|
ಲೇಖಕರು : ಡಾ. ಸುಜಾತ ಎಂ & ಡಾ. ಕುಮುದಿನಿ ಅಚ್ಚಿ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯ ಶಿಕ್ಷಣವು ಹುಲಸಾಗಿ ಬೆಳೆದು ಬಂದಿದೆ. ಎಂಬತ್ತರ ದಶಕದಲ್ಲಿ ಬೆರಳೆಣಿಕೆಯಷ್ಟು ಇದ್ದ ಸಮಾಜಕಾರ್ಯ ಶಿಕ್ಷಣದ ಸಂಸ್ಥೆಗಳು ಇಂದು ಸಾವಿರದ ಅಂಕಿಮೀರಿ ಬೆಳೆದಿವೆ. ವೃತ್ತಿನಿರತ ಸಮಾಜಕಾರ್ಯಕರ್ತರಿಗೆ ಹೊಸ ಹೊಸ ಕ್ಷೇತ್ರಗಳು ಸ್ವೀಕರಿಸುತ್ತಿವೆ. ವೃತ್ತಿಪರ ಸಮಾಜಕಾರ್ಯದ ಸೇವೆಯನ್ನು ಜನರು, ಸಮುದಾಯಗಳು ಗುರುತಿಸುತ್ತಿವೆ. ಆದರೆ ಪಾಶ್ಚಿಮಾತ್ಯ ಪ್ರಭಾವದಲ್ಲಿ ಬೆಳೆದ ಭಾರತೀಯ ಸಮಾಜಕಾರ್ಯ ಶಿಕ್ಷಣವು ಹಲವು ತೊಂದರೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಪ್ರಾಂತಿಯ ಭಾಷೆಯಲ್ಲಿ ಬರಹಗಳು, ಸಾಹಿತ್ಯಗಳು, ಪ್ರಕಟನೆಗಳು ಬರದೇ ಇರುವುದು. ಕನ್ನಡದ ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲೀಷನ್ನು ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವುದಿಲ್ಲ. ಹೀಗಾಗಿ ಅವರು ವಿಷಯದಲ್ಲಿ ಪ್ರಭುತ್ವವನ್ನು ಸಾಧಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಪ್ರಾಂತೀಯ ಭಾಷೆಯಲ್ಲಿ ಪುಸ್ತಕಗಳು, ಬರಹಗಳು ಬಂದಿದ್ದಾದರೆ ವಿದ್ಯಾರ್ಥಿಗಳು ಸಹಜ ಸರಳವಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ನಮ್ಮ ಬಹುತೇಕ ಬರಹಗಳು, ಲೇಖನಗಳು ಇಂಗ್ಲೀಷಿನಲ್ಲಿ ಬರುತ್ತಿವೆ. ಇದನ್ನು ಅರಿತುಕೊಂಡ ಡಾ. ಎಂ. ಸುಜಾತ ಅವರು ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಕನ್ನಡದಲ್ಲಿ ಸಮಾಜಕಾರ್ಯ ಸಂಶೋಧನೆ ಎಂಬ ಗ್ರಂಥವನ್ನು ಹೊರತರುತ್ತಿರುವುದು ತುಂಬಾ ಸಂತೋಷದ ವಿಷಯ.
ಸಮಾಜಕಾರ್ಯ ಶಿಕ್ಷಣವು ಇನ್ನುಳಿದ ಅಧ್ಯಯನಗಳಿಗಿಂತ ವಿಭಿನ್ನವಾಗಿದೆ. ಸಮಾಜದಲ್ಲಿಯ ಸಮಸ್ಯೆಗಳನ್ನು ಸಂಶೋಧನೆಗಳ ಮುಖಾಂತರ ಅರಿತುಕೊಂಡು, ಅದನ್ನು ಅರಗಿಸಿಕೊಂಡು, ಆ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹಿಡಿದು, ಅದನ್ನು ಆಚರಣೆಯಲ್ಲಿ ತಂದು, ವ್ಯಕ್ತಿಗಳಿಗೆ, ವೃಂದಗಳಿಗೆ, ಸಮುದಾಯಗಳಿಗೆ ಸಹಾಯವನ್ನು ಮಾಡತಕ್ಕಂತಹ ವೃತ್ತಿ ಇದಾಗಿದೆ. ಸಮಾಜಕಾರ್ಯ ಸಂಶೋಧನೆಯು ಸಮಾಜದಲ್ಲಿಯ ನಿರುದ್ಯೋಗ ಸಮಸ್ಯೆ, ಬಡತನ ಸಮಸ್ಯೆ, ಜಾತಿ-ವರ್ಗ ಬೇಧಗಳ ಸಮಸ್ಯೆ, ಬುಡಕಟ್ಟು ಜನಾಂಗಗಳ ಸಮಸ್ಯೆ, ಊನಶಕ್ತರ- ದೀನದಲಿತರ ಸಮಸ್ಯೆ, ಆರ್ಥಿಕ ಸಂಸ್ಥೆಗಳ ಸಮಸ್ಯೆ, ರಾಜಕೀಯ ಸಮಸ್ಯೆ ಇಂತಹ ಹಲವಾರು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರಗಳನ್ನು ಸೂಚಿಸುತ್ತದೆ ಹಾಗೂ ವೃತ್ತಿಪರವಾದ ಮಧ್ಯಸ್ಥಿಕೆಯನ್ನು ಕೂಡ ಮಾಡುತ್ತದೆ. ಆದುದರಿಂದ ಸಮಾಜಕಾರ್ಯ ಸಂಶೋಧನೆಗೆ ಸಮಾಜಕಾರ್ಯ ಶಿಕ್ಷಣದಲ್ಲಿ ಅತ್ಯಂತ ಮಹತ್ತರವಾದ ಸ್ಥಾನವಿದೆ. ಈ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಡಾ. ಎಂ. ಸುಜಾತ ಅವರು ಹೊರತರುತ್ತಿರುವ "ಸಮಾಜಕಾರ್ಯ ಸಂಶೋಧನೆ" ಹೊತ್ತಿಗೆ ವೃತ್ತಿಪರ ಸಮಾಜಕಾರ್ಯಕರ್ತರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಇತರ ಸಂಬಂಧಿತ ವ್ಯಕ್ತಿಗಳಿಗೆ ಒಂದು ದಾರಿದೀಪವಾಗಲಿದೆ. ಲೇಖಕರು : ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. 20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
|
Archives
March 2026
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed