Blog |
ಮುನ್ನುಡಿ
ಗೆದ್ದೇ ಬಿಡೋಣ... ಸೋತು ಸುಮ್ಮನಿರಲು ನಾವು ಈ ಜಗತ್ತಿನಲ್ಲಿ ಹುಟ್ಟಿಲ್ಲ! ನೆನಪಿರಲಿ, ಗೆಲುವುಗಳು ರಾತ್ರೋರಾತ್ರಿ ನಮ್ಮ ಮನೆ ಬಾಗಿಲು ಬಡಿಯುವುದಿಲ್ಲ. ಗೆಲುವುಗಳು ಅವಿರತ ಪರಿಶ್ರಮ, ಸಮರ್ಪಣೆ ಮತ್ತು ಛಲದ ಪ್ರತಿಫಲಗಳು. ಪ್ರತಿಯೊಬ್ಬರೂ ಗೆಲುವುಗಳನ್ನು ಬೆನ್ನಟ್ಟಲು ಪ್ರಯತ್ನಿಸುತ್ತಾರೆ ಆದರೆ ಗೆಲುವುಗಳು ಮಾತ್ರ ಗೆಲ್ಲುವ ಛಲವಿರುವ ವ್ಯಕ್ತಿಗಳನ್ನು ಬಿಡದೆ ಬೆನ್ನಟ್ಟುತ್ತವೆ.
ಅಂಬಿಕಾ ತಮಿಳುನಾಡಿನ ದಿಂಡಿಗಲ್ ಮೂಲದ ಹದಿನಾಲ್ಕು ವರ್ಷದ ಹುಡುಗಿ. ತನ್ನ ಹದಿನಾಲ್ಕನೆಯ ವರ್ಷಕ್ಕೆ ಪೊಲೀಸ್ ಪೇದೆಯನ್ನು ಮದುವೆಯಾಗಿ, ಹದಿನೆಂಟು ವರ್ಷಕ್ಕೆ ಇಬ್ಬರು ಮಕ್ಕಳ ತಾಯಿಯಾದಳು. ತನ್ನ ಮಕ್ಕಳು ಮತ್ತು ಪ್ರೀತಿಯ ಗಂಡನೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಳು. ಇದುವೇ, ತನ್ನ ಜೀವನದ ಬಹುಮುಖ್ಯ ಗೆಲುವೆಂದು ಭಾವಿಸಿದ್ದಳು. ಆ ಒಂದು ದಿನ ಪೊಲೀಸ್ ಪೆರೇಡ್ ನಡೆಯುತ್ತಿತ್ತು. ಗಂಡ ಎಂದಿನಂತೆ ಊಟಕ್ಕೆ ಮನೆಗೆ ಬರಲಿಲ್ಲ. ಆತಂಕಗೊಂಡ ಅಂಬಿಕಾ ತನ್ನ ಮಕ್ಕಳೊಂದಿಗೆ ಆ ಪೆರೇಡ್ ನಡೆಯುತ್ತಿದ್ದ ಸ್ಥಳಕ್ಕೆ ಬಂದಳು. ಪೆರೇಡ್ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಂಭೀರ್ಯದಿಂದ ನಿಂತಿದ್ದರು. ನೂರಾರು ಪೊಲೀಸರು ಸಾಲಿನಲ್ಲಿ ಅವರಿಗೆ ಶಿಸ್ತಿನಿಂದ ಸೆಲ್ಯೂಟ್ ಹೊಡೆದು ಗೌರವ ತೋರಿಸುತ್ತಾ ಮುಂದಕ್ಕೆ ಸಾಗುತಿದ್ದರು. ಗಂಡ ಕೂಡ ಅದೇ ಸಾಲಿನಲ್ಲಿ ನಿಂತು ಆ ವ್ಯಕ್ತಿಗೆ ಸೆಲ್ಯೂಟ್ ಮಾಡಿದ್ದನ್ನು ಅಂಬಿಕಾ ದೂರದಿಂದಲೇ ಗಮನಿಸಿದಳು. ಇದೆಲ್ಲಾವನ್ನು ನೋಡಿದ ಅಂಬಿಕಾಳಿಗೆ “ಆ ಸೆಲ್ಯೂಟ್ ಸ್ವೀಕರಿಸುತ್ತಿರುವ ವ್ಯಕ್ತಿ ಯಾರಿರಬಹುದು?” ಎಂಬ ಪ್ರಶ್ನೆ ಮೂಡಿತು. ಗಂಡ ಮನೆಗೆ ಬಂದ ತಕ್ಷಣ ಆಕೆ ಈ ಪ್ರಶ್ನೆಯನ್ನು ಅವನಲ್ಲಿ ಕೂತಹಲದಿಂದ ಕೇಳಿದಳು. ಅದಕ್ಕೆ ಗಂಡ, “ಅವರು ನಮ್ಮ ರಾಜ್ಯದ ಪೋಲಿಸ್ ಮುಖ್ಯಸ್ಥರು, ಐಪಿಎಸ್ ಅಧಿಕಾರಿ” ಎಂದು ತಿಳಿಸಿದರು. ಇದನ್ನು ತಿಳಿದ ಆಕೆಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಆತ್ಮವಿಶ್ವಾಸದಿಂದ ಗಂಡನಿಗೆ “ನಾನು ಐಪಿಎಸ್ ಅಧಿಕಾರಿಯಾಗಲು ಬಯಸುತ್ತೇನೆ” ಎಂದು ತಿಳಿಸಿದಳು. ಎಸ್‌ಎಸ್‌ಎಲ್‌ಸಿ ಓದದ ಪತ್ನಿಯ ಮಾತುಗಳಿಂದ ಆಶ್ಚರ್ಯಗೊಂಡ ಗಂಡ, ಅವಳ ಆಲೋಚನೆಯಲ್ಲಿನ ಸ್ಪಷ್ಟತೆಯನ್ನು ಗಮನಿಸಿ, ಆಕೆಯ ನಿರ್ಧಾರಕ್ಕೆ ಸಹಕರಿಸಿ, ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುಲು ಮುಂದಾದನು. ತನ್ನ ಗುರಿಯ ಗಮ್ಯಸ್ಥಾನವನ್ನು ನಿರ್ಧರಿಸಿದ ಅಂಬಿಕಾ, ತನ್ನ ಪದವಿ ಮತ್ತು ಪದವಿ ಪೂರ್ವದ ಎಲ್ಲಾ ಕೋರ್ಸ್‌ಗಳನ್ನು ದೂರ ಶಿಕ್ಷಣದ ಮೂಲಕ ತಮ್ಮ ಮಾತೃಭಾಷೆಯಾದ ತಮಿಳು ಮಾಧ್ಯಮದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದಳು. ತದನಂತರ, ಯುಪಿಎಸ್‌ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಚೆನ್ನೈಗೆ ಗೆಲ್ಲುವ ಮನೋಭಾವದೊಂದಿಗೆ ಕನಸು ಹೊತ್ತು ಹೊರಟಳು.
ಅಂಬಿಕಾ, ಎರಡು ಮಕ್ಕಳ ತಾಯಿ, ತನ್ನ ಮಕ್ಕಳನ್ನು ಅಗಲಿ, ಚೆನ್ನೈನಲ್ಲಿ ಒಂಟಿಯಾಗಿ ನೆಲಸಿ ಗುರಿಯ ಸಾಧನೆಗಾಗಿ ಅವಿರತವಾಗಿ ಶ್ರಮಿಸಲು ಮುಂದಾದಳು. ಒಂದು, ಎರಡು, ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡರೂ ಗೆಲುವು ಸಿಗಲಿಲ್ಲ! ಇದನ್ನು ಗಮನಿಸಿದ ಗಂಡ ಮಕ್ಕಳೊಂದಿಗೆ ಚೆನ್ನೈಗೆ ಬಂದು, “ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ, ಸರ್ಕಾರ ಕ್ವಾಟ್ರಸ್ ಕೊಟ್ಟಿದೆ, ಸುಖವಾಗಿ ಜೀವನ ನಡೆಸಬಹುದು, ವಾಪಸ್ ಊರಿಗೆ ಬಾ” ಎಂದು ಕೇಳಿಕೊಂಡನು. ಅಂಬಿಕಾ, ಇನ್ನೊಂದು ವರ್ಷ ಅವಕಾಶ ನೀಡುವಂತೆ, ಆಗದಿದ್ದರೆ ಊರಿಗೆ ವಾಪಸ್ಸಾಗಿ ಟೀಚರ್ ಆಗುತ್ತೇನೆ,” ಎಂದು ಗಂಡನಲ್ಲಿ ವಿನಂತಿಸಿಕೊಂಡಳು.
ಗಂಡ ತನ್ನ ಹೆಂಡತಿಯ ವಿನಂತಿಯನ್ನು ಒಪ್ಪಿ, ಆತ್ಮವಿಶ್ವಾಸವನ್ನು ಹುರಿದುಂಬಿಸಿ, ಮಕ್ಕಳೊಂದಿಗೆ ದಿಂಡಿಗಲ್‌ಗೆ ಹಿಂತಿರುಗಿದನು. ನಾಲ್ಕನೇ ಭಾರಿ ಗೆಲ್ಲಲೇಬೇಕೆಂಬ ಸಂಕಲ್ಪದಿಂದ ಪ್ರಯತ್ನಿಸಿದ ಅಂಬಿಕಾ, ಯುಪಿಎಸ್‌ಸಿ ಪರೀಕ್ಷೆ ಮತ್ತು ಸಂದರ್ಶನದಲ್ಲಿ ನಿರೀಕ್ಷಿಸಿದ ಗೆಲುವನ್ನು ಸಾಧಿಸುವುದರ ಮೂಲಕ 2008ನೇ ವರ್ಷದಲ್ಲಿ ಐಪಿಎಸ್ ಅಧಿಕಾರಿಯಾಗಿಯೇ ಬಿಟ್ಟರು. ಗೆದ್ದೇ ಗೆಲ್ಲುತ್ತೇನೆ ಎಂಬ ದೃಢವಾದ ನಂಬಿಕೆಯಿಂದ ತನ್ನ ಗುರಿಯ ಬೆನ್ನತ್ತಿ ಸಾಧನೆ ತೋರಿದ ಈ ಅಂಬಿಕಾಳ ಯಶೋಗಾಥೆ, ಗೆಲ್ಲಲು ಛಲದಿಂದ ಮುಂದಾದರೇ ಯಾವ ಪರಿಸ್ಥಿತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲವೆಂಬುವುದಕ್ಕೆ ಅತ್ಯುತ್ತಮ ಉದಾಹರಣೆ. ಶೇಖರ್ ಗಣಗಲೂರುರವರ “ಗೆಲುವು” ಪುಸ್ತಕವನ್ನು ಓದುವಾಗ ನನ್ನ ಬ್ಯಾಚ್ ಮೇಟ್ ಅಂಬಿಕಾರವರ ಈ ಸಾಧನೆಯು ಕಣ್ಣುಂದೆ ಬಂತು. ಇಲ್ಲಿ ಈ ರೀತಿ ಸಾಧನೆಗೈದ ಹಲವಾರು ಸಾಧಕರ ಪ್ರಸಂಗಗಳಿವೆ. ಈ ಪುಸ್ತಕವು ವ್ಯಕ್ತಿಯ ಭೌತಿಕ, ಬೌದ್ಧಿಕ, ಭಾವನಾತ್ಮಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣೆಗೆಗೆ ಪೂರಕವಾಗುವ ವ್ಯಕ್ತಿತ್ವ ವಿಕಸನದ ಕೈಪಿಡಿ. “ಪ್ರತಿಯೊಬ್ಬರೂ ಗೆಲ್ಲಬಹುದು ಮತ್ತು ಪ್ರತಿಯೊಬ್ಬರೂ ಗೆಲ್ಲಲು ಸಾಧ್ಯ,” ಎಂಬುವುದನ್ನು ನಿರೂಪಿಸಲು ಬೇಕಾಗಿರುವ ರಹಸ್ಯಗಳನ್ನು ಒಂದೊಂದಾಗಿ “ಅಣ್ಣ ತಮ್ಮನಿಗೆ, ಅಕ್ಕ ತಂಗಿಗೆ ತಿಳಿಸುವಂತೆ,” ಉತ್ತಮ ನಿದರ್ಶನಗಳೊಂದಿಗೆ ಪ್ರೇರಣಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಶೇಖರ್ ರವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಪುಸ್ತಕವು ಪ್ರತಿಯೊಬ್ಬರಿಗೂ ತಮ್ಮ ನೈಜ ಅಂತಸ್ಸತ್ವವನ್ನು ಅರಿತುಕೊಳ್ಳಲು ಮತ್ತು ಜೀವನದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು ದಿಕ್ಸೂಚಿಯಾಗಿ ಸಹಕರಿಸುವುದು. ಪುಸ್ತಕವನ್ನು "ಹೊಸ ಆರಂಭ," "ಹೊಸ ಪ್ರಗತಿ" ಮತ್ತು "ಹೊಸ ವಿಮರ್ಶೆ” ಎಂಬ ಮೂರು ಭಾಗಗಳಾಗಿ ವಿಂಗಡಿಸಿ, ವಿಚಾರಗಳನ್ನು ಪ್ರಸ್ತುತಪಡಿಸಿರುವ ರೀತಿ ಓದುಗರನ್ನು ಸೆರೆಹಿಡಿಯುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಗವು ತಾರ್ಕಿಕವಾಗಿ ಮತ್ತು ವ್ಯವಸ್ಥಿತವಾಗಿದ್ದು, ಸಕಾರಾತ್ಮಕ ಪ್ರಭಾವವನ್ನು ಬೀರುತ್ತಾ, ಸೋಲುಗಳಲ್ಲಿನ ಗೆಲ್ಲುವ ಅವಕಾಶಗಳನ್ನು ಗ್ರಹಿಸಿಕೊಳ್ಳುತ್ತಾ ಗೆಲುವಿನ ಹಾದಿಗಳನ್ನು ಕಂಡುಕೊಳ್ಳುವಂತೆ ಓದುಗರನ್ನು ಸಮರ್ಥವಾಗಿಸಬಲ್ಲದು. ಗೆಲುವು ಎಂದರೇನು? ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನದಲ್ಲಿ ಶೇಖರ್ ರವರು ಕೇಳಿಕೊಂಡಿರುವ ಪ್ರಶ್ನೆಗಳು ಓದುಗರನ್ನು ಆಲೋಚನೆಗೆ ದೂಡುತ್ತಾ ಪ್ರಚೋದಿಸುತ್ತವೆ. ಈ ಪ್ರಶ್ನೆಗಳಿಗೆ ಅವರು ಕಂಡುಕೊಂಡ ಉತ್ತರ ಇಡೀ ಪುಸ್ತಕವನ್ನು ಆವರಿಸಿಕೊಳ್ಳುತ್ತಾ ಪುಸ್ತಕವನ್ನು ಓದಿ ಮುಗಿಸಿದ ನಂತರವು ಓದುಗರನ್ನು ಕಾಡುವುದು ನಿಜ! ಪುಸ್ತಕದ ಮುಖ್ಯ ವಿಶಿಷ್ಟತೆಯೆಂದರೆ “ಗೆಲುವಿನ ವಲಯ” ಎಂಬ ಪರಿಕಲ್ಪನೆಯನ್ನು ಮತ್ತು “ಗೆಲುವಿನ ವಲಯದ ಸ್ವಯಂ-ಮೌಲ್ಯಮಾಪನದ ಸಾಧನ”ವನ್ನು ಪರಿಚಯಿಸಿರುವುದು. ಕನ್ನಡದಲ್ಲಿ ಈ ರೀತಿಯ ಸ್ವಯಂ-ಮೌಲ್ಯಮಾಪನದ ಮಾಪನಗಳು ಬಹಳ ವಿರಳ. ಈ ಮಾಪನದ ಮೂಲಕ ಓದುಗರು ತಮ್ಮ ವಾಸ್ತವ ಗೆಲುವಿನ ವಲಯವನ್ನು ವ್ಯವಸ್ಥಿತವಾಗಿ ಮತ್ತು ತಾರ್ಕಿಕವಾಗಿ ತಿಳಿದುಕೊಳ್ಳಬಹುದು. ಪುಸ್ತಕದ ಮೊದಲ ಭಾಗವಾದ “ಹೊಸ ಪ್ರಗತಿ”ಯಲ್ಲಿ, ಗೆಲುವಿನ ವಲಯವನ್ನು ನಿರ್ಧರಿಸುವ ಪ್ರಾಥಮಿಕ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ 56 ಪ್ರೇರಣಾತ್ಮಕ ಲೇಖನಗಳನ್ನು ಪ್ರಸ್ತುತಪಡಿಸಲಾಗಿದೆ. ಈ ಲೇಖನಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುವ ಒಳನೋಟಗಳು, ಸೂಕ್ಷ್ಮ ವಿಚಾರಗಳು ಮತ್ತು ರಹಸ್ಯಗಳನ್ನು ವಾಸ್ತವಿಕ ಉದಾಹರಣೆಗಳ ಮೂಲಕ ಅಚ್ಚುಕಟ್ಟಾಗಿ ತಿಳಿಸಲಾಗಿದೆ. ಈ ವಿಚಾರಗಳು ಮತ್ತು ರಹಸ್ಯಗಳು ಬಹಳ ಪ್ರಾಯೋಗಿಕವಾಗಿರುವುದರಿಂದ ಅರ್ಥಮಾಡಿಕೊಳ್ಳಲು ಹಾಗು