯವನ್ನುಂಟು ಮಾಡಿದ್ದಾನೆ. ಶಿವ ಮತ್ತು ಶಕ್ತಿಗಳು ಒಂದನ್ನೊಂದು ಅವಲಂಬಿಸಿರುತ್ತವೆ ಎನ್ನುವುದರ ಅಭಿವ್ಯಕ್ತಿ ಅರ್ಧನಾರೀಶ್ವರನ ಕಲ್ಪನೆಯಲ್ಲಾಗಿದೆ ಎಂದರೂ ತಪ್ಪಲ್ಲ. ಶಿವ ಮತ್ತು ಶಕ್ತಿಗಳ ಅವಿಭಾಜ್ಯತೆಯ ಸಂಕೇತ ಮಲಯ ಮತ್ತು ಜಾವ ದ್ವೀಪಗಳಲ್ಲಿರುವ ಅರ್ಧನಾರೀಶ್ವರನ ಚಿತ್ರಗಳಲ್ಲಿ ಕೂಡ ವ್ಯಕ್ತವಾಗಿದೆ.

ಅರ್ಧನಾರೀಶ್ವರನ ಕಲ್ಪನೆ, ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಜೀವೋತ್ಪತ್ತಿಯ (ಸಂತಾನೋತ್ಪತ್ತಿಯ) ಹಾಗೂ ಅದರ ಹಿನ್ನೆಲೆಯಲ್ಲಿರುವ ಶಕ್ತಿಯ ದ್ಯೋತಕವೆಂದು ಹೇಳಲಾಗಿದೆ; ಅದು ಆದರ್ಶ ಸ್ತ್ರೀ-ಪುರುಷ ಸಂಯೋಗದ ಪ್ರತೀಕ; ವೈವಾಹಿಕ ಬಂಧನದ ನಿರಂತರತೆಯ ಅಭಿವ್ಯಕ್ತಿ. ಪುರುಷನಲ್ಲಿರುವ ಸ್ತ್ರೀತ್ವ ಹಾಗು ಸ್ತ್ರೀಯಲ್ಲಿರುವ ಪುರುಷತ್ವದ ಸೂಚನೆ ಅರ್ಧನಾರೀಶ್ವರನ ಕಲ್ಪನೆಯಲ್ಲಿ ನಡೆದಿದೆ.
​
ಈ ಗ್ರಂಥದ ಇನ್ನುಳಿದ ಭಾಗಗಳಲ್ಲಿ ಅರ್ಧನಾರೀಶ್ವರನ ಕಲ್ಪನೆ ಶಿಲ್ಪಗಳಲ್ಲಿ, ವರ್ಣಚಿತ್ರಗಳಲ್ಲಿ,   ಪುರಾಣಕತೆಗಳಲ್ಲಿ,   ದರ್ಶನಗಳಲ್ಲಿ,   ಜನಪದರಲ್ಲಿ   ಮತ್ತು ಮನಃಶಾಸ್ತ್ರದಲ್ಲಿ ಹೇಗೆ ನಿರೂಪಿತವಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ.

  • Facebook
  • Twitter
  • Pinterest
  • Google+
Buy Now

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com