ಅನುಸರಿಸಲು ಸುಲಭವಾಗಿವೆ. ಪ್ರತಿ ಲೇಖನದ ಕೊನೆಯಲ್ಲಿ, “ರಹಸ್ಯ ಶೋಧನೆ”ಗೆಂದು ನೀಡಲಾಗಿರುವ ಹೇಳಿಕೆಗಳ ಸವಿಯನ್ನು ಓದಿಯೇ ಸವಿಯಬೇಕು. ಈ ಹೇಳಿಕೆಗಳು ಲೇಖನಗಳನ್ನು ಮತ್ತೆ-ಮತ್ತೆ ಓದುವಂತೆ ಮತ್ತು ಆಳವಾಗಿ ನಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಅರ್ಥೈಸಿಕೊಳ್ಳಲು ನಿಶ್ಚಯಾತ್ಮಕವಾಗಿ ಪ್ರಚೋಧಿಸುತ್ತವೆ. ನಾವೇಕೆ ಗೆಲ್ಲಬೇಕು? ಈ ಪ್ರಶ್ನೆಯೊಂದಿಗೆ ಆರಂಭವಾಗುವ “ಹೊಸ ಪ್ರಗತಿ”ಯ ಭಾಗವು ನಮ್ಮ ಅಸ್ತಿತ್ವದ ಉದ್ದೇಶವನ್ನು ಪ್ರಶ್ನಿಸುವುದರ ಮೂಲಕ ಅರ್ಥಮಾಡಿಕೊಳ್ಳುವಂತೆ ಮತ್ತು ವಿಮರ್ಶಿಸಿಕೊಳ್ಳುವಂತೆ ಎಚ್ಚರಿಸುತ್ತದೆ. ಇಲ್ಲಿನ “ಗೋಡೆಯ ಮೇಲಿನ ಗುರುತು” ನಮ್ಮ ಸೋಲುಗಳು ಮತ್ತು ಆ ಸೋಲುಗಳಿಗೆ ಪೂರಕವಾದ ಕಾರಣಗಳನ್ನು ಒಮ್ಮೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಒಂದು ಸಣ್ಣ ಹಳ್ಳಿಯ ಯುವಕ “ಯುವ ರೇಡಿಯಾಲಜಿಸ್ಟ್-2020”ರ ಪ್ರಶಸ್ತಿಯನ್ನು ಪಡೆಯುವ ಮಟ್ಟಕ್ಕೆ ಬೆಳೆದ ಪರಿ, ನಮ್ಮನ್ನು ನಾವು ನಂಬುತ್ತಾ ಗುರಿಯನ್ನು ಬೆನ್ನಟ್ಟಿದಾಗ ಗೆಲುವು ನಮ್ಮ ಗೆಳೆಯನಾಗುವುದು ಖಚಿತವೆಂಬುವುದನ್ನು ಖಾತರಿಗೊಳಿಸುತ್ತದೆ. ಮಗ ವ್ಯವಸ್ಥಾಪಕ ನಿರ್ದೇಶಕರಾಗಿ, ತಂದೆ ಭದ್ರತಾ ಸಿಬ್ಬಂದಿಯಾಗಿ ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ವೃತ್ತಿಪರತೆಯು ನಮ್ಮನ್ನು ನಾವೇ ಒಮ್ಮೆ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಇನ್ನೇನೂ ಸಾಧ್ಯವಿಲ್ಲ, ಜೀವನದಲ್ಲಿ ಸಾಧನೆ ಕೇವಲ ಹಗಲುಗನಸು, ಎಲ್ಲವೂ ಮುಗಿಯಿತೆಂಬ ಅನಾನುಕೂಲವಾದ ಸನ್ನಿವೇಶಗಳನ್ನು ಗೆದ್ದು, ಭಾರತದ ರಾಷ್ಟ್ರೀಯ ಹಾಕಿ ತಂಡದ ನಾಯಕನಾದ ಆಟಗಾರನ ಮನೋಬಲ, ಛಲವಿದ್ದರೆ ಜಗವನ್ನೇ ಜಯಿಸಬಲ್ಲೆವು ಎಂಬುವುದನ್ನು ಸಾಬೀತುಮಾಡುತ್ತದೆ. “ನನ್ನ 6 ನಿಮ್ಮ 9” ಎಂಬ ಸತ್ಯ ಇತರರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು, ನಮ್ಮ ದೃಷ್ಟಿಕೋನವನ್ನು ಸರಿಯಾಗಿಸಿಕೊಳ್ಳುವುದಕ್ಕೆ ಕಂಡುಕೊಳ್ಳಬೇಕಾದ ಮಾರ್ಗಗಳನ್ನು ಬಹಿರಂಗಪಡಿಸುತ್ತದೆ. ವಿಶ್ವದ ಸೈಕ್ಲಿಂಗ್ ಪ್ರಿಯರ ಆರಾಧ್ಯ ದೈವವಾಗಿದ್ದ ಲ್ಯಾನ್ಸ್ ಎಡ್ವರ್ಡ್ ಆರ್ಮ್‌ಸ್ಟ್ರಾಂಗ್ ತನ್ನೆಲ್ಲಾ ಘನತೆಯನ್ನು ಕಳೆದುಕೊಂಡಿದ್ದು, ವಾಮಮಾರ್ಗಗಳ ಗೆಲುವುಗಳು ನಮ್ಮವಲ್ಲ ಎಂಬುವುದನ್ನು ಖಚಿತಪಡಿಸುತ್ತದೆ. ಕೇವಲ ಲಕ್ಷ-ಲಕ್ಷ ರೂಪಾಯಿಗಳನ್ನು ಸಂಪಾದಿಸುವ ಮೂಲಕ ಸಮಾಜದಲ್ಲಿ ನಮ್ಮ ಅಸ್ತಿತ್ವಕ್ಕೆ ಮಾನ್ಯತೆಯನ್ನು ಪಡೆಯಬಹುದು ಮತ್ತು ಗೆಲ್ಲಬಹುದು ಎಂಬ ನಂಬಿಕೆ ಸುಳ್ಳು, ಕೇವಲ ದಿನಕ್ಕೆ 200 ರೂಪಾಯಿಗಳನ್ನು ಸಂಪಾದನೆ ಮಾಡುತ್ತಾ ಸಮಾಜದಲ್ಲಿ ಉನ್ನತವಾದ ಜೀವನವನ್ನು ಕಟ್ಟಿಕೊಂಡು ಗೆಲ್ಲಬಹುದೆಂಬುವುದನ್ನು ಕಮಲಥಾಲ್ ಅಜ್ಜಿಯ ಜೀವನದ ಮೂಲಕ ತಿಳಿಸಿರುವುದು ಸ್ಪೂರ್ತಿದಾಯಕವಾಗಿದೆ. ಜೀವನವನ್ನು ಬಂದಂತೆ ಸ್ವೀಕರಿಸದೆ, ನಮ್ಮ ಲೋಪ-ದೋಷಗಳು ಮತ್ತು ಶಕ್ತಿ-ಸಾಮರ್ಥ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ವ್ಯವಸ್ಥಿತವಾದ ಯೋಜನೆಯೊಂದಿಗೆ ಮುಂದಾದರೆ ಗೆಲುವು ಅಸಾಧಾರಣವಾಗಿರುತ್ತದೆ ಎಂಬುವುದನ್ನು ಲಿ ಕಾ-ಶಿಂಗ್ ನ ಸಾಧನೆ ತಿಳಿಸುತ್ತದೆ. ನನ್ನ ಹೆಸರು ಆತ್ಮಹತ್ಯೆ ಎನ್ನುತ್ತಾ, ಆತ್ಮಹತ್ಯೆ ತನ್ನನ್ನು ತಾನು ಪರಿಚಯಿಸಿಕೊಳ್ಳುವುದು ಮತ್ತು ಆ ಆತ್ಮಹತ್ಯೆಯ ಆಲೋಚನೆಗಳಿಂದ ಹೊರಬರಲು ತಿಳಿಸಿರುವ ಮಾರ್ಗಗಳು ಜೀವನದ ಮೇಲಿನ ಪ್ರೀತಿಯನ್ನು ಕಾಪಾಡಿಕೊಳ್ಳಲು ಸಹಕರಿಸುತ್ತವೆ. ಗೆಲುವು ಕೇವಲ ಕೆಲವರ ಆಸ್ತಿಯಲ್ಲ, ಗೆಲುವು ಪ್ರತಿಭಾವಂತರನ್ನು ಎಂದೆಂದಿಗೂ ಕೈ ಬಿಡುವುದಿಲ್ಲವೆಂಬುವುದನ್ನು “ದಿ ವರ್ಲ್ಡ್ಸ್ ಆಗ್ಲೀಸ್ಟ್ ವುಮನ್”ನ ದೃಷ್ಟಾಂತದೊಂದಿಗೆ ವ್ಯಕ್ತಪಡಿಸಿರುವುದು ನಮ್ಮ ಕೀಳರಿಮೆಯನ್ನು ಗೆದ್ದು, ಸಾಧನೆಗೆ ಮುಂದಾಗುವಂತೆ ಪ್ರೇರೇಪಿಸುತ್ತದೆ. ಕರ್ನಾಟಕದ ಐತಿಹಾಸಿಕ ಚಿತ್ರದುರ್ಗದ ಏಳುಸುತ್ತಿನ ಕೋಟೆಯ ಚರಿತ್ರೆಯಲ್ಲಿ ಅಚ್ಚಳಿಯದೆ ಪ್ರಕಾಶಮಾನವಾಗಿ ರಾರಾಜಿಸುವ ನಮ್ಮ ಒನಕೆ ಓಬವ್ವನ ಸಾಹಸ ಮತ್ತು ಧೈರ್ಯ ನಮ್ಮಲ್ಲಿರುವ ದೇಶಪ್ರೇಮಿಯನ್ನು ಬಡಿದೆಬ್ಬಿಸುತ್ತದೆ. ಈ ರೀತಿಯ ಅನೇಕ ದೃಷ್ಟಾಂತಗಳೊಂದಿಗೆ ಓದುಗರು ತಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಬೇಕಾದ ಸೂಕ್ತ ಮತ್ತು ಸೂಕ್ಷ್ಮ ವಿಚಾರಗಳನ್ನು ಸವಿಸ್ತಾರವಾಗಿ ನೀಡುವ ಮೂಲಕ, ಗೆಲುವಿನ ನಂತರದ ನಮ್ಮ ವ್ಯಕ್ತಿತ್ವ ಗೆಲುವಿನ ಪೂರ್ವದ ವ್ಯಕ್ತಿತ್ವಕ್ಕಿಂತ ಪರಿಪಕ್ವವಾಗಿರಬೇಕೆಂಬ ಕಿವಿಮಾತನ್ನು ತಿಳಿಸುತ್ತಾ, ಶೇಖರ್ ರವರು “ಹೊಸ ಪ್ರಗತಿ”ಯ ಭಾಗವನ್ನು ಮುಕ್ತಾಯಮಾಡಿರುವ ರೀತಿ ಅರ್ಥಪೂರ್ಣವಾಗಿದೆ. ಹೊಸ ಪ್ರಗತಿಯ ಭಾಗವು ಆಹ್ಲಾದಕರವಾದ ಸಕಾರಾತ್ಮಕ ಪ್ರಭಾವ ಮತ್ತು ಪ್ರೇರಣೆಯನ್ನು ಸೃಷ್ಟಿಸುವುದರ ಮೂಲಕ ಮುಕ್ತಾಯವಾಗುತ್ತಿದ್ದಂತೆ, “ಹೊಸ ವಿಮರ್ಶೆ”ಯ ಶೀರ್ಷಿಕೆಯೊಂದಿಗೆ ಪುಸ್ತಕದ ಬಹಳ ಮುಖ್ಯವಾದ ಮತ್ತು ಓದುಗರು ಓದಲೇಬೇಕಾದ ಭಾಗ ಶುರುವಾಗುತ್ತದೆ. ಈ ಭಾಗದಲ್ಲಿ ಶೇಖರ್ ರವರು, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬಲ್ಲ 9 ಮಾಪನಗಳನ್ನು ನೀಡಿದ್ದಾರೆ. ಈ ಮಾಪನಗಳ ಮೂಲಕ ಓದುಗರು ತಮ್ಮ “ಅತಿಯಾಸೆಗಳ ನಿಯಂತ್ರಣಾ ಮಟ್ಟ, ಆತ್ಮವಿಶ್ವಾಸದ ಅರಿವಿನ ಮಟ್ಟ, ಆತ್ಮಹತ್ಯಾ ಆಲೋಚನೆಯ ನಿರ್ಮೂಲನಾ ಮಟ್ಟ, ಅಹಂ ನಿಯಂತ್ರಣಾ ಮಟ್ಟ, ಉದ್ಯೋಗ ಭದ್ರತೆಯ ಮಟ್ಟ, ಮೌಲ್ಯ ವರ್ಧಕದ ಮಟ್ಟ, ಪರಿಣಾಮಕಾರಿ ಪರಿಸ್ಥಿತಿ ನಿರ್ವಹಣಾ ಮಟ್ಟ, ಪರ್ಯಾಯ ಯೋಜನೆಗಳನ್ನು ಸಿದ್ಧಪಡಿಸುವ ಸಾಮರ್ಥ್ಯದ ಮಟ್ಟ ಮತ್ತು ತಂದೆ-ತಾಯಿಯ ಆರೈಕೆಯ ಮಟ್ಟವನ್ನು ಬಹಳ ತಾರ್ಕಿಕವಾಗಿ ಅರ್ಥಮಾಡಿಕೊಳ್ಳಬಹುದು. ಈ ವ್ಯಕ್ತಿತ್ವ ವಿಕಸನದ ಮಾಪನಗಳು ನಮ್ಮಲ್ಲಿರುವ ನ್ಯೂನತೆಗಳನ್ನು ವ್ಯವಸ್ಥಿತವಾಗಿ ತಿಳಿದುಕೊಳ್ಳಲು ಮತ್ತು ಅವುಗಳನ್ನು ಜಯಿಸಲು ಬೇಕಾದ ಸಿದ್ಧತೆಗಳನ್ನು ಸಿದ್ಧಪಡಿಸಿಕೊಳ್ಳಲು ಪೂರಕವಾಗುತ್ತವೆ. ಒಟ್ಟಾರೆ, ಈ ಗೆಲುವು ಪುಸ್ತಕ ಸ್ವಯಂ ಜಾಗೃತಿ, ಸಂವಹನ, ಹೊಂದಿಕೊಳ್ಳುವಿಕೆ, ಮನವೊಲಿಸುವಿಕೆ, ಸಕ್ರಿಯ ಆಲಿಸುವಿಕೆ, ಅನುಭೂತಿ, ಆತ್ಮವಿಶ್ವಾಸ, ನಾಯಕತ್ವ, ಒಟ್ಟಾಗಿ ಕೆಲಸಮಾಡುವುದು, ವ್ಯವಸ್ಥಿತ ಸಹಕಾರ, ಸ್ನೇಹಪರತೆ, ಪ್ರತಿಭಾ ನಿರ್ವಹಣೆ, ಸಮಯ ನಿರ್ವಹಣೆ, ಭಾವನಾತ್ಮಕ ಬುದ್ಧಿವಂತಿಕೆ, ಸಹಯೋಗ, ಸೃಜನಶೀಲತೆ, ಸಮಸ್ಯೆ ಪರಿಹರಿಸುವಿಕೆ, ತೀರ್ಮಾನ ಮಾಡುವಿಕೆ, ಒತ್ತಡ ನಿರ್ವಹಣೆ, ರಚನಾತ್ಮಕ ಪ್ರತಿಕ್ರಿಯೆ, ಕಾರ್ಯತಂತ್ರದ ಯೋಜನೆ, ಮಾರ್ಗದರ್ಶನ, ಕಾರ್ಯಕ್ಷಮತೆ ನಿರ್ವಹಣೆ, ಮೇಲ್ವಿಚಾರಣೆ, ವ್ಯವಸ್ಥಾಪಕ ನಿರ್ವಹಣೆ, ಬಿಕ್ಕಟ್ಟು ನಿರ್ವಹಣೆ, ಬದಲಾವಣೆ ಮತ್ತು ಅನಿಶ್ಚಿತತೆಯ ಸಹಿಷ್ಣುತೆ, ಟೀಕೆಗಳನ್ನು ಸ್ವೀಕರಿಸುವುದು, ಸ್ಥಿತಿಸ್ಥಾಪಕತ್ವ, ಉಲ್ಲಾಸಶೀಲತೆ, ಸ್ಪರ್ಧಾತ್ಮಕತೆ, ಸ್ವಯಂ ನಾಯಕತ್ವ, ಸ್ವಯಂ ಮೌಲ್ಯಮಾಪನ, ಕೆಲಸ-ಜೀವನ ಸಮತೋಲನ, ಪೋಷಕರ ಆರೈಕೆ ಮತ್ತು ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಓದುಗರು ತಮ್ಮ ನೈಪುಣ್ಯತೆಯನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಮಾರ್ಗದರ್ಶಿಯಾಗುವುದು. ಈ ಪುಸ್ತಕವು ನಿಮ್ಮ ಗುರು, ಮಾರ್ಗದರ್ಶಕ, ತರಬೇತುದಾರ, ಸಲಹೆಗಾರ, ಆತ್ಮೀಯ ಸ್ನೇಹಿತ, ಸಹೊದ್ಯೋಗಿ, ಒಡೆಯ, ವಿಮರ್ಶಕ, ಹಿತೈಷಿ, ಮಂತ್ರಿ ಮತ್ತು ಆರಸ. ನೀವು ಈ ಪುಸ್ತಕವನ್ನು ಬೇರೆ ಪುಸ್ತಕಗಳಂತೆ ಓದುಲು ಮುಂದಾದರೇ ಪುಸ್ತಕದ ನಿಜವಾದ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಇದನ್ನು ಓದಲು ವ್ಯವಸ್ಥಿತ ವಿಧಾನ, ಅಧ್ಯಯನ-ಶೀಲತೆ ಮತ್ತು ಸಮರ್ಪಣೆ ಅತ್ಯಗತ್ಯ. ನೀವು ಈ ಪುಸ್ತಕವನ್ನು ಓದುತ್ತಿದ್ದಂತೆ ಪ್ರೇರಿತರಾಗಿ ಜೀವನವನ್ನು ಆಸ್ವಾದಿಸುತ್ತಾ ಗೆಲ್ಲಲು ಮುಂದಾಗುವಿರಿ! ಗೆಲ್ಲಲು ಸಿದ್ಧವಾದರೆ ಪ್ರತಿ ಕ್ಷಣವೂ ಅದ್ಭುತವೇ. ಗೆಲ್ಲುವ ಅವಕಾಶಗಳು ನಕ್ಷತ್ರಗಳಷ್ಟು, ಮುನ್ನುಗ್ಗಿ, ಗೆದ್ದೇ ಗೆಲ್ಲುವಿರೀ…
To purchase this book kindly click the below link
0 Comments
Your comment will be posted after it is approved.
Leave a Reply. |
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |